ಮತ್ತೆ ಬಿಜೆಪಿ, ಜೆಡಿಎಸ್ ನಡುವೆ ದೋಸ್ತಿ ಮಾತು
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳೋಕೆ ಹೊರಟಿವೆಯೆ?. ಅವರೆಡೂ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಗೆಗಿನ ಸುಳಿವು ಹೊಸದೇನೂ ಅಲ್ಲ. ವಿಧಾನಸಭೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು, ಜೆಡಿಎಸ್ ಕೂಡ ತೀರಾ ಕಳಪೆ ಪ್ರದರ್ಶನ ತೋರಿಸಿದ ಹೊತ್ತಿನಿಂದಲೇ ಇದ್ದ ಈ ಮೈತ್ರಿ ಕುರಿತ ಗುಸುಗುಸು, ಈಗ ಜೋರಾಗಿಯೇ ಕೇಳಿಸುತ್ತಿದೆ ಅಷ್ಟೆ. ಒಂದೆಡೆ ಮೋದಿ ಅಲೆಯ ಭ್ರಮೆಯಲ್ಲಿ ತೇಲುತ್ತ ಕಡೆಗೆ ಸೋತ ಹತಾಶೆಯಲ್ಲಿರುವ ಬಿಜೆಪಿ. ಇನ್ನೊಂದೆಡೆ ಈ ಬಾರಿ ಮತ್ತೆ ಕಿಂಗ್ ಮೇಕರ್ ಆಗಿಯೇ ಆಗುತ್ತೇನೆಂಬ ಭ್ರಮೆಯಲ್ಲಿದ್ದು ಆ ಅವಕಾಶ ತಪ್ಪಿದ ನಿರಾಸೆಯಲ್ಲಿರೋ ಜೆಡಿಎಸ್.
ಎರಡೂ ಪಕ್ಷಗಳ ಪಾಲಿಗೆ ಕಾಂಗ್ರೆಸ್ ವೈರಿಯಾಗಿ ಕಾಣಿಸುತ್ತಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಅದರಲ್ಲೂ ಈ ಎರಡೂ ಪಕ್ಷಗಳ ನಾಯಕರಿಗೆ ಕಾಂಗ್ರೆಸ್ ಗಿಂತ ಜಾಸ್ತಿ ಕಣ್ಣು ಕೆಂಪಾಗಿಸುವುದು ಸಿದ್ದರಾಮಯ್ಯ. ಈಗ ಅವರೇ ಮತ್ತೆ ಮುಖ್ಯಮಂತ್ರಿಯೂ ಆಗಿದ್ದಾರೆ. ಗ್ಯಾರಂಟಿ ಜಾರಿಗಳ ಮೂಲಕ ಭಾರೀ ಜನಪ್ರಿಯತೆಯನ್ನೂ ಗಳಿಸುತ್ತಾ ಇದ್ದಾರೆ. ಹಾಗಾಗಿ ಅವೆರಡೂ ಪಕ್ಷಗಳು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ವಾಗ್ದಾಳಿ ನಡೆಸಲು ಶುರು ಮಾಡಿರೋದು.
ಕಾಂಗ್ರೆಸ್ ವಿರುದ್ಧ ಉರಿ ಮತ್ತು ನಂಜು ಎರಡನ್ನೂ ಕಾರಿಕೊಳ್ಳುತ್ತಿರೋದರಲ್ಲಿ ಬಿಜೆಪಿಗೆ ಆಗಾಗ ಜೆಡಿಎಸ್ ಜೊತೆಯಾಗುತ್ತಲೇ ಇದೆ. ವಿಧಾನಸಭೆ ಅಧಿವೇಶನದ ವೇಳೆಯೂ ಅದು ಮುಂದುವರಿದಿದೆ. ಬಿಜೆಪಿಗಿಂತಲೂ ಕುಮಾರಸ್ವಾಮಿಯೇ ಕಾಂಗ್ರೆಸ್ ಮೇಲೆ ಹೆಚ್ಚು ಮುಗಿಬೀಳುತ್ತಿದ್ದಾರೆ. ಈಗಾಗಲೇ ಅವರು ಇನ್ನೂ ಒಂದೂವರೆ ತಿಂಗಳ ಸಿದ್ದರಾಮಯ್ಯ ಸರಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿಯೂ ಆಗಿದೆ.
ಮುಂದೆ ದೋಸ್ತಿಯಾಗಲಿರುವ ಬಿಜೆಪಿಗೆ ಅವರು ಹೀಗೆ ಸಾಥ್ ಕೊಡುತ್ತಿದ್ದಾರೆ ಎಂಬ ಮಾತು ಕೇಳಿಬರತೊಡಗಿದೆ. ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿನ ವರ್ಗಾವಣೆ ದಂಧೆ ಬಗ್ಗೆ ಕುಮಾರಸ್ವಾಮಿ ಆರೋಪಿಸಿರೋದು ಮತ್ತದಕ್ಕೆ ಬಿಜೆಪಿಯ ಯಡಿಯೂರಪ್ಪ ಹಾಗೂ ಯತ್ನಾಳ್ ಸಹಮತ ವ್ಯಕ್ತಪಡಿಸಿರೋದು ಹೊಸ ವಿಚಾರ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಲಂಚ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕುಮಾರಸ್ವಾಮಿ, ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ವಿರುದ್ಧ ನೇರವಾಗಿ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.
ಕೆಲಸ ಆಗಬೇಕೆಂದರೆ ಸಿಎಂ ಕಚೇರಿಗೆ 30 ಲಕ್ಷ ರೂ. ನೀಡಬೇಕು ಎಂಬುದು ಕುಮಾರಸ್ವಾಮಿ ಮಾಡಿರೋ ಆರೋಪ. ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿನ ವರ್ಗಾವಣೆ ದಂಧೆ ಬಗ್ಗೆ ಕುಮಾರಸ್ವಾಮಿ ಆರೋಪವೆಲ್ಲ ಅಕ್ಷರಶಃ ಸತ್ಯ ಎಂದು ಅವರ ಮಾತಿಗೆ ದನಿಗೂಡಿಸಿರೋದು ಯಡಿಯೂರಪ್ಪ.ಇಷ್ಟು ಹೇಳಿರುವ ಅವರು, ಬಿಜೆಪಿ ಮತ್ತು ಜೆಡಿಎಸ್ ಜತೆಯಾಗಿಯೇ ಆಡಳಿತಾರೂಢ ಕಾಂಗ್ರೆಸ್ ಮತ್ತು ಅದರ ಸರ್ಕಾರದ ವಿರುದ್ಧ ಹೋರಾಡಲಿವೆ ಎಂದು ಮಾಧ್ಯಮಗಳ ಎದುರು ಹೇಳಿರೋದು ಈಗ ಅವರೆಡರ ಮೈತ್ರಿ ಸಾಧ್ಯತೆಗೆ ಪುಷ್ಠಿ ಒದಗಿಸಿದೆ.
ಇಲ್ಲಿ ಒಂದು ವಿಚಾರ ಗಮನಿಸಬೇಕು. ಬಿಜೆಪಿ ಸರ್ಕಾರವಿದ್ದಾಗ ಪ್ರತಿಪಕ್ಷ ಸ್ಥಾನದಲ್ಲಿ ಕಾಂಗ್ರೆಸ್ ಜೊತೆ ಕುಳಿತಿದ್ದಾಗಲೂ ಕುಮಾರಸ್ವಾಮಿ ಬಿಜೆಪಿಯ ವಿರುದ್ಧ ಮಾತನಾಡಿದ್ದಕ್ಕಿಂತ ಕಾಂಗ್ರೆಸ್ ವಿರುದ್ಧ ಮಾತನಾಡಿದ್ದೇ ಹೆಚ್ಚು. ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದುಬಿದ್ದಾಗಲೂ ಆಪರೇಷನ್ ಕಮಲ ಮಾಡಿ ಸರ್ಕಾರ ಕೆಡವಿದ್ದ ಬಿಜೆಪಿ ವಿರುದ್ಧ ಮಾತನಾಡಿದ್ದಕ್ಕಿಂತಲೂ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದದ್ದೇ ಹೆಚ್ಚು.
ಈಗ ತಮ್ಮ ಪಕ್ಷ ಸೋತು ಸುಣ್ಣವಾಗಿರುವ ಸಿಟ್ಟನ್ನು ಕುಮಾರಸ್ವಾಮಿ ತೀರಿಸಿಕೊಳ್ಳುತ್ತಿರುವುದು ಕೂಡ ಕಾಂಗ್ರೆಸ್ ಮೇಲೆಯೇ. ಕಾಂಗ್ರೆಸ್ ಮೇಲೆ ಅದರಲ್ಲಿಯೂ ಸಿದ್ದರಾಮಯ್ಯನವರ ಮೇಲೆ ಅವರಿಗಿರುವ ಅಸಹನೆ ಹಾಗು ಸಿಟ್ಟು ಈಗ ಯತೀಂದ್ರ ಮೇಲೆ ಆರೋಪಿಸುವವರೆಗೂ ಹೋಗಿದೆ. ಈಗ ಅವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡರೂ, ಆಗಿರುವ ಕಾಂಗ್ರೆಸ್ ವಿರುದ್ಧ ತನ್ನ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಇರಾದೆಯೇ ಹೊರತು ಅವರಿಗೆ ಅದು ಬಿಜೆಪಿಯ ಮೇಲಿನ ಪ್ರೀತಿ ಖಂಡಿತ ಅಲ್ಲ.
ವಾಸ್ತವವಾಗಿ ಅವರಿಗೆ ಇರುವುದು, ರಾಜ್ಯ ರಾಜಕೀಯದ ಮೇಲೆ ತನ್ನ ಹಿಡಿತದ ಅವಕಾಶ ತಪ್ಪಿಹೋಗಿರುವುದಕ್ಕಾಗಿ ಉಂಟಾಗಿರುವ ಬೇಗುದಿ. ಆ ಕಡೆ ಬಿಜೆಪಿ ಕೂಡ ಸೋತ ಮೇಲೆ ಹೈರಾಣಾಗಿದೆ. ಬಿಜೆಪಿಗೂ ಒಂದು ದೋಸ್ತಿ ಬೇಕಿರುವ ಅನಿವಾರ್ಯತೆ ಎದುರಾಗಿದೆ. ಹಿಂದೆ ರಾಜ್ಯಕ್ಕೇ ಗೊತ್ತಾಗುವ ಹಾಗೆ ಕಿತ್ತಾಡಿಕೊಂಡಿದ್ದವರು ಈಗ ಒಂದಾಗುವ ಯೋಚನೆಗೆ ಬರುವಂತಾಗಿದೆ.
2006ರಲ್ಲಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಜೊತೆಯಾಗಿ ಸರ್ಕಾರ ರಚಿಸಿದ್ದರು. ಟ್ವೆಂಟಿ ಟ್ವೆಂಟಿ ಒಪ್ಪಂದದ ಮೇಲೆ ರಚನೆಯಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ 20 ತಿಂಗಳು ನಡೆದಿತ್ತು. ಆದರೆ, ಒಪ್ಪಂದದಂತೆ ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದ ಕಾರಣ ಸರ್ಕಾರ ಪತನವಾಗಿತ್ತು. ಬಳಿಕ ಚುನಾವಣೆ ನಡೆದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ಹೀಗೆ ಕರ್ನಾಟಕದಲ್ಲಿ ಬಿಜೆಪಿ ದರ್ಬಾರಿಗೆ ಬಾಗಿಲು ತೆರೆದುಕೊಟ್ಟಿದ್ದೇ ಜೆಡಿಎಸ್ ನ ಈ ಅವಕಾಶವಾದಿತನ. ಆಮೇಲೆ ಆ ಎರಡೂ ಪಕ್ಷಗಳು ಯಾವಾಗ ಕಿತ್ತಾಡಿಕೊಳ್ಳುತ್ತಿವೆ, ಯಾವಾಗ ಯಾರ ಬೆನ್ನು ಯಾರು ನೇವರಿಸುತ್ತಿದ್ದಾರೆ ಎಂಬುದೇ ತಿಳಿಯದಂಥ ವಿಚಿತ್ರ ಸನ್ನಿವೇಶ ರಾಜ್ಯ ರಾಜಕಾರಣದಲ್ಲಿ ಕಾಣಿಸುತ್ತಿದ್ದುದು ಕೂಡ ಜೆಡಿಎಸ್ಗೆ ಸೈದ್ಧಾಂತಿಕವಾದ ಬದ್ಧತೆ ಅಥವಾ ಬೆನ್ನೆಲುಬು ಇಲ್ಲದ ಕಾರಣದಿಂದಾಗಿಯೇ.
ನೂತನ ಸಂಸತ್ ಭವನ ಉದ್ಘಾಟನೆ ವೇಳೆ ಏನಾಯಿತೆಂಬುದು ಎಲ್ಲರಿಗೂ ಗೊತ್ತೇ ಇದೆ. ಎಲ್ಲ ಪ್ರತಿಪಕ್ಷಗಳು ರಾಷ್ಟ್ರಪತಿಯನ್ನು ಆಹ್ವಾನಿಸದ ಆ ಸಮಾರಂಭಕ್ಕೆ ಬಹಿಷ್ಕಾರ ಹಾಕಿದ್ದರೆ, ಜೆಡಿಎಸ್ ವರಿಷ್ಠ ದೇವೇಗೌಡರು ಎಲ್ಲರಿಗಿಂತ ಮೊದಲು ಹೋಗಿ ಕೂತು, ಪ್ರಧಾನಿ ಮೋದಿಯ ಕೈಕುಲುಕಿ ಬಂದರು. ಜೆಡಿಎಸ್ ಎಂಥ ಅವಕಾಶವಾದಿ ಆಟ ಆಡಬಲ್ಲುದು ಎಂಬುದಕ್ಕೆ ಅದು ತೀರಾ ಲೇಟೆಸ್ಟ್ ನಿದರ್ಶನ ಎಂದರೆ ತಪ್ಪಲ್ಲ.
ಅತ್ಯುತ್ತಮ ಪ್ರಾದೇಶಿಕ ಪಕ್ಷವಾಗಿ ಬೆಳೆಯಬಹುದಾದ ಎಲ್ಲ ಸಾಧ್ಯತೆಗಳೂ ಇದ್ದ ಜೆಡಿಎಸ್, ಅಧಿಕಾರಕ್ಕಾಗಿ ಏನೇನು ಮಾಡಿಕೊಂಡಿತು ಎಂಬುದನ್ನು ಈ ರಾಜ್ಯದ ಜನರು ನೋಡಿದ್ದಾರೆ. ಈಗಲೂ ಅದು ತೆಗೆದುಕೊಳ್ಳುವ ಹೆಜ್ಜೆಗಳು ಎಲ್ಲಿ ತಾನು ಹಿಡಿತ ಸಾಧಿಸುವುದಕ್ಕೆ ಅವಕಾಶವಿದೆ ಎಂಬ ಲೆಕ್ಕಾಚಾರದ್ದೇ ಆಗಿವೆ.
ಬಿಜೆಪಿ, ಜೆಡಿಎಸ್ - ಎರಡೂ ಕಾಂಗ್ರೆಸ್ ವಿರೋಧಿ ಪಕ್ಷಗಳು. 2018ರಲ್ಲಿ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿ ಸಿಎಂ ಹುದ್ದೆ ಪಡೆದಿದ್ದರೂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಜೊತೆ ಆಗಿಬರಲಿಲ್ಲ. ಆಗವರು ಅನಿವಾರ್ಯವಾಗಿ ಸಿದ್ದರಾಮಯ್ಯರನ್ನು ಸಿದ್ದರಾಮಣ್ಣ ಅಂತ ಕರೀತಾ ಇದ್ರು. ಅವರ ಮಾರ್ಗದರ್ಶನದಲ್ಲೇ ಈ ಸರಕಾರ ನಡೀತಾ ಇರೋದು ಅಂತಾ ಇದ್ರು. ಈಗ ಆ ಸಿಟ್ಟನ್ನು ಬೇರೆಯೇ ರೀತಿ ತೀರಿಸುತ್ತಿದ್ದಾರೆ.
ಹೀಗಾಗಿ ಕಾಂಗ್ರೆಸ್ ಹಾಗು ಸಿದ್ದರಾಮಯ್ಯ ವಿರುದ್ಧ ಅವೆರಡೂ ಪಕ್ಷಗಳು ಒಂದಾಗುವುದು ಹೆಚ್ಚು ಕಷ್ಟದ ವಿಚಾರವೇನಲ್ಲ. ಅಥವಾ ತಳ್ಳಿಹಾಕುವ ಸಂಗತಿಯೂ ಅಲ್ಲ. ಹಾಗೆಯೇ ಅವೆರಡಕ್ಕೂ ಅಂಥ ಬದ್ಧತೆಯೆಂಬುದು ಏನೂ ಇಲ್ಲ. ತಾವು ಸೋತರೂ ಸರಿಯೆ, ಕಾಂಗ್ರೆಸ್ ಗೆಲ್ಲಕೂಡದು ಎಂಬ ಮನಃಸ್ಥಿತಿಯಲ್ಲಿಯೇ ಎರಡೂ ಪಕ್ಷಗಳೂ ಇರುವುದರಿಂದ ಎರಡೂ ಪಕ್ಷಗಳು ಕಾಂಗ್ರೆಸ್ ವಿರುದ್ಧ ಒಂದಾದರೆ ಅಚ್ಚರಿಯೇನಿಲ್ಲ.