ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಒಂದರ ಹಿಂದೊಂದು ಟ್ರಬಲ್

Update: 2023-10-26 09:55 GMT
Editor : Thouheed | By : ಆರ್. ಜೀವಿ

facebook.com/DKShivakumar.official

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿರುವಾಗಲೇ, ಅದನ್ನೂ ಸೇರಿಸಿ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಬಿಜೆಪಿ ಮುಗಿಬಿದ್ದಿದೆ. ಡಿಕೆಶಿ ಮೇಲೆ ಬಿಜೆಪಿಯವರು ಮಾತ್ರವಲ್ಲ, ಅದರೊಂದಿಗೆ ಮೈತ್ರಿಯಲ್ಲಿರುವ ಜೆಡಿಎಸ್ ಕೂಡ ದಾಳಿ ನಡೆಸುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪೋಸ್ಟರ್ ಅಭಿಯಾನ ಶುರು ಮಾಡಿರುವುದು ವ್ಯವಸ್ಥಿತವಾಗಿ ಹಣಿಯುವ ಯತ್ನದಂತಿದೆ.

ಬಿಜೆಪಿಯ ಮುಖ್ಯ ಟಾರ್ಗೆಟ್ ಆಗಿರುವುದು​ ಡಿಸಿಎಂ ಡಿಕೆ ಶಿವಕುಮಾರ್ ಎಂಬುದು ಸಾಕಷ್ಟು ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಡಿಕೆ ಶಿವಕುಮಾರ್ ಅವರಿಗೆ ಒಂದರ ಹಿಂದೊಂದು ​ಸಮಸ್ಯೆಗಳು ಎದುರಾಗಿರುವುದರ ಹಿಂದೆ ಪಕ್ಷದ ಹೊರಗಿನ ವಿರೋಧಿಗಳಷ್ಟೇ ಪಕ್ಷದ ಒಳಗಿನ ವಿರೋಧಿಗಳೂ ಕಾರಣ ಎಂಬುದೂ ನಿಜ. ಈಗಾಗಲೇ ಡಿಕೆ ಶಿವಕುಮಾರ್ ವಿರುದ್ಧ ಬೆಳಗಾವಿ ರಾಜಕಾರಣದ ಶೀತಲ ಯುದ್ಧವೊಂದು ನಡೆದಿದೆ.

ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ನೇರವಾಗಿ ಇರುವುದು ಡಿಕೆ ಶಿವಕುಮಾರ್ ವಿರುದ್ಧ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ಬೆಳಗಾವಿ ರಾಜಕಾರಣದಲ್ಲಿ ನಡೆಯುತ್ತಿರುವ ಹಸ್ತಕ್ಷೇಪದ ಬಗ್ಗೆ ಬಹಿರಂಗವಾಗಿಯೇ ಬಾಯ್ಬಿಟ್ಟಿರುವ ಜಾರಕಿಹೊಳಿ, ​" ಕಾಂಗ್ರೆಸ್ 136 ಸ್ಥಾನ ಗೆದ್ದಿರುವ ಶ್ರೇಯಸ್ಸು ಕೇವಲ ಡಿ.ಕೆ. ಶಿವಕುಮಾರ್‌ ಅವರದ್ದು ಮಾತ್ರವಲ್ಲ. ಎಲ್ಲಾ ಹಂತದ ನಾಯಕರೂ, ಕಾರ್ಯಕರ್ತರಿಗೂ ಅದು ಸಲ್ಲುತ್ತದೆ​. ನಮ್ಮ ಹಾಗೂ ಡಿ.ಕೆ.ಶಿ ನಡುವಿನ ಮುಸುಕಿನ ಗುದ್ದಾಟ ಈಗಿನದ್ದಲ್ಲ. ಚುನಾವಣೆಗೆ ಮೊದಲಿನಿಂದಲೂ ಇದೆ. ಇದು ಮಧುಮೇಹ ಇದ್ದಂತೆ. ಗುಣಪಡಿಸಲು ಸಾಧ್ಯವಿಲ್ಲ. ಬದಲಿಗೆ ನಿಯಂತ್ರಣದಲ್ಲಿ ಇಡಲಷ್ಟೇ ಸಾಧ್ಯ" ಎಂದಿದ್ದಾರೆ.

ತಮ್ಮ ಮೌನ ದೌರ್ಬಲ್ಯವಲ್ಲ ಎಂಬ ಎಚ್ಚರಿಕೆ​ಯನ್ನೂ ಜಾರಕಿಹೊಳಿ ಕೊಟ್ಟಿರುವುದು ಕಾಂಗ್ರೆಸ್ ಒಳಗೆ ದೊಡ್ಡ ಮಟ್ಟದಲ್ಲಿಯೇ ಬೇಗುದಿ ಶುರುವಾಗಿದೆ ಎಂಬುದರ ಖಚಿತ ಸೂಚನೆ.​ ಇದಕ್ಕೂ ಮೊದಲು ನಾಲ್ವರು ಡಿಸಿಎಂಗಳ ವಿಚಾರವಾಗಿ ರಾಜಣ್ಣ ನೀಡಿದ್ದ ಹೇಳಿಕೆಯೂ ಡಿಕೆ ಶಿವಕುಮಾರ್ ಅವರನ್ನೇ ಟಾರ್ಗೆಟ್ ಮಾಡಿರುವ ನಡೆಯೇ ಆಗಿತ್ತು.

ಹೀಗೆ ಪಕ್ಷದೊಳಗೇ ತಳಮಳ ಎದ್ದಿರುವಾಗ, ಪಕ್ಷದೊಳಗೇ ಡಿಕೆ ಶಿವಕುಮಾರ್ ಅವರಿಗೆ ಪ್ರಬಲ ವಿರೋಧ ಹಿಂದೆಂದಿಗಿಂತಲೂ ಹೆಚ್ಚು ತೀವ್ರವಾಗಿ ಕಾಣಿಸತೊಡಗಿರುವಾಗ ಇದೇ ಸಮಯವನ್ನು ಪ್ರತಿಪಕ್ಷಗಳು ಬಳಸಿಕೊಳ್ಳಲು ಮುಂದಾಗಿವೆ. ಸಿಬಿಐ ತನಿಖೆಯ ಬಿಗಿತವೂ ಹೆಚ್ಚುವ ಸಾಧ್ಯತೆಗಳಿರುವ ಈ ಹೊತ್ತಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಸುತ್ತಲಿನಿಂದಲೂ ನಡೆಯುತ್ತಿರುವ ದಾಳಿಯ ಹಿಂದೆ, ನೇರ ಯುದ್ಧದಲ್ಲಿ ಮಣಿಸಲಾರದ ಕಾಂಗ್ರೆಸ್ ಅನ್ನು ಹೀಗೆ ಹೈರಾಣಾಗಿಸುವ ತಂತ್ರವೇ ಇದ್ದಂತಿದೆ.

ಯಾಕೆಂದರೆ, ಡಿ.ಕೆ ಶಿವಕುಮಾರ್ ಅವರನ್ನು ಹಣಿದರೆ, ಲೋಕಸಭೆ ಚುನಾವಣೆ ಎದುರಲ್ಲಿರುವ ಹೊತ್ತಲ್ಲಿ ಕಾಂಗ್ರೆಸ್ನ ಶಕ್ತಿಯನ್ನು ಮುಗಿಸಿದಂತಾಗುತ್ತದೆ ಎಂಬುದು ಪ್ರತಿಪಕ್ಷಗಳ ಲೆಕ್ಕಾಚಾರ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ದೆಹಲಿ ಬಾಸ್ಗಳ ಕಡೆಗಣನೆಗೆ ತುತ್ತಾಗಿರುವುದು ರಾಜ್ಯ ಬಿಜೆಪಿ ನಾಯಕರನ್ನು ಕಂಗೆಡಿಸಿದೆ. ಹಾಗಾಗಿಯೇ ವಿಧಾನಸಭೆ ಪ್ರತಿಪಕ್ಷ ನಾಯಕನೂ ಇಲ್ಲದೆ, ರಾಜ್ಯ ಘಟಕದ ಅಧ್ಯಕ್ಷನೂ ಇಲ್ಲದೆ ಪಕ್ಷ ಟೀಕೆಗೆ ತುತ್ತಾಗಿದೆ.

ಇಂಥ ಅಪಮಾನದ ನಡುವೆಯೇ ಲೋಕಸಭೆ ಚುನಾವಣೆಗೆ ಕಾಂಗ್ರೆಸ್, ಅದರಲ್ಲೂ ಡಿಕೆ ಶಿವಕುಮಾರ್ ಆಪರೇಷನ್ ಹಸ್ತವನ್ನು ತೀವ್ರಗೊಳಿಸಿದ್ದು, ಬಿಜೆಪಿಯ ಹಲವು ನಾಯಕರನ್ನು ಸೆಳೆಯತೊಡಗಿರುವುದು ಬಿಜೆಪಿ ಇನ್ನಷ್ಟು ಭೀತಿಗೆ ಒಳಗಾಗಲು ಕಾರಣವಾಗಿದೆ.

ಬರುವ ಲೋಕಸಭೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಗುರಿ ಎಂದು ಡಿಕೆ ಶಿವಕುಮಾರ್ ಹೇಳುತ್ತಲೇ ಬಂದಿದ್ದಾರೆ. ಬಹುಮತದೊಂದಿಗೆ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೇರಿದ ಬೆನ್ನಲ್ಲೇ ಆಪರೇಷನ್ ಹಸ್ತದ ತಯಾರಿಯನ್ನು ಡಿಕೆ ಶಿವಕುಮಾರ್ ನಡೆಸಿಕೊಂಡೇ ಬಂದಿರುವುದು ಸುದ್ದಿಯಾಗುತ್ತಲೇ ಇದೆ ಮತ್ತು ಬಿಜೆಪಿಯ ತತ್ತರಕ್ಕೆ ಕಾರಣವಾಗುತ್ತಲೇ ಇದೆ. ಹಿಂದೆ ಸಮ್ಮಿ​ಶ್ರ ಸರ್ಕಾರ ಬೀಳಲು ಕಾರಣರಾದವರಲ್ಲಿಯೇ ಹಲವರನ್ನು ಮತ್ತೆ ಕಾಂಗ್ರೆಸ್ಗೆ ಕರೆತರಲು ಡಿಕೆ ಶಿವಕುಮಾರ್ ಮುಂದಾಗಿರುವುದು ಬಿಜೆಪಿಯಲ್ಲಿ ಭಯ ಹುಟ್ಟಿಸಿರುವ ಸಂಗತಿ.

ಬಿಜೆಪಿಯ ಪ್ರಭಾವಿ ಶಾಸಕರನ್ನು ಸೆಳೆಯುವ, ಅಲ್ಲಿನ ಅತೃಪ್ತರಿಗೂ ಗಾಳ ಹಾಕುವ ಡಿಕೆ ಶಿವಕುಮಾರ್ ಯತ್ನ ನಡೆದಿರುವುದು, ಅಲ್ಲಿನ ಹಲವು ಮುಖಂಡರು ಡಿಕೆ ಶಿವಕುಮಾರ್ ಅವರನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಹಲವು ಸಲ ಭೇಟಿಯಾಗಿರುವುದು ಬಿಜೆಪಿಯಲ್ಲಿ ತಳಮಳ ಹುಟ್ಟಿಸಿದೆ.

ಈಗಿನ ಬೆಳವಣಿಗೆಯಲ್ಲಿ ಬಿಜೆಪಿಯ ಹಿರಿಯೂರು ಮಾಜಿ ​ಶಾಸಕಿ ಪೂರ್ಣಿಮಾ​ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.

ಇನ್ನೊಂದೆಡೆ ಅತೃಪ್ತ ಬಿಜೆಪಿ ಸಂಸದರನ್ನು ಸೆಳೆಯುವ ಯತ್ನದಲ್ಲಿಯೂ ಅವರು ನಿರತರಾಗಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ನಾಯಕಿ, ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆಸಿದ್ದು ಕೂಡ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿತ್ತು.

ಇಲ್ಲಿಯೂ ವಿಧಾನಸಭೆಯಲ್ಲಾದ ಹೀನಾಯ ಸೋಲೇ ಆಗಿಬಿಟ್ಟರೆ ಮತ್ತೆ ಮುಖವಿರುವುದಿಲ್ಲ ಎಂಬುದು ಬಿಜೆಪಿ ಆತಂಕ. ಮತ್ತು ಆ ಆತಂಕವೇ ಕಾಂಗ್ರೆಸ್ನ ಶಕ್ತಿಯಾಗಿರುವ ಡಿಕೆ ಶಿವಕುಮಾರ್ ವಿರುದ್ಧ ಮುಗಿಬೀಳಲು ಅವರನ್ನು ಪ್ರಚೋದಿಸುತ್ತಿದೆ.

ಡಿಕೆ ಶಿವಕುಮಾರ್ ಅವರಿಗೆ ಲಗಾಮು ಹಾಕದೆ ತಮ್ಮ ಬೇಳೆ ಬೇಯದು ಎನ್ನುವ ಕಾರಣಕ್ಕೆ, ಈಗ ಸಿಬಿಐ ತನಿಖೆಗೆ ಹಾದಿ ತೆರವಾಗಿಸುವ ಹೊತ್ತನ್ನು ಬಳಸಿಕೊಳ್ಳಲು ಅದು ಬಹಳ ಪೂರ್ವ ತಯಾರಿಯೊಂದಿಗೇ ಸಜ್ಜಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗೆ ನೋಡಿದರೆ, ಡಿಕೆ ಶಿವಕುಮಾರ್ ಅವರನ್ನು ಹಣಿಯುವುದು ಬಿಜೆಪಿಗೆ ಈಗ ತೀರಾ ಅನಿವಾರ್ಯವಾಗುತ್ತಿದ್ದರೂ, ಅದರ ಈ ತಂತ್ರ ಹೊಸದೇನೂ ಅಲ್ಲ.

ಅದಕ್ಕೆ ಡಿಕೆ ಶಿವಕುಮಾರ್ ಅವರ ಹೇಳಿಕೆಯೇ ಸಾಕ್ಷಿ. ಸಿಬಿಐ ತನಿಖೆಗೆ ಹಿಂದಿನ ಬಿಜೆಪಿ ಸರ್ಕಾರ ತಮ್ಮ ಪ್ರಕರಣವನ್ನು ಕೊಟ್ಟ ಸಂದರ್ಭದ ಬಗ್ಗೆ ಹೇಳಿರುವ ಡಿಕೆ ಶಿವಕುಮಾರ್, ಈ ಪ್ರಕರಣದ ಸಿಬಿಐ ತನಿಖೆಗೆ ಅನುಮತಿ ಕೊಡಲು ಬರುವುದಿಲ್ಲ ಎಂದು ಅಡ್ವೋಕೇಟ್ ಜನರಲ್ ಅವರೇ ಸ್ಪಷ್ಟವಾಗಿ ಹೇಳಿದ್ದರೂ, ಯಡಿಯೂರಪ್ಪ ಅವರು ಸೀದಾ ಸಿಬಿಐ ತನಿಖೆಗೆ ಅನುಮತಿ ನೀಡಿದರು ಎಂದಿದ್ಧಾರೆ.

ರಾಜಕೀಯ ಉದ್ದೇಶಕ್ಕಾಗಿಯೇ ಯಡಿಯೂರಪ್ಪ ನನ್ನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದಾರೆ. ಬಿಜೆಪಿ ಶಾಸಕರ ವಿರುದ್ಧವೂ ಬೇಕಾದಷ್ಟು ಪ್ರಕರಣಗಳಿವೆ. ಆದರೆ ಅವರ ವಿರುದ್ಧ ಇಲ್ಲದ ಸಿಬಿಐ ತನಿಖೆ ನನ್ನ ವಿರುದ್ಧ ಮಾತ್ರ ಏಕೆ ಎಂಬುದು ಡಿಕೆ ಶಿವಕುಮಾರ್ ಪ್ರಶ್ನೆ. ಅಂದಿನ ಯಡಿಯೂರಪ್ಪ ಸರ್ಕಾರದ ಕ್ರಮದ ಪರಿಣಾಮಗಳನ್ನೇ ಡಿಕೆ ಶಿವಕುಮಾರ್ ಈಗ ಎದುರಿಸುತ್ತಿದ್ಧಾರೆ.

ಶೇಕಡ 90ರಷ್ಟು ತನಿಖೆ ಮುಗಿದಿದೆ ಎಂದು ಸಿಬಿಐ ಹೇಳುತ್ತಿದೆ. ಆದರೆ ನನ್ನ ಬಳಿ ಯಾವ ವಿಚಾರಣಾಧಿಕಾರಿಯೂ ಬಂದಿಲ್ಲ. ಒಂದು ದಿನವೂ ನನ್ನನ್ನು ವಿಚಾರಣೆಗೆ ಕರೆದಿಲ್ಲ. ವಿವರವನ್ನೂ ಪಡೆದಿಲ್ಲ. ನನ್ನ ಆಸ್ತಿ ಯಾವುದು, ನನ್ನ ಪತ್ನಿಯ ಆಸ್ತಿ ಎಷ್ಟಿದೆ ಎಂಬ ಮಾಹಿತಿ ಪಡೆಯದೆ ಹೇಗೆ ತನಿಖೆ ಮುಕ್ತಾಯ ಮಾಡಲು ಸಾಧ್ಯ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಇಂಥದೊಂದು ವಿದ್ಯಮಾನದ ನಡುವೆಯೇ ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳಿಸುವ ಮಾತು ಬಿಜೆಪಿಯವರಿಂದಲೂ, ಹಾಗೆಯೇ ಕುಮಾರಸ್ವಾಮಿಯಂಥ ಜೆಡಿಎಸ್ ನಾಯಕರಿಂದಲೂ ಬರತೊಡಗಿದೆ. ನನ್ನನ್ನು ಶಾಶ್ವತವಾಗಿ ತಿಹಾರ್ ಜೈಲಿಗೆ ಕಳಿಸುವುದಾಗಿ ನಳಿನ್ ಕುಮಾರ್ ಕಟೀಲ್ ಹೇಳುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳಿಸುವುದು ಪೂರ್ವಯೋಜಿತ ಯೋಜನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಎಚ್ಡಿ ಕುಮಾರಸ್ವಾಮಿ ಕೂಡ ಡಿಕೆ ಶಿವಕುಮಾರ್ ಹೋಗುವುದು ತಿಹಾರ್ ಜೈಲಿಗೆ ಎಂಬಂಥ ಹೇಳಿಕೆ ನೀಡಿದ್ದು ವರದಿಯಾಗಿತ್ತು. ಇದರ ಬಗ್ಗೆಲ್ಲ ಖಾರವಾಗಿಯೇ ಪ್ರತಿಕ್ರಿಯೆ ಕೊಟ್ಟಿರುವ ಡಿಕೆ ಶಿವಕುಮಾರ್, ಬಿಜೆಪಿ ಮತ್ತು ಜೆಡಿಎಸ್ ಮುಖಂಡರೆಲ್ಲ ನನ್ನನ್ನು ಜೈಲಿಗೆ ಕಳಿಸಲು ಆತುರದಲ್ಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರೆಲ್ಲ ಆದಾಯ ತೆರಿಗೆ ಇಲಾಖೆಯ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಕೆಎಸ್ ಈಶ್ವರಪ್ಪ ಅವರಂತೂ ನ್ಯಾಯಾಧೀಶರಾಗಿ ಬಿಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ಟೀಕಿಸಿದ್ಧಾರೆ.

ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯುತ್ತಲೇ ಸರ್ಕಾರದ ವಿರುದ್ಧವೂ ಪ್ರತಿಪಕ್ಷಗಳು ಮುಗಿಬೀಳುತ್ತಿರುವ ಈ ಸಂದರ್ಭದಲ್ಲಿ ಗಮನಿಸಬೇಕಾದ ಮತ್ತೂ ಒಂದು ವಿಚಾರವಿದೆ. ಈಗಾಗಲೇ ಆಪರೇಷನ್ ಹಸ್ತದ ಕಾರಣದಿಂದ ಬಿಜೆಪಿ ನಾಯಕರು ಎದುರಿಸುತ್ತಿರುವ ಭೀತಿ ಒಂದೆಡೆಯಾದರೆ, ಬಿಜೆಪಿ ಕಾಲದ ಹಗರಣಗಳ ತನಿಖೆಗೆ ಸರ್ಕಾರ ಮುಂದಾಗಿರುವುದೂ ಮತ್ತೊಂದೆಡೆ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಹಾಗಾಗಿಯೇ ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ ಅಭಿಯಾನಕ್ಕೂ ಬಿಜೆಪಿ ಮುಂದಾಗಿದೆ. ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ಎಂಬ ಹೆಸರಿನಲ್ಲಿ ಪೋಸ್ಟರ್ ಅನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕೇಂದ್ರ ಹಾಗೂ ರಾಜ್ಯ ನಾಯಕರ ಫೋಟೊಗಳ ಸಹಿತ ಇರುವ ಈ ಪೋಸ್ಟರ್ನಲ್ಲಿ ಹಣಕಾಸು ವಿಚಾರವಾಗಿ ಅಪಪ್ರಚಾರ ಮಾಡುವ ಯತ್ನವೊಂದು ಕಾಣಿಸುತ್ತಿದೆ.

ಇದರ ಬಗ್ಗೆ ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ಪೊಲೀಸರಿಗೆ ದೂರು ನೀಡಿದ್ದು, ಸುಳ್ಳು ಮಾಹಿತಿಯನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಹಾಗೂ ಸರ್ಕಾರದ ವಿರುದ್ಧ ಪ್ರಚೋದಿಸುವ ಯತ್ನವೆಂದು ಆರೋಪಿಸಿದ್ದಾರೆ. ಈಗಾಗಲೇ, ಪಂಚರಾಜ್ಯ ಚುನಾವಣೆಗಳ ತಯಾರಿ ನಡೆದಿರುವ ಹೊತ್ತಲ್ಲಿ ರಾಜ್ಯ ಸರ್ಕಾರದ ವಿರುದ್ಧ, ಕಾಂಗ್ರೆಸ್ ವಿರುದ್ಧ ಬಿಜೆಪಿ ಹಲವು ಬಗೆಯ ಆರೋಪಗಳನ್ನು ಮಾಡುತ್ತಿದೆ.

ತೆಲಂಗಾಣ ಚುನಾವಣೆಗೆ ರಾಜ್ಯದಿಂದ ಹಣ ಹೋಗುತ್ತಿದೆ ಎಂಬ ಆರೋಪವನ್ನೂ ಕಾಂಗ್ರೆಸ್ ವಿರುದ್ಧ ಮಾಡಲಾಗಿತ್ತು.

ರಾಜ್ಯದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆದಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದರು.

ಪಂಚರಾಜ್ಯಗಳ ಚುನಾವಣೆಗೆ ರಾಜ್ಯದಿಂದ ಹಣ ಹೋಗುತ್ತಿದೆ ಎಂದು ಅಶ್ವತ್ಥನಾರಾಯಣ ಆರೋಪ ಮಾಡಿದ್ದಾರೆ.

ಒಂದೆಡೆ, ಡಿಕೆ ಶಿವಕುಮಾರ್ ರಾಜೀನಾಮೆಗೆ ಒತ್ತಾಯ, ಇನ್ನೊಂದೆಡೆಯಿಂದ ಸರ್ಕಾರದ ವಿರುದ್ಧ ಆರೋಪಗಳನ್ನೂ ಅಪಪ್ರಚಾರವನ್ನೂ ನಡೆಸುವ ಯತ್ನ ಇವೆಲ್ಲದರ ಮೂಲಕ ಒಟ್ಟಿಗೇ ದೊಡ್ಡ ಇಕ್ಕಟ್ಟಿನಲ್ಲಿ ಕಾಂಗ್ರೆಸ್ ಅನ್ನು ಸಿಲುಕಿಸುವ ತಂತ್ರ ತೀವ್ರಗೊಂಡಂತಿದೆ. ​ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಆಂತರಿಕ ಗೊಂದಲಗಳೂ ಅದರೊಂದಿಗೆ ಸೇರಿಕೊಂಡು ಪಕ್ಷಕ್ಕೆ, ಸರಕಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ ತಂದಿಟ್ಟಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿಯ ತಂಡವೊಂದು ಪ್ರಯತ್ನ ನಡೆಸಿರುವುದು ಗೊತ್ತಿದೆ ಎಂದೂ ಡಿಕೆ ಶಿವಕುಮಾರ್ ಮೊನ್ನೆಯಷ್ಟೇ ಹೇಳಿದ್ದರು. ಅತ್ತ ಬಿಜೆಪಿ ಕೂಡ, ಇನ್ನೊಂದೇ ವರ್ಷದಲ್ಲಿ ರಾಜ್ಯದಲ್ಲಿ ಚುನಾವಣೆ ಬರುತ್ತದೆ ಎಂದು ಹೇಳುತ್ತಿದೆ.

ಚುನಾವಣೆಯಲ್ಲಿ ಸೋತಾಗಿನಿಂದಲೂ ಕಾಂಗ್ರೆಸ್ ವಿರುದ್ಧ ಬಿಜೆಪಿಗಿಂತಲೂ ಹೆಚ್ಚು ಮುಗಿಬೀಳುತ್ತಿದ್ದ ಕುಮಾರಸ್ವಾಮಿ, ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಮೇಲಂತೂ ಕಾಂಗ್ರೆಸ್ ವಿರುದ್ಧ ಅದರಲ್ಲೂ ಡಿಕೆ ಶಿವಕುಮಾರ್ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ನೋಡಿದರೆ, ಒಂದೇ ವರ್ಷದಲ್ಲಿ ಚುನಾವಣೆ ಎಂದು ಬಿಜೆಪಿ ಹೇಳುತ್ತಿರುವುದಕ್ಕೂ ಎಚ್ಡಿಕೆ ಬಲವೇ ಪ್ರಚೋದನೆಯಾಗಿದೆಯೇನೊ ಎಂಬ ಅನುಮಾನ ಮೂಡುತ್ತದೆ. ಇಂಥ ಹೊತ್ತಲ್ಲಿಯೇ ಸಿಬಿಐ ತನಿಖೆ ಮತ್ತೆ ಚುರುಕುಗೊಳ್ಳಬಹುದಾದ ಸಾಧ್ಯತೆಯಿರುವುದು ಹಾಗೂ ಸರ್ಕಾರದ ವಿರುದ್ಧ ಬಿಜೆಪಿ ಹಲವು ದಿಕ್ಕುಗಳಿಂದ ದಾಳಿಗೆ ಮುಂದಾಗಿರುವುದು ಕಾಂಗ್ರೆಸ್ ನಿರಾಳವಾಗಿರುವ ಸ್ಥಿತಿಯಿಲ್ಲ ಎಂಬುದನ್ನಂತೂ ಸೂಚಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News