ಆದೇಶ ಉಲ್ಲಂಘಿಸಿ ಪ್ರತ್ಯೇಕ ಪ್ರವೇಶ ಪರೀಕ್ಷೆ ಕೌನ್ಸೆಲಿಂಗ್; ಖಾಸಗಿ ವಿವಿಗಳ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರದ ಹಿಂದೇಟು

Update: 2023-11-27 06:17 GMT

Photo: Freepik

ಬೆಂಗಳೂರು, ನ.26: ಸರ್ವೋಚ್ಛ ನ್ಯಾಯಾಲಯ ಮತ್ತು ರಾಜ್ಯ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಪ್ರತ್ಯೇಕ ಪ್ರವೇಶ ಪರೀಕ್ಷೆ ಮತ್ತು ಕೌನ್ಸೆಲಿಂಗ್ ನಡೆಸಿರುವ ಪಿಇಎಸ್ ಸೇರಿದಂತೆ ಖಾಸಗಿ ವಿಶ್ವವಿದ್ಯಾನಿಲಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರವೇಶ ಮೇಲ್ವಿಚಾರಣೆ ಸಮಿತಿ ಬರೆದಿದ್ದ ಪತ್ರವನ್ನಾಧರಿಸಿ ಕೈಗೊಂಡಿರುವ ಕ್ರಮಗಳ ಕುರಿತಾದ ಮಾಹಿತಿಯನ್ನು ಈಗಿನ ಕಾಂಗ್ರೆಸ್ ಸರಕಾರವು ಮುಚ್ಚಿಡಲು ಹವಣಿಸುತ್ತಿದೆ.

ಹಿಂದಿನ ಇಬ್ಬರು ಮುಖ್ಯಮಂತ್ರಿಗಳಿಗೆ ಶೈಕ್ಷಣಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಡಾ.ಎಂ .ಆರ್.ದೊರೆಸ್ವಾಮಿ ಅವರು ಕುಲಾಧಿಪತಿ ಆಗಿರುವ ಪಿಇಎಸ್ ವಿಶ್ವವಿದ್ಯಾನಿಲಯದ ವಿರುದ್ಧ ದೂರು ದಾಖಲಾಗಿತ್ತು. ಈ ದೂರನ್ನಾಧರಿಸಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ಮನೋಹರ್ ಅಧ್ಯಕ್ಷತೆಯಲ್ಲಿದ್ದ ಪ್ರವೇಶ ಮೇಲ್ವಿಚಾರಣೆ ಸಮಿತಿಯು ಮೂರು ವರ್ಷದ ಹಿಂದೆಯೇ ವರದಿ ನೀಡಿತ್ತು.

ಈ ವರದಿ ಆಧರಿಸಿ ಉನ್ನತ ಶಿಕ್ಷಣ ಇಲಾಖೆಯು ಯಾವ ಕ್ರಮ ಕೈಗೊಂಡಿದೆ ಎಂದು "The-file.in" 2023ರ ಸೆ.14ರಂದು ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯಲ್ಲಿ ಪ್ರವೇಶ ಮೇಲ್ವಿಚಾರಣೆ ಸಮಿತಿಯು ಬರೆದಿದ್ದ ಪತ್ರ, ಸಂಖ್ಯೆ ಮತ್ತು ದಿನಾಂಕವನ್ನು ನಿರ್ದಿಷ್ಟವಾಗಿ ನಮೂದಿಸಲಾಗಿತ್ತು.

ಆದರೆ ಉನ್ನತ ಶಿಕ್ಷಣ ಇಲಾಖೆಯು 2023ರ ಸೆ.29 ರಂದು ನೀಡಿರುವ ಉತ್ತರವು, ಮೂಲ ಅರ್ಜಿಯಲ್ಲಿ ನಿರ್ದಿಷ್ಟವಾಗಿ ಮಾಹಿತಿ ಕೋರಲಾಗಿದ್ದರೂ ‘ನಿರ್ದಿಷ್ಟವಾಗಿ ಮಾಹಿತಿ/ದಾಖಲೆಯನ್ನು ಕೋರಿರುವುದಿಲ್ಲ’ ಎಂದು ಹಿಂಬರಹ ನೀಡಿದೆ.

ಉನ್ನತ ಶಿಕ್ಷಣ ಇಲಾಖೆಯು ಒದಗಿಸಿರುವ ದಾಖಲೆಗಳ ಪ್ರಕಾರ 2023ರ ಜೂನ್ 16ವರೆಗೆ ಕಡತ ಚಲನೆಯಲ್ಲಿದೆ. ಆದರೆ ಪಿಇಎಸ್ ವಿಶ್ವವಿದ್ಯಾನಿಲಯದ ವಿರುದ್ಧ ನೋಟಿಸ್ ಕೂಡ ನೀಡದೇ ಇರುವುದು ಸೇರಿದಂತೆ ಯಾವುದೇ ಕ್ರಮ ವಹಿಸಿರುವ ಬಗ್ಗೆ ದಾಖಲೆಗಳು ಕಡತದಲ್ಲಿ ಕಂಡು ಬಂದಿಲ್ಲ.

ಪಿಇಎಸ್ ವಿಶ್ವವಿದ್ಯಾನಿಲಯವು ಬಿ ಟೆಕ್ ಕೋರ್ಸ್‌ಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿ 2020ರ ಸೆಪ್ಟಂಬರ್ 18ರಿಂದ 20ವರೆಗೆ ಕೌನ್ಸೆಲಿಂಗ್ ನಡೆಸಿತ್ತು. ಇದು ಸರ್ವೋಚ್ಛ ನ್ಯಾಯಾಲಯ ನೀಡಿದ್ದ ತೀರ್ಪು ಮತ್ತು ರಾಜ್ಯ ಸರಕಾರ ಹೊರಡಿಸಿದ್ದ ಆದೇಶಗಳ ಉಲ್ಲಂಘನೆಯಾಗಿತ್ತು. ಈ ಕುರಿತು ಪ್ರವೇಶ ಮೇಲ್ವಿಚಾರಣೆ ಸಮಿತಿಯು ಪಿಇಎಸ್ ವಿಶ್ವವಿದ್ಯಾನಿಲಯದ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸಿತ್ತು ಎಂಬ ಅಂಶವನ್ನು ಕಡತದ ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಲಾಗಿತ್ತು.

ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶ ಮತ್ತು ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳು (ಪ್ರವೇಶ, ನಿಯಂತ್ರಣ ಮತ್ತು ಶುಲ್ಕ ನಿಗದಿ) ಅಧಿನಿಯಮ 2006ರ ಕಲಂ 04 ಅನ್ವಯ ಒಂದೇ ರೀತಿಯ ವೃತ್ತಿಪರ ಶಿಕ್ಷಣವನ್ನು ನೀಡುತ್ತಿರುವ ಎಲ್ಲಾ ವೃತ್ತಿಪರ ಶಿಕ್ಷಣ ಸಂಸ್ಥೆಗಳು (ಎಲ್ಲಾ ಖಾಸಗಿ ಅನುದಾನ ರಹಿತ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಹಾಗೂ ಎಲ್ಲಾ ಖಾಸಗಿ ವಿಶ್ವವಿದ್ಯಾನಿಲಯಗಳು, ಡೀಮ್ಡ್ ವಿಶ್ವವಿದ್ಯಾನಿಲಯ) ಒಟ್ಟಾಗಿ ಸೇರಿಕೊಂಡು ಪಾರದರ್ಶಕತೆ ಮತ್ತು ಅರ್ಹತೆ ಪೂರೈಸಲು ವೃತ್ತಿ ಪರ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕೋರ್ಸ್‌ಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಬೇಕು. ಕೇಂದ್ರೀಕೃತ ಸಮಾಲೋಚನೆ ಅಥವಾ ಏಕ ಗವಾಕ್ಷಿ ವ್ಯವಸ್ಥೆ ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರವೇಶಾತಿ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಇದರಲ್ಲಿ ಕಾಮೆಡ್ ಕೆ ಕೋಟಾ, ಕೆಆರ್‌ಎಲ್‌ಎಂಪಿಸಿಎ ಕೋಟಾ, ಮ್ಯಾನೇಜ್ಮೆಂಟ್ ಕೋಟಾ, ಖಾಸಗಿ ಡೀಮ್ಡ್ ವಿವಿ ಸೀಟುಗಳು, ಖಾಸಗಿ ವಿಶ್ವವಿದ್ಯಾನಿಲಯದ ಸೀಟುಗಳು ಒಳಗೊಂಡಿದ್ದವು.

ಆದರೆ, ಪಿಇಎಸ್ ವಿವಿಯು ಸರ್ವೋಚ್ಛ ನ್ಯಾಯಾಲಯ ಮತ್ತು ರಾಜ್ಯ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿತ್ತು.

ಅಲ್ಲದೇ ಕೌನ್ಸೆಲಿಂಗ್ ಪ್ರಕ್ರಿಯೆಯನ್ನೂ ನಡೆಸಿತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News