ತೆಲಂಗಾಣ: ಬಿಆರ್‌ಎಸ್ ಗೆಲುವಿನ ಓಟಕ್ಕೆ ಕಾಂಗ್ರೆಸ್ ತಡೆ?

ಪಂಚರಾಜ್ಯ ಚುನಾವಣೆಗಳ ಪೈಕಿ ದಕ್ಷಿಣ ರಾಜ್ಯವಾದ ತೆಲಂಗಾಣ ಚುನಾವಣೆಯೂ ಸೇರಿದೆ. ರಾಜ್ಯ ಸ್ಥಾಪನೆಯಾದಾಗಿನಿಂದಲೂ ಕಳೆದ ೯ ವರ್ಷಗಳಿಂದ ಅಧಿಕಾರದಲ್ಲಿರುವ ಕೆಸಿಆರ್ ಈ ಬಾರಿ ದೊಡ್ಡ ಸವಾಲನ್ನೇ ಎದುರಿಸಬೇಕಾಗಿದೆ. ಕಾಂಗ್ರೆಸ್ ಅಧಿಕಾರಕ್ಕೇರುವ ಪ್ರಯತ್ನದಲ್ಲಿದೆ. ಆಡಳಿತ ವಿರೋಧಿ ಅಲೆಯೂ ಕೆಸಿಆರ್‌ಗೆ ಕಂಟಕವಾಗುವ ಸಾಧ್ಯತೆಯಿದೆ. ಬಿಜೆಪಿ ಇಲ್ಲಿ ಮೋದಿ ಮುಖವನ್ನು ತೋರಿಸಿದರೂ ಅದಕ್ಕೆ ಬರುವ ಮತಗಳು ಅಷ್ಟರಲ್ಲೇ ಇರುವುದರಿಂದ ಕಾಂಗ್ರೆಸ್ ಪಾಲಿಗೆ ಇಲ್ಲಿ ಬಹುದೊಡ್ಡ ಅವಕಾಶ ತೆರೆದುಕೊಳ್ಳುವ ಸಾಧ್ಯತೆ ಕಾಣಿಸುತ್ತಿದೆ.

Update: 2023-10-27 06:57 GMT

Photo: PTI

ತೆಲಂಗಾಣ. ದಕ್ಷಿಣ ಭಾರತದ ರಾಜ್ಯ.

ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯವನ್ನು 2014ರ ಜೂನ್ 2ರಂದು ರಚಿಸಲಾಯಿತು. ಅದಕ್ಕೂ ಮೊದಲು ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ದಶಕಗಳ ಕಾಲ ಹೋರಾಟ ನಡೆದಿತ್ತು.

1960ರ ದಶಕದಲ್ಲಿಯೇ ಕಾಂಗ್ರೆಸ್‌ನ ಆಗಿನ ಪ್ರಬಲ ನಾಯಕ ಎಂ. ಚನ್ನಾರೆಡ್ಡಿ ತೆಲಂಗಾಣ ರಾಜ್ಯ ಸಮಿತಿ ರಚಿಸುವುದರೊಂದಿಗೆ ತೆಲಂಗಾಣ ಹೋರಾಟಕ್ಕೆ ಒಂದು ನಿಶ್ಚಿತ ರೂಪ ಬಂದಿತ್ತು. ಆದರೆ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಕಾಂಗ್ರೆಸ್ ನಿರಾಕರಿಸಿತ್ತು.

2001ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ರಚನೆಯಾದ ಬಳಿಕ ಪ್ರತ್ಯೇಕ ರಾಜ್ಯದ ಹೋರಾಟ ತೀವ್ರತೆ ಪಡೆಯಿತು.

2009ರ ಡಿಸೆಂಬರ್‌ನಲ್ಲಿ ಕೆ. ಚಂದ್ರಶೇಖರ ರಾವ್ ತೆಲಂಗಾಣ ರಾಜ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಶುರು ಮಾಡಿದ ಬಳಿಕ ಕೇಂದ್ರದಲ್ಲಿನ ಯುಪಿಎ ಸರಕಾರ ಹೊಸ ರಾಜ್ಯ ರಚನೆಗೆ ಅಸ್ತು ಎಂದಿತು.

ಅಂತಿಮವಾಗಿ 2014ರಲ್ಲಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂತು.

ಈ ರಾಜ್ಯದ ರಾಜಧಾನಿ ಹೈದರಾಬಾದ್.

ಉತ್ತರದಲ್ಲಿ ಮಹಾರಾಷ್ಟ್ರ, ಛತ್ತೀಸ್‌ಗಡ, ಪಶ್ಚಿಮದಲ್ಲಿ ಕರ್ನಾಟಕ, ದಕ್ಷಿಣದಲ್ಲಿ ಆಂಧ್ರಪ್ರದೇಶ ಗಡಿಜಿಲ್ಲೆಗಳಾಗಿವೆ.

ನಿಜಾಮರ ರಾಜಧಾನಿಯಾಗಿದ್ದ ಹೈದರಾಬಾದ್ ಈಗ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು.

ಸಿಟಿ ಆಫ್ ಪರ್ಲ್ಸ್ ಎಂದೇ ಖ್ಯಾತಿ ಪಡೆದಿರುವ ಹೈದರಾಬಾದ್ ದೇಶದಲ್ಲೇ ಅತಿ ಹೆಚ್ಚು ನೈಸರ್ಗಿಕ ಮುತ್ತುಗಳ ಉತ್ಪಾದನೆಯ ತಾಣಗಳಲ್ಲಿ ಒಂದು.

1,666 ಎಕರೆಯಷ್ಟು ವಿಶಾಲ ಭೂಮಿಯಲ್ಲಿರುವ ಇಲ್ಲಿನ ರಾಮೋಜಿ ಫಿಲ್ಮ್ ಸಿಟಿ ವಿಶ್ವದಲ್ಲೇ ಅತಿದೊಡ್ಡ ಸಿನೆಮಾ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಾರ್ ಮಿನಾರ್ ಹಾಗೂ ಹೈದರಾಬಾದಿ ಬಿರಿಯಾನಿಗಳು ಹೈದರಾಬಾದ್‌ನ ಹೆಗ್ಗುರುತುಗಳು. ಈಗ ಜಾಗತಿಕ ಮನ್ನಣೆ ಪಡೆಯುತ್ತಿರುವ, ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಿರುವ ತೆಲುಗು ಚಿತ್ರರಂಗದ ಕೇಂದ್ರವಾಗಿಯೂ ಹೈದರಾಬಾದ್ ಅನ್ನೇ ಗುರುತಿಸಲಾಗುತ್ತದೆ.

ತೆಲುಗು ಇಲ್ಲಿನ ಪ್ರಮುಖ ಭಾಷೆ. ಶೇ.75.51ರಷ್ಟು ಜನ ತೆಲುಗು ಭಾಷಿಕರು. ಉರ್ದು, ಲಂಬಾಣಿ, ಮರಾಠಿ, ಹಿಂದಿ ಮತ್ತಿತರ ಭಾಷೆಗಳನ್ನು ಮಾತನಾಡುವವರೂ ಇದ್ದಾರೆ.

ತೆಲಂಗಾಣದಲ್ಲಿನ ಜನಸಂಖ್ಯೆಯ ಬಹುಪಾಲು, ಅಂದರೆ ಶೇ.85.09 ಹಿಂದೂಗಳು. ಮುಸ್ಲಿಮ್ ಸಮುದಾಯದವರು ಶೇ.12.69ರಷ್ಟಿದ್ದಾರೆ. ಉಳಿದಂತೆ, ಕ್ರೈಸ್ತರು, ಬೌದ್ಧರು, ಸಿಖ್ಖರು, ಜೈನರು ಮತ್ತಿತರ ಸಮುದಾಯದವರಿದ್ದಾರೆ.

ತೆಲಂಗಾಣದಲ್ಲಿ 33 ಜಿಲ್ಲೆಗಳಿವೆ.

ಹೈದರಾಬಾದ್ ಈ ರಾಜ್ಯದ ಅತಿ ದೊಡ್ಡ ನಗರವಾಗಿದೆ.

ತೆಲಂಗಾಣ ವಿಧಾನಸಭೆ 119 ಸದಸ್ಯ ಬಲದ್ದಾಗಿದೆ.

ಪ್ರಸ್ತುತ ಈ ರಾಜ್ಯದ ಮತದಾರರ ಸಂಖ್ಯೆ 3 ಕೋಟಿ 17 ಲಕ್ಷ.

2014ರಲ್ಲಿ ತೆಲಂಗಾಣ ರಚನೆಯಾದಾಗಿನಿಂದಲೂ ಇಲ್ಲಿ ಅಧಿಕಾರದಲ್ಲಿರುವುದು ತೆಲಂಗಾಣ ರಾಷ್ಟ್ರ ಸಮಿತಿ, ಅಂದರೆ ಟಿಆರ್‌ಎಸ್. ಈಗ ಅದು ಭಾರತ್ ರಾಷ್ಟ್ರ ಸಮಿತಿ ಅಂದರೆ ಬಿಆರ್‌ಎಸ್ ಎಂದಾಗಿದೆ. ಮುಖ್ಯಮಂತ್ರಿಯಾಗಿರುವವರು ಕೆ. ಚಂದ್ರಶೇಖರ ರಾವ್.

2014ರ ಚುನಾವಣೆಯಲ್ಲಿ ಆಗಿನ ಟಿಆರ್‌ಎಸ್ 63 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 21, ಟಿಡಿಪಿ 15, ಎಐಎಂಐಎಂ 7, ಬಿಜೆಪಿ 5 ಸ್ಥಾನಗಳನ್ನು ಗೆದ್ದಿದ್ದವು. ಪಕ್ಷೇತರರು ಎಂಟು ಮಂದಿ ಗೆದ್ದಿದ್ದರು.

ಇನ್ನು 2018ರ ಚುನಾವಣೆಯ ಬಲಾಬಲವನ್ನು ನೋಡುವುದಾದರೆ,

ಟಿಆರ್‌ಎಸ್ 88, ಕಾಂಗ್ರೆಸ್ 19, ಎಐಎಂಐಎಂ 7, ಟಿಡಿಪಿ 2, ಬಿಜೆಪಿ 1, ಪಕ್ಷೇತರರು 2

ಇದಾದ ನಂತರದ ಉಪಚುನಾವಣೆಗಳಲ್ಲಿನ ಗೆಲುವಿನ ಬಳಿಕವಂತೂ ಪೂರ್ತಿ ಚಿತ್ರಣವೇ ಬದಲಾಗಿ, ಟಿಆರ್ ಎಸ್ ಇನ್ನಷ್ಟು ಬಲಗೊಂಡಿತು. 2022ರಲ್ಲಿ ಟಿಆರ್‌ಎಸ್ ಪಕ್ಷ ಭಾರತ ರಾಷ್ಟ್ರ ಸಮಿತಿ ಅಥವಾ ಬಿಆರ್‌ಎಸ್ ಆಗಿ ಬದಲಾಯಿತು.

ಈಗಿನ ತೆಲಂಗಾಣ ವಿಧಾನಸಭೆಯ ಬಲಾಬಲ - ಬಿಆರ್‌ಎಸ್ 104, ಎಐಎಂಐಎಂ 7, ಕಾಂಗ್ರೆಸ್ 5, ಬಿಜೆಪಿ 3.

ಬಿಆರ್‌ಎಸ್ ಗೆಲುವಿನ ಈ ಓಟಕ್ಕೆ ಈ ಬಾರಿ ಬ್ರೇಕ್ ಬೀಳಲಿದೆ ಮತ್ತು ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ಮಾಡಬೇಕೆಂಬ ಕೆಸಿಆರ್ ಕನಸಿಗೆ ಕಾಂಗ್ರೆಸ್ ಅಡ್ಡಿಯಾಗಲಿದೆ ಎಂದೇ ವಿಶ್ಲೇಷಣೆಗಳಿವೆ.

ಕಾಂಗ್ರೆಸ್ ಈ ಬಾರಿ ಹೇಗಾದರೂ ಕೆಸಿಆರ್ ಅವರನ್ನು ಮಣಿಸಲೇಬೇಕೆಂಬ ಹಠದಲ್ಲಿದ್ದು, ಆ ದಿಕ್ಕಿನಲ್ಲಿ ಪ್ರಯತ್ನ ನಡೆಸಿದೆ.

ಈಗಾಗಲೇ ಆಡಳಿತ ವಿರೋಧಿ ಅಲೆಯೆದ್ದಿದ್ದು, ಕಾಂಗ್ರೆಸ್‌ಗೆ ಈ ಬಾರಿ ರಾಜ್ಯದಲ್ಲಿ ಅನುಕೂಲಕರ ವಾತಾವರಣವಿದೆ ಎನ್ನಲಾಗುತ್ತಿದೆ.

ಬಿಆರ್‌ಎಸ್ ಮತ್ತು ಬಿಜೆಪಿಯಿಂದ ಹಲವರು ಕಾಂಗ್ರೆಸ್‌ಗೆ ಬರುತ್ತಿರುವುದು ಕೂಡ ಕಾಂಗ್ರೆಸ್ ಕೈ ಬಲಪಡಿಸಲಿದೆ ಎಂಬ ಮಾತುಗಳಿವೆ.

ಮೊದಲ ಅವಧಿಯಲ್ಲಿ ಕೆಸಿಆರ್ ಆಡಳಿತ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರು. ಕೃಷಿ, ನೀರಾವರಿಗೆ ಒತ್ತು ನೀಡಿದ್ದರು. ಆ ಜನಪ್ರಿಯತೆಯ ಲಾಭ ಪಡೆಯಲೆಂದೇ 2008ರಲ್ಲಿ ಇನ್ನೂ ಒಂಭತ್ತು ತಿಂಗಳು ಅವಧಿ ಬಾಕಿಯಿರುವಾಗಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದ್ದರು.

ಇನ್ನೂ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದರು. ಅದಾದ ಬಳಿಕ ರಾಷ್ಟ್ರ ರಾಜಕಾರಣದ ಮೇಲೆಯೂ ಕಣ್ಣಿಟ್ಟು, ಟಿಆರ್‌ಎಸ್ ಅನ್ನು ಬಿಆರ್‌ಎಸ್ ಎಂದು ಬದಲಿಸಿದರು.

ಕೆಸಿಆರ್ ಕೂಡ ಬಿಜೆಪಿಯ ಹಾಗೆ ಪ್ರತಿಪಕ್ಷಗಳು ಇರಲೇಬಾರದೆಂಬ ಮನಃಸ್ಥಿತಿಯನ್ನೇ ಪ್ರದರ್ಶಿಸುತ್ತ ಬಂದಿದ್ದಾರೆ. ಎದುರಾಳಿ ಪಕ್ಷಗಳಿಂದ ಎಲ್ಲರನ್ನೂ ಬಿಆರ್‌ಎಸ್‌ನತ್ತ ಸೆಳೆದಿದ್ದಾರೆ. ತಮ್ಮ ಬಳಿಯಿರುವ ಅಧಿಕಾರ ಬಲದಿಂದ ಸಂಖ್ಯಾ ಬಲವನ್ನು ಕೂಡ ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.

ಆದರೆ ಈ ಅಧಿಕಾರ ಮದವೇ ಅವರಿಗೆ ಈ ಸಲದ ಚುನಾವಣೆಯಲ್ಲಿ ಮುಳುವಾಗುವಂತೆ ತೋರುತ್ತಿದೆ. ಬಿಆರ್‌ಎಸ್ ಶಾಸಕರಲ್ಲಿ ಅರ್ಧದಷ್ಟು ಶಾಸಕರ ಬಗ್ಗೆ ಜನಾಕ್ರೋಶ ವ್ಯಕ್ತವಾಗುತ್ತಿರುವುದು ಒಂದೆಡೆಯಾದರೆ, ಸ್ವಪಕ್ಷೀಯರ ವಿರೋಧ ಕೂಡ ಆ ಶಾಸಕರ ಬಗ್ಗೆ ಇದೆಯೆಂಬುದು ಇನ್ನೊಂದೆಡೆ.

ಇಂಥ ಆಡಳಿತ ವಿರೋಧಿ ಅಲೆಯ ನಡುವೆಯೂ ಎಲ್ಲ ಹಾಲಿ ಶಾಸಕರಿಗೂ ಬಿಆರ್‌ಎಸ್ ಟಿಕೆಟ್ ನೀಡಿರುವುದು ಅದರ ಹಿನ್ನಡೆಗೆ ಕಾರಣವಾಗಲಿದೆ ಎಂಬ ಲೆಕ್ಕಾಚಾರಗಳಿವೆ.

ಇಷ್ಟಾಗಿಯೂ, ಕೆಸಿಆರ್ ಜನಪ್ರಿಯತೆ ಕುಗ್ಗಿಲ್ಲ ಎಂಬ ಮಾತುಗಳಿವೆ. ಅದೇ ಬಿಆರ್‌ಎಸ್ ಬಲವಾಗಿರಲಿದೆ ಎನ್ನಲಾಗುತ್ತದೆ. ತೆಲಂಗಾಣದ ಅಸ್ಮಿತೆಯ ಪ್ರಶ್ನೆ ಮುಂದೆ ಮಾಡುವ ತಂತ್ರವನ್ನೂ ಅವರು ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರವಿಡಲು ಬಳಸುತ್ತಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಕೂಡ ಬಿಆರ್‌ಎಸ್‌ಗೆ ಬೆಂಬಲವಾಗಿದ್ದಾರೆ.

ಕಾಂಗ್ರೆಸ್ ಕರ್ನಾಟಕದಲ್ಲಿನ ಗೆಲುವಿನ ವೇಗವನ್ನೇ ತೆಲಂಗಾಣದಲ್ಲಿಯೂ ಮುಂದುವರಿಸುವ ಲೆಕ್ಕಾಚಾರದಲ್ಲಿ ಸಾಗಿದೆ. ಗ್ಯಾರಂಟಿಗಳನ್ನು ಅದು ಮುಂದೆ ಮಾಡಿದೆ. ಈಗಾಗಲೇ ಆರು ಗ್ಯಾರಂಟಿಗಳನ್ನು ಘೋಷಿಸಿದೆ.

ಅಲ್ಲದೆ, ರಾಜ್ಯದ ಮೇಲೆ ಕೆಸಿಆರ್ 5 ಲಕ್ಷ ಕೋಟಿ ರೂ. ಸಾಲದ ಹೊರೆ ಹೊರಿಸಿದ್ದಾರೆ, ಭಾರೀ ಭ್ರಷ್ಟಾಚಾರ ನಡೆದಿದೆ ಎಂಬುದನ್ನೂ ಪರಿಣಾಮಕಾರಿಯಾಗಿ ಬಿಂಬಿಸುತ್ತಿದೆ. ಅಲ್ಪಸಂಖ್ಯಾತ ಮತಗಳ ಕ್ರೋಡೀಕರಣಕ್ಕೂ ಕಾಂಗ್ರೆಸ್ ಯತ್ನಿಸುತ್ತಿದೆ ಎನ್ನಲಾಗುತ್ತಿದೆ.

ಈ ನಡುವೆ ಬಿಜೆಪಿ ಸ್ಥಿತಿ ಮಾತ್ರ ಅತ್ತ ಕಡೆಗೂ ಇಲ್ಲ, ಇತ್ತ ಕಡೆಗೂ ಇಲ್ಲ ಎಂಬಂತಿದೆ. ಎರಡೂ ಪಕ್ಷಗಳ ನಡುವೆ ಲಾಭ ಮಾಡಿಕೊಳ್ಳುವುದಕ್ಕಾಗಿ ಹೊಂಚುತ್ತಿದೆ.

ಮುಖ್ಯವಾಗಿ ಇಲ್ಲಿ ಬಿಜೆಪಿ ಒಳಜಗಳಗಳಿಂದ ನಲುಗಿಹೋಗಿದೆ. ಇತ್ತೀಚೆಗಷ್ಟೇ ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಿಸಲಾಗಿದೆ. ಆ ಜಾಗದಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿಯವರನ್ನು ಕೂರಿಸಲಾಗಿದೆ. ಹಾಗೆಂದು ಪಕ್ಷದ ಸ್ಥಿತಿಯಲ್ಲೇನೂ ಹೇಳಿಕೊಳ್ಳುವಂಥ ಬದಲಾವಣೆ ಆಗಿಲ್ಲ. ಸ್ಥಳೀಯ ಮಟ್ಟದಲ್ಲಿ ಪಕ್ಷಕ್ಕೆ ಪ್ರಬಲ ನಾಯಕರೇ ಇಲ್ಲವಾಗಿದ್ದಾರೆ. ಮೋದಿ ಮತ್ತು ಶಾ ಅವರೇ ಬಂದು ಮುಖ ತೋರಿಸಬೇಕಾದ ಸ್ಥಿತಿಯಿದೆ. ಆದರೂ ಬಿಜೆಪಿ ಇಲ್ಲಿ ಬಲಿಷ್ಠವಾಗುವುದು ಸಾಧ್ಯವೇ ಇಲ್ಲ ಎಂದೇ ಹೇಳಲಾಗುತ್ತಿದೆ.

ಇನ್ನು ತೆಲಂಗಾಣ ಜನಸಂಖ್ಯೆಯಲ್ಲಿ ಒಬಿಸಿ ಸಮುದಾಯದವರ ಪ್ರಮಾಣ ಹೆಚ್ಚುಕಡಿಮೆ ಅರ್ಧದಷ್ಟಿದೆ. ಒಬಿಸಿ ಒಟ್ಟು ಜನಸಂಖ್ಯೆಯ ಶೇ.48ರಷ್ಟಿದ್ದರೆ, ಪರಿಶಿಷ್ಟ ಜಾತಿಯವರು ಶೇ.17ರಷ್ಟು ಹಾಗೂ ಪರಿಶಿಷ್ಟ ಪಂಗಡದವರು ಶೇ.11ರಷ್ಟು ಇದ್ದಾರೆ.

ಮೇಲ್ಜಾತಿಯವರೇ ಇಲ್ಲಿನ ರಾಜಕೀಯವನ್ನು ನಿಯಂತ್ರಿಸುತ್ತಿದ್ದ ಕಾಲ ಇಲ್ಲವಾಗಿದೆ. ಹೀಗಾಗಿ ಒಬಿಸಿ, ಎಸ್‌ಸಿ/ಎಸ್‌ಟಿ ಸಮುದಾಯಗಳ ಒಲವು ಗಳಿಸಲು ಮೂರೂ ಪಕ್ಷಗಳು ಯತ್ನ ನಡೆಸಿವೆ.

ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ.

ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯಲಿದೆ. ಆದರೆ, ರಾಜಕೀಯ ಆಟದಲ್ಲಿ ನಿಜವಾಗಿಯೂ ಏನಾಗಲಿದೆ ಎಂಬುದು ಮತದಾನದ ಕ್ಷಣಗಳಲ್ಲಿಯೇ ನಿರ್ಣಯವಾಗುವ ವಿಚಾರ ಎಂಬುದನ್ನೂ ಮರೆಯಲಿಕ್ಕಾಗದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಹರೀಶ್ ಎಚ್.ಕೆ.

contributor

Similar News