ಮಹಿಷನಿಗೆ ವಿರೋಧ : ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು

Update: 2023-10-16 10:28 GMT

ಭಾರತದ ಮೂಲನಿವಾಸಿಗಳ ರಾಜ ಎಂದೇ ಕರೆಯಲ್ಪಡುವ ಮಹಿಷ ದಸರಾ ವಿರುದ್ಧ ಬಿಜೆಪಿ ಮುಖಂಡರು ಮಾಡುತ್ತಿರುವ ಕೆಟ್ಟ ರಾಜಕೀಯ ಏನು ?. ಯಾಕೆ ಮಹಿಷನ ವಿರುದ್ಧ ಬಿಜೆಪಿಗೆ ಇಷ್ಟೊಂದು ಅಸಹನೆ ?. ಮೈಸೂರಲ್ಲಿ ಮಹಿಷ ದಸರಾಕ್ಕೆ ವಿರೋಧವೇ ಆ ಪಕ್ಷಕ್ಕೆ ಮುಳುವಾಗಲಿದೆಯೇ ?. ಅದರಲ್ಲೂ ವಿಶೇಷವಾಗಿ ಸಂಸದ ಪ್ರತಾಪ್ ಸಿಂಹ ಅವರ ಆಕ್ರಮಣಕಾರಿ ಧೋರಣೆ, ದಲಿತ ಮುಖಂಡರನ್ನೇ ಗುರಿಯಾಗಿಸಿ ಆಡಿರುವ ಅವಹೇಳನ ಧಾಟಿಯ ಮಾತುಗಳು ಬಿಜೆಪಿಗೆ ಸಂಕಷ್ಟ ತಂದೊಡ್ಡಿದೆಯೇ ?. ದ್ವೇಷ, ಸುಳ್ಳುಗಳ ಆಧಾರದಲ್ಲೇ ಚುನಾವಣೆ ಗೆಲ್ಲುತ್ತಾ ಬಂದಿರುವ ಬಿಜೆಪಿಗೆ ಈಗ ಮೈಸೂರಲ್ಲಿ ಮಹಿಷ ದಸರಾಕ್ಕೆ ವಿರೋಧ ದುಬಾರಿಯಾಗಿ ಪರಿಣಮಿಸಲಿದೆಯೇ ?. ಬಿಜೆಪಿಯ ಸುಳ್ಳುಗಳನ್ನು ನಂಬಿ ಅದರ ಹಿಂದೆ ನಿಂತಿದ್ದ ದಲಿತರು ಆ ಪಕ್ಷದ ವಿರುದ್ಧ ತಿರುಗಿ ಬೀಳುವಂತೆ ಮಾಡಿದರೇ ಸಂಸದ ಪ್ರತಾಪ್ ಸಿಂಹ ?

ಪ್ರಮುಖವಾಗಿ ದಲಿತ ಸಮುದಾಯ ಸೇರಿದಂತೆ ಅನೇಕ ಸಮುದಾಯಗಳ ಜೊತೆ ಗೂಡಿ ಇದೇ ತಿಂಗಳ ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಹಿಷ ದಸರಾ ಆಚರಣೆಗೆ ಮುಂದಾಗಿದ್ದರು. ಇದಕ್ಕಾಗಿ ಕಳೆದ ಒಂದು ತಿಂಗಳ ಹಿಂದಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಸಂಸದ ಪ್ರತಾಪ್ ಸಿಂಹ ಕಳೆದ ಒಂದು ವಾರದಿಂದ ಮಹಿಷ ದಸರಾಗೆ ವಿರೋಧ ವ್ಯಕ್ತಪಡಿಸಿ, ಮಹಿಷ ದಸರಾಗೆ ಅನುಮತಿ ಕೊಟ್ಟರೆ ಅದೇ ದಿನ ಅದೇ ಸಮಯಕ್ಕೆ ನಾವು ಸಹ ಚಲೋ ಚಾಮುಂಡಿ ಮಾಡುತ್ತೇವೆ ಎಂದು ಹೇಳಿಕೆ ಕೊಟ್ಟರು.

ಮಹಿಷ ದಸರಾ ಆಚರಿಸಿದರೆ ಆಕಾಶವೇ ಕಳಚಿ ಬೀಳುತ್ತದೆ ಎಂಬ ರೀತಿಯಲ್ಲಿ ಜಿದ್ದಿಗೆ ಬಿದ್ದಂತೆ ವಿರೋಧಿಸಿಕೊಂಡು ಬಂದಿದ್ದಾರೆ ಪ್ರತಾಪ್ ಸಿಂಹ. ಅಕ್ಟೋಬರ್ 9 ರಂದು ದಿಢೀರನೇ ತುರ್ತು ಪತ್ರಿಕಾಗೋಷ್ಠಿ ನಡೆಸಿ ಚಲೋ ಚಾಮುಂಡಿ ಪೋಸ್ಟರ್ ಬಿಡುಗಡೆ ಮಾಡಿದರು ಪ್ರತಾಪ್ ಸಿಂಹ. ಅಷ್ಟಕ್ಕೇ ತೃಪ್ತರಾಗದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಸಂಘರ್ಷ, ಹೊಡೆದಾಟವಾದರೂ ಮಹಿಷ ದಸರಾ ಆಚರಣೆ ತಡೆಯುತ್ತೇವೆ. ಈಗಲೇ ಇವರಿಗೆ ಬುದ್ಧಿ ಕಲಿಸಿ ಮಹಿಷ ದಸರಾ ಆಚರಣೆ ಮಾಡಲು ಬರುವವರನ್ನು ತುಳಿದು ಹೊಸಕಿ ಹಾಕುತ್ತೇವೆ ಎಂದು ಬಿಟ್ಟರು. ಇದರ ಜೊತೆಗೆ ಮೈಸೂರು ಪ್ರಾಂತ್ಯದ ದಲಿತರ ರಕ್ಷಣಾ ಕೇಂದ್ರ ಎಂದೇ ಹೆಸರುವಾಸಿಯಾಗಿರುವ ಮೈಸೂರು ನಗರದ ಅಶೋಕಪುಂ ಹೆಸರು ಹೇಳಿ ಕೆಲವು ದಲಿತ ಮುಖಂಡರ ವಿರುದ್ಧ ಹಗುರವಾಗಿ ಅವಹೇಳನಕಾರಿಯಾಗಿ ಮಾತಾಡೇ ಬಿಟ್ಟರು.

ಇದರಿಂದ ಸಿಟ್ಟಿಗೆದ್ದ ದಲಿತ ಸಮುದಾಯ ಮತ್ತು ಇತರೆ ವರ್ಗದವರು ಸಂಸದ ಪ್ರತಾಪ್ ಸಿಂಹ ಅವರ ವಿರುದ್ದ ತಿರುಗಿ ಬಿದ್ದರು. ಈ ನಡುವೆ ಬಿಜೆಪಿಯಲ್ಲಿಯೇ ಮಹಿಷ ದಸರಾ ಪರವಾಗಿ ಗಟ್ಟಿಯಾಗಿ ನಿಂತವರೂ ಇದ್ದಾರೆ. ಅದರ ಆಚರಣೆಗೆ ಬಿಜೆಪಿಯ ಎಸ್ಸಿ ಮೋರ್ಚಾ ಬೆಂಬಲ ವ್ಯಕ್ತಪಡಿಸಿದ್ದು, ಆಚರಣೆಗೆ ಅವಕಾಶ ನೀಡುವಂತೆ ಕೇಳಿಕೊಂಡಿದೆ. ಇದು ಈಗ ಬಿಜೆಪಿ ನಾಯಕರನ್ನು ದೊಡ್ಡ ಇಕ್ಕಟ್ಟಿಗೆ ಸಿಲುಕಿಸಿದೆ. ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ಮೈಸೂರು ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ ಬೆನ್ನಿಗೇ ಮಹಿಷ ದಸರಾ ಪರವಾಗಿ ನಾಡಿನಾದ್ಯಂತ ಬೆಂಬಲ ವ್ಯಕ್ತವಾಗಿದೆ.

ಬಿಜೆಪಿ ಮುಖಂಡ ಗಿರಿಧರ್, ಮಹಿಷ ದಸರಾ ನಿಲ್ಲಿಸಲು ಪ್ರತಾಪ್ ಸಿಂಹ ಯಾರು ಎಂದು ಕೇಳಿದ್ದಾರೆ. ಬಿಜೆಪಿ ಮಾಜಿ ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಸೇರಿದಂತೆ ಪಕ್ಷದಲ್ಲಿ ಯಾರ ಬೆಂಬಲವೂ ಸಂಸದ ಪ್ರತಾಪ್ ಸಿಂಹ ಅವರಿಗೆ ಇಲ್ಲ ಎಂದಿದ್ದಾರೆ ಗಿರಿಧರ್. ಪ್ರತಾಪ್ ಸಿಂಹ ಬಿಜೆಪಿ ಹೆಸರನ್ನು ಬಳಸಿಕೊಂಡು ಮಹಿಷ ದಸರಾಗೆ ಅಡ್ಡಿಪಡಿಸುತ್ತಿದ್ದಾರೆ. ಈ ವಿಚಾರ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆಯೇ ಆಗಿಲ್ಲ ಎಂದು ಗಿರಿಧರ್ ಹೇಳಿರುವುದು ಮಹತ್ವ ಪಡೆದಿದೆ.

ಹಾಗಾದರೆ, ಪ್ರತಾಪ್ ಸಿಂಹ ವೈಯಕ್ತಿಕ ಅಜೆಂಡ ಇಟ್ಟುಕೊಂಡು ಇದನ್ನು ವಿರೋಧಿಸುತ್ತಿದ್ದಾರೆಯೆ? ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಈ ಬಿಜೆಪಿ ಸಂಸದನ ಉದ್ದೇಶವೆ?. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಮಹಿಷ ದಸರಾಗೆ ಅವಕಾಶ ನೀಡಬೇಕು ಎಂಬುದು ಮೈಸೂರಿನ ಬಿಜೆಪಿ ಮುಖಂಡ ಗಿರಿಧರ್ ಒತ್ತಾಯವಾಗಿದೆ. ಈ ಮೂಲಕ ಅವರು, ಮಹಿಷ ದಸರಾಗೆ ಬಿಜೆಪಿಯ ವಿರೋಧವಿಲ್ಲ ಎಂಬ ಅಂಶವನ್ನು ಹೇಳಿದಂತಾಗಿದೆ. ಶಾಸಕ ಶ್ರೀವತ್ಸ ಅವರಿಗೂ ಮಹಿಷ ದಸರಾ ವಿರೋಧ ಇಷ್ಟವಿಲ್ಲ, ತಲೆಹರಟೆ ಪ್ರತಾಪ್ ಸಿಂಹ ಬಲವಂತಕ್ಕೆ ಒಲ್ಲದ ಮನಸ್ಸಿನಿಂದ ಅವರು ವಿರೋಧ ಮಾಡುತ್ತಿದ್ದಾರೆ ಎಂದು ಕೂಡ ಗಿರಿಧರ್ ಹೇಳಿದ್ದಾರೆ.

ದಲಿತರು ಮಹಿಷ ದಸರಾ ಆಚರಣೆ ಮಾಡುತ್ತಿರುವುದನ್ನು ಸಂಸದ ಪ್ರತಾಪ ಸಿಂಹ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿಯೇ ಅವರು ಮಹಿಷ ದಸರಾ ವಿರೋಧಿಸುತ್ತಿರುವುದು. ಈತ ನೂರಕ್ಕೆ ನೂರರಷ್ಟು ದಲಿತ ವಿರೋಧಿ. ಹಾಗಾಗಿಯೇ, ಮಹಿಷ ದಸರಾ ಆಚರಣೆ ಮಾಡುವವರನ್ನು ತುಳಿದು ಹಾಕುತ್ತೇನೆ, ಹೊಸಕಿ ಹಾಕುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಮಹಿಷ ಕೆಟ್ಟ ವ್ಯಕ್ತಿಯಾಗಿದ್ದರೆ ಮೈಸೂರಿನ ಮಹಾರಾಜರು ಏಕೆ ಮಹಿಷನ ಅಷ್ಟು ದೊಡ್ಡ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದರು? ಅಂಥ ಪ್ರತಿಮೆಯನ್ನೇ ಅಪದ್ಧ, ಅಸಹ್ಯ ಎಂದು ಹೇಳುವ ಮೂಲಕ ಪ್ರತಾಪ್ ಸಿಂಹ ಮೈಸೂರು ಮಹಾರಾಜರಿಗೆ ಅವಮಾನ ಮಾಡುತ್ತಿದ್ದಾರೆ ಎಂದೂ ಗಿರಿಧರ್ ಕಿಡಿಕಾರಿದ್ದಾರೆ.

ಸಣ್ಣವರಿದ್ದಾಗ ನಮ್ಮ ತಂದೆ ತಾಯಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಮಹಿಷನ ಮುಂದೆ ನಿಲ್ಲಿಸಿ ಪೂಜೆ ಮಾಡಿ ಮಹಿಷನ ಕಾಲಿನ ಕೆಳಗಡೆ ನುಗ್ಗಿಸುತ್ತಿದ್ದರು. ಮಹಿಷನ ರೀತಿ ಇರಲಿ ಎಂಬುದು ಅದರ ಉದ್ದೇಶವಾಗಿತ್ತು ಎಂದೂ ಬಿಜೆಪಿ ಮುಖಂಡ ಗಿರಿಧರ್ ಹೇಳಿದ್ದಾರೆ. ಈ ಹಿಂದೆ ಪ್ರತಾಪ್ ಸಿಂಹ ಮುಸ್ಲಿಮರ ವಿರುದ್ಧ ಮಾತನಾಡಿ ಪಕ್ಷಕ್ಕೆ ಕೆಟ್ಟ ಹೆಸರು ತಂದಿದ್ದರು. ಈಗ ದಲಿತರ ವಿರುದ್ಧ ಹೇಳಿಕೆಯನ್ನು ನೀಡಿ ಪಕ್ಷಕ್ಕೆ ಮತ್ತಷ್ಟು ಹಿನ್ನಡೆ ಉಂಟು ಮಾಡುತ್ತಿದ್ದಾರೆ ಎಂಬ ಗಿರಿಧರ್ ಹೇಳಿಕೆಯಂತೂ ಬಿಜೆಪಿ ನಾಯಕರಲ್ಲಿ ಒಂದು ಬಗೆಯ ದಿಗಿಲಿಗೇ ಕಾರಣವಾಗಿದೆ.

ತುರ್ತು ಪತ್ರಿಕಾ ಗೋಷ್ಠಿ ನಡೆಸಿದ ಮೈಸೂರು ನಗರ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಿ.ಈಶ್ವರ್‌, ಸಂಸದ ಪ್ರತಾಪ ಸಿಂಹ ಒಬ್ಬ ದಲಿತ ವಿರೋಧಿ. ಆ ಕಾರಣಕ್ಕಾಗಿಯೇ ಮಹಿಷ ದಸರಾ ಆಚರಣೆ ಮಾಡುವವರನ್ನು ತುಳಿದು ಹಾಕುತ್ತೇನೆ, ಹೊಸಕಿ ಹಾಕುತ್ತೇನೆ ಎಂದು ಹೇಳುತ್ತಿದ್ದಾರೆ. ಮೈಸೂರು ಪ್ರಾಂತದ ದಲಿತರ ರಕ್ಷಣಾ ಕೇಂದ್ರವಾದ ನಮ್ಮ ಆಶೋಕಪುರಂ ಬಗ್ಗೆ ಮತ್ತು ದಲಿತ ಮುಖಂಡರ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಇವರಿಗೆ ಮೈಸೂರಿನ ಮತ್ತು ಅಶೋಕಪುರಂನ ಇತಿಹಾಸ ಏನು ಗೊತ್ತು?. ನಾವು ಕಳೆದ 30 ವರ್ಷಗಳಿಂದ ಮೈಸೂರು ನಗರದಲ್ಲಿ ಬಿಜೆಪಿ ಕಟ್ಟಲು ದುಡಿದಿದ್ದೇವೆ. ಈತ ಚುನಾವಣೆಗಾಗಿ ಕಳೆದ 9 ವರ್ಷಗಳಲ್ಲಿ ಮೈಸೂರಿಗೆ ಬಂದಿರುವುದು. ಈತನಿಗೆ ಮೈಸೂರಿನ ಬಗ್ಗೆ, ಮಹಿಷನ ಇತಿಹಾಸದ ಬಗ್ಗೆ ಏನು ಗೊತ್ತು ಎಂದು ಪ್ರಶ್ನಿಸಿದ್ದಾರೆ.

ಸಂಸದ ಪ್ರತಾಪ ಸಿಂಹನ ಹೇಳಿಕೆಯಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಈಗ ಮತ್ತಷ್ಟು ಹಿನ್ನಡೆಯಾಗಲಿದೆ. ಹಾಗಾಗಿ ಈತನ ಹೇಳಿಕೆ, ನಡವಳಿಕೆಗಳ ವಿರುದ್ಧ ಬಿಜೆಪಿ ವರಿಷ್ಠರಿಗೆ ದೂರು ನೀಡಲಿದ್ದೇವೆ ಎಂದು ಹೇಳಿದ್ದಾರೆ. ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸುವ ಮುನ್ನ ಬಿಜೆಪಿ ಕಾರ್ಯಕರ್ತರ ಸಭೆಯನ್ನೇ ಮಾಡಿಲ್ಲ, ನಾವೆಲ್ಲ ತಳಮಟ್ಟದಲ್ಲಿ ಪಕ್ಷ ಕಟ್ಟಿದ್ದೇವೆ. ನಮ್ಮ ಜೊತೆ ಯಾವುದೇ ಸಭೆ ಮಾಡದೆ ಏಕಾಏಕಿ ನಿರ್ಧಾರ ಮಾಡಿ ಮಹಿಷ ದಸರಾಗೆ ಅಡ್ಡಿ ಪಡಿಸಿದ್ದಾರೆ. ಇವರ ನಡೆಯ ವಿರುದ್ಧ ಮತ್ತು ಇವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ವರಿಷ್ಠರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಈ ಪ್ರಕರಣ ಹೈಕೋರ್ಟ್ ಗೆ ಹೋಗಬಹುದು. ಏನಾಗುತ್ತೋ ನೋಡೋಣ. ಪೂರ್ವ ನಿಗದಿಯಂತೆ ಮಹಿಷ ದಸರಾ ಆಚರಿಸುತ್ತೇವೆ. ಪೊಲೀಸ್‌ ಇಲಾಖೆ ಏಕಮುಖ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ನಾವು ಈಗಾಗಲೇ ಸುಮಾರು 10 ಜಿಲ್ಲೆಗಳಿಂದ ಜನರು ಬರುವಂತೆ ಆಹ್ವಾನ ನೀಡಿದ್ದೇವೆ. ಅವರೆಲ್ಲರೂ ಬರುತ್ತಾರೆ ಎಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಹೇಳಿದ್ದಾರೆ.

ಮಹಿಷ ದಸರಾ ವಿರೋಧಿಸುವ ಮೂಲಕ ಮಾಡಹೊರಟಿದ್ದ ರಾಜಕಾರಣ ಈಗ ಈ ಬಗೆಯಲ್ಲಿ ಬಿಜೆಪಿಗೇ ತಿರುಗುಬಾಣವಾಗಿ ನಾಟಿದೆ. ಸಂಸದ ಪ್ರತಾಪ್ ಸಿಂಹ ಎರಡು ಬಾರಿ ಸಂಸದರಾದರೂ ಪಕ್ಷದಲ್ಲಿ ಅಷ್ಟಾಗಿ ಯಾರೊಂದಿಗೂ ವಿಶ್ವಾಸ ಇಟ್ಟುಕೊಂಡಿಲ್ಲ ಎಂಬ ಆರೋಪ ಅವರ ಪಕ್ಷದ ವಲಯಗಳಲ್ಲೇ ಈ ಹಿಂದಿನಿಂದಲೂ ಕೇಳಿಬರುತ್ತಿತ್ತು. ಪ್ರತಾಪ್ ಸಿಂಹ ಅಭಿವೃದ್ಧಿಗಿಂತ ವಿವಾದಗಳನ್ನು ಹುಟ್ಟು ಹಾಕಿ ಚಾಲ್ತಿಯಲ್ಲಿರುವ ಸಂಸದ , ಹಾಗಾಗಿ ಅವರನ್ನು ಇನ್ನೂ ಇಟ್ಟುಕೊಂಡಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯಗಳಲ್ಲೇ ಕೇಳಿ ಬರುತ್ತಿತ್ತು.

2019 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದ ಜವಾಬ್ದಾರಿ ವಹಿಸಿಕೊಂಡ ಪ್ರತಾಪ್ ಸಿಂಹ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಸೋಲಿಗೆ ನೇರ ಕಾರಣರಾಗಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಮೈಸೂರಿನ ಕಸ ಸಂಗ್ರಹ ವಿಚಾರದ ಸೋಯೇಜ್ ಫಾರಂ ವಿಚಾರವಾಗಿ ಅಂದಿನ ಶಾಸಕ ಎಸ್.ಎ.ರಾಮದಾಸ್ ಅವರೊಂದಿಗೆ ವಿರೋಧ ಕಟ್ಟಿಕೊಂಡಿದ್ದರು. ಇದರ ಜೊತೆಗೆ ಶಾಸಕ ರಾಮದಾಸ್ ಅವರ ಕ್ಷೇತ್ರದಲ್ಲಿ ಶಾಸಕರ ಅನುದಾನದಲ್ಲಿ ಬಸ್ ನಿಲ್ದಾಣ ಕಟ್ಟಿಸಿದ್ದರೆ ಅದು ಗುಂಬಜ್ ಮಾದರಿಯಲ್ಲಿದೆ. ಅದನ್ನು ಹೊಡೆದು ಹಾಕಬೇಕು ಎಂದು ಶಾಸಕ ರಾಮದಾಸ್ ವಿರುದ್ಧ ತಿರುಗಿ ಬಿದ್ದು ದೊಡ್ಡ ರಂಪಾಟವೇ ನಡೆದಿತ್ತು.

ಇನ್ನು ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿಚಾರವಾಗಿ ಅಂದಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ರಾಗಿದ್ದ ಎಲ್.ನಾಗೇಂದ್ರ ಅವರೊಂದಿಗೂ ದೊಡ್ಡ ವಾಗ್ವಾದ ನಡೆದಿತ್ತು. ಇನ್ನು ನಂಜನಗೂಡು ಬಿಜೆಪಿ ಶಾಸಕರಾಗಿದ್ದ ಹರ್ಷವರ್ಧನ್ ಅವರೊಂದಿಗೂ ಕೊರೊನ ಪ್ರಾರಂಭದಲ್ಲಿ ನಂಜನಗೂಡಿನ ಜ್ಯುಬಿಲಿಯಂಟ್ ಫಾಕ್ಟರಿ ವಿಚಾರವಾಗಿ ಬಹಿರಂಗವಾಗಿ ಪರಸ್ಪರ ಕಚ್ಚಾಟವಾಗಿತ್ತು.

ಈ ಬಾರಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ವಿ.ಸೋಮಣ್ಣ ಅವರ ಪರ ಪ್ರಚಾರ ಮಾಡಲು ಇವರು ಹೋದ ಹಲವು ಗ್ರಾಮಗಳಲ್ಲಿ ದಲಿತರು ಸಂಸದ ಪ್ರತಾಪ್ ಸಿಂಹ ಅವರನ್ನು ಗ್ರಾಮದೊಳಗೆ ಬಿಟ್ಟುಕೊಳ್ಳದೆ ಗಲಾಟೆ ಮಾಡಿ ಕಳುಹಿಸಿದ್ದರು. ವರುಣಾ ಕ್ಷೇತ್ರದಲ್ಲೂ ರಸ್ತೆಯಲ್ಲಿ ಹೋಗುವವರ ನಡುವೆ ಬೈಕ್ ಡಿಕ್ಕಿಯಾಗಿದ್ದರೆ ಸಿದ್ಧರಾಮಯ್ಯ ಅಣ್ಣನ ಮಗ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಿಕೆ ಕೊಟ್ಟು ದೊಡ್ಡ ವಿವಾದವನ್ನು ಸೃಷ್ಟಿ ಮಾಡಲು ಹೊರಟಿದ್ದರು. ಪೊಲೀಸರ ಸಮಯ ಪ್ರಜ್ಞೆಯಿಂದ ಅದು ತಪ್ಪಿತ್ತು.

ಇದಾದ ನಂತರ ವಿ.ಸೋಮಣ್ಣ, ಪ್ರತಾಪ್ ಸಿಂಹ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗದೆ ದೂರ ಇಟ್ಟಿದ್ದರು. ಸೋಲಿನ ನಂತರ ಪ್ರತಾಪ್ ಸಿಂಹ ಅವರನ್ನು ವಿ.ಸೋಮಣ್ಣ ಹತ್ತಿರಕ್ಕೆ ಸೇರಿಸುತ್ತಿಲ್ಲ ಎಂಬ ಮಾತುಗಳು ಪಕ್ಷದ ವಲಯಗಳಲ್ಲೇ ಕೇಳಿ ಬರುತ್ತಿದೆ. ಯಾವುದೇ ವಿಚಾರವಾದರೂ ಸಂಸದ ಪ್ರತಾಪ್ ಸಿಂಹ ಮಧ್ಯ ಬಂದು ನನ್ನಿಂದಲೇ ಬಿಜೆಪಿ ಎಂಬಂತೆ ನಡೆದುಕೊಳ್ಳುತ್ತಿರುವುದು ಮೈಸೂರಿನಲ್ಲಿ ಪಕ್ಷದ ಅನೇಕ ನಾಯಕರು ಕಾರ್ಯಕರ್ತರಿಗೆ ಇಷ್ಟವಿಲ್ಲ. ಈತನನ್ನು ಹೀಗೆ ಬಿಟ್ಟರೆ ಪಕ್ಷವನ್ನು ಮುಗಿಸಿ ಬಿಡುತ್ತೇನೆ. ಹಾಗಾಗಿ ಈತನನ್ನು ಈಗಲೇ ಪಕ್ಷದಿಂದ ದೂರ ಇಡಬೇಕು ಎಂದು ಬಯಸಿರುವ ಮುಖಂಡರುಗಳು ಬಿಜೆಪಿ ಟಿಕೆಟ್ ನೀಡದಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರುವ ಹಿನ್ನಲೆಯಲ್ಲಿ ಮೈಸೂರನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಬಿಜೆಪಿಯ ಪ್ರಮುಖ ನಾಯಕರು ಮುಂದಾಗಿದ್ದಾರೆ ಎಂಬ ಸುದ್ದಿಯೂ ಇದೆ. ಬಿಜೆಪಿಯಿಂದಲೇ ತನ್ನ ರಾಜಕೀಯ ಜೀವನ ಕಂಡುಕೊಂಡು ಜೆಡಿಎಸ್ ನಿಂದ ಮೂರು ಬಾರಿ ಕೆ.ಆರ್.ನಗರ ಕ್ಷೇತ್ರದ ಶಾಸಕರಾಗಿದ್ದ ಸಾ.ರಾ.ಮಹೇಶ್ ಅವರಿಗೆ ಮೈಸೂರು-ಕೊಡಗು ಕ್ಷೇತ್ರವನ್ನು ಬಿಟ್ಟುಕೊಟ್ಟರೆ ನಮ್ಮ ಪಕ್ಷದಲ್ಲಿದ್ದ ಹಳೆಯ ಸ್ನೇಹಿತನಿಗೆ ಸಹಾಯ ಮಾಡಿದ ಹಾಗೂ ಆಗುತ್ತದೆ. ಇತ್ತ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರಿನಿಂದ ಗೇಟ್ ಪಾಸ್ ನೀಡಿದ ಹಾಗೂ ಆಗುತ್ತದೆ ಎಂಬ ಚರ್ಚೆಗಳು ಪಕ್ಷದ ಒಳಗೆ ನಡೆಯುತ್ತಿರುವುದೇನು ಗುಟ್ಟಾಗಿ ಉಳಿದಿಲ್ಲ.

ಮೊನ್ನೆ ಜೆಡಿಎಸ್ ಬಿಜೆಪಿ ಮೈತ್ರಿ ಘೋಷಣೆ ಆದ ಬೆನ್ನಿಗೇ ಪ್ರತಾಪ್ ಸಿಂಹ ದೇವೇಗೌಡರ ಮನೆಗೆ ಹೋಗಿ ಅವರ ಕಾಲಿಗೆರಗಿದ್ದು ಚರ್ಚೆಯಾಗಿತ್ತು.

ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪುವ , ಟಿಕೆಟ್ ಸಿಕ್ಕಿದರೂ ಪಕ್ಷದೊಳಗೇ ಬಂಡಾಯ ಎದುರಿಸುವ ಭಯ ಆವರಿಸಿದ ಹಾಗೆ ಕಾಣುತ್ತಿದೆ. ಅದಕ್ಕಾಗಿ ಜೋರಾಗಿಯೇ ಹಿಂದುತ್ವದ ಹೆಸರಲ್ಲಿ ಗಲಾಟೆ ಎಬ್ಬಿಸಿ ಮತ್ತೆ ಕಾರ್ಯಕರ್ತರನ್ನು ಒಲಿಸಿಕೊಳ್ಳಲು, ವರಿಷ್ಠರ ಗಮನ ಸೆಳೆಯಲು ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಮಹಿಷ ದಸರಾ ಹೆಚ್ಚು ಸುದ್ದಿಯಲ್ಲಿದೆ. ಆದರೆ ವಿವಾದ ಶುರುವಾದದ್ದು ಬಿಜೆಪಿ ಸರ್ಕಾರ ಬಂದ ಬಳಿಕ. ಮಹಿಷನ ಹೆಸರಿನಿಂದಲೇ ಮೈಸೂರು ಎಂಬ ಹೆಸರು ಬಂದಿರುವಾಗ, ಮಹಿಷ ದಸರಾ ವಿರೋಧಿಸುವವರ ದ್ವಂದ್ವ ಎಂಥದು?. ಮಹಿಷನಿಂದಾಗಿ ಮೈಸೂರು ಎನ್ನುವ ಹೆಸರು ಇದುವರೆಗೂ ನಿಂತಿದೆ ಎನ್ನುವುದನ್ನು ಇತಿಹಾಸದ ಹಲವು ಪುಟಗಳು ಹೇಳುತ್ತಿವೆ ಎನ್ನುತ್ತಾರೆ ಪರಿಣಿತರು.

ಕೇರಳ ರಾಜ್ಯದಲ್ಲಿ ಬಲಿಚಕ್ರವರ್ತಿಯನ್ನು ನೆನಪಿಸುವ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವಂತೆ ಈ ಭಾಗದ ಮೂಲನಿವಾಸಿಗಳು ಮಹಿಷನನ್ನು ಸ್ಮರಿಸುತ್ತಾರೆ. ಹಾಗೆ ಆಚರಿಸಲ್ಪಡುವ ಹಬ್ಬವೇ ದಸರಾ. ಆದರೆ ವೈದಿಕರು ಕಟ್ಟಿದ ಸುಳ್ಳು ಕಥೆಗಳಿಂದಾಗಿ ಈಗಿನ ದಸರಾ ಆಚರಣೆಯಲ್ಲಿ ಬಂದಿದೆ ಎಂಬುದು ಮಹಿಷ ದಸರಾ ಪರವಿರುವವರ ವಾದ.

ಪ್ರಜಾಪ್ರಭುತ್ವ ವ್ಯವಸ್ಥೆ ಬಂದಮೇಲೂ ವೈದಿಕ ಮನಃಸ್ಥಿತಿ ಕಾರಣದಿಂದಾಗಿ ಈಗ ಮಹಿಷ ದಸರಾ ಆಚರಿಸಲು ವಿರೋಧ ವ್ಯಕ್ತವಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಅಪ್ರತಿಮ ದೊರೆಯಾದ, ನಾಡಿನ ಹೆಮ್ಮೆಯ ಪ್ರತಿನಿಧಿಯಾದ, ಮೂಲನಿವಾಸಿ ರಾಜನಾದ ಮಹಿಷನನ್ನು ಖಳ ಎಂಬಂತೆ ಬಿಂಬಿಸಲಾಗಿದೆ. ಆದರೆ, ಇತಿಹಾಸ ಪುನರ್ ವ್ಯಾಖ್ಯಾನಕ್ಕೆ ಪ್ರಗತಿಪರ ಮತ್ತು ದಮನಿತ ಸಮುದಾಯಗಳು ಮುಂದಾಗಿರುವುದೇ ಈಗ ಮಹಿಷ ದಸರಾ ಆಚರಣೆಗೆ ಹಿನ್ನೆಲೆ ಎಂದು ಪರಿಣಿತರು ಹೇಳುತ್ತಾರೆ. ಹೀಗೆ ಮಹಿಷ ದಸರಾ ಅವೈದಿಕ ಪರಂಪರೆಯ ಸಮುದಾಯಗಳು ಮತ್ತು ವೈದಿಕ ಮನಃಸ್ಥಿತಿಯ ನಡುವಿನ ಸಂಘರ್ಷವಾಗಿ ಕಾಣಿಸಿಕೊಂಡಿದೆ. ಮತ್ತಿದಕ್ಕೆ ರಾಜಕೀಯವಾಗಿ ಬೇರೆಯದೇ ಆಯಾಮ ಬರತೊಡಗಿದೆ. ಹಾಗಾಗಿಯೇ ಬಿಜೆಪಿಗೆ ಈಗ ಇದು ದಿಗಿಲುಗೊಳ್ಳುವ ವಿಚಾರವಾದರೂ ಅಚ್ಚರಿಯಿಲ್ಲ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ನೇರಳೆ ಸತೀಶ್ ಕುಮಾರ್

contributor

Similar News