ಮಣಿಪುರದ ಇಂದಿನ ಪರಿಸ್ಥಿತಿಯ ಹಿಂದಿನ ಮುಖ್ಯ ಕಾರಣಗಳು

Update: 2023-08-01 04:53 GMT

ಒಂದು ಕಾಲದಲ್ಲಿ ಕಾಂಗ್ಲೆಪಾಕ್ ಎಂಬ ಸ್ವತಂತ್ರ ಸಾಮ್ರಾಜ್ಯವಾಗಿದ್ದ ಇಂದಿನ ಮಣಿಪುರದ ಘಟನಾವಳಿಗಳು ಇತ್ತೀಚೆಗೆ ಮತ್ತೊಮ್ಮೆ ಇಡೀ ಜಗತ್ತಿನ ಗಮನವನ್ನು ದೊಡ್ಡಮಟ್ಟದಲ್ಲಿ ಸೆಳೆದಿವೆ. ಮಣಿಪುರ ರಾಜ್ಯದ ಪರಿಸ್ಥಿತಿಗೆ ಕಾರಣಗಳನ್ನು ಬಹಳ ಹಿಂದಿನಿಂದ ಮುಂದುವರಿಸಿಕೊಂಡು ಬರಲಾಗಿದೆ. ಮೂವತ್ತಕ್ಕೂ ಹೆಚ್ಚಿನ ಬುಡಕಟ್ಟು ಜನಸಮುದಾಯಗಳಿರುವ ಪ್ರದೇಶ ಈಗಿನ ಮಣಿಪುರ ರಾಜ್ಯ.

1824-1826 ವರೆಗಿನ ಬ್ರಿಟಿಷ್ ಬರ್ಮಾ ಯುದ್ಧದಲ್ಲಿ ಈಗಿನ ಇಂಡಿಯಾದ ಈಶಾನ್ಯ ಪ್ರದೇಶವು ಬ್ರಿಟಿಷರ ಹಿಡಿತಕ್ಕೆ ಸೇರಿತು. ಆದರೆ ಅದರ ನಂತರವೂ ಆ ಪ್ರದೇಶದ ತ್ರಿಪುರಾ ಹಾಗೂ ಮಣಿಪುರ ಪ್ರತ್ಯೇಕ ಸಂಸ್ಥಾನಗಳಾಗಿಯೇ ಮುಂದುವರಿದಿದ್ದವು. ಆದರೆ ಮಣಿಪುರದ ರಾಜರುಗಳ ಹಿಡಿತ ಇಂಫಾಲದ ಬಯಲು ಪ್ರದೇಶದ ಮೇಲೆ ಇದ್ದಿದ್ದು ಬಿಟ್ಟರೆ ಉಳಿದಂತೆ ಕುಕಿ, ನಾಗಾ ಸೇರಿದಂತೆ ಬುಡಕಟ್ಟು ಸಮೂಹಗಳು ಸಾಪೇಕ್ಷವಾಗಿ ತಮ್ಮದೇ ಸ್ವಾಯತ್ತ ಪ್ರದೇಶಗಳಲ್ಲಿ ವಾಸಮಾಡಿಕೊಂಡು ಬಂದಿದ್ದರು. ರಾಜನಾಗಲೀ ಬ್ರಿಟಿಷರಾಗಲೀ ಈ ಭಾಗದ ಬಗ್ಗೆ ಗಮನವನ್ನೇ ನೀಡಿರಲಿಲ್ಲ ಎನ್ನಬಹುದು. ಬದಲಿಗೆ ತಾರತಮ್ಯ, ನಿರ್ಲಕ್ಷ ಧೋರಣೆ ಹೊಂದಿದ್ದರು. ಬಯಲು ಪ್ರದೇಶದ ಆರ್ಥಿಕ ಲಾಭಗಳ ಮೇಲೆ ಮಾತ್ರ ಆಗ ಅವರ ಗಮನವಿದ್ದವು. ಅಲ್ಲದೆ ಬುಡಕಟ್ಟು ಸ್ವಾಯತ್ತ ಪ್ರದೇಶಗಳ ಮೇಲೆ ಹಿಡಿತ ಹೊಂದುವುದು ಸುಲಭದ ವಿಚಾರ ಕೂಡ ಆಗಿರಲಿಲ್ಲ. ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಬುಡಕಟ್ಟು ಸಮುದಾಯಗಳು ಒಡ್ಡುತ್ತಾ ಬಂದ ಪ್ರತಿರೋಧ ಹಾಗೂ ಸವಾಲುಗಳ ಅರಿವು ರಾಜಾಡಳಿತಕ್ಕೆ ಸಹಜವಾಗಿಯೇ ಇತ್ತು. ಬಹುತೇಕವಾಗಿ ಎಲ್ಲಾ ಬುಡಕಟ್ಟುಗಳು ತಮ್ಮದೇ ಗಡಿಪ್ರದೇಶ ಹಾಗೂ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದವು. ಎಲ್ಲಾ ಬುಡಕಟ್ಟುಗಳಿಗೂ ಪ್ರಮುಖರೊಬ್ಬರು ಇರುತ್ತಿದ್ದರು. ಈ ಭಾಗದ ಬುಡಕಟ್ಟು ಸಮುದಾಯಗಳು ತಮ್ಮ ಗಡಿವಿಸ್ತರಣೆ ಹಾಗೂ ಆಧಿಪತ್ಯಕ್ಕಾಗಿ ಹಲವಾರು ಕಾದಾಟಗಳನ್ನು ಮಾಡುತ್ತಾ ಬಂದಿದ್ದವು. ಅವುಗಳನ್ನು ಹಲವಾರು ಯುದ್ಧಗಳಾಗಿ ಗುರುತಿಸಲಾಗುತ್ತಿದೆ.

ಅವುಗಳಲ್ಲಿ ಕ್ರಮೇಣ ಮೈತೈ ಜನಾಂಗ (ಬುಡಕಟ್ಟು) ಇತರ ಜನಾಂಗಗಳಿಗಿಂತಲೂ ಮುಂಚೂಣಿಯಾಗಿ ಬೆಳೆದು ಊಳಿಗಮಾನ್ಯ ಗುಣಗಳನ್ನು ಹೆಚ್ಚಾಗಿ ರೂಢಿಸಿಕೊಂಡಿತು. ಅದು ತನ್ನದೇ ಆದ ನಂಬುಗೆಯ ಪಂಥದಡಿ ಸರಿಸಲ್ಪಟ್ಟಿತು. ಅದನ್ನು ಸನಾಮಹಿ ಪಂಥವೆಂದು ಕರೆದುಕೊಳ್ಳಲಾಯಿತು. ಜೊತೆಗೆ ಇದರಲ್ಲಿ ವೈಷ್ಣವತ್ವ ಕಾಣಿಸಿಕೊಂಡಿತು. ಆದರೆ ಈ ವೈಷ್ಣವತ್ವ ಇಂಡಿಯಾದ ಇತರೆಡೆಗಳಂತೆ ಆಗ ಬ್ರಾಹ್ಮಣೀಕರಣಗೊಂಡಿರಲಿಲ್ಲ. ಅದು ಮಣಿಪುರದ್ದೇ ಆದ ವಿಶೇಷ ವೈಷ್ಣವತ್ವ ಆಗಿತ್ತು. ಮೈತೈ ಜನಾಂಗೀಯ ಗುರುತುಗಳನ್ನು ಆಚಾರವಿಚಾರಗಳನ್ನು ಕಳೆದುಕೊಂಡಿರಲಿಲ್ಲ. ನಂತರ ಬ್ರಾಹ್ಮಣಶಾಹಿ ಅಲ್ಲಿನ ವೈಷ್ಣವತ್ವವನ್ನು ಬ್ರಾಹ್ಮಣೀಕರಿಸಿತು. ಮೈತೈಗಳು ಆರಾಧಿಸುತ್ತಾ ಬಂದಿದ್ದ ಫೆಯ್ಯಾ (pheia) ಎಂಬ ಪೋಂಗ್ ಸಾಮ್ರಾಜ್ಯದ ಪವಿತ್ರವೆಂದು ನಂಬಿಕೆಯಿರುವ ಕಲ್ಲನ್ನು ವಿಷ್ಣುವೆಂದು ಬಿಂಬಿಸಲಾಯಿತು.

ಬ್ರಾಹ್ಮಣಶಾಹಿಯ ತೆಕ್ಕೆಯಡಿ ಹೋಗಿದ್ದರೂ ಈಗಲೂ ಕೂಡ ಬ್ರಾಹ್ಮಣೇತರ ಮೈತೈಗಳಲ್ಲಿ ಹಲವರು ತಮ್ಮ ಜನಾಂಗೀಯ ಗುರುತು ಹಾಗೂ ಆಚರಣೆಗಳನ್ನು ತ್ಯಜಿಸಿಲ್ಲ. ಡ್ರಾಗನ್ ಎಂದು ಗುರುತಿಸಲ್ಪಡುವ ಭಾರೀ ಹಾವಿನ ಚಿತ್ರವನ್ನು ತಮ್ಮ ಗುರುತಾಗಿ ಬಳಸುವುದನ್ನು ಹಾಗೂ ಆರಾಧಿಸುವುದನ್ನು ಮಾಡುತ್ತಿದೆ. ಮೈತೈ ಜನಾಂಗ ಅಸ್ಸಾಮ್, ಮೇಘಾಲಯ, ಮಿಜೋರಾಂ, ತ್ರಿಪುರಾ, ಬಾಂಗ್ಲಾದೇಶ, ಮ್ಯಾನ್ಮಾರ್‌ಗಳಲ್ಲೂ ನೆಲೆಸಿದೆ. ಮೈತೈ ಎಂದಾಗ ಅದು ಒಂದು ಜನಾಂಗವಲ್ಲ ಅದೊಂದು ಹಲವು ಜನಾಂಗೀಯ ಸಮೂಹಗಳ ಒಂದು ಗುಂಪಾಗಿದೆ. ಬ್ರಾಹ್ಮಣಶಾಹಿಯು ಮಾಡಿದ ವಿಭಜನೆಯಿಂದಾಗಿ ಮೈತೈ ಜನಾಂಗದಲ್ಲಿ ಜಾತಿಗಳು, ದಲಿತರು ಹಾಗೂ ಅಸ್ಪೃಶ್ಯತೆ ಆಚರಣೆಗಳು ಬಂದಿವೆ. ಬ್ರಾಹ್ಮಣೇತರರನ್ನು ಶೂದ್ರವರ್ಗದಡಿ ತಂದಿಡಲಾಗಿದೆ. ಆಳುತ್ತಾ ಬಂದ ಮುಖ್ಯಸ್ಥರು ಇಲ್ಲವೇ ಅರಸೊತ್ತಿಗೆಯ ಜನಾಂಗ ಉನ್ನತ ಸ್ಥಾನ, ಅಧಿಕಾರ ಹಾಗೂ ಆಸ್ತಿಗಳಲ್ಲಿ ಬಹುತೇಕ ಹಿಡಿತ ಹೊಂದಿದ್ದರೆ ಆಳಿಸಿಕೊಳ್ಳುತ್ತಾ ಬಂದ ಸಮುದಾಯಗಳು ಶ್ರಮಜೀವಿಗಳಾಗಿ ಬಡತನದಲ್ಲಿದ್ದಾರೆ. ಬ್ರಾಹ್ಮಣಶಾಹಿ ಫ್ಯಾಶಿಸ್ಟರಾದ ಸಂಘಪರಿವಾರ ಮೈತೈ ಜನಸಮೂಹಗಳನ್ನು ಇತರ ಬುಡಕಟ್ಟು ಸಮೂಹಗಳ ವಿರುದ್ಧ ವಿವಿಧ ನೆಪಗಳಲ್ಲಿ ಎತ್ತಿಕಟ್ಟುತ್ತಿದೆ.

ಮೈತೈಗಳಲ್ಲಿ ಹಲವರು ಕ್ರೈಸ್ತ ಧರ್ಮಾವಲಂಬಿಗಳಾದವರೂ ಇದ್ದಾರೆ. ಈ ಭಾಗದ ಮೈತೈ, ನಾಗಾ, ಕುಕಿ ಸೇರಿದಂತೆ ಎಲ್ಲಾ ಜನಸಮುದಾಯಗಳು ಬಹುತೇಕವಾಗಿ ನೇರವಾಗಿ ಇಲ್ಲವೇ ಪರೋಕ್ಷವಾಗಿ ಮಂಗೋಲಾಯ್ಡ ಜನಾಂಗೀಯ ಗುಂಪಿಗೆ ಸೇರಿದವರಾಗಿದ್ದಾರೆ. ಮೈತೈ ಜನಸಮೂಹವು ಮಣಿಪುರದ ಬಯಲು ಪ್ರದೇಶಗಳಲ್ಲಿದ್ದ ಇತರ ಜನಸಮೂಹಗಳನ್ನು ಚದುರಿಸಿ ಗುಡ್ಡಗಾಡುಪ್ರದೇಶಗಳಿಗೆ ಓಡಿಸಿ ಸ್ಥಿರವಾಗಿ ನೆಲೆನಿಂತು ಸಾಪೇಕ್ಷವಾಗಿ ಆಧುನಿಕತೆಗೆ ತೆರೆದುಕೊಂಡು ಮಣಿಪುರದ ಇತರ ಜನಾಂಗಗಳಿಗಿಂತ ಮುಂದುವರಿದ ಜನಾಂಗವಾಗಿ ಮಾರ್ಪಾಟಾಗಿದ್ದಾರೆ. ಮೈತೈ ಭಾಷೆಯನ್ನು ‘ಮಣಿಪುರಿ’ ಎಂದು ಕರೆಯುತ್ತಾ ರಾಜ್ಯದ ಅಧಿಕೃತ ಭಾಷೆಯಾಗಿಸಿ ಇತರ ಭಾಷೆಗಳನ್ನು ಹಿನ್ನೆಲೆಗೆ ಸರಿಸಿಡಲಾಗಿದೆ. ಮಣಿಪುರಿ ಭಾಷೆಯನ್ನು ಇಂಡಿಯಾದ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಗುರುತಿಸಿ 1992ರಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದದಡಿ ಸೇರಿಸಲಾಗಿದೆ. ಮೈತೈ ಸಮೂಹವನ್ನು ಮುಂದುವರಿದ ಸಮೂಹವೆಂದು ಅಧಿಕೃತವಾಗಿಯೇ ಗುರುತಿಸಲಾಗಿದೆ. ಒಟ್ಟಿನಲ್ಲಿ ಮೈತೈ ಜನಾಂಗದ ಮೇಲೆ ಹಿಡಿತ ಹೊಂದಿರುವ ಬಲಾಢ್ಯರು ಇಡೀ ಮೈತೈ ಜನಸಮೂಹವನ್ನು ವಿವಿಧ ರೀತಿಗಳಲ್ಲಿ ಕುಕಿ, ನಾಗಾ ಇನ್ನಿತರ ಜನಾಂಗಗಳ ಎದುರು ನಿಲ್ಲಿಸುತ್ತಾ ಬಂದು ಇದೀಗ ಅದು ಮಣಿಪುರವನ್ನು ಅಂತರ್ಯುದ್ಧದ ಬೀಡನ್ನಾಗಿಸಲಾಗಿದೆ. ಕುಕಿ, ನಾಗಾ ಮೊದಲಾದ ಜನಸಮೂಹಗಳನ್ನು ಪರಿಶಿಷ್ಟ ಬುಡಕಟ್ಟುಗಳನ್ನಾಗಿ ಅಧಿಕೃತವಾಗಿ ಗುರುತಿಸಲಾಯಿತು. ಅನಿವಾರ್ಯವಾಗಿ ಅವರಿರುವ ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಇತರರು ಭೂಮಿ ಹೊಂದುವುದಕ್ಕೆ ಅವಕಾಶವಿಲ್ಲದಂತೆ ಶಾಸನಾತ್ಮಕ ರಕ್ಷಣೆಯನ್ನು ಸಂವಿಧಾನದತ್ತವಾಗಿ ಒದಗಿಸಲಾಗಿತ್ತು. ಇದೀಗ ಮೈತೈ ಜನಾಂಗದ ಪ್ರಭಾವಿಗಳ ಒತ್ತಾಯಗಳಿಗೆ ಮಣಿದು ಸರಕಾರ ಮೈತೈಗಳನ್ನು ಪರಿಶಿಷ್ಟ ಬುಡಕಟ್ಟುಗಳನ್ನಾಗಿ ಗುರುತಿಸಲು ಮಣಿಪುರದ ಉಚ್ಚನ್ಯಾಯಾಲಯದಿಂದ ಹೊರಬಿದ್ದ ತೀರ್ಪನ್ನು ನೆಪಮಾಡಿಕೊಂಡು ಹೊರಟಿದೆ. ಇದು ಬಹಳ ಹಿಂದಿನಿಂದಲೂ ಗುಡ್ಡಗಾಡು ಪ್ರದೇಶಗಳಿಂದ ಮಣಿಪುರದ ಜನಸಂಖ್ಯೆಯ ಶೇ. ನಲವತ್ತರಷ್ಟು ಇರುವ ಬುಡಕಟ್ಟು ಜನಾಂಗಗಳನ್ನು ಚದುರಿಸಿ ಓಡಿಸಿ ಅಲ್ಲಿನ ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನ ಮೇಲೆ ಹಿಡಿತ ಸಾಧಿಸುವ ಭಾರೀ ಕಾರ್ಪೊರೇಟ್ ಹಾಗೂ ಭಾರೀ ಆಸ್ತಿವಂತ ವರ್ಗದ ಹಿತಾಸಕ್ತಿಗಳ ಮುಂದುವರಿದ ವರಸೆಗಳಾಗಿವೆ.

ಶಾಲಾಕಾಲೇಜುಗಳು, ಸರಕಾರಿ ಸಂಸ್ಥೆಗಳು, ನಾಗರಿಕ ಸೌಲಭ್ಯಗಳು ಬಹುತೇಕವಾಗಿ ಕಾರ್ಯಾಚರಿಸುತ್ತಿರುವುದು ಮೈತೈ ಪ್ರದೇಶವಾದ ಮಣಿಪುರ ಬಯಲು ಪ್ರದೇಶದ ಇಂಫಾಲ ಕಣಿವೆಯಲ್ಲಿ ಮಾತ್ರ ಆಗಿದೆ. ಕುಕಿ ಜನಾಂಗ ಇರುವ ಪ್ರದೇಶದಲ್ಲಿ ಒಂದೋ ಎರಡೋ ಸರಕಾರಿ ಪ್ರಾಥಮಿಕ ಶಾಲೆಗಳು ಮಾತ್ರ ಇವೆ ಎನ್ನಲಾಗುತ್ತಿದೆ. ಅಷ್ಟೊಂದು ಮಟ್ಟದಲ್ಲಿ ಆ ಪ್ರದೇಶವನ್ನು ಹಿಂದುಳಿದ ಪರಿಸ್ಥಿತಿಯಲ್ಲಿ ಉಳಿಸುತ್ತಾ ಬರಲಾಗಿದೆ. ಈ ತಾರತಮ್ಯಗಳು, ಶೋಷಣೆಗಳು, ದಮನ ದೌರ್ಜನ್ಯಗಳು ಕುಕಿ, ನಾಗಾ ಹಾಗೂ ಇನ್ನಿತರ ಬುಡಕಟ್ಟುಗಳು ಭಾರತದ ಸರಕಾರಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಿರಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ. ಇದರಿಂದಾಗಿ ಮಣಿಪುರದಲ್ಲಿ ಹಲವು ಬುಡಕಟ್ಟುಗಳು ಸಶಸ್ತ್ರ ಹೋರಾಟಗಳೂ ಸೇರಿದಂತೆ ಹಲವಾರು ರೀತಿಯ ಹೋರಾಟಗಳನ್ನು ನಡೆಸುತ್ತಾ ಬಂದಿದ್ದವು.

ಮಣಿಪುರವನ್ನು ಸುದೀರ್ಘಕಾಲ ಸಶಸ್ತ್ರಪಡೆಗಳ ವಿಶೇಷಾಧಿಕಾರದಡಿ ಇಡುತ್ತಾ ಬರಲಾಗಿತ್ತು. ಅದಕ್ಕಾಗಿಯೇ ‘ಸಶಸ್ತ್ರ ಪಡೆಗಳ ವಿಶೇಷಾಧಿಕಾರ (ಅಸ್ಸಾಮ್ ಹಾಗೂ ಮಣಿಪುರ) ಕಾಯ್ದೆ 1958’ ಎಂಬ ಕರಾಳ ಕಾಯ್ದೆಯನ್ನೇ ದೇಶದ ಪ್ರಭುತ್ವ ರೂಪಿಸಿ ಹೇರುತ್ತಾ ಬಂದಿತ್ತು. ಆಗೆಲ್ಲಾ ಭಾರತದ ಸೇನೆ ನಡೆಸಿದ ದಮನಕಾಂಡಗಳು, ಎನ್ ಕೌಂಟರ್ ಹೆಸರಿನ ಕಗ್ಗೊಲೆಗಳು, ಅತ್ಯಾಚಾರಗಳನ್ನು ಹಲವಾರು ಮಾನವಹಕ್ಕುಗಳ ಸಂಘಟನೆಗಳು ಬಯಲಿಗೆ ತಂದಿದ್ದವು. ನ್ಯಾಯಾಲಯವು ಕೂಡ ನೂರಾರು ಎನ್‌ಕೌಂಟರ್ ಕಗ್ಗೊಲೆಗಳು ಹಾಗೂ ವ್ಯಕ್ತಿಗಳ ಕಣ್ಮರೆಗಳ ಬಗ್ಗೆ ತನಿಖೆಗೆ ಒಪ್ಪಿಸಬೇಕಾದಂತಹ ಪರಿಸ್ಥಿತಿ ಬಂದಿತ್ತು. ಮಣಿಪುರದ ಹೋರಾಟಗಾರ್ತಿ ಇರೋಮ್ ಶರ್ಮಿಲಾ ಸಶಸ್ತ್ರಪಡೆಗಳ ವಿಶೇಷಾಧಿಕಾರ ಮತ್ತು ದಮನ ದೌರ್ಜನ್ಯಗಳ ವಿರುದ್ದ ನಡೆಸಿದ ಹದಿನಾರು ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹ ಕೂಡ ಜಗತ್ತಿಗೆ ಮಣಿಪುರದ ಜನರ ದುರಂತ ಕತೆಗಳನ್ನು ಹೇಳಿತ್ತು. ಅದರಲ್ಲೂ ಮಣಿಪುರದ ಮಹಿಳೆಯರು ರೊಚ್ಚಿಗೆದ್ದು ಸೇನಾ ಕಾರ್ಯಾಲಯದ ಎದುರು ‘ಇಂಡಿಯಾದ ಸೇನೆಯೇ ಬನ್ನಿ ನಮ್ಮನ್ನು ಅತ್ಯಾಚಾರ ಮಾಡಿ’ ಎಂದು ಬ್ಯಾನರ್ ಹಿಡಿದು ನಡೆಸಿದ ಬೆತ್ತಲೆ ಪ್ರತಿಭಟನೆ ಜಾಗತಿಕವಾಗಿ ಭಾರೀ ಗಮನವನ್ನು ಸೆಳೆದಿತ್ತು. ಇವೆಲ್ಲಾ ಇಂಡಿಯಾದ ಪ್ರಜಾಪ್ರಭುತ್ವದ ಒಂದು ಅಸಲಿ ಮಾದರಿಯನ್ನು ಜಗತ್ತಿನೆದುರು ಬಿಚ್ಚಿಟ್ಟಿದ್ದವು. ಇಂಫಾಲದ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ 1958 ಅನ್ನು ಇದೇ 2023ರ ಮಾರ್ಚ್‌ನಲ್ಲಿ ತೆಗೆಯಲಾಗಿತ್ತು. ಈಗಲೂ ಮಣಿಪುರದ ಕೆಲವು ಪ್ರದೇಶಗಳು ಅದರಲ್ಲೂ ಬುಡಕಟ್ಟು ಪ್ರದೇಶಗಳು ಹಾಗೂ ಇತರ ದೇಶಗಳೊಂದಿಗಿನ ಗಡಿ ಪ್ರದೇಶಗಳು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯಡಿಯಲ್ಲಿಯೇ ಇರಿಸಲಾಗಿದೆ. ಮಣಿಪುರದ ಗುಡ್ಡಗಾಡು ಪ್ರದೇಶದ ಜನರನ್ನು ಅವರ ಮೂಲ ನೆಲೆಗಳಿಂದ ಚದುರಿಸುವ, ಒಕ್ಕಲೆಬ್ಬಿಸುವ ಕಾರ್ಯವನ್ನು ಸರಕಾರದ ಅಂಗಗಳು ಬಹಳ ಹಿಂದಿನಿಂದಲೂ ಮಾಡುತ್ತಾ ಬಂದಿವೆ. ಅದಕ್ಕೆ ಅಲ್ಲಿನ ನಿವಾಸಿಗಳನ್ನು ವಿದೇಶಿಯರೆಂದು, ಅಕ್ರಮ ವಾಸಿಗಳೆಂದು, ಮಾದಕ ವಸ್ತುಗಳನ್ನು ಬೆಳೆಯುವವರೆಂದು, ದರೋಡೆಕೋರರೆಂದು ಹೀಗೆ ಆರೋಪಗಳನ್ನು ಹೊರಿಸುತ್ತಾ ಇತರ ಜನಸಮೂಹಗಳ ಮಧ್ಯೆ ಅಪಪ್ರಚಾರಗಳನ್ನು ಕೂಡ ಮಾಡುತ್ತಾ ಬರಲಾಗಿದೆ.

ವಾಸ್ತವದಲ್ಲಿ 1949ರವರೆಗೂ ಮಣಿಪುರ ಪ್ರತ್ಯೇಕ ರಾಷ್ಟ್ರವಾಗಿತ್ತು. ಅದನ್ನು 1949ರಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅಲ್ಲಿನ ಆಗಿನ ರಾಜ ಬೋಧಾನಂದನ ಮೇಲೆ ಒತ್ತಡ ಹಾಕಿ ಇಂಡಿಯಾದೊಳಗೆ ಸೇರಿಸಿದರು. ಇದಕ್ಕೆ ಪ್ರಮುಖ ಕಾರಣ ರಾಜನ ದುರಾಡಳಿತದ ವಿರುದ್ಧ ಮಣಿಪುರದ ಜನರು ಬಂಡೆದ್ದು ಪ್ರಜಾಸತ್ತಾತ್ಮಕ ಹಕ್ಕೊತ್ತಾಯಗಳನ್ನು ಮುಂದಿಡತೊಡಗಿದ್ದು. ಇಂಡಿಯನ್ ಯೂನಿಯನ್ ಒಳಗೆ ಸೇರಿಸಿಕೊಂಡ ಮೇಲೂ ಮಣಿಪುರವನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಡಿ ತಂದಿರಲಿಲ್ಲ. ಅದನ್ನು ಒಂದು ರಾಜ್ಯವೆಂದು ಕೂಡ ಪರಿಗಣಿಸದೇ ಮುಂದುವರಿದು 1956ರಲ್ಲಿ ಯೂನಿಯನ್ ಸರಕಾರದ ಆಡಳಿತದಡಿ ಇಡಲಾಯಿತು. ಸುದೀರ್ಘ ಕಾಲದಿಂದ ಮಣಿಪುರವು ನಿರಂತರವಾಗಿ ವಿವಿಧ ಸಂಘರ್ಷಗಳಡಿ ಸಾಗಿಬಂದಿತ್ತು. ಪ್ರತ್ಯೇಕ ರಾಷ್ಟ್ರದ ಗುರಿಯೊಂದಿಗೆ ಹಲವು ಸಶಸ್ತ್ರ ಸಂಘಟನೆಗಳು ಅಲ್ಲಿ ಕಾರ್ಯಾಚರಿಸುತ್ತಾ ಬಂದಿದ್ದವು. ನೂರಾರು ಸಾವುನೋವುಗಳು ದಮನ ದೌರ್ಜನ್ಯಗಳು ನಡೆದವು. 1980ರಿಂದ 2004ರವರೆಗೆ ಯೂನಿಯನ್ ಸರಕಾರ ಮಣಿಪುರವನ್ನು ಪ್ರಕ್ಷುಬ್ಧ ಪ್ರದೇಶವೆಂಬ ದಮನಕಾರಿ ಸ್ಥಾನಮಾನ ನೀಡಿ ಸೇನಾನಿಯಂತ್ರಣದಡಿ ಇಟ್ಟಿತ್ತು.

1972ರಲ್ಲಿ ‘ಈಶಾನ್ಯ ಭಾಗದ ಪ್ರದೇಶಗಳ (ಪುನರ್ ಸಂಘಟನಾ) ಕಾಯ್ದೆ 1971’ ಅಡಿ ಮಣಿಪುರಕ್ಕೆ ರಾಜ್ಯದ ಸ್ಥಾನಮಾನ ನೀಡಲಾಯಿತು. ಆದರೆ ಆಗಲೂ ಸಶಸ್ತ್ರಪಡೆಗಳ ವಿಶೇಷಾಧಿಕಾರವನ್ನು ತೆಗೆದಿರಲಿಲ್ಲ. ಮಣಿಪುರ ರಾಜ್ಯವು 22,322 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿ ಮೂರು ದಶಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ. 2011ರ ಜನಗಣತಿಯಂತೆ ಮೈತೈ ಒಟ್ಟು ಜನಸಮೂಹವು ಶೇ. 50ರಷ್ಟಿದ್ದರೆ, ಕುಕಿ ಶೇ. 25ರಷ್ಟು ಹಾಗೂ ನಾಗಾ ಜನಸಮೂಹದ ಪಾಲು ಶೇ.15ರಷ್ಟಿದೆ. ಉಳಿದ ಶೇ. 10 ಇತರ ಜನಸಮೂಹಗಳದಾಗಿದೆ. ಕುಕಿ ಜನಸಮೂಹಗಳಲ್ಲಿ ಹೆಚ್ಚಿನವರು ಕ್ರೈಸ್ತ ಧರ್ಮದ ಜೊತೆ ಗುರುತಿಸಿಕೊಂಡಿದ್ದಾರೆ. ಇದನ್ನು ಕೂಡ ಒಂದು ಕಾರಣವನ್ನಾಗಿ ಮುಂದಿಟ್ಟು ಇವರ ಬುಡಕಟ್ಟುಗಳೆಂಬ ಮಾನ್ಯತೆಯನ್ನು ತೆಗೆಯಬೇಕೆಂಬ ಒತ್ತಾಯವನ್ನು ಬ್ರಾಹ್ಮಣಶಾಹಿ ಶಕ್ತಿಗಳು ಮುಂದಿಡುತ್ತಿವೆ. ಜೊತೆಗೆ ಅವರಿಗಿರುವ ಸಾಂವಿಧಾನಿಕ ರಕ್ಷಣೆಯನ್ನು ತೆಗೆಯಬೇಕೆಂಬ ಒತ್ತಾಯವನ್ನು ಮಾಡಲಾಗುತ್ತಿದೆ. ಇವೆಲ್ಲದರಿಂದ ಗುಡ್ಡಗಾಡು ಪ್ರದೇಶದ ಬುಡಕಟ್ಟು ಜನಸಮೂಹಗಳು ತೀವ್ರವಾದ ಅಭದ್ರತೆಯ ಅಪಾಯದ ಬಿಸಿ ಅನುಭವಿಸತೊಡಗಿವೆ. ಅದಕ್ಕಾಗಿ ಹಲವಾರು ರೀತಿಯಲ್ಲಿ ಸಂಘಟಿತರಾಗುತ್ತಾ ಪ್ರತಿರೋಧಗಳನ್ನು ಒಡ್ಡುತ್ತಾ ಪ್ರತಿಭಟನೆಗಳಿಗೆ ಇಳಿಯುತ್ತಿವೆ.

ಬುಡಕಟ್ಟುಗಳೇ ಪ್ರಧಾನವಾಗಿರುವ ಮಣಿಪುರವನ್ನು ಕಳೆದ ಹಲವು ತಿಂಗಳುಗಳಿಂದ ಅರಾಜಕತೆ, ಕೊಲೆ ಅತ್ಯಾಚಾರ, ದೊಂಬಿ, ಕೊಳ್ಳೆ, ಬೆತ್ತಲೆ ಮೆರವಣಿಗೆ, ಊರುಗಳನ್ನೇ ಸುಟ್ಟುಹಾಕುವಂತಹ ಭೀಕರ ಹಿಂಸಾಚಾರಗಳ ಬೀಡನ್ನಾಗಿಸಲಾಗಿದೆ. ಹತ್ತಾರು ಬುಡಕಟ್ಟು ಹಾಡಿಗಳನ್ನು ಸುಟ್ಟುಹಾಕಲಾಗಿದೆ. ಹತ್ತಾರು ಪ್ರಾರ್ಥನಾ ಮಂದಿರಗಳನ್ನು ಧ್ವಂಸಮಾಡಲಾಗಿದೆ. ಐವತ್ತು ಸಾವಿರಕ್ಕೂ ಹೆಚ್ಚು ಜನರನ್ನು ನಿರ್ವಸಿತರನ್ನಾಗಿ ಮಾಡಲಾಗಿದೆ. ನೂರೈವತ್ತಕ್ಕೂ ಹೆಚ್ಚು ಕಗ್ಗೊಲೆಗಳಾಗಿವೆ ಎಂಬ ವರದಿಗಳಿವೆ. ಮುಖ್ಯವಾಹಿನಿ ಎಂದೆಲ್ಲಾ ಕರೆದುಕೊಳ್ಳುತ್ತಿರುವ ಮಾಧ್ಯಮಗಳು ಮಣಿಪುರ ರಾಜ್ಯದ ಪರಿಸ್ಥಿತಿಯ ನೈಜತೆಯನ್ನು ಉದ್ದೇಶಪೂರ್ವಕವಾಗಿಯೇ ವರದಿ ಮಾಡದೆ ಹೋಗುತ್ತಿವೆ.

ಬುಡಕಟ್ಟುಗಳನ್ನು ಪರಸ್ಪರ ಎತ್ತಿಕಟ್ಟಿ ಅದಕ್ಕೆ ಧರ್ಮದ ಲೇಪ ಬಳಿದು ಮಣಿಪುರವನ್ನು ಬುಡಕಟ್ಟುಗಳ ಹಿಡಿತದಿಂದ ತೆರವುಗೊಳಿಸಿ ಅಲ್ಲಿನ ಭೂಮಿ ಇನ್ನಿತರ ಸಂಪತ್ತಿನ ಕೊಳ್ಳೆ ನಡೆಸಲು ಮಾಡುತ್ತಿರುವ ಭಾರೀ ಕುತಂತ್ರ ಇದಾಗಿದೆ.

ಭಾರತ ಸರಕಾರ ಮಣಿಪುರದ ಬುಡಕಟ್ಟು ಜನರಿಗೆ ಇದ್ದ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ರಕ್ಷಣೆಗಳನ್ನು ರದ್ದುಪಡಿಸಿ ಬುಡಕಟ್ಟು ಪ್ರದೇಶದಲ್ಲಿ ಇತರರಿಗೆ ಭೂಮಿಯ ಹಿಡಿತ ಹೊಂದಲು ಅನುವು ಮಾಡಿಕೊಡಲು ಹೊರಟಿದೆ. ಬುಡಕಟ್ಟುಗಳ ಒಗ್ಗಟ್ಟಿನ ವಿರೋಧವನ್ನು ದಿಕ್ಕುತಪ್ಪಿಸಿ ತಮ್ಮ ದುರುದ್ದೇಶಪೂರಿತ ಕಾನೂನುಗಳ ಜಾರಿಗಾಗಿ ಮಣಿಪುರ ರಾಜ್ಯವನ್ನು ಇಂದು ಭಾರೀ ಅಸುರಕ್ಷತೆ ಹಾಗೂ ದೊಂಬಿ, ಲೂಟಿ, ಕೊಲೆ, ಅತ್ಯಾಚಾರಗಳ ಬೀಡನ್ನಾಗಿ ಮಾಡಲಾಗಿದೆ. ಸರಕಾರದ ಅಂಗಗಳು ನಿಷ್ಕ್ರಿಯವಾಗುವಷ್ಟು ಕೋಮುವಾದಿ ಶಕ್ತಿಗಳೊಂದಿಗೆ ಶಾಮೀಲಾಗಿವೆ ಎಂಬುದು ಮೇಲ್ನೋಟದಲ್ಲೇ ತಿಳಿಯುತ್ತದೆ.

ಇದೀಗ ಕುಟುಂಬ ಸದಸ್ಯರನ್ನು ಕೊಂದು ಮಹಿಳೆಯರನ್ನು ಬೆತ್ತಲೆ ಮಾಡಿ ಗುಂಪು ಅತ್ಯಾಚಾರ ನಡೆದಿರುವ ಸುದ್ದಿ ವೀಡಿಯೊ ಮೂಲಕ ಇಡೀ ಜಗತ್ತಿಗೆ ಗೊತ್ತಾಗಿದೆ. ಇಂತಹ ಹಲವಾರು ಘಟನೆಗಳು ಅಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಾ ಬರುತ್ತಿವೆ.

ಅಲ್ಲಿ ಬ್ರಾಹ್ಮಣಶಾಹಿ ಕೋಮುವಾದಿ ಸಂಘಪರಿವಾರದ ಶಕ್ತಿಗಳು ಇಂತಹ ಕಾರ್ಯಗಳನ್ನು ಸಂಘಟಿಸುತ್ತಾ ಬರುತ್ತಿವೆ. ಹೆಣ್ಣಿನ ದನಿಯನ್ನು ಆ ಮೂಲಕ ಆಯಾ ಸಮುದಾಯಗಳ ದನಿಯನ್ನು ಅಡಗಿಸುವ ವಿಕೃತ ಮನುಷ್ಯತ್ವಹೀನ ನೀಚ ಮನಸ್ಥಿತಿಯ ದಮನಕಾರಿ ತಂತ್ರಗಳು ಇವಾಗಿವೆ. ಸರಕಾರ ಕೂಡ ಇಂತಹವುಗಳಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟು ಜನರ ರಕ್ಷಣೆಯ ಜವಾಬ್ದಾರಿಯನ್ನು ಉದ್ದೇಶಪೂರ್ವಕವಾಗಿ ನಿರ್ವಹಿಸುತ್ತಿಲ್ಲವೆಂಬಂತಾಗಿದೆ.

ಇದು ನಮ್ಮ ದೇಶದ ಸಾಮಾಜಿಕ ವ್ಯವಸ್ಥೆ ಎಷ್ಟೆಲ್ಲಾ ಹದಗೆಟ್ಟು ಹೋಗತೊಡಗಿದೆ ಎಂಬುದರ ಒಂದು ಉದಾಹರಣೆಯಾಗಿದೆ. ಇವೆಲ್ಲಾ ಸಾಮಾಜಿಕ ಅರಾಜಕತೆಯ ಭೀಕರ ಲಕ್ಷಣಗಳಾಗಿವೆ.

ದೇಶದ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ತತ್ವ ಎಷ್ಟು ಶಿಥಿಲವಾಗತೊಡಗಿವೆ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ಹಾಗಾಗಿ ಮಣಿಪುರದ ಜನರು ತಮ್ಮ ಭೇದ ಮರೆತು ಒಗ್ಗೂಡಿ ಇಡೀ ಮಣಿಪುರದ ಜನಸಾಮಾನ್ಯರ ರಕ್ಷಣೆ ಹಾಗೂ ಒಳಿತಿಗಾಗಿ ಕೆಲಸಮಾಡಬೇಕಾಗಿದೆ. ಇಂಡಿಯಾದ ಪ್ರಜಾತಾಂತ್ರಿಕ ಶಕ್ತಿಗಳು ಮಣಿಪುರದ ಜನರ ಪರವಾಗಿ ನಿಂತು ಅಲ್ಲಿ ನಡೆಯುತ್ತಿರುವ ಕೋಮುವಾದಿ ದಾಳಿ ಹಾಗೂ ಹಿಂಸಾಕಾಂಡಗಳನ್ನು ವಿರೋಧಿಸಿ ಕೇಂದ್ರ ಹಾಗೂ ಮಣಿಪುರ ಸರಕಾರಗಳ ನಿಷ್ಕ್ರಿಯತೆಗಳನ್ನು ಖಂಡಿಸಬೇಕಿದೆ.

ಈಗ ಮಣಿಪುರದಲ್ಲಿ ಜಾರಿಯಾಗುತ್ತಿರುವುದು ಕೇವಲ ಮಣಿಪುರಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ಇಡೀ ದೇಶದ ಅದರಲ್ಲೂ ಈಶಾನ್ಯ ಭಾಗ ಹಾಗೆಯೇ ಮಧ್ಯ ಭಾರತದ ಇನ್ನಿತರ ಭಾಗದ ಬುಡಕಟ್ಟು ಹಾಗೂ ಅರಣ್ಯಪ್ರದೇಶದ ಜನರ ಮೇಲೆ ಪ್ರಯೋಗಿಸಲು ಹೊರಟಿರುವ ಒಂದು ಮಹಾ ಕುತಂತ್ರವಾಗಿದೆ. ಇದು ಪ್ರಭುತ್ವ ಹೊಸ ವರಸೆ ಹಾಗೂ ಅಸ್ತ್ರಗಳೊಂದಿಗೆ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳನ್ನು ಬಳಸಿಕೊಂಡು ಒಂದು ಸಮುದಾಯದ ಮೂಲಕ ಹತ್ತು ಹಲವು ನೆಪಗಳಲ್ಲಿ ಇತರ ಸಮುದಾಯಗಳನ್ನು ಬಲಿಹಾಕಿ ಕೊನೆಗೆ ಜನಸಮುದಾಯಗಳನ್ನು ಅವರ ನೆಲಗಳಿಂದ ಚದುರಿಸಿ ಆ ಪ್ರದೇಶಗಳಲ್ಲಿ ಸಮುದಾಯಗಳ ಸಂಘಟಿತ ಧ್ವನಿಯೇಳದಂತೆ ಮಾಡುವ ದುರುದ್ದೇಶದ ಹವಣಿಕೆಗಳಾಗಿವೆ.

ಇದರ ಜೊತೆಗೆ ಅರಣ್ಯ ಕಾನೂನಿಗೆ ಭಾರೀ ಕಾರ್ಪೊರೇಟ್‌ಗಳಿಗೆ ಅನುಕೂಲವಾಗುವಂತೆ ತಿದ್ದುಪಡಿ ತರಲಾಗುತ್ತಿದೆ. ಲೀಥಿಯಂ ಖನಿಜದ ಗಣಿಗಾರಿಕೆಯನ್ನು ಖಾಸಗೀಕರಿಸುವ ಮಸೂದೆ ಜಾರಿ ಮಾಡಲು ಯೂನಿಯನ್ ಸರಕಾರ ಹೊರಟಿದೆ. ಇವೆಲ್ಲಾ ಮುಂದೆ ಒಂದಕ್ಕೊಂದು ಜೋಡಿಸಿಕೊಂಡು ಜನರ ಮೇಲೆ ಮುಗಿಬೀಳುತ್ತವೆ.

ಇಂತಹ ಪ್ರಯೋಗಗಳು ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲೂ ವಿಸ್ತರಿಸುವ ಸಾಧ್ಯತೆಗಳಿವೆ. ಮಹಿಳೆಯರ ಬೆತ್ತಲೆ ಮೆರವಣಿಗೆಗಳು, ಊರುಊರುಗಳಿಗೆ ಕೊಳ್ಳಿ ಇಡುವುದು, ಜನರ ಆಸ್ತಿಪಾಸ್ತಿ ನಾಶ, ಗುಂಪು ಅತ್ಯಾಚಾರಗಳು, ಗುಂಪು ಕೊಚ್ಚುವಿಕೆಗಳು, ಕಗ್ಗೊಲೆಗಳು, ಸುಳ್ಳು ಎನ್ ಕೌಂಟರ್‌ಗಳು, ಒಂದು ಜನಸಮುದಾಯ ಇಲ್ಲವೇ ಬುಡಕಟ್ಟಿಗೆ ಯಾವುದಾದರೂ ನೆಪಗಳಲ್ಲಿ ಶಸ್ತ್ರಾಸ್ತ್ರ ಒದಗಿಸಿ ಇನ್ನೊಂದು ಸಮುದಾಯ ಇಲ್ಲವೇ ಬುಡಕಟ್ಟಿನ ಮೇಲೆ ಛೂ ಬಿಟ್ಟು ದೊಂಬಿ ಮಾರಣಹೋಮ ನಡೆಸುವುದು ...ಇತ್ಯಾದಿಗಳನ್ನು ಭಾರತದ ಪ್ರಭುತ್ವ ತನ್ನ ಆಧಿಪತ್ಯವನ್ನು ಪ್ರಶ್ನಿಸಿದವರನ್ನು ಹಣಿಯಲು ಮಾಡಿಕೊಂಡು ಬಂದ ಅಪ್ಪಟ ಅಪ್ರಜಾತಾಂತ್ರಿಕ ಹಾಗೂ ಅಸಾಂವಿಧಾನಿಕ ಕ್ರಮಗಳಾಗಿವೆ. ಮಣಿಪುರದಲ್ಲೂ ಇದು ಈಗ ನಡೆಯುತ್ತಿದೆ.

ಮಿಂಚಂಚೆ: nandakumarnandana67@gmail.com

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ನಂದಕುಮಾರ್ ಕುಂಬ್ರಿಉಬ್ಬು

contributor

Similar News