ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಯಾವುದೇ ಸಂಬಂಧವಿಲ್ಲದ RSS ನಿಮಗೇಕೆ ಗೂಳಿಹಟ್ಟಿಯವರೇ ?
► ಗೂಳಿಹಟ್ಟಿಯ ಈ ಆರೋಪದ ಬಗ್ಗೆ ಬಿಜೆಪಿ ನಾಯಕರ ಮೌನ ಏಕೆ ? ► ರಾಷ್ಟ್ರಪತಿಗಳನ್ನೇ ಬಿಡದೆ ಅವಮಾನಿಸಿದ ಬ್ರಾಹ್ಮಣ್ಯಕ್ಕೆ ಗೂಳಿಹಟ್ಟಿ ಶೇಖರ್ ಯಾವ ಲೆಕ್ಕ ?
ಬೆಳಗಾವಿಯ ಸುವರ್ಣ ಸೌಧದಲ್ಲಿ ಪ್ರತಿದಿನಕ್ಕೆ ಕೋಟಿ ಕೋಟಿ ಖರ್ಚು ಮಾಡಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದೆ. ಬೆಳಗಾವಿ ಅಧಿವೇಶನವೇ ಬಹಳ ಮುಖ್ಯ. ಅದು ನಿರ್ಲಕ್ಷಿಸಲ್ಪಟ್ಟ ಉತ್ತರ ಕರ್ನಾಟಕದ ಜನತೆಯ ಆಶೋತ್ತರಗಳನ್ನು ಈಡೇರಿಸುವ ಭರವಸೆ ನೀಡುವಂತಹ ಅಧಿವೇಶನ. ಅದರಲ್ಲೂ ಈ ಬಾರಿಯಂತೂ ಆ ಅಧಿವೇಶನದಲ್ಲಿ ಚರ್ಚೆ ಮಾಡಲೇಬೇಕಾದ ಹತ್ತು ಹಲವು ಅತ್ಯಂತ ಪ್ರಮುಖ ವಿಷಯಗಳಿವೆ.
ಬರಗಾಲ, ರೈತರ ಸಮಸ್ಯೆ ಸಹಿತ ಆ ಭಾಗದ ಜನರಿಗೆ ಸಂಬಂಧಿಸಿದ ವಿವರವಾಗಿ ಚರ್ಚೆ ಆಗಲೇಬೇಕಾದ ಎಲ್ಲ ವಿಷಯಗಳನ್ನು ಬದಿಗಿಟ್ಟು ವಿಪಕ್ಷ ಬಿಜೆಪಿ ನಿನ್ನೆಯ ಇಡೀ ದಿನವನ್ನು ವಿಷಯವೇ ಅಲ್ಲದ ವಿಷಯಕ್ಕೆ ಹಾಳು ಮಾಡಿ ಹಾಕಿದೆ. ಇದಕ್ಕೆ ಕಾರಣ ಸ್ವತಃ ಬಿಜೆಪಿಯ ಮುಸ್ಲಿಂ ದ್ವೇಷ ಹಾಗು ಇಲ್ಲಿನ ಟಿವಿ ಚಾನಲ್ ಗಳು ಹಾಗು ಹೆಚ್ಚಿನ ಮಾಧ್ಯಮಗಳು ಮಾಡಿರುವ ಮುಸ್ಲಿಂ ದ್ವೇಷಿ ವರದಿಗಾರಿಕೆ
ಯಾಕೆ ಈ ದೇಶದಲ್ಲಿ ಬಿಜೆಪಿ ಮತ್ತು ಅದರ ತುತ್ತೂರಿಯಂತಾಗಿಬಿಟ್ಟಿರುವ ಟಿವಿ ಚಾನಲ್ ಗಳು ಮುಸ್ಲಿಂರನ್ನು ಕಂಡರೇ ಆಗದಷ್ಟು ಉರಿದುಕೊಳ್ಳುತ್ತವೆ?. ಮುಸ್ಲಿಂರಿಗೂ ನ್ಯಾಯ ಸಿಗಬೇಕು ಎಂದು ಮಾತನಾಡಿದರೆ, ಸೌಹಾರ್ದತೆಯಿಂದ ಕೂಡಿದ ಬಾಳ್ವೆಯ ಬಗ್ಗೆ ಮಾತನಾಡಿದರೆ ಇವರಿಗೇಕೆ ಮೈ ಉರಿಯುತ್ತದೆ?. ಮತ್ತೆ ಮತ್ತೆ ಮುಸ್ಲಿಂರನ್ನೇ ಗುರಿಯಾಗಿಸಿ ಇವರು ಹರಡುತ್ತಿರುವ ದ್ವೇಷದ ಹಿಂದಿನ ಉದ್ದೇಶವೇನು?
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಮುಸ್ಲಿಂ ಸಮಾವೇಶ ಉದ್ಘಾಟಿಸಿ ಸಿದ್ದರಾಮಯ್ಯ ಹೇಳಿದ್ದನ್ನು ಸಂಪೂರ್ಣವಾಗಿ ತಿರುಚಿ ಏನೋ ಭಾರೀ ಪ್ರಮಾದವೇ ಆಗಿಹೋಗಿದೆ ಎಂಬಂತೆ ಏರುದನಿಯಲ್ಲಿ ಈ ಚಾನೆಲ್ಗಳು ಬಿಂಬಿಸಿದ್ದೇಕೆ?. ಸಿಎಂ ಸಿದ್ದರಾಮಯ್ಯ ಅವರು ಸಹಜವಾಗಿ ಹೇಳಿದ ವಿಚಾರವನ್ನು ಈ ಮಾಧ್ಯಮಗಳು, ಕಡೆಗೆ ಬಿಜೆಪಿ ಯಾವ ಪರಿ ತಿರುಚಿ ತಿರುಚಿ ತಮಗೆ ಬೇಕಾದ ಹಾಗೆ ಬಳಸಿಕೊಂಡವು ಮತ್ತು ಸದನದ ಸಮಯವನ್ನೆಲ್ಲ ಬೇಕೆಂತಲೇ ಹಾಳು ಮಾಡಿದವು?
ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ ನ್ಯಾಯ ಒದಗಿಸುವ ಬಗ್ಗೆ ಮಾತಾಡಿದಾಗ, ಮುಸ್ಲಿಂರು ಸೇರಿದಂತೆ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದನ್ನು ಈ ನಾಡಿನ ಟಿವಿ ಚಾನಲ್ ಗಳು ಅದ್ಯಾವ ಪರಿ ತಿರುಚಿ ಅದಕ್ಕೆ ಏನೇನೋ ಬಣ್ಣ ಹಚ್ಚಿ ರಾಜಕಾರಣಿಗಳಿಗಿಂತ ಕೆಟ್ಟ ರಾಜಕೀಯ ಮಾಡಿದವು?
ಬೆಳಗಾವಿ ಅಧಿವೇಶನದ ದಾರಿ ತಪ್ಪಿಸಲು ಈ ಮಾಧ್ಯಮದವರೆಲ್ಲ ತಾವೇ ಹೇಗೆಲ್ಲ ಬಿಜೆಪಿಗೆ ವೇದಿಕೆ ನಿರ್ಮಿಸಿ ಕೊಟ್ಟರು? ಇವರೆಲ್ಲ ಸೇರಿ ಇಷ್ಟೊಂದು ಗದ್ದಲ ಎಬ್ಬಿಸಿದ್ದು ಎರಡು ವಿಚಾರಗಳನ್ನು ಮುಂದಿಟ್ಟುಕೊಂಡು. ಒಂದು, ಅಲ್ಪಸಂಖ್ಯಾತರ ಇಲಾಖೆಗೆ ಅನುದಾನ ವಿಚಾರ.
ಎರಡನೆಯದು, ಮುಸ್ಲಿಂರಿಗೆ ರಕ್ಷಣೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ.
ಅಷ್ಟಕ್ಕೂ ಸಿದ್ದರಾಮಯ್ಯ ಮುಸ್ಲಿಂ ಸಮಾವೇಶದಲ್ಲಿ ಹೇಳಿದ್ದೇನು? ಮುಸ್ಲಿಮರಿಗೆ ನಿಜವಾಗಿಯೂ ಈ ಸರಕಾರ ಬೇರೆ ಸಮುದಾಯಗಳಿಗಿಂತ ಹೆಚ್ಚು ಏನನ್ನಾದರೂ ಕೊಟ್ಟಿದೆಯೇ?. ಮೊದಲು ಸಿದ್ದರಾಮಯ್ಯ ಹೇಳಿದ್ದೇನು ಅನ್ನೋದನ್ನ ಗಮನಿಸೋಣ.
1. ಕರ್ನಾಟಕದಲ್ಲಿರೋ ನಾವು 7 ಕೋಟಿ ಜನರು ಕೂಡ ಅಣ್ಣತಮ್ಮಂದಿರು, ಒಂದು ತಾಯಿಯ ಮಕ್ಕಳು.
2. ಬಸವಾದಿ ಶರಣರು, ಬುದ್ಧ ಮಹಮ್ಮದ್ ಪೈಗಂಬರ್ ಎಲ್ಲರೂ ವರ್ಗರಹಿತ, ಜಾತಿರಹಿತ ಸಮಾಜದ ಕನಸು ಕಂಡಿದ್ದರು.
3. ಕಾಯಿಲೆ ಬಂದ್ರೆ ನಮ್ಮ ಜಾತಿ ರಕ್ತ ಕೊಡಿ ಅಂತಾ ಕೇಳುತ್ತೇವಾ? ಬದುಕಿದ್ರೆ ಸಾಕು ಯಾರ ರಕ್ತ ಆದರೂ ಕೊಡಿ ಎಂದು ಕೇಳುತ್ತೇವೆ. ಬದುಕಿದ ಮೇಲೆ, ನಾನು ಹಿಂದೂ ನೀನು ಮುಸ್ಲಿಂ ಅನ್ನುವುದಿದೆಯಲ್ಲ, ಇದೇ ನಾವು ಮನುಷ್ಯಧರ್ಮಕ್ಕೆ ಮಾಡುವ ದ್ರೋಹ.
4. ಹಿಂದೂಗಳಿರಲಿ, ಮುಸ್ಲಿಮರಿರಲಿ ಕ್ರಿಶ್ಚಿಯನ್ನರಿರಲಿ, ಬೌದ್ಧರಿರಲಿ, ಸಿಖ್ಖರಿರಲಿ, ಎಲ್ಲರೂ ಒಂದು ತಾಯಿಯ ಮಕ್ಕಳು. ಎಲ್ಲ ಧರ್ಮದವರಿಗೂ ರಕ್ಷಣೆ ಕೊಡುವ ಕೆಲಸ ಮಾಡುತ್ತೇನೆ.
5. ಗುಣಮಟ್ಟದ ಶಿಕ್ಷಣವನ್ನು ಈ ಸಮಾಜದ ಎಲ್ಲ ವರ್ಗದ ಜನರೂ ಪಡೆಯಬೇಕು. ಜೊತೆಗೆ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಎಲ್ಲರೂ ಮನುಷ್ಯರಾಗಲು ಆಗುತ್ತದೆ.
6. ನಾನು ನಿಮ್ಮನ್ನು ಪ್ರೀತಿಸಬೇಕು, ನೀವು ನನ್ನನ್ನು ಪ್ರೀತಿಸಬೇಕು. ಅದೇ ಸಹಬಾಳ್ವೆ.
7. ಈ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ತರಲು ಎಲ್ಲರೂ ಪ್ರಯತ್ನಿಸೋಣ. ಜಾತಿವಾದಿಗಳು, ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ವೈರತ್ವ ಉಂಟು ಮಾಡುವವವರ ಬಗ್ಗೆ ಎಚ್ಚರಿಕೆಯಿಂದ ಇರೋಣ.
8. ರಾಜಕೀಯ ಲಾಭಕ್ಕಾಗಿ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಾರೆ. ಇದರಿಂದ ಲಾಭ ತಾತ್ಕಾಲಿಕ. ಪರಸ್ಪರ ಪ್ರೀತಿ ಇರಬೆಕಾದರೆ ನಾವು ಮನುಷ್ಯತ್ವದಿಂದ ಇರಬೇಕು.
9. ಈ ವರ್ಷ ಅಲ್ಪಸಂಖ್ಯಾತರ ಇಲಾಖೆಗೆ ನಾಲ್ಕು ಸಾವಿರ ಕೋಟಿ ಅನುದಾನ ನೀಡಿದ್ದೇನೆ. ಪ್ರತಿ ವರ್ಷವೂ ಅದನ್ನು ಹೆಚ್ಚಿಸುವ ಕೆಲಸ ಮಾಡುತ್ತೇನೆ. ಅಂತಿಮವಾಗಿ 10 ಸಾವಿರ ಕೋಟಿ ರೂ. ಗಳಿಗೆ ಹೆಚ್ಚಿಸಬೇಕು ಅನ್ನೋದು ನಮ್ಮ ಉದ್ದೇಶ.
10. ನಿಮ್ಮ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಸಿಗಬೇಕು. ಈ ದೇಶ ಮತ್ತು ದೇಶದ ಸಂಪತ್ತಿನಲ್ಲಿ ನಿಮಗೂ ಪಾಲು ಸಿಗಬೇಕು. ಮುಸ್ಲಿಂರು ಸೇರಿದಂತೆ ಯಾವುದೇ ಸಮಾಜಕ್ಕೆ ಅನ್ಯಾಯ ಆಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಮುಸ್ಲಿಮರೂ ಸೇರಿದಂತೆ ಎಲ್ಲರಿಗೂ ರಕ್ಷಣೆ ಕೊಡುತ್ತೇವೆ.
11. ಎಲ್ಲ ಜಾತಿಯಲ್ಲಿ ಬಡವರು ಇದ್ದಾರೆ. ನಾವು ಮಾಡಿದ ಕಾರ್ಯಕ್ರಮ ಒಂದು ಜಾತಿಗೆ ಸೀಮಿತ ಇಲ್ಲ. ಅದು ಎಲ್ಲ ಬಡವರಿಗೆ ಸೇರಿದ ಕಾರ್ಯಕ್ರಮ.
ಅತ್ಯಂತ ಸಹಜ ರೀತಿಯಲ್ಲಿ, ಯಾವ ರಾಜಕಾರಣವೂ ಇಲ್ಲದೆ, ಅತ್ಯಂತ ಜವಾಬ್ದಾರಿಯಿಂದ ಸಿಎಂ ಸಿದ್ದರಾಮಯ್ಯ ಆಡಿದ ಈ ಮಾತುಗಳನ್ನು ಚಾನೆಲ್ಗಳು ಹೇಗೆಲ್ಲ ತಿರುಚಿದವು, ಏನೇನೆಲ್ಲ ಬಣ್ಣ ಕಟ್ಟಿದವು ಅನ್ನೋದನ್ನು ನೋಡಿದರೆ, ಈ ಚಾನೆಲ್ಲುಗಳು ಯಾವ ಉದ್ದೇಶದೊಂದಿಗಿವೆ ಎಂಬ ಅನುಮಾನ ಕಾಡದೇ ಇರೋದಿಲ್ಲ.
ದೇಶದ ಸಂಪತ್ತನ್ನು ಮುಸ್ಲಿಂರಿಗೆ ಹಂಚುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದೇ ಹಲವು ಚಾನೆಲ್ಗಳು ಬಣ್ಣ ಕಟ್ಟಿ ಹೇಳಿದವು. ದೇಶದ ಸಂಪತ್ತು ಮುಸ್ಲಿಂರಿಗೆ ಹಂಚುತ್ತೇನೆ ಎಂದೇ ಸಿದ್ದರಾಮಯ್ಯ ಹೇಳಿರುವುದಾಗಿ ಟಿವಿ 9, ಝೀ ಕನ್ನಡ ನ್ಯೂಸ್ ಸೇರಿದಂತೆ ಹಲವು ಮಾಧ್ಯಮಗಳು ಹೇಳಿದವು.
ಇತರ ನಾಯಕರ ಪ್ರತಿಕ್ರಿಯೆ ಕುರಿತು ಹೇಳುವಾಗಲೂ, ದೇಶದ ಸಂಪತ್ತನ್ನು ಮುಸ್ಲಿಂರಿಗೆ ಹಂಚುತ್ತೇನೆ ಎಂದಿದ್ದ ಸಿದ್ದರಾಮಯ್ಯ ಎಂದೇ ಉಲ್ಲೇಖಿಸಿದವು. ನ್ಯೂಸ್ 18 ಕನ್ನಡ ವಾಹಿನಿ, ನನ್ನ ಹೇಳಿಕೆಗೆ ಉಪ್ಪು ಖಾರ ಹಾಕಬೇಡಿ ಎಂಬ ಸಿದ್ದರಾಮಯ್ಯ ಪ್ರತಿಕ್ರಿಯೆಯನ್ನು ಪ್ರಸಾರ ಮಾಡುವಾಗಲೂ, ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ಅನುದಾನ ಎಂದು ಟಾಪ್ ಬ್ಯಾಂಡ್ನಲ್ಲಿ ಉಲ್ಲೇಖಿಸಿತ್ತು.
ಅಷ್ಟು ಮಾತ್ರವಲ್ಲ, " ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ಅನುದಾನ ಘೋಷಣೆ; ಏನಂದ್ರು ಸಿಎಂ" ಎಂದು ಹೇಳುವ ಮೂಲಕ, ಅನುದಾನ ಘೋಷಿಸಿಯಾಗಿದೆ ಎಂದೇ ತಪ್ಪಾಗಿ ಹೇಳುವ, ವೀಕ್ಷಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್, ಸದನದಲ್ಲಿ ಮುಸ್ಲಿಂ ಅನುದಾನ ದಂಗಲ್ ಎಂದು ಉಲ್ಲೇಖಿಸಿ ಸಂಭ್ರಮ ಪಟ್ಟಿತ್ತು.
ವಿಸ್ತಾರ ನ್ಯೂಸ್ ಎಂಬ ವಾಹಿನಿ, "ಸಿದ್ದರಾಮಯ್ಯ ಮುಸ್ಲಿಂ ಓಲೈಕೆ ಅಸಲೀ ಕಾರಣ ಏನು?" ಎಂದು ಭಾರೀ ಜಿಜ್ಞಾಸೆಗೆ ಇಳಿದಿತ್ತು.
" ಲೋಕಸಭೆ ಚುನಾವಣೆ ಹೊತ್ತಲ್ಲೇ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣವನ್ನು ತೀವ್ರಗೊಳಿಸುತ್ತಿದೆ, ಇದು, 1947ರಲ್ಲಿ ಶುರುವಾದದ್ದು, ಈಗಲೂ ನಿಲ್ಲದ ರಾಜಕೀಯ ತುಷ್ಟೀಕರಣ" ಎಂದೆಲ್ಲ ಭಾರೀ ವಿಶ್ಲೇಷಣೆ ನಡೆಸಿತ್ತು.
ಮುಸ್ಲಿಂರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದಿದ್ದಾರೆ ಎನ್ನುವಾಗ, 'ಮುಸ್ಲಿಮರು ಸೇರಿದಂತೆ ಯಾರಿಗೂ' ಎಂಬುದನ್ನು ಅದು ಬೇಕೆಂತಲೇ ಮರೆತಿತ್ತು ಮತ್ತು ಮರೆಮಾಚಿತ್ತು. ಹುಬ್ಬಳ್ಳಿ ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿಕೆಯ ಬೆನ್ನಲ್ಲೇ ಮತ್ತು ಅನಂತರವೂ ಈ ಮೀಡಿಯಾಗಳು ಮಾಡಿದ ಈ ಉದ್ದೇಶಪೂರ್ವಕ ತಿರುಚಿದ ವರದಿ ಪ್ರಸಾರ ಬಿಜೆಪಿಗೆ ಸದನದ ಹಾದಿ ತಪ್ಪಿಸಲು ಮಾಡಿಕೊಟ್ಟ ವೇದಿಕೆಯೇ ಆಗಿತ್ತು.
ಮತ್ತು ಹೀಗೆ ಮಾಡುವಾಗ ಆ ಎಲ್ಲ ಮಾಧ್ಯಮಗಳು ಮತ್ತು ಮಾಧ್ಯಮಗಳ ವರದಿಯನ್ನೇ ಬಳಸಿಕೊಂಡು ಸದನದ ದಿಕ್ಕು ತಪ್ಪಿಸಲು ನೋಡಿದ ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿಯೇ ಸತ್ಯವನ್ನು ಮರೆತಿದ್ದರು ಮತ್ತು ಮರೆಮಾಚಲು ನೋಡಿದ್ದರು.
ಸತ್ಯ ಆಮೇಲೆ, ಮೊದಲು ಆರೋಪ ಹೊರಿಸಬೇಕು, ಮುಗಿಬೀಳಬೇಕು, ಗದ್ದಲವಾಗಬೇಕು, ಈ ಇಡೀ ವಿಚಾರವನ್ನು ಕಾಂಗ್ರೆಸ್ ಮುಸ್ಲಿಂ ಓಲೈಕೆಯಲ್ಲಿ ತೊಡಗಿ ಹಿಂದೂಗಳಿಗೆ ಅನ್ಯಾಯ ಎಸಗಲು ಹೊರಟಿದೆ ಎಂದು ಬಿಂಬಿಸಬೇಕು ಎಂದು ಅವರೆಲ್ಲ ಸಜ್ಜಾಗಿದ್ದಂತಿತ್ತು.ಈ ಬಗ್ಗೆ ವಿವಾದ ಸೃಷ್ಟಿಸಲೆಂದೇ ಸಿಎಂ ಅವರನ್ನು ಕೆಣಕಿದ ರಿಪಬ್ಲಿಕ್ ಕನ್ನಡ ಚಾನಲ್ ನ ವರದಿಗಾರನಿಗೆ ಸಿಎಂ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಇಲ್ಲದ ವಿವಾದ ಸೃಷ್ಟಿಸಬೇಡಿ ಎಂದು ಬುದ್ದಿ ಹೇಳಿದ್ದಾರೆ.
ಮೊದಲನೆಯದಾಗಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಇಲಾಖೆಗೆ ಅನುದಾನವನ್ನು ಹಂತಹಂತವಾಗಿ ಹೆಚ್ಚಿಸಿ, 10 ಸಾವಿರ ಕೋಟಿಗೆ ಹೆಚ್ಚಿಸಬೇಕು ಎಂಬ ಉದ್ದೇಶವಿದೆ ಎಂದಿದ್ದರೇ ಹೊರತು, ಅವರೆಲ್ಲೂ 10 ಸಾವಿರ ಕೋಟಿ ಅನುದಾನ ಎಂದು ಘೋಷಣೆ ಮಾಡಿರಲಿಲ್ಲ.
ಎರಡನೆಯದಾಗಿ, ದೇಶದ ಸಂಪತ್ತಿನಲ್ಲಿ ನಿಮಗೂ ಪಾಲಿದೆ ಎಂದಿದ್ದರೇ ಹೊರತು, ದೇಶದ ಸಂಪತ್ತನ್ನು ಮುಸ್ಲಿಂರಿಗೆ ಹಂಚುತ್ತೇನೆ ಎಂದು ಹೇಳಲೇ ಇಲ್ಲ . ಅವರು ಹೇಗೆ ದೇಶದ ಸಂಪತ್ತನ್ನು ಹಂಚುತ್ತೇನೆ ಎಂದು ಹೇಳಲು ಸಾಧ್ಯ ಎಂಬ ಕಾಮನ್ ಸೆನ್ಸ್ ಕೂಡ ಇಲ್ಲದೆ ಈ ಮಾಧ್ಯಮಗಳು ಕೇವಲ ಕಿಡಿ ಹತ್ತಿಸಲೆಂದೇ ಹಾಗೆ ತಿರುಚಿದ್ದವು.
ಮೂರನೆಯದಾಗಿ, ಮುಸ್ಲಿಂರೂ ಸೇರಿದಂತೆ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ, ಎಲ್ಲರಿಗೂ ರಕ್ಷಣೆ ನೀಡುತ್ತೇವೆ ಎಂದಿದ್ದರೇ ಹೊರತು, ಮುಸ್ಲಿಂರಿಗೆ ಇತರರಿಂದ ರಕ್ಷಣೆಯಿಲ್ಲವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಮಾಧ್ಯಮಗಳು ವ್ಯಾಖ್ಯಾನಿಸಿದಂತೆ ಅವರೆಲ್ಲೂ ಹೇಳಿರಲೇ ಇಲ್ಲ. ಯಾಕೆ ಹೀಗೆ ಸತ್ಯವನ್ನು ಮರೆಮಾಚಿ, ವಿಷಯವನ್ನು ತಮಗೆ ಬೇಕಾದಂತೆ ತಿರುಚಿ ಹೇಳಬೇಕಾದ, ಸುಳ್ಳು ಪ್ರಸಾರ ಮಾಡಬೇಕಾದ ದಾರಿದ್ರ್ಯ ಈ ಚಾನಲ್ ಗಳಿಗೆ?
ಸಿದ್ದರಾಮಯ್ಯ ಹೇಳಿಕೆಯನ್ನು ತಮಗೆ ಬೇಕಾದಂತೆ ತಿರುಚಿ ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ, ಅದಕ್ಕೆಂದೇ ಕಾದಿದ್ದ ಬಿಜೆಪಿಯವರು ಸರ್ಕಾರದ ವಿರುದ್ಧ ಹರಿಹಾಯುತ್ತ, ತಮಗೂ ತಾಕತ್ತಿದೆ ಎನ್ನಲು ಶುರು ಮಾಡಿದ್ದರು.ಸಿದ್ದರಾಮಯ್ಯ ಮುಸ್ಲಿಮರಿಗೆ ಅನುದಾನ ಘೋಷಿಸಿದ್ದಾರೆ ಎಂಬ ವಿಚಾರ ಇಟ್ಟುಕೊಂಡು ಸದನದಲ್ಲಿ ಗದ್ದಲ ಮಾಡಿದ ಪ್ರತಿಪಕ್ಷಗಳು ಸಭಾತ್ಯಾಗದವರೆಗೂ ಹೋದವು.
ಅಧಿವೇಶನ ನಡೆಯುವಾಗ ಮುಖ್ಯಮಂತ್ರಿಗಳು ಹೀಗೆ ಅನುದಾನ ಘೋಷಣೆ ಮಾಡುವುದು ಎಷ್ಟು ಸರಿ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಶ್ನೆ ಎತ್ತಿದ್ದರು.ಪ್ರತಿಪಕ್ಷ ನಾಯಕ ಆರ್ ಅಶೋಕ್, ರೈತರಿಗೆ ಕೊಡಲು ಹಣವಿಲ್ಲ, ಅಲ್ಲಿ ಅನುದಾನ ಘೋಷಿಸಿದ್ದಾರೆ. ಅವರು 10 ಸಾವಿರ ಕೋಟಿ ಅನುದಾನ ಘೋಷಣೆ ಮಾಡಿರುವುದು ಸತ್ಯ. ಅವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ಖರ್ಚು ಮಾಡುವ ಸಿದ್ದರಾಮಯ್ಯ, ಬರಗಾಲ, ರೈತರ ಅತ್ಮಹತ್ಯೆಗೆ ಪರಿಹಾರ ಕೊಡಲು ಹಣ ಇಲ್ಲ ಎನ್ನುತ್ತಾರೆ. ನಿಜವಾದ ಕೋಮುವಾದಿ ಕಾಂಗ್ರೆಸ್ ಎಂದು ಶಾಸಕ ಅಶ್ವತ್ಥ ನಾರಾಯಣ ಎಕ್ಸ್ನಲ್ಲಿ ವಾಗ್ದಾಳಿ ಮಾಡಿದ್ದರು.
ಮುಖ್ಯಮಂತ್ರಿಗಳು 10 ಸಾವಿರ ಕೋಟಿ ಕೊಡುತ್ತೇನೆ ಎಂದು ಹೇಳಿಲ್ಲ. ಹಂತ ಹಂತವಾಗಿ ಏರಿಸುವ ಆಲೋಚನೆ ಇದೆ ಎಂದಷ್ಟೇ ಹೇಳಿದ್ದಾರೆ ಎಂದು ಸದನದಲ್ಲಿ ಪ್ರಿಯಾಂಕ್ ಖರ್ಗೆ, ಎಚ್ ಕೆ ಪಾಟೀಲ್, ದಿನೇಶ್ ಗುಂಡೂರಾವ್ ಮನವರಿಕೆ ಮಾಡಲು ಯತ್ನಿಸಿದರು. ಆದರೆ ಸತ್ಯ ಯಾರಿಗೂ ಬೇಕಿರಲಿಲ್ಲ. ಬಿಜೆಪಿಯವರಿಗೆ ಇದನ್ನೊಂದು ಕೋಲಾಹಲದ ವಿಚಾರವನ್ನಾಗಿಸುವುದು ಮಾತ್ರವೇ ಮುಖ್ಯವಾಗಿತ್ತು.
ಮುಸ್ಲಿಂರ ವಿರುದ್ಧದ ತಮ್ಮ ಸಿಟ್ಟು ಮತ್ತು ದ್ವೇಷವನ್ನು ಮತ್ತೊಂದು ರೀತಿಯಲ್ಲಿ ಹೊರಹಾಕುವುದು, ಕಾಂಗ್ರೆಸ್ ಅನ್ನು ಮುಸ್ಲಿಂ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಟೀಕಿಸುವುದು ಅವರಿಗೆ ಅಗತ್ಯವಾಗಿತ್ತು. ಸಿದ್ದರಾಮಯ್ಯ ಇದಕ್ಕೆಲ್ಲ ಪ್ರತಿಕ್ರಿಯಿಸಿ, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ ಅಂತ ಹೇಳಿದ್ದೇನೆ. ಅದನ್ನು ಬಿಟ್ಟು ಬರೆದರೆ ನಾನೇನು ಮಾಡಲಿ? ನನ್ನ ಹೇಳಿಕೆಗೆ ಉಪ್ಪು ಖಾರ ಹಾಕಬೇಡಿ ಎಂದರು.
ಆದರೆ, ಉಪ್ಪು ಖಾರ ಹಾಕಲೆಂದೇ ಇರುವವರು ಅದನ್ನು ಮಾಡಿಯಾಗಿತ್ತು. ಸರ್ಕಾರದ ವಿರುದ್ಧ ಪ್ರತಿಪಕ್ಷ ಹೇಗೆ ಮುಗಿಬಿತ್ತು ಅಂತ ಮತ್ತೆ ಅದೇ ಮಾಧ್ಯಮಗಳು ಅಬ್ಬರಿಸಿ ಅಬ್ಬರಿಸಿ ಹೇಳುವುದಕ್ಕೆ ಅವಕಾಶವಾಗಬೇಕಿತ್ತಲ್ಲವೆ?. ಹಾಗಾಗಿಯೇ ದಂಗಲ್ ಇತ್ಯಾದಿ ಪದ ಬಳಸಿ, ಕಾಂಗ್ರೆಸ್ ಸರ್ಕಾರದ ಬಗ್ಗೆ ತಮಗಿರುವ ಅಸಹನೆ ಹಾಗು ಸಿಟ್ಟನ್ನೂ ಅವು ತೀರಿಸಿಕೊಂಡಂತಿದೆ.
ಅಷ್ಟಕ್ಕೂ, ಮಾತೆತ್ತಿದರೆ ಮುಸ್ಲಿಂ ತುಷ್ಠೀಕರಣ ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ಈ ಮಂದಿ, ನಿಜವಾಗಿಯೂ ಈಗಿನ ಸರ್ಕಾರ ಮುಸ್ಲಿಂರಿಗೆ ಏನು ಮಹಾ ಕೊಟ್ಟಿದೆ, ಬೇರೆ ಸರ್ಕಾರಗಳು ಕೊಡೆದೇ ಇರುವಂಥದ್ದೇನನ್ನಾದರೂ ವಿಶೇಷವಾಗಿ ಮಾಡಿದೆಯಾ ಎಂದು ಕೇಳಿಕೊಳ್ಳುವುದೇ ಇಲ್ಲ.
ಹಾಗೆ ನೋಡಿದರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಮುಸ್ಲಿಂರಿಗೆ ನ್ಯಾಯಯುತ ಪ್ರಾತಿನಿಧ್ಯ ಸಿಕ್ಕಿದೆಯೆ ಎಂದು ಕೇಳಿಕೊಂಡರೆ ಇಲ್ಲ ಎಂಬುದೇ ಎದ್ದು ಕಾಣಿಸುತ್ತದೆ. ಕಳೆದ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ಗೆ ಮತ ಹಾಕಿರುವವರು ಮುಸ್ಲಿಂರಾದರೂ ಮುಸ್ಲಿಂರಿಗೆ ಸಿಕ್ಕಿದ್ದು ಮಾತ್ರ ಅಷ್ಟರಲ್ಲೇ ಇದೆ.
ಮುಸ್ಲಿಂ ಸಮುದಾಯ ಹೊರತುಪಡಿಸಿ ಉಳಿದ ಎಲ್ಲ ಸಮುದಾಯದವರು ಜೆಡಿಎಸ್ ಅಧಿಕಾರದಲ್ಲಿದ್ದರೂ ಸಚಿವರಾಗುತ್ತಾರೆ, ಬಿಜೆಪಿ ಅಧಿಕಾರದಲ್ಲಿದ್ದರೂ ಸಚಿವ ಸ್ಥಾನ ಪಡೆಯುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಸಚಿವರಾಗುತ್ತಾರೆ. ಅವರಲ್ಲಿಯೇ ಮುಖ್ಯಮಂತ್ರಿಗಳಾಗುತ್ತಾರೆ, ಉಪಮುಖ್ಯಮಂತ್ರಿಗಳಾಗುತ್ತಾರೆ.
ಆದರೆ ಮುಸ್ಲಿಂರು ಮಾತ್ರ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಅವರಿಗೆ ಸಿಗುವುದು ಅತ್ಯಂತ ಕಡಿಮೆ ಪ್ರಾತಿನಿಧ್ಯ. ಸಿದ್ದರಾಮಯ್ಯ ಸರ್ಕಾರದಲ್ಲಿ ಮುಸ್ಲಿಂರಿಗೆ ಆಗಿರುವುದೂ ಇದೇ. ಕಳೆದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ಮಾಡುವಾಗಲೂ ಮುಸ್ಲಿಂ ಸೀಟುಗಳನ್ನು ಅಳೆದು ತೂಗಿ ಕೊನೆ ಕೊನೆಗೆ ಅಂತಿಮಗೊಳಿಸಲಾಯಿತು. ಅಭ್ಯರ್ಥಿಗಳು ಸಮರ್ಪಕವಾಗಿ ಪ್ರಚಾರ ಮಾಡುವುದಕ್ಕೇ ಆಗದ ಹಾಗಾಯಿತು.
ಇಷ್ಟಾದ ಮೇಲೆ ಸಂಪುಟದಲ್ಲಿ ಅವಕಾಶ ಸಿಕ್ಕಿದ್ದು ಮುಸ್ಲಿಂ ಸಮಾಜದ ಇಬ್ಬರಿಗೆ ಮಾತ್ರ. ಮುಸ್ಲಿಂ ಸಮುದಾಯದವರಿಗೆ ಕೊಟ್ಟ ಖಾತೆಗಳೂ ವಕ್ಫ್ ಮತ್ತು ಅಲ್ಪಸಂಖ್ಯಾತ, ಹಜ್ ಇಂಥವು ಮಾತ್ರ. ಇನ್ನು ನಿಗಮ ಮಂಡಳಿಗಳಲ್ಲಿ ಇನ್ನಾರಿಗಾದರೂ ಸ್ಥಾನ ಕಲ್ಪಿಸಿದರೂ ಅಲ್ಲಿಯೂ ಇಂಥದೇ ಯಾವುದನ್ನಾದರೂ ಕೊಡಲಾಗುತ್ತದೆ.
ಅಲ್ಲಿಗೆ ಪ್ರಾತಿನಿಧ್ಯದ ಹೆಸರಿನ ಹಂಚಿಕೆ ಮುಗಿದುಬಿಡುತ್ತದೆ. ಅಂಥ ಪ್ರಾತಿನಿಧ್ಯದಿಂದ ಆ ಸಮುದಾಯಕ್ಕೇನಾದರೂ ಲಾಭವಾಯಿತೆ ಎಂಬುದು ಗೌಣವಾಗಿಬಿಡುತ್ತದೆ. ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಇದಕ್ಕಿಂತ ಹೆಚ್ಚೇನಾದರೂ ಆಗಿದೆಯೆ?. ಹಾಗಿರುವಾಗಲೂ ಏಕೆ ಈ ಮಾಧ್ಯಮಗಳು, ಈ ಬಿಜೆಪಿಯವರು ಸಿದ್ದರಾಮಯ್ಯ ಸರ್ಕಾರ ಎಲ್ಲವನ್ನೂ ಮುಸ್ಲಿಂರಿಗೆ ಹಂಚಿಬಿಟ್ಟಿದ್ದಾರೆ ಎನ್ನುವಂತೆ ಹರಿಹಾಯುತ್ತಿವೆ?
ಈ ಮಾಧ್ಯಮಗಳು ಹುತಾತ್ಮ ಯೋಧನಿಗೆ ಪ್ರಧಾನಿ ಗೌರವ ಸಲ್ಲಿಸದ ಬಗ್ಗೆ ಕೇಳುವುದೇ ಇಲ್ಲ. ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಈ ಚಾನೆಲ್ಗಳು ಚಕಾರ ಎತ್ತಲಾರವು. ಒಕ್ಕಲಿಗರಿಗೆ, ಲಿಂಗಾಯತರಿಗೆ ಸಿಕ್ಕಿರುವ ಪ್ರಾತಿನಿಧ್ಯ ಹಾಗು ಆದ್ಯತೆಗಳ ಬಗ್ಗೆ ಇವು ಪ್ರಶ್ನಿಸಲ್ಲ. ಲಿಂಗಾಯತ ಮುಖಂಡರು ಇನ್ನೂ ಪ್ರಾತಿನಿಧ್ಯ ಬೇಕು ಎಂದರೆ ಅದನ್ನು ನ್ಯಾಯದ ಬೇಡಿಕೆ ಎಂಬಂತೆ ಇದೇ ಚಾನಲ್ ಗಳು ಮಂಡಿಸುತ್ತವೆ.
ಆದರೆ, ಅಲ್ಪಸಂಖ್ಯಾತರ ರಕ್ಷಣೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಮಾತನಾಡುತ್ತಿದ್ದಂತೆ, ಮುಸ್ಲಿಂರ ತುಷ್ಠೀಕರಣ ಅಬ್ಬರಿಸಬಲ್ಲವು, ಬಿಜೆಪಿ ನಾಯಕರಿಗೆ ಗದ್ದಲ ಎಬ್ಬಿಸಲು ವೇದಿಕೆ ಒದಗಿಸಬಲ್ಲವು. ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಈ ಸತತ ಹತ್ತು ವರ್ಷ ಏನು ಮಾಡಿತು ಎಂದು ಕೇಳಲಾರದ ಈ ಚಾನೆಲ್ಗಳು, ಕಾಂಗ್ರೆಸ್ ಅಷ್ಟು ವರ್ಷ ಆಳಿತು, ಇಷ್ಟು ವರ್ಷ ಆಳಿತು, ಮಾಡಿದ್ದೇನು ಎಂಬ ಬಿಜೆಪಿಯ ತುತ್ತೂರಿಯನ್ನು ಊದಲು ಮಾತ್ರ ತುದಿಗಾಲಲ್ಲಿರುತ್ತವೆ.
ಈ ದೇಶದಲ್ಲಿನ ನಿರುದ್ಯೋಗದ ಬಗ್ಗೆ, ಈ ದೇಶದಲ್ಲಿನ ರೈತರ ದುಸ್ಥಿತಿಯ ಬಗ್ಗೆ, ಈ ದೇಶದಲ್ಲಿನ ಹೆಣ್ಣುಮಕ್ಕಳ ಸ್ಥಿತಿಯ ಬಗ್ಗೆ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಲು ತಾಕತ್ತಿಲ್ಲದ ಈ ಚಾನೆಲ್ಗಳು ಕಾಂಗ್ರೆಸ್ ಅನ್ನು ಮಾತ್ರ ಅದು ಮಾಡಿರದ ತಪ್ಪುಗಳಿಗಾಗಿ ಕೂಡ ಜರೆಯಬಲ್ಲವು.
ಸುದ್ದಿಯನ್ನು ತಿರುಚುವ ಮೂಲಕ, ಬಿಜೆಪಿಗೆ ಲಾಭ ಮಾಡಿಕೊಡುವ ಈ ಚಾನೆಲ್ಗಳು ಸ್ವತಃ ತಮ್ಮ ವೃತ್ತಿಗೆ ಮಾಡುತ್ತಿರುವ ಅನ್ಯಾಯ ಮಾತ್ರ ಘೋರವಾದುದು.