ದೇಶದ ಮೊದಲ ಚುನಾವಣೆಯ ಕಥೆ
ಮತ್ತೊಂದು ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದೆ. 18ನೇ ಲೋಕಸಭೆಗೆ ನಡೆಯಲಿರುವ 2024ರ ಚುನಾವಣೆ ಹಲವು ಕಾರಣಗಳಿಗಾಗಿ ಮಹತ್ವ ಪಡೆದಿದೆ. ಸತತ 10 ವರ್ಷ ಆಳ್ವಿಕೆ ನಡೆಸಿರುವ ಎನ್ಡಿಎ ಎದುರು ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ ಸಜ್ಜಾಗಿದೆ. ಈ ಹೊತ್ತಿನಲ್ಲಿ ದೇಶದ ಚುನಾವಣಾ ವ್ಯವಸ್ಥೆ ರೂಪುಗೊಂಡ ಕಥೆಯೇ ಕುತೂಹಲಕಾರಿ. ಇಲ್ಲೀಗ ಹೇಳುತ್ತಿರುವುದು ದೇಶದಲ್ಲಿನ ಮೊದಲ ಚುನಾವಣೆಯ ಕಥೆ.
► ಸರಣಿ - 3
1951ರಲ್ಲಿ ಲೋಕಸಭೆಗೆ ಮೊದಲ ಚುನಾವಣೆಯನ್ನು ಪ್ರಾರಂಭಿಸಿದಾಗ, ತಮ್ಮ ಸರಕಾರವನ್ನು ತಾವೇ ಆಯ್ಕೆ ಮಾಡಬಹುದಾದ ಸಾಧ್ಯತೆಗೆ ದೇಶದ ಜನರು ಅಚ್ಚರಿಪಟ್ಟರು.
ತಮ್ಮನ್ನು ಆಳುವವರನ್ನು ಆರಿಸಲು ತಾವು ಮತ ಚಲಾಯಿಸಬಹುದು ಎಂಬ ಕಲ್ಪನೆಯೇ ಬಹುಪಾಲು ಜನರಿಗೆ ಹೊಸದಾಗಿತ್ತು.
ಚುನಾವಣಾ ಆಯೋಗ ಹೊಸದಾಗಿ ರಚನೆಯಾಗಿತ್ತು. ಜನರನ್ನು ಮತ ಚಲಾಯಿಸುವಂತೆ ಮನವೊಲಿಸಲು ಪ್ರತಿನಿಧಿಗಳನ್ನು ಮನೆ ಮನೆಗೆ ಕಳುಹಿಸಬೇಕಾಗಿತ್ತು.
3,000ಕ್ಕೂ ಹೆಚ್ಚು ಚಲನಚಿತ್ರ ಮಂದಿರಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಸಂದೇಶಗಳೊಂದಿಗೆ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.
1951-52ರ ಮೊದಲ ಲೋಕಸಭೆ ಚುನಾವಣೆ ವೇಳೆ ಶೇ.85ರಷ್ಟು ಜನರು ಅನಕ್ಷರಸ್ಥರಾಗಿದ್ದರು. ಸುಮಾರು 40 ಕೋಟಿ ಜನಸಂಖ್ಯೆಯಲ್ಲಿ ಕೇವಲ ಶೇ.15ರಷ್ಟು ಜನರಿಗೆ ಒಂದು ಭಾಷೆಯಲ್ಲಿ ಓದಲು ಮತ್ತು ಬರೆಯಲು ತಿಳಿದಿತ್ತು.
ಅಭ್ಯರ್ಥಿಗಳು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷಗಳ ಹೆಸರನ್ನು ಮುದ್ರಿಸುವುದರಿಂದ ಮತದಾರರಿಗೆ ಏನೂ ತಿಳಿಯುವ ಹಾಗಿರಲಿಲ್ಲ. ತಮ್ಮ ಆದ್ಯತೆಯ ಅಭ್ಯರ್ಥಿ ಅಥವಾ ಪಕ್ಷವನ್ನು ಅವರು ನಿರ್ಧರಿಸುವುದಕ್ಕೆ ಅನಕ್ಷರಸ್ಥ ಬಹುಪಾಲು ಜನರಿಗೆ ಅನುಕೂಲವಾಗುವಂತೆ ಏನು ಮಾಡುವುದು ಎಂಬ ಪ್ರಶ್ನೆ ಎದ್ದಿತು.
ಆಗಲೇ, ಸುಕುಮಾರ್ ಸೇನ್ ನೇತೃತ್ವದ ಚುನಾವಣಾ ಆಯೋಗ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸಲು ಚಿಹ್ನೆಗಳನ್ನು ಮುದ್ರಿಸುವ ನಿರ್ಧಾರಕ್ಕೆ ಬಂದದ್ದು.
ಆಗ ಜವಾಹರಲಾಲ್ ನೆಹರೂ ನಾಯಕತ್ವದ ಕಾಂಗ್ರೆಸ್, ನೊಗ ಹೊತ್ತ ಎತ್ತುಗಳ ಜೋಡಿಯನ್ನು ಚುನಾವಣಾ ಚಿಹ್ನೆಯಾಗಿ ಪಡೆಯಿತು.
ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವ ವಹಿಸಿದ್ದ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಕೈ ಚಿಹ್ನೆಯ ಮೇಲೆ ಮೊದಲ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿತು. ಈಗ ಆ ಚಿಹ್ನೆ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದೆ.
ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಇನ್ನೂ ಪ್ರಯಾಸದ ಕೆಲಸವಾಗಿತ್ತು.
ಅದಕ್ಕಾಗಿ ಆಯೋಗವು ಆರು ತಿಂಗಳ ಕಾಲ 16,500 ಗುಮಾಸ್ತರನ್ನು ನೇಮಿಸಿತ್ತು.
ಚುನಾವಣಾ ಆಯೋಗದ ಪ್ರತಿನಿಧಿಗಳು ಹೆಸರು, ವಯಸ್ಸು, ಲಿಂಗ ಇತ್ಯಾದಿ ಚುನಾವಣಾ ಮಾಹಿತಿಗಳನ್ನು ಸಂಗ್ರಹಿಸಲು ಗ್ರಾಮಗಳಿಗೆ ಭೇಟಿ ನೀಡಿದಾಗ, ಹೆಚ್ಚಿನ ಸಂಖ್ಯೆಯ ಮಹಿಳೆಯರು ತಮ್ಮ ಹೆಸರನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಲು ನಿರಾಕರಿಸಿದ್ದರು.
ಅವರು ತಮ್ಮನ್ನು ಯಾರೊಬ್ಬರ ಹೆಂಡತಿ, ತಾಯಿ, ಮಗಳು, ಸಹೋದರಿ ಅಥವಾ ವಿಧವೆ ಎಂದು ಹೇಳಿಕೊಂಡರೂ, ತಮ್ಮ ಹೆಸರನ್ನು ಹೇಳಲು ಒಪ್ಪುತ್ತಿರಲಿಲ್ಲ.
ಹೀಗೆ ತಮ್ಮ ಹೆಸರು ಹೇಳಿಕೊಂಡಿರದ ಕಾರಣದಿಂದ ಮೊದಲ ಚುನಾವಣೆಯಲ್ಲಿ 28 ಲಕ್ಷ ಹೆಸರುಗಳನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕಾಯಿತು.
ಬ್ರಿಟಿಷರ ಆಳ್ವಿಕೆಯಲ್ಲಿಯೇ ಭಾರತದಲ್ಲಿ ಚುನಾವಣೆ ನಡೆದಿತ್ತಾದರೂ, ಅದು ಆಯ್ದ ಕೆಲವರಿಗೆ ಮಾತ್ರ ಸೀಮಿತವಾಗಿತ್ತು.
1951-52ರಲ್ಲಿ ಮತದಾನ ಸಾರ್ವತ್ರಿಕವಾಗಿತ್ತು. ಹೀಗಾಗಿ ರಾಜಕೀಯ ಪಕ್ಷಗಳಿಗೂ ಚುನಾವಣಾ ಪ್ರಚಾರವನ್ನು ಹೇಗೆ ಮಾಡಬೇಕೆಂಬ ಸವಾಲು ಎದುರಾಗಿತ್ತು.
ಕೆಲವು ನಾಯಕರು, ವಿಶೇಷವಾಗಿ ನೆಹರೂ ಅವರಂಥವರು ಸಾರ್ವಜನಿಕ ರ್ಯಾಲಿಗಳನ್ನು ನಡೆಸಿದರು. ಇತರರು ಮತ ಕೇಳಲು ಮನೆಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದರು.
ಕೋಲ್ಕತಾದ ರಸ್ತೆಗಳಲ್ಲಿ ಬೆನ್ನಿನ ಮೇಲೆ, ತಮಗೆ ಮತ ಕೊಡಿ ಎಂದು ಬರೆಯಲಾಗಿದ್ದ ಹಸುಗಳು ಓಡಾಡುತ್ತಿದ್ದ ದೃಶ್ಯಗಳು ಕಾಣಿಸಿದ್ದ ತಮಾಷೆಯ ಸನ್ನಿವೇಶಗಳೂ ಇದ್ದವು.
ಮೊದಲ ಲೋಕಸಭೆಗೆ ನಾಲ್ಕು ತಿಂಗಳ ಅವಧಿಯಲ್ಲಿ 68 ಹಂತಗಳಲ್ಲಿ ಚುನಾವಣೆ ನಡೆಯಿತು. ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಮೊದಲ ಭಾರತೀಯರು ಹಿಮಾಚಲ ಪ್ರದೇಶದ ಚಿನಿ ತೆಹಸಿಲ್ (ಈಗಿನ ಕಿನ್ನೌರ್ ಜಿಲ್ಲೆ)ನಲ್ಲಿ ವಾಸಿಸುವ ಬೌದ್ಧರು.
ಚಳಿಗಾಲದ ಹಿಮಪಾತವನ್ನು ತಪ್ಪಿಸಲು ಅಕ್ಟೋಬರ್ 25, 1951ರಂದು ಇಲ್ಲಿ ಚುನಾವಣೆ ನಡೆಸಲಾಯಿತು.
ಮಾರನೇ ವರ್ಷ ಜನವರಿ ಮತ್ತು ಫೆಬ್ರವರಿಯಲ್ಲಿ 3,80,000 ರೀಮ್ ಪೇಪರ್ಗಳಲ್ಲಿ ಮುದ್ರಿಸಲಾದ ಮತದಾರರ ಪಟ್ಟಿಯನ್ನು ಆಧರಿಸಿ ಭಾರತದ ಉಳಿದ ಭಾಗಗಳಲ್ಲಿ ಮತ ಚಲಾವಣೆ ನಡೆಯಿತು.
ಮೊದಲ ಲೋಕಸಭಾ ಚುನಾವಣೆಯ ವೆಚ್ಚ ಪ್ರತೀ ಮತದಾರರಿಗೆ 60 ಪೈಸೆ.
2019ರ ಲೋಕಸಭೆ ಚುನಾವಣೆಯಲ್ಲಿ ಇದು 72 ರೂ.ಗೆ ಏರಿತ್ತು.
ಮತಪತ್ರಗಳಲ್ಲಿ ಚಲಾವಣೆಯಾದ ಮತಗಳನ್ನು ಸಂಗ್ರಹಿಸಲು ಸುಮಾರು 20 ಲಕ್ಷ ಮತಪೆಟ್ಟಿಗೆಗಳನ್ನು ಬಳಸಲಾಗಿತ್ತು.
ಆಗ ಕೂಡ ಭದ್ರತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಮತಪೆಟ್ಟಿಗೆಗಳನ್ನು ಬುಲೆಟ್ ಪ್ರೂಫ್ ಮಾಡಲಾಗಿತ್ತು.
ಆ ಪೆಟ್ಟಿಗೆಗಳನ್ನು ತಯಾರಿಸಲು ಅಂದಾಜು 8,200 ಟನ್ ಉಕ್ಕನ್ನು ಬಳಸಲಾಗಿತ್ತು.
ಪುನರಾವರ್ತಿತ ಮತದಾರರನ್ನು ಗುರುತಿಸಲು ಮತ್ತು ಮತ್ತೆ ಮತದಾನ ಮಾಡದಂತೆ ತಡೆಯಲು ಬೆರಳಿಗೆ ಶಾಯಿ ಹಾಕುವ ಕ್ರಮ ಮೊದಲ ಚುನಾವಣೆಯಿಂದಲೇ ಶುರುವಾಯಿತು ಎಂಬುದು ಗಮನಾರ್ಹ.
ಭಾರತೀಯ ವಿಜ್ಞಾನಿಗಳು ವಿಶೇಷವಾಗಿ ಅಭಿವೃದ್ಧಿಪಡಿಸಿದ ಅಳಿಸಲಾಗದ ಶಾಯಿಯನ್ನು ಬಳಸಲಾಯಿತು.
ಗುರುತು ಹಾಕಿದ ಬೆರಳಿನ ಮೇಲೆ ಶಾಯಿ ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ.
489 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 364 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ನೆಹರೂ ಭಾರತದ ಮೊದಲ ಪ್ರಧಾನಿಯಾದರು.
ಮೊದಲ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಪ್ರಮುಖರೆಂದರೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್.
ಅವರು ಉತ್ತರ ಮಧ್ಯ ಬಾಂಬೆಯ ಎಸ್ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದರು.
1954ರಲ್ಲಿ ಭಂಡಾರಾ ಕ್ಷೇತ್ರದಿಂದ ಲೋಕಸಭೆಯ ಉಪಚುನಾವಣೆಯಲ್ಲಿಯೂ ಅಂಬೇಡ್ಕರ್ ಸೋತರು.
ಆದರೆ ಆ ಹೊತ್ತಿಗೆ ಅವರು ರಾಜ್ಯಸಭೆಯ ಸದಸ್ಯರಾಗಿದ್ದರು.
ಸಂಸತ್ತಿನ ದಾಖಲೆಗಳ ಪ್ರಕಾರ, ಮೊದಲ ನೇರ ಚುನಾಯಿತ ಲೋಕಸಭೆ ಅನುಭವಿಗಳ ಜೊತೆ ಹೊಸಬರನ್ನೂ ಹೊಂದಿತ್ತು. ಶೇ.45ರಷ್ಟು ಸಂಸದರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಶೇ.35ರಷ್ಟು ಸಂಸದರು ವಕೀಲರು ಮತ್ತು ಶೇ.22ರಷ್ಟು ಸಂಸದರು ತಮ್ಮನ್ನು ಕೃಷಿಕರು ಎಂದು ಗುರುತಿಸಿಕೊಂಡಿದ್ದರು.
ಹೊಸದಾಗಿ ಚುನಾಯಿತವಾದ ಸದನ ತನ್ನದೇ ಆದ ನಿಯಮಗಳನ್ನು ಹೊಂದಿರಲಿಲ್ಲ. ಆದ್ದರಿಂದ, ಸ್ಪೀಕರ್ ಮಾವಲಂಕರ್ ಅವರು ಶಾಸಕಾಂಗದ ಕಾರ್ಯವಿಧಾನಗಳನ್ನು ಮಾರ್ಪಡಿಸಿ ಅಳವಡಿಸಿದರು.
ಸದನಗಳನ್ನು ‘ಹೌಸ್ ಆಫ್ ದಿ ಪೀಪಲ್’ ಮತ್ತು ‘ಕೌನ್ಸಿಲ್ ಆಫ್ ಸ್ಟೇಟ್ಸ್’ ಎಂದು ಇಂಗ್ಲಿಷ್ ಹೆಸರುಗಳಿಂದ ಉಲ್ಲೇಖಿಸುವುದನ್ನು ನಿಲ್ಲಿಸಲಾಯಿತು.
1954ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಪದಗಳು ಬಳಕೆಗೆ ಬಂದವು.
ಸಂವಿಧಾನ ರಚನಾ ಸಮಿತಿ ಅಧ್ಯಕ್ಷ ಡಾ. ಬಿ.ಆರ್.ಅಂಬೇಡ್ಕರ್, ಮಾಜಿ ಕಾನೂನು ಸಚಿವ ಶರತ್ ಚಂದ್ರ ಬೋಸ್, ಕರಡು ಸಮಿತಿಯ ಸದಸ್ಯ ಕನೈಯ್ಯಲಾಲ್ ಮಾಣಿಕ್ಲಾಲ್ ಮುನ್ಷಿ ಮತ್ತು ಮಾಜಿ ಉಪ ಪ್ರಧಾನಿ ವಲ್ಲಭಭಾಯಿ ಪಟೇಲ್ ಅವರು ಸೆಂಟ್ರಲ್ ಹಾಲ್ನಲ್ಲಿ ದಾಖಲೆಗೆ ಸಹಿ ಹಾಕಿದರು.
ಹೊಸ ಗಣರಾಜ್ಯಕ್ಕೆ ಅದು ಎದುರಿಸುವ ವಿಭಿನ್ನ ಸವಾಲುಗಳಿಗೆ ಕಾನೂನುಗಳು ಬೇಕಿದ್ದವು.
ಮೊದಲ ಎರಡೂ ಲೋಕಸಭೆಗಳು 10 ವರ್ಷಗಳಲ್ಲಿ ಸುಮಾರು 700 ಕಾನೂನುಗಳನ್ನು ಅಂಗೀಕರಿಸಿದವು.
ಎರಡನೇ ಲೋಕಸಭೆಯ ಅವಧಿಯಲ್ಲಿ ವರದಕ್ಷಿಣೆ ನಿಷೇಧ ಮಸೂದೆಯ ನಿಬಂಧನೆಗಳ ಬಗ್ಗೆ ಉಭಯ ಸದನಗಳು ಭಿನ್ನಾಭಿಪ್ರಾಯ ಹೊಂದಿದ್ದವು.
ಈ ಬಿಕ್ಕಟ್ಟು ಉಭಯ ಸದನಗಳ ಮೊದಲ ಜಂಟಿ ಅಧಿವೇಶನಕ್ಕೆ ಕಾರಣವಾಯಿತು.
ಸಂಸತ್ತಿನ ಮೊದಲ ಹತ್ತು ವರ್ಷಗಳಲ್ಲಿ ಉಭಯ ಸದನಗಳಲ್ಲಿ ಚರ್ಚೆ ಹೆಚ್ಚು ವಿಶಿಷ್ಟವಾದುದಾಗಿತ್ತು.
ಲೋಕಸಭೆಯ ಮೊದಲ ಎರಡು ಅವಧಿಗಳಲ್ಲಿ ಹಲವಾರು ಅಂತರ್ರಾಷ್ಟ್ರೀಯ ಗಣ್ಯರು ಸೆಂಟ್ರಲ್ ಹಾಲ್ನಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ್ದರು.
ಅಂಥವರಲ್ಲಿ ಮೊದಲಿಗರಾಗಿದ್ದವರು 1953ರಲ್ಲಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದ ಅಂದಿನ ಅಮೆರಿಕ ಉಪಾಧ್ಯಕ್ಷ ರಿಚರ್ಡ್ ನಿಕ್ಸನ್.
ಸಂಸತ್ತಿನ ಮೊದಲ ದಶಕವು ಭವಿಷ್ಯದ ಲೋಕಸಭೆಗಳಿಗೆ ದೊಡ್ಡ ಮಾದರಿಯನ್ನು ನಿರ್ಮಿಸಿತ್ತು.
ಅಂದು ಪ್ರಸ್ತಾಪಿಸಲಾಗಿದ್ದ ಕೆಲವು ವಿಚಾರಗಳು 70 ವರ್ಷಗಳ ನಂತರವೂ ಮುಖ್ಯವಾಗಿಯೇ ಉಳಿದಿವೆ.