ಬರದ ನಡುವೆ ಮಹಿಳೆಯರ ಕೈ ಹಿಡಿದ ‘ಶಕ್ತಿ ಯೋಜನೆ’

Update: 2023-11-13 06:30 GMT

Photo: twitter.com/SevadalKL

ಬೆಂಗಳೂರು: ರಾಜ್ಯದ ಬಹುತೇಕ ತಾಲೂಕುಗಳಲ್ಲಿ ತೀವ್ರ ಸ್ವರೂಪದ ಬರ ಕಾಡುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಆದರೆ, ಹಳ್ಳಿಗಾಡಿನ ಅನೇಕ ದಿನಗೂಲಿ ಮಹಿಳೆಯರು ಕಾಂಗ್ರೆಸ್ ಸರಕಾರದ ‘ಶಕ್ತಿ ಯೋಜನೆ’ ಅಡಿ ಉಚಿತ ಬಸ್ ಪ್ರಯಾಣದ ಮೂಲಕ ಪಟ್ಟಣ, ಜಿಲ್ಲಾ ಕೇಂದ್ರಗಳಿಗೆ ಪ್ರಯಾಣ ಬೆಳೆಸಿ ಹೊಸ ಜೀವನ ಕಟ್ಟಿಕೊಂಡಿದ್ದಾರೆ.

ಎರಡು ತಿಂಗಳಿಂದ ಕೃಷಿ ಚಟುವಟಿಕೆಗಳು ಹೇಳಿಕೊಳ್ಳಲಾರದ ಸ್ಥಿತಿಗೆ ತಲುಪಿವೆ. ಇದರಿಂದ ಗ್ರಾಮಗಳಲ್ಲಿ ದಿನಗೂಲಿಗಳನ್ನೇ ನಂಬಿಕೊಂಡಿದ್ದ ಮಹಿಳೆಯರ ಬದುಕು ಸಂಕಷ್ಟಕ್ಕೆ ಗುರಿಯಾಗಿತ್ತು.

ಆದರೆ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಶಕ್ತಿ ಯೋಜನೆ’ ಆಸರೆಯಿಂದ ಸಾವಿರಾರು ಮಹಿಳೆಯರು ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗ, ಬೀದಿ ಬದಿ ವ್ಯಾಪಾರಗಳಲ್ಲಿ ತೊಡಗಿಕೊಳ್ಳುತ್ತಿರುವುದು ದಿನೇ ದಿನೇ ಹೆಚ್ಚಾಗಿದೆ.

ಅನೇಕ ಮಹಿಳೆಯರು ಸರಕಾರಿ ಬಸ್‌ಗಳಲ್ಲಿ ನಗರದ ಎಪಿಎಂಸಿ ಮಾರುಕಟ್ಟೆಗಳಿಗೆ ತಲುಪಿ ಅಲ್ಲಿಂದ ಆ ದಿನದ ತರಕಾರಿಗಳನ್ನು ಖರೀಸಿ ಬೀದಿ ವ್ಯಾಪಾರಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಸಂಜೆಯವರೆಗೂ ವಹಿವಾಟು ನಡೆಸಿ, ಹಣ ಸಂಪಾದಿಸಿ ಹಳ್ಳಿಗಳಿಗೆ ವಾಪಸ್ ಆಗುತ್ತಿದ್ದಾರೆ. ಪ್ರಮುಖವಾಗಿ ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೆಳಗಾವಿ, ಚಿತ್ರದುರ್ಗ... ಹೀಗೆ ಹಲವು ಜಿಲ್ಲೆಗಳಲ್ಲಿ ಬೀದಿ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಅಧಿಕವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಾಯಚೂರು ಸಮೀಪದ ಬಾಯಿದೊಡ್ಡಿ ಗ್ರಾಮದ ನರಸಮ್ಮ ‘ನಮ್ಮ ಊರಿನಲ್ಲಿ ಕೃಷಿ ದಿನಗೂಲಿಗಾಗಿ ತೆರಳುತ್ತಿದೆ. ಆದರೆ, ಬರಗಾಲ ಹಿನ್ನೆಲೆ ಬೆಳೆ ಕಟಾವು ಸೇರಿದಂತೆ ಯಾವುದೇ ಕೂಲಿ ಕೆಲಸಗಳು ಊರಿನಲ್ಲಿ ಸಿಗುತ್ತಿಲ್ಲ. ಆದರೆ, ಸರಕಾರ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರಿಂದ ನಿತ್ಯ ರಾಯಚೂರು ಪಟ್ಟಣಕ್ಕೆ ತೆರಳಿ ಬೀದಿ ವ್ಯಾಪಾರ ಮಾಡುತ್ತಿದ್ದು, ಸಂಜೆ ಮನೆಗೆ ವಾಪಸ್ ಆಗುತ್ತಿದ್ದೇನೆ’ ಎಂದು ನುಡಿದರು.

ಅದೇ ರೀತಿ, ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಹೊಸಹಳ್ಳಿಯ ಸುನೀತಾ ಮಾತನಾಡಿ, ‘ನಮ್ಮದೇ ಎರಡು ಎಕರೆ ಭೂಮಿಯಲ್ಲಿ ತರಕಾರಿ ಬೆಳೆಸುತ್ತಿದ್ದವು. ಆದರೆ, ಬರಗಾಲ ಹಿನ್ನೆಲೆ ಕೊಳವೆಬಾವಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಆದ ಕಾರಣ, ನಗರದಲ್ಲಿರುವ ಕಚೇರಿವೊಂದರಲ್ಲಿ ಉದ್ಯೋಗಗಕ್ಕೆ ಸೇರಿದ್ದೇನೆ. ನಿತ್ಯ ಓಡಾಟ ಉಚಿತವಾಗಿರುವ ಹಿನ್ನೆಲೆ ತಿಂಗಳಿಗೆ ೩ರಿಂದ ೪ ಸಾವಿರ ರೂ. ಉಳಿತಾಯ ಆಗುತ್ತಿದೆ.ಇದಕ್ಕೆ ಶಕ್ತಿ ಯೋಜನೆ ಕಾರಣ’ ಎಂದು ಹರ್ಷ ವ್ಯಕ್ತಪಡಿಸಿದರು.

ಹೀಗೆ, ಶಕ್ತಿ ಯೋಜನೆಯಿಂದ ಹಲವರು ಬದುಕು ಕಟ್ಟಿಕೊಂಡು ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನೊಂದೆಡೆ ಎಂದೂ ಮನೆಯಿಂದ ಹೊರಬರದ ಹೆಣ್ಣುಮಕ್ಕಳಿಗೆ ಶಕ್ತಿ ಯೋಜನೆಯಿಂದ ಸ್ವಾತಂತ್ರ್ಯ ಸಿಕ್ಕಂತಾಗಿದೆ.

ದೇವಾಲಯಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಶಿಕ್ಷಣ, ಉದ್ಯೋಗ, ಪ್ರವಾಸ ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಪ್ರಯಾಣ ವೆಚ್ಚದ ಉಳಿತಾಯದಿಂದ ಮಹಿಳೆಯರಿಗೆ ದೈನಂದಿನ ಬದುಕಿನಲ್ಲಿ ಮತ್ತಷ್ಟು ಬಲ ತುಂಬಿದ್ದು, ಹೆಚ್ಚಿನ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಶಕ್ತಿ ಯೋಜನೆ ಮೂಲಕ ರಾಜ್ಯ ಸರಕಾರವು ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ‘ಶಕ್ತಿ ಯೋಜನೆ’ಯಿಂದ ಓದುವ ಹೆಣ್ಣು ಮಕ್ಕಳ ಕನಸುಗಳಿಗೆ ರೆಕ್ಕೆ ಮೂಡಿದಂತಾಗಿದೆ. ಸರಕಾರದ ‘ಶಕ್ತಿ ಯೋಜನೆ’ಗೆ ಅಭೂತಪೂರ್ವವಾದ ಪ್ರತಿಕ್ರಿಯೆ ಮತ್ತು ಸಕಾರಾತ್ಮಕ ಸ್ಪಂದನೆ ದೊರಕಿದೆ. ಮಹಿಳೆಯರು ದೂರದ ಪಟ್ಟಣಗಳಿಗೆ ತೆರಳಿ ಹೆಚ್ಚಿನ ಆದಾಯದ ಉದ್ಯೋಗ ಹೊಂದಲು ಸಹಕಾರಿಯಾಗಿದೆ.

100 ಕೋಟಿ ದಾಟುವ ಶಕ್ತಿ ಯೋಜನೆ

‘ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಶಕ್ತಿ ಯೋಜನೆ ಅಡಿಯಲ್ಲಿ 92 ಕೋಟಿ ಮಹಿಳಾ ಪ್ರಯಾಣಿಕರು ಸರಕಾರಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ್ದು, ಪ್ರತಿದಿನದ ಪ್ರಯಾಣಿಕರ ಆಧಾರದಲ್ಲಿ ಈ ತಿಂಗಳ ಅಂತ್ಯದೊಳಗೆ ಆ ಸಂಖ್ಯೆ 100 ಕೋಟಿ ದಾಟುವ ಕುರಿತು ಸಾರಿಗೆ ನಿಗಮಗಳು ಅಂದಾಜಿಸಿವೆ.

ದಿನದಿಂದ ದಿನಕ್ಕೆ ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿದಿನ ಸರಾಸರಿ 60ರಿಂದ 65 ಲಕ್ಷ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಜೂನ್ 11ರಂದು ಆರಂಭವಾದ ಶಕ್ತಿ ಯೋಜನೆ ಅಡಿಯಲ್ಲಿ ಈವರೆಗೆ 92.75ಕೋಟಿ ಮಹಿಳಾ ಪ್ರಯಾಣಿಕರು ಸರಕಾರಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಪ್ರತೀ ದಿನದ ಪ್ರಯಾಣಿಕರನ್ನು ಗಮನಿಸಿದರೆ ಮುಂದಿನ 12ರಿಂದ 13 ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 100 ಕೋಟಿ ದಾಟುವ ಸಾಧ್ಯತೆಗಳಿವೆ. ಅಲ್ಲದೆ, ನ.9ಕ್ಕೆ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ 2,200 ಕೋಟಿ ರೂ.ಗಳನ್ನು ದಾಟಿದೆ.


ನ.17ಕ್ಕೆ ವಿಶೇಷ ಕಾರ್ಯಕ್ರಮಕ್ಕೆ ಚಿಂತನೆ

ಶೀಘ್ರದಲ್ಲಿ 100 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣದ ಸೇವೆ ಪಡೆಯುತ್ತಾರೆ. ಹೀಗಾಗಿ ನ.17ರಂದು ವಿಶೇಷ ಕಾರ್ಯಕ್ರಮ ಆಯೋಜಿಸಲು ಚಿಂತನೆ ಮಾಡಲಾಗಿದೆ.

-ರಾಮಲಿಂಗಾರೆಡ್ಡಿ , ಸಾರಿಗೆ ಸಚಿವ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಸಮೀರ್ ದಳಸನೂರು

contributor

Similar News