ಹೈಟೆಕ್ ಮಾದರಿಯಲ್ಲಿ ಸಿದ್ಧಗೊಂಡ ಚಲುವಾಂಬ ಮಕ್ಕಳ ಆಸ್ಪತ್ರೆಯ ಒಪಿಡಿ ಘಟಕ

Update: 2023-11-13 09:35 GMT

ಮೈಸೂರು, ನ.12: ಮೈಸೂರಿನ ದೊಡ್ಡಾಸ್ಪತ್ರೆ ಎಂದು ಕರೆಯಲ್ಪಡುವ ಕೆ.ಆರ್.ಆಸ್ಪತ್ರೆಯ ಚಲುವಾಂಬ ಮಕ್ಕಳ ಆಸ್ಪತ್ರೆಯ ಒಪಿಡಿ ಘಟಕ ಯಾವ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆಯಿಲ್ಲದಂತೆ ಹೈಟೆಕ್ ಮಾದರಿಯಲ್ಲಿ ನವೀಕರಣಗೊಂಡು ತನ್ನ ಕಾರ್ಯವನ್ಮು ಎಂದಿನಂತೆ ಆರಂಭಿಸುತ್ತಿದೆ.

ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿತ್ವದಿಂದ ನಿರ್ಮಾಣಗೊಂಡ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೀಗ ಶತಮಾನೋತ್ಸವದ ಸಂಭ್ರಮ. ಆಗಸ್ಟ್

2024ಕ್ಕೆ ನೂರು ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಇಡೀ ಆಸ್ಪತ್ರೆಯ ಪಾರಂಪರಿಕ ಕಟ್ಟಡವನ್ನು ಜೀರ್ಣೋದ್ಧಾರ ಮಾಡಲು ಸುಮಾರು 89 ಕೋಟಿ. ರೂ. ವೆಚ್ಚದಲ್ಲಿ ಹಣ ಬಿಡುಗಡೆ ಮಾಡಿದೆ.

ಅದರ ಅಂಗವಾಗಿ ಈಗಾಗಲೇ ಆಸ್ಪತ್ರೆಯ ಎಲ್ಲ ವಿಭಾಗಗಳ ಅಭಿವೃದ್ಧಿ ಕೆಲಸಗಳು ಜರೂರಾಗಿ ನಡೆಯುತ್ತಿದ್ದು, ಇದರ ಒಂದು ಭಾಗವಾದ ಚಲುವಾಂಬ ಮಕ್ಕಳ ಆಸ್ಪತ್ರೆಯ ಒಪಿಡಿ ಘಟಕವನ್ನು 1.5 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದ್ದು, ಯಾವ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಸಿದ್ಧಗೊಂಡಿದೆ.

ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ಪ್ರತ್ಯೇಕ ಕಟ್ಟಡಗಳನ್ನು ನಿರ್ಮಿಸಿದ್ದು, ಚಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿಯರು, ಮಕ್ಕಳ ಚಿಕಿತ್ಸೆಗೆಂದೇ ಪ್ರತ್ಯೇಕ ಬೆಡ್‌ಗಳನ್ನು ಸ್ಥಾಪಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮೈಸೂರು, ಚಾಮರಾಜನಗರ, ಮಂಡ್ಯ, ಮಡಿಕೇರಿ ಮತ್ತು ಹಾಸನ ಜಿಲ್ಲೆಗಳಿಂದಲೂ ಚಿಕಿತ್ಸೆಗಾಗಿ ಪ್ರತೀ ದಿನ ನೂರಾರು ಮಂದಿ ಬರುತ್ತಾರೆ.

ಸಾಕಷ್ಟು ಸರಕಾರಿ ಆಸ್ಪತ್ರೆಗಳಿದ್ದರೂ ಚಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ನುರಿತ ವೈದ್ಯರಿರುವ ಕಾರಣ ಮತ್ತು ಉತ್ತಮ ಚಿಕಿತ್ಸೆ ದೊರೆಯಲಿದೆ ಎಂದು ಕೆಳ ಮಧ್ಯಮವರ್ಗದವರು ಬಹಳಷ್ಟು ಮಂದಿ ಬರುವುದರಿಂದ ಆಸ್ಪತ್ರೆಗೆ ಹೆಚ್ಚಿನ ಒತ್ತಡವೂ ಇದೆ. ಆದರೂ ಎಲ್ಲರನ್ನು ಸುಧಾರಿಸಿಕೊಂಡು ಇಲ್ಲಿನ ಆಡಳಿತಮಂಡಳಿ ಚಿಕಿತ್ಸೆ ನೀಡುತ್ತಿದೆ.

ಚಲುವಾಂಬ ಮಕ್ಕಳ ಆಸ್ಪತ್ರೆಯ ಸೀತಾರಂಗ ಒಪಿಡಿ ಘಟಕ ಹೈಟೆಕ್‌ನೊಂದಿ ಕಾರ್ಯಾರಂಭ ಮಾಡಿದ್ದು, ಚಿಕಿತ್ಸೆಗೆ ತೆರಳುವ ಮೊದಲು ಹೊರರೋಗಿ ಚೀಟಿ ಪಡೆಯಲು ನೂಕು ನುಗ್ಗಲು ಉಂಟಾಗದಂತೆ 10 ಪ್ರತ್ಯೇಕ ಕೌಂಟರ್ ಗಳನ್ನು ನಿರ್ಮಾಣ ಮಾಡಲಾಗಿದೆ. ಒಳ ಹೊಕ್ಕರೆ ದೊಡ್ಡ ಹಾಲ್ ಅಲ್ಲಿ ಚಿಕಿತ್ಸೆಗೆ ಬರುವವರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತಗೆ ದೊಡ್ಡ ಎಲ್.ಸಿ.ಡಿ ಟಿ.ವಿ. ಯನ್ನು ಅಳವಡಿಸಲಾಗಿದೆ. ಬಲಕ್ಕೆ ಮಕ್ಕಳ ತಪಾಸಣೆಯ ಸುಸಜ್ಜಿತ ರೂಂ ಇದೆ.

ಇಲ್ಲಿ ನುರಿತ ವೈದ್ಯರು ಮಕ್ಕಳನ್ನು ಪರೀಕ್ಷೆ ಮಾಡಲಿದ್ದಾರೆ. ಪಕ್ಕದಲ್ಲಿ ಎಕ್ಸ್ ರೇ ರೂಂ, ಅದರ ಪಕ್ಕದಲ್ಲಿ ಸರ್ಜನ್ ಕೊಠಡಿ ಇದೆ. ಮಕ್ಕಳ ಹೆಚ್ಚಿನ ಚಿಕಿತ್ಸೆಗೆ ಸರ್ಜನ್‌ಗಳು ಪರೀಕ್ಷಿಸಿ ಸಲಹೆ ಮಾರ್ಗದರ್ಶನವನ್ನು ನೀಡಲಿದ್ದಾರೆ. ನಂತರ ವೈದ್ಯಕೀಯ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಡಮಾನ್ಸ್ ಟ್ರೇಷನ್ ಮಾಡುವ ದೊಡ್ಡ ಸೆಮಿನಾರ್ ಹಾಲ್ ಇದೆ. ನವಜಾತ ಶಿಶುಗಳ ಪರೀಕ್ಷೆಯ ಪ್ರತ್ಯೇಕ ಕೋಣೆಯೂ ಸಹ ಇದೆ. ತಾಯಂದಿರು ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ, ಶೌಚಾಲಯಗಳು ಇವೆ. ಹೊರರೋಗಿ ದಾಖಲಾತಿಗಾಗಿ ಪ್ರತ್ಯೇಕ ಕೌಂಟರ್‌ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ಬಿಸಿನೀರು ಸಹ ದೊರೆಯಲಿದೆ.

ನ್ಯಾಷನಲ್ ಹೆಲ್ತ್ ಸರ್ಟಿಫಿಕೇಟ್

ಭಾರತ ಸರಕಾರ ಗುಣಮಟ್ಟದಿಂದ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಮುಸ್ಕಾನ್ ಸರ್ಟಿಫಿಕೇಟ್ ನೀಡಲಿದ್ದು. ಈಗಾಗಲೇ ತಜ್ಞರ ತಂಡ ಚಲುವಾಂಬ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಂಡು ಹೋಗಿದ್ದು. ಮುಸ್ಕಾನ್ ಸರ್ಟಿಫಿಕೇಟ್ ದೊರೆಯಲಿದೆ ಎಂಬ ವಿಶ್ವಾಸದಲ್ಲಿ ಆಡಳಿತ ಮಂಡಳಿ ಎದುರು ನೋಡುತ್ತಿದೆ. ಈಗಾಗಲೇ ಚಲುವಾಂಬ ಆಸ್ಪತ್ರೆಯ ಲೇಬರ್ ವಾರ್ಡ್ ಗುಣಮಟ್ಟದ ಚಿಕಿತ್ಸೆಯಿಂದ ಮಕ್ಕಳಲ್ಲಿ ನಗು ಸೌಲಭ್ಯದ ಲಕ್ಷ್ಯ ನ್ಯಾಷನಲ್ ಹೆಲ್ತ್ ಸರ್ಟಿಫಿಕೇಟ್ ಪಡೆದಿದೆ. ಈಗಾಗಲೇ ಚಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಆರೈಕೆಯ ವಾರ್ಮರ್, 8 ಪಿಐಸಿಯು, ಪೀಡಿಯಾಟ್ರಿಕ್ ಇನ್ ಸೆನ್‌ಟಿವ್ ಕೇರ್ ಇದೆ. ಒಟ್ಟು 420 ಹಾಸಿಗೆಗಳ ಸೌಲಭ್ಯವಿದೆ.

ಚಲುವಾಂಬ ಮಕ್ಕಳ ಆಸ್ಪತ್ರೆಗೆ ಹೆಚ್ಚಿನ ಒತ್ತಡ ಇರುವುದರಿಂದ ಬೆಂಗಳೂರಿನಲ್ಲಿರುವ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಮಾದರಿಯಲ್ಲೇ ಆಸ್ಪತ್ರೆ ಆವರಣದಲ್ಲೆ ಪ್ರತ್ಯೇಕವಾಗಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲು ರಾಜ್ಯ ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದ್ದು, ಲ್ಯಾಬ್ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಗೆ ಕಳುಹಿಸಬೇಕಿರುವುದರಿಂದ ಚಲುವಾಂಬ ಮಕ್ಕಳ ಆಸ್ಪತ್ರೆಯಲ್ಲೇ ಲ್ಯಾಬ್ ಸೌಲಭ್ಯ ಆರಂಭಿಸಲು ಚಿಂತನೆ ನಡೆಸಲಾಗಿದೆ.

- ಡಾ.ರಾಜೇಂದ್ರ ಕುಮಾರ್, ಅಧೀಕ್ಷಕರು, ಚಲುವಾಂಬ ಮಕ್ಕಳ ಆಸ್ಪತ್ರೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನೇರಳೆ ಸತೀಶ್ ಕುಮಾರ್

contributor

Similar News