ಶೇ.50ರ ಮೀಸಲಾತಿಯ ಮೇಲ್ಮಿತಿ ಮೀರಿರುವ ತಮಿಳುನಾಡು

ಒಂದು ವಿಭಿನ್ನ ಮತ್ತು ನಿರಾತಂಕ ಸನ್ನಿವೇಶದಲ್ಲಿ ತಮಿಳುನಾಡು ಸರಕಾರ, 1993ರಲ್ಲಿ ತಾನು ಹೊರಡಿಸಿದ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಿ ತಾತ್ಕಾಲಿಕವಾಗಿ ನಿಟ್ಟುಸಿರು ಬಿಟ್ಟಿದೆಯೇ ವಿನಾ ಶಾಶ್ವತ ಪರಿಹಾರವಂತೂ ಆ ರಾಜ್ಯಕ್ಕೆ ಸಿಗುವುದು ಸುಲಭವಲ್ಲ. ಒಂದು ವೇಳೆ ಸರ್ವೋಚ್ಚ ನ್ಯಾಯಾಲಯದ ಮುಂದೆ ಅಸಾಧಾರಣ ಸನ್ನಿವೇಶದಿಂದ ಶೇ.69ಕ್ಕೆ ಮೀಸಲಾತಿ ಕೋಟಾ ಏರಿಸಲಾಗಿದೆ ಎಂಬುದನ್ನು ಅದು ಮನವರಿಕೆ ಮಾಡಿಕೊಟ್ಟಲ್ಲಿ ಮಾತ್ರ ಸರ್ವೋಚ್ಚ ನ್ಯಾಯಾಲಯದ ಮೇಲ್ಮಿತಿ ಆದೇಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ.

Update: 2023-11-21 04:15 GMT

Photo: freepik

‘‘ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಷ್ಟೂ ಮಟ್ಟಿಗೆ ಸಂವಿಧಾನದ ಭಾಷೆ ಸರಳವೂ ಮತ್ತು ಅಸಂದಿಗ್ಧವೂ ಆಗಿದೆ. ಆದರೆ ಸಂವಿಧಾನದ ಆಶಯಗಳನ್ನು ವ್ಯಾಖ್ಯಾನಿಸುವ ನ್ಯಾಯಾಂಗದ ಭಾಷೆ ತೀರ ಸಂದಿಗ್ಧವೂ ತೊಡಕಿನದೂ ಆಗಿದೆ..... ಮೀಸಲಾತಿಯ ವ್ಯಾಪ್ತಿಯನ್ನು ಶೇ.50ರಷ್ಟಕ್ಕೆ ಮಿತಿ ಗೊಳಿಸುವುದರಿಂದ ಸಂವಿಧಾನದ ವಿಧಿಗಳಾದ 15(4) ಮತ್ತು16(4)ರ ಭಾಷೆಯನ್ನೂ ಮೀರಿ ನ್ಯಾಯಾಂಗ ಹೋಗಿದೆ; ಹೀಗಾದುದರಿಂದ ‘ಹಿಂದುಳಿದ ವರ್ಗಗಳು’ ಎಂದು ಗುರುತಿಸುವ ಭಾರೀ ಸಂಖ್ಯೆಯ ಜನ ಸಮುದಾಯಕ್ಕೆ ತಕ್ಕಂತೆ ಮೀಸಲಾತಿ ಕಲ್ಪಿಸಲು ಸರಕಾರವನ್ನು ಪ್ರತಿಬಂಧಿಸಿದೆ.’’

ಕರ್ನಾಟಕದ ಮೊದಲನೆಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಲ್.ಜಿ. ಹಾವನೂರ್ ತಮ್ಮ ವರದಿಯಲ್ಲಿ ಮೇಲಿನ ಮಾತುಗಳನ್ನು ದಾಖಲಿಸಿರುವರು. ಬಾಲಾಜಿ ಪ್ರಕರಣ(1963)ದಲ್ಲಿ ಮೀಸಲಾತಿ ಕೋಟಾ ಮಿತಿ ಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗಮನದಲ್ಲಿರಿಸಿಕೊಂಡು ಹೇಳಿರುವ ಮಾತುಗಳಿವು. ತಮಿಳುನಾಡು ಸರಕಾರ ಮಾತ್ರ ನ್ಯಾಯಾಲಯದ ಆಜ್ಞೆಯನ್ನು ಮೀರಿ ಹೋಗಿ ಅದನ್ನು ಸಂರಕ್ಷಿಸಿ ಕೊಂಡಿರುವ ಪ್ರಸಂಗವೂ ನಮ್ಮ ಮುಂದಿದೆ.

ಪ್ರಸಕ್ತ ತಮಿಳು ನಾಡು ಮತ್ತು ಬ್ರಿಟಿಷ್ ಭಾರತದ ಅವಧಿಯಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯು ಮೀಸಲಾತಿ ಮತ್ತು ಸುಧಾರಣಾ ಕ್ರಮಗಳ ಪ್ರಕ್ರಿಯೆಯ ಮೂಲಕ ಸಮಾಜದ ತುಳಿತಕ್ಕೊಳಗಾದ ವರ್ಗಗಳನ್ನು ಸಮಾಜದ ಹಿಡಿತದಿಂದ ಮುಕ್ತಗೊಳಿಸುವಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿವೆ.

ಸ್ವಾತಂತ್ರ್ಯ ಪೂರ್ವದ ಅವಲೋಕನ

ಮದ್ರಾಸ್ ಪ್ರೆಸಿಡೆನ್ಸಿಯ ಜಸ್ಟಿಸ್ ಪಕ್ಷದ ಆಡಳಿತದ ಅವಧಿಯಲ್ಲಿ ಮೊದಲನೇ ಕೋಮು ಆಧಾರಿತ ಆದೇಶವನ್ನು ಸೆಪ್ಟಂಬರ್ 16,1 921ರಂದು ಸರಕಾರದ ಸಾರ್ವಜನಿಕ ಇಲಾಖೆಯು ಎಲ್ಲಾ ಶ್ರೇಣಿಯ ಹುದ್ದೆಗಳಿಗೆ ಅನ್ವಯಿಸುವಂತೆ ಮೀಸಲಾತಿಯನ್ನು ಕೆಳಗೆ ನಮೂದಿಸಿರುವ ಜಾತಿ ಅಥವಾ ವರ್ಗಗಳಿಗೆ ನೀಡಿತ್ತು. ಅವೆಂದರೆ-ಬ್ರಾಹ್ಮಣರು, ಅಬ್ರಾಹ್ಮಣ ಹಿಂದೂಗಳು, ಭಾರತೀಯ ಕ್ರೈಸ್ತರು, ಮುಸ್ಲಿಮರು, ಯುರೋಪಿಯನ್ನರು ಮತ್ತು ಆಂಗ್ಲೋ ಇಂಡಿಯನ್ನರು ಮತ್ತು ಇತರರು.

ಮದ್ರಾಸ್ ಸರಕಾರದ ಕಾನೂನು ಇಲಾಖೆಯು ಮುಂದುವರಿದು ಜನವರಿ 15, 1924ರಂದು ಕೆಲವು ಶೋಷಿತ ವರ್ಗಗಳನ್ನು ಹಿಂದುಳಿದವರೆಂದು ಪರಿಗಣಿಸಿ ಶಿಕ್ಷಣ ಪ್ರವೇಶಕ್ಕೆ ರಿಯಾಯಿತಿಯನ್ನೂ ಘೋಷಿಸಿತ್ತು.

ಮದ್ರಾಸ್ ಸರಕಾರ ಒ.ಪಿ. ರಾಮಸ್ವಾಮಿ ರೆಡ್ಡಿಯಾರ್ ಅವರ ಮುಖ್ಯಮಂತ್ರಿ ಅವಧಿಯಲ್ಲಿ ನವೆಂಬರ್ 21,1947ರಲ್ಲಿ ಹಿಂದುಳಿದವರನ್ನು ಪ್ರವರ್ಗವೆಂದು ಪರಿಗಣಿಸಿ ಸಾರ್ವಜನಿಕ ಸೇವೆಯ ನೇಮಕಗಳಿಗೆ ಪ್ರತ್ಯೇಕ ಅರ್ಹತೆಗೆ ಒಳಪಡಿಸಲು ಆದೇಶವನ್ನು ನೀಡಿತ್ತು.

ಸ್ವತಂತ್ರ ಭಾರತದಲ್ಲಿ ಶಿಕ್ಷಣಕ್ಕಾಗಿ ಪ್ರವೇಶ ಪಡೆಯಲು ಕೋಮುವಾರು ಮೀಸಲಾತಿಯನ್ನು ನಿಗದಿಗೊಳಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯ 1950ರಲ್ಲಿ ಅಸಿಂಧು ಗೊಳಿಸಿದ್ದುದ್ದನ್ನು ಪೆರಿಯಾರ್ ಈ.ವಿ.ರಾಮಸ್ವಾಮಿ ನಾಯಕರ್ ಅವರ ನೇತೃತ್ವದಲ್ಲಿ ಮೀಸಲಾತಿ ಪರ ಹಮ್ಮಿಕೊಂಡಿದ್ದ ಹೋರಾಟ ಕೇಂದ್ರ ಸರಕಾರದ ಕಣ್ಣು ತೆರೆಸಿತು. ಅದಕ್ಕಾಗಿ ಸಂವಿಧಾನ ತಿದ್ದುಪಡಿಗೆ ಕೇಂದ್ರ ಸರಕಾರ ಮುಂದಾಯಿತು. ಹೊಸದಾಗಿ ಅನುಚ್ಛೇದ 15(4)ಅನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಸಂವಿಧಾನಕ್ಕೆ ತಂದ ಮೊದಲನೇ ತಿದ್ದುಪಡಿ ಇದಾಯಿತು. ಸಂಸತ್‌ನಲ್ಲಿ ಮಂಡಿಸುವಾಗ ಅಂದಿನ ಪ್ರಧಾನಿ ಪಂಡಿತ್ ನೆಹರೂ ಅವರು ತಿದ್ದುಪಡಿಯ ದೂರದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಮಾತುಗಳನ್ನು ಹೇಳಿದ್ದಾರೆ. ‘‘ಮದ್ರಾಸಿನಲ್ಲಿ ಕೆಲವು ಘಟನೆಗಳಿಂದಾಗಿ ಈ ವಿಷಯವು ಈ ನಿರ್ದಿಷ್ಟ ರೂಪದಲ್ಲಿ ಹೊರಹೊಮ್ಮಿದೆ. ಇದು ಸದನಕ್ಕೂ ಚೆನ್ನಾಗಿ ತಿಳಿದಿದೆ. ಆದ್ದರಿಂದ ಅದನ್ನು ಮುಚ್ಚಿಡುವ ಅಗತ್ಯವಿಲ್ಲ’’

ಎಪ್ರಿಲ್ 30,1954ರಲ್ಲಿ, ಕೆ.ಕಾಮರಾಜ್ ಮುಖ್ಯಮಂತ್ರಿ ಇದ್ದಾಗ, ಮೀಸಲಾತಿ ಕೋಟಾವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶೇ.16ರಷ್ಟನ್ನು, ಮತ್ತು ಹಿಂದುಳಿದ ವರ್ಗಗಳಿಗೆ ಶೇ.25ರಷ್ಟನ್ನು ಮೀಸಲಿರಿಸಿ ಆದೇಶ ಹೊರಡಿಸಲಾಯಿತು.

ಅಂದಿನ ಮುಖ್ಯಮಂತ್ರಿ ಕರುಣಾನಿಧಿ 1971ರಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ದುರ್ಬಲರಾದವರಿಗೆ ಮೀಸಲಾತಿ ಕೋಟಾವನ್ನು ವ್ಯಾಪಕವಾಗಿ ವಿಸ್ತರಿಸುವ ಅಗತ್ಯತೆಯನ್ನು ಮನಗಂಡು ಕೋಟಾವನ್ನು ತರ್ಕ ಸಮ್ಮತವಾಗಿ ಪುನರ್ ರಚಿಸಿದರು. ಹಿಂದುಳಿದ ವರ್ಗಗಳಿಗೆ ಶೇ.25ರಿಂದ ಶೇ.31ಕ್ಕೂ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ.16ರಿಂದ ಶೇ.18ಕ್ಕೂ ಹೆಚ್ಚಿಸಿ ಒಟ್ಟಾರೆ ಮೀಸಲಾತಿಯನ್ನು ಶೇ.49ಕ್ಕೆ ಏರಿಸಿತು.

ಫೆಬ್ರವರಿ 2,1980ರಲ್ಲಿ ಅಂದಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಹಿಂದುಳಿದವರ ಜನಸಂಖ್ಯೆ ಮತ್ತು ಅವರ ಯಾತನಾಮಯ ಬದುಕನ್ನು ಚೆನ್ನಾಗಿಯೇ ಅರಿತಿದ್ದ ಅವರು ಹಿಂದುಳಿದವರಿಗೆ ಇದ್ದ ಕೋಟಾ ಶೇ.31ರಷ್ಟನ್ನು ಶೇ.50 ರಷ್ಟಕ್ಕೆ ಹೆಚ್ಚಿಸಿದರು. ಸರಕಾರದ ಈ ನಿರ್ಧಾರದಿಂದ ಒಟ್ಟಾರೆ ಮೀಸಲಾತಿ ಶೇ.68ಕ್ಕೆ ಏರಿಕೆ ಆಯಿತು. ಮುಖ್ಯಮಂತ್ರಿ ಎಂ.ಕರುಣಾನಿಧಿಯವರು ಮತ್ತೆ 1989-1991ರಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.1ರಷ್ಟಕ್ಕೆ ಪ್ರತ್ಯೇಕವಾಗಿ ಕೊಟ್ಟಿದ್ದರಿಂದ ಒಟ್ಟಾರೆ ಮೀಸಲಾತಿಯು ಶೇ.69ಕ್ಕೆ ಹೆಚ್ಚಿತು.

76ನೇ ಸಂವಿಧಾನ ತಿದ್ದುಪಡಿ

ನಿರೀಕ್ಷೆಯಂತೆ ಮೀಸಲಾತಿ ವಿರೋಧಿ ಮೇಲ್ಜಾತಿಗಳು, ಸರ್ವೋಚ್ಚ ನ್ಯಾಯಾಲಯ ನಿಗದಿಪಡಿಸಿರುವ ಮೇಲ್ಮಿತಿಗಿಂತ ಹೆಚ್ಚು ಮೀಸಲಾತಿ ಕೋಟಾ ನಿಗದಿಯಾಗಿದೆ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾರೆ. ಇದಕ್ಕೆ ಪ್ರತಿಯಾಗಿ ತಮಿಳುನಾಡು ಸರಕಾರ ಶಾಸನಾತ್ಮಕ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತದೆ. ಆ ಸಮಯದಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿ ಆಗಿದ್ದರು. ಸದ್ಯ ನಿಗದಿಯಾಗಿರುವ ಶೇ.69ರಷ್ಟು ಮೀಸಲಾತಿಯನ್ನು ರಕ್ಷಿಸಿಕೊಳ್ಳುವ ದಿಸೆಯಲ್ಲಿ ಸಂಭವನೀಯ ಕೆಡುಕನ್ನು ತಪ್ಪಿಸಿಕೊಳ್ಳುವ ಮತ್ತು ಹೆಗ್ಗುರುತಾಗಿ ಉಳಿಯುವ ಘಟನೆಯೊಂದು ತಮಿಳುನಾಡಿನಲ್ಲಿ ರೂಪುಗೊಳ್ಳುವುದು.

ದ್ರಾವಿಡ ಕಳಗಂ ಪಕ್ಷವು, ಅನುಚ್ಛೇದ 31ಸಿ ಪ್ರಕಾರ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಾಗದ ರೀತಿಯಲ್ಲಿ ಕಾಯ್ದೆಯೊಂದನ್ನು ರೂಪಿಸಲು ಸಲಹೆ ಕೊಟ್ಟಿದ್ದೇ ಅಲ್ಲದೆ, ಒಂದು ‘ಮಾದರಿ ಮಸೂದೆ’ಯನ್ನೂ ಕೂಡ ಸಿದ್ಧಪಡಿಸಿ ಸರಕಾರಕ್ಕೆ ನೀಡುತ್ತದೆ. ಅಣ್ಣಾ ಡಿ.ಎಂ.ಕೆ. ಸರಕಾರ, ಮಸೂದೆಯನ್ನು ವಿಧಾನಸಭೆಯಲ್ಲಿ ಶೇ.69ರ ಮೀಸಲಾತಿಯ ಸಂರಕ್ಷಣೆ ದೃಷ್ಟಿಯಿಂದ ಮಂಡಿಸಿ ಅಂಗೀಕಾರ ಪಡೆಯುತ್ತದೆ.

ಕಾಯ್ದೆಯು ತಮಿಳುನಾಡಿನ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಾಗರಿಕರಿಗೆ ಶಿಕ್ಷಣ ಸಂಸ್ಥೆಗಳಲ್ಲಿನ ಸ್ಥಾನಗಳು ಮತ್ತು ರಾಜ್ಯದ ಸೇವೆಗಳಲ್ಲಿನ ಹುದ್ದೆಗಳು ಮತ್ತು ನೇಮಕಗಳ ಉದ್ದೇಶಕ್ಕೆ ಮೀಸಲಾತಿಯನ್ನು ಒದಗಿಸುತ್ತದೆ. ಅದು ತಮಿಳುನಾಡು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಗಳ ಮೀಸಲಾತಿ ಮತ್ತು ರಾಜ್ಯ ಸೇವೆಗಳ ಅಡಿಯಲ್ಲಿ ಹುದ್ದೆಗಳು ಮತ್ತು ನೇಮಕಗಳು) ಕಾಯ್ದೆ, 1993 ಎಂದಾಗುವುದು. ತರುವಾಯ ಅನುಚ್ಛೇದ 31ಬಿ ಪ್ರಕಾರ ಸಂವಿಧಾನ ತಿದ್ದುಪಡಿ(76) ಮಾಡಿ ತಮಿಳುನಾಡು ಕಾಯ್ದೆಯನ್ನು 9ನೆಯ ಅನುಸೂಚಿಗೆ ಸೇರಿಸಿ, ಅದನ್ನು ಸಂವಿಧಾನ ವಿರೋಧಿ ಮತ್ತು ಮೂಲಭೂತ ಹಕ್ಕುಗಳಿಗೆ ಚ್ಯುತಿಯಾಗಿದೆ ಎಂದೂ ಯಾರೂ ಚಕಾರ ಎತ್ತದಂತೆ ನೋಡಿ ಕೊಳ್ಳಲಾಯಿತು.

ಪೆರಿಯಾರ್ ಅವರ ಸಾಟಿ ಇಲ್ಲದ ಉಪಕ್ರಮದಿಂದ 1951ರಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿಗೂ ಹಾಗೂ 1994ರಲ್ಲಿ ದ್ರಾವಿಡ ಕಳಗಂ ಪಕ್ಷದ ಕೆ. ವೀರಮಣಿಯವರ ಪ್ರಯತ್ನ ಮತ್ತು ಒತ್ತಾಯ 76ನೇ ತಿದ್ದುಪಡಿಗೂ ಕಾರಣವಾದವು ಎಂದು ಕೆ. ವೀರಮಣಿಯವರೇ ಒಮ್ಮೆ ಬೆಂಗಳೂರಿನ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದರು.

ಈ ವಿಶೇಷ ಶಾಸನವನ್ನು ಸಂರಕ್ಷಿಸಲು ಮತ್ತು ಮೀಸಲಾತಿ ಕೋಟಾ ಶೇ.69ರಷ್ಟನ್ನು ಉಳಿಸಿಕೊಳ್ಳುವಲ್ಲಿ ಪಾತ್ರವಹಿಸಿದವರು ಅಂದಿನ ಮುಖ್ಯಮಂತ್ರಿ ಜಯಲಲಿತಾ, ಮಾಜಿ ಪ್ರಧಾನ ಮಂತ್ರಿ ದಿ. ಪಿ.ವಿ.ನರಸಿಂಹರಾವ್ ಮತ್ತು ಅಂದಿನ ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ. ಈ ಅಪೂರ್ವ ಸಾಧನೆಯ ವಿಶೇಷತೆ ಎಂದರೆ ಆ ಮೂವರೂ ಮಹನೀಯರು ಮೇಲ್ಜಾತಿಯವರು ಅದರಲ್ಲೂ ಬ್ರಾಹ್ಮಣರು ಎಂಬುದು!

ಸಾರ್ವಜನಿಕ ಅಭಿಪ್ರಾಯ ಮೀಸಲಾತಿ ವಿಷಯದಲ್ಲಿ ಸಜ್ಜುಗೊಂಡು ಶಕ್ತಿಯುತವಾಗಿ ಉಳಿದಲ್ಲಿ ಯಾರೇ ಆಧಿಪತ್ಯ ಹಿಡಿದರೂ ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ಕೊಡಲೇಬೇಕು. ಇದೇ ಪ್ರಜಾಪ್ರಭುತ್ವಕ್ಕಿರುವ ಸೊಗಸು.

ತಮಿಳುನಾಡು ಮೀಸಲಾತಿ ಕಾಯ್ದೆ, 1993 ಅನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಿದ್ದರೂ, ನ್ಯಾಯಾಲಯದ ವಿಚಾರಣೆಯಿಂದ ಮುಕ್ತ ಗೊಂಡಿಲ್ಲ. ಯಾವುದಾದರೂ ಮೂಲಭೂತ ಹಕ್ಕಿಗೆ ಚ್ಯುತಿ ಉಂಟು ಮಾಡಿದೆ ಎಂದು ಸಾಬೀತಾದಲ್ಲಿ ನ್ಯಾಯಾಲಯದಿಂದ ಅಸಿಂಧುಗೊಳ್ಳುವುದನ್ನು ತಪ್ಪಿಸುವುದೇ 9ನೇ ಅನುಸೂಚಿಗೆ ಸೇರಿಸಲಿರುವ ಉದ್ದೇಶ. ಆದರೆ ಈ ಸಂವಿಧಾನ ತಿದ್ದುಪಡಿಯ ಮೂಲ ಉದ್ದೇಶ ಎಸ್ಟೇಟ್ ಮುಂತಾದವುಗಳ ಆರ್ಜನೆಗೆ ಕಾನೂನುಗಳನ್ನು ಉಳಿಸುವುದಕ್ಕಾಗಿ ತಂದ ತಿದ್ದುಪಡಿಗಳಾಗಿವೆ. ಆದ್ದರಿಂದ ಇಂತಹ ಕಾಯ್ದೆಗಳನ್ನು 9ನೇ ಅನುಸೂಚಿಯಲ್ಲಿ ಸೇರಿಸಿದ ಮಾತ್ರಕ್ಕೆ ಅದು ನ್ಯಾಯಾಲಯ ವಿಚಾರಣೆಯಿಂದ ಮುಕ್ತ ಗೊಂಡಿದೆ ಎಂದೂ ಹೇಳಲಾಗುವುದಿಲ್ಲ(I.R.Coelho vs T N-2007-1 SCJ).

ಸರ್ವೋಚ್ಚ ನ್ಯಾಯಾಲಯ ಇಂದ್ರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಕೋಟಾ ಯಾವುದೇ ಕಾರಣದಿಂದಲೂ ಶೇ.50ರಷ್ಟನ್ನು ಮೀರ ಬಾರದೆಂದು ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿದೆ. ಆದರೆ ಅಸಾಧಾರಣ ಸನ್ನಿವೇಶದಲ್ಲಿ ಅದನ್ನು ಮೀರಿ ಹೋಗಬಹುದು ಎಂದೂ ಪರಿಹಾರವನ್ನೂ ಸೂಚಿಸಿದೆ. ಆದರೆ ಈವರೆಗೂ ಯಾವುದೇ ರಾಜ್ಯ ಅಸಾಧಾರಣ ಪರಿಸ್ಥಿತಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ಶೇ.50ರ ಮೇಲ್ಮಿತಿಯಿಂದ ಮುಕ್ತಿ ಪಡೆದಿರುವುದಿಲ್ಲ ಎಂಬುದೂ ಉಲ್ಲೇಖನೀಯ.

ಅದೂ ಅಲ್ಲದೆ, ಮೀಸಲಾತಿ ಒಂದು ಮೂಲಭೂತ ಹಕ್ಕಲ್ಲ ಎಂದೂ ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ. ರಾಜ್ಯಗಳ ಅಭಿಪ್ರಾಯದಲ್ಲಿ ಸರಕಾರಿ ಸೇವೆಯ ನೇಮಕಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವಿಲ್ಲದಿದ್ದಲ್ಲಿ ಮಾತ್ರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಲು ಅವಕಾಶವಿದೆ(ಸಿ.ಎ. ರಾಜೇಂದ್ರನ್ vs ಭಾರತದ ಒಕ್ಕೂಟ,AIR 1981SC 298).

ಒಂದು ವಿಭಿನ್ನ ಮತ್ತು ನಿರಾತಂಕ ಸನ್ನಿವೇಶದಲ್ಲಿ ತಮಿಳುನಾಡು ಸರಕಾರ, 1993ರಲ್ಲಿ ತಾನು ಹೊರಡಿಸಿದ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಿ ತಾತ್ಕಾಲಿಕವಾಗಿ ನಿಟ್ಟುಸಿರು ಬಿಟ್ಟಿದೆಯೇ ವಿನಾ ಶಾಶ್ವತ ಪರಿಹಾರವಂತೂ ಆ ರಾಜ್ಯಕ್ಕೆ ಸಿಗುವುದು ಸುಲಭವಲ್ಲ. ಒಂದು ವೇಳೆ ಸರ್ವೋಚ್ಚ ನ್ಯಾಯಾಲಯದ ಮುಂದೆ ಅಸಾಧಾರಣ ಸನ್ನಿವೇಶದಿಂದ ಶೇ.69ಕ್ಕೆ ಮೀಸಲಾತಿ ಕೋಟಾ ಏರಿಸಲಾಗಿದೆ ಎಂಬುದನ್ನು ಅದು ಮನವರಿಕೆ ಮಾಡಿಕೊಟ್ಟಲ್ಲಿ ಮಾತ್ರ ಸರ್ವೋಚ್ಚ ನ್ಯಾಯಾಲಯದ ಮೇಲ್ಮಿತಿ ಆದೇಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ.

ಇತ್ತೀಚೆಗಷ್ಟೇ ತಮಿಳುನಾಡಿಗೆ ಸೇರಿದ ಎಲ್ಲ ರಾಜಕೀಯ ಪಕ್ಷಗಳು ವೈದ್ಯಕೀಯ ಸೀಟುಗಳಿಗೆ ಇತರ ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸಿ ಅನುಷ್ಠಾನ ಗೊಳಿಸಿಲ್ಲವೆಂದು ಅನುಚ್ಛೇದ 32ರ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದವು. ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ನಾಗೇಶ್ವರರಾವ್ ಪೀಠ ಮೀಸಲಾತಿಯು ಮೂಲಭೂತ ಹಕ್ಕಲ್ಲ ಎಂದು ಮನವಿಯನ್ನು ವಜಾ ಗೊಳಿಸಿದೆ. ಹಾಗಾಗಿ ಸಂವಿಧಾನದ 9ನೆಯ ಅನುಸೂಚಿ ಕೂಡ ಮೀಸಲಾತಿಯ ಶೇ.50ರ ಮೇಲ್ಮಿತಿ ದಾಟಿ ಹೋಗಲು ಪರಿಹಾರವೆಂದೂ ಹೇಳಲಾಗುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎನ್. ಲಿಂಗಪ್ಪ

ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

Similar News