ದ್ವೇಷ ಹರಡಲು ಬಿಜೆಪಿಗೆ ಇಸ್ರೇಲ್-ಫೆಲೆಸ್ತೀನ್ ಯುದ್ಧವೇ ಅಸ್ತ್ರ

ಸಮಾಜವನ್ನು, ದೇಶವನ್ನು ಒಡೆಯುತ್ತ, ಕೋಮುದ್ವೇಷವನ್ನು ಜನರ ನಡುವೆ ತೀವ್ರಗೊಳಿಸುತ್ತ, ಅಂಥ ವಾತಾವರಣವನ್ನು ಬಿಜೆಪಿಗೆ, ಮೋದಿಗೆ ಪೂರಕವಾಗುವಂತೆ ಸಿದ್ಧಪಡಿಸುತ್ತ, ಮತ್ತೊಮ್ಮೆ ಗೆಲ್ಲುವ ತಯಾರಿಯೊಂದು ಹೀಗೆ ಸಾಗಿದೆ.

Update: 2023-10-30 06:20 GMT

ದೇಶದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡಲು ನೆಪಕ್ಕಾಗಿ ಕಾಯುತ್ತಲೇ ಇರುವ, ಕಡೆಗೆ ಯಾವುದಾದರೊಂದು ನೆಪವನ್ನು ತಾನೇ ಹುಟ್ಟುಹಾಕುವ ಸಂಘ ಪರಿವಾರ ಹಾಗೂ ಬಿಜೆಪಿಗೆ ಈಗಂತೂ ಸಂಭ್ರಮದ ಸಂದರ್ಭ. ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನೇ ಈಗ ಅದು ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಅಸ್ತ್ರವಾಗಿ ಅತ್ಯಂತ ವ್ಯವಸ್ಥಿತವಾಗಿ ಬಳಸುತ್ತಿದೆ. ಸಂಘ ಪರಿವಾರ ಹಾಗೂ ಬಿಜೆಪಿ ಐಟಿ ಸೆಲ್ ಯುದ್ಧೋಪಾದಿಯಲ್ಲೇ ದ್ವೇಷ ಹರಡುವುದಕ್ಕೆ ನಿಂತುಬಿಟ್ಟಿವೆ.

ಪಂಚ ರಾಜ್ಯ ಚುನಾವಣೆಗಳು ಘೋಷಣೆಯಾಗಿವೆ. ಅದರ ಬೆನ್ನಿಗೇ ಲೋಕಸಭಾ ಚುನಾವಣೆಯೂ ಇರುವುದರಿಂದ ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಒಂದೇ ಒಂದು ಅವಕಾಶವನ್ನೂ ಬಿಡದೆ ಬಳಸಿಕೊಳ್ಳಲಾಗುತ್ತಿದೆ.

‘ದಿ ವೈರ್’ ಸುದ್ದಿತಾಣದ ಕುನಾಲ್ ಪುರೋಹಿತ್ ಅವರು ಬಲಪಂಥೀಯ ಫೇಸ್‌ಬುಕ್ ಪೇಜ್‌ಗಳು ಹಾಗೂ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಬರುತ್ತಿರುವ ಮೆಸೇಜುಗಳನ್ನು ವಿವರವಾಗಿ ಅಧ್ಯಯನ ಮಾಡಿ ಈ ಬಗ್ಗೆ ವರದಿಯೊಂದನ್ನು ಪ್ರಕಟಿಸಿದ್ದಾರೆ.

ಹೇಗೆ ಈ ಆಕ್ರಮಣ ಸಂದರ್ಭವನ್ನು ಮುಸ್ಲಿಮರ ವಿರುದ್ಧ ದ್ವೇಷ ಹರಡಲು ಬಿಜೆಪಿ ಐಟಿ ಸೆಲ್ ಬಳಸುತ್ತಿದೆ ಎಂಬುದನ್ನು ಮೊದಲು ಸ್ಥೂಲವಾಗಿ ಗಮನಿಸಬೇಕು. ಫೆಲೆಸ್ತೀನಿಯರ ಸಾವು-ನೋವನ್ನು ಅಣಕಿಸುವುದು, ಸಂಭ್ರಮಿಸುವುದು, ಅವರಿಗೆ ಬೆಂಬಲವನ್ನು ನಿರಾಕರಿಸುವುದು, ಇಸ್ರೇಲ್-ಫೆಲೆಸ್ತೀನ್ ಯುದ್ಧವನ್ನು ಭಾರತದ ಸಂದರ್ಭಕ್ಕೆ ಹೋಲಿಸುವುದು, ಮುಸ್ಲಿಮರಿಂದ ಹಿಂದೂಗಳ ಮೇಲೆ ದಾಳಿಯಾಗಲಿದೆ ಎಂದು ದೊಡ್ಡ ಸುಳ್ಳೊಂದನ್ನು ಹಬ್ಬಿಸುವುದು, ಅಂತಿಮವಾಗಿ ಇದರ ವಿರುದ್ಧ ಹೋರಾಡಲು ಬಿಜೆಪಿ ಮತ್ತು ಮೋದಿಯಿಂದ ಮಾತ್ರವೇ ಸಾಧ್ಯ ಎಂದು ಪ್ರತಿಪಾದಿಸುವುದು ಈ ತಂತ್ರದ ಭಾಗ.

ಭಾರತದೊಳಗೆ ಕೂಡ ನೂರಾರು ಗಾಝಾ ಪಟ್ಟಿಗಳು ಇವೆ ಎಂದು ಹೇಳುವುದು, ಹಮಾಸ್ ಥರದ ಮುಸ್ಲಿಮರ ದಾಳಿಯನ್ನು ಇಲ್ಲಿ ಹಿಂದೂಗಳು ಎದುರಿಸುವ ಸ್ಥಿತಿಯಿದೆ ಎಂದು ಹುಯಿಲೆಬ್ಬಿಸುವುದು, ಅಂತಿಮವಾಗಿ, ಮೋದಿಯೊಬ್ಬರೇ ಭಾರತವನ್ನು ಇಂತಹ ದಾಳಿಗಳಿಂದ ರಕ್ಷಿಸಬಲ್ಲರು ಎಂದು ಹೇಳುವುದು ಇವರ ಅಪಪ್ರಚಾರದ ಮುಖ್ಯ ಉದ್ದೇಶ. ದಾಳಿಯ ಹಿಂದೆ ಕಾಂಗ್ರೆಸ್ಇದೆ ಎಂಬುದನ್ನೂ ಮತ್ತೆ ಮತ್ತೆ ಹೇಳುವ ಕೆಲಸ ನಡೆದಿದೆ.

ಇದೆಲ್ಲದರ ನಡುವೆಯೇ ಫೆಲೆಸ್ತೀನಿ ನಾಗರಿಕರ ಸಾವಿನ ಬಗ್ಗೆ ಸಂಭ್ರಮಿಸುವ ವಿಕೃತಿಯನ್ನೂ ತೋರಿಸುವ ರೀತಿ ಮಾತ್ರ ಅತ್ಯಂತ ಅಮಾನವೀಯ ಮತ್ತು ಹೇಯ.

ಬಿಜೆಪಿ ಐಟಿ ಸೆಲ್ ಹೀಗೆ ಇಸ್ಲಾಮೋಫೋಬಿಯಾವನ್ನು ಹಬ್ಬಿಸುತ್ತಿರುವುದು, ಯುದ್ಧದ ನೆಪದಲ್ಲಿ ಎಲ್ಲ ತಪ್ಪು ಮಾಹಿತಿಗಳನ್ನು ಹರಡಿ ಜನರ ದಿಕ್ಕು ತಪ್ಪಿಸುವುದು ಎಲ್ಲವೂ ಹಿಂದುತ್ವದ ಅಜೆಂಡಾವನ್ನು ಸಾಧಿಸಿಕೊಳ್ಳುವುದಕ್ಕಾಗಿ. ಇಂಟರ್ನೆಟ್ ಫ್ರೀಡಂ ಫೌಂಡೇಶನ್‌ನ ನೀತಿ ನಿರ್ದೇಶಕ ಪ್ರತೀಕ್ ವಾಗ್ರೆ ಪ್ರಕಾರ, ಭಾರತದ ಬಲಪಂಥೀಯ ಗುಂಪುಗಳ ನಡುವೆ ಇಂತಹ ಸಂದೇಶಗಳನ್ನು ಹರಡುವುದು ಅವರ ಪ್ರೊಪಗಾಂಡಾದ ಭಾಗವೇ ಆಗಿದೆ. ಜಾಗತಿಕ ಬೆಳವಣಿಗೆಗಳನ್ನು ಇಲ್ಲಿನ ಸ್ಥಿತಿಗೆ ತಮಗೆ ಬೇಕಾದಂತೆ ವ್ಯಾಖ್ಯಾನಿಸಿ ಆ ಮೂಲಕ ಮುಸ್ಲಿಮರು ಮತ್ತು ಕೆಲವೊಮ್ಮೆ ಜಾತ್ಯತೀತ ಹಿಂದೂಗಳೂ ದೇಶಕ್ಕೆ ಅಪಾಯ ಎಂಬ ಸಂದೇಶ ರವಾನಿಸುವುದು ಇದರ ಉದ್ದೇಶ.

ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುವುದಕ್ಕಾಗಿ ಹತಾರದಂತೆ ವಿರೋಧಿಗಳ ವಿರುದ್ಧ ಇದೆಲ್ಲ ತಂತ್ರವನ್ನು ಬಳಸಲಾಗುತ್ತಿದೆ. ಬಿಜೆಪಿ ಪರ ವಾಟ್ಸ್‌ಆ್ಯಪ್ ಗುಂಪುಗಳು ಮತ್ತು ಫೇಸ್‌ಬುಕ್ ಪುಟಗಳು ಮತ್ತು ಗ್ರೂಪ್‌ಗಳಲ್ಲೆಲ್ಲ ಈ ದ್ವೇಷ ಹಾಗೂ ಹಸಿ ಸುಳ್ಳು ಹರಡುವ ಕೆಲಸ ಈಗ ಅವ್ಯಾಹತವಾಗಿ ಸಾಗಿದೆ. ಫೋಟೊಗಳು ಮತ್ತು ವೀಡಿಯೊಗಳನ್ನು ಬಳಸಿಕೊಂಡು ಸುಳ್ಳು ಮಾಹಿತಿ ಮತ್ತು ಸಂದೇಶಗಳ ಮೂಲಕ, ಯುದ್ಧಕ್ಕೆ ಮುಸ್ಲಿಮರೇ ಕಾರಣ ಎಂದು ದೂಷಿಸುವ, ಜನರ ಮನಸ್ಸಿನಲ್ಲಿಯೂ ಅಂಥದೇ ಭಾವನೆ ಮೂಡುವಂತೆ ವಿಷವನ್ನು ಕಕ್ಕುವ ಪ್ರಯತ್ನ ನಡೆದಿದೆ.

ಫೆಲೆಸ್ತೀನಿಯರನ್ನು ಜಿಹಾದಿಗಳು ಮತ್ತು ಉಗ್ರರು ಎಂದು ಬ್ರಾಂಡ್ ಮಾಡುವ ಮೂಲಕ ಅವರ ನೋವು, ಸಂಕಟ, ಅಸಹಾಯಕತೆ, ಅವರ ಬದುಕು ಛಿದ್ರವಾಗುತ್ತಿರುವ ಸ್ಥಿತಿ ಎಲ್ಲವನ್ನೂ ಬದಿಗೆ ಸರಿಸಲಾಗುತ್ತಿದೆ. ಅತ್ಯಂತ ವಿಕೃತವಾಗಿ ಅವರ ವಿರುದ್ಧ ಅಟ್ಟಹಾಸ ಗೈಯಲಾಗುತ್ತಿದೆ.

ಅಕ್ಟೋಬರ್ 7ರಿಂದ ಶುರುವಾಗಿರುವ ಆಕ್ರಮಣದಲ್ಲಿ 1,400ಕ್ಕೂ ಹೆಚ್ಚು ಇಸ್ರೇಲಿಗಳು ಮತ್ತು ಸುಮಾರು 6,000ಕ್ಕೂ ಹೆಚ್ಚು ಫೆಲೆಸ್ತೀನಿಯರು ಸಾವಿಗೀಡಾಗಿದ್ಧಾರೆ. ಫೆಲೆಸ್ತೀನ್‌ನ 2,300ಕ್ಕೂ ಹೆಚ್ಚು ಅಮಾಯಕ ಮಕ್ಕಳು ಇಸ್ರೇಲಿ ಬಾಂಬ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಯದ್ಧದ ನೆಪ ಬಳಸಿಕೊಂಡು ಮುಸ್ಲಿಮರ ವಿರುದ್ಧ ದ್ವೇಷ ಹರಡುತ್ತಿರುವವರಿಗೆ ಮಾತ್ರ ಆ ಫೆಲೆಸ್ತೀನಿಯರ ಸಾವು ಅಪಹಾಸ್ಯದ ವಿಚಾರವಾಗಿರುವುದು ತಲ್ಲಣ ಹುಟ್ಟಿಸುವ ವಿಚಾರ.

ಯಾವುದೇ ನೆಪ ಸಿಕ್ಕಿದರೂ, ಹೇಗೆ ಅದನ್ನು ಮುಸ್ಲಿಮರ ವಿರುದ್ಧ ದ್ವೇಷ ಹರಡುವುದಕ್ಕೆ ಬಳಸಬಹುದು ಎಂದೇ ನೋಡುವ ಕ್ರೌರ್ಯ ಇವರದು. ಕಳೆದ ಹಲವು ವರ್ಷಗಳಿಂದ ಇಲ್ಲಿ ಇದನ್ನೇ ಮಾಡಿಕೊಂಡು ಬರಲಾಗಿದೆ.

ಜಾಗತಿಕ ಘಟನೆಗಳನ್ನು ಭಾರತದ ಸಂದರ್ಭದಲ್ಲಿ ತಮಗೆ ಬೇಕಾದಂತೆ ವ್ಯಾಖ್ಯಾನಿಸುತ್ತ, ಮುಸ್ಲಿಮರಿಂದ ಹಿಂದೂಗಳಿಗೆ ಅಪಾಯ ಕಾದಿದೆ ಎಂಬಂತೆ ಬಿಂಬಿಸಲಾಗುತ್ತದೆ. ಕೆಲವೊಮ್ಮೆ ಪ್ರಗತಿಪರ, ವೈಚಾರಿಕ ಮನೋಭಾವದ ಹಿಂದೂಗಳ ವಿರುದ್ಧವೂ ಇವರ ಅಸ್ತ್ರ ತಿರುಗುತ್ತದೆ.

ಹೀಗೆ ದ್ವೇಷ ಹರಡುವ ಹಲವಾರು ವಾಟ್ಸ್‌ಆ್ಯಪ್ ಗ್ರೂಪ್‌ಗಳೆಲ್ಲವೂ ಹಿಂದುತ್ವವನ್ನು, ಬಿಜೆಪಿಯನ್ನು, ಮೋದಿಯನ್ನು ಮತ್ತು ಆರೆಸ್ಸೆಸನ್ನು ಬೆಂಬಲಿಸುವ ಗ್ರೂಪ್‌ಗಳಾಗಿವೆ. ಈ ಗುಂಪುಗಳಲ್ಲಿ ಮತ್ತೆ ಮತ್ತೆ ಮೋದಿ ಮತ್ತು ಆದಿತ್ಯನಾಥ್ ಫೋಟೊಗಳನ್ನು ಬಳಸಲಾಗುತ್ತದೆ. ಈ ಗುಂಪುಗಳ ಮೂಲಕ ಬಿಜೆಪಿ ಮತ್ತದರ ನಾಯಕರಿಗೆ ಸಂಬಂಧಪಟ್ಟ ಮತ್ತಷ್ಟು ಫೇಸ್‌ಬುಕ್ ಪುಟಗಳು ಮತ್ತು ಗುಂಪುಗಳು ಸಿಗುವಂತೆ ಮಾಡಲಾಗಿರುತ್ತದೆ. ಇವರು ಹೇಳಿದ್ದನ್ನೆಲ್ಲ ನಂಬುವ ಜನರು ಈ ದ್ವೇಷದ ಸುಳಿಯಲ್ಲೇ ಪೂರ್ತಿಯಾಗಿ ಮುಳುಗಿಹೋಗುವ ಹಾಗೆ, ಅವರ ಮನಸ್ಸಿನಲ್ಲಿ ವಿಷಪೂರಿತ ಭಾವನೆಯೇ ಹುಟ್ಟುವ ಹಾಗೆ ಮಾಡುವ ತಂತ್ರ ಇದು.

ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಕಾಶ್ಮೀರಿ ಹಿಂದೂಗಳ ಮೇಲಿನ ದಾಳಿಯಂತೆ ಸುಳ್ಳು ಸುಳ್ಳೇ ಬಿಂಬಿಸಲಾಗುತ್ತಿದೆ. ಇಸ್ರೇಲಿಗಳ ಸ್ಥಿತಿ ಕಾಶ್ಮೀರಿ ಹಿಂದೂಗಳಂತೆ ಆಗಿದೆ ಎಂಬ ಸುಳ್ಳು ಸಂದೇಶಗಳನ್ನು ಹರಡಲಾಗುತ್ತಿದೆ. ಹಮಾಸ್‌ನವರು ಒತ್ತೆಯಾಳಾಗಿ ಇರಿಸಿಕೊಂಡಿರುವ ಇಸ್ರೇಲಿ ಕುಟುಂಬದ ವೀಡಿಯೊವನ್ನು ಶೇರ್ ಮಾಡುವ ಈ ವಾಟ್ಸ್‌ಆ್ಯಪ್, ಫೇಸ್‌ಬುಕ್ ಗ್ರೂಪ್‌ಗಳು, 1990ರಲ್ಲಿ ಕಾಶ್ಮೀರಿ ಹಿಂದೂಗಳು ಇದೇ ಸ್ಥಿತಿ ಎದುರಿಸಿದ್ದರು ಎಂದು ಹೇಳುತ್ತವೆ.

ಇಂಥದೊಂದು ಹೋಲಿಕೆಯ ಹಿಂದಿನ ಉದ್ದೇಶ ಏನು ಎಂಬುದು ಸ್ಪಷ್ಟವಾಗುವುದು ಆನಂತರ ಬರುವ ವಾಕ್ಯದಲ್ಲಿ. ಇದನ್ನು ಇಲ್ಲಿಯ ಕೆಲವರು ಆರೆಸ್ಸೆಸ್ ಪ್ರೊಪಗಾಂಡಾ ಎನ್ನುತ್ತಾರೆ. ಇಸ್ಲಾಮ್ ಶಾಂತಿಯನ್ನು ಪ್ರೀತಿಸುವ ಧರ್ಮ ಎಂಬ ವ್ಯಂಗ್ಯದ ಮೂಲಕ ದ್ವೇಷ ಕಕ್ಕುವುದು ಇಲ್ಲಿನ ಉದ್ದೇಶ.

ಹಮಾಸ್ ಅನ್ನು ಹುಮಾಯೂನ್ ಮತ್ತು ಬಾಬರ್ ಥರದ ಮುಸ್ಲಿಮ್ ಆಕ್ರಮಣಕಾರರಿಗೆ ಸಮವೆಂದು ಹೇಳುವುದು ಈ ಗ್ರೂಪ್‌ಗಳು ದ್ವೇಷ ಹರಡುವ ಮತ್ತೊಂದು ಬಗೆ. ‘ಹಮಾಸ್ಉಗ್ರರು ಇಸ್ರೇಲಿ ಮಹಿಳೆಯನ್ನು ಎಳೆದೊಯ್ಯು ತ್ತಿರುವುದು’ ಎಂದು ಹೇಳುವ ಅರ್ಧ ಮುಚ್ಚಿದ ದೇಹದ ಚಿತ್ರವನ್ನು ತೋರಿಸುತ್ತ, ಇಂಥ ಸ್ಥಿತಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಹಿಂದೂ ಮಹಿಳೆಯರು ಮೊಗಲರ ಕಾಲದಲ್ಲಿ ಬೆಂಕಿಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಹೇಳುವುದು, ಆ ಮೂಲಕ ಸಂಬಂಧವೇ ಇಲ್ಲದ ಸಂಗತಿಯೊಂದನ್ನು ದ್ವೇಷದ ಬೆಂಕಿ ಹಚ್ಚಲು ಬಳಸುವುದು ನಡೆಯುತ್ತದೆ.

66,000ಕ್ಕೂ ಹೆಚ್ಚು ಫಾಲೋವರ್ಸ್ ಇರುವ ‘ಯೋಗಿ ಆದಿತ್ಯನಾಥ್ ಫಾರ್ ಪಿಎಂ 2024’ ಹೆಸರಿನ ಫೇಸ್‌ಬುಕ್ ಪುಟದಲ್ಲಿ, ಹಿಂದೂ ಮಹಿಳೆಯರು ಏಕೆ ಬೆಂಕಿಗೆ ಹಾರುತ್ತಿದ್ದರು ಎಂಬುದನ್ನು ಹಮಾಸ್‌ನಿಂದಾಗಿ ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂಬ ಸಂದೇಶ ಹರಡಲಾಗಿದೆ.

ಹಮಾಸ್ ಥರದ್ದೇ ದಾಳಿ ಭಾರತೀಯರ ಮೇಲೆ, ಅದರಲ್ಲೂ ವಿಶೇಷವಾಗಿ ಹಿಂದೂಗಳ ಮೇಲೆ ನಡೆಯಲಿದೆ ಎಂಬುದನ್ನು ಇದೆಲ್ಲದರ ಮೂಲಕ ಬಿಂಬಿಸುವ ಮತ್ತು ಆ ಮೂಲಕ ಮುಸ್ಲಿಮರ ವಿರುದ್ಧ ದ್ವೇಷದ ವಾತಾವರಣ ಉಂಟುಮಾಡುವ ಉದ್ದೇಶ ಇಲ್ಲಿ ಸ್ಪಷ್ಟವಿದೆ. ಮುಂದಿನ ದಿನಗಳಲ್ಲಿ ಭಾರತ ಕೂಡ ಈಗ ಇಸ್ರೇಲ್ ಎದುರಿಸುತ್ತಿರುವಂಥದೇ ಪಿತೂರಿ ಮತ್ತು ದಾಳಿಗಳನ್ನು ಎದುರಿಸಬಹುದು. ಹಿಂದೂ ಮಹಿಳೆಯರು ಕ್ರೌರ್ಯಕ್ಕೆ ತುತ್ತಾಗಲೂ ಬಹುದು ಎಂಬ ಸುಳ್ಳು ಸಂದೇಶವನ್ನೂ ಹಬ್ಬಿಸಲಾಗಿದೆ. ಇದನ್ನು ತಪ್ಪಿಸಲು ಹಿಂದೂಗಳು ಜಾಗರೂಕರಾಗಿರಬೇಕು. ಆಯುಧಗಳನ್ನು ಇಟ್ಟುಕೊಂಡಿರಬೇಕು ಮತ್ತು ಮುಸ್ಲಿಮರಿಗೆ ಸಂಪೂರ್ಣ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದು ಈ ಸಂದೇಶಗಳಲ್ಲಿ ಹೇಳಲಾಗಿದೆ.

ಇಷ್ಟಕ್ಕೇ ನಿಲ್ಲುವುದಿಲ್ಲ. ದ್ವೇಷವನ್ನು ಎಷ್ಟು ತೀವ್ರಗೊಳಿಸಲು ಸಾಧ್ಯವೋ ಅಷ್ಟನ್ನೂ ಮಾಡುವ ಪ್ರಯತ್ನ ಇಲ್ಲಿನ ಸಂದೇಶಗಳಲ್ಲಿದೆ. ‘‘ಭಾರತದಲ್ಲಿ ಅಂತರ್ಯುದ್ಧ ಪ್ರಾರಂಭವಾದರೆ 59 ಮುಸ್ಲಿಮ್‌ದೇಶಗಳು ನಿಮ್ಮ ಬೆಂಬಲಕ್ಕೆ ನಿಲ್ಲುತ್ತವೆ ಎಂದುಕೊಂಡಿದ್ದೀರಾ? ಅವು ಏನಿದ್ದರೂ ಮುಸ್ಲಿಮರ ಪರ ನಿಲ್ಲುತ್ತವೆ’’ ಎಂದು ಹೇಳುವ ಮೂಲಕ ಮುಸ್ಲಿಮ್ ದೇಶಗಳ ವಿರುದ್ಧವೂ ಜನರನ್ನು ಎತ್ತಿಕಟ್ಟುವ ಕೆಲಸ ಈ ಸಂದೇಶಗಳ ಮೂಲಕ ನಡೆದಿದೆ.

ಇವೆಲ್ಲದರ ನಡುವೆಯೇ ಕಾಂಗ್ರೆಸ್ ವಿರುದ್ಧವೂ ದ್ವೇಷ ಕಾರಲಾಗಿದೆ. ಹಮಾಸ್ ದಾಳಿಗೆ ಕಾಂಗ್ರೆಸ್ ಕಾರಣ ಎಂದು ದೂಷಿಸಲಾಗಿದೆ. ಕಾಂಗ್ರೆಸ್ ವಿರುದ್ಧ ತಪ್ಪು ಭಾವನೆ ಮೂಡಿಸಲು ಸುಳ್ಳು ಮಾಹಿತಿಗಳ ಸರಣಿಯನ್ನೇ ಹರಡಲಾಗುತ್ತಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್‌ನ ಮುಖ್ಯಸ್ಥ ಯಾಸರ್ ಅರಫಾತ್‌ಗೆ ಶಾಂತಿ ಪ್ರಶಸ್ತಿ ನೀಡಿದ್ದರು ಎಂದು ಸಂದೇಶಗಳಲ್ಲಿ ಹೇಳಲಾಗಿದೆ. ಆದರೆ ಇದು ಸುಳ್ಳು. ಯಾಸರ್ ಅರಫಾತ್ ಅವರಿಗೆ ಹೊಸದಿಲ್ಲಿಯಲ್ಲಿ ನೀಡಿದ್ದು ‘ಇಂದಿರಾ ಗಾಂಧಿ ಅವಾರ್ಡ್ ಫಾರ್ ಇಂಟರ್‌ನ್ಯಾಷನಲ್ ಜಸ್ಟಿಸ್ ಆ್ಯಂಡ್ ಹಾರ್ಮನಿ’ ಪ್ರಶಸ್ತಿ. ಮತ್ತಿದನ್ನು ನೀಡಿದ್ದು ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್.

ವಾಸ್ತವವಾಗಿ ಈ ಪ್ರಶಸ್ತಿಯನ್ನು ಜನವರಿ 1992ರಲ್ಲಿ ನೀಡಲಾಯಿತು. ಆದರೆ ರಾಜೀವ್ ಗಾಂಧಿಯವರು ಮೇ 1991ರಲ್ಲಿಯೇ ಹತ್ಯೆಗೀಡಾಗಿದ್ದರು. ಪ್ರಶಸ್ತಿ ನೀಡಲಾದ ಸಮಯದಲ್ಲಿ ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದರು ಮತ್ತು ಆಗ ಆ ಸರಕಾರಕ್ಕೆ ಬಿಜೆಪಿಯ ಬಾಹ್ಯ ಬೆಂಬಲವಿತ್ತು. ಆದರೆ ಬಿಜೆಪಿ ಐಟಿ ಸೆಲ್ ಹರಡಿರುವ ಸುಳ್ಳು ಮಾಹಿತಿಗಳಲ್ಲಿ ಈ ಯಾವ ವಿವರಗಳೂ ಇಲ್ಲ.

ಇಂಥ ಸುಳ್ಳುಗಳು ಒಂದೆಡೆಯಾದರೆ, ಮತ್ತೊಂದೆಡೆ ಗಾಂಧಿಯನ್ನು ತೆಗಳುವುದೂ, ಗೋಡ್ಸೆಯನ್ನು ಹೊಗಳುವುದೂ ಈ ಸಂದೇಶಗಳಲ್ಲಿ ವ್ಯಾಪಕವಾಗಿ ನಡೆದಿದೆ.

ಬಿಜೆಪಿ ಪರ ತುತ್ತೂರಿಯ ಈ ಗುಂಪುಗಳಲ್ಲಿ ಹೆಚ್ಚಿನವು ಯುದ್ಧದ ವೀಡಿಯೊಗಳು ಮತ್ತು ಫೋಟೊಗಳನ್ನು ಉದ್ದೇಶಪೂರ್ವಕವಾಗಿಯೇ ಬಳಸಿವೆ. ಇಸ್ರೇಲಿಗಳ ಸಾವು ನೋವುಗಳನ್ನು ತೋರಿಸುವ ವಿವರಗಳನ್ನು ಹೆಚ್ಚಾಗಿ ಬಳಸಲಾಗಿರುವಾಗ, ಇನ್ನೊಂದೆಡೆ ಫೆಲೆಸ್ತೀನಿಯರ ಸಾವು ನೋವುಗಳನ್ನು ಅಣಕಿಸಲಾಗಿದೆ. ಮತ್ತೊಂದು ಚಿತ್ರದಲ್ಲಿ ಕಟ್ಟಡಗಳ ಅವಶೇಷಗಳ ನಡುವೆ, ಆ ಎತ್ತರದ ಮೆಟ್ಟಿಲುಗಳು ಮಾತ್ರ ಹಾಗೇ ಇರುವಂತೆ ತೋರಿಸಲಾಗಿದೆ ಮತ್ತು ಅದರ ಕೆಳಗೆ, ಫೆಲೆಸ್ತೀನಿಯರು ನೇರ ಸ್ವರ್ಗಕ್ಕೇ ಹೋಗುತ್ತಾರೆ ಎಂದು ವ್ಯಂಗ್ಯ ಮಾಡಿ, ಅತ್ಯಂತ ಕೆಟ್ಟದಾಗಿ ಸಂಭ್ರಮಿಸಲಾಗಿದೆ. ಅಮಾಯಕ ಫೆಲೆಸ್ತೀನಿಯರ ಸಾವು ನೋವುಗಳಿಗೆ ಇವರು ಮರುಗುವುದಂತೂ ಇಲ್ಲ. ಆದರೆ ಅದರ ಬಗ್ಗೆ ಅಪಹಾಸ್ಯ ಮಾಡುವ ಈ ಕ್ರೌರ್ಯ ಯಾವಮಟ್ಟದ್ದು, ಎಷ್ಟು ನೀಚವಾದದ್ದು ಎಂದು ಊಹಿಸುವುದೂ ಕಷ್ಟ.

ಇನ್ನು ಫೆಲೆಸ್ತೀನಿಯರನ್ನು ಬೆಂಬಲಿಸುವವರನ್ನು ಹಾವುಗಳು ಎಂದು ಹೇಳಲಾಗಿರುವ ಈ ಗುಂಪುಗಳಲ್ಲಿ, ಭಾರತದಲ್ಲಿ ಹಾವುಗಳಿಗೆ ಕೊರತೆಯಿಲ್ಲ ಎಂದು ವ್ಯಂಗ್ಯವಾಡಲಾಗಿದೆ.

ಈ ಗುಂಪುಗಳಲ್ಲಿ ಮತ್ತೆ ಮತ್ತೆ ಕಾಣುವುದು ಪ್ರಧಾನಿ ಮೋದಿಯ ಚಿತ್ರ. ಇಸ್ರೇಲ್‌ನಲ್ಲಿ ಏನಾಗುತ್ತಿದೆಯೋ ಅದು ಭಾರತದಲ್ಲೂ ಆಗಬಹುದು ಎಂಬುದು ಈ ಎಲ್ಲ ಗುಂಪುಗಳಲ್ಲಿಯೂ ಸಾಮಾನ್ಯವಾಗಿ ವೈರಲ್ ಆಗಿರುವ ಒಂದು ಸಂದೇಶ. ಅದರ ಬೆನ್ನಲ್ಲೇ, ಇಂಥ ದಾಳಿಯಿಂದ ಹಿಂದೂಗಳನ್ನು ರಕ್ಷಿಸಬಲ್ಲವರು ಮೋದಿಯೊಬ್ಬರೇ ಎಂಬ ಪ್ರತಿಪಾದನೆ.

ಮತ್ತೊಂದು ವೈರಲ್ ಸಂದೇಶದಲ್ಲಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಫೋಟೊಗಳನ್ನು ತೋರಿಸಲಾಗಿದೆ. ಭಾರತ ಸುರಕ್ಷಿತವಾಗಿರುವುದಕ್ಕೆ ಈ ಮೂವರಿಗೆ ಕೃತಜ್ಞರಾಗಿರಬೇಕು ಎಂದು ಹೇಳಲಾಗಿದೆ. ದೊಡ್ಡ ತಮಾಷೆಯೆಂದರೆ, ಕಳೆದ ಒಂಭತ್ತು ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಯಾವುದೇ ಭಯೋತ್ಪಾದಕ ದಾಳಿಯ ಬಗ್ಗೆ ಈ ಸಂದೇಶ ಏನನ್ನೂ ಹೇಳುವುದಿಲ್ಲ.

ಮೋದಿ ಮುಸ್ಲಿಮರ ಬಗ್ಗೆ ಮಾತನಾಡುವ ವೀಡಿಯೊ ಒಂದನ್ನು ಕೂಡ ಈ ಗ್ರೂಪ್‌ಗಳಲ್ಲಿ ಹರಡಲಾಗಿದೆ. ಅವರು ಜಗತ್ತನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ ಎಂದು ಮೋದಿ ಹೇಳುವುದು, ದಾರುಲ್-ಅಮಾನ್, ದಾರುಲ್-ಹರಬ್ ಮತ್ತು ದಾರುಲ್-ಇಸ್ಲಾಂ ಎನ್ನುವುದು, ಅದನ್ನು ವಿವರಿಸುತ್ತ, ಒಂದು ಶಾಂತಿಯ ನಾಡು, ಇನ್ನೊಂದು ಸಂಘರ್ಷದ ನಾಡು ಮತ್ತು ಮೂರನೆಯದು ಇಡೀ ಜಗತ್ತನ್ನು ಇಸ್ಲಾಮ್‌ಗೆ ಪರಿವರ್ತಿಸುವುದು ಎಂದು ಮೋದಿ ಹೇಳುತ್ತಿರುವ ವೀಡಿಯೊ ಅದು.

ಅಂತಿಮವಾಗಿ, ಸುರಕ್ಷಿತ ಭಾರತಕ್ಕಾಗಿ ಮೋದಿಗೆ ನೂರು ಬಾರಿ ಮತ ಹಾಕುತ್ತೇನೆ ಎಂಬ ಸಂದೇಶವನ್ನು ಈ ವೀಡಿಯೊದೊಂದಿಗೆ ಎಲ್ಲ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಾಗಿದೆ.

ಈ ಎಲ್ಲ ಅಪಪ್ರಚಾರಗಳು, ಹಸಿ ಸುಳ್ಳುಗಳ ಸರಣಿ ಕೊನೆಗೆ ಬಂದು ನಿಲ್ಲುವುದು ಮೋದಿಗೆ ಮತ ಹಾಕಿ ಎಂಬಲ್ಲಿಗೆ. ದೇಶದೊಳಗೆ ಲೆಕ್ಕವಿಲ್ಲದಷ್ಟು ದೇಶದ್ರೋಹಿಗಳು ಇದ್ದಾರೆ ಎಂದು ಹೇಳುವುದು ಮತ್ತು ಇದಕ್ಕಾಗಿ ಮೋದಿಯಂಥ ‘ಸ್ಟ್ರಾಂಗ್ ಲೀಡರ್’ಗೆ ಮತ ಹಾಕಿ ಎನ್ನುವುದು ಈ ಒಟ್ಟು ದ್ವೇಷದ, ಸುಳ್ಳಿನ ವಿಷದ ಹಿಂದಿನ ಹುನ್ನಾರ.

ಸಮಾಜವನ್ನು, ದೇಶವನ್ನು ಒಡೆಯುತ್ತ, ಕೋಮುದ್ವೇಷವನ್ನು ಜನರ ನಡುವೆ ತೀವ್ರಗೊಳಿಸುತ್ತ, ಅಂಥ ವಾತಾವರಣವನ್ನು ಬಿಜೆಪಿಗೆ, ಮೋದಿಗೆ ಪೂರಕವಾಗುವಂತೆ ಸಿದ್ಧಪಡಿಸುತ್ತ, ಮತ್ತೊಮ್ಮೆ ಗೆಲ್ಲುವ ತಯಾರಿಯೊಂದು ಹೀಗೆ ಸಾಗಿದೆ.

(ಆಧಾರ: thewire)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News