ಆಲೂರು ಜನರಿಗೆ ಚಲಿಸುವ ರೈಲು ನೋಡುವ ಭಾಗ್ಯ ಮಾತ್ರ...
ಹಾಸನ ಜಿಲ್ಲೆಯ ಆಲೂರು ಜನರಿಗೆ ಚಲಿಸುವ ರೈಲು ನೋಡುವ ಭಾಗ್ಯವಿದೆ, ರೈಲ್ವೆ ನಿಲ್ದಾಣ ವಿದ್ದರೂ ರೈಲು ನಿಲುಗಡೆಯಾಗದ ಕಾರಣ ಇಲ್ಲಿಂದ ರೈಲು ಪ್ರಯಾಣಿಸುವ ಭಾಗ್ಯಮಾತ್ರ ಇಲ್ಲದಂತಾಗಿದೆ.
ರೈಲು ನಿಲ್ದಾಣ ಪಟ್ಟಣದಿಂದ 1 ಕಿ.ಮೀ. ದೂರದ ಹಂತನಮನೆ ಗ್ರಾಮದ ಬಳಿ ಇದೆ. ನಿಲ್ದಾಣಕ್ಕೆ ಹೋಗಲು ಉತ್ತಮ ರಸ್ತೆ ಇದೆ.
ಕಡಿಮೆ ಖರ್ಚಿನಲ್ಲಿ ಮಂಗಳೂರು, ಬೆಂಗಳೂರು ಸೇರಿದಂತೆ ಅನೇಕ ಸ್ಥಳಗಳಿಗೆ ರೈಲು ಪ್ರಯಾಣ ಹೆಚ್ಚು ಅನುಕೂಲವಾಗಿದೆ. ಈ ಅವಕಾಶ ಈ ಭಾಗದ ಜನರಿಗೆ ಇನ್ನೂ ದೊರೆತಿಲ್ಲ.
1976ರಿಂದ 1996ರ ವರಗೆ ಚಲಿಸುತ್ತಿದ್ದ ಮೀಟರ್ ಗೇಜ್ ರೈಲು ಆಲೂರಿನಲ್ಲಿ ನಿಲ್ಲುತ್ತಿತ್ತು. ನಂತರದಲ್ಲಿ ಬ್ರಾಡ್‌ಗೇಜ್ ಆದನಂತರ ರೈಲು ನಿಲುಗಡೆ ರದ್ದಾಯಿತು.
ಆಲೂರು ತಾಲೂಕು ಕೇಂದ್ರವಾಗಿದ್ದು, ಮಂಗಳೂರು-ಹಾಸನಕ್ಕೆ ತೆರಳವ ರೈಲ್ವೆ ನಿಲ್ದಾಣವಿದ್ದರೂ ರೈಲು ನಿಲುಗಡೆಯಾಗದೆ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ.
ಆಲೂರು ತಾಲೂಕು 260 ಗ್ರಾಮಗಳನ್ನು ಹೊಂದಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇಲ್ಲಿಯ ಕೃಷಿಕರು, ಶುಂಠಿ, ಜೋಳ, ಭತ್ತ, ಕಾಫಿ, ಏಲಕ್ಕಿ, ಮೆಣಸು, ಆಲೂಗಡ್ಡೆ, ತೆಂಗು, ಅಡಕೆ ಸೇರಿದಂತೆ ಹಲವು ತರಕಾರಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೆ.
ಬೆಳೆದ ಬೆಳೆಯನ್ನು ಬೆಂಗಳೂರು-ಮಂಗಳೂರು ಅಥವಾ ಬೇರೆ ಪ್ರದೇಶಕ್ಕೆ ಸಾಗಿಸಲು ಹಾಗೂ ಪ್ರಯಾಣಿಸಲು ಇಲ್ಲಿಂದ ಹಾಸನಕ್ಕೆ ಬೇರೆವಾಹನದಲ್ಲಿ 15 ಕಿ ಮೀ ದೂರದ ಸುಮಾರು 25 ನಿಮಿಷಗಳ ಪ್ರಯಾಣಮಾಡಿ ಹಾಸನ ರೈಲು ನಿಲ್ದಾಣಕ್ಕೆ ತೆರಳಿ ಅಲ್ಲಿಂದ ರೈಲು ಹಿಡಿಯಬೇಕು.
ಇದು ಅಧಿಕ ಖರ್ಜು ಆರ್ಥಿಕ ಹೊರೆಯಾಗಿದೆ.
ವ್ಯಾಪಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಹೊರ ರಾಜ್ಯ, ಜಿಲ್ಲೆಯಿಂದ ರೈಲು ಮೂಲಕ ಹಾಸನ ರೈಲು ನಿಲ್ದಾಣಕ್ಕೆ ನಡುರಾತ್ರಿ ಬಂದರೆ ರೈಲು ನಿಲ್ದಾಣದಲ್ಲೆ ಕಾಲ ಕಳೆಯಬೇಕಾಗಿದೆ.
ಆಲೂರಿನಲ್ಲಿ ರೈಲು ಮಾರ್ಗವಿದೆ. ನಿಲ್ದಾಣವು ಇದೆ. ನಿಲುಗಡೆಗೆ ಅವಕಾಶ ನೀಡಿದರೆ ಜನರ ಸಮಸ್ಯೆ ಬಗೆ ಹರಿಯುತ್ತದೆ. ಆದರೆ ಈ ಸಮಸ್ಯೆ ಬಗೆಹರಿಸಲು ರೈಲು ಇಲಾಖೆ ಮುಂದಾಗುತ್ತಿಲ್ಲ.
ಈ ಕ್ಷೇತ್ರದ ಬಿಜೆಪಿ ಶಾಸಕ ಸಿಮೆಂಟ್ ಮಂಜು ಹಾಗೂ ಜೆಡಿಎಸ್ ಏಕೈಕ ಸಂಸದ ಪ್ರಜ್ವಲ್ ರೇವಣ್ಣ ಕೇಂದ್ರ ರೈಲು ಮಂತ್ರಿ ಜೊತೆಯಲ್ಲಿ ಗಂಭೀರವಾಗಿ ಮಾತನಾಡಿದರೆ ಸಮಸ್ಯೆ ಬಗೆಹರಿಸಬಹುದಾಗಿದೆ.
ಅನೇಕ ಹೋರಾಟಗಾರರು ಸುಮಾರು 25 ವರ್ಷಗಳಿಂದ ರೈಲು ನಿಲುಗಡೆಗೆ ಒತ್ತಾಯಿಸಿದ್ದಾರೆ.
ತಾಲೂಕು ಕೇಂದ್ರಕ್ಕೆ ರೈಲು ನಿಲುಗಡೆಗೆ ಅವಕಾಶ ನೀಡದ, ಇದ್ದ ಸೌಲಭ್ಯ ಕಿತ್ತುಕೊಳ್ಳುವ ರೈಲ್ವೆ ಇಲಾಖೆಯ ಧರ್ಪ ಸರಿಯಾದ ಕ್ರಮವಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿಯ ಜನ ಚಲಿಸುವ ರೈಲು ನೊಡುವ ಭಾಗ್ಯಕ್ಕೆ ಸೀಮಿತವಾಗಿದ್ದಾರೆ.