ಗುತ್ತಿಗೆ ಷರತ್ತು ಉಲ್ಲಂಘಿಸುತ್ತಿರುವ ರಾಜ್ಯ ಕ್ರಿಕೆಟ್ ಸಂಸ್ಥೆ
ಬೆಂಗಳೂರು: ಐಪಿಎಲ್ ನಂತಹ ವಾಣಿಜ್ಯ ಚಟುವಟಿಕೆಗಳನ್ನು ನಡೆಸಿ ನೂರಾರು ಕೋಟಿ ರೂ. ವ್ಯವಹಾರ ಮತ್ತು ಆದಾಯ ಗಳಿಸುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸಿಎ)ಯು ಹತ್ತು ಹಲವು ವರ್ಷಗಳಿಂದ ಗುತ್ತಿಗೆ ಷರತ್ತು ಉಲ್ಲಂಘಿಸುತ್ತಿದೆ. ಬಾಡಿಗೆ ಪಡೆದ ಜಾಗದಲ್ಲಿ ಗಳಿಸುತ್ತಿರುವ ನೂರಾರು ಕೋಟಿ ರೂ. ಆದಾಯದಲ್ಲಿ ಬಿಡಿಗಾಸನ್ನೂ ಸರಕಾರಕ್ಕೆ ಕೊಡುತ್ತಿಲ್ಲ. ವರ್ಷಕ್ಕೆ ನೂರು ರೂ. ಬಾಡಿಗೆ ಆಧಾರದ ಮೇಲೆ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ. ಆದರೆ ಇದೇ ಜಾಗದಲ್ಲಿ ಕೋಟ್ಯಂತರ ರೂ. ಆದಾಯ ಗಳಿಸುತ್ತಿದೆ. ಆದರೂ ಲೋಕೋಪಯೋಗಿ ಇಲಾಖೆಯು ಈ ಬಗ್ಗೆ ಗಟ್ಟಿಯಾಗಿ ದನಿಯನ್ನೇ ಎತ್ತಿಲ್ಲ.
ರಾಜ್ಯದಲ್ಲಿರುವ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕ್ಲಬ್ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಿರುವ ವಿಧಾನಪರಿಷತ್ ಸದಸ್ಯ ಡಾ.ಕೆ.ಗೋವಿಂದರಾಜು ಅವರ ಅಧ್ಯಕ್ಷತೆಯ ವಿಶೇಷ ಸದನ ಸಮಿತಿಯು 2021ರ ಜುಲೈ 19ರಂದು ನಡೆದಿದ್ದ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕೆ.ಎಸ್. ಕೃಷ್ಣಾರೆಡ್ಡಿ ಅವರು ಸಮಿತಿಗೆ ಈ ವಿಷಯವನ್ನು ಗಮನಕ್ಕೆ ತಂದಿದ್ದರು. ಆದರೆ ಸರಕಾರ ಮಾತ್ರ ತ್ರ ಈ ಬಗ್ಗೆ : ಗಂಭೀರವಾಗಿ ಪರಿಗಣಿಸಿಲ್ಲ. ಈ ಸಭೆಯ ನಡಾವಳಿ ಪ್ರತಿ 'the-file.in'ಗೆ ಲಭ್ಯವಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಗುತ್ತಿಗೆ ಷರತ್ತುಗಳ ಪ್ರಕಾರ ಕ್ರಿಕೆಟ್ ಆಟಕ್ಕೆ ಮಾತ್ರ ಅವಕಾಶ ನೀಡಬೇಕು. ಆದರೆ ಅಲ್ಲಿ ಕಮರ್ಷಿಯಲ್ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೆ ಅವರು ಐಪಿಎಲ್ನಂತಹ ಕಮರ್ಷಿಯಲ್ ಚಟುವಟಿಕೆಯನ್ನು ಅಲ್ಲಿ ನಡೆಸುತ್ತಾರೆ. ಇಲ್ಲಿ ಬಿಡ್ ಮಾಡಿ ಕೋಟ್ಯಂತರ ರೂ. ಗಳ ವ್ಯವಹಾರಗಳನ್ನು ನಡೆಸಲಾಗುತ್ತಿದೆ. ಆದರೆ ಸರಕಾರಕ್ಕೆ ಬಾಡಿಗೆಯನ್ನು ಕೊಡುವುದಿಲ್ಲ ಮತ್ತು ಆದಾಯದಲ್ಲಿನ ಒಂದು ಭಾಗವನ್ನೂ ಸಹ ಕೊಡುವುದಿಲ್ಲ, ಎಂದು ಕೃಷ್ಣಾರೆಡ್ಡಿ ಅವರು ಸಭೆಯಲ್ಲಿ ಮಾಹಿತಿ ಒದಗಿಸಿದ್ದರು.
ಗಳಿಕೆ ನೂರಾರು ಕೋಟಿ, ಬಾಡಿಗೆ ನೂರು ರೂ.!
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ವರ್ಷಕ್ಕೆ ನೂರು ರೂ. ಬಾಡಿಗೆ ಆಧಾರದ ಮೇಲೆ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ. ಆದರೆ ಇದೇ ಜಾಗದಲ್ಲಿ ಕೋಟ್ಯಂತರ ರೂ. ಆದಾಯ ಗಳಿಸುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ಗುತ್ತಿಗೆ ಪಡೆದಿರುವ ಜಾಗದಲ್ಲಿ ಆರಂಭದಲ್ಲಿ ಕ್ರೀಡಾ ಉದ್ದೇಶಕ್ಕಾಗಿಯೇ ಬಳಸಲಾಗುತ್ತಿತ್ತು.
ಮತ್ತು ಕರ ಆಹಾರದಲ್ಲಿ ಹೊಟೇಲುಗಳ ನಡೆಸುತ್ತಿದೆ. ಇದು ಕೇವಲ ಬೆಂಗಳೂರು ಮಾತ್ರವಲ್ಲ, ಚಿತ್ರಮರ್ಗ, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗದಲ್ಲೂ ಇದೇ ರೀತಿ ನಡೆಯುತ್ತಿದೆ ಎಂದು ಕಾರ್ಯದರ್ಶಿ ಆಗಿದ್ದ ಕೃಷ್ಣಾರೆಡ್ಡಿ ಅವರು ಸಭೆಗೆ ವಿವರಿಸಿದ್ದರು.
ಕೋಟ್ಯಂತರ ರೂ. ಆದಾಯದಲ್ಲಿ ಬಿಡಿಗಾಸೂ ಸರಕಾರಕ್ಕಿಲ್ಲ
ರಣಜಿ ಟೆಸ್ಟ್ ಪಂದ್ಯಾವಳಿಗಳು ನಡೆಯುವ ಸಂದರ್ಭದಲ್ಲಿ ಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೆ ಸಂಸ್ಥೆಯು ಬಾಡಿಗೆ ಜಾಗದಲ್ಲಿ ಗಳಿಸುತ್ತಿರುವ ಆದಾಯವನ್ನು ಸರಕಾರಕ್ಕೂ ಕೊಡುತ್ತಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2019ರಲ್ಲಿ 595 ಕೋಟಿ ರೂ., 2020ರಲ್ಲಿ 535 ಕೋಟಿ ರೂ. ಆದಾಯ ಗಳಿಸಿತ್ತು ಎಂದು ಹೇಳಲಾಗುತ್ತಿದೆ.
ಐಪಿಎಲ್ ಸೇರಿದಂತೆ ಇನ್ನಿತರ ಪ್ರಾಯೋಜಿತ ಪಂದ್ಯಾವಳಿಗಳು ನಡೆಯುತ್ತಿವೆಯಾದರೂ ಇದರ ಆದಾಯವನ್ನು ಸರಕಾರದೊಂದಿಗೆ ಹಂಚಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯು ಪ್ರಸ್ತಾಪಿಸಿತ್ತು. ಆ ನಂತರ ಈ ಬಗ್ಗೆ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ.
ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕ್ರೀಡಾ ಚಟುವಟಿಕೆಗಳನ್ನು ನಡೆಸುವುದಕ್ಕೆಂದು ಭೂಮಿಯನ್ನು ತೆಗೆದುಕೊಂಡ ಮೇಲೆ ಅದಕ್ಕೆ ವಿರುದ್ದವಾಗಿರುವ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಮನರಂಜನೆಯ ಚಟುವಟಿಕೆಗಳನ್ನು ನಡೆಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅಲ್ಲಿ ಕಮರ್ಷಿಯಲ್ ಚಟುವಟಿಕೆಗಳನ್ನು ನಡೆಸಿ ದುಡ್ಡು ಮಾಡುತ್ತಿದ್ದಾರೆ. ಅವರಿಂದ ಆಸ್ತಿಗಳನ್ನು ಕಿತ್ತುಕೊಳ್ಳುವುದು ನಮ್ಮ ಉದ್ದೇಶವಲ್ಲ. ಸರಕಾರ ಯಾವ ಉದ್ದೇಶಕ್ಕಾಗಿ ಅವರಿಗೆ ಜಾಗವನ್ನು ನೀಡಿದೆ ಆ ಉದ್ದೇಶ ಈಡೇರಬೇಕಿದೆ. ಶೇ.80ರಷ್ಟು ಕಮರ್ಷಿಯಲ್ ಉದ್ದೇಶವನ್ನೇ ಮೂಲವಾಗಿಟ್ಟುಕೊಂಡರೆ ಅಂತಹ ಕ್ಲಬ್ಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಿಡುವುದಿಲ್ಲ ಎನ್ನುವ ಸಂದೇಶ ನಮ್ಮ ಸಮಿತಿಯಿಂದ ಹೋಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.