ಥೀಮ್ ಪಾರ್ಕ್ ನಿಂದ ಪರಶುರಾಮನ ಪ್ರತಿಮೆಯೇ ನಾಪತ್ತೆ

ದೇಶದ ನಂಬರ್‌ 1 ಪ್ರವಾಸಿ ತಾಣ ಮಾಡ್ತೀವಿ ಎಂದ ಸುನೀಲ್ ಕುಮಾರ್ ಮಾಡಿದ್ದೇನು ? ► ಕೋಟಿಗಟ್ಟಲೆ ಖರ್ಚು ಮಾಡಿ ಒಂದು ಗುಣಮಟ್ಟದ ಪ್ರತಿಮೆ ಮಾಡಲು ಆಗಲಿಲ್ಲ ಏಕೆ ?

Update: 2023-10-19 18:26 GMT
Editor : Naufal | By : ಆರ್. ಜೀವಿ

ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಅಲ್ಲಿನ ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್ ಹಾಗು ಬಿಜೆಪಿ ಪಾಲಿಗೆ ದೊಡ್ಡ ಮುಜುಗರವಾಗಿ ಮಾರ್ಪಟ್ಟಿದೆ. ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಿಸಿದ ಪರಶುರಾಮನ ಪ್ರತಿಮೆಯೇ ನಾಪತ್ತೆಯಾಗಿದೆ ಎಂದು ಪೊಲೀಸ್ ಪ್ರಕರಣ ದಾಖಲಾಗುವಲ್ಲಿಗೆ ತಲುಪಿದೆ ಪರಿಸ್ಥಿತಿ.

ಕಾರ್ಕಳದ ಬೈಲೂರಿನಲ್ಲಿರುವ ಪರಶುರಾಮನ ಥೀಂ ಪಾರ್ಕ್‌ ನಲ್ಲಿದ್ದ ಕಂಚಿನಿಂದ ನಿರ್ಮಿಸಲಾಗಿದೆ ಎನ್ನಲಾಗಿದ್ದ ಪರಶುರಾಮ ಪ್ರತಿಮೆಯಲ್ಲಿ ಬಿರುಕು ಮೂಡಿ ಸ್ಥಳೀಯರಿಂದ ವ್ಯಾಪಕ ದೂರು ಕೇಳಿ ಬಂದಿತ್ತು. ಪರಶುರಾಮನ ಪ್ರತಿಮೆ ನೋಡಲು ಹೊಗುವವರಿಗೇ ಅಪಾಯ ಎಂಬಲ್ಲಿಗೆ ತಲುಪಿತ್ತು ಪರಿಸ್ಥಿತಿ. ಬಳಿಕ ಅದನ್ನು ಪರದೆ ಹಾಕಿ ಮುಚ್ಚಿಡಲಾಯಿತು. ಅದರ ಬಳಿ ಯಾರೂ ಹೋಗದಂತೆ ನಿರ್ಬಂಧ ವಿಧಿಸಲಾಯಿತು. ಈಗ ನೋಡಿದರೆ ಪ್ರತಿಮೆಯೇ ನಾಪತ್ತೆಯಾಗಿದೆ !

ಇದೆಂತಹ ಅಭಿವೃದ್ಧಿ ? ಇದೆಂತಹ ಹಿಂದುತ್ವ ? ಇದೆಂತಹ ರಾಜಕೀಯ ? ಅಂತ ಕಾರ್ಕಳದ ಜನ ಸುನಿಲ್ ಕುಮಾರ್ ಅವರನ್ನು ಈಗ ಕೇಳ್ತಾ ಇದ್ದಾರೆ. ಆದರೆ ರಾಜ್ಯ ಸರಕಾರ ಮಾತ್ರ ಈ ಬಗ್ಗೆ ದೊಡ್ಡ ಆಸಕ್ತಿ ವಹಿಸದೆ ಆಟ ನೋಡುತ್ತಿದೆ.

ಎರಡು ದಿನಗಳ ಹಿಂದೆ ಪರಶುರಾಮ ಪ್ರತಿಮೆಯನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದು ಇದೀಗ ರಾಜ್ಯಾದ್ಯಂತ ಚರ್ಚೆ, ಅನುಮಾನಗಳಿಗೆ ಕಾರಣವಾಗಿದೆ. ಇದರ ಉದ್ಘಾಟನೆಗೂ ಮುನ್ನ 'ತುಳುನಾಡನ್ನು ರಾಜ್ಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ದೇಶದ ನಂಬರ್‌ 1 ಪ್ರವಾಸಿ ತಾಣವಾಗಿಸಲು ಮೊದಲ ಆದ್ಯತೆ" ಎಂದಿದ್ದ ಆಗಿನ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ಈಗ ತುಳುನಾಡನ್ನು ಈ ರೀತಿ ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟಿರೋದು ಕರಾವಳಿಯ ಜನತೆಯನ್ನು ಕೆರಳಿಸಿದೆ.

ಬುದ್ಧಿವಂತರ ಜಿಲ್ಲೆಯ ಜನರನ್ನು ಈ ಪರಿ ಮೋಸ ಮಾಡೋದ ಅಂತ ಜನ ಕೇಳ್ತಾ ಇದ್ದಾರೆ. ಸುನಿಲ್ ಕುಮಾರ್ ವಿರುದ್ಧ ಕಾರ್ಕಳದಲ್ಲಿ ಹಿಂದುತ್ವ ಕಾರ್ಯಕರ್ತರೇ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಮೆ ನಕಲಿ ಎಂದು ಕಾರ್ಕಳ ತಾಲೂಕು ಕಛೇರಿ ಮುಂಭಾಗದಲ್ಲಿ ಸಮಾನ ಮನಸ್ಕರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಯಿತು.

ಉಡುಪಿ - ಕಾರ್ಕಳ ಹೆದ್ದಾರಿಯಲ್ಲಿ ಸಿಗುವ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ಸುಮಾರು 15 ಕೋಟಿ ರೂ ವೆಚ್ಚದಲ್ಲಿ ಪರಶುರಾಮನ ಥೀಂ ಪಾರ್ಕ್‌ ಮತ್ತು ಅದರೊಳಗೆ 2 ಕೋಟಿ ರೂ. ವೆಚ್ಚದಲ್ಲಿ ಪರಶುರಾಮನ ಕಂಚಿನ ಪ್ರತಿಮೆ ಸ್ಥಾಪಿಸಲಾಗುತ್ತೆ ಎಂದು ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಘೋಷಣೆ ಮಾಡಲಾಗಿತ್ತು. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿವಿಧ ಇಲಾಖೆಗಳ ಅನುದಾನವನ್ನು ಬಳಸಲಾಗಿತ್ತು.

ಥೀಂ ಪಾರ್ಕ್‌ನಲ್ಲಿ ಪ್ರತಿಮೆಯ ಜತೆಗೆ ಆಡಿಯೋ ವಿಶುವಲ್‌ ಕೊಠಡಿಯೊಂದಿಗೆ ಸ್ಟೇಟ್‌ ಆಫ್ ದಿ ಆರ್ಟ್‌ ಮ್ಯೂಸಿಯಂ, ಪರಶುರಾಮನ ಕ್ಷೇತ್ರವನ್ನು ಆನಂದಿಸಲು ನೇಯ್ಗೆ ಡೆಕ್‌ ಗ್ಯಾಲರಿ, ಸಾವಿರ ಜನರ ಸಾಮರ್ಥ್ಯದ ಬಯಲು ಮಂದಿರ, ಹಸುರು ಕೋಣೆಗಳ ಪಾಪ್‌ ಸಂಗ್ರಹಣೆಯಂತಹ ಪೂರಕ ಸೌಲಭ್ಯಗಳನ್ನು ಹೊಂದಿರುವ ವೇದಿಕೆ, ನೈಸರ್ಗಿಕ ಸೈಟ್‌ ವೈಶಿಷ್ಟ್ಯಗಳಿಗೆ ಪೂರಕವಾಗಿ ನಿರ್ಮಾಣವಾಗಲಿದೆ. ಸಸ್ಯರಾಶಿಗಳ ನಡುವೆ ವೀಕ್ಷಣಾ ಗೋಪುರಗಳು ಇರಲಿವೆ. ವ್ಯೂವ್‌ಪಾಯಿಂಟ್‌ ಆಗಿ ಗಮನ ಸೆಳೆಯುವ ರೀತಿಯಲ್ಲಿ ರಚಿಸಲ್ಪಡಲಿದೆ ಎಂದು ದೊಡ್ಡ ಪ್ರಚಾರ ಮಾಡಲಾಗಿತ್ತು. ರಾಜ್ಯದಲ್ಲೇ ಅಪರೂಪದ ಪ್ರವಾಸಿ ತಾಣವೊಂದು ಇಲ್ಲಿ ರೂಪುಗೊಳ್ಳಲಿದೆ ಎಂದೇ ಭರ್ಜರಿ ಪ್ರಚಾರ ಮಾಡಲಾಗಿತ್ತು.

"ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮಹಾ ಪುರುಷ ಪರಶುರಾಮನ ಪ್ರತಿಮೆಗಳಿಲ್ಲ. ಎರಡೂ ಜಿಲ್ಲೆಗಳನ್ನು ಕೇಂದ್ರೀಕರಿಸಿ ಪ್ರತಿಮೆ ಸ್ಥಾಪಿಸಿ ಗಮನ ಸೆಳೆಯಲಾಗುತ್ತಿದೆ" ಎಂದು ಅಂದಿನ ಸಚಿವ ಹಾಗು ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದ್ದರು. ಇದೇ ವರ್ಷ ಜನವರಿ 27 ರಂದು ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆಯ ಅದ್ದೂರಿ ಕಾರ್ಯಕ್ರಮ ನಡೆದಿತ್ತು. 33 ಅಡಿ ಎತ್ತರದ 15 ಟನ್ ತೂಕದ್ದು ಎನ್ನಲಾದ ಪರಶುರಾಮನ ಪ್ರತಿಮೆಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದರು. ಆಗ ಸಚಿವರೂ ಆಗಿದ್ದ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ನೇತೃತ್ವದಲ್ಲೇ ಕಾರ್ಯಕ್ರಮ ನಡೆದಿತ್ತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ, ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್ ಪರಶುರಾಮನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಥೀಂ ಪಾರ್ಕ್ ನ ಉದ್ಘಾಟನೆ ಮಾಡಲಾಯಿತು.

ಉದ್ಘಾಟನೆಗೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಸುನೀಲ್ ಕುಮಾರ್ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ಜನ ಸೇವಕನ ಗುಣ. ನಾನು ಪರಶುರಾಮನ ಭಕ್ತನಾಗಿ ಉದ್ಘಾಟನೆಗೆ ಬಂದಿದ್ದೇನೆ. ಥೀಂ ಪಾರ್ಕ್ ಟೂರಿಸಂ ಸೆಂಟರ್ ಜೊತೆ ಪುಣ್ಯಭೂಮಿ ಕೂಡಾ ಆಗಲಿದೆ. ಉಡುಪಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಕರಾವಳಿಗೆ ಟೂರಿಸಂ ನ ಮಾಸ್ಟರ್ ಪ್ಲ್ಯಾನ್ ಮಾಡಿದ್ದೇವೆ. ಈ ಭಾಗದ ಜನ ಪರಿಶ್ರಮ ಜೀವಿಗಳು. ಕರಾವಳಿ ಭಾಗಕ್ಕೆ ಒಂದೂವರೆ ಲಕ್ಷ ಕೋಟಿ ರೂಪಾಯಿ ಹೂಡಿಕೆಗೆ ಮುಂದೆ ಬಂದಿದ್ದಾರೆ. ಕರಾವಳಿಗೆ ಪ್ಯಾಕೇಜ್ ಕೊಡಲ್ಲ, ಬದುಕು ಕಟ್ಟಿಕೊಡುತ್ತೇವೆ. ಪರಶುರಾಮನ ಸ್ಥಾಪನೆ ನಂತರ ತುಳುನಾಡು ಬಂಗಾರದ ನಾಡು ಆಗಲಿದೆ" ಎಂದು ಹೇಳಿದ್ದರು.

ಆದರೆ ಇಷ್ಟೆಲ್ಲಾ ಪ್ರಚಾರ ಪಡೆದು ಲೋಕಾರ್ಪಣೆಗೊಂಡ ಏಳೇ ತಿಂಗಳಲ್ಲಿ ಪರಶುರಾಮ ಪ್ರತಿಮೆಯಲ್ಲಿ ಬಿರುಕು ಮೂಡಿತು. ಇದು ಸಾರ್ವಜನಿಕರ, ಸ್ಥಳೀಯರ, ಪ್ರವಾಸಿಗರ ಅನುಮಾನಗಳಿಗೆ ಕಾರಣವಾಗಿತ್ತು. ಇದು ಕಂಚಿನ ಪ್ರತಿಮೆಯೇ ಅಲ್ಲ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರೇ ದೂರಿದರು. ವಿಷಯ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿದ್ದ ಶಾಸಕ ಸುನೀಲ್ ಕುಮಾರ್ ಇದೆಲ್ಲವೂ ರಾಜಕೀಯ ಪ್ರೇರಿತ ಆರೋಪಗಳು ಎಂದು ಅಲ್ಲಗಳೆದಿದ್ದರು. ಸಂಶಯ ಇದ್ದವರು ಬಂದು ಪ್ರತಿಮೆಗೆ ಬೇಕಾದರೆ ತಮ್ಮ ತಲೆ ಒಡೆದು ನೋಡಲಿ ಎಂದು ದರ್ಪದ ಮಾತಾಡಿದ್ದರು.

ಆದರೆ, ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ , ‘ಕಾರ್ಕಳ ತಾಲ್ಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವ ಪರಶುರಾಮ ಪ್ರತಿಮೆಯನ್ನು ಅಸಲಿ ಎಂದೂ ಹೇಳಲಾಗುತ್ತಿಲ್ಲ, ನಕಲಿ ಎಂದೂ ಹೇಳಲಾಗುತ್ತಿಲ್ಲ. ಅದು ಅರ್ಧ ನಕಲಿ– ಅರ್ಧ ಅಸಲಿ’ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಈ ಯೋಜನೆಯ ಗುತ್ತಿಗೆದಾರರಾದ ಉಡುಪಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸಚಿವೆಗೆ ಸರಿಯಾದ ಉತ್ತರವನ್ನು ನೀಡುವುದಕ್ಕೆ ತಡವರಿಸಿದರು.

"ಪರಶುರಾಮನ ಪ್ರತಿಮೆಯ ಕೈ, ಮುಖ ಸೇರಿದಂತೆ ಪ್ರತಿಮೆಯ ಅರ್ಧ ಭಾಗವನ್ನೇ ಬದಲಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ" ಎಂದ ಲಕ್ಷ್ಮೀ ಹೆಬ್ಬಾಳ್ಕರ್, ಪರಶುರಾಮ "ಪ್ರತಿಮೆ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಲಾಗಿದೆ. ವಿಧಾನಸಭಾ ಚುನಾವಣೆ ಹತ್ತಿರ ಇರುವಾಗ ರಾಜಕೀಯ ಲಾಭಕ್ಕಾಗಿ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಹೋಗಿ ಹಲವು ತಪ್ಪುಗಳನ್ನು ಎಸಗಿರುವುದು ಕಂಡು ಬಂದಿದೆ. ಯಾವ ಇಲಾಖೆಯ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು" ಎಂದಿದ್ದರು.

"ಸದ್ಯ ಪ್ರತಿಮೆ ವಿಚಾರದಲ್ಲಿ ರಾಜಕೀಯ ಮಾಡುವುದಕ್ಕಿಂತ ಜನರ ಸುರಕ್ಷತೆ ಮುಖ್ಯವಾಗಿದೆ. ಪ್ರತಿಮೆ ಎತ್ತರದ ಪ್ರದೇಶದಲ್ಲಿರುವುದರಿಂದ ಮಳೆ ಗಾಳಿಗೆ ಬಿದ್ದು ಅವಘಡಗಳಾದರೆ ಯಾರು ಹೊಣೆ ಎಂಬ ಆತಂಕ ಕಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಮೆ ಸುರಕ್ಷಿತವಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಮೆ ನಿರ್ಮಾಣ ಮಾಡಿರುವ ಬೆಂಗಳೂರಿನ ಕಲಾವಿದರಿಗೆ ನೋಟಿಸ್‌ ಜಾರಿ ಮಾಡಲಾಗಿದೆ" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದರು.

ಇದೇ ವೇಳೆ, ಸ್ಥಳೀಯರಾದ ಮಂಜುನಾಥ್ ನಿಟ್ಟೆ ಹಾಗೂ ಇನ್ನೂ ಹಲವರು ಈ ಬಗ್ಗೆ ಗ್ರೌಂಡ್ ರಿಪೋರ್ಟ್ ಗೆ ತೆರಳಿದ್ದ ವಾರ್ತಾಭಾರತಿ ಜೊತೆ ಮಾತನಾಡಿ, ಸುನೀಲ್ ಕುಮಾರ್ ಅವರೇ ಇದಕ್ಕೆ ನೇರ ಹೊಣೆ ಎಂದು ಆರೋಪಿಸಿದ್ದರು. ಅಲ್ಲಿನ ಹಿಂದುತ್ವ ಕಾರ್ಯಕರ್ತರೇ ಪ್ರತಿಮೆ ನಿರ್ಮಾಣದಲ್ಲಿ ಅಕ್ರಮವಾಗಿದೆ ಎಂದು ದೂರಿದ್ದರು.

'ಈ ವರ್ಷದ ಪ್ರಾರಂಭದಲ್ಲಿ ಚುನಾವಣೆಗೆ ಪೂರ್ವದಲ್ಲಿ ತರಾತುರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಂಡ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಪ್ರತಿಷ್ಠಾಪನೆಗೊಂಡ ಪರಶುರಾಮ ಮೂರ್ತಿ ನಕಲಿ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯ ಬಹಿರಂಗ ಪಡಿಸಿದ ಬಳಿಕ ಅದನ್ನು ಬದಲಿಸಲು ಕ್ರಮ ಕೈಗೊಳ್ಳಬೇಕೆಂದು' ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಒತ್ತಾಯಿಸಿದ್ದರು.

ಬೈಲೂರು ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಬಾಕಿಯಿರುವ ಕಾಮಗಾರಿಗಳ ಕುರಿತು ವಿವರ ನೀಡುವಂತೆ ಬ್ಲಾಕ್‌ ಕಾಂಗ್ರೆಸ್‌ ವಕ್ತಾರ ಶುಭದ ರಾವ್‌ ಒತ್ತಾಯಿಸಿದ್ದರು. 'ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶದಿಂದ ನವೆಂಬರ್ ಅಂತ್ಯದವರೆಗೆ ಅಲ್ಲಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರರ್‌ ಆದೇಶ ಹೊರಡಿಸಿದ್ದು, ಪಾರ್ಕಿನ ಅಭಿವೃದ್ಧಿಗಾಗಿ ಈ ಕ್ರಮವನ್ನು ಸ್ವಾಗತಿಸುತ್ತೇವೆ. ಆದರೆ, ಯಾವೆಲ್ಲಾ ಕಾಮಗಾರಿಗಳು ಬಾಕಿ ಇವೆ. ಈಗ ಯಾವ ಕಾಮಗಾರಿಯನ್ನು ಕೈಗೊಳ್ಳುತ್ತೀರಿ ಎಂದು ಅವರು ಸ್ಪಷ್ಟ ಪಡಿಸಬೇಕು' ಎಂದು ಶುಭದ ರಾವ್ ಆಗ್ರಹಿಸಿದ್ದರು.

ಈ ವಿಚಾರವಾಗಿ, ಸ್ಪಷ್ಟನೆ ನೀಡಿದ್ದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ, ' ಕಾರ್ಕಳದ ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್‌ ಪಾರ್ಕ್‌ಗೆ ಸಂಬಂಧಿಸಿದಂತೆ ಕೆಲವರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದರು. ಕೆಲವರು ವಾಸ್ತವಾಂಶ ತಿಳಿಯದೆ ಪರಶುರಾಮ ಥೀಮ್‌ ಪಾರ್ಕ್ ಬಗ್ಗೆ ಅಪಪ್ರಚಾರ ಮಾಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಪರಶುರಾಮ ಥೀಮ್‌ ಪಾರ್ಕ್‌ ನಿಯಮ ಪ್ರಕಾರವೇ ನಿರ್ಮಾಣವಾಗಿದೆ ಎಂದು ಅವರು ಹೇಳಿಕೊಂಡಿದ್ದರು.

ಇದೆಲ್ಲ ಆಗಿಯೂ, ಪರಶುರಾಮ ಥೀಮ್‌ ಪಾರ್ಕಿನಲ್ಲಿ ಯಾವುದೇ ವ್ಯತ್ಯಾಸಗಳಾಗಿದ್ದರೆ ಜಿಲ್ಲಾಡಳಿತ ಯಾವುದೇ ರೀತಿಯ ತನಿಖೆಯನ್ನು ಮಾಡಲಿ, ನಾನು ಬೆಂಬಲ ನೀಡುತ್ತೇನೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಪದೇ ಪದೇ ಹೇಳುತ್ತಲೇ ಇದ್ದರು. ಆದರೆ, ಯಾವಾಗ ವಿವಾದ ಶುರುವಾಯಿತೋ ಆಗ ಎಚ್ಚೆತ್ತುಕೊಂಡ ನಿರ್ಮಿತಿ ಕೇಂದ್ರ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿತು. ಕಾಮಗಾರಿಯಲ್ಲಿ ಪರಶುರಾಮಮೂರ್ತಿಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ, ಮೂರ್ತಿಯ ತುಕ್ಕು ನಿರೋಧಕ ಲೇಪನದ ಹಾಗೂ ಇನ್ನಿತರ ಮುಕ್ತಾಯದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಸೆಪ್ಟಂಬರ್‌ ವರೆಗೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿತ್ತು.

ಈಗ ಕಾಮಗಾರಿ ಪೂರ್ಣಗೊಳಿಸಲು ನಿರ್ಮಿತಿ ಕೇಂದ್ರದವರು ಅನುಮತಿ ಕೋರಿರುವುದರಿಂದ ನವೆಂಬರ್‌ ಅಂತ್ಯದ ವರೆಗೆ ನಿಷೇಧಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರ್‌ ಹೊರಡಿಸಿದ್ದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದೀಗ, ದಿನ ಬೆಳಗಾಗುವಷ್ಟರಲ್ಲೇ ಪ್ರತಿಮೆ ಕಣ್ಮರೆಯಾಗಿದೆ. ಪರಶುರಾಮನ ಪ್ರತಿಮೆ ಕಣ್ಮರೆಯಾಗಿದೆ ಎಂದು ದಿವ್ಯಾ ನಾಯಕ್ ಎಂಬವರು ಪೊಲೀಸ್ ದೂರನ್ನೂ ದಾಖಲಿಸಿದ್ದಾರೆ.

ಹಾಗಾದರೆ ಇಷ್ಟು ಕೋಟಿ ಕೋಟಿ ಖರ್ಚಾದ ದೊಡ್ಡ ಯೋಜನೆಯಲ್ಲಿ ಸರಿಯಾಗಿ ಪ್ರತಿಮೆ ನಿರ್ಮಾಣವನ್ನೂ ಮಾಡದೇ ಇರಲು ಕಾರಣವೇನು ? ಕಂಚಿನ ಪ್ರತಿಮೆ ಎಂದು ಪ್ರಚಾರ ಮಾಡಿ ಕಂಚಿನ ಪ್ರತಿಮೆ ನಿರ್ಮಿಸಲಿಲ್ಲವೇ ? ಅಥವಾ ಜನರು ಆರೋಪಿಸುತ್ತಿರುವಂತೆ ಚುನಾವಣೆಗೆ ಮೊದಲು ಹೇಗಾದರೂ ಉದ್ಘಾಟನೆ ಮಾಡಿ ರಾಜಕೀಯ ಲಾಭ ಪಡೆಯಲು ಬೇರೆ ಯಾವುದೊ ಕಚ್ಚಾ ವಸ್ತುವಿನಿಂದ ಬಳಸಿದ ತಾತ್ಕಾಲಿಕ ಹಾಗು ಕಳಪೆ ಗುಣಮಟ್ಟದ ಪ್ರತಿಮೆ ಇಟ್ಟು ವಂಚಿಸಲಾಯಿತೇ ? ಪರಶುರಾಮನ ಹೆಸರಲ್ಲಿ ರಾಜಕೀಯ ಮಾಡಿದ ಸುನಿಲ್ ಕುಮಾರ್ ಹಾಗು ಬಿಜೆಪಿ ಕಾರ್ಕಳದ ಹಾಗು ರಾಜ್ಯದ ಜನರ ಕಣ್ಣಿಗೆ ಮಂಕು ಬೂದಿ ಎರಚಿದ್ದಾರೆ ಎಂದು ಅಲ್ಲಿನ ಹಿಂದುತ್ವ ಕಾರ್ಯಕರ್ತರೇ ಆರೋಪ ಮಾಡ್ತಾ ಇರೋದು ಸರಿಯೇ ?

ರಾಜ್ಯ ಸರಕಾರ ಕೂಡಲೇ ಈ ಇಡೀ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಏನೇನು ಅವ್ಯವಹಾರ ಅಲ್ಲಿ ನಡೆದಿದೆ ಎಂದು ಬಹಿರಂಗವಾಗಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು. ನಂಬಿಕೆಯ ಹೆಸರಲ್ಲಿ ಭ್ರಷ್ಟ ರಾಜಕೀಯ ಮಾಡುವವರಿಗೆ ಪಾಠವಾಗಬೇಕು. ಈ ಸರಕಾರದಿಂದಲೂ ಅದಾಗದಿದ್ದರೆ ಅದು ನಾಚಿಕೆಗೇಡು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಆರ್. ಜೀವಿ

contributor

Similar News