ದಿಲ್ಲಿ ಮತ್ತಿತರ ನಗರಗಳಲ್ಲಿನ ಮಾಲಿನ್ಯ: ಪ್ರಮುಖ ಆಯಾಮಗಳನ್ನು ಮರೆತ ಚರ್ಚೆಗಳು
ವಿವಿಧ ರೀತಿಯಲ್ಲಿ ಮಾಲಿನ್ಯದ ವಿಚಾರವನ್ನು ನ್ಯಾಯದ ಪ್ರಶ್ನೆಗಳಿಂದ ಮತ್ತು ಕಾರ್ಮಿಕ ವರ್ಗದ ಸಮಸ್ಯೆಗಳಿಂದ ಬೇರ್ಪಡಿಸಲಾಗಿದೆ. ಹಲವಾರು ರೀತಿಯ ಅಪಾಯಕಾರಿ ಮತ್ತು ಮಾಲಿನ್ಯಕಾರಕ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರಿಗಿಂತ ಹೆಚ್ಚು ಮಾಲಿನ್ಯದ ಕೆಟ್ಟ ಪರಿಣಾಮಗಳನ್ನು ಬೇರೆ ಯಾರೂ ಅನುಭವಿಸುವುದಿಲ್ಲ, ನಗರಗಳ ಪರಿಸರದ ರಕ್ಷಣೆ ಮತ್ತು ಪುನರುತ್ಪಾದನೆಯಲ್ಲಿ ಕಾರ್ಮಿಕ ವರ್ಗದ ಜನರನ್ನು ಒಳಗೊಳ್ಳುವುದು ಸಾಧ್ಯವಿದೆ ಎಂಬ ಪ್ರಮುಖ ಸಂಗತಿಯನ್ನೇ ನಿರ್ಲಕ್ಷಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ದಿಲ್ಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವು ಪ್ರತೀ ಚಳಿಗಾಲದಲ್ಲೂ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ವರ್ಷವೂ ಅದೇ ಪರಿಸ್ಥಿತಿ ಮುಂದುವರಿದಿದೆ. ವಾಯುಮಾಲಿನ್ಯದ ಪರಿಸ್ಥಿತಿಯು ಉತ್ತರ ಭಾರತದ ಅನೇಕ ಇತರ ನಗರಗಳು ಮತ್ತು ಪಟ್ಟಣಗಳಲ್ಲಿ ವಿಶೇಷವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ತೀರಾ ಕೆಟ್ಟದಾಗಿದೆ. ಸಮುದ್ರದಿಂದ ಸಾಕಷ್ಟು ತಾಜಾ ತಂಗಾಳಿಯು ಬರುವುದರಿಂದ ಮುಂಬೈ ಕರಾವಳಿ ನಗರವಾಗಿ ಯಾವುದೇ ಗಂಭೀರ ವಾಯುಮಾಲಿನ್ಯ ಸಮಸ್ಯೆಗಳನ್ನು ಎದುರಿಸಬೇಕಾದ ಸ್ಥಿತಿಯಿಲ್ಲ ಎಂದೇ ಒಂದು ಕಾಲದಲ್ಲಿ ಭಾವಿಸಲಾಗಿತ್ತು, ಆದರೆ ಅದು ಕೂಡ ಇನ್ನು ಮುಂದೆ ನಿಜವಲ್ಲ. ಏಕೆಂದರೆ ಹಲವಾರು ಮಾನವ ನಿರ್ಮಿತ ಅಂಶಗಳು ಅಲ್ಲಿಯೂ ಗಂಭೀರವಾದ ಮಾಲಿನ್ಯ ಸಮಸ್ಯೆಗಳಿಗೆ ಕಾರಣವಾಗಿವೆ. ಭಾರತದ ಅನೇಕ ನಗರಗಳಲ್ಲಿ ಹದಗೆಡುತ್ತಿರುವ ಮಾಲಿನ್ಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ ಎಂಬುದು ಹಲವಾರು ಅಧ್ಯಯನಗಳಲ್ಲಿ ಬಹಿರಂಗಗೊಂಡಿದೆ.
ದಿಲ್ಲಿಯಲ್ಲಿ ಮಾಲಿನ್ಯದ ಕುರಿತಾದ ಚರ್ಚೆಯು ದೀರ್ಘವಾದುದೂ ತೀವ್ರವೂ ಆಗಿದೆ ಮತ್ತು ದೊಡ್ಡ ಮಟ್ಟದಲ್ಲಿ ಅಂಕಿಅಂಶಗಳನ್ನು ಉಲ್ಲೇಖಿಸಲಾಗುತ್ತದೆ. ಹಲವಾರು ಬಗೆಯಲ್ಲಿ ಸಮಸ್ಯೆಯನ್ನು ಗ್ರಹಿಸುವ ಪ್ರಯತ್ನಗಳು ಆಗುತ್ತಿವೆ. ಆದರೂ ಪರಿಸ್ಥಿತಿಯೇನೂ ಸುಧಾರಿಸಿಲ್ಲ. ಬದಲಾಗಿ ಇನ್ನಷ್ಟು ಹದಗೆಡುತ್ತಲೇ ಇದೆ.
ಅದೇನೇ ಇದ್ದರೂ, ಈ ಚರ್ಚೆಯಲ್ಲಿ ಕೆಲವು ಪ್ರಮುಖ ಆಯಾಮಗಳು ಕಾಣೆಯಾಗಿವೆ ಎಂದು ತೋರುತ್ತದೆ.
ಮಾಲಿನ್ಯವನ್ನು ನಿಗ್ರಹಿಸುವ ಹೆಸರಿನಲ್ಲಿ ದಿಲ್ಲಿಯಿಂದ ದೊಡ್ಡ ಸಂಖ್ಯೆಯ ಕೈಗಾರಿಕೆಗಳನ್ನು ಸ್ಥಳಾಂತರಿಸಿರುವುದು ಹಲವಾರು ದಶಕಗಳಷ್ಟು ಹಿಂದೆಯೇ ಆಯಿತು. ದೊಡ್ಡ ಪ್ರಮಾಣದ ನಿರುದ್ಯೋಗಕ್ಕೆ ಕಾರಣವಾದ ಅಂಶ ಅದು. ಈಗ ಪ್ರತೀ ವರ್ಷವೂ ನಿರ್ಮಾಣ ಕಾರ್ಯಕ್ಕೆ ಕಡಿವಾಣ ಹಾಕುವುದು ಸಾಮಾನ್ಯವಾಗಿದೆ. ಆದರೂ, ಕಾರ್ಮಿಕರ ಮೇಲೆ ಇವೆಲ್ಲವೂ ಹೇಗೆ ಪರಿಣಾಮ ಬೀರಿದೆ, ಅವರು ಅನುಭವಿಸುತ್ತಿರುವ ನಿರುದ್ಯೋಗ ಮತ್ತು ಹಸಿವು, ಪರಿಸರ ಪುನರುತ್ಪಾದನೆಯ ಕೆಲಸದಲ್ಲಿ ಅವರಿಗೆ ಪರ್ಯಾಯ ಉದ್ಯೋಗವನ್ನು ಏಕೆ ಸೃಷ್ಟಿಸಬಾರದು ಇತ್ಯಾದಿಗಳ ವಿಚಾರವಾಗಿ ಯಾರೂ ಮಾತನಾಡುತ್ತಿಲ್ಲ. ನೀರು ಮತ್ತು ಮಣ್ಣಿನ ಸಂರಕ್ಷಣಾ ಕಾರ್ಯದಲ್ಲಿ ಹೆಚ್ಚಿನ ಕೌಶಲ್ಯ ಹೊಂದಿರುವವರು ಕೂಡ ನಿರಂತರ ತೆರವು ಕಾರ್ಯಾಚರಣೆಗಳ ಬಗ್ಗೆ ಆತಂಕಿತರಾಗಿದ್ದಾರೆ.
ದಿಲ್ಲಿ ಮತ್ತಿತರ ನಗರಗಳಲ್ಲಿ ಪದೇ ಪದೇ ಗುಡಿಸಲು, ಜೋಪಡಿಗಳನ್ನು ಮತ್ತು ಕೊಳೆಗೇರಿಗಳನ್ನು ತೆರವುಗೊಳಿಸಲಾಗುತ್ತದೆ. ಇದನ್ನು ತಪ್ಪಿಸಬಹುದು. ತೆರವುಗೊಳಿಸುವಿಕೆ ಒಂದೆಡೆ ಬಡ ಜನರಿಗೆ ಅಪಾರವಾದ ತೊಂದರೆಯನ್ನು ಉಂಟುಮಾಡುವುದರ ಜೊತೆಗೇ ಧೂಳು ಮತ್ತು ಅವಶೇಷಗಳಿಗೂ ಕಾರಣವಾಗುತ್ತದೆ. ಮಹಾನಗರದಲ್ಲಿ ಹೆಚ್ಚು ವರ್ಣರಂಜಿತ ಸಂಸ್ಕೃತಿಗೆ ಕೊಡುಗೆ ನೀಡಬಲ್ಲ ಮೌಲ್ಯಯುತ ಕೌಶಲ್ಯ ಹೊಂದಿರುವ ಜಾನಪದ ಕಲಾವಿದರ ಮನೆಗಳನ್ನು ಸಹ. ಅವರಿಗೆ ಪರ್ಯಾಯ ವಸತಿ ಭರವಸೆಯನ್ನೂ ನೀಡಿಲ್ಲ.
ನಗರದ ಹೊರವಲಯಕ್ಕೆ ಸ್ಥಳಾಂತರಿಸಲ್ಪಟ್ಟ ಅಥವಾ ತಾವಾಗಿಯೇ ಅನೇಕ ಮೈಲುಗಳಷ್ಟು ದೂರಕ್ಕೆ ಸ್ಥಳಾಂತರಗೊಂಡ ಅನೇಕ ಕಾರ್ಮಿಕ ವರ್ಗದ ಜನರಿದ್ದಾರೆ. ಅವರು ಪ್ರತಿದಿನವೂ ಕೆಲಸಕ್ಕಾಗಿ ನಗರಕ್ಕೆ ಬರಬೇಕು. ವಾಹನಗಳನ್ನು ಬಳಸಿ ಬರಬೇಕಿರುವುದರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಮಾಲಿನ್ಯಕ್ಕೆ ಅದು ಕಾರಣವಾಗುತ್ತದೆ. ಮೊದಲಾದರೆ ಅವರು ತಾವು ಕೆಲಸ ಮಾಡುವ ಸ್ಥಳಕ್ಕೆ ನಡೆದುಕೊಂಡೇ ಹೋಗಬಹುದಿತ್ತು. ಹೀಗೆ ತೆರವುಗೊಳಿಸುವಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿರುವುದು ಒಂದೆಡೆಯಾದರೆ, ಅದು ಮಾಲಿನ್ಯವನ್ನು ಉಂಟುಮಾಡಿರುವುದು ಮತ್ತೊಂದೆಡೆ. ಈ ನಡುವೆ ಅರೆ ನಗರ ಪ್ರದೇಶಗಳು ವ್ಯಾಪಕವಾಗಿ ನಿರ್ಲಕ್ಷಿಸಲ್ಪಟ್ಟವು ಮತ್ತು ಹೆಚ್ಚು ಕಲುಷಿತಗೊಂಡವು. ಹೆಚ್ಚಿನ ಸಂಖ್ಯೆಯ ಜನರನ್ನು ಇಲ್ಲಿಗೆ ಕರೆತರಲಾಗಿದ್ದರೂ, ಅಗತ್ಯವಿರುವ ಮಟ್ಟಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿಲ್ಲ.
ಹೀಗೆ ವಿವಿಧ ರೀತಿಯಲ್ಲಿ ಮಾಲಿನ್ಯದ ವಿಚಾರವನ್ನು ನ್ಯಾಯದ ಪ್ರಶ್ನೆಗಳಿಂದ ಮತ್ತು ಕಾರ್ಮಿಕ ವರ್ಗದ ಸಮಸ್ಯೆಗಳಿಂದ ಬೇರ್ಪಡಿಸಲಾಗಿದೆ. ಹಲವಾರು ರೀತಿಯ ಅಪಾಯಕಾರಿ ಮತ್ತು ಮಾಲಿನ್ಯಕಾರಕ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರಿಗಿಂತ ಹೆಚ್ಚು ಮಾಲಿನ್ಯದ ಕೆಟ್ಟ ಪರಿಣಾಮಗಳನ್ನು ಬೇರೆ ಯಾರೂ ಅನುಭವಿಸುವುದಿಲ್ಲ, ಆದರೆ ಮಾಲಿನ್ಯದ ವಿವಿಧ ವಿಶ್ಲೇಷಣೆಯಲ್ಲಿ ಅವರ ಸಮಸ್ಯೆಗಳನ್ನು ಚರ್ಚಿಸುವುದೇ ತೀರಾ ಕಡಿಮೆ. ಕೂಳೆ ಸುಡುವಿಕೆ ಸೇರಿದಂತೆ ಆಧುನಿಕ ಬೇಸಾಯದ ಇತರ ಪರಿಣಾಮಗಳನ್ನು ಕೂಡ ವಿರಳವಾಗಿ ಪರಿಶೀಲಿಸಲಾಗುತ್ತದೆ.
ಖಾಸಗಿ ಕಾರು ಉದ್ಯಮದ ತ್ವರಿತ ಬೆಳವಣಿಗೆ ಮತ್ತು ಇದಕ್ಕೆ ಬೇಕಾದ ಮೂಲಸೌಕರ್ಯಗಳ ಕಡೆಗೆ ಸರಕಾರದ ನೀತಿಗಳು ಹೆಚ್ಚು ಬೆಂಬಲ ನೀಡಿವೆ. ಹಲವಾರು ಮಾಲಿನ್ಯಕಾರಕ ಮತ್ತು ಅಪಾಯಕಾರಿ ಕೈಗಾರಿಕೆಗಳ ತ್ವರಿತ ಬೆಳವಣಿಗೆಯನ್ನು ಸಹ ಪರಿಶೀಲಿಸಲಾಗಿಲ್ಲ ಮತ್ತು ಇವುಗಳು ಮುಖ್ಯ ನಗರ ಕೇಂದ್ರಗಳಿಂದ ಸ್ವಲ್ಪ ದೂರದಲ್ಲಿದ್ದರೂ ಹೊಗೆ ಮತ್ತು ಮಾಲಿನ್ಯಕಾರಕಗಳು ವಾತಾವರಣವನ್ನು ಸೇರಿಕೊಳ್ಳುವುದನ್ನು ತಪ್ಪಿಸಲಾಗದು.
ದೊಡ್ಡ ನಗರಗಳ ಒಟ್ಟಾರೆ ಅಭಿವೃದ್ಧಿಯಲ್ಲಿ, ಒಂದು ಬದಿಯಲ್ಲಿ ಹಲವಾರು ಕಡೆ ಭ್ರಷ್ಟಾಚಾರವಿದೆ, ಇದು ತಪ್ಪಿಸಬಹುದಾದ ಅನೇಕ ದೊಡ್ಡ ನಿರ್ಮಾಣ ಯೋಜನೆಗಳಿಗೆ ಕಾರಣವಾಗುತ್ತದೆ, ಇದರಿಂದಾಗಿ ಸರಿಯಾದ ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ ಮತ್ತು ಸಾಮಾಜಿಕ ಕಾರ್ಯಗಳಿಗೆ, ನಗರಗಳ ಹಸಿರೀಕರಣಕ್ಕೆ ಅಗತ್ಯ ಬೆಂಬಲ ಸಿಗುತ್ತಿಲ್ಲ. ಅರೆ ನಗರ ಪ್ರದೇಶಗಳು ಅರಣ್ಯೀಕರಣ ಮತ್ತು ಕೃಷಿ ಪರಿಸರ ವಿಜ್ಞಾನಕ್ಕೆ ಬಹಳ ದೊಡ್ಡ ಕೇಂದ್ರಗಳಾಗಬಹುದು, ಪರಿಸರ ಮತ್ತು ಆಹಾರ ಭದ್ರತೆಗೆ ಕೊಡುಗೆ ನೀಡುತ್ತವೆ, ಆದರೆ ಇವು ಕೊಳಕು ಮತ್ತು ಸಾಮಾಜಿಕವಾಗಿ ಕೊಳೆತ ಪ್ರದೇಶಗಳಾಗಲು ಅವಕಾಶ ಮಾಡಿಕೊಟ್ಟಿವೆ. ಇಲ್ಲಿನ ಜನರು ನಿರುದ್ಯೋಗದಲ್ಲಿ ನರಳುತ್ತಿದ್ದರೆ, ಅರೆ ನಗರ ಪ್ರದೇಶಗಳಲ್ಲಿ ಅರಣ್ಯೀಕರಣದ ಹೆಚ್ಚಿನ ಆದ್ಯತೆಯ ಕೆಲಸಗಳನ್ನು ನಿರ್ಲಕ್ಷಿಸಲಾಗಿದೆ. ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳನ್ನು ಹಸಿರಾಗಿಸುವಲ್ಲಿ ಜನರನ್ನು ಏಕೆ ತೊಡಗಿಸಬಾರದು ಎಂಬ ಸಲಹೆಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ.
ಆದ್ದರಿಂದ ನಗರಗಳ ಪರಿಸರದ ರಕ್ಷಣೆ ಮತ್ತು ಪುನರುತ್ಪಾದನೆಯಲ್ಲಿ ಕಾರ್ಮಿಕ ವರ್ಗದ ಜನರನ್ನು ಒಳಗೊಳ್ಳುವುದು ಸಾಧ್ಯವಿದೆ ಎಂಬ ಪ್ರಮುಖ ಸಂಗತಿಯನ್ನೇ ನಿರ್ಲಕ್ಷಿಸಲಾಗಿದೆ. ಬದಲಿಗೆ ಕಾರ್ಮಿಕ ವರ್ಗದ ಜನರನ್ನು ಪರಿಸರವನ್ನು ರಕ್ಷಿಸುವ ವಿಕೃತ ಕ್ರಮಗಳ ಹೆಸರಿನಲ್ಲಿ ಮತ್ತಷ್ಟು ಅಂಚಿಗೆ, ಬಡತನಕ್ಕೆ ತಳ್ಳಲಾಗಿದೆ. ನಗರ ಯೋಜನೆಯಲ್ಲಿ ನ್ಯಾಯದ ಕಾಳಜಿಯೊಂದಿಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನು ಸಂಯೋಜಿಸಲು ಯಾವುದೇ ನೈಜ ಮತ್ತು ಉತ್ತಮ ಚಿಂತನೆಯ ಪ್ರಯತ್ನಗಳು ನಡೆದಿಲ್ಲ. ಇದು ಕಾಣೆಯಾದ ಆಯಾಮವಾಗಿದೆ, ಮಾಲಿನ್ಯವನ್ನು ತಡೆಗಟ್ಟುವ ಮತ್ತು ನಗರಗಳ ಪರಿಸರವನ್ನು ರಕ್ಷಿಸುವ ಪ್ರಯತ್ನಗಳು ಯಶಸ್ವಿಯಾಗದಿರಲು ಇದು ನಿಜವಾದ ಕಾರಣ. ಈ ಪ್ರಶ್ನೆಗಳನ್ನು ಪರಿಶೀಲಿಸುವ ಪ್ರಸಕ್ತ ಮಾದರಿಯು ಅತ್ಯಂತ ನೇರವಾದ ಮತ್ತು ಅತ್ಯುತ್ತಮ ಅಲ್ಪಾವಧಿಯ ಲಾಭಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.
(ಕೃಪೆ: countercurrents.org)