ರಾಜಕೀಯ ಭ್ರಷ್ಟಾಚಾರವೂ ಸಾಂಸ್ಥಿಕ ಬೇರುಗಳೂ
ಚುನಾವಣೆಗಳಲ್ಲಿ ಟಿಕೆಟ್ ಕೊಡಿಸುವುದೇ ಒಂದು ದಂಧೆಯಾಗಿ ಮಾರ್ಪಟ್ಟಿರುವುದಾದರೆ, ಆನಂತರದ ಸ್ಪರ್ಧೆ, ಆಯ್ಕೆ, ಅಧಿಕಾರ ಗ್ರಹಣ ಮತ್ತು ಆಡಳಿತ ನಿರ್ವಹಣೆಯ ಪ್ರಕ್ರಿಯೆಯಲ್ಲಿ ಇದೇ ಬಂಡವಾಳದ ಹರಿವು ಎಂತಹ ಭೀಕರ ಪರಿಣಾಮಗಳನ್ನು ಬೀರಬಹುದು ಎನ್ನುವುದು ನಮ್ಮ ಮುಂದಿನ ಜಟಿಲ ಪ್ರಶ್ನೆಯಾಗಬೇಕಿದೆ. ಭ್ರಷ್ಟಾಚಾರದ ಬೇರುಗಳು ಅಧಿಕಾರಶಾಹಿಯಿಂದಾಚೆಗೆ ಎಲ್ಲ ವಲಯಗಳಲ್ಲೂ ಹರಡಿರುವುದನ್ನು ಈ ಘಟನೆಗಳು ಸೂಚಿಸುತ್ತವೆ.
ಗ್ರಾಮ ಪಂಚಾಯತ್ ಹಂತದಿಂದ ಸಂಸತ್ತಿನವರೆಗೂ ನಡೆಯುವ ಪ್ರಜಾಸತ್ತಾತ್ಮಕ ಚುನಾವಣೆಗಳು ಸಂಪೂರ್ಣವಾಗಿ ಹಣಕಾಸು ವ್ಯವಹಾರದ ಚೌಕಟ್ಟಿನೊಳಗೇ ನಡೆಯುತ್ತದೆ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಚುನಾವಣೆಗಳಲ್ಲಿ ಸ್ಪರ್ಧಿಸುವುದರಿಂದ ಅಧಿಕಾರ ಗದ್ದುಗೆ ಏರುವವರೆಗೂ ಅಭ್ಯರ್ಥಿಗಳು ಔದ್ಯಮಿಕ ಮಾರುಕಟ್ಟೆಯ ಮೂಲಕವೇ ಪೋಷಿಸಲ್ಪಡುತ್ತಾರೆ. ಚುನಾವಣೆಗಳ ಸಂದರ್ಭದಲ್ಲಿ ಹಣ-ವಸ್ತುಗಳನ್ನು ಹಂಚುವ ಒಂದು ಅನಿಷ್ಟ ಪ್ರಕ್ರಿಯೆಯನ್ನೂ ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಈ ಹಂತದಿಂದಲೇ ಆರಂಭವಾಗುವ ಅವಿನಾಭಾವ ಸಂಬಂಧಗಳಲ್ಲಿ ರಾಜಕೀಯ ಪಕ್ಷಗಳೊಡನೆ ಔದ್ಯಮಿಕ ಸಂಸ್ಥೆಗಳೊಂದಿಗೇ ಆಧ್ಯಾತ್ಮಿಕ ಮಠಮಾನ್ಯಗಳೂ, ಧಾರ್ಮಿಕ ಕೇಂದ್ರಗಳೂ, ಮಾರುಕಟ್ಟೆ ಪ್ರಾಬಲ್ಯ ಹೊಂದಿರುವ ಕಾರ್ಪೊರೇಟ್ ಉದ್ದಿಮೆಗಳೂ ಪರಸ್ಪರ ಬೆಸೆದುಕೊಳ್ಳುತ್ತವೆ. ಈ ಒಂದು ಪ್ರಕ್ರಿಯೆಯನ್ನೇ ಚೈತ್ರಾ ಕುಂದಾಪುರ ಪ್ರಕರಣದಲ್ಲಿ ನಾವು ಗಮನಿಸಬೇಕಿದೆ.
ಬಂಡವಾಳಿಗ (ಬೂರ್ಷ್ವಾ) ರಾಜಕೀಯ ಪಕ್ಷಗಳು ಎಷ್ಟೇ ಸಭ್ಯ-ಪ್ರಾಮಾಣಿಕ ಚಾರಿತ್ರ್ಯದ ಮುಖವಾಡ ಧರಿಸಿದರೂ ತೆರೆಮರೆಯಲ್ಲಿ ನಡೆಯುವ ಕಸರತ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚುನಾವಣೆಗಳ ಸಂದರ್ಭಗಳಲ್ಲಿ ಟಿಕೆಟ್ ಹಂಚಿಕೆ ಎನ್ನುವುದು ಒಂದು ವ್ಯವಸ್ಥಿತ ಜಾಲದಲ್ಲೇ ನಡೆಯುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಸಣ್ಣ ಹಳ್ಳಿಯಿಂದ ದಿಲ್ಲಿಯವರೆಗೂ ವಿಸ್ತರಿಸುವ ಈ ಜಾಲದ ಭಾಗಿದಾರರಾಗಿಯೇ ಮಧ್ಯವರ್ತಿಗಳೂ, ವಶೀಲಿಬಾಜಿ ವ್ಯಕ್ತಿ-ಸಂಘಟನೆಗಳೂ, ಲಾಬಿಕೋರ ಏಜೆಂಟರೂ ಮತ್ತು ಪ್ರಧಾನ ನಾಯಕರ ಹಿಂಬಾಲಕರಾಗಿಯೇ ಗುರುತಿಸಿಕೊಳ್ಳುವ ತಳಮಟ್ಟದ ಕಾರ್ಯಕರ್ತರೂ ಕಂಡುಬರುತ್ತಾರೆ. ಈ ಜಾಲದ ಲಕ್ಷ್ಮಣರೇಖೆಯನ್ನು ದಾಟಿ ಯಾವುದೇ ವ್ಯಕ್ತಿಯೂ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವುದು ಅಸಾಧ್ಯವಾಗುತ್ತದೆ. ಜನಪ್ರತಿನಿಧಿಯಾಗಲು ಬಯಸುವ ವ್ಯಕ್ತಿಗಳಿಗೆ ತಮ್ಮ ವ್ಯಕ್ತಿಗತ ಪ್ರಾಮಾಣಿಕತೆ, ನಿಷ್ಠೆ, ಅರ್ಹತೆಗಳಿಗಿಂತಲೂ ತಾವು ನಿರ್ವಹಿಸಲು ಸಾಧ್ಯವಾಗಬಹುದಾದ ಚುನಾವಣಾ ಮಾರುಕಟ್ಟೆಯ ವ್ಯಾಪ್ತಿ ನಿರ್ಣಾಯಕವಾಗುತ್ತದೆ. ಆದ್ದರಿಂದಲೇ ಸ್ಪರ್ಧಾತ್ಮಕ ವಾತಾವರಣದಲ್ಲಿ ಹಲವಾರು ಪ್ರಾಮಾಣಿಕ ರಾಜಕಾರಣಿಗಳು ಅಂತಿಮ ಕಣದಿಂದ ದೂರವೇ ಉಳಿಯುತ್ತಾರೆ.
ಈ ಭ್ರಷ್ಟ ಪರಂಪರೆಯ ಪರಿಣಾಮವಾಗಿಯೇ ಇಂದಿನ ರಾಜಕಾರಣದಲ್ಲಿ ಒಬ್ಬ ಪ್ರಾಮಾಣಿಕ ವ್ಯಕ್ತಿ ತನ್ನ ಜನಸೇವೆಯ ಮೂಲಕ ಅಥವಾ ಸಾಮಾಜಿಕ ಚಟುವಟಿಕೆಗಳ ಮೂಲಕ, ಗ್ರಾಮಮಟ್ಟದಿಂದ ಒಂದೊಂದೇ ಮೆಟ್ಟಿಲೇರುತ್ತಾ ವಿಧಾನಸಭೆಯನ್ನೋ, ಸಂಸತ್ ಭವನವನ್ನೋ ತಲುಪುವುದು ಅಪರೂಪವಾಗಿದೆ. ಮೂರು ದಶಕಗಳ ಹಿಂದೆ ಈ ಭ್ರಷ್ಟ ಪರಂಪರೆ ಇನ್ನೂ ಮೊಳೆಯುವ ಹಂತದಲ್ಲಿದ್ದಾಗ, ಯುವ ಸಮೂಹ ರಾಜಕೀಯ ಪ್ರವೇಶಿಸುವ ಮೂಲಕ ಸುಧಾರಣೆ ಸಾಧ್ಯವಾಗಬಹುದು ಎಂಬ ಆಶಯ ವ್ಯಕ್ತವಾಗುತ್ತಿತ್ತು. ಆದರೆ ಈ ಆಶಯ ಗರಿಗೆದರುವ ಮುನ್ನವೇ ಭಾರತವನ್ನು ನವ ಉದಾರವಾದ ಮತ್ತು ಮಾರುಕಟ್ಟೆ ಬಂಡವಾಳವು ಆಕ್ರಮಿಸಿತ್ತು. ಔದ್ಯಮಿಕ ಸಾಮ್ರಾಜ್ಯದ ವಿಸ್ತರಣೆಗಾಗಿ ರಾಜಕೀಯ ಶಕ್ತಿಗಳನ್ನು ಆಶ್ರಯಿಸುವ ಕಾರ್ಪೊರೇಟ್ ಮಾರುಕಟ್ಟೆ ಶಕ್ತಿಗಳು ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ನೆಪದಲ್ಲಿ ಸರಕಾರಗಳ ಆಡಳಿತ ನೀತಿಗಳನ್ನೂ ಪ್ರಭಾವಿಸಲು ಆರಂಭಿಸಿದ್ದು ಈ ಹಂತದಲ್ಲೇ.
ಕಾರ್ಪೊರೇಟ್ ಮಾರುಕಟ್ಟೆಯ ಹಿಡಿತ
ಚೈತ್ರಾ ಕುಂದಾಪುರ ಶೂನ್ಯದಲ್ಲಿ ಉದ್ಭವಿಸುವ ವ್ಯಕ್ತಿಯಲ್ಲ. ಉತ್ತಮ ಚರ್ಚಾಪಟುವಾಗಿ ಶಾಲಾ ಕಾಲೇಜು ಮಟ್ಟದಲ್ಲಿ ಗುರುತಿಸಿ ಕೊಂಡ ಒಬ್ಬ ಬಾಲಕಿ ಸಮಾಜಮುಖಿಯಾಗದೆ ಕೋಮುದ್ವೇಷ ಮತ್ತು ಮತೀಯ ರಾಜಕಾರಣದತ್ತ ಹೊರಳಿದ್ದಾಗಲೀ, ಕರಾವಳಿ ಕರ್ನಾಟಕದ ದ್ವೇಷ ರಾಜಕಾರಣದ ಕಾರ್ಖಾನೆಯಲ್ಲಿ ಪ್ರಧಾನ ವಾಹಕಿಯಾಗಿ ಕಾರ್ಯನಿರ್ವಹಿಸಿದ್ದಾಗಲೀ ನಮ್ಮ ಸಮಾಜವನ್ನು ರೂಪಿಸುತ್ತಿರುವ ಅಧಿಕಾರ ರಾಜಕಾರಣದ ಸ್ವರೂಪವನ್ನು ಸೂಚಿಸುತ್ತದೆ. ಈ ಮಹಿಳೆ ಕಳೆದ ಚುನಾವಣೆಗಳಲ್ಲಿ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಆದರೆ ಈಕೆಯನ್ನು ಸಲಹುವ ಒಂದು ಸಾಂಸ್ಥಿಕ ವ್ಯವಸ್ಥೆ ನಮ್ಮ ನಡುವಿನ ಪ್ರಜಾಸತ್ತಾತ್ಮಕ ಚೌಕಟ್ಟಿನೊಳಗೇ ಉಸಿರಾಡುತ್ತಿರುವುದನ್ನು ಗಮನಿಸಬೇಕಿದೆ. ಈಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಬಿಜೆಪಿಯ ನಾಯಕರು ಅಧಿಕೃತವಾಗಿ ಈಕೆಗೂ ತಮ್ಮ ಪಕ್ಷಕ್ಕೂ ನೇರ ಸಂಬಂಧ ಇಲ್ಲ ಎಂದು ಘೋಷಿಸಿದರೂ, ಚೈತ್ರಾ ಹಗಲುರಾತ್ರಿ ಲೆಕ್ಕಿಸದೆ ಮಾಡಿದ ದ್ವೇಷ ರಾಜಕಾರಣದ ಫಲಾನುಭವಿಗಳಾರು? ಈ ಪ್ರಶ್ನೆಗೆ ರಾಜಕೀಯ ನಾಯಕರೇ ಉತ್ತರಿಸಬೇಕು.
ಆದರೆ ಇದರಿಂದಾಚೆಗೆ ಯೋಚಿಸಬೇಕಿರುವುದು ಚೈತ್ರಾ ಪ್ರಕರಣದಲ್ಲಿ ಭಾಗಿಯಾಗಿರುವ ಖಾವಿಧಾರಿಯ ಬಗ್ಗೆ, ಉದ್ಯಮಿಯ ಬಗ್ಗೆ ಮತ್ತು ಬಂಡವಾಳ ಮಾರುಕಟ್ಟೆಯ ನಿರ್ವಾಹಕರ ಬಗ್ಗೆ. ತಡವಾಗಿಯಾದರೂ ಬಂಧನಕ್ಕೊಳಗಾಗಿರುವ ಖಾವಿಧಾರಿ ಮಠೋದ್ಯಮಿ ಅಭಿನವ ಹಾಲಶ್ರೀ ಮತ್ತು ವಂಚನೆಗೊಳಗಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಚುನಾವಣಾ ರಾಜಕಾರಣ ಮತ್ತು ಹಣಕಾಸು ಭ್ರಷ್ಟಾಚಾರದ ಪ್ರಧಾನ ಕೊಂಡಿಗಳಾಗಿ ಕಾಣುತ್ತಾರೆ. ಚೈತ್ರಾ ಕುಂದಾಪುರ ಅವರಂತಹ ಛದ್ಮವೇಷಧಾರಿ ಸಾಂಸ್ಕೃತಿಕ ಪರಿಚಾರಕರು ದ್ವೇಷೋದ್ಯಮಿಗಳಾಗಿ ಈ ಭ್ರಷ್ಟಾಚಾರದ ಜಾಲದಲ್ಲಿ ಬಳಕೆಯಾಗುವ ವಾಹಕಗಳಾಗಿ ಪರಿಣಮಿಸುತ್ತಾರೆ. ಚುನಾವಣೆಗಳಲ್ಲಿ ಟಿಕೆಟ್ ಕೊಡಿಸುವುದೇ ಒಂದು ದಂಧೆಯಾಗಿ ಮಾರ್ಪಟ್ಟಿರುವುದಾದರೆ, ಆನಂತರದ ಸ್ಪರ್ಧೆ, ಆಯ್ಕೆ, ಅಧಿಕಾರ ಗ್ರಹಣ ಮತ್ತು ಆಡಳಿತ ನಿರ್ವಹಣೆಯ ಪ್ರಕ್ರಿಯೆಯಲ್ಲಿ ಇದೇ ಬಂಡವಾಳದ ಹರಿವು ಎಂತಹ ಭೀಕರ ಪರಿಣಾಮಗಳನ್ನು ಬೀರಬಹುದು ಎನ್ನುವುದು ನಮ್ಮ ಮುಂದಿನ ಜಟಿಲ ಪ್ರಶ್ನೆಯಾಗಬೇಕಿದೆ. ಭ್ರಷ್ಟಾಚಾರದ ಬೇರುಗಳು ಅಧಿಕಾರಶಾಹಿಯಿಂದಾಚೆಗೆ ಎಲ್ಲ ವಲಯಗಳಲ್ಲೂ ಹರಡಿರುವುದನ್ನು ಈ ಘಟನೆಗಳು ಸೂಚಿಸುತ್ತವೆ.
ಈ ಪ್ರಕ್ರಿಯೆಯಲ್ಲಿ ಔದ್ಯಮಿಕ ವಲಯ, ಕಾರ್ಪೊರೇಟ್ ಮಾರುಕಟ್ಟೆ, ಆಧ್ಯಾತ್ಮಿಕ ಉದ್ಯಮ ಹಾಗೂ ಸೈದ್ಧಾಂತಿಕ ರಾಜಕಾರಣ ಇವೆಲ್ಲವನ್ನೂ ಸಾಂಸ್ಥಿಕ ಬಂಡವಾಳದ ಹರಿವು ಹಾಗೂ ಹಣಕಾಸು ಬಂಡವಾಳದ ಚಲನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಕೋಮುವಾದ, ಮತಾಂಧತೆ, ಜಾತಿ ರಾಜಕಾರಣ ಮತ್ತು ದ್ವೇಷ ರಾಜಕಾರಣದ ಕಾಲಾಳುಗಳಾಗಿ ಕಾರ್ಯ ನಿರ್ವಹಿಸುವ ಬೃಹತ್ ಕಾರ್ಯಪಡೆಯೊಂದು ಕರ್ನಾಟಕದಲ್ಲಿ ಸೃಷ್ಟಿಯಾಗಿದ್ದು, ಈ ಸಾಂಸ್ಕೃತಿಕ ರಾಜಕೀಯ ಪರಿಚಾರಕರನ್ನು ಸಲಹುವ ಸಾಂಸ್ಥಿಕ ಶಕ್ತಿಗಳನ್ನೂ ಭೇದಿಸಬೇಕಿದೆ. ಮುಖ್ಯಮಂತ್ರಿಯ ಆಯ್ಕೆಯೇ ಮಠಮಾನ್ಯಗಳ ಪ್ರಭಾವಳಿಯಲ್ಲಿ ನಡೆಯುವ ಒಂದು ಅಪ್ರಜಾತಾಂತ್ರಿಕ ಬೆಳವಣಿಗೆಗೆ ಕರ್ನಾಟಕ ಸಾಕ್ಷಿಯಾಗಿದೆ. ಇದರ ನಡುವೆಯೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಜಾತಿ ಕೇಂದ್ರಿತ ಮಠಗಳ ಪ್ರಭಾವ ಹೆಚ್ಚಾಗಿರುವುದನ್ನೂ ಕಂಡಿದ್ದೇವೆ.
ಭ್ರಷ್ಟ ವ್ಯವಸ್ಥೆಯ ಹೊಸ ಆಯಾಮ
ಚೈತ್ರಾ ಕುಂದಾಪುರ ಘಟನೆ ಈಗ ಈ ಪ್ರಕ್ರಿಯೆಯ ಮತ್ತೊಂದು ಆಯಾಮವನ್ನು ತೆರೆದಿಟ್ಟಿದೆ. ಟಿಕೆಟ್ ಹಂಚಿಕೆಯ ಹಂತದಲ್ಲೇ ತಮ್ಮ ಪ್ರಭಾವಿ ವಲಯವನ್ನು ವಿಸ್ತರಿಸಿಕೊಳ್ಳುವ ಔದ್ಯಮಿಕ ವಲಯದ ತಂತ್ರಗಾರಿಕೆಯ ಅಡಿಯಲ್ಲೇ ಆಧ್ಯಾತ್ಮಿಕ ಕೇಂದ್ರಗಳು ತಮ್ಮ ಬಾಹುಗಳನ್ನು ಚಾಚಿರುವ ಒಂದು ಸುಳಿವನ್ನು ಈ ಪ್ರಕರಣ ಬಯಲು ಮಾಡಿದೆ. ಇದಕ್ಕೆ ಕಾರಣಗಳೂ ಇವೆ. ನವ ಉದಾರವಾದ ಪೋಷಿಸುತ್ತಿರುವ ಮಾರುಕಟ್ಟೆ ಕೇಂದ್ರಿತ ಆಡಳಿತ ವ್ಯವಸ್ಥೆಯಲ್ಲಿ ಶಿಕ್ಷಣ, ಆರೋಗ್ಯ, ಯೋಗಕ್ಷೇಮ, ವಿಮೆ ಹಾಗೂ ಹಣಕಾಸು ಕ್ಷೇತ್ರದ ಎಲ್ಲ ನೆಲೆಗಳಲ್ಲೂ ಜಾತಿ ಕೇಂದ್ರಿತ ಮಠಮಾನ್ಯಗಳು, ವಿವಿಧ ಧಾರ್ಮಿಕ ಸಂಸ್ಥೆಗಳು ತಮ್ಮ ಬಾಹುಗಳನ್ನು ಚಾಚಿಕೊಳ್ಳುತ್ತಿವೆ. ಮಾರುಕಟ್ಟೆಯೊಡನೆ ನೇರ ಸಂಪರ್ಕ ಹೊಂದಿರುವ ಈ ಸಾಂಸ್ಥಿಕ ವಲಯದ ಚೌಕಟ್ಟಿನಲ್ಲೇ ತಮ್ಮ ಕ್ಷೇತ್ರದ ಜನತೆಯನ್ನು ಆಕರ್ಷಿಸಿ, ಮತಬ್ಯಾಂಕುಗಳನ್ನು ಸೃಷ್ಟಿಸಿಕೊಳ್ಳುವ ರಾಜಕೀಯ ನಾಯಕರಿಗೆ ಜಾತಿ-ಧರ್ಮ ಮತ್ತು ಅಧ್ಯಾತ್ಮ ಇವೆಲ್ಲವೂ ತಾತ್ಕಾಲಿಕ ಮುಖವಾಡಗಳಾಗುತ್ತವೆ. ಜಾತಿ-ಉಪಜಾತಿ-ಪಂಗಡ- ಉಪಪಂಗಡಕ್ಕೊಂದು ಸಾಂಸ್ಕೃತಿಕ ಕೇಂದ್ರ ಇರುವ ಕರ್ನಾಟಕದಲ್ಲಿ ಇದು ಸುಲಭವೂ ಆಗಿರುತ್ತದೆ.
ಈ ವಿಶಾಲ ಸಾಂಸ್ಥಿಕ ಜಾಲದಲ್ಲೇ ಯುವ ಸಮೂಹವೂ ಸಿಕ್ಕಿಹಾಕಿಕೊಳ್ಳುತ್ತದೆ. ಜಾತ್ಯತೀತತೆಯ ಸೋಗಿನಲ್ಲಿ ಜಾತ್ಯಾಧಾರಿತ ಮತಬ್ಯಾಂಕುಗಳನ್ನು ಸೃಷ್ಟಿಸಿಕೊಳ್ಳುವ, ಧರ್ಮ ರಕ್ಷಣೆಯ ಹೆಸರಿನಲ್ಲಿ ಕಾವಲುಪಡೆಗಳನ್ನು ಪೋಷಿಸುವ ರಾಜಕೀಯ ಪಕ್ಷಗಳಿಗೆ ಯುವ ಸಮೂಹ ಸುಲಭವಾಗಿ ಒಲಿಯುವುದೂ ಸಹ ಇದೇ ಸಾಂಸ್ಥಿಕ ಜಾಲದಲ್ಲೇ. ನಿರುದ್ಯೋಗ, ಸಾಮಾಜಿಕ ಅಭದ್ರತೆ ಮತ್ತು ಅಸ್ಥಿರತೆಯನ್ನು ಎದುರಿಸುತ್ತಿರುವ ಬೃಹತ್ ಸಂಖ್ಯೆಯ ಯುವ ಸಂಕುಲವು ರಾಜಕೀಯ ಆಮಿಷಗಳಿಗೆ ಒಲಿಯುವಷ್ಟೇ ಸುಲಭವಾಗಿ ಜಾತಿ-ಧರ್ಮಗಳ ಅಸ್ಮಿತೆಗಳಿಗೂ ಒಲಿಯುತ್ತದೆ. ಯುವ ಸಮೂಹದ ಸುಸ್ಥಿರ ಬದುಕನ್ನು ಖಾತರಿಪಡಿಸಬೇಕಾದ ಅರ್ಥವ್ಯವಸ್ಥೆ ಮಾರುಕಟ್ಟೆಯ ಆಣತಿಯಂತೆ ನಡೆಯುತ್ತಿರುವಂತೆಯೇ, ಈ ಯುವ ಸಂಕುಲವನ್ನು ಸಮೂಹಸನ್ನಿಗೊಳಪಡಿಸುವ ಮತೀಯ ಚಿಂತನಾವಾಹಿನಿಗಳು ಇದೇ ಮಾರುಕಟ್ಟೆಯನ್ನೇ ಬಳಸಿಕೊಂಡು, ಯುವಜನತೆಯ ನಡುವೆ ದ್ವೇಷಕಾರುವ ದ್ವೇಷೋದ್ಯಮದ ಕಾಲಾಳುಗಳನ್ನು ಸೃಷ್ಟಿಸುತ್ತವೆ. ಚೈತ್ರಾ ಕುಂದಾಪುರ ಅವರಂತಹ ಯುವ ಪೀಳಿಗೆ ಈ ವಿಷವರ್ತುಲದ ಒಂದು ಉತ್ಪನ್ನವಾಗಿ ಕಾಣುತ್ತಾರೆ.
ಚುನಾವಣೆಯಲ್ಲಿ ಟಿಕೆಟ್ ಕೊಡಿಸುವ ದಂಧೆಯಲ್ಲೇ ನೂರಾರು ಕೋಟಿ ರೂ.ಗಳ ವ್ಯವಹಾರ ನಡೆದಿರುವುದಾದರೆ, ಚುನಾವಣಾ ರಾಜಕಾರಣದಲ್ಲಿ ಎಷ್ಟು ಹಣ ಹರಿದಾಡಬಹುದು, ಯಾವ ಮೂಲಗಳಿಂದ ಬರಬಹುದು, ಎಲ್ಲಿಗೆ ತಲುಪಬಹುದು ಎನ್ನುವುದನ್ನು ಊಹಿಸುವುದು ಸುಲಭ. ಮೇಲ್ನೋಟಕ್ಕೆ ಅಧಿಕಾರಶಾಹಿಯಲ್ಲಿ ಗೋಚರಿಸುವ ಹಣಕಾಸು ಭ್ರಷ್ಟಾಚಾರದ ಬೇರುಗಳು ಇರುವುದು ಈ ಅಧಿಕಾರ ರಾಜಕಾರಣದ ಆವರಣದಲ್ಲಿ. ಭಾರತವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡುತ್ತೇವೆ ಎಂಬ ಮಹತ್ವಾಕಾಂಕ್ಷೆಯ ಘೋಷಣೆಗಳ ನಡುವೆಯೇ ಅನಾವರಣಗೊಳ್ಳುವ ಈ ಭ್ರಷ್ಟ ಪರಂಪರೆಯ ಬೇರುಗಳು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲೇ ಇರುತ್ತವೆ. ಅಧಿಕಾರಶಾಹಿಯನ್ನು, ಜನಪ್ರತಿನಿಧಿಗಳನ್ನು ಪೋಷಿಸುವಂತೆಯೇ ಬಂಡವಾಳ ಮತ್ತು ಕಾರ್ಪೊರೇಟ್ ಮಾರುಕಟ್ಟೆ ಆಧ್ಯಾತ್ಮಿಕ-ಧಾರ್ಮಿಕ-ಸಾಂಸ್ಕೃತಿಕ ವಲಯಗಳನ್ನೂ ಪೋಷಿಸುತ್ತಲೇ ತನ್ನ ಬಾಹುಗಳನ್ನು ವಿಸ್ತರಿಸುತ್ತಿರುತ್ತದೆ.
ಜಾತಿ-ಧರ್ಮ-ಅಧ್ಯಾತ್ಮ ಮತ್ತು ಚುನಾವಣಾ ರಾಜಕಾರಣವನ್ನು ಬೆಸೆಯುವ ಬಂಡವಾಳ ಮತ್ತು ಮಾರುಕಟ್ಟೆ ನಮ್ಮ ಯುವ ಸಂಕುಲವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳುತ್ತಿರುವುದನ್ನು ಗಮನಿಸುತ್ತಿದ್ದೂ ಮೌನವಾಗಿರುವ ನಮ್ಮ ನಡುವಿನ ಬೌದ್ಧಿಕ ವಲಯ ಈಗಲಾದರೂ ಜಾಗೃತವಾಗಬೇಕಿದೆ. ಭ್ರಷ್ಟಾಚಾರ ಎಂಬ ಆಲದ ಮರದ ಬೇರುಗಳು ಸಾಮಾನ್ಯ ಜನರ ಬದುಕಿನ ಎಲ್ಲ ಮಜಲುಗಳಲ್ಲೂ ವ್ಯಾಪಿಸುತ್ತಿರುವುದು ನಮ್ಮ ನಡುವೆ ಢಾಳಾಗಿ ಕಾಣುವ ಸಾಮಾಜಿಕ-ಆರ್ಥಿಕ ಅಸಮಾನತೆ ಮತ್ತು ತಾರತಮ್ಯಗಳಿಗೂ ಕಾರಣವಾಗಿದೆ. ಅಸ್ಮಿತೆಯ ರಾಜಕಾರಣ ನಮ್ಮನ್ನು ದೃಷ್ಟಿಹೀನರನ್ನಾಗಿ ಮಾಡುವ ಮುನ್ನ ಎಚ್ಚೆತ್ತುಕೊಂಡರೆ, ಈಗ ಕವಿದಿರುವ ತೆಳು ಪೊರೆಯನ್ನು ಹೋಗಲಾಡಿಸಿ, ಉಜ್ವಲ ಭವಿಷ್ಯದ ಹಾದಿಯತ್ತ ಕಣ್ಣು ಹಾಯಿಸಬಹುದು. ಇದು ಪ್ರಗತಿಪರ ಎನಿಸಿಕೊಳ್ಳುವ ಯಾವುದೇ ಜನಪರ ಚಳವಳಿಗಳ ಆದ್ಯತೆಯಾಗಬೇಕಿದೆ.