ಹಮಾಸ್ ದಾಳಿಗೆ ಪ್ರಧಾನ ಹೊಣೆಗಾರ ನೆತನ್ಯಾಹು ಸರಕಾರವೇ ಆಗಿದೆ!

ಗೈಡನ್ ಲೆವಿಯವರು ಇಸ್ರೇಲಿನ ಅತ್ಯಂತ ಗೌರವಾನ್ವಿತ ಯೆಹೂದಿ ಪತ್ರಕರ್ತ. ಅವರು ಇಸ್ರೇಲಿನ ರಾಜಧಾನಿ ಟೆಲ್ ಅವೀವ್‌ನಿಂದ ಪ್ರಕಟವಾಗುವ ಹಾರೆಟ್ಝ್ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರು. ಹಾರೆಟ್ಝ್ ಎಂದರೆ ಹಿಬ್ರೂ ಭಾಷೆಯಲ್ಲಿ ಮಣ್ಣಿನ ಮಕ್ಕಳು ಅಥವಾ ಇಸ್ರೇಲಿನ ಜನತೆ ಎಂದರ್ಥ. ಅವರಿಗೆ ೨೦೦೮ರಲ್ಲಿ ಯುರೋಪ್-ಮೆಡಿಟರೇನಿಯನ್ ಪತ್ರಕರ್ತ ಪ್ರಶಸ್ತಿ, ೨೦೦೧ರಲ್ಲಿ ಲೆಪ್ಜಿಗ್ ಸ್ವಾತಂತ್ರ್ಯ ಪ್ರಶಸ್ತಿ, ೧೯೯೭ರಲ್ಲಿ ಇಸ್ರೇಲಿ ಪತ್ರಕರ್ತರ ಸಂಘದ ಪ್ರಶಸ್ತಿ, ೧೯೯೬ರಲ್ಲಿ ಇಸ್ರೇಲಿನ ಅಸೋಸಿಯೇಶನ್ ಫಾರ್ ಹ್ಯೂಮನ್ ರೈಟ್ಸ್ ಅವಾರ್ಡ್ ಕೂಡ ದಕ್ಕಿದೆ. ಅವರ ಹೊಸ ಪುಸ್ತಕ The Punishment of Gaza ಅನ್ನು ಜಗತ್ತಿನ ಪ್ರಖ್ಯಾತ ಪ್ರಕಾಶಕ ಸಂಸ್ಥೆಯಾದ VERSO ಪ್ರಕಟಿಸಿದೆ.

Update: 2023-10-19 04:54 GMT

ನಾವು ಫೆಲೆಸ್ತೀನಿಯರನ್ನು ಬಂಧಿಸುತ್ತೇವೆ, ಕೊಲ್ಲುತ್ತೇವೆ, ಚಿತ್ರಹಿಂಸೆಗೊಳಪಡಿಸುತ್ತೇವೆ, ಅವರ ಆಸ್ತಿಪಾಸ್ತಿಗಳನ್ನು ಕಿತ್ತುಕೊಳ್ಳುತ್ತೇವೆ ಮತ್ತು ಅಳಿದುಳಿದಿರುವ ಫೆಲೆಸ್ತೀನಿ ಪ್ರಾಂತದಲ್ಲಿ ಅಧಿಕೃತವಾಗಿ ವಾಸಿಸುತ್ತಿರುವ ಫೆಲೆಸ್ತೀನಿಯರ ಮೇಲೆ ದಾಳಿ ಮಾಡಿ ಕೊಂದು, ದೌರ್ಜನ್ಯ ಮಾಡಿ ನಿರಂತರವಾಗಿ ಹೊರದಬ್ಬುತ್ತಿರುವ ಇಸ್ರೇಲಿ ನೆಲಸಿಗರನ್ನು ಸಮರ್ಥಿಸಿಕೊಂಡು ರಕ್ಷಿಸುತ್ತೇವೆ. ನಾವು ಫೆಲೆಸ್ತೀನಿ ಪ್ರಾಂತದಲ್ಲಿರುವ ಜೋಸೆಫರ ಗೋರಿ, ಓಥಿನೆಲ್ ಗೋರಿ, ಜೋಶುವಾರ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿ ಅವನ್ನು ಅಪವಿತ್ರಗೊಳಿಸುತ್ತೇವೆ.

ನಾವು ಅಮಾಯಕ ಫೆಲೆಸ್ತೀನಿಯರ ಮೇಲೆ ಗುಂಡು ಹಾರಿಸುತ್ತೇವೆ, ಫೆಲೆಸ್ತೀನಿಯರ ಕಣ್ಣು ಕೀಳುತ್ತೇವೆ ಅವರ ಮನೆಗಳಿಂದ, ಪ್ರದೇಶಗಳಿಂದ ಹೊರಹಾಕುತ್ತೇವೆ, ಅವರ ಆಸ್ತಿಪಾಸ್ತಿಗಳನ್ನು ಕಸಿದುಕೊಳ್ಳುತ್ತೇವೆ, ದರೋಡೆ ಮಾಡುತ್ತೇವೆ, ಹಾಸಿಗೆ ಮೇಲಿಂದ ಏಳಲು ಬಿಡದೆ ಎಳೆದೊಯ್ಯುತ್ತೇವೆ, ಜನಾಂಗೀಯ ಪರಿಶುದ್ಧೀಕರಣ ನಡೆಸುತ್ತೇವೆ ಮತ್ತು ಊಹಿಸಲೂ ಅಸಾಧ್ಯವಾಗುವಂತಹ ರೀತಿಯಲ್ಲಿ ಗಾಝಾ ಪ್ರದೇಶದ ಮೇಲೆ ದಿಗ್ಬಂಧನವನ್ನು ಮುಂದುವರಿಸುತ್ತೇವೆ. ಆದರೂ ಇವೆಲ್ಲಕ್ಕೂ ಯಾವ ಪ್ರತಿಕ್ರಿಯೆಯೂ ಬರದು, ಯಾವ ಪರಿಣಾಮವೂ ಇರದು ಎಂದು ನಂಬಿಕೊಳ್ಳುತ್ತೇವೆ..

ನಾವು ಗಾಝಾ ಪ್ರದೇಶದ ಸುತ್ತ ಭಯಾನಕವಾದ ಅಡೆತಡೆಗಳನ್ನು ನಿರ್ಮಿಸುತ್ತೇವೆ. ಭೂಗತ ಗೋಡೆಗಳ ನಿರ್ಮಾಣವೊಂದಕ್ಕೆ ಏನಿಲ್ಲವೆಂದರೂ 765 ಮಿಲಿಯನ್ ಡಾಲರ್ ವೆಚ್ಚವಾಗಿದೆ- ಮತ್ತು ಅದರಿಂದಾಗಿ ನಾವು ಸುರಕ್ಷಿತ ಎಂದು ಭಾವಿಸುತ್ತೇವೆ. ಗಾಝಾ ಸುತ್ತ ಕಟ್ಟಲಾಗಿರುವ ಏಳು ಮೀಟರ್ ಎತ್ತರದ ದಿಗ್ಬಂಧನ ಗೋಡೆಗಳು ಹಾಗೂ ಅದರ ಸುತ್ತ ಕಟ್ಟಿರುವ ಬೇಲಿ ಹಾಗೂ ಅದನ್ನು ಸೈಬರ್ ತಂತ್ರಜ್ಞಾನದ ಮೂಲಕ ನಿಭಾಯಿಸುತ್ತಿರುವ 8,200 ಸೈಬರ್ ಬೇಹು ತಂತ್ರಜ್ಞರು ಮತ್ತು ಶಿನ್ ಬೆಟ್ ರಕ್ಷಣಾ ಪಡೆಗಳು ಸರ್ವಜ್ಞರೆಂದು ಅವರಿಂದ ನಾವು ಸುರಕ್ಷಿತವೆಂದು ನಂಬುತ್ತೇವೆ.

ಇಸ್ರೇಲಿನ ಅತ್ಯುಗ್ರಗಾಮಿ ಸಂಸದ ಜ್ವಿ ಸುಕ್ಕೋತ್‌ರನ್ನು ಮತ್ತು ಇಸ್ರೇಲಿ ನೆಲಸಿಗರನ್ನು ರಕ್ಷಿಸಲೆಂದೇ ನಾವು ಗಾಝಾ ಗಡಿ ಪ್ರದೇಶದಲ್ಲಿ ಕಾವಲಿಗಿದ್ದ ಅಧರ್ ಸೈನ್ಯವನ್ನು ವೆಸ್ಟ್ ಬ್ಯಾಂಕ್ (ಪಶ್ಚಿಮ ದಂಡೆ) ನಲ್ಲಿರುವ ಹವರಾ ಗಡಿ ಪ್ರದೇಶಕ್ಕೆ ಸ್ಥಳಾಂತರಿಸುತ್ತೇವೆ ಮತ್ತು ಹಾಗೆ ಮಾಡಿದರೂ ಹವಾರ ಹಾಗೂ ಗಾಝಾದ ಎರೆಜ್ ಕ್ರಾಸಿಂಗ್ ಪ್ರದೇಶದಲ್ಲಿ ಎಲ್ಲವೂ ಮಾಮೂಲಿನಂತೆ ಇರುತ್ತದೆ ಎಂದು ನಂಬಿಕೊಳ್ಳುತ್ತೇವೆ.

ಆದರೆ ಪ್ರತಿರೋಧದ ಪ್ರೇರಣೆಯು ಬಲವಾಗಿದ್ದರೆ ಜಗತ್ತಿನ ಅತ್ಯಂತ ಅತ್ಯಾಧುನಿಕ ಮತ್ತು ಅತ್ಯಂತ ದುಬಾರಿ ಅಡೆತಡೆಗಳನ್ನು ಅತ್ಯಂತ ಹಳೆಯ ಬುಲ್ಡೋಜರ್‌ಗಳು ಕೂಡ ಮುರಿದು ನುಗ್ಗಬಹುದು ಎನ್ನುವುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಕೋಟ್ಯಂತರ ಡಾಲರ್‌ಗಳನ್ನು ವೆಚ್ಚ ಮಾಡಿ, ಜಗತ್ತಿನ ಅತ್ಯಂತ ದೊಡ್ಡ ಪರಿಣಿತರು ಮತ್ತು ಶ್ರೀಮಂತ ಕಂಟ್ರಾಕ್ಟರುಗಳು ಕಟ್ಟಿದ ಈ ದುರಹಂಕಾರಿ ಬೇಲಿಯನ್ನು ಒಂದು ಸಾಧಾರಣ ಸೈಕಲ್ ಅಥವಾ ಮೊಪೆಡ್ ಮೂಲಕ ದಾಟಬಹುದೆಂದು ಈ ಘಟನೆ ತೋರಿಸಿದೆ.

ಗಾಝಾದ ಫೆಲೆಸ್ತೀನಿಯರು ಸ್ವಾತಂತ್ರ್ಯದ ಕ್ಷಣಗಳಿಗಾಗಿ ಎಂತಹ ಬೆಲೆಯನ್ನಾದರೂ ತೆರಲು ಸಿದ್ಧವಾಗಿದ್ದಾರೆ. ಆದರೆ ಇಸ್ರೇಲ್ ಪಾಠ ಕಲಿಯುವುದೇ? ..ಖಂಡಿತಾ ಇಲ್ಲ.

ಗಾಝಾದ ಹಲವು ಸಾವಿರ ಫೆಲೆಸ್ತೀನಿಯರಿಗೆ, ಅವರ ಉತ್ತಮ ವರ್ತನೆಯನ್ನು ಖಾತರಿಗೊಳಿಸಿಕೊಂಡು, ಇಸ್ರೇಲಿನಲ್ಲಿ ಕೆಲಸ ಮಾಡುವ ಪರವಾನಿಗೆಯನ್ನು ಕೊಡುವಂಥ ಕೆಲವು ಆಮಿಷಗಳನ್ನು ತೋರಿಸಿ ಅವರ ಮೇಲಿನ ದಿಗ್ಬಂಧನ ಮುಂದುವರಿಸುತ್ತಾ ಹೋಗಬಹುದೆಂದು ನಾವು ಯೋಚಿಸಿದ್ದೆವು ಅಥವಾ ಕೆಲವು ಇಸ್ರೇಲಿಗಳು ಯೋಚಿಸುತ್ತಿರುವಂತೆ ನಾವು ಸೌದಿ ಅರೇಬಿಯ ಮತ್ತು ಯುಎಇ ದೇಶಗಳ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡು ಜಾಗತಿಕ ನೆನಪಿನಿಂದ ಫೆಲೆಸ್ತೀನಿಯರನ್ನು ಸಂಪೂರ್ಣವಾಗಿ ಅಳಿಸಿಬಿಡಬಹುದು ಎಂದು ಭಾವಿಸಿದ್ದೆವು.

ನಾವು ಸಾವಿರಾರು ಫೆಲೆಸ್ತೀನಿ ಬಂದಿಗಳನ್ನು, ಅವರಲ್ಲಿ ಬಹುಪಾಲು ಜನರು ರಾಜಕೀಯ ಕೈದಿಗಳು, ವಿಚಾರಣೆಯೂ ಇಲ್ಲದೆ ಸೆರೆಮನೆಗಳಲ್ಲೇ ಕೊಳೆಹಾಕುತ್ತೇವೆ. ಅವರು ಹಲವು ದಶಕಗಳ ಕಾಲ ಸೆರೆಮನೆಯಲ್ಲೇ ಇದ್ದರೂ ಅವರ ಬಿಡುಗಡೆಯ ಬಗ್ಗೆ ಚರ್ಚಿಸಲೂ ನಾವು ಒಪ್ಪುವುದಿಲ್ಲ.

ಕೇವಲ ಬಲಪ್ರಯೋಗದಿಂದ ಮಾತ್ರ ಈ ಕೈದಿಗಳು ಸ್ವಾತಂತ್ರ್ಯ ಪಡೆದುಕೊಳ್ಳಲು ಸಾಧ್ಯ ಎಂದು ನಾವು ಅವರಿಗೆ ಪರೋಕ್ಷವಾಗಿ ಹೇಳಿರುತ್ತೇವೆ. ಈ ಸಮಸ್ಯೆಗೆ ರಾಜತಾಂತ್ರಿಕ ಪರಿಹಾರವನ್ನು ಕಂಡುಕೊಳ್ಳುವ ಪ್ರಸ್ತಾಪವೇ ನಮಗೆ ಅಪಥ್ಯವಾದ್ದರಿಂದ ಎಲ್ಲವೂ ಈಗಿರುವ ರೀತಿಯಲ್ಲೇ ಶಾಶ್ವತವಾಗಿ ಮುಂದುವರಿಯಲಿದೆ ಎಂದು ಭಾವಿಸಿಕೊಂಡು ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳನ್ನು ದುರಹಂಕಾರದಿಂದ ತಿರಸ್ಕರಿಸುತ್ತಲೇ ಹೋಗುತ್ತೇವೆ.

ಆದರೆ ವಿದ್ಯಮಾನಗಳು ಇಸ್ರೇಲಿಗಳ ದುರಭಿಮಾನ ಮತ್ತು ದುರಹಂಕಾರಕ್ಕೆ ತಕ್ಕಂತೆ ನಡೆಯುವುದಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ. ಯಾವ ಇಸ್ರೇಲಿಯೂ ಕನಸಿನಲ್ಲೂ ಊಹಿಸಲಾಗದಂತೆ ಕೆಲವು ನೂರು ಫೆಲೆಸ್ತೀನಿ ಶಸ್ತ್ರಧಾರಿಗಳು ಅತ್ಯಾಧುನಿಕ ತಡೆಗೋಡಗೆಳನ್ನು ಭೇದಿಸಿ ಇಸ್ರೇಲ್ ಮೇಲೆ ದಾಳಿ ನಡೆಸಿದ್ದಾರೆ. ಯಾವ ಭೀಕರ ಬೆಲೆಯನ್ನೂ ತೆರದೆ ಇಪ್ಪತ್ತು ಲಕ್ಷ ಜನರನ್ನು ಬಂದಿಗಳನ್ನಾಗಿ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಲವು ನೂರು ಜನರು ರುಜುವಾತುಪಡಿಸಿದ್ದಾರೆ.

ಕಳೆದ ಶನಿವಾರ ಬೆಳಗ್ಗೆ ಆ ಹೊಗೆ ಕಕ್ಕುತ್ತಿದ್ದ ಹಳೆಯ ಫೆಲೆಸ್ತೀನಿ ಬುಲ್ಡೋಜರ್ ಜಗತ್ತಿನ ಅತ್ಯಾಧುನಿಕ ತಡೆಗೋಡೆಗಳನ್ನು ಒಡೆದು ಮುನ್ನುಗ್ಗುತ್ತಿದ್ದಂತೆ ಅದು ಇಸ್ರೇಲಿನ ದುರಹಂಕಾರ ಹಾಗೂ ಹುಸಿ ಸಮಾಧಾನಗಳನ್ನು ಒಡೆದು ಹಾಕಿತು.

ಹಾಗೆಯೇ ಆಗಾಗ ಗಾಝಾ ಪ್ರದೇಶದ ಮೇಲೆ ಆತ್ಮಹತ್ಯಾಕಾರಿ ಡ್ರೋನ್ ದಾಳಿ ಮಾಡಿ ಅದನ್ನು ಇಸ್ರೇಲ್‌ನ ಭದ್ರತಾ ಅಗತ್ಯಗಳು ಎಂದು ಅರ್ಧ ಜಗತ್ತನ್ನು ಒಪ್ಪಿಸಿದರೆ ಸಾಕು ಎಂಬ ಇಸ್ರೇಲಿನ ವ್ಯೆಹಾಲೋಚನೆಗಳನ್ನು ಮುರಿದು ಹಾಕಿತು.

ಶನಿವಾರದಂದು ಇಸ್ರೇಲ್ ತಾನು ಹಿಂದೆಂದೂ ಕಾಣದ ಚಿತ್ರಗಳನ್ನು ಕಾಣಬೇಕಾಯಿತು. ಫೆಲೆಸ್ತೀನಿ ವಾಹನಗಳು ತನ್ನ ನಗರಗಳ ಸುತ್ತ ಗಸ್ತು ತಿರುಗುತ್ತಿರುವ, ಬೈಕ್ ಸವಾರರು ಗಾಝಾ ಗೇಟಿನ ಮೂಲಕ ಇಸ್ರೇಲ್ ಪ್ರವೇಶಿಸುತ್ತಿರುವ ಅನೂಹ್ಯ ಚಿತ್ರಗಳು. ಈ ಚಿತ್ರಗಳು ಇಸ್ರೇಲಿ ದುರಹಂಕಾರಕ್ಕೆ ದೊಡ್ಡ ಪೆಟ್ಟು ಕೊಟ್ಟಿತು. ಗಾಝಾ ಫೆಲೆಸ್ತೀನಿಯರು ತಮ್ಮ ಸ್ವಾತಂತ್ರ್ಯದ ಕ್ಷಣಕ್ಕಾಗಿ ಎಂತಹ ಬೆಲೆಯನ್ನಾದರೂ ತೆರಲು ತೀರ್ಮಾನಿಸಿದ್ದಾರೆ.

ಆದರೆ ಅದು ಅಂತಹ ಭರವಸೆಗಳನ್ನು ಹುಟ್ಟಿಸಬಲ್ಲದೇ? .. ಖಂಡಿತಾ ಇಲ್ಲ..

ಹೋಗಲಿ. ಇಸ್ರೇಲ್ ಆದರೂ ಪಾಠಗಳನ್ನು ಕಲಿಯುವುದೇ? .. ಇಲ್ಲ.

ಶನಿವಾರದಂದೇ ಇಸ್ರೇಲಿ ಸರಕಾರ ಆಗಲೇ ‘‘ಗಾಝಾಗೆ ಹಿಂದೆಂದೂ ಅನುಭವಿಸಿರದಂತಹ ಶಿಕ್ಷೆಯನ್ನು ನೀಡುವ’’, ಗಾಝಾ ನೆರೆಹೊರೆಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿ ಗಾಝಾ ಪ್ರದೇಶವನ್ನು ವಶಪಡಿಸಿಕೊಳ್ಳುವ ಮಾತುಗಳನ್ನು ಆಡಲು ಪ್ರಾರಂಭಿಸಿತು. ಆದರೆ 1948ರ ನಂತರ ಇಸ್ರೇಲ್ ಒಂದು ಕ್ಷಣವೂ ವಿರಾಮ ಕೊಡದಂತೆ.. ಗಾಝಾವನ್ನು ನಿರಂತರವಾಗಿ ಶಿಕ್ಷಿಸುತ್ತಲೇ ಬರುತ್ತಿದೆ.

ಕಳೆದ 75 ವರ್ಷಗಳ ಈ ನಿರಂತರ ದೌರ್ಜನ್ಯದ ನಂತರ ಮತ್ತೊಮ್ಮೆ ಅತ್ಯಂತ ಭೀಕರ ಸಂದರ್ಭವನ್ನು ಅದು ಎದುರಿಸುತ್ತಿದೆ. ಗಾಝಾವನ್ನು ಸರ್ವನಾಶ ಮಾಡುವ ಬೆದರಿಕೆಯು ಒಂದು ವಿಷಯವನ್ನು ಮಾತ್ರ ರುಜುವಾತು ಮಾಡಿದೆ.

ನಾವು ಇತಿಹಾಸದಿಂದ ಯಾವೊಂದು ಪಾಠವನ್ನೂ ಕಲಿತಿಲ್ಲ. ಇಸ್ರೇಲ್ ಅತ್ಯಂತ ದುಬಾರಿ ಬೆಲೆಯನ್ನು ತೆರುತ್ತಿದ್ದರೂ ನಮ್ಮ ದುರಹಂಕಾರ ಮಾತ್ರ ಇಳಿದಿಲ್ಲ.

ಇಂದು ಇಸ್ರೇಲಿನಲ್ಲಿ ನಡೆದಿರುವುದಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹುವೇ ಪ್ರಧಾನ ಹೊಣೆಗಾರರು. ಅವರು ಅದಕ್ಕೆ ಬೆಲೆಯನ್ನು ತೆರಲೇ ಬೇಕು. ಆದರೆ ಇದು ಅವರಿಂದ ಪ್ರಾರಂಭವಾಗಿರುವುದಲ್ಲ ಅಥವಾ ಅವರು ಹೋದ ನಂತರ ಮುಕ್ತಾಯವೂ ಆಗುವುದಿಲ್ಲ. ಈಗ ನಾವು ಬಲಿಯಾದ ಇಸ್ರೇಲಿಗಳಿಗಾಗಿಯೂ ಹೃದಯ ಬಿರಿಯುವಂತೆ ದುಃಖಿಸಬೇಕು, ಆದರೆ ಅದೇ ಸಮಯದಲ್ಲಿ ಗಾಝಾಗಾಗಿಯೂ ಅಳಬೇಕು.

ಗಾಝಾ.. ಇಸ್ರೇಲ್ ಸೃಷ್ಟಿಸಿದ ನಿರಾಶ್ರಿತರೇ ಬಹುಪಾಲು ಇರುವ ಗಾಝಾ. ಒಂದೇ ಒಂದು ದಿನವೂ ಸ್ವಾತಂತ್ರ್ಯವನ್ನು ಅನುಭವಿಸದ ಗಾಝಾ.

(ಹಾರೆಟ್ಝ್, ಅಕ್ಟೋಬರ್ 13, 2023)

ನಾಳೆಯ ಸಂಚಿಕೆಗೆ......

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಗೈಡನ್ ಲೆವಿ

contributor

Contributor - ಅನುವಾದ: ಶಿವಸುಂದರ್

contributor

Similar News