ರಾಜ್ಯ ಸಹಕಾರಿ ಬ್ಯಾಂಕ್ ಗಳಲ್ಲಿ ಮರು ಪಾವತಿಯಾಗದ 1,400 ಕೋಟಿ ರೂ. ಸಾಲ
ಬೆಂಗಳೂರು: ರಾಜ್ಯದ ಸಹಕಾರಿ ಬ್ಯಾಂಕ್ಗಳಲ್ಲಿ ಸಾಲ ಪಡೆದು ಮರು ಪಾವತಿ ಮಾಡದಿರುವ ಸಾಲದ ಅಸಲು 1,400 ಕೋಟಿ ರೂ., ಬಡ್ಡಿ 333 ಕೋಟಿ ರೂ. ಇದೆ. ಸಾಲ ಪಡೆದವರ ಪೈಕಿ 2,888 ಮಂದಿ ಪತ್ತೆಯಾಗಿಲ್ಲ.
ಇದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಕೇಳಿರುವ ಪ್ರಶ್ನೆಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ನೀಡಿರುವ ಉತ್ತರ.
ಅಪೆಕ್ಸ್ ಬ್ಯಾಂಕ್ನಲ್ಲಿ 37 ಸಾಲಗಾರರು ನಾಪತ್ತೆಯಾಗಿದ್ದು 127.79 ಲಕ್ಷ ರೂ. ಅಸಲು ಮ್ತು 68.71 ಲಕ್ಷ ರೂ. ಬಡ್ಡಿ ಸೇರಿ ಒಟ್ಟು 196.5 ಲಕ್ಷ ರೂ.ಗಳು ಮರುಪಾವತಿಯಾಗಿಲ್ಲ ಎಂದು ಸಚಿವರು ನೀಡಿರುವ ಉತ್ತರದಿಂದ ತಿಳಿದುಬಂದಿದೆ.
ರಾಜ್ಯದ ಸಹಕಾರ ಬ್ಯಾಂಕ್ಗಳಲ್ಲಿ ಸಾಲ ಪಡೆದು ಮರು ಪಾವತಿ ಮಾಡದೆ ನಾಪತ್ತೆಯಾಗದವರ ಸಂಖ್ಯೆ ಮತ್ತು ಹೆಸರಿನ ಪಟ್ಟಿಯನ್ನು ಒದಗಿಸಿರುವ ಸಚಿವ ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ನಲ್ಲಿ ಸಾಲ ಪಡೆದು ಪತ್ತೆಯಾಗದವರ ಹೆಸರುಗಳನ್ನು ಬಹಿರಂಗಪಡಿಸದೆ ಮುಚ್ಚಿಟ್ಟಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಅಪೆಕ್ಸ್ ಬ್ಯಾಂಕ್ನಿಂದ ಸಾಲ ಪಡೆದು ನಾಪತ್ತೆಯಾದವರ ಹೆಸರುಗಳನ್ನು ಬಹಿರಂಗಪಡಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ವಿಶೇಷವೆಂದರೆ ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿತ್ತು ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.
ಮರು ಪಾವತಿ ಮಾಡದೆ ಪತ್ತೆಯಾಗದವರು ಪಟ್ಟಣ ಸಹಕಾರ ಬ್ಯಾಂಕ್ಗಳ ಪೈಕಿ ಬೆಂಗಳೂರು ನಗರದಲ್ಲಿ 2,485 ವ್ಯಕ್ತಿಗಳಿದ್ದಾರೆ. ಮೈಸೂರಿನಲ್ಲಿ 132, ಕಲಬುರಗಿಯಲ್ಲಿ ಶೂನ್ಯ, ಬೆಳಗಾವಿಯಲ್ಲಿ 15 ಮಂದಿ ಇದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ 37 ಮಂದಿ, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ 29, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ನಲ್ಲಿ 158 ಮಂದಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ 13 ಮಂದಿ ಸೇರಿ ಒಟ್ಟು 2,888 ಮಂದಿ ನಾಪತ್ತೆಯಾಗಿರುವುದು ಸಚಿವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
ಪಟ್ಟಣ ಸಹಕಾರ ಬ್ಯಾಂಕ್ಗಳ ಪೈಕಿ ಬೆಂಗಳೂರು ನಗರದಲ್ಲಿರುವ ಬ್ಯಾಂಕ್ಗಳಲ್ಲಿ ಪತ್ತೆಯಾಗದ 2,485 ಮಂದಿಯಿಂದ ಅಸಲು 1,400 ಕೋಟಿ ರೂ. ಮತ್ತು ಬಡ್ಡಿ 596.72 ಲಕ್ಷ ರೂ., ಮೈಸೂರಿನಲ್ಲಿ 132 ಮಂದಿಯಿಂದ 24.1 ಲಕ್ಷ ರೂ. ಅಸಲು ಮತ್ತು 32.38 ಬಡ್ಡಿ, ಬೆಳಗಾವಿಯಲ್ಲಿ 15 ಮಂದಿಯಿಂದ 17.24 ಲಕ್ಷ ರೂ. ಅಸಲು ಮತ್ತು 24.44 ಲಕ್ಷ ರೂ. ಬಡ್ಡಿ ವಸೂಲಾಗಬೇಕಿದೆ.
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಿಂದ 29 ಗ್ರಾಹಕರಿಂದ 14.24 ಲಕ್ಷ ರೂ. ಅಸಲು ಮತ್ತು 24.85 ಲಕ್ಷ ರೂ. ಬಡ್ಡಿ, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ನಿಂದ 158 ಮಂದಿಯಿಂದ 141.61 ಲಕ್ಷ ರೂ. ಅಸಲು ಮತ್ತು 178.16 ಲಕ್ಷ ರೂ. ಬಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ 13 ಮಂದಿಯಿಂದ 54.82 ಲಕ್ಷ ರೂ. ಅಸಲು, 41.09 ಲಕ್ಷ ರೂ. ಬಡ್ಡಿ ವಸೂಲಾಗಬೇಕಿದೆ.
ಮಂಡ್ಯ ಸಿಟಿ ಕೋ ಆಪರೇಟೀವ್ ಬ್ಯಾಂಕ್, ಕೊಡಗು ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್, ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್, ಬೆಂಗಳೂರಿನ ದೀಕ್ ಸಹಕಾರಿ ಬ್ಯಾಂಕ್, ಜನತಾ ಕೋ ಆಪರೇಟೀವ್ ಬ್ಯಾಂಕ್, ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ಬೆಂಗಳೂರು ಗ್ರಾಮಾಂತರದ ದಿ ಟೌನ್ ಕೋ ಆಪರೇಟೀವ್ ಸಹಕಾರಿ ಬ್ಯಾಂಕ್, ದೊಡ್ಡಬಳ್ಳಾಪುರ ದಿ ಟೆಕ್ಸ್ಟೈಲ್ ಮ್ಯಾನುಫ್ಯಾಕ್ಟರ್ ಕೋ ಆಪರೇಟೀವ್ ಬ್ಯಾಂಕ್, ಗ್ರಾಹಕರ ಹೆಸರುಗಳನ್ನು ಒದಗಿಸಿದೆ.
ಈ ಮೊತ್ತಗಳ ಪೈಕಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಬೆಂಗಳೂರು ಇದರ ಅಸಲು 1,400 ಕೋಟಿ ರೂ., ಹಾಗೂ ಬಡ್ಡಿ 323.73 ಕೋಟಿ ರೂ. ಇದೆ. ಬಡ್ಡಿಯನ್ನು ಎವರ್ ಗ್ರೀನ್ ಕ್ರೆಡಿಟ್ ಎಂಬುದಾಗಿ ಮತ್ತು 1,400 ಕೋಟಿ ರೂ. ಸಾಲವನ್ನು ಅನುತ್ಪಾದಕ ಆಸ್ತಿ ನಷ್ಟ ಎಂದು ಘೋಷಿಸಿದೆ.
2020ರ ಮಾರ್ಚ್ 31ರಿಂದ ಈ ಸಾಲದ ಖಾತೆಗಳಿಗೆ ಬಡ್ಡಿ ವಿಧಿಸಿರುವುದಿಲ್ಲ ಎಂದು ಗೊತ್ತಾಗಿದೆ.