ಶಿವಮೊಗ್ಗ, ಧಾರವಾಡ, ಬೆಂಗಳೂರು ಕೃಷಿ-ತೋಟಗಾರಿಕೆ ವಿವಿ: ದಲಿತ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಫೆಲೋಶಿಪ್ ನೀಡಲು ಅನುದಾನ ಕೊರತೆ

Update: 2023-11-04 03:13 GMT

Photo: freepik


ಬೆಂಗಳೂರು: ಶಿವಮೊಗ್ಗ, ಧಾರವಾಡ, ಬೆಂಗಳೂರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ, ಗಿರಿಜನ ಉಪ ಯೋಜನೆಯಡಿಯಲ್ಲಿ ಅನುದಾನ ಕೊರತೆಯಾಗಿದೆ. ಹೀಗಾಗಿ ದಲಿತ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಫೆಲೋಶಿಪ್ ನೀಡಲು ಸಾಧ್ಯವಾಗಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

ರಾಜ್ಯ ಕಾಂಗ್ರೆಸ್ ಸರಕಾರವು ಐದು ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿನ ಲಭ್ಯವಿದ್ದ 11 ಸಾವಿರ ಕೋಟಿ ರೂ. ಮಾರ್ಗಪಲ್ಲಟ ಮಾಡಿರುವುದು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಕೃಷಿ, ತೋಟಗಾರಿಕೆ ವಿಶ್ವವಿದ್ಯಾನಿಲಯಗಳಿಗೆ ಈ ಯೋಜನೆಯಡಿಯಲ್ಲಿ ಅನುದಾನ ಕೊರತೆಯಾಗಿರುವುದು ಮುನ್ನೆಲೆಗೆ ಬಂದಿದೆ.

ಅನುದಾನ ಕೊರತೆಯಾಗಿರುವ ಕಾರಣ ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ದೊರೆತಿಲ್ಲ. ಪ್ರತೀ ತಿಂಗಳೂ ನೀಡುವ 10 ಸಾವಿರ ರೂ.ಗಳ ಫೆಲೋಶಿಪ್ ದೊರೆತಿಲ್ಲ.ಹೆಚ್ಚುವರಿ ವಸತಿ, ಬೋಜನಾ ವೆಚ್ಚ, ಶೈಕ್ಷಣಿಕ ಶುಲ್ಕ ವಿನಾಯಿತಿ ಇನ್ನಿತರ ಸೌಲಭ್ಯಗಳಿಂದ ದಲಿತ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.

ಈ ಕುರಿತು ಕೃಷಿ ಇಲಾಖೆಯ ಸರಕಾರದ ಕಾರ್ಯದರ್ಶಿ ವಿ. ಅನ್ಬುಕುಮಾರ್ ಅವರು ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಪಿ. ಮಣಿವಣ್ಣನ್ ಅವರಿಗೆ 2023ರ ಅಕ್ಟೋಬರ್ 18ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘The-file.in’ಗೆ ಲಭ್ಯವಾಗಿದೆ.

ಬೆಂಗಳೂರು, ಧಾರವಾಡ ಮತ್ತು ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕೆ ವಿಶ್ವವಿದ್ಯಾನಿಲಯಗಳಿಗೆ ನೀಡಿರುವ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಕಡಿಮೆಯಾಗಿದೆ. ಹೀಗಾಗಿ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ವಿಶ್ವವಿದ್ಯಾನಿಲಯಗಳು ಸರಕಾರಕ್ಕೆ ಅರೆ ಸರಕಾರಿ ಪತ್ರ ಬರೆದಿದ್ದವು. ಈ ಪತ್ರವನ್ನಾಧರಿಸಿ ಕೃಷಿ ಇಲಾಖೆಯ ಸರಕಾರದ ಕಾರ್ಯದರ್ಶಿ ಅನ್ಬುಕುಮಾರ್ ಅವರು ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ ಅವರಿಗೆ ಪತ್ರ ಬರೆದಿರುವುದು ತಿಳಿದು ಬಂದಿದೆ.

ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ಕೃಷಿ ಇಲಾಖೆಯ ಸರಕಾರದ ಕಾರ್ಯದರ್ಶಿ ಅನ್ಬುಕುಮಾರ್ ಅವರೊಂದಿಗೆ 2023ರ ನವೆಂಬರ್ 3ರಂದು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಪತ್ರದಲ್ಲೇನಿದೆ?: ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯ ದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ಇತರ ಕ್ರಿಯಾ ಯೋಜನೆಗಳನ್ನು ಆದ್ಯತೆ ಮೇಲೆ ಪೂರೈಸಲು 2020-21, 2021-22, 2022-23 ಮತ್ತು 2023-24ನೇ ಸಾಲಿನಲ್ಲಿ ಒದಗಿಸಲಾಗಿರುವ ಅನುದಾನವನ್ನು ಸಂಪೂರ್ಣವಾಗಿ ವೆಚ್ಚ ಮಾಡಲಾಗಿದೆ. ಆದರೆ ಅನುದಾನದ ಕೊರತೆಯಿಂದ ಪಿಎಚ್‌ಡಿ ಶಿಷ್ಯ ವೇತನ ನೀಡಲು ಸಾಧ್ಯವಾಗಿರುವುದಿಲ್ಲ. ಹೆಚ್ಚುವರಿ ಅನುದಾನವನ್ನು ಒದಗಿಸಿದಲ್ಲಿ ದಲಿತ ಪಿಎಚ್‌ಡಿ ವಿದ್ಯಾರ್ಥಿಗಳು ಕೋರಿರುವಂತೆ ಫೆಲೋಶಿಪ್‌ಪಾವತಿಸಲು ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಏಳಿಗೆಗೆ ಅನುಕೂಲವಾಗುವ ದೃಷ್ಟಿಯಿಂದ ಹಾಗೂ ಎಸ್‌ಎಸ್‌ಪಿ, ಟಿಎಸ್‌ಪಿ ಅಡಿಯ ಎಲ್ಲಾ ಕ್ರಿಯಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಎಸ್‌ಎಸ್‌ಪಿ, ಟಿಎಸ್‌ಪಿ ಅಡಿಯಲ್ಲಿ 2023-24ನೇ ಸಾಲಿನಲ್ಲಿ 1,459.27 ಲಕ್ಷ ರೂ.ಗಳ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ವಿ. ಅನ್ಬುಕುಮಾರ್ ಅವರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಕೃಷಿ ವಿಜ್ಞಾನ ವಿವಿಗಳ 2023-24ನೇ ಸಾಲಿನ ಆಯವ್ಯಯದಲ್ಲಿ ಕೃಷಿ ಸಂಶೋಧನೆ ಮತ್ತು ಶಿಕ್ಷಣದ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ 86 ಲಕ್ಷ ರೂ. ಹಾಗೂ 35 ಲಕ್ಷ ರೂ. ಸೇರಿ ಒಟ್ಟು 121 ಲಕ್ಷ ರೂ. ಹಂಚಿಕೆ ಮಾಡಲಾಗಿತ್ತು.

ಇದರಲ್ಲಿ 2ನೇ ಕಂತಿನ ಅನುದಾನವೂ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಬಿಡುಗಡೆ ಮಾಡಲಾಗಿತ್ತು. ಈ ಅನುದಾನವನ್ನು ಕೃಷಿ ವಿಶ್ವವಿದ್ಯಾನಿಲಯಗಳು ಸಂಪೂರ್ಣವಾಗಿ ವೆಚ್ಚ ಮಾಡಿತ್ತು. ಹೀಗಾಗಿ ಪ್ರಸ್ತಕ ಸಾಲಿನಲ್ಲಿ ಬಿಡುಗಡೆಗೆ ಬಾಕಿ ಇರುವ 3ನೇ ಕಂತಿನ ಅನುದಾನವನ್ನು ಹೊರತುಪಡಿಸಿ ಇನ್ನೂ ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ ಎಂಬುದು ತಿಳಿದು ಬಂದಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಎಸ್‌ಸಿಎಸ್‌ಪಿ ಟಿಎಸ್‌ಪಿ ಅಡಿಯಲ್ಲಿ 318.28 ಲಕ್ಷ ರೂ. ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದೆ. ಈ ವಿಶ್ವವಿದ್ಯಾನಿಲಯದಲ್ಲಿ ಸುಮಾರು 582 ಪರಿಶಿಷ್ಟ ಮತ್ತು 136 ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳ ಹೆಚ್ಚುವರಿ ವಸತಿ, ಭೋಜನಾ ವೆಚ್ಚ, ಶೈಕ್ಷಣಿಕ ಶುಲ್ಕ ವಿನಾಯಿತಿ, ಲ್ಯಾಪ್ ಟಾಪ್, ರೆಫರೆನ್ಸ್ ಪುಸ್ತಕಗಳೂ, ಪಿಎಚ್‌ಡಿ ವಿದ್ಯಾರ್ಥಿಗಳ ಫೆಲೋಶಿಪ್, ಶೈಕ್ಷಣಿಕ ಪ್ರವಾಸ ಭತ್ತೆ ಮತ್ತು ಇನ್ನಿತರ ವೆಚ್ಚಗಳನ್ನು ಭರಿಸಲು 318.28 ಲಕ್ಷ ರೂ.ಗಳ ಹೆಚ್ಚುವರಿ ಅನುದಾನದ ಅವಶ್ಯಕತೆ ಇರುವುದು ಗೊತ್ತಾಗಿದೆ.

ಧಾರವಾಡ ಕೃಷಿ ವಿಶ್ವವಿದ್ಯಾನಿಲಯವು 435.55 ಲಕ್ಷ ರೂ.ಗಳನ್ನು ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇರಿಸಿದೆ. ಈ ವಿಶ್ವವಿದ್ಯಾನಿಲಯವೂ ಸಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ನೀಡುವ ಪ್ರತೀ ತಿಂಗಳು ಸಹಾಯಧನ, ಗ್ರಂಥಾಲಯ ಪುಸ್ತಕ ಹಾಗೂ ಗಣಕೀಕರಣ ವೆಚ್ಚವನ್ನು ಭರಿಸಲು 453.55 ಲಕ್ಷ ರೂ.ಗಳ ಹೆಚ್ಚುವರಿ ಬೇಡಿಕೆಗಾಗಿ ಮಂಡಿಸಿರುವುದು ತಿಳಿದು ಬಂದಿದೆ.

ಕೆಳದಿ ಶಿವಪ್ಪನಾಯಕ ಕೃಷಿ, ತೋಟಗಾರಿಕೆ ವಿಶ್ವವಿದ್ಯಾ ನಿಲಯವೂ 687.44 ಲಕ್ಷ ರೂ. ಹೆಚ್ಚುವರಿ ಅನು ದಾನಕ್ಕೆ ಬೇಡಿಕೆ ಇರಿಸಿದೆ. ಈ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಶೈಕ್ಷಣಿಕ ಪ್ರವಾಸ, ವಿದೇಶ ಪ್ರವಾಸ, ಕೋಚಿಂಗ್ ಕ್ಲಾಸ್, ಸೆಮಿನಾರ್, ಕೌಶಲ್ಯಾಭಿವೃದ್ಧಿ, ಸಂಶೋಧನಾ ಪ್ರಬಂಧ ತಯಾರಿಸಲು ಸಹಾಯ ಧನ ನೀಡಲು ಎಸ್‌ಸಿಎಸ್‌ಪಿ ಅಡಿಯಲ್ಲಿ 469.34 ಲಕ್ಷ ರೂ., ಟಿಎಸ್‌ಪಿ ಅಡಿ ಯಲ್ಲಿ 218.10 ಲಕ್ಷ ರೂ.ಗಳ ಬೇಡಿಕೆಯನ್ನು ಇರಿಸಿರುವುದು ಗೊತ್ತಾಗಿದೆ. ಇದಕ್ಕೊಂದು ಸದ್ಯದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಆರ್ಥಿಕ ಇಲಾಖೆ ಜತೆ ಮುಂದಿನ ವಾರದಲ್ಲಿ ಜಂಟಿ ಸಭೆ ನಡೆಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮಣಿವಣ್ಣನ್ ಅವರು ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಜಿ.ಮಹಾಂತೇಶ್

contributor

Similar News