ಭಯೋತ್ಪಾದಕ ಲಾರೆನ್ಸ್ ಬಿಷ್ಣೋಯ್ - ನಕಲಿ ಗೋರಕ್ಷಕ ಮೋನು ಮನೇಸರ್ ಕನೆಕ್ಷನ್
► ಪಾಕಿಸ್ತಾನದ ಜೊತೆ ಡ್ರಗ್ಸ್ ವ್ಯವಹಾರದ ಜಾಲ ವಿಸ್ತರಿಸಲು ಮುಂದಾಗಿದ್ದ ನಕಲಿ ಗೋ ರಕ್ಷಕ ! ► ಜೈಲಿನಲ್ಲಿದ್ದೇ ಕೆನಡಾದಲ್ಲಿ ಕೊಲೆ ಮಾಡಿಸಿದ ಉಗ್ರ ಗ್ಯಾಂಗ್ !
ದೇಶದಲ್ಲಿ ಗೋರಕ್ಷಣೆ ಹೆಸರಲ್ಲಿ ಏನೇನೆಲ್ಲ ಆಗುತ್ತಿದೆ, ಹೇಗೆಲ್ಲ ಆಮಾಯಕರನ್ನು ಹಿಂಸಿಸಲಾಗುತ್ತಿದೆ, ಹತ್ಯೆಗೈಯಲಾಗುತ್ತಿದೆ ಎಂಬುದನ್ನು ನೋಡುತ್ತಲೇ ಇದ್ದೇವೆ ಮತ್ತು ಈ ಭಯಾನಕ ವಾಸ್ತವ ಹೆಚ್ಚು ಕಡಿಮೆ ದಿನನಿತ್ಯದ ವಿದ್ಯಮಾನ ಎನ್ನುವಂತಾಗಿದೆ. ಗೋರಕ್ಷಣೆ ಹೆಸರಲ್ಲಿ ಈ ಬಿಜೆಪಿ ಮತ್ತು ಸಂಘ ಪರಿವಾರದ ಗೂಂಡಾಗಳು ಮಾಡುತ್ತಿರುವ ಅನಾಹುತಗಳು ಒಂದೆರಡಲ್ಲ. ಅದೆಷ್ಟು ಕೊಲೆಗಳು, ಪಾತಕಗಳು, ಅದೆಷ್ಟು ಕುಟುಂಬಗಳ ಕಣ್ಣೀರಿಗೆ ಕಾರಣರಾಗಿದ್ದಾರೆ ಎಂಬುದರ ಲೆಕ್ಕವಿಲ್ಲ.
ಗೋರಕ್ಷಣೆ ಹೆಸರಿನಲ್ಲಿಯೇ ರಾಜಕಾರಣವನ್ನೂ ಮಾಡಲಾಗುತ್ತಿರುವ ಈ ದಿನಗಳಲ್ಲಿ, ಈ ಗೋರಕ್ಷಕರ ಪ್ರಭಾವ, ಅವರ ನಂಟುಗಳು ಇನ್ನೂ ಭೀತಿ ಹುಟ್ಟಿಸುವ ಸಂಗತಿಗಳಾಗಿವೆ. ಅಂಥ ಒಂದು ಭಯಂಕರ ನಂಟಿನ ಬಗ್ಗೆ ಈಗ ಸತ್ಯವೊಂದು ಬಯಲಾಗಿದ್ದು, ಇದು ನಿಜಕ್ಕೂ ಆಘಾತಕಾರಿ ಸತ್ಯವಾಗಿದೆ.
ಈಗ, ಕೆನಡಾದಲ್ಲಿನ ಖಾಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಯ ಹೊಣೆ ಹೊತ್ತುಕೊಂಡಿರುವ, ಪಾಕಿಸ್ತಾನದ ಜೊತೆ ಡ್ರಗ್ಸ್ ದಂಧೆ ನಡೆಸುವ ಕುಖ್ಯಾತ ಗ್ಯಾಂಗ್ ಸ್ಟರ್ ಹಾಗು ಉಗ್ರ ಲಾರೆನ್ಸ್ ಬಿಷ್ಣೋಯ್ ಗೆ ನಕಲಿ ಗೋರಕ್ಷಕ ಗೂಂಡಾ ಮೋನು ಮನೇಸರ್ ಮತ್ತಿತರ ಐವರು ಗೋರಕ್ಷಕರ ಜೊತೆ ನಂಟಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಕೊಲೆ, ಡ್ರಗ್ಸ್ ವ್ಯವಹಾರ, ಲೂಟಿ ನಡೆಸುವ ಅಂತರ್ ರಾಷ್ಟ್ರೀಯ ಗ್ಯಾಂಗ್ ಸ್ಟರ್ ಹಾಗು ಉಗ್ರನ ಜೊತೆ ನಂಟು ಬೆಳೆಸುವಷ್ಟು ಇಲ್ಲಿನ ನಕಲಿ ಗೋರಕ್ಷಕ ಗೂಂಡಾಗಳು ತಲುಪಿದ್ದಾರೆ ಎಂದರೆ ಪರಿಸ್ಥಿತಿ ಎಷ್ಟು ಭಯಾನಕವಾಗಿದೆ ?. ಇದೇ ಲಾರೆನ್ಸ್ ಬಿಶ್ಣೋಯಿಯನ್ನು ಸಂಘ ಪರಿವಾರದ ಬೆಂಬಲಿಗರು ದೇಶಪ್ರೇಮಿ ಎಂದು ಬಣ್ಣಿಸುತ್ತಿದ್ದರು. ಮಡಿಲ ಮಾಧ್ಯಮಗಳು ಆತನನ್ನು ಹೀರೋನಂತೆ ಚಿತ್ರಸುತ್ತಿದ್ದವು. ಈಗಲೂ ಮಡಿಲ ಮಾಧ್ಯಮಗಳು ಲಾರೆನ್ಸ್ ಅಂದ್ರೆ ಖಾಲಿಸ್ತಾನಿಗಳು ನಡುಗುತ್ತಾರೆ ಎಂಬಂತಹ ಶೀರ್ಷಿಕೆ ಕೊಟ್ಟು ಜೈಲಲ್ಲಿರುವ ಉಗ್ರನನ್ನು ವೈಭವೀಕರಿಸುತ್ತಿವೆ.
ಈಗ ದೇಶಕ್ಕೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆ ತಂದಿಟ್ಟಿರುವ ಉಗ್ರನ ಜೊತೆ ನಕಲಿ ಗೋರಕ್ಷಕರೂ ಇದ್ದಾರೆ ಎಂದರೆ ಏನರ್ಥ?. ಹಾಗಾದರೆ ಗೋರಕ್ಷಣೆ ಹೆಸರಲ್ಲಿ ನಿಜವಾಗಿಯೂ ನಡೆಯುತ್ತಿರುವುದು ಏನು? ನಕಲಿ ಗೋರಕ್ಷಕರ ಗೂಂಡಾಗಿರಿಗೆ ಹಣ ಬರುತ್ತಿರುವುದು ಎಲ್ಲಿಂದ ?
ತನ್ನೆಲ್ಲ ಕ್ರಿಮಿನಲ್ ವ್ಯವಹಾರಗಳನ್ನೂ ಬಿಷ್ಣೋಯ್ ಜೈಲಿನಿಂದಲೇ ನಡೆಸುತ್ತಿದ್ದಾನೆ ಎಂದರೆ, ಮತ್ತವನ ಜೊತೆ ಈ ನಕಲಿ ಗೋರಕ್ಷಕ ಗೂಂಡಾಗಳು ಸಂಪರ್ಕದಲ್ಲಿರುತ್ತಾರೆ ಎಂದರೆ, ಅದೆಲ್ಲ ಹೇಗೆ ಸಾಧ್ಯ?. ಈಗ ಹೊರಬಿದ್ದಿರುವ ಭಯಾನಕ ಸತ್ಯ, ರಾಜಸ್ಥಾನ ಪೊಲೀಸರ ತನಿಖೆಯಿಂದ ಬಯಲಾಗಿರುವಂಥದ್ದು.
ನಾಸಿರ್-ಜುನೈದ್ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ಒಬ್ಬನಾದ ಮೋನು ಮನೇಸರ್ ಮತ್ತು ಇನ್ನೂ ಐವರು ಗೋರಕ್ಷಕರೊಂದಿಗೆ ಉಗ್ರ ಲಾರೆನ್ಸ್ ಬಿಷ್ಣೋಯ್ ಮಾತುಕತೆ ನಡೆಸುತ್ತಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ.
ಈ ತಿಂಗಳ ಎರಡನೇ ವಾರ ಪೊಲೀಸರು ಮನೇಸರ್ ನನ್ನ ಬಂಧಿಸಿದ ಬಳಿಕ ಆತನ ಮೊಬೈಲ್ನಿಂದ ಸೋಷಿಯಲ್ ಮೀಡಿಯಾ ಚಾಟ್‌ಗಳು ಮತ್ತು ಫೋನ್ ಕರೆಗಳ ವಿವರ ಸೇರಿದಂತೆ ಡೇಟಾವನ್ನು ಪರಿಶೀಲಿಸಿದಾಗ ಇದೆಲ್ಲವೂ ಬಯಲಾಗಿರುವುದಾಗಿ ವರದಿಯಾಗಿದೆ.
ನಾಸಿರ್ ಜುನೈದ್ ಹತ್ಯೆಯಾಗಿ ತಿಂಗಳುಗಳು ಕಳೆದರೂ ಈ ಮೋನು ಮನೇಸರ್ ನನ್ನ ಬಂಧಿಸಲಾಗಿರಲಿಲ್ಲ. ಆತ ತಲೆಮರೆಸಿಕೊಂಡಿದ್ದಾನೆ ಎಂದೇ ಹರ್ಯಾಣ ಪೊಲೀಸರು ಹಾಗು ಸರಕಾರ ಹೇಳುತ್ತಿದ್ದರು. ಆದರೆ ಆತ ಮಾತ್ರ ಬೇಕೆಂದಾಗಲೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷನಾಗಿ ಪ್ರಚೋದನಕಾರಿ ಹೇಳಿಕೆ ಕೊಡುತ್ತಿದ್ದ.
ಈ ನಕಲಿ ಗೋರಕ್ಷಕ ಮೋನು ಮನೇಸರ್ ಹರ್ಯಾಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಷ್ಟೇ ಪ್ರಭಾವೀ ವ್ಯಕ್ತಿಯಾಗಿದ್ದ. ಆತನಿಗೆ ಪೊಲೀಸರಂತೆ ಸಮವಸ್ತ್ರವನ್ನೂ ನೀಡಲಾಗಿತ್ತು. ಶಸ್ತ್ರಾಸ್ತ್ರಗಳನ್ನು ಹಿಡಿದು ತನ್ನ ಲೂಟಿ, ಹಲ್ಲೆ ಕಾರ್ಯಾಚರಣೆಯನ್ನು ವೀಡಿಯೊ ಮಾಡಿ ಹಾಕುತ್ತಿದ್ದ ಈ ಮೋನು ಮನೇಸರ್.
ನಾಸಿರ್ ಹಾಗು ಜುನೈದ್ ಹತ್ಯೆ ಪ್ರಕರಣದಲ್ಲಿ ಈತನನ್ನು ಬಂಧಿಸಲು ಹೋಗಿದ್ದ ರಾಜಸ್ತಾನ ಪೋಲೀಸರ ಮೇಲೆಯೇ ಹರ್ಯಾಣ ಪೊಲೀಸರು ಕೇಸು ದಾಖಲಿಸಿದ್ದರು ಅಂದ್ರೆ ಪರಿಸ್ಥಿತಿ ಎಲ್ಲಿಗೆ ತಲುಪಿತ್ತು ಅಂತ ನೀವೇ ಊಹಿಸಿ. ಹಾಗೆ ತಲೆಮರೆಸಿಕೊಂಡಿದ್ದ ಈ ಮೋನು ಮನೇಸರ್ ಮೊನ್ನೆ ಹರ್ಯಾಣದ ನೂಹ್ ನಲ್ಲಿ ಗಲಭೆ ಸೃಷ್ಟಿಯಾಗಲು ಮುಖ್ಯ ಕಾರಣ. ಆತನ ಪ್ರಚೋದನಕಾರಿ ವೀಡಿಯೊ ಬಂದ ನಂತರವೇ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿದ್ದು.
ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಹೆಸರಿನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ಹರಿಯಾಣ ಪೊಲೀಸರು ಕೊನೆಗೂ ಆತನನ್ನು ಬಂಧಿಸಿದರು. ನಂತರ ಆತನನ್ನು ನಾಸಿರ್-ಜುನೈದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ರಾಜಸ್ಥಾನ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಬಹಿರಂಗಪಡಿಸಿರುವ ಇನ್ನೂ ಒಂದು ಭಯಂಕರ ಸತ್ಯವೆಂದರೆ, ಮನೇಸರ್ ಸೇರಿದಂತೆ ಹಲವು ನಕಲಿ ಗೋರಕ್ಷಕ ಗೂಂಡಾಗಳು ಉಗ್ರ ಬಿಷ್ಣೋಯ್ ಗ್ಯಾಂಗ್‌ಗೆ ಸೇರಲು ಬಯಸಿದ್ದರು. ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂಬ ಕೆನಡಾ ಹೇಳಿಕೆಯಿಂದ ಎರಡೂ ದೇಶಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಕೆನಡಾದಲ್ಲಿ ಮತ್ತೊರ್ವ ಖಾಲಿಸ್ತಾನಿ ಉಗ್ರ ಸುಖ್ದೂಲ್ ಸಿಂಗ್ ಅಲಿಯಾಸ್ ಸುಖ ಡುನೆಕೆ ಹತ್ಯೆಯಾಗಿತ್ತು.
ಕೆನಡಾದ ಮೊಗಾ ಜಿಲ್ಲೆಯಲ್ಲಿ ದವೀಂದರ್ ಬಾಂಬಿಹಾ ಗ್ಯಾಂಗ್‌ನ ಸುಖ್ದೂಲ್ ಸಿಂಗ್ನನ್ನು ಕಳೆದ ಬುಧವಾರ ರಾತ್ರಿ ಕೆನಡಾದ ವಿನ್ನಿಪೆಗ್ ನಗರದಲ್ಲಿ ಹತ್ಯೆ ಮಾಡಲಾಗಿದೆ. ಗ್ಯಾಂಗ್ ವಾರ್ ನಲ್ಲಿ ಈ ಹತ್ಯೆಯಾಗಿದೆ ಎಂದು ಮೂಲಗಳು ಹೇಳಿವೆ.
ಈಗ ಸುಖದೂಲ್ ಸಿಂಗ್ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪೋಸ್ಟ್ ಒಂದನ್ನು ಹಾಕಿದೆ ಎನ್ನಲಾಗಿದೆ. ದರೋಡೆಕೋರರಾದ ಗುರ್ಲಾಲ್ ಬ್ರಾರ್ ಮತ್ತು ವಿಕ್ಕಿ ಮಿಡ್ಖೇರಾ ಹತ್ಯೆಯಲ್ಲಿ ಸುಖ್ದೂಲ್ ಸಿಂಗ್ ಪಾತ್ರವಿದೆ ಎಂದು ಹೇಳಲಾಗಿದೆ.
ಅದರ ಸೇಡು ತೀರಿಸಿಕೊಳ್ಳಲು ಹತ್ಯೆ ಮಾಡಿರುವುದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೇಳಿಕೊಂಡಿದೆ. ಯಾರು ಈ ಲಾರೆನ್ಸ್ ಬಿಷ್ಣೋಯ್ ಎಂಬುದನ್ನು ಸ್ವಲ್ಪ ಗಮನಿಸಬೇಕು. ಕೊಲೆ ಮತ್ತು ಸುಲಿಗೆ ಸೇರಿದಂತೆ ಹಲವು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವವನು ಲಾರೆನ್ಸ್ ಬಿಷ್ಣೋಯ್.ಆತನ ಗುಂಪು ಭಾರತದಾದ್ಯಂತ ಸುಮಾರು 700 ಸದಸ್ಯರನ್ನು ಹೊಂದಿದೆ. ಆತ ಮತ್ತೊಬ್ಬ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಜೊತೆ ವಿಶ್ವ ವಿದ್ಯಾಲಯ ರಾಜಕೀಯ ಪ್ರವೇಶಿಸಿದ್ದವನು. ಅಲ್ಲಿಂದಲೇ ಕ್ರಿಮಿನಲ್ ಕೆಲಸ ಶುರು ಮಾಡಿಕೊಂಡವನು,
ಖಾಲಿಸ್ತಾನ್ ಚಳವಳಿ ಮತ್ತಿತರ ದೇಶ ವಿರೋಧಿ ಚಟುವಟಿಕೆಗಳಿಗೆ ವಿರೋಧ ತೋರಿಸುವ ಮೂಲಕ ಸಂಘ ಪರಿವಾರದವರ ನಡುವೆ ಇನ್ನಷ್ಟು ಗಮನ ಸೆಳೆದ. ನಟ ಸಲ್ಮಾನ್ ಖಾನ್ ಅವರಿಗೆ ಜೈಲಿನೊಳಗಿಂದ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಕ್ಕಾಗಿಯೂ ಸುದ್ದಿಯಾಗಿದ್ದ. ಬಿಷ್ಣೋಯ್ ಕಳೆದ ವರ್ಷ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ. ಪ್ರಸ್ತುತ NIA ತನಿಖೆ ನಡೆಸುತ್ತಿರುವ ಡ್ರಗ್ಸ್ ಕಳ್ಳಸಾಗಣೆ ಪ್ರಕರಣದಲ್ಲಿನ ಆರೋಪದ ಮೇಲೆ ಅಹಮದಾಬಾದ್‌ನಲ್ಲಿ ಜೈಲಿನಲ್ಲಿದ್ದಾನೆ.
ಈಗ, ಕೆನಡಾದಲ್ಲಿನ ಸುಖ್ದೂಲ್ ಸಿಂಗ್ ಹತ್ಯೆಯ ಹೊಣೆ ಹೊತ್ತುಕೊಂಡಿರುವ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಈತ ಯುಎಪಿಎ ಕೇಸಲ್ಲಿ ಬಂಧಿತ ಭಯೋತ್ಪಾದಕನಾಗಿ ಬದಲಾಗಿರುವ ಗ್ಯಾಂಗ್ ಸ್ಟರ್. ಪಾಕಿಸ್ತಾನದಿಂದ ಸಮುದ್ರ ಮಾರ್ಗದಲ್ಲಿ ಅಫ್ಘಾನ್ ಪ್ರಜೆಗಳ ನೆರವಿನಿಂದ ಮಾದಕ ವಸ್ತುಗಳನ್ನು ಗುಜರಾತ್ ಗೆ ಸಾಗಿಸುತ್ತಿದ್ದ. ಇಂತಹ ಅಕ್ರಮ ಚಟುವಟಿಕೆಗಳಿಂದ ಬಂದ ಹಣವನ್ನು ನಿಷೇಧಿತ ಭಯೋತ್ಪಾಕದ ಸಂಘಟನೆಗಳಿಗೆ ಬಳಸಲಾಗುತ್ತಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ.
ಹಾಗಾದರೆ, ಇಂತಹ ಭಯೋತ್ಪಾದಕ ಬಿಷ್ಣೋಯ್ ಜೊತೆ ನಕಲಿ ಗೋರಕ್ಷಕ ಗೂಂಡಾ ಮೋನು ಮನೇಸರ್ ಗೆ ಅದ್ಯಾಕೆ ಸಂಪರ್ಕ ?
ಪೊಲೀಸ್ ತನಿಖೆಯಿಂದ ಬಯಲಾಗಿರುವ ವಿವರಗಳು ಹೀಗಿವೆ: ಮನೇಸರ್ ಆಗಸ್ಟ್ 28ರಿಂದ ಸೆಪ್ಟೆಂಬರ್ 10ರ ಅವಧಿಯಲ್ಲಿ ಬಿಷ್ಣೋಯಿಗೆ ವೀಡಿಯೊ ಕರೆಗಳೂ ಸೇರಿದಂತೆ ಹಲವು ಕರೆಗಳನ್ನು ಮಾಡಿದ್ದಾನೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ. ಬಿಷ್ಣೋಯ್ ನೆಟ್‌ವರ್ಕ್ ಅನ್ನು ತನ್ನ ಪ್ರದೇಶದಲ್ಲಿ ಪುನಃಸ್ಥಾಪಿಸಿ ಅದರ ಮುಖ್ಯಸ್ಥನಾಗಲು ಮನೇಸರ್ ತನ್ನ ಸಂಪರ್ಕಗಳೂ ಸೇರಿದಂತೆ ಎಲ್ಲ ವಿವರಗಳನ್ನೂ ಬಿಷ್ಣೋಯ್ ಗೆ ಕಳಿಸಿದ್ದ ಎಂದು ಹೇಳಲಾಗಿದೆ.
ಬಿಷ್ಣೋಯ್ ಈ ಮೊದಲೇ ಒಮ್ಮೆ ಈ ಪ್ರದೇಶದಲ್ಲಿ ಸುಲಿಗೆ ವ್ಯವಹಾರದಲ್ಲಿ ತೊಡಗಿದ್ದವನಾಗಿದ್ದ. ಆದರೆ ಪೋಲಿಸರು ಆತನ ಗ್ಯಾಂಗ್ ಅನ್ನು ಸದೆಬಡಿದಿದ್ದರು. ಈಗ ಗೋರಕ್ಷಣೆ ಹೆಸರಲ್ಲಿ ಆತ ಮತ್ತು ಈ ಮೋನು ಮನೇಸರ್ ಇಬ್ಬರೂ ಸಂಪರ್ಕಕ್ಕೆ ಬಂದಿದ್ದರು. ಗೋರಕ್ಷಕ ಗೂಂಡಾಗಿರಿಯಿಂದ ಕುಖ್ಯಾತನಾಗಿದ್ದ ಮನೇಸರ್ ಥರದವರು ಬಿಷ್ಣೋಯ್ ಗಮನ ಸೆಳೆದಿದ್ದರು. ತನ್ನ ದುಷ್ಟ ಕೆಲಸಕ್ಕೆ ಈ ಗೋರಕ್ಷಕ ಗೂಂಡಾಗಳ ನೆಟ್ವರ್ಕ್ ಬಳಸಿಕೊಳ್ಳಬಹುದೆಂಬ ಆಲೋಚನೆ ಆತನ ತಲೆಯೊಳಗೆ ಬಂದಿತ್ತು.
ಗ್ರೂಪ್ ಚಾಟ್‌ಗಳನ್ನು ಪರಿಶೀಲಿಸಿರುವ ಪೊಲೀಸರಿಗೆ, ಬಿಷ್ಣೋಯ್ ಜೊತೆ ಇನ್ನೂ ಐವರು ಗೋರಕ್ಷಕ ಗೂಂಡಾಗಳು ಸಂಪರ್ಕದಲ್ಲಿರುವುದು ತಿಳಿದಿದೆ. ಆದರೆ ಅವರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಪೋಲೀಸರ ಪ್ರಕಾರ, ಬಿಷ್ಣೋಯ್ ಜೊತೆ ಸಂಪರ್ಕದದಲ್ಲಿದ್ದುದನ್ನು ಮನೇಸರ್ ಒಪ್ಪಿಕೊಂಡಿದ್ದಾನೆ. ಗೋಶಾಲಾ ಪ್ರಾಜೆಕ್ಟ್ ಗಾಗಿ ಸಂಪರ್ಕದಲ್ಲಿದ್ದುದಾಗಿ ಮನೇಸರ್ ಹೇಳಿದ್ದಾನೆ ಎನ್ನಲಾಗಿದೆ.
ಇದೇ ವೇಳೆ, ಬಿಷ್ಣೋಯ್ ಕಡೆಯಿಂದ ಗೋಶಾಲಾ ಪ್ರಾಜೆಕ್ಟ್ ಗೆ ದುಡ್ಡು ಹರಿದುಬಂದಿರುವ ವಿಚಾರವೂ ಬಯಲಾಗಿದೆ. ಆತ ನೀಡಿದ ಹಣವನ್ನು ಗೋರಕ್ಷಕ ಗುಂಪುಗಳು ಬಳಸಿಕೊಂಡಿರಬಹುದೆಂಬ ಅನುಮಾನವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದು, ಇಲ್ಲಿನ ನಕಲಿ ಗೋರಕ್ಷಕ ಗೂಂಡಾಗಳ ಅಸಲಿಯತ್ತು ಎಂಬುದು ಈ ಪ್ರಕರಣದಿಂದ ಬಯಲಾಗುತ್ತಿದೆ. ಗೋರಕ್ಷಕರೆಂದು ಹೇಳಿಕೊಳ್ಳುತ್ತಿರುವವರಿಗೆ ಹರಿದುಬರುತ್ತಿರುವ ಹಣ ಎಲ್ಲಿಯದು ಮತ್ತು ಎಂಥೆಂಥವರದು ಎಂಬುದೂ ಇದರಿಂದ ತಿಳಿಯುತ್ತಿದೆ. ಇದರ ಹಿಂದೆ ಅದೆಂತಹ ಷಡ್ಯಂತ್ರ ಇರಬಹುದು ಎಂಬುದೂ ಬಯಲಾಗುತ್ತಿದೆ. ಈ ಗೂಂಡಾಗಳ ಉಗ್ರ ನಂಟು ನಿಜಕ್ಕೂ ಎಷ್ಟು ಅಪಾಯಕಾರಿ ಸನ್ನಿವೇಶ ನಮ್ಮೆದುರು ಇದೆ ಎಂಬುದನ್ನೇ ಸೂಚಿಸುತ್ತಿದೆ.
ಅಲ್ಪಸಂಖ್ಯಾತರ ವಿರುದ್ಧದ ತಮ್ಮ ದ್ವೇಷವನ್ನು ತೀರಿಸಿಕೊಳ್ಳಲು ಅನೇಕ ಸಲ ಗೋರಕ್ಷಣೆ ಹೆಸರನ್ನೇ ಮುಂದೆ ಮಾಡುವ ಈ ಗೂಂಡಾಗಳು, ಉಗ್ರರ ಜೊತೆ ಸೇರಿಕೊಂಡರೆ, ಎಂತೆಂತಹ ಅನಾಹುತ ಇಲ್ಲಿ ನಡೆಯಬಹುದು ಎಂದು ಊಹಿಸಿದರೆ ಭಯವಾಗುತ್ತದೆ. ಇಂಥ ಗೂಂಡಾ ಪಡೆಯೊಂದಿಗೆ, ವಿದೇಶದಲ್ಲಿನ ಹತ್ಯೆಯಲ್ಲಿಯೂ ಕೈವಾಡ ಮೆರೆಯುವ ಉಗ್ರ ಬಿಷ್ಣೋಯ್ ಥರದವರು ಜೈಲಿನೊಳಗಿದ್ದರೂ ಸಂಪರ್ಕದಲ್ಲಿರುತ್ತಾರೆ ಎಂಬುದೇ ಅತಿ ಅಪಾಯಕಾರಿ ವಿಚಾರ. ಗೋರಕ್ಷಣೆ ಹೆಸರಲ್ಲಿ ನಿಜವಾಗಿಯೂ ನಡೆಯುತ್ತಿರುವುದು ಏನು ಎಂಬುದು ಒಂದು ಆತಂಕವಾದರೆ, ಕೆಲವು ಕಡೆ ಸರಕಾರಗಳು ಹಾಗು ಪೊಲೀಸ್ ವ್ಯವಸ್ಥೆಯ ಬೆಂಬಲದೊಂದಿಗೇ ಈ ನಕಲಿ ಗೋರಕ್ಷಕ ಗೂಂಡಾಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂತಹ ಗೂಂಡಾಗಳು ಉಗ್ರರೊಂದಿಗೆ ಸೇರಿಕೊಂಡರೆ ಇಲ್ಲಿನ ಸಮಾಜಕ್ಕೆ ಅದೆಂತಹ ದೊಡ್ಡ ಅಪಾಯ ಎಂದು ಯಾರೂ ಊಹಿಸಬಹುದು.