ಆಡುವ ವಯಸ್ಸಿನಲ್ಲೇ ತಾಯಂದಿರಾಗುವ ಸಂಕಟ

ಬಾಲಕಿಯರು ಅಪ್ರಾಪ್ತ ವಯಸ್ಸಿನಲ್ಲಿ ಗರ್ಭ ಧರಿಸುತ್ತಿರುವುದು ಸಾಮಾಜಿಕ ಪಿಡುಗಾಗುತ್ತಿದೆ. ಇದರ ಹಿಂದಿರುವ ಪ್ರಮುಖ ಕಾರಣಗಳನ್ನು ಅವಲೋಕಿಸಿದರೆ, ಶತಶತಮಾನಗಳಿಂದ ಜೀವಂತವಾಗಿರುವ ಬಾಲ್ಯವಿವಾಹವೇ ಅತ್ಯಂತ ಪ್ರಮುಖ ಕಾರಣವಾಗಿದೆ. ವಿಶ್ವಸಂಸ್ಥೆಯ ವರದಿ ಪ್ರಕಾರ ಭಾರತವು ವಿಶ್ವದಲ್ಲಿ ಬಾಲ್ಯವಿವಾಹದಲ್ಲಿ ಎರಡನೇ ಸ್ಥಾನ ಪಡೆದಿದೆ. ಭಾರತದಲ್ಲಿ ಪ್ರತಿವರ್ಷ ನಡೆವ ವಿವಾಹದಲ್ಲಿ ಶೇ. 25ರಷ್ಟು 18 ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳದ್ದಾಗಿರುತ್ತದೆ. ಅದರಲ್ಲೂ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಎಂದು ಆ ವರದಿ ಸಾರುತ್ತದೆ.

Update: 2024-01-04 04:43 GMT

ಇತ್ತೀಚೆಗೆ ಮಾಧ್ಯಮಗಳಲ್ಲಿ ಜಿಲ್ಲೆಯೊಂದರಲ್ಲಿ 1,896 ಮತ್ತು ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರಿದ್ದಾರೆ. ಬಾಲಕಿಯರು ಅಂಗನವಾಡಿಯಲ್ಲಿ ತಾಯಿ ಕಾರ್ಡ್ ಮಾಡಿಸುವಾಗ ಅವರ ಆಧಾರ್ ಕಾರ್ಡ್ ಹಾಗೂ ಶಾಲಾ ದಾಖಲೆಯನ್ನು ಪರಿಶೀಲಿಸಿದಾಗ 18 ವರ್ಷದೊಳಗಿನ ಬಾಲಕಿಯರು ಗರ್ಭಿಣಿ ಆಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ಹೇಳಿಕೆ ಸುದ್ದಿಯಾಗಿತ್ತು. ಇದರ ಬೆನ್ನತ್ತಿದಾಗ ಡಬ್ಲ್ಯೂಎಚ್‌ಒ ವರದಿ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ 21 ಮಿಲಿಯನ್(2 ಕೋಟಿ 10 ಲಕ್ಷ)15 ರಿಂದ 18 ವರ್ಷದೊಳಗಿನ ಹುಡುಗಿಯರು ಗರ್ಭಿಣಿಯಾಗಿದ್ದಾರೆ. ಅವರಲ್ಲಿ ಸರಿಸುಮಾರು 12 ಮಿಲಿಯನ್ (1 ಕೋಟಿ 20 ಲಕ್ಷ) ಬಾಲಕಿಯರು ಮಕ್ಕಳಿಗೆ ಜನನ ನೀಡುತ್ತಾರೆ ಎನ್ನುವ ಅಂಕಿ ಅಂಶಗಳು ದಿಗ್ಭ್ರಮೆ ಮೂಡಿಸುತ್ತವೆ. ಬಹಳ ಮುಖ್ಯವಾಗಿ ಗಮನಿಸಬೇಕಾದದ್ದು ಈ ಎಲ್ಲ ಅಂಕಿ-ಅಂಶಗಳು ಬೆಳಕಿಗೆ ಬಂದ ಪ್ರಕರಣಗಳಾಗಿವೆ. ಇದರ ಆಚೆಗೆ ಇನ್ನೆಷ್ಟು ಪಟ್ಟು ಬೆಳಕಿಗೆ ಬಾರದ ಪ್ರಕರಣಗಳಿವೆ ಎಂದು ನೆನೆಸಿಕೊಂಡರೆ ಸಾಕು ಮೈ ಜುಮ್ಮೆನ್ನುತ್ತದೆ.

ಇಂತಹ ಪ್ರಕರಣಗಳಲ್ಲಿ ಸರಿಸುಮಾರು ಶೇ. 55ರಷ್ಟು ಉದ್ದೇಶಪೂರ್ವಕವಾಗಿಲ್ಲದೆ ಗರ್ಭಧಾರಣೆಯಾಗಿರುವುದು ಕಂಡುಬರುತ್ತದೆ. ಇನ್ನು ಶೇ. 55ರಷ್ಟು ಅನಪೇಕ್ಷಿತ ಗರ್ಭಧಾರಣೆಗಳು ಗರ್ಭಪಾತದಲ್ಲಿ ಕೊನೆಗೊಳ್ಳುತ್ತವೆ. ಆ ಸಮಯದಲ್ಲಿ ಹೆಚ್ಚಾಗಿ ಅಸುರಕ್ಷಿತ ವಿಧಾನವನ್ನೇ ಅನುಸರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಾಗಾಗಿ ಬಾಲ ಗರ್ಭಿಣಿಯರು ಅಥವಾ ಹದಿಹರೆಯದ ಗರ್ಭಧಾರಣೆ ಎನ್ನುವುದು ಈಗ ಜಾಗತಿಕ ವಿದ್ಯಮಾನವಾಗಿದೆ.

ಸಂತಸದಿಂದ ಆಟ-ಪಾಠಗಳಲ್ಲಿ ತೊಡಗುವ ವಯಸ್ಸಿನಲ್ಲಿ ಈ ಬಾಲಕಿಯರು ಗರ್ಭಿಣಿಯರಾಗುವ ಮೂಲಕ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಬಹಳ ಮುಖ್ಯವಾಗಿ ಕೌಟುಂಬಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮಾನಸಿಕ ಹಿಂಸೆಗೆ ಈ ಬಾಲಕಿಯರು ಒಳಗಾಗುತ್ತಾರೆ. ಇನ್ನೊಂದೆಡೆ ದೈಹಿಕವಾಗಿ ಅಪಾರ ವೇದನೆ ಅನುಭವಿಸುತ್ತಾರೆ. ಅವರ ದೇಹವು ಗರ್ಭಧಾರಣೆಗೆ ಸಿದ್ಧವಾಗಿರುವುದಿಲ್ಲ. ಇನ್ನು ಹೆರಿಗೆಯಂತೂ ತುಂಬಾ ಅಪಾಯಕಾರಿ. ಅವರ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮವು ಜೀವನದುದ್ದಕ್ಕೂ ಅವರನ್ನು ಬೇತಾಳದಂತೆ ಕಾಡುತ್ತದೆ. ಕೆಲವರು ಸವಾಲನ್ನು ಎದುರಿಸಲಾಗದೆ ಸಾವಿಗೆ ತುತ್ತಾಗುವುದನ್ನೂ ಅಲ್ಲಗಳೆಯುವಂತಿಲ್ಲ. ಉಳಿದವರು ಅಧಿಕ ರಕ್ತ ಸ್ರಾವ, ತಲೆ ತಿರುಗುವಿಕೆ, ಮೂರ್ಛೆ, ಅಧಿಕ ತೂಕ, ಸುಸ್ತಾಗುವಿಕೆ, ನಿಶ್ಯಕ್ತಿಯಂತಹ ಸಮಸ್ಯೆಗಳಿಗೆ ಸಹಜವಾಗಿ ಒಳಗಾಗುತ್ತಾರೆ. ಅಧಿಕ ರಕ್ತದೊತ್ತಡದ ಜೊತೆಗೆ ಅನೇಕ ಕಾಯಿಲೆಗಳು ಅವರ ಆರೋಗ್ಯದ ಮೇಲೆ ಹಾಗೂ ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದರಿಂದ ಈ ಬಾಲಕಿಯರು ಹೆಚ್ಚು ತೊಂದರೆ ಅನುಭವಿಸುತ್ತಾರೆ.

ಇಂತಹ ಅನಾರೋಗ್ಯದ ನಡುವೆ ಬಾಲ ಗರ್ಭಿಣಿಯರಿಂದ ಜನಿಸುವ ಮಗು ಕೂಡ ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತದೆ. ಅಕಾಲಿಕ ಜನನ, ಕಡಿಮೆ ತೂಕ, ಮೂತ್ರಪಿಂಡಗಳಿಗೆ ಹಾನಿ, ಕೆಂಪು ರಕ್ತ ಕಣಗಳ (ಆರ್‌ಬಿಸಿ) ಸಂಖ್ಯೆ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕಡಿಮೆ ತೂಕ ಹೊಂದಿರುವುದರಿಂದ ಆಹಾರ ಜೀರ್ಣಕ್ರಿಯೆ ಮತ್ತು ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಮುಂದುವರಿದು ಸಕ್ಕರೆ ಕಾಯಿಲೆ ಮತ್ತು ಹೃದ್ರೋಗದಂತಹ ಕಾಯಿಲೆಗೆ ತುತ್ತಾಗುತ್ತಾರೆ. ಅಪೌಷ್ಟಿಕತೆಯಿಂದ ನರಳುವ ಈ ಮಕ್ಕಳ ಮೆದುಳಿನ ಬೆಳವಣಿಗೆ ಕಡಿಮೆಯಾಗಿದ್ದು, ಕಲಿಕೆಯಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಈ ಮೂಲಕ ಅ ಮಗುವು ಸಾಧಾರಣ ಮಗುವಿಗಿಂತ ಎಲ್ಲಾ ರಂಗದಲ್ಲಿಯೂ ಹಿಂದುಳಿಯುತ್ತದೆ. ಇದು ಕೆಲ ವರ್ಷಗಳಿಗೆ ಮಾತ್ರ ಸೀಮಿತ ಎನ್ನುವಂತಿಲ್ಲ, ಆ ಮಗುವಿನ ಕೊನೆತನಕವೂ ಕಾಡುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಬಾಲಕಿಯರು ಅಪ್ರಾಪ್ತ ವಯಸ್ಸಿನಲ್ಲಿ ಗರ್ಭ ಧರಿಸುತ್ತಿರುವುದು ಸಾಮಾಜಿಕ ಪಿಡುಗಾಗುತ್ತಿದೆ. ಇದರ ಹಿಂದಿರುವ ಪ್ರಮುಖ ಕಾರಣಗಳನ್ನು ಅವಲೋಕಿಸಿದರೆ, ಶತಶತಮಾನಗಳಿಂದ ಜೀವಂತವಾಗಿರುವ ಬಾಲ್ಯವಿವಾಹವೇ ಅತ್ಯಂತ ಪ್ರಮುಖ ಕಾರಣವಾಗಿದೆ. ವಿಶ್ವಸಂಸ್ಥೆಯ ವರದಿ ಪ್ರಕಾರ ಭಾರತವು ವಿಶ್ವದಲ್ಲಿ ಬಾಲ್ಯವಿವಾಹದಲ್ಲಿ ಎರಡನೇ ಸ್ಥಾನ ಪಡೆದಿದೆ. ಭಾರತದಲ್ಲಿ ಪ್ರತಿವರ್ಷ ನಡೆವ ವಿವಾಹದಲ್ಲಿ ಶೇ. 25ರಷ್ಟು 18 ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳದ್ದಾಗಿರುತ್ತದೆ. ಅದರಲ್ಲೂ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಎಂದು ಆ ವರದಿ ಸಾರುತ್ತದೆ.

ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯವಿವಾಹ ಮಾಡಲು ಅನೇಕ ಅಂಶಗಳು ಪ್ರೇರಣೆ ನೀಡುತ್ತವೆ. ಬಡತನದಿಂದ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಇದಕ್ಕೆ ಪೋಷಕರು ಮುಂದಾಗುತ್ತಾರೆ. ಅವರು ಹುಡುಗಿಯರನ್ನು ಒಂದು ರೀತಿ ಆರ್ಥಿಕ ಹೊರೆ ಎಂದು ಪರಿಗಣಿಸಿ, ತಮ್ಮ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳಲು ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಸುತ್ತಾರೆ. ಹೆಣ್ಣುಮಕ್ಕಳಿಗೆ ಶಿಕ್ಷಣದ ಮತ್ತು ಮುಂದಾಗುವ ದುಷ್ಪರಿಣಾಮಗಳ ಅರಿವಿನ ಕೊರೆತೆಯು ಇಲ್ಲಿ ಮುನ್ನೆಲೆಗೆ ಬರುತ್ತದೆ. ಲಿಂಗ ತಾರತಮ್ಯ, ಸಾಮಾಜದಲ್ಲಿನ ಸಾಂಪ್ರದಾಯಿಕ ಪದ್ಧತಿಗಳು ಬಾಲ್ಯವಿವಾಹಕ್ಕೆ ಪ್ರಚೋದನೆ ನೀಡುತ್ತಲಿವೆ. ಜೊತೆಗೆ ಗ್ರಾಮೀಣ ಪ್ರದೇಶದ ಪಾಲಕರು ಪ್ರೌಢಶಿಕ್ಷಣಕ್ಕೆ ಅಥವಾ ಅದರ ಮುಂದಿನ ವಿದ್ಯಾಭ್ಯಾಸಕ್ಕೆ ನಗರಗಳಿಗೆ ಹೆಣ್ಣು ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಾರೆ. ಯಾಕೆಂದರೆ ಇತ್ತೀಚೆಗೆ ಮೊಬೈಲ್, ಅಂತರ್ಜಾಲ ಸೇರಿದಂತೆ ಮಾಧ್ಯಮಗಳಲ್ಲಿನ ಹಸಿ-ಬಿಸಿ ದೃಶ್ಯಗಳಿಂದ ಹದಿಹರೆಯದವರು ಉದ್ರೇಕರಾಗಿ, ಭವಿಷ್ಯದ ಬಗ್ಗೆ ಚಿಂತಿಸದೆ ಲೈಂಗಿಕ ಸಂಪರ್ಕದ ಮೂಲಕ ಹಾದಿ ತಪ್ಪುತ್ತಾರೆ ಎನ್ನುವ ಆತಂಕವೂ ಪಾಲಕರಲ್ಲಿ ಹೆಚ್ಚಾಗುತ್ತಿರುವುದೂ ಬಾಲ್ಯವಿವಾಹದತ್ತ ಮನಸ್ಸು ಮಾಡಲು ಕಾರಣವಾಗಿದೆ.

ಬಾಲ್ಯವಿವಾಹಕ್ಕೆ ಒಳಗಾಗುವ ಹೆಣ್ಣು ಮಗುವಿನ ಬದುಕು ಸದಾ ಸಂಕಷ್ಟಗಳನ್ನು ಹೊತ್ತು ಸಾಗುತ್ತದೆ. ಮೊತ್ತಮೊದಲು ಆಕೆ ಪತ್ನಿ, ಸೊಸೆ ಇತ್ಯಾದಿ ಪಾತ್ರಗಳನ್ನು ನಿರ್ವಹಿಸಲು ಮಾನಸಿಕವಾಗಿ ಸಿದ್ಧಳಾಗಿರುವುದಿಲ್ಲ. ಜೊತೆಗೆ ಆಕೆಯ ಯಾವ ಮಾತಿಗೂ ಗಂಡನ ಮನೆಯಲ್ಲಿ ಬೆಲೆ ಇರುವುದಿಲ್ಲ. ಇದು ಅವರು ಕೊನೆಯವರೆಗೂ ಧ್ವನಿ ಇಲ್ಲದವರಾಗಿ ಬದುಕುವಂತೆ ಮಾಡುತ್ತದೆ. ಜೊತೆಗೆ ಆ ಬಾಲಕಿಯರ ಎಲ್ಲಾ ಕನಸುಗಳಿಗೆ ಕೊಳ್ಳಿ ಇಡುತ್ತದೆ. ಅವರ ಆಸಕ್ತಿ, ಉತ್ಸಾಹ, ಪ್ರತಿಭೆಗಳು ನಾಶವಾಗುತ್ತವೆ. ಇನ್ನೂ ವಿಶೇಷ ಎಂದರೆ ಬಾಲ್ಯ ವಿವಾಹಕ್ಕೆ ಒಳಗಾಗುವ ಬಾಲಕಿಯರ ಮುಗ್ಧತನ ಎದ್ದು ಕಾಣುತ್ತದೆ. ಇಂತಹ ಮಕ್ಕಳು ತಮ್ಮ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡುವುದಿಲ್ಲ. ತಮಗೆ ಸಮಸ್ಯೆ ಎದುರಾದಾಗ ಸಹಾಯ-ಬೆಂಬಲ ಯಾರಿಂದ ಪಡೆಯಬೇಕೆಂಬ ತಿಳುವಳಿಕೆಯನ್ನು ಹೊಂದಿರುವುದಿಲ್ಲ. ಈ ಬಾಲಕಿಯರು ಹೆಚ್ಚಾಗಿ ಒಂಟಿಯಾಗಿರುತ್ತಾರೆ. ತಮ್ಮ ಮೇಲಾದ ಆಕ್ರಮಣವನ್ನು ಖಿನ್ನತೆಯಿಂದ ತಾವೊಬ್ಬರೇ ಮಾನಸಿಕವಾಗಿ ಅನುಭವಿಸುತ್ತಿರುತ್ತಾರೆ. ಆ ಮೂಲಕ ಅವರು ಬಾಲಗರ್ಭಿಣಿಯಾಗುತ್ತಾರೆ.

ಬಾಲ್ಯವಿವಾಹಕ್ಕೆ ತುತ್ತಾದವರು ಗರ್ಭ ನಿರೋಧಕ ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಸಮರ್ಪಕ ಜ್ಞಾನವೂ ಇರುವುದಿಲ್ಲ. ಒಟ್ಟಾರೆ ಲೈಂಗಿಕ ಶಿಕ್ಷಣ ದೊರೆಯದಿರುವುದು ಮತ್ತೊಂದು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಅನೇಕ ಮಕ್ಕಳು ತಮ್ಮ ಪೋಷಕರೊಂದಿಗೆ ಮುಕ್ತ ಸಂವಹನ ಮಾಡುವುದಿಲ್ಲ. ಪೋಷಕರು ಹದಿಹರೆಯದವರಿಗೆ ಅಗತ್ಯ ಮಾಹಿತಿ, ಬೆಂಬಲ, ಮಾರ್ಗದರ್ಶನ ನೀಡಲು ವಿಫಲರಾಗುತ್ತಿದ್ದಾರೆ. ಕಾನೂನು ರಕ್ಷಣೆ ಇದ್ದರೂ ನ್ಯಾಯ ವಿಳಂಬ ನೀತಿ ಇದಕ್ಕೆ ಪ್ರಮುಖ ಕಾರಣವಾಗಿವೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇದರ ಜೊತೆಗೆ ಹದಿಹರೆಯದ ಗರ್ಭಧಾರಣೆಗೆ ಕಾರಣಗಳನ್ನೆಲ್ಲ ಸರಿಯಾಗಿ ಅರ್ಥ ಮಾಡಿಕೊಂಡರೆ ಇದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಸುಲಭವಾಗುತ್ತದೆ. ಬಾಲ್ಯವಿವಾಹವೆಂಬ ಸಾಮಾಜಿಕ ಅನಿಷ್ಟವನ್ನು ನಿರ್ಮೂಲನಮಾಡಲು ಗಟ್ಟಿ ಕ್ರಮಗಳು ಅತ್ಯಗತ್ಯವಾಗಿವೆ. ಈ ಕುರಿತಾಗಿರುವ ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸುವುದರ ಜೊತೆಗೆ ಪ್ರತಿಯೊಬ್ಬರೂ ತಮಗೆ ಯಾಕೆ ಇಲ್ಲದ ಉಸಾಬರಿ ಎನ್ನುವ ಮನೋಭಾವ ತೊರೆದು, ಬಾಲ್ಯವಿವಾಹ ತಡೆಗಟ್ಟಲು ಮುಂದಾಗಬೇಕು. ಬಾಲಕಿಯರಿಗೆ ಸಮಗ್ರ ಲೈಂಗಿಕ ಶಿಕ್ಷಣ ನೀಡುವುದು ಅತ್ಯಂತ ಅಗತ್ಯವಾಗಿದೆ. ಇಂದಿನ ದಿನದಲ್ಲಿ ಮಡಿವಂತಿಕೆ ಮುಸುಕು ಹಾಕಿಕೊಂಡು ಕುಳಿತರೆ, ಇನ್ನಷ್ಟು ಬಾಲಕಿಯರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಸಂತಾನೋತ್ಪತ್ತಿ, ಗರ್ಭ ನಿರೋಧಕ ಹಾಗೂ ಜವಾಬ್ದಾರಿತ ಲೈಂಗಿಕ ನಡವಳಿಕೆಯ ಬಗ್ಗೆ ಸೂಕ್ಷ್ಮವಾದ ಜ್ಞಾನ ಮೂಡಿಸಬೇಕಿದೆ. ಸಂಕಷ್ಟದಲ್ಲಿರುವ ಬಾಲಕಿಯರಿಗೆ ತಕ್ಷಣ ನೆರವು ನೀಡುವುದರ ಜೊತೆಗೆ ಅದರ ಕುರಿತಾಗಿ ಗೌಪ್ಯತೆಯನ್ನು ಕಾಪಾಡುವುದು ಅಗತ್ಯವಾಗಿದೆ. ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ಮತ್ತು ಸಮಲೋಚನೆಗಳನ್ನು ಆರೋಗ್ಯ ಇಲಾಖೆ ಮೂಲಕ ಹೆಚ್ಚಿಸುವ ಅಗತ್ಯವಿದೆ. ಲಿಂಗ ಅಸಮಾನತೆಗಳನ್ನು ನಿವಾರಿಸುತ್ತಾ, ಹೆಣ್ಣು ಮಕ್ಕಳ ಶಿಕ್ಷಣ ಸಬಲೀಕರಣಕ್ಕಾಗಿ ಆದ್ಯತೆ ನೀಡಬೇಕಿದೆ. ಪೋಷಕರು ತಮ್ಮ ಮಕ್ಕಳ ಜೊತೆ ಮುಕ್ತವಾಗಿ ಮಾತನಾಡುವತ್ತ ಗಮನಹರಿಸಬೇಕಿದೆ. ಬಾಲಕಿಯರಿಗೆ ತಮಗಿರುವ ರಕ್ಷಣೆಯ ಕಾನೂನುಗಳನ್ನು, ಹಕ್ಕುಗಳನ್ನು ಶಾಲಾ ಹಂತದಲ್ಲೇ ಮನದಟ್ಟು ಮಾಡುವ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಆ ಮೂಲಕ ಆಡುವ ಹುಡುಗಿಯು ಕಾಡುವ ಹುಡುಗನಿಂದ ಮುಕ್ತವಾಗಬಹುದಾಗಿದೆ. ತನ್ನ ಬದುಕನ್ನೂ ಹಸನು ಮಾಡಿಕೊಳ್ಳಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಪರಮೇಶ್ವರಯ್ಯ ಸೊಪ್ಪಿಮಠ

contributor

Similar News