ಉತ್ತರ ಭಾರತದ ಜಾತಿ ವಿರೋಧಿ ಚಳವಳಿಯ ನಾಯಕ ಪೆರಿಯಾರ್‌ ಲಲೈ ಬೌಧ್

ಜಾತಿ ತಾರತಮ್ಯ, ಧಾರ್ಮಿಕ ಅಸಹಿಷ್ಣುತೆ, ಸಾಮಾಜಿಕ ಅನ್ಯಾಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಂಥ ಬಿಕ್ಕಟ್ಟುಗಳೊಡನೆ ಸೆಣಸಾಡುತ್ತಿರುವ ಈ ದಿನಗಳಲ್ಲಿ ಪೆರಿಯಾರ್ ಲಲೈ ಅವರ ಜೀವನ ಮತ್ತು ಕೆಲಸ ಅತ್ಯಂತ ಪ್ರಸಕ್ತ. ‘ನಾನೊಬ್ಬ ಮನುಷ್ಯ. ನಾನು ಬೌದ್ಧ. ನನಗೆ ಜಾತಿ ಇಲ್ಲ, ನನಗೆ ಧರ್ಮವಿಲ್ಲ. ನನಗೆ ಒಂದೇ ಧರ್ಮವಿದೆ ಮತ್ತದು ಮಾನವೀಯತೆ’ ಎಂಬುದು ಅವರ ನಿಲುವಾಗಿತ್ತು.

Update: 2023-10-09 07:49 GMT

ಪೆರಿಯಾರ್ ಲಲೈ ಬೌಧ್ ಒಬ್ಬ ಪೊಲೀಸ್, ನಾಟಕಕಾರ, ಅನುವಾದಕ, ಪ್ರಕಾಶಕ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಉತ್ತರ ಭಾರತದಲ್ಲಿನ ದಮನಿತರ ನಡುವೆ ಅಂಬೇಡ್ಕರ್, ಪೆರಿಯಾರ್ ಮತ್ತು ಬೌದ್ಧಧರ್ಮದ ಸಂದೇಶವನ್ನು ಹರಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಜಾತಿ ವಿರೋಧಿ ಹೋರಾಟಗಾರರಾಗಿದ್ದರು.

ಬೌಧ್ 1911ರ ಸೆಪ್ಟಂಬರ್ 1ರಂದು ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಕಥಾರಾ ಗ್ರಾಮದಲ್ಲಿ ಜನಿಸಿದರು. ಅವರು ಇತರ ಹಿಂದುಳಿದ ವರ್ಗವೆಂದು ಪರಿಗಣಿತವಾಗಿರುವ ಯಾದವ ಸಮುದಾಯಕ್ಕೆ ಸೇರಿದವರು. ತನ್ನ ಹಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪಡೆದ ಅವರು, ನಂತರ 1933ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸಶಸ್ತ್ರ ಪೊಲೀಸ್ ಪಡೆಗೆ ಕಾನ್‌ಸ್ಟ್ಟೇಬಲ್ ಆಗಿ ಸೇರಿದರು. ಆದರೆ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿದ್ದಕ್ಕಾಗಿ ಎರಡು ವರ್ಷಗಳ ನಂತರ ಅವರನ್ನು ವಜಾಗೊಳಿಸಲಾಯಿತು. ಅದರ ವಿರುದ್ಧ ಮೇಲ್ಮನವಿ ಸಲ್ಲಿಸಿದ ಬಳಿಕ ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು.

ಉನ್ನತ ಅಧಿಕಾರಿಗಳಿಂದ ಶೋಷಣೆ ಮತ್ತು ತಾರತಮ್ಯವನ್ನು ಎದುರಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಸಮಸ್ಯೆಗಳ ಬಗ್ಗೆ ದನಿಯೆತ್ತಲು ಅವರು 1946ರಲ್ಲಿ ಗ್ವಾಲಿಯರ್‌ನಲ್ಲಿ ಪೊಲೀಸ್ ಮತ್ತು ಸೇನಾ ಸಿಬ್ಬಂದಿಯ ಸಂಘಟನೆಯನ್ನು ಕಟ್ಟಿದರು. ಅವರು 1946ರಲ್ಲಿ ಬರೆದ ಸಿಪಾಹಿ ಕಿ ತಬಾಹಿ (‘ದಿ ಡಿಸ್ಟ್ರಕ್ಷನ್ ಆಫ್ ಎ ಸೋಲ್ಜರ್’) ಎಂಬ ಪುಸ್ತಕ ಬ್ರಿಟಿಷ್ ಪೊಲೀಸ್ ಮತ್ತು ಸೈನ್ಯದಲ್ಲಿನ ಭ್ರಷ್ಟಾಚಾರ ಮತ್ತು ದಬ್ಬಾಳಿಕೆಯನ್ನು ಬಹಿರಂಗಪಡಿಸಿತು. ಪುಸ್ತಕವನ್ನು ಪ್ರಕಟಿಸಲಿಲ್ಲ. ಆದರೆ ಅದನ್ನು ಟೈಪ್ ಮಾಡಿ ಸೈನಿಕರಿಗೆ ವಿತರಿಸಲಾಗಿತ್ತು. ಅದು ಸೇನೆಯ ಮಹಾ ನಿರೀಕ್ಷಕರಿಗೆ ತಿಳಿದಾಗ ಮುಟ್ಟುಗೋಲು ಹಾಕಿಕೊಂಡಿದ್ದರು.

ಅದೇ ವರ್ಷ ಅವರು ಗ್ವಾಲಿಯರ್ ಪೊಲೀಸ್ ಮತ್ತು ಸೈನ್ಯದ ಸಿಬ್ಬಂದಿಗೆ ಉತ್ತಮ ವೇತನ ಮತ್ತು ಉತ್ತಮ ಕೆಲಸದ ವಾತಾವರಣಕ್ಕೆ ಒತ್ತಾಯಿಸಿ ಮುಷ್ಕರ ಆಯೋಜಿಸಿದರು. ಅವರನ್ನು ಮಾರ್ಚ್ 29, 1947ರಂದು ಬಂಧಿಸಿ, ದೇಶದ್ರೋಹ ಮತ್ತು ಪಿತೂರಿಯ ಆರೋಪ ಹೊರಿಸಲಾಯಿತು. ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. ಭಾರತ ಸ್ವತಂತ್ರಗೊಂಡು, ಗ್ವಾಲಿಯರ್ ರಾಜ್ಯವನ್ನು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಳಿಸುವವರೆಗೂ ಒಂಭತ್ತು ತಿಂಗಳು ಜೈಲಿನಲ್ಲಿರಬೇಕಾಯಿತು. ಜನವರಿ 12, 1948ರಂದು ಬಿಡುಗಡೆಯಾದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳ ಓದಿನಿಂದ ಪೆರಿಯಾರ್ ಲಲೈ ಜೀವನವೇ ಬದಲಾಯಿತು. ಜಾತಿ, ಧರ್ಮ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಕುರಿತ ಅಂಬೇಡ್ಕರ್ ಅವರ ವಿಶ್ಲೇಷಣೆಯಿಂದ ತೀವ್ರವಾಗಿ ಪ್ರಭಾವಿತರಾದರು. ಅಂಬೇಡ್ಕರರ ಕಟ್ಟಾ ಅನುಯಾಯಿಯಾದರು ಮತ್ತು ಅವರ ವಿಚಾರಗಳನ್ನು ತಮ್ಮ ಪೊಲೀಸ್ ಸಹೋದ್ಯೋಗಿಗಳು ಮತ್ತು ಗ್ರಾಮಸ್ಥರ ಮಧ್ಯೆ ಪ್ರಚಾರ ಮಾಡಲು ಪ್ರಾರಂಭಿಸಿದರು. 1942ರಲ್ಲಿ ಅಂಬೇಡ್ಕರ್ ಸ್ಥಾಪಿಸಿದ ರಾಜಕೀಯ ಪಕ್ಷವಾದ ಪರಿಶಿಷ್ಟ ಜಾತಿಗಳ ಫೆಡರೇಶನ್ (ಎಸ್‌ಸಿಎಫ್) ಸೇರಿದರು.

ಪೆರಿಯಾರ್ ಲಲೈ ಬೌಧ್ ದ್ರಾವಿಡ ಚಳವಳಿಯ ನಾಯಕ ಮತ್ತು ದಕ್ಷಿಣ ಭಾರತದಲ್ಲಿ ಸ್ವಾಭಿಮಾನ ಚಳವಳಿಯ ಸಂಸ್ಥಾಪಕರಾಗಿದ್ದ ಪೆರಿಯಾರ್ ಇ.ವಿ. ರಾಮಸಾಮಿ ಅವರ ಬಗ್ಗೆಯೂ ತಿಳಿದರು. ಪೆರಿಯಾರ್ ವೈಚಾರಿಕತೆ, ನಾಸ್ತಿಕತೆ, ಸ್ತ್ರೀವಾದ ಮತ್ತು ಸಾಮಾಜಿಕ ನ್ಯಾಯದ ಉದ್ದೇಶಗಳಿಂದ ಪ್ರಭಾವಿತರಾದರು. ಮಾತ್ರವಲ್ಲ, ಉತ್ತರ ಭಾರತದಲ್ಲಿ ಪೆರಿಯಾರ್ ವಿಚಾರಗಳನ್ನು ಹರಡುವುದಕ್ಕಾಗಿ ಪೆರಿಯಾರ್ ಅವರ ಕೃತಿಗಳನ್ನು ತಮಿಳಿನಿಂದ ಹಿಂದಿಗೆ ಭಾಷಾಂತರಿಸಲು ಮುಂದಾದರು. 1959ರಲ್ಲಿ ಪೆರಿಯಾರ್ ಅವರ ‘ದಿ ಕೀ ಟು ಅಂಡರ್‌ಸ್ಟ್ಯಾಂಡಿಂಗ್ ಟ್ರೂ ರಾಮಾಯಣ’ ಕೃತಿಯನ್ನು ಹಿಂದಿಗೆ ಅನುವಾದಿಸಿದರು. ಈ ಪುಸ್ತಕ ರಾಮಾಯಣದಲ್ಲಿನ ವಿರೂಪಗಳು ಮತ್ತು ಕಟ್ಟುಕಥೆಗಳನ್ನು ಬಹಿರಂಗಪಡಿಸಿತು.

ಅಂಬೇಡ್ಕರ್ ಮತ್ತು ಪೆರಿಯಾರ್ ಇಬ್ಬರ ವಿಚಾರಗಳೂ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಎಲ್ಲರನ್ನೂ ಘನತೆಯಿಂದ ಕಾಣುವ ತತ್ವಗಳನ್ನು ಆಧರಿಸಿವೆ. ಇಬ್ಬರೂ ಜಾತಿ ವ್ಯವಸ್ಥೆ ಮತ್ತು ಸಂಬಂಧಿತ ಆಚರಣೆಗಳಾದ ಅಸ್ಪಶ್ಯತೆಯಂಥ ಎಲ್ಲವನ್ನೂ ವಿರೋಧಿಸಿದರು ಮತ್ತು ಅವನ್ನು ಸಮರ್ಥಿಸುವ ಎಲ್ಲವನ್ನೂ ತಿರಸ್ಕರಿಸಿದರು. ಮಾನವ ಹಕ್ಕುಗಳು ಮತ್ತು ಮೌಲ್ಯಗಳನ್ನು ಗೌರವಿಸುವ ಪರ್ಯಾಯ ಧರ್ಮ ಅಥವಾ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕವಾಗಿ ತುಳಿತಕ್ಕೊಳಗಾದವರ ವಿಮೋಚನೆಗಾಗಿ ಪ್ರತಿಪಾದಿಸಿದವರು. ಇಬ್ಬರೂ ರಾಜಕೀಯ ಸಬಲೀಕರಣಕ್ಕಾಗಿ ಮತ್ತು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಸಮಾಜದ ಅಂಚಿನಲ್ಲಿರುವ ವರ್ಗಗಳ ಪ್ರಾತಿನಿಧ್ಯಕ್ಕಾಗಿ ಶ್ರಮಿಸಿದ್ದರು.

ಪೆರಿಯಾರ್ ಲಲೈ ಅನುವಾದಿಸಿದ ಪೆರಿಯಾರ್ ನಿಜ ರಾಮಾಯಣದ ಅನುವಾದ ಹಿಂದೂ ಮೂಲಭೂತವಾದಿಗಳು ಮತ್ತು ಮೇಲ್ಜಾತಿಗಳಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿತು. ತಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲಾಗಿದೆ ಎಂದು ಆರೋಪಿಸಿದರು ಮತ್ತು ಪುಸ್ತಕವನ್ನು ನಿಷೇಧಿಸುವಂತೆ ಒತ್ತಾಯಿಸಿದರು. ಪ್ರಕರಣವೂ ದಾಖಲಾಯಿತು. ಪೆರಿಯಾರ್ ಲಲೈ ವಿರೋಧಿಗಳಿಂದ ಕಿರುಕುಳ, ಬೆದರಿಕೆ ಮತ್ತು ಹಿಂಸೆಯನ್ನು ಎದುರಿಸಬೇಕಾಯಿತು. ಅವರ ಮುದ್ರಣಾಲಯದ ಮೇಲೆ ದಾಳಿ ನಡೆಸಲಾಯಿತು. ಪೊಲೀಸರು ಅವರ ಪುಸ್ತಕಗಳನ್ನು ವಶಪಡಿಸಿಕೊಂಡರು. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಹಕ್ಕಿಗಾಗಿ ಅವರು ಸುದೀರ್ಘ ಕಾನೂನು ಹೋರಾಟ ನಡೆಸಬೇಕಾಗಿ ಬಂತು.

ಬಹುಜನ ನಾಯಕರು ಮೇಲ್ಜಾತಿಗಳ ಕೈಗೊಂಬೆಯಾಗಿದ್ದಾರೆ ಮತ್ತು ತುಳಿತಕ್ಕೊಳಗಾದ ಜನಸಾಮಾನ್ಯರಿಗೆ ದ್ರೋಹ ಬಗೆದಿದ್ದಾರೆ ಎಂಬುದು ಲಲೈ ಟೀಕೆಯಾಗಿತ್ತು. ಬಹುಜನ ನಾಯಕರಾಗಿದ್ದ ರಾಮಧನ್ ಪಾಸಿ ಮತ್ತು ಮೋತಿರಾಮ್ ಕೋರಿಯಂಥವರು ಬ್ರಾಹ್ಮಣತ್ವಕ್ಕೆ ಅಧೀನರಾಗಿದ್ದಾರೆ ಎಂದು ಖಂಡಿಸಿದ ಲಲೈ, ದಲಿತರು ಮತ್ತು ಒಬಿಸಿಗಳು ಅಂಬೇಡ್ಕರ್ ಮತ್ತು ಪೆರಿಯಾರ್ ತತ್ವದಡಿಯಲ್ಲಿ ಒಂದಾಗಬೇಕೆಂದು ಒತ್ತಾಯಿಸಿದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆಗಳು

ಪೆರಿಯಾರ್ ಲಲೈ ಉತ್ತಮ ಬರಹಗಾರರಾಗಿದ್ದರು. ಅವರ ಸಾಹಿತ್ಯ ಜನಸಾಮಾನ್ಯರಲ್ಲಿ ಜಾತಿ ವಿರೋಧಿ ಪ್ರಜ್ಞೆಯನ್ನು ಮೂಡಿಸುವ ಉದ್ದೇಶದ್ದಾಗಿತ್ತು. ಅಂಬೇಡ್ಕರ್ ಅವರ ಭಾಷಣಗಳನ್ನು ಹಿಂದಿಯಲ್ಲಿ ಪ್ರಕಟಿಸಿದವರಲ್ಲಿ ಲಲೈ ಮೊದಲಿಗರು. ಜಾತಿ, ಧರ್ಮ, ರಾಜಕೀಯ, ಅರ್ಥಶಾಸ್ತ್ರ, ಇತಿಹಾಸ, ಸಂಸ್ಕೃತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಪುಸ್ತಕಗಳು, ಕರಪತ್ರಗಳು, ನಿಯತಕಾಲಿಕೆಗಳು ಮತ್ತು ಪತ್ರಿಕೆಗಳನ್ನು ಪ್ರಕಟಿಸಿದರು.

ಅವರ ಕೆಲವು ಗಮನಾರ್ಹ ಪ್ರಕಟಣೆಗಳೆಂದರೆ: ಬ್ರಾಹ್ಮಣ ರಾಜ್ಯದಲ್ಲಿ ತುಳಿತಕ್ಕೊಳಗಾದವರ ರಾಜಕೀಯ ಮತ್ತು ಆರ್ಥಿಕ ಶೋಷಣೆ ಕುರಿತ ಕೃತಿ,‘ ಬುದ್ಧ ಕಿ ದೃಷ್ಟಿ ಮೇ ಈಶ್ವರ್’, ‘ಬ್ರಹ್ಮ ಔರ್ ಆತ್ಮ’ ಮೊದಲಾದವು. ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಕಾರಣಗಳನ್ನು ವಿವರಿಸುವ ಕೃತಿ ಅವರ ಮತ್ತೊಂದು ಮಹತ್ವದ ಪ್ರಕಟಣೆ.

‘ಶಂಭುಕ್ ವಧ್’, ‘ಏಕಲವ್ಯ’, ‘ಅಂಗುಲಿಮಾಲ’ ಇವು ನಾಟಕಗಳು. ಏಕಲವ್ಯನ ಕಥೆಯನ್ನು ಸಾಮಾಜಿಕ ಅನ್ಯಾಯ ಮತ್ತು ತಾರತಮ್ಯದ ದುರಂತವೆಂದು ಪೆರಿಯಾರ್ ಲಲೈ ಪರಿಗಣಿಸಿದ್ದಾರೆ. ಅಂಗುಲಿಮಾಲ ಬುದ್ಧನ ಮಾತುಗಳಿಂದ ಪರಿವರ್ತನೆಗೊಂಡ ಬಳಿಕ ಎದುರಿಸುವ ಅನೇಕ ತೊಂದರೆಗಳನ್ನು ಮತ್ತು ಅಪಾಯಗಳನ್ನು, ಅದೆಲ್ಲವನ್ನು ಸಹಿಸಿಕೊಂಡು ಆತ ಬುದ್ಧನ ಬೋಧನೆಗಳಿಗೆ ನಿಷ್ಠನಾಗಿ ಉಳಿಯುವುದನ್ನು ಆಧ್ಯಾತ್ಮಿಕ ರೂಪಾಂತರ ಮತ್ತು ಸಹಾನುಭೂತಿಯ ಶಕ್ತಿಯ ಸಂಕೇತವಾಗಿ ಲಲೈ ನೋಡುತ್ತಾರೆ.

ಈ ನಾಟಕಗಳ ಹೊರತಾಗಿ ಪೆರಿಯಾರ್ ಲಲೈ ಕವಿತೆಗಳು, ಹಾಡುಗಳು, ಘೋಷಣೆಗಳು ಮತ್ತು ಸಂಭಾಷಣೆಗಳನ್ನು ಬರೆದು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ್ದರು. ತಮ್ಮ ಸಂದೇಶವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಲು ಸರಳ ಮತ್ತು ಆಡುಮಾತಿನ ಭಾಷೆಯನ್ನು ಬಳಸಿದರು. ಜನರಲ್ಲಿ ಅರಿವು ಮತ್ತು ಶಿಕ್ಷಣವನ್ನು ಹರಡಲು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮಾವೇಶಗಳು ಮತ್ತು ಶಿಬಿರಗಳನ್ನು ಆಯೋಜಿಸುತ್ತಿದ್ದರು. ಪ್ರಮುಖ ನಾಯಕರು ಮತ್ತು ಚಿಂತಕರಾದ ದಲೈಲಾಮಾ, ಎ.ಆರ್. ಅಕೇಲಾ, ರಾಮಸ್ವರೂಪ್ ವರ್ಮಾ, ಕಾನ್ಶಿರಾಮ್ ಮೊದಲಾದವರನ್ನು ಲಲೈ ಮಾತನಾಡಲು ಕರೆಸುತ್ತಿದ್ದರು.

ಬೌದ್ಧ ಧರ್ಮಕ್ಕೆ ಪರಿವರ್ತನೆ

ಹಿಂದೂ ಧರ್ಮವನ್ನು ತ್ಯಜಿಸಿ ಇತರ ಸಾವಿರಾರು ದಲಿತರು ಮತ್ತು ಹಿಂದುಳಿದ ವರ್ಗದವರೊಂದಿಗೆ ಬೌದ್ಧಧರ್ಮವನ್ನು ಸ್ವೀಕರಿಸಿದ್ದ ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದ ಪೆರಿಯಾರ್ ಲಲೈ, ತಾವೂ ಎಲ್ಲರನ್ನೂ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಘನತೆಯಿಂದ ಕಾಣುವ ಬೌದ್ಧಧರ್ಮವನ್ನು ಜೀವನ ವಿಧಾನವಾಗಿ ಅಳವಡಿಸಿಕೊಂಡರು. ತಮ್ಮ ಹೆಸರಿನಿಂದ ಯಾದವ್ ಪದವನ್ನು ತೆಗೆದುಹಾಕಿ, ಬೌಧ್ (ಬೌದ್ಧ) ಎಂದು ಬದಲಿಸಿಕೊಂಡರು. ಜಾತಿ ಗುರುತನ್ನು ತಿರಸ್ಕರಿಸಲು ಮತ್ತು ಮಾನವ ಗುರುತಿನ ದೃಢೀಕರಣವನ್ನು ವ್ಯಕ್ತಪಡಿಸಲು ಅವರು ಇದನ್ನು ಮಾಡಿದರು.

ಪೆರಿಯಾರ್ ಲಲೈ ತಮ್ಮ 81ನೇ ವಯಸ್ಸಿನಲ್ಲಿ 1993ರ ಫೆಬ್ರವರಿ 7ರಂದು ನಿಧನರಾದರು. ಉತ್ತರ ಭಾರತದಲ್ಲಿ ದಲಿತರು, ಹಿಂದುಳಿದ ವರ್ಗದವರು ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳ ಪೀಳಿಗೆಗೆ ಸ್ಫೂರ್ತಿ ನೀಡಿದ್ದ ಜಾತಿ ವಿರೋಧಿ ಸಾಹಿತ್ಯ ಮತ್ತು ಕ್ರಿಯಾಶೀಲತೆಯ ಶ್ರೀಮಂತ ಪರಂಪರೆಯನ್ನು ಅವರು ಬಿಟ್ಟುಹೋಗಿದ್ದಾರೆ. ಎಲ್ಲ ದಮನಿತ ಜಾತಿಗಳನ್ನು ಸಾಮಾನ್ಯ ಗುರುತು ಮತ್ತು ಧೋರಣೆಯ ಅಡಿಯಲ್ಲಿ ಒಗ್ಗೂಡಿಸಲು ಪ್ರಯತ್ನಿಸಿದ ಬಹುಜನ ಚಳವಳಿಯ ಪ್ರವರ್ತಕರಲ್ಲಿ ಅವರೂ ಒಬ್ಬರು. ಬ್ರಾಹ್ಮಣ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಾಬಲ್ಯವನ್ನು ಪ್ರಶ್ನಿಸಿದ ದಲಿತ ಬಹುಜನ ಸಾಹಿತ್ಯದ ಅಸಾಧಾರಣ ಸಾಧಕರಲ್ಲಿ ಒಬ್ಬರಾಗಿದ್ದಾರೆ ಲಲೈ.

ಭಾರತವು ಜಾತಿ ತಾರತಮ್ಯ, ಧಾರ್ಮಿಕ ಅಸಹಿಷ್ಣುತೆ, ಸಾಮಾಜಿಕ ಅನ್ಯಾಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಂಥ ಸಮಸ್ಯೆಗಳೊಂದಿಗೆ ಸೆಣಸಾಡುತ್ತಿರುವಾಗ ಪೆರಿಯಾರ್ ಲಲೈ ಅವರ ಜೀವನ ಮತ್ತು ಕೆಲಸ ಇಂದಿಗೂ ಪ್ರಸ್ತುತವಾಗಿದೆ. ಅವರ ಬರಹಗಳು ಮತ್ತು ಭಾಷಣಗಳು ಬ್ರಾಹ್ಮಣತ್ವ ಮತ್ತು ಹಿಂದುತ್ವದ ಪ್ರಬಲವಾದ ವಿಮರ್ಶೆಗಳಾಗಿವೆ. ಅಂಬೇಡ್ಕರ್, ಪೆರಿಯಾರ್ ಮತ್ತು ಬೌದ್ಧಧರ್ಮದ ಆಧಾರದ ಮೇಲೆ ಸಮಾನತೆಯ ಮತ್ತು ಪ್ರಜಾಸತ್ತಾತ್ಮಕ ಸಮಾಜದ ದೃಷ್ಟಿಕೋನವನ್ನು ಅವು ನೀಡುತ್ತವೆ.

(ಕೃಪೆ:thewire.in)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಸಂದೀಪ್ ಯಾದವ್

contributor

Similar News