90 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಯೋಜನೆ ರೂಪಿಸಲು ಪ್ರಸ್ತಾವ; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಸಾಧ್ಯತೆ

Update: 2024-02-01 02:40 GMT

Photo: freepik

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರವು ಪೆಟ್ರೋಲ್, ಡೀಸೆಲ್, ಇಥೆನಾಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಲು ಮುಂದಾಗಿದೆ. ಅಲ್ಲದೇ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆಯಲ್ಲಿ ಮರು ವಿನಿಯೋಗದ ಮೂಲಕ ಸಂಪನ್ಮೂಲ ಕ್ರೋಢೀಕರಿಸಲು ಹೊರಟಿದೆ.

ಅಂದಾಜು 90 ಲಕ್ಷ ಅಸಂಘಟಿತ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ಯೋಜನೆಗೆ ಒಳಪಡಿಸಲು ಮುಂದಾಗಿರುವ ಸರಕಾರವು ಇದಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಸಂಪನ್ಮೂಲ ಕ್ರೋಢೀಕರಿಸಲಿದೆ. 

ಇದೇ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಿದ್ದಾರೆ. ಕಾರ್ಮಿಕ ಇಲಾಖೆಯ ಹೊಸ ಯೋಜನೆಗಳ ಪಟ್ಟಿಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಹೇಳಲಾಗಿದೆ. ಇದರ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ರಾಜ್ಯದಲ್ಲಿರುವ ಸುಮಾರು 90 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಕಾರ್ಮಿಕ ಇಲಾಖೆಯು ಹೊಸ ಯೋಜನೆ ರೂಪಿಸಿದೆ. ಈ ಯೋಜನೆ ಅನುಷ್ಠಾನದಿಂದ ರಾಜ್ಯದ ಮೇಲೆ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಕಾರ್ಮಿಕ ಇಲಾಖೆಯು ಹೊಸ ಯೋಜನೆ ಪಟ್ಟಿಯಲ್ಲಿ ಹೇಳಿದೆ. ಆದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಈ ಯೋಜನೆಗೆ ತಗಲುವ ವೆಚ್ಚವನ್ನು ಸರಿದೂಗಿಸಲಿದೆ. ಕಾರ್ಮಿಕ ಇಲಾಖೆಯು ರೂಪಿಸಿರುವ ಈ ಯೋಜನೆಗೆ ಸಚಿವ ಸಂತೋಷ್ ಲಾಡ್ ಅವರು ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

 ಇಲಾಖೆಯ ಪ್ರಸ್ತಾವದಲ್ಲೇನಿದೆ?:

ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರು, ಮೋಟಾರು ಸಾರಿಗೆ ಹಾಗೂ ಇತರ ಕಾರ್ಮಿಕರನ್ನು ಹೊರತುಪಡಿಸಿ ರಾಜ್ಯದಲ್ಲಿ ಅಂದಾಜು ೯೦ ಲಕ್ಷ ಅಸಂಘಟಿತ ಕಾರ್ಮಿಕರಿದ್ದಾರೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ ಅಡಿಯಲ್ಲಿ ಅಪಘಾತ ಪರಿಹಾರ, ಶೈಕ್ಷಣಿಕ ಧನ ಸಹಾಯ, ಹೆರಿಗೆ ಸಹಾಯಧನ, ಶವ ಸಂಸ್ಕಾರ ಧನ ಸಹಾಯ ಒದಗಿಸಲು ಹೊಸ ಯೋಜನೆ ರೂಪಿಸುವ ಮೂಲಕ ಸಮಗ್ರ ಯೋಜನೆ ರೂಪಿಸಲು ಪ್ರಸ್ತಾಪಿಸಲಾಗಿದೆ.

 ರಾಜ್ಯಾದ್ಯಂತ ಮಾರಾಟವಾಗುವ ಪೆಟ್ರೋಲ್, ಡೀಸೆಲ್, ಇಥೆನಾಲ್ ಸೇರಿ ಪೆಟ್ರೋಲಿಯಂ ಇನ್ನಿತರ ಉತ್ಪನ್ನಗಳ ಮೇಲೆ ಪ್ರತೀ ಲೀಟರ್‌ಗೆ 1 ರೂ.ನಷ್ಟು ಸೆಸ್ ವಿಧಿಸುವ ಮೂಲಕ ಸಂಪನ್ಮೂಲ ಕ್ರೋಢೀಕರಿಸಲು ಉದ್ದೇಶಿಸಿದೆ. ಆದ್ದರಿಂದ ಸರಕಾರದ ಮೇಲೆ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಕಾರ್ಮಿಕ ಇಲಾಖೆಯು ಹೊಸ ಯೋಜನೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಪೆಟ್ರೋಲಿಯಂ ಇನ್ನಿತರ ಉತ್ಪನ್ನಗಳ ಮೇಲೆ ಪ್ರತೀ ಲೀಟರ್‌ಗೆ 1 ರೂ.ನಷ್ಟು ಸೆಸ್ ವಿಧಿಸಿದರೆ ವರ್ಷಕ್ಕೆ ಸುಮಾರು ೨,೦೦೦ ಕೋಟಿ ರೂ. ಆದಾಯ ಕ್ರೋಢೀಕರಣವಾಗಲಿದೆ ಎಂದು ಅಧಿಕಾರಿಗಳು ಮೌಖಿಕವಾಗಿ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.

 ಅದೇ ರೀತಿ ಈ ಸೌಲಭ್ಯಗಳಿಗೆ ಹಣ ಹೊಂದಿಸಲು ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆಗೂ ಸರಕಾರವು ಕೈ ಹಾಕಿದೆ. ಸ್ಥಳೀಯ ಸಂಸ್ಥೆಗಳು ಈಗಾಗಲೇ ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆಯನ್ನು ಮರು ವಿನಿಯೋಗ ಮಾಡುವ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ದಾರಿ ಹುಡುಕಿಕೊಂಡಿದೆ.

2024ರ ಮೊದಲಾರ್ಧದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಕೇಂದ್ರ ಸರಕಾರವು ಪ್ರತೀ ಲೀಟರ್‌ಗೆ 4 ರಿಂದ 6 ರೂ.ವರೆಗೆ ಬೆಲೆ ಇಳಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ತೈಲ ಮಾರುಕಟ್ಟೆ ಕಂಪೆನಿಗಳೊಂದಿಗೆ ಚರ್ಚೆ ಮುಂದುವರಿಸಿದೆ. ಬೆಲೆ ಕಡಿತದ ಸಮಾನ ಹೊರೆಯನ್ನು ಸರಕಾರ ಮತ್ತು ಒಎಂಸಿಗಳಿಗೆ ವಹಿಸುವ ಪ್ರಸ್ತಾವವೂ ಸಲ್ಲಿಕೆಯಾಗಿದೆ ಎಂದು ಗೊತ್ತಾಗಿದೆ.

 ಪ್ರತೀ ಲೀಟರ್‌ಗೆ 10 ರೂ.ವರೆಗೆ ಹೆಚ್ಚಿನ ಬೆಲೆ ಕಡಿತಗೊಳಿಸಬಹುದು. ಇಂಧನ ಬೆಲೆ ಕಡಿತವು ಮೂರು ತಿಂಗಳು ಗರಿಷ್ಠ ಶೇ.5.55ಕ್ಕೆ ಏರಿದರೆ ಚಿಲ್ಲರೆ ಹಣದುಬ್ಬರವನ್ನು ತಗ್ಗಿಸುತ್ತದೆ. ಕಳೆದ ಮೂರು ತಿಂಗಳಿನಿಂದ ಕಚ್ಚಾ ತೈಲ ಬೆಲೆ ಪ್ರತೀ ಬ್ಯಾರೆಲ್‌ಗೆ 70-80 ಡಾಲರ್‌ಗಳ ವ್ಯಾಪ್ತಿಯಲ್ಲಿ ತೂಗಾಡುತ್ತಿದೆ. ಹೀಗಾಗಿ ಕೇಂದ್ರ ಸರಕಾರವು ಇಂಧನ ಬೆಲೆ ಕಡಿತದ ಪರವಾಗಿದೆ ಎಂದು ಹೇಳಲಾಗುತ್ತಿದೆ. 

ನವೆಂಬರ್ 2021 ಮತ್ತು ಮೇ 2022 ರಲ್ಲಿ ಎರಡು ಕಂತುಗಳಲ್ಲಿ ಕ್ರಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತೀ ಲೀಟರ್‌ಗೆ ಒಟ್ಟು 13 ರೂ. ಮತ್ತು 16 ರೂ.ನಷ್ಟು ಕಡಿಮೆ ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News