ಸಾರ್ವತ್ರಿಕ ಪಿಂಚಣಿಗೆ ಹಿರಿಯ ನಾಗರಿಕರ ಕೂಗು..!

Update: 2024-01-07 02:33 GMT

Photo: freepik

ಬೆಂಗಳೂರು, ಜ.6: ಪಿಂಚಣಿ ಯೋಜನೆಯಲ್ಲಿ ಸರಕಾರಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದು, ದೇಶದಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೂ ತಿಂಗಳಿಗೆ ಕನಿಷ್ಟ 3ಸಾವಿರ ರೂ.ನಂತೆ ಸಾರ್ವತ್ರಿಕ ಪಿಂಚಣಿ ಸೌಲಭ್ಯವನ್ನು ಒದಗಿಸಿ ಜೀವನದ ಸಂಧ್ಯಾಕಾಲದಲ್ಲಿ ಹಿರಿಯ ನಾಗರಿಕರು ಸುಸೂತ್ರ ಬದುಕನ್ನು ನಡೆಸುವಂತಾಗಬೇಕು ಎಂಬುದು ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘ, ವಿಮಾ ಕಾರ್ಪೊರೇಷನ್ ನೌಕರರ ಸಂಘ ಹಾಗೂ ಸಾಮಾನ್ಯ ವಿಮಾ ಪಿಂಚಣಿದಾರರ ಸಂಘ ಹಾಗೂ ನಾಗರಿಕ ಸಮಾಜ ಸಂಘಟನೆಗಳ ಒಕ್ಕೊರಲಿನ ಆಗ್ರಹವಾಗಿದೆ.

ದಿನದಿಂದ ದಿನಕ್ಕೆ ಕುಸಿಯುತ್ತಿರುವ ಅವಿಭಕ್ತ ಕುಟುಂಬಗಳ ಪರಿಣಾಮವಾಗಿ ಹಿರಿಯ ನಾಗರಿಕರ ದುಸ್ಥರವಾಗಿದ್ದು, ಸರಕಾರಗಳು ಅಷ್ಟೇ ಹೀನಾಯವಾಗಿಯೂ ನಡೆದುಕೊಳ್ಳುತ್ತದೆ ಎಂಬುದು ಹಿರಿಯ ನಾಗರಿಕರ ಆರೋಪವಾಗಿದೆ.

2021ರಲ್ಲಿ ಭಾರತದ ಹಿರಿಯ ನಾಗರಿಕರ ಸಂಖ್ಯೆ 13.8 ಕೋಟಿಗೆ ತಲುಪಿದ್ದು, ಇದರಲ್ಲಿ ಸುಮಾರು 6.7 ಕೋಟಿ ಜನ ಪುರುಷರಿದ್ದರೆ, 7.1 ಕೋಟಿ ಮಹಿಳೆಯರಿದ್ದಾರೆ. ಹಿರಿಯ ನಾಗರಿಕರಲ್ಲಿ ಬಹುಸಂಖ್ಯೆಯ ಜನರಿಗೆ ಯಾವುದೇ ಆರ್ಥಿಕ ಭದ್ರತೆ ಇರುವುದಿಲ್ಲ. ಆದಾಗ್ಯೂ ಸರಕಾರಗಳು ಮಾತ್ರ ಪಿಂಚಣಿ ಸೌಲಭ್ಯದಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯ ಎನ್ನುತ್ತದೆ ಪೆನ್ಷನ್ ಪರಿಷತ್.

ಹಿರಿಯ ನಾಗರಿಕರು ತಮ್ಮ ದುಡಿತದ ಜೀವಿತ ಕಾಲದಲ್ಲಿ, ಈ ದೇಶದ ಆರ್ಥಿಕತೆಗೆ ಮತ್ತು ಬೆಳವಣಿಗೆಗೆ ಬಹಳಷ್ಟು ಕೊಡುಗೆಯನ್ನು ಕೊಟ್ಟಿರುತ್ತಾರೆ. ಆದುದರಿಂದ ಅವರ ಇಳಿ ವಯಸ್ಸಿನಲ್ಲಿ ಅವರ ಅಗತ್ಯಗಳನ್ನು ಪೂರೈಸುವುದು ಸರಕಾರದ ಜವಾಬ್ದಾರಿಯಾಗಿದೆ. ಇದು ಸಂವಿಧಾನದ 41ನೇ ಪರಿಚ್ಛೇದದ ಪ್ರಕಾರ ಮಾಡಬೇಕಾದ ಸರಕಾರದ ಕರ್ತವ್ಯವಾಗಿರುತ್ತದೆ. ಆದರೆ, ಈ ಸರಕಾರಗಳು ತಮ್ಮ ಜವಾಬ್ದಾರಿ ಮರೆತು ಹಿರಿಯ ನಾಗರಿಕರ ಸಮಸ್ಯೆಯನ್ನು ಮಕ್ಕಳು ಮತ್ತು ಸಂಬಂಧಿಕರಿಗೆ ವರ್ಗಾಯಿಸುವ ಕಾನೂನನ್ನು ಮಾಡಿರುವುದು ಈ ದೇಶದ ಹಿರಿಯ ನಾಗರಿಕರಿಗೆ ಮಾಡಿದ ಮಹಾಮೋಸ ಎಂದು ವಿಮಾ ಕಾರ್ಪೊರೇಷನ್ ಪಿಂಚಣಿದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಕೆ.ಗಂಗಾಧರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗ ಸರಕಾರವು ರಾಷ್ಟ್ರೀಯ ಇಳಿವಯಸ್ಸಿನ ಪಿಂಚಣಿ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯಂತೆ, 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ತಿಂಗಳಿಗೆ 2000ರೂ.ಅದೂ ಬಡತನ ರೇಖೆಯಿಂದ ಕೆಳಗಿರುವವರಿಗೆ ಮಾತ್ರ ಕೊಡಲಾಗುತ್ತಿದೆ. 2007ರಿಂದ ಈವರೆಗೆ ಗಗನಕ್ಕೇರುತ್ತಿರುವ ಬೆಲೆಗಳ ನಡುವೆಯೂ ಹೆಚ್ಚಿಸಿರುವುದಿಲ್ಲ. ಈ ಕಡಿಮೆ ಮೊತ್ತವನ್ನು ಸುಮಾರು 2.2 ಕೋಟಿ ಹಿರಿಯ ನಾಗರಿಕರಿಗೆ ಕೊಡಲಾಗುತ್ತಿದೆ. ಕೆಲವು ರಾಜ್ಯ ಸರಕಾರಗಳು ಇಷ್ಟೇ ಮೊತ್ತ ಅಥವಾ ಸ್ವಲ್ಪ ಹೆಚ್ಚು ಮೊತ್ತವನ್ನು ಸೇರಿಸಿ ಹಿರಿಯ ನಾಗರಿಕರಿಗೆ ಕೊಡುತ್ತಿವೆ. ಬಹಳಷ್ಟು ಹಿರಿಯ ನಾಗರಿಕರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಜಿ.ಕೆ.ಗಂಗಾಧರ್ ಆರೋಪಿಸಿದ್ದಾರೆ.

ಸಾರ್ವತ್ರಿಕ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ಸರಕಾರವು ತಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದು ಕಾರಣ ಹೇಳುತ್ತಿದೆ. ಆದರೆ ಈ ಹೊರೆಯನ್ನು ಭರಿಸಲು ದೇಶದ ಜನಸಂಖ್ಯೆಯ ಶ್ರೀಮಂತ ವಿಭಾಗದವರ ಸಂಪತ್ತಿನ ಮೇಲೆ ಕೇವಲ ಶೇ.1ರಷ್ಟು ತೆರಿಗೆ ವಿಧಿಸಿದರೂ ಬರುವ ಆದಾಯದಿಂದಲೇ ನಿಭಾಯಿಸಬಹುದು ಎನ್ನುತ್ತದೆ ಪೆನ್ಷನ್ ಪರಿಷತ್.

ಕನಿಷ್ಟ 3 ಸಾವಿರ ರೂ. ಪಿಂಚಣಿಗೆ ಆಗ್ರಹ

ಬಡತನದ ಮೇಲೆ ಮತ್ತು ಕೆಳಗೆ ಎನ್ನುವ ವಿಚಾರವನ್ನು ಬಿಟ್ಟು ಎಲ್ಲರಿಗೂ ಅನ್ವಯವಾಗುವಂತೆ ಪಿಂಚಣಿ ವ್ಯವಸ್ಥೆ ಮಾಡಬೇಕು. ಸಾರ್ವತ್ರಿಕವಾಗಿ ಪಿಂಚಣಿ ವ್ಯವಸ್ಥೆಯನ್ನು 60 ವರ್ಷ ಮೇಲಿರುವ ಎಲ್ಲರಿಗೂ ಜಾರಿಗೊಳಿಸಬೇಕು. ಏಕೆಂದರೆ ೯೩ ಪ್ರತಿಶತ ಕಾರ್ಮಿಕರು ಯಾವುದೇ ಸಾಮಾಜಿಕ ಸುರಕ್ಷತೆ ಇಲ್ಲದಿರುವ ಅಸಂಘಟಿತ ವಲಯದಲ್ಲಿರುವವರಾಗಿರುತ್ತಾರೆ. ಯಾವುದೇ ಇನ್ನಿತರ ಪೆನ್ಷನ್ ಸೌಲಭ್ಯವಿಲ್ಲದವರಿಗೆ, ಪ್ರಾರಂಭಿಕವಾಗಿ ತಿಂಗಳಿಗೆ ಕನಿಷ್ಟ ೩ಸಾವಿರ ರೂ.ನಿಗದಿಪಡಿಸಬೇಕು ಎಂಬುದು ಪೆನ್ಷನ್ ಪರಿಷತ್‌ನ ಆಗ್ರಹವಾಗಿದೆ.

ಪಿಂಚಣಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಕಡೆಗಣನೆ

ದೇಶದಲ್ಲಿ ಕಟ್ಟಡ ಕಾರ್ಮಿಕರು, ಕೂಲಿಕಾರ್ಮಿಕರು, ಚಾಲಕರು, ಬೀದಿಬದಿ ವ್ಯಾಪಾರಿಗಳು, ರೈತರು ಹೀಗೆ ಇವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ದೇಶದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆದರೆ 60 ವರ್ಷದ ನಂತರ ಇವರೆಲ್ಲರ ಬದುಕು ಹೇಗೆ ಸಾಗಬೇಕು. ಸರಕಾರಗಳು ಕೆಲವರಿಗೆ ಮಾತ್ರ ಪಿಂಚಣಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ನೆಪ ಹೇಳುತ್ತಿದೆ. ಆ ಹಣದಿಂದ ಹಿರಿಯ ನಾಗರಿಕರ ಮಾತ್ರೆ, ಆರೋಗ್ಯ ಖರ್ಚಿಗೆ ಸಾಲುವುದಿಲ್ಲ. ಇಳಿ ವಯಸ್ಸಿನಲ್ಲಿ ಮಕ್ಕಳೂ ನೋಡಿಕೊಳ್ಳುವುದಿಲ್ಲ. ಆದರೆ ಸರಕಾರ ಹಿರಿಯ ನಾಗರಿಕರನ್ನು ಕಡೆಗಣಿಸಿ ಅನ್ಯಾಯ ಮಾಡುತ್ತಿದೆ. ಇದನ್ನು ಕೂಡಲೇ ನಿಲ್ಲಿಸಿ, 60 ದಾಟಿದ ಎಲ್ಲರಿಗೂ ಕನಿಷ್ಟ 3 ಸಾವಿರ ರೂ.ಗಳನ್ನು ಸಾರ್ವತ್ರಿಕ ಪಿಂಚಣಿ ಸೌಲಭ್ಯವನ್ನು ನೀಡಬೇಕು.

-ಜಿ.ಕೆ.ಗಂಗಾಧರ್,ಪ್ರಧಾನ ಕಾರ್ಯದಶಿ ,

ವಿಮಾ ಕಾರ್ಪೊರೇಷನ್ ಪಿಂಚಣಿದಾರರ ಸಂಘ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೇಶ್ ಮಲ್ಲೂರು

contributor

Similar News