ಬೂಸಾ ಚಳವಳಿ: ದಲಿತ ಸಾಂಸ್ಕೃತಿಕ ದಂಗೆ
ಕನ್ನಡ ನಾಡಿನಲ್ಲಿ ನಡೆದಿರುವ ಪ್ರಗತಿಪರ ಚಳವಳಿಗಳಲ್ಲಿ ಬೂಸಾ ಪ್ರಮುಖವಾದದ್ದು. 1970ರ ದಶಕದಲ್ಲಿ ಇಡೀ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿದ ಚಳವಳಿ ಇದಾಗಿದೆ. ಈ ಚಳವಳಿಯ ಕೇಂದ್ರ ಬಿಂದು ಬಿ.ಬಸವಲಿಂಗಪ್ಪ. ಇವರು ದಲಿತ ಸಮುದಾಯದಲ್ಲಿ ಹುಟ್ಟಿ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ನಿರ್ದಿಷ್ಟ ಛಾಪನ್ನು ಮೂಡಿಸಿದವರು. ಕರ್ನಾಟಕ ರಾಜ್ಯದ ಸಚಿವರಾಗಿ ಅನೇಕ ಜವಾಬ್ದಾರಿಯುತ ಖಾತೆಗಳನ್ನು ನಿರ್ವಹಿಸಿ ಜನಪರವಾದ ಸೇವೆ ಸಲ್ಲಿಸಿ ಅಭಿವೃದ್ಧಿಗಾಗಿ ದುಡಿದಿದ್ದಾರೆ. 1957ರಲ್ಲಿ ಶಾಸನ ಸಭೆಯನ್ನು ಪ್ರವೇಶಿಸಿ 1958ರಲ್ಲಿ ಉಪಗೃಹಮಂತ್ರಿಯಾಗಿ ದಕ್ಷತೆಯಿಂದ ದಲಿತ ನಾಯಕತ್ವಕ್ಕೆ ಬುನಾದಿ ಹಾಕಿದವರು.
ಬೂಸಾ ಚಳವಳಿ ಹುಟ್ಟಿ ಈಗ 50 ವರ್ಷ. ಅರ್ಧ ಶತಮಾನ ಕಳೆದ ನಂತರವೂ ಇಂದಿಗೂ ಬೂಸಾ ಬುಸುಗುಡುತ್ತಲೇ ಇದೆ. ದಲಿತರಿಗೆ ಚಳವಳಿ, ಸಾಹಿತ್ಯ, ಧಾರ್ಮಿಕ ಹಾಗೂ ರಾಜಕೀಯವಾಗಿ ಬುನಾದಿ ಹಾಕಿಕೊಟ್ಟ ಒಂದು ಸಾಂಸ್ಕೃತಿಕ ದಂಗೆ. ದಲಿತರ ಹೊಸ ಹೊಳವಿಗೆ ಒಂದು ಮೈಲಿಗಲ್ಲು. ಇಂತಹ ಮಹತ್ತರವಾದ ಕಾಲಘಟ್ಟವನ್ನು ಹೊಸ ತಲೆಮಾರಿಗೆ ಚರಿತ್ರೆಯ ಮರು ಶೋಧವನ್ನು ಕಟ್ಟಿಕೊಡುವ ತುರ್ತನ್ನು ವರ್ತಮಾನ ಬಯಸುತ್ತಿದೆ.
ಕನ್ನಡ ನಾಡಿನಲ್ಲಿ ನಡೆದಿರುವ ಪ್ರಗತಿಪರ ಚಳವಳಿಗಳಲ್ಲಿ ಬೂಸಾ ಪ್ರಮುಖವಾದದ್ದು. 1970ರ ದಶಕದಲ್ಲಿ ಇಡೀ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿದ ಚಳವಳಿ ಇದಾಗಿದೆ. ಈ ಚಳವಳಿಯ ಕೇಂದ್ರ ಬಿಂದು ಬಿ.ಬಸವಲಿಂಗಪ್ಪ. ಇವರು ದಲಿತ ಸಮುದಾಯದಲ್ಲಿ ಹುಟ್ಟಿ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ನಿರ್ದಿಷ್ಟ ಛಾಪನ್ನು ಮೂಡಿಸಿದವರು. ಕರ್ನಾಟಕ ರಾಜ್ಯದ ಸಚಿವರಾಗಿ ಅನೇಕ ಜವಾಬ್ದಾರಿಯುತ ಖಾತೆಗಳನ್ನು ನಿರ್ವಹಿಸಿ ಜನಪರವಾದ ಸೇವೆ ಸಲ್ಲಿಸಿ ಅಭಿವೃದ್ಧಿಗಾಗಿ ದುಡಿದಿದ್ದಾರೆ. 1957ರಲ್ಲಿ ಶಾಸನ ಸಭೆಯನ್ನು ಪ್ರವೇಶಿಸಿ 1958ರಲ್ಲಿ ಉಪಗೃಹಮಂತ್ರಿಯಾಗಿ ದಕ್ಷತೆಯಿಂದ ದಲಿತ ನಾಯಕತ್ವಕ್ಕೆ ಬುನಾದಿ ಹಾಕಿದವರು.
1972ರಲ್ಲಿ ಡಿ.ದೇವರಾಜ ಅರಸು ಅವರ ಸಚಿವ ಸಂಪುಟದಲ್ಲಿ ಪೌರಾಡಳಿತ ಮತ್ತು ವಸತಿ ಸಚಿವರಾಗಿ ಬಿ.ಬಸವಲಿಂಗಪ್ಪ ಅವರು ನೇಮಕಗೊಂಡು ದೇಶದಲ್ಲೇ ಪ್ರಥಮ ಬಾರಿಗೆ ದಲಿತರು ತಲೆ-ತಲಾಂತರಗಳಿಂದ ಊರವರು ಮಾಡಿದ ಮಲ-ಮೂತ್ರಗಳನ್ನು ತಲೆಯ ಮೇಲೆ ಹೊತ್ತು ಸಾಗಿಸುವ ಅಮಾನವೀಯ ಪದ್ಧತಿಯನ್ನು ರದ್ದುಮಾಡಿ ಇಡೀ ದೇಶದ ಗಮನವನ್ನು ಸೆಳೆದಿದ್ದರು.
ನವೆಂಬರ್ 19, 1973ರಂದು ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ಸಂಸ್ಥೆ ಏರ್ಪಡಿಸಿದ್ದ ಹೊಸ ಅಲೆಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದಾಗ ಮೊದಲಿಗೆ ಲಾಯರ್ ಸಂಜೀವಯ್ಯ ಅವರು ಇಂಗ್ಲಿಷ್‌ನಲ್ಲಿ ಭಾಷಣ ಮಾಡಲು ತೊಡಗಿದರು. ನೆರೆದಿದ್ದ ಸಭಿಕರಲ್ಲಿ ಕೆಲವರು ಸಂಜೀವಯ್ಯ ಅವರ ವಿರುದ್ಧ ಕನ್ನಡ... ಕನ್ನಡ... ಎಂದು ಕೂಗಿದರು. ಅದಕ್ಕೆ ತಲೆಕೆಡಿಸಿ ಕೊಳ್ಳದೆ ಸಂಜೀವಯ್ಯ ಅವರು ಇಂಗ್ಲಿಷ್‌ನಲ್ಲೇ ಭಾಷಣ ಮುಂದುವರಿಸಿದರು. ಅವರು ದಲಿತರು ಕೂಡ ಇಂಗ್ಲಿಷ್‌ನಲ್ಲಿ ವಿದ್ವತ್‌ಪೂರ್ಣವಾಗಿ ಮಾತನಾಡಬಲ್ಲರೆಂಬ ಮಾದರಿಗೆ ಸಂಕೇತವೆಂಬಂತೆ ಮಾತನಾಡಿದರೋ ಏನೋ?. ನಂತರ ಬಿ.ಬಸವಲಿಂಗಪ್ಪ ಅವರು ಮಾತಿಗೆ ತೊಡಗಿದ ಕೊಂಚ ಸಮಯದಲ್ಲಿ ಸಂಜೀವಯ್ಯನವರು ಮಾಡಿದ ಇಂಗ್ಲಿಷ್ ಭಾಷಣ ಹಾಗೂ ಅದಕ್ಕೆ ಅಡ್ಡಿಪಡಿಸಿದ ಕನ್ನಡಾಭಿಮಾನಿಗಳ ವರಸೆ ಎಲ್ಲವನ್ನು ಗ್ರಹಿಕೆಗೆ ತಂದುಕೊಂಡು ಏರಿದ ದನಿಯಲ್ಲಿ ‘‘ಕನ್ನಡದಲ್ಲೇನಿದೆ.. ಅದರಲ್ಲಿ ಬಹುಪಾಲು ಬೂಸಾ...’’ ಎಂದು ಮಾತನಾಡಿದರು. ಇದು ಬಸವಲಿಂಗಪ್ಪ ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು. ನಂತರ ನಡೆದದ್ದು ಇತಿಹಾಸ.
ರಾಜಕೀಯ ಕುತಂತ್ರ ಹಾಗೂ ಸಂಪ್ರದಾಯವಾದಿಗಳ ದಲಿತ ವಿರೋಧಿ ಧೋರಣೆಯಿಂದಾಗಿ ಆ ಮಾತಿನ ಅರ್ಥ ಬೇರೆಯದೇ ಸ್ವರೂಪ ಪಡೆದುಕೊಂಡಿತು. ರಾಜ್ಯಾದ್ಯಂತ ಈ ಕುರಿತು ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡವು. ನವೆಂಬರ್ 20, 1973ರ ಬೆಳಗಾಗುವುದರೊಳಗೆ ಈ ವಿಷಯ ಪತ್ರಿಕೆಗಳಲ್ಲಿ ವಿಭಿನ್ನವಾದ, ಜನರನ್ನು ರೊಚ್ಚಿಗೇಳಿಸುವ ಶೈಲಿಯಲ್ಲಿ ‘ಕನ್ನಡ ಪುಸ್ತಕ ಓದುವುದರಿಂದ ವಿಚಾರ ಶಕ್ತಿ, ದೇಶಪ್ರೇಮ ಬರದು’ ಎಂಬ ಶೀರ್ಷಿಕೆಯಲ್ಲಿ ‘‘ಕನ್ನಡ ಪುಸ್ತಕವನ್ನು ಓದುವುದರಿಂದ ದೇಶಪ್ರೇಮ, ಸ್ವಾತಂತ್ರ್ಯ, ವಿಚಾರಶಕ್ತಿ, ಧೈರ್ಯ, ಸೇವಾ ಭಾವನೆಗಳು ಬರುವುದಿಲ್ಲ ಎಂಬುದು ಬಿ.ಬಸವಲಿಂಗಪ್ಪ ಅವರ ಖಚಿತ ಅಭಿಪ್ರಾಯ’’ ಎಂದು ಸಂಪ್ರದಾಯವಾದಿಗಳ ಪತ್ರಿಕೆ ಬರೆಯಿತು. ಈ ಮೂಲಕ ಕೆಲವು ಮೂಲಭೂತವಾದಿಗಳು ಅವರ ವಿರುದ್ಧವಾಗಿ ಕೆಲಸ ಶುರುಮಾಡಿದರು. ಇಡೀ ರಾಜ್ಯದ ಜನತೆ ಎರಡು ಗುಂಪುಗಳಾದವು. ಬಸವಲಿಂಗಪ್ಪನವರ ಬೆಂಬಲಕ್ಕೆ ಒಂದು ಗುಂಪು, ಅವರನ್ನು ವಿರೋಧಿಸುವ ಗುಂಪು ಮತ್ತೊಂದು ಸೃಷ್ಟಿಗೊಂಡವು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನವೆಂಬರ್ 27, 1973ರಂದು ಬಸವಲಿಂಗಪ್ಪನವರ ಹೇಳಿಕೆ ಕುರಿತಂತೆ ಪರ-ವಿರೋಧ ಪ್ರತಿಭಟನಾ ಮೆರವಣಿಗೆಗಳು ಪ್ರಾರಂಭವಾದವು. ಕೆ.ಆರ್. ಸರ್ಕಲ್ ಬಳಿ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರು ಲಾಠಿ ಚಾರ್ಜ್ ಮಾಡಿ ಆರು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದರು. ಹೀಗೆ ದಲಿತರ ನಾಯಕರಾದ ಬಿ.ಬಸವಲಿಂಗಪ್ಪ ಅವರನ್ನು ಬೆಂಬಲಿಸಿ ಎಷ್ಟೋ ಜನ ದೌರ್ಜನ್ಯಕ್ಕೆ ಒಳಗಾದರು.
ಕನ್ನಡ ಸಿರಿಭರಿತ ಪರಂಪರೆ ಮತ್ತು ಮೌಲ್ಯ ಸಾಹಿತ್ಯಗಳ ಪರಿಚಯವೂ ಇಲ್ಲದೆ ಪೌರಾಡಳಿತ ಸಚಿವ ಬಿ.ಬಸವಲಿಂಗಪ್ಪನವರು ಕನ್ನಡವನ್ನು ಅವಹೇಳನ ಮಾಡಿದ್ದಾರೆಂದು ಅವರನ್ನು ಮಂತ್ರಿ ಪದವಿಯಿಂದ ತೆಗೆಯುವವರೆಗೂ ಹೋರಾಟ ನಡೆಸಲು ಕ್ರಿಯಾ ಸಮಿತಿಯೊಂದನ್ನು ರಚಿಸಬೇಕೆಂದು ಕನ್ನಡ ಚಳವಳಿಗಾರರ ಕೇಂದ್ರ ಕಾರ್ಯ ಸಮಿತಿಯು ನಿರ್ಧರಿಸಿತು. ಬಿ.ಬಸವಲಿಂಗಪ್ಪ ತಮ್ಮ ಊರ ಒಳಗಡೆ ಪ್ರವೇಶಿಸದಂತೆ ನಿರ್ಬಂಧಿಸಲು ಕೋಮುವಾದಿಗಳು, ವಿದ್ಯಾರ್ಥಿಗಳಾದಿಯಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಬಸವಲಿಂಗಪ್ಪ ಅವರು ಕರ್ನಾಟಕ ಏಕೀಕರಣ ಚಳವಳಿಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ 1956ರಲ್ಲಿ ಕರ್ನಾಟಕ ರಾಜ್ಯ ರಚನೆಯಾಗುವ ತನಕ ಈ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಚೆಲುವ ಕನ್ನಡ ನಾಡಿನ ಉದಯಕ್ಕಾಗಿ ದುಡಿದಿದ್ದಾರೆ. ಹೀಗೆ ಕನ್ನಡ ಅಭಿವೃದ್ಧಿಗಾಗಿ ದುಡಿದ ಬಿ.ಬಸವಲಿಂಗಪ್ಪ ಅವರಿಗೆ ಕನ್ನಡ ಚಳವಳಿಗಾರರು ಪ್ರತಿಭಟಿಸಿದ್ದಲ್ಲದೆ ಬೆಂಗಳೂರನ್ನು ಬಂದ್ ಮಾಡುವುದಾಗಿ ಬೆದರಿಕೆ ಹಾಕಿದರು. ಇಂತಹ ಮಹಾನ್ ಕನ್ನಡ ಅಭಿಮಾನಿ ಹಾಗೂ ಹೋರಾಟಗಾರ ಬಿ.ಬಸವಲಿಂಗಪ್ಪ ಅವರು ಡಿಸೆಂಬರ್ 03, 1973ರಂದು ವಿಷಯ ಸಂಬಂಧಿಸಿದಂತೆ ಸ್ವತಃ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಾರೆ.
ಬಸವಲಿಂಗಪ್ಪ ಅವರ ಸ್ಪಷ್ಟನೆ: ‘‘ಕನ್ನಡ ಭಾಷೆಯ ವಿರುದ್ಧ ನಾನು ಎಂದೂ ಮಾತಾಡಿಲ್ಲ. ಆದರೆ ಕನ್ನಡದಲ್ಲಿ ಬರೆದ ಕೆಲವು ಕನ್ನಡ ಪುಸ್ತಕಗಳ ಬಗ್ಗೆ ಮಾತ್ರವೆಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ ಮತ್ತು ಆ ಬಗ್ಗೆ ತುಂಬಾ ಗೌರವ ಹೊಂದಿರುವವನಾಗಿದ್ದೇನೆ. ನನ್ನ ಭಾಷೆ ಈ ವಿಚಾರವನ್ನು ತಿಳಿಯದಿದ್ದಲ್ಲಿ ಆ ರೀತಿಯಲ್ಲಿ ತಿಳಿದುಕೊಳ್ಳುವಂತೆ ವಿದ್ಯಾರ್ಥಿಗಳು ಎಲ್ಲಾ ವರ್ಗಗಳನ್ನು ಕೋರಿಕೊಳ್ಳುತ್ತೇನೆ’’ ಎಂದು ಮನಪೂರ್ವಕವಾಗಿ ಬಸವಲಿಂಗಪ್ಪ ಅವರು ರಾಜ್ಯದ ಜನತೆಯನ್ನು ವಿನಂತಿಸಿದರು.
ಹಾಗೆಯೇ ಅಂದು ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಪತ್ರಿಕಾ ಹೇಳಿಕೆಯನ್ನೂ ಕೊಡುತ್ತಾರೆ. ‘‘ಬಿ.ಬಸವಲಿಂಗಪ್ಪ ಅವರು ಮಾತನಾಡಿದರೆನ್ನಲಾದ ಟೀಕೆಗೆ ಸಂಬಂಧಿಸಿದಂತೆ ಪ್ರಸಕ್ತ ನಡೆಯುತ್ತಿರುವ ಪರ ಹಾಗೂ ವಿರೋಧಿ ಚಳವಳಿಯಿಂದ ನಾನು ತೀವ್ರ ಮನನೊಂದಿದ್ದೇನೆ’’ ಎಂದು ಅರಸು ಅವರು ಹೇಳಿದರು. ‘‘ಸಮಗ್ರ ಕನ್ನಡ ಸಾಹಿತ್ಯವನ್ನು ತಾವು ಖಂಡಿಸಿರುವುದಾಗಿ ವರದಿಯಾಗಿರುವುದನ್ನು ಬಸವಲಿಂಗಪ್ಪ ಅವರು ಅಲ್ಲಗೆಳೆದು, ಕನ್ನಡ ಕೆಲವು ಸಾಹಿತ್ಯವನ್ನು ಮಾತ್ರ ನಾನು ಟೀಕಿಸಿರುವುದಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಈ ಸ್ಪಷ್ಟೀಕರಣ ವಿವಾದವನ್ನು ಕೊನೆಗೊಳಿಸುವುದೆಂದು ನಾನು ನಿರೀಕ್ಷಿಸಿದೆ. ದುರದೃಷ್ಟವಶಾತ್ ಚಳವಳಿ ಹಾಗೂ ಪ್ರತಿ ಚಳವಳಿ ಮುಂದುವರಿಯುತ್ತಿವೆ’’ ಎಂದು ಅರಸು ವಿಷಾದಿಸಿದರು. ಯಾರೇ ವಿನಂತಿಸಿದರೂ ಬೂಸಾ ಚಳವಳಿ ದಿನದಿಂದ ದಿನಕ್ಕೆ ತನ್ನ ಉಗ್ರ ಸ್ವರೂಪವನ್ನು ಪಡೆದುಕೊಂಡಿತು.
ಬಿ.ಬಸವಲಿಂಗಪ್ಪ ಅವರನ್ನು ಬೆಂಬಲಿಸಿ ಇಡೀ ಶೋಷಿತ ಸಮುದಾಯ ಪ್ರತಿ ಹೋರಾಟಕ್ಕೆ ನಿಂತವು. ಡಾ. ಸಿದ್ದಲಿಂಗಯ್ಯ ಅವರನ್ನು ಮೊದಲ್ಗೊಂಡು ಬಹುತೇಕರು ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರ ಬೆಂಬಲಕ್ಕೆ ನಿಂತರು. ಡಿಸೆಂಬರ್ 14, 1973ರಂದು ಬಿ.ಬಸವಲಿಂಗಪ್ಪನವರು ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ದಿಲ್ಲಿಯಿಂದಲೇ ರಾಜೀನಾಮೆ ಪತ್ರ ಕಳುಹಿಸಿಕೊಟ್ಟರು. ಡಾ. ಸಿದ್ದಲಿಂಗಯ್ಯ ಅವರು ಹೇಳುವಂತೆ ‘‘ನಮ್ಮ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಮೊದಲ ಹಲ್ಲೆ ಇದಾಗಿತ್ತು. ತನಗೆ ಅನ್ನಿಸಿದ್ದನ್ನು ಹೇಳುವ ಹಕ್ಕು ದಲಿತರಿಗೆ ಇಲ್ಲ ಅನ್ನುವುದು ನೋವಿನ ವಿಚಾರ. ಯಾರು ಏನು ಬೇಕಾದರೂ ಹೇಳಬಹುದು. ಆದರೆ ಒಬ್ಬ ದಲಿತ ಹೇಳಿದಾಗ ಜನ ಹುಷಾರಾಗಿ ಬಿಡುತ್ತಿದ್ದರು. ಅದರಲ್ಲೂ ಬಸವಲಿಂಗಪ್ಪ ಹೇಳಿದರೆ ಇನ್ನೂ ಹುಷಾರಾಗಿ ಬಿಡುತ್ತಿದ್ದರು.’’ ಇದು ಸಂಪ್ರದಾಯವಾದಿಗಳ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ.
ಬಿ.ಬಸವಲಿಂಗಪ್ಪನವರು ರಾಜೀನಾಮೆ ನೀಡಿದ ನಂತರದ ದಿನದಲ್ಲಿ ರಾಷ್ಟ್ರಕವಿ ಕುವೆಂಪು ‘‘ಈ ಬೂಸಾ ಸಾಹಿತ್ಯ ಅಂತ ಯಾವುದನ್ನು ಕರೆಯುತ್ತೇವೆಯೋ ಅದು ಪ್ರಪಂಚದ ಎಲ್ಲಾ ಸಾಹಿತ್ಯದಲ್ಲಿಯೂ ಇರುತ್ತದೆ. ಸುಮಾರು ಮುಕ್ಕಾಲು ಪಾಲಿನ ಮೇಲೆ ಇರುವುದು ಬೂಸಾ ಸಾಹಿತ್ಯವೇ. ದನ, ಎಮ್ಮೆ ಸಾಕುವವರಿಗೆ ಗೊತ್ತು ಬೂಸಾವೇ ಮುಖ್ಯ ಅಂತ, ಪ್ರಧಾನವಾದ ಆಹಾರ’’ ಎಂದು ಹೇಳಿ ಬಿ.ಬಸವಲಿಂಗಪ್ಪ ಅವರ ಬೂಸಾದ ಮಾತಿನ ಹಿನ್ನೆಲೆಯನ್ನು ಸಮರ್ಥಿಸಿದರು.
‘‘ಬಸವಲಿಂಗಪ್ಪನವರು ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಕರೆದಾಗ ಹಾಗೇಕೆ ಕರೆದರೆಂಬ ಪ್ರಶ್ನೆಯನ್ನು ನಮಗೆ ನಾವು ಕೇಳಿಕೊಳ್ಳಬೇಕು. ನಮ್ಮ ಮತ ಧರ್ಮಗಳಿಂದ ಮೊದಲಿನಿಂದಲೂ ವಂಚಿತರಾಗಿ ಹೊರಗುಳಿದ ಪಂಚಮರಿಗೆ ಮತೀಯ ಸಾಹಿತ್ಯದಿಂದ ತುಂಬಿದ ಕನ್ನಡ ಸಾಹಿತ್ಯ ಅರ್ಥಹೀನವಾಗಿ ಕಂಡರೆ ಅದರಲ್ಲೇನು ಆಶ್ವರ್ಯವಿದೆ? ಅಲ್ಲದೆ ಪಂಚಮರು ಕನ್ನಡ ಸಾಹಿತ್ಯದ ಇಂಥ ಮತೀಯ ಪರಂಪರೆಯನ್ನು ಉದ್ವಿಗ್ನತೆಯಲ್ಲಿ ತ್ಯಜಿಸಲಾದಾಗ ಮಹಾರಾಷ್ಟ್ರದ ಮಹರ್ ಜನಾಂಗದ ಲೇಖಕರಂತೆ (ದಲಿತ ಪ್ಯಾಂಥರ್ಸ್) ಇವರು ಕನ್ನಡಕ್ಕೆ ನಿಜವಾಗಿಯೂ ಹೊಸದಾದದ್ದನ್ನು ಸೇರಿಸಲು ಸಾಧ್ಯತೆಯಿಲ್ಲವೇ?’’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಯು.ಆರ್.ಅನಂತಮೂರ್ತಿ ಅವರು ಬಿ.ಬಸವಲಿಂಗಪ್ಪ ಅವರನ್ನು ಬೆಂಬಲಿಸಿ ದಿನಪತ್ರಿಕೆಗೆ ಲೇಖನ ಬರೆಯುತ್ತಾರೆ. ಹೀಗೆ ಬಸವಲಿಂಗಪ್ಪನವರ ಪರವಾಗಿ ದಲಿತೇತರ ಪ್ರಗತಿಪರರಾದ ಅಗ್ರಹಾರ ಕೃಷ್ಣಮೂರ್ತಿ, ಕಾಳೇಗೌಡ ನಾಗವಾರ, ಕರಿಗೌಡ ಬೀಚನಹಳ್ಳಿ, ಶೂದ್ರ ಶ್ರೀನಿವಾಸ್ ಮುಂತಾದವರು ಬೆಂಬಲಿಸಿ ಆ ಮೂಲಕ ಒಂದು ಹೊಸ ಸಮಾಜದ ಸೃಷ್ಟಿಗೆ ಬಯಸಿದರು.
ಈ ಬೂಸಾ ಪ್ರಕರಣ ದಲಿತರಲ್ಲಿ ಜಾಗೃತಿ ಮೂಡಿಸಿದಂತಹ ಚಳವಳಿಯಾಗಿದೆ. ಆ ದಿನಗಳಲ್ಲಿ ಇದು ಕಷ್ಟಕರವಾದ ಪರಿಸ್ಥಿತಿಗಳನ್ನು ಹುಟ್ಟುಹಾಕಿದರೂ ಆನಂತರದ ದಿನಗಳಲ್ಲಿ ಅದರಿಂದ ಒಳ್ಳೆಯ ಫಲ ಸಿಕ್ಕಿತು. ಇದರ ಪ್ರತಿಫಲವಾಗಿ ದಲಿತರೆಲ್ಲರೂ ಒಗ್ಗೂಡಿ ಸ್ವಾಭಿಮಾನ, ಆತ್ಮಗೌರವ, ಸಂಘರ್ಷ ಮತ್ತು ಪರಿವರ್ತನೆ ಎಂಬ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡು 1974 ಡಿಸೆಂಬರ್ 28, 29 ಮತ್ತು 30ರಂದು ಭದ್ರಾವತಿಯಲ್ಲಿ ‘ದಲಿತ ಲೇಖಕರ ಮತ್ತು ಕಲಾವಿದರ ಬಳಗ’ ಎನ್ನುವ ಹೆಸರಿನಲ್ಲಿ ಪ್ರಥಮ ಸಮಾವೇಶವನ್ನು ನಡೆಸಲಾಯಿತು.
ಈ ಸಮಾವೇಶವನ್ನು ಬಿ.ಬಸವಲಿಂಗಪ್ಪ ಅವರೇ ಉದ್ಘಾಟಿಸಿ ಮಾತನಾಡಿ ದಲಿತರಲ್ಲಿ ಆತ್ಮಸ್ಥೈರ್ಯ ಮೂಡಿಸಿದರು.
ಒಂದು ರೀತಿಯಲ್ಲಿ ದಲಿತರ ಸಾಮೂಹಿಕ ಸಂಘಟನೆಯನ್ನು ಹುಟ್ಟುಹಾಕಿದರು. ಕೇವಲ ಪ್ರಾದೇಶಿಕವಾಗಿದ್ದ ದಲಿತ ಸಂಘರ್ಷ ಸಮಿತಿ, ದಲಿತ ಕ್ರಿಯಾ ಸಮಿತಿಗಳು ಬಲಿಷ್ಠವಾಗಿ ಒಂದೆಡೆ ಐಕ್ಯಗೊಂಡು ಪೂರ್ಣ ಪ್ರಮಾಣದಲ್ಲಿ ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ ಎಂದು ನಾಮಕರಣವಾಯಿತು. ನಂತರದ ದಿನದಲ್ಲಿ ದಲಿತ ಸಾಹಿತಿಗಳು, ಹೋರಾಟಗಾರರು ಒಗ್ಗೂಡಿ ‘ಪಂಚಮ’ ಪತ್ರಿಕೆ ತಂದರು. ಆನಂತರ ‘ಸುದ್ದಿ ಸಂಗಾತಿ’ ಹುಟ್ಟುಹಾಕಿದರು. ದಲಿತ ಚಳವಳಿಗೆ ಪೂರಕವಾಗಿ ‘ಮುಂಗಾರು’, ‘ಮಾನವ’, ‘ರುಜುವಾತು’, ‘ಶೂದ್ರ’, ‘ಸಂಕ್ರಮಣ’, ‘ಲಂಕೇಶ್’ ಪತ್ರಿಕೆಗಳು ಬೆಂಬಲವಾಗಿ ನಿಂತವು.
ಬೂಸಾ ಚಳವಳಿಯನ್ನು ಒಳಹೊಕ್ಕಿ ನೋಡಿದಾಗ ಕೆಲವು ಸತ್ಯಾಸತ್ಯತೆಗಳನ್ನು ಕಾಣಬಹುದು. ಬಿ.ಬಸವಲಿಂಗಪ್ಪ ಅವರು ನೇರ ನಡೆ ನುಡಿಯುಳ್ಳವರಾಗಿದ್ದರು. ಜಾತಿವಾದಿ, ಕೋಮುವಾದಿ, ಬಂಡವಾಳಶಾಹಿಗಳ ಹುನ್ನಾರವನ್ನು ಪ್ರಗತಿಪರ ಚಳವಳಿಗಳು ವಿಫಲಗೊಳಿಸಬೇಕು ಎಂದು ಕರೆಕೊಡುತ್ತಿದ್ದರು. ಇವರ ಸಾಮಾಜಿಕ ಚಳವಳಿಗೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಸಮಾಜವಾದ ಚಿಂತನೆಗಳ ತತ್ವಗಳು ಮುಖ್ಯವಾದವುಗಳಾಗಿವೆ. ‘‘ಚಳವಳಿ ಎನ್ನುವುದು ಬಡವರ ಆಸ್ತಿ. ದುರ್ಬಲರಿಗೆ, ನಿರ್ಗತಿಕರಿಗೆ ಚಳವಳಿಯೇ ಶ್ರೀಮಂತಿಕೆಯ ಸಾಧನ’’ ಎನ್ನುವುದರ ಮೂಲಕ ಶೋಷಿತ ವರ್ಗದ ಜನರಲ್ಲಿ ಆತ್ಮವಿಶ್ವಾಸವನ್ನು ಬಿತ್ತಿದ್ದರು. ಇವೆಲ್ಲವೂ ಮಡಿವಂತಿಕೆಯ ಸಮಾಜವನ್ನು ಕೆರಳಿಸಿತ್ತು ಹಾಗೂ ದ್ವೇಷಕ್ಕೆ ಕಾರಣವಾಗಿತ್ತು.
ಬಿ.ಬಸವಲಿಂಗಪ್ಪ ಅವರ ರಾಜಕೀಯ ಪ್ರವೇಶ ಪೂರ್ವ ನಿರ್ಧರಿತವಾದದ್ದು. ರಾಜಕೀಯ ಅಧಿಕಾರವಿದ್ದರೆ ಏನಾದರೂ ಬದಲಾವಣೆ ಮಾಡಬಹುದೆನ್ನುವ ನಂಬಿಕೆ ಇವರದಾಗಿತ್ತು. 1957ರಲ್ಲಿ ವಿಧಾನ ಸಭೆಯನ್ನು ಪ್ರವೇಶಿಸಿ 1958ರಲ್ಲಿ ಬಿ.ಡಿ.ಜತ್ತಿ ಅವರ ಸಚಿವ ಸಂಪುಟದಲ್ಲಿ ಉಪಗೃಹಮಂತ್ರಿಯಾಗಿ ನೇಮಕಗೊಂಡು ರಾಜ್ಯದಾದ್ಯಂತ ಸಂಚರಿಸಿ ದಲಿತರನ್ನು ಸಂಘಟಿಸಿದರು, ದಲಿತರನ್ನು ಪೊಲೀಸ್ ಇಲಾಖೆಯಲ್ಲಿ ಹೆಚ್ಚಾಗಿ ಸೇರಿಸಿ ನ್ಯಾಯದ ಭರವಸೆಯನ್ನು ಮೂಡಿಸಿದ್ದರು.
1972ರಲ್ಲಿ ದೇವರಾಜ ಅರಸು ನಾಯಕತ್ವದಲ್ಲಿ ಪೌರಾಡಳಿತ ಸಚಿವರಾಗಿ ದಲಿತರು ತಲೆ ತಲಾಂತರಗಳಿಂದ ಊರವರು ಮಾಡಿದ ಮಲ-ಮೂತ್ರಗಳನ್ನು ತಲೆಯ ಮೇಲೆ ಹೊತ್ತು ಹಾಕುವ ಅಮಾನೀಯ ಪದ್ಧತಿಯನ್ನು ಇಡೀ ರಾಷ್ಟ್ರದಲ್ಲಿ ಪ್ರಪ್ರಥಮ ಬಾರಿಗೆ ರದ್ದುಗೊಳಿಸಿದರು. ಮತ್ತೊಬ್ಬರ ಮಲ-ಮೂತ್ರಗಳನ್ನು ಒಂದೇ ಒಂದು ಜನಾಂಗ ಕಾಲಾನುಕಾಲದಿಂದ ತಲೆ ಮೇಲೆ ಹೊತ್ತು ಸಾಗಿಸುವಂತದ್ದು ನಾಚಿಗೇಡಿನ ಪದ್ಧತಿ ಎಂದು ಈ ಪದ್ಧತಿಯನ್ನು ವಿರೋಧಿಸಿದ್ದರು ಹಾಗೆಯೇ ರದ್ದುಗೊಳಿಸಿದರು. ಇದು ಬಸವಲಿಂಗಪ್ಪ ಅವರ ಅತ್ಯಂತ ಕ್ರಾಂತಿಕಾರಕ ಸಾಧನೆಯಾಗಿದೆ.
ಆಗ ಬಂದ ವಾಗ್ವಾದಗಳು, ಹಲವರು ಇದರ ವಿರುದ್ಧ ಕೋರ್ಟ್ ಮೆಟ್ಟಲೇರಿದ್ದು ಇತ್ಯಾದಿ ಯಾವ ಒತ್ತಡಗಳಿಗೂ ಒಪ್ಪದೆ ಬಸಲಿಂಗಪ್ಪನವರು ಅದನ್ನು ಸಾಧಿಸಿದ್ದು ಆ ಕಾಲದ ಒಂದು ದೊಡ್ಡ ಮಡಿವಂತಿಕೆಯ ಸಮಾಜವನ್ನು ದಿಗ್ಭ್ರಮೆಗೊಳಿಸಿತು. ಅಲ್ಲದೆ ಬಿ.ಬಸವಲಿಂಗಪ್ಪ ಅವರನ್ನು ರಾಜಕೀಯದಿಂದ ಕಿತ್ತೆಸೆಯಲು ಒಳಸಂಚನ್ನು ರೂಪಿಸಿದರು. ಹಾಗೆಯೇ ಇದು ಫಲಕಾರಿಯೂ ಕೂಡ ಆಯಿತು.
ಬಿ.ಬಸವಲಿಂಗಪ್ಪ ವಸತಿ ಸಚಿವರಾಗಿ ಗೃಹಮಂಡಳಿ ವತಿಯಿಂದ ಮನೆಗಳನ್ನು ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರ ವರ್ಗಗಳಿಗೆ ಮೀಸಲಿಡುವುದಕ್ಕೆ ಕಾರಣಕರ್ತರಾದರು. ಗ್ರಾಮಾಂತರ ಪ್ರದೇಶದಲ್ಲಿ ಜನತಾಗೃಹ ಯೋಜನೆಯನ್ನು ಆರಂಭಿಸಿದರು. ಮನೆ ನಿರ್ಮಿಸಲು ಅಸಮರ್ಥರಾದ ಸಮಾಜದ ವಸತಿ ರಹಿತ ದುರ್ಬಲ ವರ್ಗದವರಿಗಾಗಿ ಸ್ವಾಯತ್ತ ಮಂಡಳಿಗಳಲ್ಲಿ ‘ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಲೆವಿ’ ಎಂದು ನಿಧಿಯನ್ನು ಪ್ರಾರಂಭಿಸಿದರು. ಹೊಸದಾಗಿ ರಚನೆಗೊಂಡ ಬಡಾವಣೆಗಳಲ್ಲಿ ಶೇ. 18ರಷ್ಟು ನಿವೇಶನಗಳನ್ನು ದಲಿತರಿಗಾಗಿ ಮೀಸಲಿಟ್ಟರು. ದೇವದಾಸಿ ಪದ್ಧತಿಯ ಅಮಾನೀಯ ಮಹಿಳಾ ಶೋಷಣೆಯನ್ನು ಕಟುವಾಗಿ ವಿರೋಧಿಸಿ ಅವರ ಬದುಕಿಗೆ ಸೂಕ್ತ ಬದಲಾವಣೆಗಳನ್ನು ತರುವಲ್ಲಿ ಮುಂದಾದರು.ಹಾಗೆಯೇ ಕರ್ನಾಟಕ ರಾಜ್ಯ ಸೇವೆಯಲ್ಲಿ ಪರಿಶಿಷ್ಟರ ಮೀಸಲಾತಿ ಕಡ್ಡಾಯ, ಭಡ್ತಿ, ನೇಮಕಾತಿಯಲ್ಲಿ ಮೀಸಲು, ರೋಸ್ಟರ್ ಹೀಗೆ ದಲಿತರ ಕಲ್ಯಾಣಕ್ಕೆ ಸಾಕಷ್ಟು ಶ್ರಮಿಸಿದವಾಗಿದ್ದಾರೆ.
ಇವೆಲ್ಲವೂ ಮೇಲ್ವರ್ಗದವರ ಮನಸ್ಸಿನಲ್ಲಿ ಬಿ.ಬಸವಲಿಂಗಪ್ಪ ಅವರನ್ನು ವಿರೋಧಿಸುವ ಮನೋಭಾವನೆಯನ್ನು ಬೆಳೆಸಿತು. ಇವರನ್ನು ಹೀಗೆ ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದು ತಿಳಿದು ಬೂಸಾ ಚಳವಳಿಯಲ್ಲಿ ಬಸವಲಿಂಗಪ್ಪ ಅವರನ್ನು ಬಲಿ ತೆಗೆದುಕೊಂಡರು. ಒಂದು ಕಡೆ ಇದರಿಂದ ದಲಿತರಿಗೆ ನಷ್ಟ ಉಂಟಾದರೂ ಆನಂತರದ ದಿನಗಳಲ್ಲಿ ಜಾಗೃತಿ ಮೂಡಿಸಿದಂತಾಯಿತು. ಒಂದು ದೃಷ್ಟಿಯಲ್ಲಿ ಚಾರಿತ್ರಿಕವಾಗಿ ಇದು ಕರ್ನಾಟಕದ ನೆಲದಲ್ಲಿ ದಲಿತ ಚಳವಳಿ ಮತ್ತು ಸಾಹಿತ್ಯ ಬೇರೂರಿತು. ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ದಲಿತರ ಸಾಂಸ್ಕೃತಿಕ ದಂಗೆ.