ಶಕ್ತಿ ಯೋಜನೆಯಿಂದ ಕರ್ನಾಟಕದ ದೇವಾಲಯಗಳಲ್ಲಿ ಜನಸಾಗರ, ಆದಾಯ ಹೆಚ್ಚಳ

Update: 2023-07-25 17:27 GMT
Editor : musaveer | By : ಆರ್. ಜೀವಿ

'ಶಕ್ತಿ ಯೋಜನೆಯ ಫಲದಿಂದ ಕರ್ನಾಟಕದ ದೇವಾಲಯಗಳು ಶ್ರೀಮಂತವಾಗುವತ್ತ ದಾಪುಗಾಲು ಹಾಕುತ್ತಿವೆ.'

ಇದು ಇವತ್ತಿನ ವಿಜಯ ಕರ್ನಾಟಕ ದಿನಪತ್ರಿಕೆಯ ಮುಖಪುಟದ ಲೀಡ್ ವಿಶೇಷ ವರದಿಯ ಮೊದಲ ಸಾಲು.

ಕರುನಾಡ ತೀರ್ಥಕ್ಷೇತ್ರಗಳಲ್ಲಿ ಪ್ರವಾಸಿಗರ ಹರಿವು, ಆದಾಯ ಹೆಚ್ಚಳ.

ಒಂದೇ ತಿಂಗಳಲ್ಲಿ 58 ದೇಗುಲಗಳ ಹುಂಡಿಯಲ್ಲಿ 25 ಕೋಟಿ ರೂಪಾಯಿ ಸಂಗ್ರಹ.

ಭಕ್ತಿ ಭಾವಕ್ಕೆ ಭರ್ಜರಿ ಶಕ್ತಿ.

ಇವು ವಿಜಯ ಕರ್ನಾಟಕದಲ್ಲಿ ಎಚ್.ಪಿ ಪುಣ್ಯವತಿ ಅವರು ಮಾಡಿರೋ ವಿಶೇಷ ವರದಿಯ ಶೀರ್ಷಿಕೆಗಳು.

ಮೊನ್ನೆ ಮೊನ್ನೆಯಷ್ಟೇ ಪ್ರಜಾವಾಣಿ ಮಾಡಿದ ವಿಶೇಷ ವರದಿ ಹೇಗೆ ಸಿದ್ದರಾಮಯ್ಯ ಸರಕಾರದ ಶಕ್ತಿ ಯೋಜನೆ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿ ಅವುಗಳನ್ನು ಲಾಭದ ದಾರಿಗೆ ತರುತ್ತಿವೆ ಎಂದು ವಿವರಿಸಿತ್ತು. ಶಕ್ತಿ ಯೋಜನೆಯಿಂದ ರಾಜ್ಯದ ಅಮ್ಮಂದಿರು, ಹೆಣ್ಣು ಮಕ್ಕಳು ಹೇಗೂ ಫುಲ್ ಖುಷ್ ಆಗಿದ್ದಾರೆ. ಅದರ ಜೊತೆಜೊತೆಗೆ ರಾಜ್ಯ ಸಾರಿಗೆ ಸಂಸ್ಥೆಯ ನಿಗಮಗಳೂ ಆದಾಯ ಹೆಚ್ಚಳದಿಂದ ಹೊಸ ಚೈತನ್ಯ ಪಡೆದುಕೊಂಡಿವೆ, ಸಾರಿಗೆ ಡ್ರೈವರ್ , ಕಂಡಕ್ಟರ್ ಗಳೂ ಹೆಚ್ಚು ಭತ್ತೆ ಸಿಗುವ ಖುಷಿಯಲ್ಲಿದ್ದಾರೆ ಅಂತ ಪ್ರಜಾವಾಣಿ ವರದಿ ಹೇಳಿತ್ತು.

ಈಗ ವಿಜಯ ಕರ್ನಾಟಕದ ವರದಿ ಬಂದಿದೆ. " 2022 ರ ಜೂನ್ 11 ರಿಂದ ಜುಲೈ 15ರವರೆಗೆ ಪ್ರತಿಷ್ಠಿತ 58 ದೇವಾಲಯಗಳಲ್ಲಿ ಇ ಹುಂಡಿಗಳ ಮೂಲಕ 19 ಕೋಟಿ ರೂಪಾಯಿ ಸಂಗ್ರಹವಾದರೆ 2023ರ ಜೂನ್ 11 ರಿಂದ ಜುಲೈ 15ರವರೆಗೆ ಭರ್ಜರಿ 24.47 ಕೋಟಿ ರೂಪಾಯಿ ಆದಾಯ ಬಂದಿದೆ. ಇನ್ನೂ ಹುಂಡಿಗಳನ್ನು ತೆರೆದರೆ ಕರ್ನಾಟಕದ ದೇವಾಲಯಗಳು ಇನ್ನೂ ಸಿರಿವಂತ ಆಗುವುದರಲ್ಲಿ ಅನುಮಾನವೇ ಇಲ್ಲ " ಎನ್ನುತ್ತಿದೆ ಈ ವರದಿ.

ಶಕ್ತಿ ಯೋಜನೆ ಜಾರಿಯಾದ ನಂತರ ಮುಜರಾಯಿ ದೇಗುಲಗಳಿಗೆ ಭಕ್ತರ ಭೇಟಿ ಹೆಚ್ಚಿದೆ. ಇದರಿಂದ ಬಹುತೇಕ ದೇವಾಲಯಗಳ ಆದಾಯವೂ ದುಪ್ಪಟ್ಟಾಗಿದೆ. ಚಾಮುಂಡೇಶ್ವರಿ, ಕುಕ್ಕೆ, ಬನಶಂಕರಿ,ನಂಜುಂಡೇಶ್ವರ ಸೇರಿದಂತೆ ಪ್ರಮುಖ ದೇಗುಲಗಳಿಗೆ ಬರುವ ಭಕ್ತರು ಮತ್ತು ದೇಗುಲಗಳ ಆದಾಯ ಹೆಚ್ಚಾಗಿದೆ ಎನ್ನುತ್ತಿದೆ ಈ ವರದಿ. ಇದರ ಜೊತೆಗೆ ಈ ದೇವಾಲಯಗಳ ಹೋದ ವರ್ಷ ಹಾಗು ಈ ವರ್ಷದ ಇದೇ ಅವಧಿಯ ಆದಾಯದ ವಿವರಗಳನ್ನೂ ಪತ್ರಿಕೆ ಕೊಟ್ಟಿದೆ.

ಅಷ್ಟೇ ಅಲ್ಲ. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೂ ಈ ಶಕ್ತಿ ಯೋಜನೆ ಶಕ್ತಿ ತುಂಬಿದೆ ಎಂದು ವಿಜಯ ಕರ್ನಾಟಕ ವರದಿ ಹೇಳುತ್ತಿದೆ. ಕೆಲವೇ ಕೆಲವು ಜಲಪಾತ, ಅಣೆಕಟ್ಟುಗಳನ್ನು ಬಿಟ್ಟರೆ ಉಳಿದ ಪ್ರದೇಶಗಳು ಮಳೆಗಾಲದಲ್ಲಿ ಬಿಕೋ ಎನ್ನುತ್ತಿದ್ದವು. ಆದರೆ ಶಕ್ತಿ ಯೋಜನೆಯಿಂದಾಗಿ ರಾಜ್ಯದ ಬಹುತೇಕ ಪ್ರವಾಸಿ ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಮಹಿಳೆಯರಿಗೆ ಟಿಕೆಟ್ ಫ್ರೀ ಎಂದು ಹೊರಟರೆ ಅವರ ಜೊತೆ ಅವರ ಮನೆಯ ಪುರುಷರೂ, ಮಕ್ಕಳೂ ಬರ್ತಾರೆ. ಇದರಿಂದ ಸಾರಿಗೆ ಸಂಸ್ಥೆಗೆ ಆದಾಯ ಹೆಚ್ಚಳ. ಅತ್ತ ಪ್ರವಾಸಿಗರಿಂದ ಆಯಾ ಊರುಗಳಲ್ಲಿ ವ್ಯಾಪಾರ, ವಹಿವಾಟು ಹೆಚ್ಚಳ. ಒಟ್ಟಾರೆ ಇದರಿಂದ ಆರ್ಥಿಕ ಚಟುವಟಿಕೆಗೆ ಟಾನಿಕ್.

ಅಲ್ಲಿಗೆ ಕೇವಲ ಕೆಟ್ಟ ರಾಜಕೀಯಕ್ಕಾಗಿ ಶಕ್ತಿ ಯೋಜನೆ ಬಗ್ಗೆ ಅಪಪ್ರಚಾರ ಮಾಡಿದವರು, ಕುಹಕವಾಡಿದವರು, ಮಹಿಳೆಯರನ್ನು ಅವಹೇಳನ ಮಾಡಿದವರು, ರಾಜ್ಯ ದಿವಾಳಿ ಆಗುತ್ತೆ ಎಂದು ಸುಳ್ಳು ಹರಡಿದವರು - ಇಂತಹ ದಿವಾಳಿ ಮನಸ್ಥಿತಿಯ ಒಂದಿಷ್ಟು ಐಟಿ ಸೆಲ್ ಟ್ರೋಲ್ ಗಳನ್ನೂ , ಅಸಹಿಷ್ಣುತೆ ಹಾಗು ದ್ವೇಷವನ್ನೇ ಉಸಿರಾಡುವ ದ್ವೇಶಭಕ್ತರನ್ನು, ಯಾವುದೇ ಜನಪರ ಯೋಜನೆಯನ್ನು ಸಹಿಸದ ಸಂಘ ಪರಿವಾರದ ನಾಯಕರನ್ನು ಬಿಟ್ಟರೆ ರಾಜ್ಯದ ಎಲ್ಲ ಜನ, ಅದರಲ್ಲೂ ಅಮ್ಮಂದಿರು, ಹೆಣ್ಣು ಮಕ್ಕಳು, ಧಾರ್ಮಿಕ ಶ್ರದ್ಧಾಳುಗಳು ಎಲ್ಲರೂ ಫುಲ್ ಖುಷ್ ಆಗಿದ್ದಾರೆ ಎಂದು ಸಾಬೀತಾಯಿತು. ದೇವಾಲಯಗಳಿಗೂ ಶ್ರದ್ಧಾಳುಗಳು ದೊಡ್ಡ ಸಂಖ್ಯೆಯಲ್ಲಿ ಹೋಗುತ್ತಿರೋದರಿಂದ ದೇವರಿಗೂ ಖುಷಿಯೇ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಿಂದ ಮನೆಯ ಹೆಣ್ಮಕ್ಕಳ ಕೈಯಲ್ಲಿ ಬಸ್ ಪ್ರಯಾಣದ ಖರ್ಚಿನ ದುಡ್ಡು ಉಳಿಯುತ್ತೆ. ಅನ್ನಭಾಗ್ಯದ ಐದು ಕೆಜಿ ಅಕ್ಕಿಯ ದುಡ್ಡು ಕೈ ಸೇರುತ್ತೆ. ಉಚಿತ ವಿದ್ಯುತ್ ಯೋಜನೆಯಿಂದಲೂ ಪ್ರತಿ ತಿಂಗಳು ಒಂದಿಷ್ಟು ದುಡ್ಡು ಉಳಿತಾಯವಾಗುತ್ತೆ. ಇನ್ನು ಯುವನಿಧಿ ಭತ್ತೆ ಶುರುವಾದರೆ ಮನೆಯ ಪದವೀಧರ ಯುವಕ, ಯುವತಿ ಕೈಗೂ ಪ್ರತಿ ತಿಂಗಳು ಒಂದಿಷ್ಟು ದುಡ್ಡು ಬರುತ್ತೆ. ಒಟ್ಟಾರೆ ರಾಜ್ಯದ ಜನರ ಕೈಯಲ್ಲಿ ತಿಂಗಳಾಗುವಾಗ ಖರ್ಚಿಗೆ ಒಂದಿಷ್ಟು ದುಡ್ಡು ಇರುತ್ತೆ. ಇದರ ಲಾಭ ನೇರವಾಗಿ ಆಗೋದು ರಾಜ್ಯಕ್ಕೇ. ರಾಜ್ಯದ ಆರ್ಥಿಕತೆಗೆ. ಇಲ್ಲಿ ಉದ್ಯೋಗ ಸೃಷ್ಟಿಗೆ. ಇಲ್ಲಿನ ವ್ಯಾಪಾರ, ಅಂಗಡಿ ಮುಗ್ಗಟ್ಟುಗಳಿಗೆ.

ಜನರಿಗೆ ಮನೆಯಲ್ಲಿ ಊಟ ಇಲ್ಲದ ಖಾಲಿ ಪ್ಲೇಟು ತಂದು ಬೀದಿಗೆ ಬಂದು ಅದನ್ನು ಹೊಡೀರಿ ಅಂತ ಹೇಳೋದು, ಅಂಗಡಿಯಿಂದ ಮೇಣದ ಬತ್ತಿ ಖರೀದಿಸಿ ತಂದು ಅದನ್ನು ಹಚ್ಚಿಕೊಂಡು ನಿಲ್ಲಿ ಅಂತ ಹೇಳೋದು - ಇವೆಲ್ಲವುಗಳಿಗಿಂತ ಜನರ ಕೈಗೆ ದುಡ್ಡು ಸಿಗೋ ಹಾಗೆ ಮಾಡೋದು ಬಹಳ ಒಳ್ಳೆಯ ಕೆಲಸ. ಜನರ ಕೈಯಲ್ಲಿ ದುಡ್ಡು ಓಡಾಡಿದರೆ, ಅಲ್ಲಲ್ಲಿ ಅದು ಖರ್ಚಾದರೆ ಅದರಿಂದ ಈ ರಾಜ್ಯಕ್ಕೇ ಲಾಭ. ಮಾರುಕಟ್ಟೆಯಲ್ಲಿ ಉತ್ಸಾಹ ಇರುತ್ತೆ, ಅಂಗಡಿ ಮುಗ್ಗಟ್ಟುಗಳಲ್ಲಿ ವ್ಯಾಪಾರ ಆಗುತ್ತೆ, ಇನ್ನೂ ಒಂದಷ್ಟು ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತೆ.

ಹಾಗಾಗಿ ದ್ವೇಷ ಹರಡುವವರ, ದಿವಾಳಿ ಮನಸ್ಥಿತಿಯ ಟ್ರೋಲ್ ಗಳಿಗೆ, ಸುಳ್ಳಾರೋಪಗಳಿಗೆ, ತಿರುಚಿದ ಫೋಟೋ, ವಿಡಿಯೋಗಳಿಗೆ, ಸುಳ್ಳುಕೋರ ಬಾಡಿಗೆ ಭಾಷಣಕಾರರ ಮಾತುಗಳಿಗೆ ಬಲಿ ಬೀಳಬೇಡಿ. ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ. ವಾಟ್ಸ್ ಆಪ್ ನಲ್ಲಿ ಅವುಗಳನ್ನು ನಿಮಗೆ ಕಳಿಸುವವರಿಗೆ ಬುದ್ಧಿ ಹೇಳಿ. ಅವುಗಳನ್ನು ಡಿಲೀಟ್ ಮಾಡಿ ಬಿಡಿ. ಅಪ್ಪಿ ತಪ್ಪಿಯೂ ಆ ಸುಳ್ಳು ಸುದ್ದಿಗಳನ್ನು ಫಾರ್ವರ್ಡ್ ಮಾಡಬೇಡಿ. ನಮ್ಮ ರಾಜ್ಯಕ್ಕೆ ಇನ್ನಷ್ಟು ಶಕ್ತಿ ತುಂಬಿ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಆರ್. ಜೀವಿ

contributor

Similar News