ನಾಡು ಕಂಡ ಅಪರೂಪದ ರಾಜಕಾರಣಿ ಎಸ್.ನಿಜಲಿಂಗಪ್ಪ
ಭಾರತದ ಇತಿಹಾಸದಲ್ಲಿ, ಎರಡು-ಸ್ಮರಣೀಯ ದಾಖಲೆಗಳೆಂದರೆ, ಒಂದು ಸ್ವಾತಂತ್ರ್ಯ ಸಾಧನೆ, ಮತ್ತೊಂದು ಭಾಷಾವಾರು ಪ್ರಾಂತ ರಚನೆ. ಭಾಷಾವಾರು ಪ್ರಾಂತ ರಚನೆಯಲ್ಲಿ ನಿಜಲಿಂಗಪ್ಪನವರು ವಹಿಸಿದ ಪಾತ್ರ ಅನನ್ಯವಾದದ್ದು. ಕನ್ನಡಿಗರ ಬಹುದಿನಗಳ ಕನಸು ನನಸಾಗಲು, ಕನ್ನಡದ ಇತರ ಮುಂದಾಳುಗಳ ಜೊತೆಯಲ್ಲಿ ಸುಮಾರು 15 ವರ್ಷಗಳ ಕಾಲ ನಡೆಸಿದ ಏಕೀಕರಣ ಚಳವಳಿಯ ಫಲವಾಗಿ, 1956ರ ನವೆಂಬರ್ 1ರಂದು, ಏಕೀಕರಣವಾಗಿ ವಿಶಾಲ ಮೈಸೂರು ರಾಜ್ಯ ಉದಯವಾಯಿತು.
ಕರ್ನಾಟಕ ರಾಜಕೀಯ ಮತ್ತು ಆಡಳಿತಾತ್ಮಕ ಇತಿಹಾಸದಲ್ಲಿ ಪ್ರಮುಖರಾದವರು ಕರ್ನಾಟಕ ಶಿಲ್ಪಿ, ರಾಷ್ಟ್ರ ನೇತಾರ, ಮುತ್ಸದ್ದಿ ಸಿದ್ದವನಹಳ್ಳಿ ನಿಜಲಿಂಗಪ್ಪ. ನಾಡು, ನುಡಿ, ಗಡಿಗಳ ಹಿತಕ್ಕಾಗಿ ಸಮದೃಷ್ಟಿಯಿಂದ ಬಿಡುವಿಲ್ಲದೆ ದುಡಿದ ಎಸ್. ನಿಜಲಿಂಗಪ್ಪನವರು, ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಿಲು ಗ್ರಾಮದಲ್ಲಿ 10-12-1902ರಲ್ಲಿ ಜನಿಸಿದವರು. ತಂದೆ ಅಡಿವೆಪ್ಪನವರು, ತಾಯಿ ನೀಲಮ್ಮನವರು.
ಹಲವಾಗಿಲಿನಲ್ಲಿ ಪ್ರಾಥಮಿಕ ಶಿಕ್ಷಣ, ನಂತರ 12ನೆಯ ವಯಸ್ಸಿನಲ್ಲೇ ದಾವಣಗೆರೆಯಲ್ಲಿ ಲೋವರ್ ಸೆಕೆಂಡರಿ ಪರೀಕ್ಷೆ ಪಾಸು ಮಾಡಿದರು. ಚಿತ್ರದುರ್ಗದಲ್ಲಿ ಪ್ರೌಢಶಿಕ್ಷಣ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ 1924ರಲ್ಲ್ ಬಿ.ಎ. ಪದವಿ ಪಡೆದರು. ಪೂನಾದಲ್ಲಿ ಫರ್ಗ್ಯುಸನ್ ಲಾ ಕಾಲೇಜಿನಲ್ಲಿ ಕಾನೂನು ಪದವಿ, ಆನಂತರ ಮೈಸೂರು ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ನೋಂದಣಿ, ಚಿತ್ರದುರ್ಗದಲ್ಲಿ ವಕೀಲವೃತ್ತಿ ಆರಂಭ ಮಾಡಿದರು. ವೃತ್ತಿಯಲ್ಲಿ ಪ್ರಾಮಾಣಿಕತೆ, ಅನ್ಯಾಯದ ವಿರುದ್ಧದ ಪ್ರಕರಣಗಳಿಗೆ ಮಾತ್ರ ವಕಾಲತ್ತು ಮಾಡುತ್ತಿದ್ದರು. ಬಡವರ ಪರ ವಾದಕ್ಕೆ ಆದ್ಯತೆ, ತಮ್ಮ ವೃತ್ತಿಯಲ್ಲಿ ಎಂದೂ ಅನ್ಯಾಯ, ಅನೀತಿಗಳೊಡನೆ ರಾಜಿಮಾಡಿಕೊಂಡವರಲ್ಲ. ಜೀವನ ಪರ್ಯಂತ ಆ ನಿಲುವನ್ನು ಕಾಯ್ದುಕೊಂಡು ಬಂದು ಗ್ರಾಮೀಣ ಭಾಗದ ಎಷ್ಟೋ ಕಕ್ಷಿದಾರರಿಗೆ ಉಚಿತ ಸೇವೆ ಸಲ್ಲಿಸುತ್ತಿದ್ದ ನಿಜಲಿಂಗಪ್ಪನವರು, ಜಿಲ್ಲೆಯಲ್ಲಿ ಜನಪ್ರಿಯ ನ್ಯಾಯವಾದಿಗಳಾಗಿ ಹೆಸರು ಪಡೆದಿದ್ದರು.
ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬೆಂಗಳೂರಿಗೆ ಬಂದಿದ್ದ, ಮಹಾತ್ಮಾ ಗಾಂಧೀಜಿ ಅವರ ಭಾಷಣದ ಪ್ರಭಾವ, ‘ಯಂಗ್ ಇಂಡಿಯಾ’ ಪತ್ರಿಕೆಯ ಗಾಂಧೀಜಿ ಅವರ ಲೇಖನಗಳಿಂದ ಸ್ಫೂರ್ತಿ ಪಡೆದು ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಿಯಾಶೀಲಪಾತ್ರ ವಹಿಸಿದರು.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ, ಕರ್ನಾಟಕ ಜಲಿಯನ್ ವಾಲಾಭಾಗ್, ಎಂದೇ ಹೆಸರಾದ ವಿದುರಾಶ್ವತ್ಥದ ದುರಂತದ ಬಗೆಗೆ, ಅಲ್ಲಲ್ಲಿ ಸಭೆ ಸೇರಿಸಿ, ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಜಾಗೃತಿ ಉಂಟು ಮಾಡುತ್ತಾರೆ. ಅರಣ್ಯ ಕಾಯ್ದೆ ಉಲ್ಲಂಘಿಸಿ ಬಂಧನಕ್ಕೆ ಒಳಗಾಗುತ್ತಾರೆ.
1940ರಲ್ಲಿ, ಸೆರೆಮನೆಯಿಂದ ಬಿಡುಗಡೆಯಾಗುತ್ತಾರೆ. ಆದರೆ, ಅವರ ವಕೀಲವೃತ್ತಿಯ ಸನ್ನದನ್ನು ರದ್ದು ಪಡಿಸಲಾಗುತ್ತದೆ. ಅದರಿಂದ ಆದಾಯವಿಲ್ಲದೆ ಕುಟುಂಬವು ಕಷ್ಟಕ್ಕೀಡಾದರೂ, ಅದನ್ನು ಅನುಭವಿಸುತ್ತಲೇ ದೇಶಸೇವೆ ಸಲ್ಲಿಸಿದವರು ನಿಜಲಿಂಗಪ್ಪನವರು.
1942ರಲ್ಲಿ ಮುಂಬೈನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ‘‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’’ ಘೋಷಣೆಯಾಗುತ್ತದೆ. ಆ ಅಧಿವೇಶನದಿಂದ ಹಿಂದಿರುಗುವಾಗ ನಿಜಲಿಂಗಪ್ಪನವರನ್ನು ಬಂಧಿಸಲಾಗುತ್ತದೆ. ಆಗಲೇ ಗಾಂಧೀಜಿ ಮತ್ತಿತರ ನಾಯಕರ ಬಂಧನವಾಗಿ, ರಾಷ್ಟ್ರಾದ್ಯಂತ ಹಿಂಸಾಚಾರ ನಡೆಯುತ್ತದೆ. ಆ ಅವಧಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ನಿಜಲಿಂಗಪ್ಪನವರಿಗೆ 1943ರಲ್ಲಿ ಬಿಡುಗಡೆಯಾಗುತ್ತದೆ.
1946ರಲ್ಲಿ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ನಿಜಲಿಂಗಪ್ಪನವರು, 1947ರಲ್ಲಿ ರಾಷ್ಟ್ರದ ಸಂವಿಧಾನ ರಚನಾ ಸಮಿತಿಗೆ ನೇಮಕಗೊಳ್ಳುತ್ತಾರೆ.
ಸ್ವಾತಂತ್ರ್ಯಾನಂತರ, ನಿಜಲಿಂಗಪ್ಪನವರು, ಕನ್ನಡಿಗರ ಬಹುದಿನಗಳ ಕನಸಾದ ಕರ್ನಾಟಕ ಏಕೀಕರಣದ ಬಗೆಗೆ ಪೂರ್ಣ ಗಮನಹರಿಸುತ್ತಾರೆ. ಈ ಚಳವಳಿಗೆ ಕರ್ನಾಟಕದ ಜನತೆಯಿಂದ ಸ್ವಾತಂತ್ರ್ಯ ಚಳವಳಿಗೆ ಸಿಕ್ಕಿದ ಬೆಂಬಲಕ್ಕಿಂತಲೂ ಹೆಚ್ಚಿನ ಬೆಂಬಲ ದೊರಕುತ್ತದೆ. ವಾಸ್ತವವಾಗಿ ಭಾರತದ ಇತಿಹಾಸದಲ್ಲಿ, ಎರಡು-ಸ್ಮರಣೀಯ ದಾಖಲೆಗಳೆಂದರೆ, ಒಂದು ಸ್ವಾತಂತ್ರ್ಯ ಸಾಧನೆ, ಮತ್ತೊಂದು ಭಾಷಾವಾರು ಪ್ರಾಂತ ರಚನೆ. ಭಾಷಾವಾರು ಪ್ರಾಂತ ರಚನೆಯಲ್ಲಿ ನಿಜಲಿಂಗಪ್ಪನವರು ವಹಿಸಿದ ಪಾತ್ರ ಅನನ್ಯವಾದದ್ದು. ಕನ್ನಡಿಗರ ಬಹುದಿನಗಳ ಕನಸು ನನಸಾಗಲು, ಕನ್ನಡದ ಇತರ ಮುಂದಾಳುಗಳ ಜೊತೆಯಲ್ಲಿ ಸುಮಾರು 15 ವರ್ಷಗಳ ಕಾಲ ನಡೆಸಿದ ಏಕೀಕರಣ ಚಳವಳಿಯ ಫಲವಾಗಿ, 1956ರ ನವೆಂಬರ್ 1ರಂದು, ಏಕೀಕರಣವಾಗಿ ವಿಶಾಲ ಮೈಸೂರು ರಾಜ್ಯ ಉದಯವಾಯಿತು.
ಮೈಸೂರಿನ ಅರಸರಾಗಿದ್ದ ಜಯಚಾಮರಾಜೇಂದ್ರ ಒಡೆಯರೇ ರಾಜ್ಯಪಾಲರು, ನಿಜಲಿಂಗಪ್ಪನವರೇ ಪುನರ್ರಚಿತ ಕರ್ನಾಟಕದ ಮೊದಲ ಮುಖ್ಯಮಂತ್ರಿಗಳಾದರು. ಮುಂದೆ 17 ವರ್ಷಗಳ ನಂತರ, ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯಕ್ಕೆ ‘ಕರ್ನಾಟಕ’ ಎಂಬ ನಾಮಕರಣವಾಯಿತು.
ಸ್ವತಂತ್ರ ಭಾರತದ ಸಂವಿಧಾನಾತ್ಮಕ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿದ್ದು 1952ರಲ್ಲಿ. ಆ ಚುನಾವಣೆಯಲ್ಲಿ ನಿಜಲಿಂಗಪ್ಪನವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆಗೊಂಡರು. ಸಂಸತ್ತಿನಲ್ಲಿ ಅವರು ಯೋಜನಾ ಆಯೋಗದ ಪ್ರಾಮುಖ್ಯತೆ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿ, ರೈಲು ಮಾರ್ಗಗಳ ವಿಸ್ತರಣೆ ಇತ್ಯಾದಿಗಳ ಬಗೆಗೆ ಒತ್ತುಕೊಟ್ಟರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ಮೈಸೂರು ಕಾಂಗ್ರೆಸ್ ಮತ್ತು ಕರ್ನಾಟಕ ಕಾಂಗ್ರೆಸ್ಗಳ ವಿಲೀನದಲ್ಲಿ ನಿಜಲಿಂಗಪ್ಪನವರ ಪಾತ್ರ ದೊಡ್ಡದು.
1967ರಲ್ಲಿ ನಡೆದ ಚುನಾವಣೆಯಲ್ಲಿ, ಅವಿರೋಧವಾಗಿ ರಾಜ್ಯ ವಿಧಾನಸಭೆಗೆ ಆಯ್ಕೆಗೊಂಡ ನಿಜಲಿಂಗಪ್ಪನವರು, ಮತ್ತೆ ಮುಖ್ಯ ಮಂತ್ರಿಗಳಾಗುತ್ತಾರೆ. ತಾವು ಪರಿಕಲ್ಪಿಸಿದ್ದ ಕನ್ನಡ ನಾಡಿನ ಸರ್ವಾಂಗೀಣ ಅಭಿವೃದ್ಧಿ ಕಾರ್ಯದಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿರುವಷ್ಟರಲ್ಲಿ, ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ, ಆಯ್ಕೆಯಾಗುತ್ತಾರೆ. ಎರಡು ಹುದ್ದೆಗಳಲ್ಲಿ ಮುಂದುವರಿಯುವುದು ಸೂಕ್ತವಲ್ಲವೆಂದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಮುಳುಗುತ್ತಾರೆ.
ಅವರು, ಅಧ್ಯಕ್ಷರಾದ ಆರಂಭದಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರೊಡನೆ, ಅವರ ಸಂಬಂಧ ಸೌಹಾರ್ದಯುತವಾಗಿಯೇ ಇತ್ತು. ಆದರೆ, ವಿಭಿನ್ನ ಪಂಥದವರ ಮಿಶ್ರಣವಾಗಿದ್ದ ಕಾಂಗ್ರೆಸ್ ಪಕ್ಷ, ಒಳತಿಕ್ಕಾಟದಲ್ಲಿ ಸಿಕ್ಕಿಕೊಂಡಿತ್ತು. ಆಗ ಕಾಂಗ್ರೆಸ್ ಎರಡು ಗುಂಪುಗಳಾದವು.
ಏನಿದ್ದರೂ, ಎರಡು ಗುಂಪುಗಳ ಆರೋಪ-ಪ್ರತ್ಯಾರೋಪಗಳು ಉಲ್ಬಣಗೊಂಡು, ಈ ಎಲ್ಲಾ ನೀತಿಹೀನ ಘಟನೆಗಳನ್ನು ಗಮನಿಸಿ, ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಎರಡು ಗುಂಪುಗಳ ರಾಜಿಗೆ ನಿಜಲಿಂಗಪ್ಪನವರು ಮಾಡಿದ ಪ್ರಯತ್ನವೂ ಫಲಿಸದೆ, 120 ವರ್ಷಗಳ ಹಿಂದೆ ಸ್ಥಾಪಿತವಾಗಿ, ಭಾರತ ಸ್ವತಂತ್ರ್ಯಕ್ಕಾಗಿ ಅಸಾಧಾರಣ ಹೋರಾಟ ನಡೆಸಿದ ಹಿರಿಯ ರಾಜಕೀಯ ಪಕ್ಷವು, ಅದರ ಹೃದಯದಂತಿದ್ದ ಮಹಾತ್ಮಾ ಗಾಂಧೀಜಿ ಅವರ ಶತಮಾನೋತ್ಸವದ ವರ್ಷವೇ ಒಡೆದು ಇಬ್ಭಾಗವಾಯಿತು. ಆನಂತರ ನಿಜಲಿಂಗಪ್ಪನವರು ಬೇಸರದಿಂದ ರಾಜಕೀಯ ಕ್ಷೇತ್ರದಿಂದಲೇ ದೂರ ಉಳಿಯಬಯಸಿದರು.
ನಿಜಲಿಂಗಪ್ಪನವರು, ಪ್ರಜಾಪ್ರಭುತ್ವದ ಯಶಸ್ಸಿಗೆ ಬೇಕಾದ ಮೊದಲ ಅಗತ್ಯವೆಂದರೆ, ಜನಪ್ರತಿನಿಧಿಗಳ ಶುದ್ಧ ಶೀಲ, ಚಾರಿತ್ರ್ಯ ಮತ್ತು ಸ್ವಹಿತ ಮೀರಿದ ಸೇವಾ ಮನೋಭಾವ ಎನ್ನುತ್ತಿದ್ದರು. ಅವರು ಕೇವಲ ಉಪದೇಶ ಮಾಡಲಿಲ್ಲ. ಸ್ವಯಂ ನುಡಿದು, ನುಡಿದಂತೆ ನಡೆದು ತೋರಿದ, ಶರಣ ಮಾರ್ಗದಲ್ಲಿ ನಡೆದ ವ್ಯೋಮ ಚೇತನ.
ನಿಜಲಿಂಗಪ್ಪನವರಲ್ಲಿ ಓಲೈಕೆ-ರಾಜಿ ಮನೋಭಾವವಿದ್ದಿದ್ದರೆ, ಬಹುಶಃ ರಾಷ್ಟ್ರಪತಿ ಅಥವಾ ಪ್ರಧಾನಿ ಸ್ಥಾನ ಪಡೆಯಬಹುದಾಗಿತ್ತು.
ಹಳ್ಳಿಯ ಪರಿಸರದಲ್ಲಿ ಹುಟ್ಟಿದ ಅವರು, ಗಾಂಧೀಜಿ ಕಂಡ, ಕನಸಿನ ಗ್ರಾಮ ಭಾರತ ನಿರ್ಮಾಣಕ್ಕಾಗಿ ಶ್ರಮಿಸಿದರು. ಹಾಗೆಯೇ ಅವರಿಗೆ ಕರ್ನಾಟಕದ ಕೃಷಿ ಕೈಗಾರಿಕೆಗಳ ಅಭಿವೃದ್ಧಿ, ವಿದ್ಯುಚ್ಛಕ್ತಿ, ನೀರಾವರಿ ಯೋಜನೆಗಳು, ಅಸ್ಪಶ್ಯತಾ ನಿವಾರಣೆ, ಪಾನನಿರೋಧ, ಯುವಶಕ್ತಿಯ ಸದ್ಬಳಕೆ, ಭ್ರಷ್ಟಾಚಾರ ನಿರೋಧ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ರಾಜಕೀಯ ಶುದ್ಧಿ, ಇವು ಆಪ್ತ ವಿಷಯಗಳಾಗಿದ್ದವು.
ಇನ್ನೆರಡು ವರ್ಷಗಳಲ್ಲಿ ಶತಾಯುವಾಗಬೇಕಾಗಿದ್ದ ಈ ಹಿರಿಯ ಜೀವ ದೈಹಿಕ ಅಸ್ವಸ್ಥತೆಯಿಂದ 2000 ದ ಆಗಸ್ಟ್ 08ರಂದು, ಅಸ್ತಂಗತವಾಯಿತು. ಕನ್ನಡ ನಾಡು ಓರ್ವ ವಿಶ್ವಮಾನವನನ್ನು, ರಾಷ್ಟ್ರ ಭಕ್ತನನ್ನು, ನಾಡಶಕ್ತಿಯನ್ನು ಕಳೆದುಕೊಂಡಿತು.