ವರದಿ ಸಲ್ಲಿಕೆಯಾಗಿ 8 ತಿಂಗಳಾದರೂ ಮಂಡನೆಯಾಗದ ಅನಾಥ ಮಕ್ಕಳ ಮೀಸಲಾತಿ

Update: 2023-10-18 03:28 GMT

ಬೆಂಗಳೂರು, ಅ.18: ರಾಜ್ಯದಲ್ಲಿರುವ ಅನಾಥ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಶೇ.1ರಷ್ಟು ಮೀಸಲಾತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಮಾರ್ಚ್ ತಿಂಗಳಲ್ಲಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ಎಂಟು ತಿಂಗಳು ಕಳೆದರೂ ಸಚಿವ ಸಂಪುಟ ಸಭೆಯಲ್ಲಿ ಅದನ್ನು ಮಂಡಿಸುವಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ವಿಫಲರಾಗಿರುವುದು ಬೆಳಕಿಗೆ ಬಂದಿದೆ.

ವಿಕಲಚೇತನರಿಗೆ ಮೀಸಲಾತಿಯನ್ನು ಅಳವಡಿಸಿರುವಂತೆ ಅನಾಥ ಮಕ್ಕಳಿಗೂ ಪ್ರತ್ಯೇಕ ಮೀಸಲಾತಿ ನೀಡಬಹುದು ಅಥವಾ ತೆಲಂಗಾಣ ಸರಕಾರದ ಮಾದರಿಯಲ್ಲಿ ಪ್ರವರ್ಗ-1ರಲ್ಲಿ ಮೀಸಲಾತಿಯನ್ನು ನೀಡಬಹುದು ಅಥವಾ ಎಲ್ಲ ವರ್ಗಗಳಲ್ಲಿ ಶೇ.1ರಷ್ಟು ಒಳ ಮೀಸಲಾತಿಯನ್ನು ಅಳವಡಿಸಬಹುದು ಎಂದು ಆಯೋಗವು ಸರಕಾರಕ್ಕೆ ವರದಿ ನೀಡಿದೆ.

ಸರಕಾರವು ಜಾತಿಯಿಲ್ಲದ ಅನಾಥ ಮಕ್ಕಳಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರವರ್ಗ-1ರಡಿ ಶೇ.1ರಷ್ಟು ಮೀಸಲಾತಿಯನ್ನು ಕಲ್ಪಿಸಬಹುದಾಗಿದೆ ಎಂದು ಶಿಫಾರಸು ಮಾಡಿದೆ.

ಇದಕ್ಕೆ ಪ್ರವರ್ಗ-1ರಲ್ಲಿರುವ ಜಾತಿಗಳು ವಿರೋಧ ವ್ಯಕ್ತಪಡಿಸುತ್ತಿವೆ. ಹಾಗೆಯೇ ಜಾತಿಯಿಲ್ಲದ ಮಗು 18 ವರ್ಷ ತುಂಬಿದ ನಂತರ ಯಾವುದೇ ವಯಸ್ಸಿನಲ್ಲಿ ತನ್ನ ಜಾತಿಯನ್ನು ಸ್ವಯಂ ಘೋಷಿಸಲು ಅನುಕೂಲವಾಗುವಂತೆ ಕಾಯ್ದೆಯನ್ನು ರೂಪಿಸಬೇಕು. ಸ್ವಯಂ ಘೋಷಿತ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವ ಪ್ರಾಧಿಕಾರವು(ತಹಶೀಲ್ದಾರ್) ಪ್ರಮಾಣ ಪತ್ರ ನೀಡಲು ಕ್ರಮ ವಹಿಸಬೇಕು ಎಂದು ಆಯೋಗವು ಸೂಚನೆ ನೀಡಿರುವುದು ಗೊಂದಲಗಳಿಗೆ ಕಾರಣವಾಗಿದೆ.

ಮಕ್ಕಳ ರಕ್ಷಣಾ ನಿರ್ದೇಶನಾಲಯವು ಮಕ್ಕಳ ರಕ್ಷಣಾ ಇಲಾಖೆಯು ಅನಾಥ ಮಕ್ಕಳಿಗೆ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಆಯೋಗವು ಶಿಫಾರಸು ಮಾಡಿದೆ. ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ ವರ್ಗ-ಎ ಅಡಿಯಲ್ಲಿ, ಜಾತಿ ಗೊತ್ತಿರುವ ಅನಾಥ ಮಕ್ಕಳಿಗೆ ವರ್ಗ-ಬಿ ಅಡಿಯಲ್ಲಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಸರಕಾರದಿಂದ ಮಾನ್ಯತೆ ಪಡೆದಿರುವ ಸಂಘ ಸಂಸ್ಥೆಗಳಲ್ಲಿ ಅಥವಾ ಅನಾಥಾಲಯದಲ್ಲಿ ಬೆಳೆದ ಮಕ್ಕಳಿಗೆ ಮಾತ್ರ ಅನಾಥ ಮಕ್ಕಳ ಕೋಟಾದಲ್ಲಿ ಮೀಸಲಾತಿಯನ್ನು ಒದಗಿಸಲಾಗುತ್ತಿದೆ.

ಅನಾಥ ಮಕ್ಕಳಿಗೆ ಮೀಸಲಾತಿ ಒದಗಿಸುವ ದೃಷ್ಟಿಯಿಂದ ಆಯೋಗವು ವಿವಿಧ ಜಿಲ್ಲೆಗಳ ಅನಾಥಾಶ್ರಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. 2020ರಿಂದ 2022ರವರೆಗೆ ಕೋವಿಡ್ ಸೇರಿ ಇತರ ಕಾರಣಗಳಿಂದ ರಾಜ್ಯದಲ್ಲಿ 5,280 ಅನಾಥ ಮಕ್ಕಳಿದ್ದಾರೆ. ಇದರಲ್ಲಿ 11 ಪರಿತ್ಯಕ್ತ ಮಕ್ಕಳು, 595 ಅನಾಥ ಮಕ್ಕಳು ಹಾಗೂ 4,674 ಏಕ ಪೋಷಕ ಮಕ್ಕಳಿದ್ದಾರೆ.

ಹಿಂದುಳಿದ ವರ್ಗಗಳ ಪೈಕಿ ಅತಿ ಹಿಂದುಳಿದ ಜಾತಿಗಳು ಪ್ರವರ್ಗ-1 ರಲ್ಲಿದ್ದು, ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿಯನ್ನು ಅಳವಡಿಸಿಲ್ಲ. ಅಸ್ಮಿತೆಯಿಲ್ಲದ 46 ಅಲೆಮಾರಿ, ಅರೆ ಅಲೆಮಾರಿ ಸಮುದಾಯ ಗಳೂ ಈ ವರ್ಗದಲ್ಲಿವೆ. ಈ ಸಮುದಾಯಗಳ ಗುಂಪಿಗೆ ಅನಾಥ ಮಕ್ಕಳ ಜನಸಂಖ್ಯೆಯನ್ನು ಸೇರಿಸುತ್ತಿರುವುದು ದುರಂತದ ವಿಷಯವಾಗಿದೆ.

- ನಾಗರಾಜ್ ಎಚ್.ಸಿ., ವಕೀಲರು ಮತ್ತು ಅಲೆಮಾರಿ

ಬುಡಕಟ್ಟು ಮಹಾಸಭಾ(ರಿ)ದ ರಾಜ್ಯ ಪ್ರಧಾನ ಕಾರ್ಯದರ್ಶಿ

ಅನಾಥ ಮಕ್ಕಳಿಗೆ ಮೀಸಲಾತಿಯನ್ನು ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವರದಿಯನ್ನು ನೀಡಿದೆ. ಆದರೆ ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳೊಂದಿಗೆ ಅಭಿಪ್ರಾಯ ಪಡೆಯಲಾಗು ತ್ತಿದೆ. ಇದು ಸರಕಾರದ ಮಟ್ಟದಲ್ಲಿ ನಡೆಯುತ್ತಿದ್ದು, ಈ ಕುರಿತು ಸಾರ್ವಜನಿಕವಾಗಿ ಮಾಹಿತಿಯನ್ನು ನೀಡಲಾಗುವುದಿಲ್ಲ. ಅಲ್ಲದೆ ಇಂತಿಷ್ಟೇ ನಿಗದಿತ ಅವಧಿಯಲ್ಲಿ ಮೀಸಲಾತಿ ಅನುಷ್ಠಾನ ಮಾಡಬೇಕು ಎಂಬ ನಿಯಮವೇನೂ ಇಲ್ಲ.

- ಹೇಮಲತಾ, ಹಿಂದುಳಿದ ವರ್ಗಗಳ ಇಲಾಖೆಯ ಅಧೀನ ಕಾರ್ಯದರ್ಶಿ

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - -ಅನಿಲ್ ಕುಮಾರ್ ಎಂ.

contributor

Similar News