ಭಾರತದ ಸೈದ್ಧಾಂತಿಕ ನಂಬಿಕೆಗಳನ್ನು ಮುನ್ನಡೆಸುವ ಶಕ್ತಿಯ ಸುಳಿವು ನೀಡಿದ ರಾಹುಲ್ ಮಾತು
‘‘ನಾವು ಜನಸಾಮಾನ್ಯರ ಮಾತುಗಳನ್ನು ಕೇಳಬೇಕಾದರೆ, ಮೊದಲು ನಮ್ಮ ದುರಹಂಕಾರವನ್ನು ಬಿಡಬೇಕು. ಹಾಗೆ ಮಾಡಿದಾಗ ಮಾತ್ರವೇ ನಾವು ಜನರ ಧ್ವನಿಯನ್ನು ಕೇಳಲು ಸಾಧ್ಯವಾಗುತ್ತದೆ ಮತ್ತು ನಾವು ದುರಹಂಕಾರ ಮತ್ತು ದ್ವೇಷವನ್ನು ಬಿಟ್ಟು ಜನರ ಧ್ವನಿಯನ್ನು ಕೇಳಿಸಿಕೊಳ್ಳಬೇಕಾಗಿದೆ’’ ಎಂಬ ರಾಹುಲ್ ಮಾತು, ಇವತ್ತಿಗೆ ಬೇಕಿರುವ ಹೃದಯವಂತ ರಾಜಕಾರಣದ ಮುನ್ನುಡಿಯಂತಿದೆ.
- ಅಜಯ್ ಆಶೀರ್ವಾದ್ ಮಹಾಪ್ರಾಶಸ್ತ
ಕಳೆದ ತಿಂಗಳು ಬೆಂಗಳೂರಿನಲ್ಲಿ 26 ರಾಜಕೀಯ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಎಂದು ಹೆಸರಿಟ್ಟವು. ಅದು ಕೇವಲ ಆಕರ್ಷಕ ಹೆಸರೆಂಬುದಕ್ಕಿಂತ ಹೆಚ್ಚಿನದ್ದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರಾಜಕೀಯ ಸ್ಪರ್ಧೆಗಳು ಯುದ್ಧ ಸ್ವರೂಪದಲ್ಲಿ ಮಾರ್ಪಟ್ಟಿರುವುದರಿಂದ, ‘ಇಂಡಿಯಾ’ ಒಕ್ಕೂಟದ ಸುತ್ತಲಿನ ಚರ್ಚೆಗಳು ಅದರ ಹೆಸರಿಗೆ ಸೀಮಿತವಾಗಿವೆ ಮತ್ತು ಅದು ಬಿಜೆಪಿಯ ಕಣ್ಣು ಕುಕ್ಕತೊಡಗಿದೆ.
ಮುಂಗಾರು ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವೌನದ ವಿರುದ್ಧ ಈ ಪಕ್ಷಗಳು ಒಗ್ಗಟ್ಟಿನ ಹೋರಾಟ ತೋರಿಸಿದ್ದು ಕೂಡ, ಸೈದ್ಧಾಂತಿಕವಾಗಿ ಅವು ಸಾಕಷ್ಟು ಭಾರ ಹೊರಲು ಬದ್ಧವಾಗಿರುವುದನ್ನು ಸ್ಪಷ್ಟಪಡಿಸಿತು.
ರಾಹುಲ್ ಗಾಂಧಿ ಸಂಸತ್ ಸದಸ್ಯರಾಗಿ ಮರುಸೇರ್ಪಡೆಯಾದ ನಂತರ ಆಗಸ್ಟ್ 9ರಂದು ಮಾಡಿದ ಮೊದಲ ಭಾಷಣ ಒಂದು ಮಹತ್ವದ ವಿದ್ಯಮಾನ. ಅವರು ಕೇವಲ ಕಾಂಗ್ರೆಸ್ ನಾಯಕರಾಗಿ ಮಾತನಾಡಲಿಲ್ಲ. ಬದಲಿಗೆ, ಭಾರತದ ಸೈದ್ಧಾಂತಿಕ ನಂಬಿಕೆಗಳನ್ನು ಮುನ್ನಡೆಸುವ ಮೈತ್ರಿಕೂಟದ ನಾಯಕರಾಗಿ ಮಾತನಾಡಿದರು.
ಅವರ 37 ನಿಮಿಷಗಳ ಭಾಷಣ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಹೇಳಿಕೊಳ್ಳುವ ಬಿಜೆಪಿ ಮೇಲಿನ ದಾಳಿಯಾಗಿತ್ತು. ಭಾರತೀಯ ಪಕ್ಷಗಳು ‘ಇಂಡಿಯಾ’ವನ್ನು ವೈವಿಧ್ಯಮಯ ಮತ್ತು ಸಮಾನ ಧ್ವನಿಗಳ ಒಕ್ಕೂಟವೆಂದು ಹೇಗೆ ಪರಿಗಣಿಸುತ್ತವೆ ಎಂಬುದನ್ನೂ, ಆದರೆ ಮೋದಿ ಸರಕಾರದ ನಿರ್ಧಾರಗಳು ಕಾರ್ಪೊರೇಟ್ ಹಿತಾಸಕ್ತಿಗಳಿಂದ ಹೇಗೆ ಹೆಚ್ಚಾಗಿ ನಿಯಂತ್ರಿಸಲ್ಪಟ್ಟಿವೆ ಎಂಬುದನ್ನೂ ರಾಹುಲ್ ವಿವರಿಸಿದರು.
ಭಾಷಣದ ಪ್ರತೀ ಹಂತದಲ್ಲೂ ರಾಹುಲ್, ಕಳೆದ ಕೆಲವು ದಿನಗಳಿಂದ ‘ಇಂಡಿಯಾ’ ಕೂಟದ ಪಕ್ಷಗಳು ಎದುರಿಸುತ್ತಿರುವ ಟೀಕೆಗಳ ಸುರಿಮಳೆಗೆ ಉತ್ತರಿಸಿದರು.
‘ಇಂಡಿಯಾ’ ಕೂಟವನ್ನು ಅಪಹಾಸ್ಯ ಮಾಡಿದ್ದ ಮೋದಿ, ಅದನ್ನು ‘ಇಂಡಿಯಾ’ ಎಂದು ಕರೆಯುವ ಬದಲು ‘ಘಮಂಡಿಯಾ’ (ಅಹಂಕಾರಿ) ಎಂದು ಕರೆಯಬೇಕು ಎಂದು ಹೇಳಿದ್ದರು.
ಮಣಿಪುರ ಹಿಂಸಾಚಾರದ ಬಗೆಗೆ ಪ್ರಧಾನಿಯ ವೌನದ ಬಗ್ಗೆ ನೆನಪಿಸುವ ಮೂಲಕ ರಾಹುಲ್, ಪ್ರಧಾನಿಗೂ ಪ್ರತಿಕ್ರಿಯಿಸಿದರು, ಪ್ರಧಾನಿಯ ವೌನವನ್ನು ರಾಹುಲ್, ಅಹಂಕಾರವಲ್ಲದೆ ಬೇರೇನೂ ಅಲ್ಲ ಎಂದರು. ಭಾರತ್ ಜೋಡೊ ಯಾತ್ರೆ ತಮಗೆ ಒಂದು ವಿನಮ್ರ ಅನುಭವವಾಗಿತ್ತು ಎಂಬುದರ ಕುರಿತು ಅವರು ಮಾತನಾಡಿದರು. ಯಾತ್ರೆಯಲ್ಲಿನ ಅಂಚಿನಲ್ಲಿರುವ ಮಹಿಳೆಯರು ಮತ್ತು ವಂಚಿತ ರೈತರೊಂದಿಗಿನ ಭೇಟಿಯಲ್ಲಿ ಅವರ ಅನುಭವಗಳು, ಅವರ ದುಃಖ, ಅವರ ಸಮಸ್ಯೆಗಳು ಮತ್ತು ಅವರ ಅಸಹಾಯಕತೆ ಮತ್ತು ಅದು ಅವರ ಅಹಂಕಾರವನ್ನು ಹೇಗೆ ಹತ್ತಿಕ್ಕಿತು ಎಂಬುದನ್ನು ಅವರು ನೆನಪಿಸಿಕೊಂಡರು.
‘‘ನಾವು ಅವರ ಮಾತುಗಳನ್ನು ಕೇಳಬೇಕಾದರೆ, ಮೊದಲು ನಮ್ಮ ದುರಹಂಕಾರವನ್ನು ಬಿಡಬೇಕು. ಹಾಗೆ ಮಾಡಿದಾಗ ಮಾತ್ರವೇ ನಾವು ಜನರ ಧ್ವನಿಯನ್ನು ಕೇಳಲು ಸಾಧ್ಯವಾಗುತ್ತದೆ ಮತ್ತು ನಾವು ದುರಹಂಕಾರ ಮತ್ತು ದ್ವೇಷವನ್ನು ಬಿಟ್ಟು ಜನರ ಧ್ವನಿಯನ್ನು ಕೇಳಿಸಿಕೊಳ್ಳಬೇಕಾಗಿದೆ’’ ಎಂಬ ರಾಹುಲ್ ಅವರ ಮಾತು ಮುಖ್ಯವಾದುದಾಗಿತ್ತು. ಮೋದಿ ಆ ಧ್ವನಿಯನ್ನು ಕೊಂದಿದ್ದಾರೆ ಮತ್ತು ಮಣಿಪುರ ಮತ್ತು ಹರ್ಯಾಣದಲ್ಲಿ ಭಾರತ ಮಾತೆಯನ್ನು ಕೊಲ್ಲಲಾಗಿದೆ ಎಂದು ರಾಹುಲ್ ಆರೋಪಿಸಿದರು.
‘‘ಮಣಿಪುರದಿಂದ ಹರ್ಯಾಣದವರೆಗೆ ಸೀಮೆಎಣ್ಣೆ ಎರಚುವ ಮೂಲಕ ಬಿಜೆಪಿಯು ಭಾರತ ಮತ್ತು ಅದರ ಧ್ವನಿಗೆ ಬೆಂಕಿ ಹಚ್ಚಿದೆ’’ ಎಂದು ಅವರು ಹೇಳಿದರು. ‘ಇಂಡಿಯಾ’ ವಿರುದ್ಧದ ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿದ ರಾಹುಲ್, ಕೇಸರಿ ಪಕ್ಷದ ನಾಯಕರು ದೇಶದ್ರೋಹಿಗಳು ಎಂದರು. ‘ಇಂಡಿಯಾ’ ಬಿಜೆಪಿಯ ತೋಳ್ಬಲ ಮತ್ತು ಹಿಂದೂ ಬಹುಸಂಖ್ಯಾತ ರಾಷ್ಟ್ರೀಯತೆಯ ವಿರುದ್ಧ ಪ್ರತಿಪಕ್ಷಗಳು ಪ್ರತಿಪಾದಿಸುವ ರಾಷ್ಟ್ರೀಯತೆಯ ಅಂತರ್ಗತ ಸ್ವರೂಪವನ್ನು ಕಾಣಿಸುವ ಸ್ಪಷ್ಟ ಪ್ರಯತ್ನ ಎಂದು ರಾಹುಲ್ ಹೇಳಿದರು.
‘‘ಇತ್ತೀಚೆಗಷ್ಟೇ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಸಿಪಿಐ(ಎಂ) ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದರು, ಅವರು ಕಾಂಗ್ರೆಸ್ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು’’ ಎಂದೂ ರಾಹುಲ್ ಹೇಳಿದರು.
ಅದಾನಿ ಸಮೂಹದೊಂದಿಗಿನ ಮೋದಿ ಸಂಬಂಧಕ್ಕಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ಮೋದಿ ನಾಯಕತ್ವದಲ್ಲಿ ಹೇಗೆ ಕ್ರೋನಿಸಂ ವ್ಯಾಪಕವಾಗಿದೆ ಎಂಬುದನ್ನು ವಿವರಿಸಿದರು. ‘ಇಂಡಿಯಾ’ ಪಕ್ಷಗಳ ಅವಿಶ್ವಾಸ ನಿರ್ಣಯ ಬಡವರ ಮಗನ ಮೇಲಿನ ದಾಳಿಯಾಗಿದೆ ಎಂಬ ಬಿಜೆಪಿಯ ಟೀಕೆಗೆ ಅದು ರಾಹುಲ್ ಪ್ರತಿಕ್ರಿಯೆಯಾಗಿತ್ತು.
‘‘ರಾವಣ, ಮೇಘನಾದ ಮತ್ತು ಕುಂಭಕರ್ಣ ಇಬ್ಬರ ಮಾತನ್ನೂ ಕೇಳುತ್ತಾನೆ. ಅದೇ ರೀತಿ ಮೋದಿ ಕೂಡ ಅಮಿತ್ ಶಾ ಮತ್ತು ಗೌತಮ್ ಅದಾನಿ ಮಾತುಗಳನ್ನು ಕೇಳುತ್ತಾರೆ. ಹನುಮಂತ ಲಂಕೆಗೆ ಬೆಂಕಿ ಹಚ್ಚಲಿಲ್ಲ. ರಾವಣನ ದುರಹಂಕಾರದಿಂದ ಬೆಂಕಿ ಹೊತ್ತಿಕೊಂಡಿತು’’ ಎಂದು ರಾಹುಲ್ ಹೇಳಿದರು, ಒಂದಿಡೀ ರಾಜ್ಯದ ಜನತೆ ಅತ್ಯಂತ ಕೆಟ್ಟ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಮಣಿಪುರಕ್ಕೆ ಭೇಟಿ ನೀಡದಂತೆ ಮೋದಿಯ ಅಹಂಕಾರವೇ ಅವರನ್ನು ತಡೆಯಿತು ಎಂದು ಹೇಳಿದರು.
‘‘ನೀವು ದೇಶ ವಿರೋಧಿಗಳು, ನೀವು ದೇಶಭಕ್ತರಾಗಲು ಸಾಧ್ಯವಿಲ್ಲ, ನೀವು ದೇಶ ಪ್ರೇಮಿಯಾಗಲು ಸಾಧ್ಯವಿಲ್ಲ. ನೀವು ಭಾರತವನ್ನು ಕೊಂದಿದ್ದೀರಿ’’ ಎಂದು ರಾಹುಲ್ ಟೀಕಿಸಿದರು.
ತಮ್ಮ ಬಹು ಪದರದ ಭಿನ್ನಾಭಿಪ್ರಾಯಗಳ ನಡುವೆಯೂ ಸಾಮಾನ್ಯ ಕಾರ್ಯಸೂಚಿಯಲ್ಲಿ ಒಗ್ಗೂಡಲು ನಿರ್ಧರಿಸಿದ ನಂತರ ವಿಪಕ್ಷ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂಬ ಹೆಸರು ಇಡಲಾಯಿತು. ಪರಸ್ಪರ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಪ್ರಜಾಸತ್ತಾತ್ಮಕವಾಗಿ ನಡೆಯಲು ಮತ್ತು ಸಂವಿಧಾನದ ಮೇಲಿನ ಬಿಜೆಪಿಯ ಆಕ್ರಮಣವನ್ನು ಎದುರಿಸಲು ಪ್ರತಿಪಕ್ಷಗಳು ಒಂದಾಗಿವೆ ಎಂದು ರಾಹುಲ್ ಪ್ರತಿಪಾದಿಸಿದರು.
‘‘ನಮ್ಮ ಹೋರಾಟ ಬಿಜೆಪಿಯ ಸಿದ್ಧಾಂತ ಮತ್ತು ಅದರ ಚಿಂತನೆಯ ವಿರುದ್ಧವಾಗಿದೆ. ದೇಶ ಆಕ್ರಮಣಕ್ಕೊಳಗಾಗಿರುವುದರಿಂದ ನಾವು ನಮ್ಮ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಸಿದ್ದೇವೆ. ಈ ಹೋರಾಟ ಎರಡು ರಾಜಕೀಯ ಮೈತ್ರಿಕೂಟಗಳ ನಡುವೆ ಅಲ್ಲ, ಬದಲಾಗಿ ದೇಶದ ಎರಡು ವಿಭಿನ್ನ ವಿಚಾರಗಳ ನಡುವಿನ ಹೋರಾಟ ಎಂಬುದರ ಅರಿವು ನಮಗಿದೆ’’ ಎಂದರು.
ಮುಂಗಾರು ಅಧಿವೇಶನ ಪ್ರತಿಪಕ್ಷ ಮೈತ್ರಿಕೂಟಕ್ಕೆ ಒಗ್ಗಟ್ಟಿನ ಸೈದ್ಧಾಂತಿಕ ಪ್ರತಿಪಾದನೆಯನ್ನು ತೋರಿಸಲು ಮೊದಲ ನಿಜವಾದ ಪರೀಕ್ಷೆಯಾಗಿದೆ. ಅಧಿವೇಶನದ ಅವಧಿಯುದ್ದಕ್ಕೂ, ಪ್ರತಿಪಕ್ಷ ನಾಯಕರು ಸಮನ್ವಯಗೊಂಡ, ಕಾರ್ಯನಿರ್ವಹಿಸಿದ ಮತ್ತು ಏಕರೂಪಿ ನಿಲುವು ಪ್ರದರ್ಶಿಸಿದ ಬಗೆಯಲ್ಲಿ ಈ ಮೈತ್ರಿಕೂಟ ಒಂದು ಸ್ಪಷ್ಟ ಮತ್ತು ಗಟ್ಟಿಯಾದ ಆಕಾರವನ್ನು ಪಡೆದುಕೊಂಡಿದೆ ಎಂದರು.
ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬೇಕೇ ಎಂಬ ಬಗ್ಗೆ ಕೆಲವು ಚರ್ಚೆಗಳ ಹೊರತಾಗಿಯೂ, ಒಮ್ಮೆ ಅವರು ಸದನಗಳಲ್ಲಿ ಒಟ್ಟಾಗಿ ನಿಲ್ಲಬಹುದು ಎಂದು ನಿರ್ಧರಿಸಲಾಯಿತು ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ವಿಚಾರ.
ರಾಹುಲ್ ಅವರ ಭಾಷಣ ಬಿಜೆಪಿ ಮತ್ತು ಪ್ರಧಾನಿಯನ್ನು ಆಕ್ರಮಣಕಾರಿಯಾಗಿ ಎದುರಿಸಲು ಪ್ರತಿಪಕ್ಷ ಒಕ್ಕೂಟ ನಿರ್ಧರಿಸಿದೆ ಎಂಬುದನ್ನು ತೋರಿಸಿತು. ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷವೇ ಇಲ್ಲವಾಗಿದೆ ಎಂದೇ ಹಲವರು ಭಾವಿಸಿದ್ದ ಹೊತ್ತಿನಲ್ಲಿ ಇದು ಮಹತ್ವದ ಬೆಳವಣಿಗೆ.
ಲೋಕಸಭೆ ಚುನಾವಣೆಯಲ್ಲಿನ ಪಾತ್ರ ಮತ್ತು ಜವಾಬ್ದಾರಿಗಳನ್ನು ಕುರಿತು ಚರ್ಚಿಸಿ ನಿರ್ಣಯಕ್ಕೆ ಬರಲು ಪ್ರತಿಪಕ್ಷಗಳು ಮುಂಬೈನಲ್ಲಿ ಸಭೆ ಸೇರಲಿವೆ. ಅಂತರ್ಗತ, ಪುನರ್ವಿತರಣಾ ರಾಷ್ಟ್ರೀಯತೆಯ ಕಲ್ಪನೆಯನ್ನು ಪ್ರತಿಪಾದಿಸುವ ಮೂಲಕ ತನ್ನ ಪ್ರಧಾನ ಸ್ಥಾನವನ್ನು ಮರಳಿ ಪಡೆಯುವುದು ಪ್ರತಿಪಕ್ಷ ಒಕ್ಕೂಟದ ಪ್ರಯತ್ನವಾಗಿದೆ.
2024 ರ ಲೋಕಸಭಾ ಚುನಾವಣೆ ರಾಹುಲ್ ಘೋಷಿಸಿದಂತೆ ಭಾರತದ ಎರಡು ವಿಭಿನ್ನ ವಿಚಾರಗಳ ನಡುವಿನ ಹೋರಾಟವಾಗಿಯೇ ಪರಿಣಮಿಸುವ ಹಾಗೆ ಕಾಣಿಸುತ್ತಿದೆ.
ಕೃಪೆ:thewire.in