ಸಿಕ್ಕಸಿಕ್ಕವರನ್ನೆಲ್ಲಾ ಪರಚುತ್ತಿದೆ ಹುಲಿ ಉಗುರು...!

Update: 2023-10-30 06:25 GMT

ಯಾರೋ ನಿರೀಕ್ಷಿಸದ ಬೆಳವಣಿಗೆಯಂತೆ ರಾಜ್ಯದಲ್ಲಿ ಹುಲಿಯ ಉಗುರಿಗೆ ಕೆಲವು ಪ್ರಮುಖ ದೊಡ್ಡತಲೆಗಳು ನಡುಗಲು ಆರಂಭಿಸಿವೆ. ಇದುವರೆಗೆ ಹಾಯಾಗಿ ಮಲಗಿ ನಿದ್ರೆ ಮಾಡುತ್ತಿದ್ದ ರಾಜ್ಯ ಅರಣ್ಯ ಇಲಾಖೆಯು ದಿಢೀರ್ ಎಚ್ಚೆತ್ತು ರೋಷಾವೇಶದಿಂದ ಬಿಗ್ ಬಾಸ್ ಮನೆಗೆ ನುಗ್ಗಿ ಶೋಕಿ ಮತ್ತು ಸೆಗಣಿ ಎರಡು ಬಾಚೋದಕ್ಕು ನಾನು ಸಿದ್ಧ ಎನ್ನುತ್ತಿದ್ದ ಒಬ್ಬ ಸ್ಪರ್ಧಿಯನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದೆ. ಇಷ್ಟಕ್ಕೆ ಎಲ್ಲ ಮುಗೀತು ಎನ್ನುವ ಸಂದರ್ಭದಲ್ಲಿ ರಾಜ್ಯದ ಹತ್ತು ಹಲವಾರು ಸೆಲೆಬ್ರಿಟಿಗಳು ಬೆವರಲು ಆರಂಭಿಸಿದ್ದಾರೆ. ಈ ರೀಲ್ ಹುಲಿಗಳು ರಿಯಲ್ ಹುಲಿಯ ಉಗುರನ್ನು ಶೋಕಿಗಾಗಿ ಅಥವಾ ಇನ್ಯಾವುದೋ ಕಾರಣಕ್ಕಾಗಿ ಕುತ್ತಿಗೆಗೆ ಮತ್ತು ಕೈಗೆ ಹಾಕಿಕೊಂಡು ಮೆರೆಯುತ್ತಿದ್ದ ಮಂದಿ ಅರಣ್ಯ ಇಲಾಖೆ ನೀಡಿದ ಒಂದು ಬಿಗ್ ಶಾಕ್‌ಗೆ ಏನು ಮಾಡಲೂ ತೋಚದೆ ಬೋನಿಗೆ ಬೀಳುತ್ತಿದ್ದಾರೆ. ಇನ್ನು ಕೆಲವರು ಈಗ ದೇವರಾಣೆ, ತಾಯಾಣೆ ಹಾಕಿಕೊಂಡು ಅಷ್ಟು ವರ್ಷ ಹಳೆಯದು ಮತ್ತು ಇಷ್ಟು ವರ್ಷ ಹಳೆಯದು, ನಕಲಿ ಎಂದು ಕಥೆ ಹೇಳುತ್ತಾ ತಿಪ್ಪೆ ಸಾರಿಸುತ್ತಿದ್ದಾರೆ. ಈ ಎಲ್ಲಾ ಸೆಲೆಬ್ರಿಟಿಗಳು ಸಮಾಜದ ಮಾದರಿ ವ್ಯಕ್ತಿಗಳಾಗಬೇಕಾದವರು. ಇಂದು ರೀಲ್ ಜೀವನಕ್ಕೂ ರಿಯಲ್ ಜೀವನಕ್ಕೂ ವ್ಯತ್ಯಾಸ ಗೊತ್ತಿಲ್ಲದೆ ಬೆತ್ತಲಾಗಿದ್ದಾರೆ.

ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದ ಕೆಲವು ದೇಶಗಳಲ್ಲಿ ಕಾಡುಪ್ರಾಣಿಗಳ ಉಗುರು, ಬಾಲ ಮುಂತಾದ ವಸ್ತುಗಳನ್ನು ಧರಿಸಿಕೊಂಡು ಶೋಕಿ ಮಾಡುವ ಬಹಳಷ್ಟು ಜನರಿದ್ದಾರೆ. ಕೆಲವರು ಧಾರ್ಮಿಕ ಕಾರಣವನ್ನು ನೀಡಿದರೆ ಇನ್ನು ಕೆಲವರು ತಮ್ಮ ಶ್ರೀಮಂತಿಕೆ, ಅಸ್ಮಿತೆ ಮತ್ತು ಗತ್ತಿನ ಕಾರಣಗಳಿಂದ ಹುಲಿ ಉಗುರಿನ ಪೆಂಡೆಂಟ್‌ಗಳು, ಕರಡಿಯ ಅಥವಾ ಆನೆಯ ಬಾಲದಿಂದ ಮಾಡಿದ ಉಂಗುರಗಳು ಇತ್ಯಾದಿಗಳನ್ನು ಧರಿಸಿಕೊಂಡು ಮೆರೆಯುತ್ತಿರುತ್ತಾರೆ. ಬಹಳಷ್ಟು ಮಂದಿ ಟಿವಿ ಚಾನೆಲ್‌ಗಳಲ್ಲಿ ಇದು ನಿಜವಾದ ಹುಲಿಯ ಉಗುರು ಎಂದು ಹೇಳಿಕೆ ಕೊಟ್ಟಾಗ ಸುಮ್ಮನಿದ್ದ ಅರಣ್ಯ ಇಲಾಖೆ ಇಂದು ಮೈಚಳಿಬಿಟ್ಟು ಕೆಲಸ ಮಾಡಲು ಆರಂಭಿಸಿದೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಇನ್ನೂ ಹಲವು ರಾಜಕಾರಣಿಗಳು, ಮಠಾಧಿಪತಿಗಳು ಮತ್ತು ಸೆಲೆಬ್ರಿಟಿಗಳಿಗೆ ಈ ಹುಲಿಯ ಉಗುರು ಪರಚುವುದು ಖಂಡಿತ ಎನ್ನುತ್ತಾರೆ ರಾಜಕೀಯ ಪಂಡಿತರು.

ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಕಾಯ್ದೆ ಸಾಕಷ್ಟು ಇದ್ದರೂ ಅದರ ಬಳಕೆ ಮತ್ತು ಪ್ರಭಾವ ಬಹಳಷ್ಟು ಮಂದಿಗೆ ಅರಿವಿಲ್ಲ. ಏಕೆಂದರೆ ಇದು ಸಾಮಾನ್ಯ ಕ್ರಿಮಿನಲ್ ಪ್ರಕರಣಗಳಂತೆ ಹೆಚ್ಚು ಸದ್ದು ಮಾಡುವುದು ಬಹಳ ಅಪರೂಪ. ಆದರೆ ಈ ಸಲ ಮಾತ್ರ ಈ ಪ್ರಕರಣ ಯಾಕೋ ವಿಭಿನ್ನ ರೀತಿಯಲ್ಲಿ ಸದ್ದು ಮಾಡುತ್ತಿದೆ. ಭಾರತದಲ್ಲಿ 1972ರ ವರೆಗೆ ಯಾವುದೇ ಬಿಗಿಯಾದ ವನ್ಯಜೀವಿ ಸಂರಕ್ಷಣೆ ಕಾಯ್ದೆಗಳು ಇರಲಿಲ್ಲ. 1968ರಲ್ಲಿ ಅಂದಿನ ಕೇಂದ್ರ ಸರಕಾರ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಧಾರ್ಮಿಕ ಮತ್ತಿತರ ಕಾರಣಗಳಿಂದ ಯಾವುದಾದರೂ ವನ್ಯಜೀವಿಯ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡಿದ್ದರೆ ಅದನ್ನು ಇಲಾಖೆಯ ಗಮನಕ್ಕೆ ತಂದು ಸಕಾರಣವನ್ನು ನೀಡಿ ಸಕ್ರಮ ಗಳಿಸಿಕೊಳ್ಳುವ ಅವಕಾಶ ಮಾಡಿಕೊಟ್ಟಿತ್ತು. 1972ರ ಹೊಸ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಯಾವುದೇ ರೀತಿಯ ವನ್ಯಜೀವಿಗಳ ವಸ್ತುಗಳನ್ನು, ಅಂಗಾಂಗಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಒಂದೊಮ್ಮೆ ತಲೆತಲಾಂತರಗಳಿಂದ ಮತ್ತು ಪಾರಂಪರಿಕವಾಗಿ ಆ ವಸ್ತುಗಳು ಬಂದಿದ್ದರೆ ಅದನ್ನು ತಕ್ಷಣಕ್ಕೆ ಹತ್ತಿರದ ಅರಣ್ಯ ಇಲಾಖೆಗೆ ತಲುಪಿಸಿ ಸ್ವೀಕೃತಿ ಪತ್ರವನ್ನು ಪಡೆಯಬೇಕಾಗುತ್ತದೆ. ಒಂದೊಮ್ಮೆ ಕಳ್ಳ ಮಾರ್ಗದಿಂದ ಅವುಗಳನ್ನು ಸಂಪಾದಿಸಿ ಕೊನೆಗೆ ಸರಕಾರಕ್ಕೆ ಅದನ್ನು ಹಿಂದಿರುಗಿಸಿದರೆ ಆಗಲೂ ಶಿಕ್ಷೆ ಖಂಡಿತ. ಕಾನೂನು ಬದ್ಧವಾಗಿ ಅಂತಹ ವಸ್ತುಗಳನ್ನು ಸರಕಾರಕ್ಕೆ ಹಿಂದಿರುಗಿಸಿದರೆ ಅದಕ್ಕೆ ಯಾವುದೇ ರೀತಿ ಪರಿಹಾರವನ್ನು ಸರಕಾರ ನೀಡುವುದಿಲ್ಲ. ಪ್ರಾಣಿಗಳಿಂದ ಸಂಗ್ರಹಿಸಿದ ಭಾಗ ಮತ್ತು ಆ ಪ್ರಾಣಿ ನಶಿಸುವ ಹಂತದಲ್ಲಿ ಇದೆಯೇ ಅಥವಾ ಇಲ್ಲವೇ ಎನ್ನುವ ಆಧಾರದ ಮೇಲೆ ಸಂಬಂಧಪಟ್ಟ ವ್ಯಕ್ತಿಗಳಿಗೆ ನ್ಯಾಯಾಲಯದಿಂದ ಶಿಕ್ಷೆ ಆಗುತ್ತದೆ. ಯಾರಾದರೂ ಅಂತಹ ವಸ್ತುಗಳನ್ನು ಇಟ್ಟುಕೊಂಡಿದ್ದರೆ ಅರಣ್ಯ ಇಲಾಖೆಯ ನೋಟಿಸ್ ನೀಡಿದ ಏಳು ದಿನದ ಒಳಗೆ ಅದನ್ನು ಇಲಾಖೆಗೆ ಹಿಂದಿರುಗಿಸಬೇಕಾಗುತ್ತದೆ.

1972ರಲ್ಲಿ ದೇಶದ ಮೊದಲ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ತರುವುದರ ಮೂಲಕ ವನ್ಯಜೀವಿಗಳ ಸಂರಕ್ಷಣೆ, ಬೇಟೆಯನ್ನು ತಡೆಗಟ್ಟುವುದು, ವನ್ಯಜೀವಿ ದೇಹದ ಭಾಗವನ್ನು ಕಾನೂನುಬಾಹಿರವಾಗಿ ಸಾಗಣೆ ಮಾಡುವುದು ಮುಂತಾದವುಗಳನ್ನು ನಿಷೇಧಿಸಲಾಯಿತು. ಮುಂದೆ 1973ರಲ್ಲಿ ಕೇಂದ್ರ ಸರಕಾರವು ‘ಪ್ರಾಜೆಕ್ಟ್ ಟೈಗರ್’ ಯೋಜನೆ ಆರಂಭಿಸಿತು. ಇದರ ಮೂಲಕ ಹುಲಿಗಳು ಹೆಚ್ಚಾಗಿ ವಾಸಿಸುವ ಅರಣ್ಯ ಪ್ರದೇಶಗಳನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿ ಹುಲಿಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕ್ರಮಗಳಿಗೆ ಗಮನ ನೀಡಲಾಯಿತು. ಭಾರತದಲ್ಲಿ ಹುಲಿಗಳು ಅಳಿವಿನಂಚಿನಲ್ಲಿರುವ ಜಾತಿಗಳಾಗಿವೆ ಮತ್ತು ಆವಾಸ ಸ್ಥಾನದ ನಷ್ಟ ಮತ್ತು ಬೇಟೆಯಾಡುವಿಕೆಯಿಂದಾಗಿ ಅವುಗಳ ಸಂಖ್ಯೆಯು ನಿಧಾನವಾಗಿ ಕ್ಷೀಣಿಸುತ್ತಿದೆ.

ಹುಲಿ ಉಗುರುಗಳನ್ನು ಒಳಗೊಂಡಂತೆ ಅದರ ದೇಹದ ವಿವಿಧ ಭಾಗಗಳ ಅಂಗಾಂಗಗಳಿಗೆ ವಿಶ್ವದಲ್ಲಿ ಬಹು ಬೇಡಿಕೆ ಇದೆ. ಏಕೆಂದರೆ ಏಶ್ಯದ ಕೆಲವು ದೇಶಗಳಲ್ಲಿ ಹುಲಿಯ ದೇಹದ ಭಾಗಗಳು ಸಾಂಸ್ಕೃತಿಕ, ಸಾಂಪ್ರದಾಯಿಕ ಅಥವಾ ಔಷಧೀಯ ಮೌಲ್ಯವನ್ನು ಹೊಂದಿವೆ. ಕೆಲವು ಏಶ್ಯನ್ ಸಂಸ್ಕೃತಿಗಳಲ್ಲಿ, ಹುಲಿ ಉಗುರುಗಳು ಮತ್ತು ಅದರ ಇತರ ಭಾಗಗಳು ಅತೀಂದ್ರಿಯ ಔಷಧೀಯ ಗುಣಗಳನ್ನು ಹೊಂದಿವೆ ಎಂದು ನಂಬಲಾಗಿದೆ. ಕೆಲವೆಡೆ ಅವುಗಳನ್ನು ಸಾಂಪ್ರದಾಯಿಕ ಅಗೋಚರ ಶಕ್ತಿ ಪರಿಹಾರಕ್ಕೆ ಮತ್ತು ತಾಯತಗಳಾಗಿ ಸಹ ಬಳಸಲಾಗುತ್ತದೆ. ಹುಲಿ ಉಗುರುಗಳ ಅಕ್ರಮ ವ್ಯಾಪಾರವು ಇಂದು ವಿಶಾಲವಾದ ಕಪ್ಪು ಮಾರುಕಟ್ಟೆಯ ಒಂದು ಭಾಗವಾಗಿದೆ. ಕಳ್ಳ ಬೇಟೆಗಾರರು ಉಗುರುಗಳು, ಚರ್ಮ, ಮೂಳೆಗಳು ಮತ್ತು ದೇಹದ ಇತರ ಭಾಗಗಳಿಗಾಗಿ ಹುಲಿಗಳನ್ನು ಕೊಂದು ನಂತರ ಅವುಗಳನ್ನು ಕಪ್ಪು ಮಾರುಕಟ್ಟೆಯಲ್ಲಿ ಕೋಟ್ಯಂತರ ಹಣಕ್ಕೆ ಮಾರಾಟ ಮಾಡುತ್ತಾರೆ. ಪ್ರಾಣಿಗಳ ಭಾಗಗಳನ್ನು ಗ್ರಾಹಕರು ಮತ್ತು ಮಾರುಕಟ್ಟೆಗಳನ್ನು ತಲುಪಲು ಕಳ್ಳಸಾಗಣೆದಾರರು ಅವುಗಳನ್ನು ರಾಜ್ಯ ಮತ್ತು ದೇಶದ ಗಡಿಯುದ್ದಕ್ಕೂ ಕಳ್ಳಸಾಗಣೆ ಮಾಡುತ್ತಾರೆ. ಇದು ಅನೇಕ ದೇಶಗಳಲ್ಲಿ ವ್ಯಾಪಿಸಿರುವ ದೊಡ್ಡ ಸಂಕೀರ್ಣ ಜಾಲ. ಬೇಡಿಕೆಯನ್ನು ಪೂರೈಸಲು, ನಿರ್ದಿಷ್ಟವಾಗಿ ವಿವಿಧ ಉದ್ದೇಶಗಳಿಗಾಗಿ ಈ ಉತ್ಪನ್ನಗಳು ಹೆಚ್ಚು ಬೇಡಿಕೆಯಿರುವ ಪ್ರದೇಶಗಳಲ್ಲಿ, ಭೌತಿಕವಾಗಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ ಎನ್ನುತ್ತವೆ ಯುನೆಸ್ಕೋ ವರದಿಗಳು.

ಅಕ್ರಮ ವ್ಯಾಪಾರಕ್ಕೆ ಇನ್ನೊಂದು ಪರ್ಯಾಯ ಮೂಲವೆಂದರೆ ಹುಲಿ ಸಾಕಣೆ ಕೇಂದ್ರಗಳಲ್ಲಿರುವ ಬಂಧಿತ ಹುಲಿಗಳು. ಇಂದು ಪ್ರಾಣಿ ಸಂಗ್ರಹಾಲಯಗಳು ಸಾರ್ವಜನಿಕರಿಗೆ ತೆರೆದಿರುವ ದೊಡ್ಡ ಆಕರ್ಷಣೆಗಳು. ಆದರೆ ಇಂತಹ ಕೇಂದ್ರಗಳಲ್ಲಿ ಕಳಪೆ ನಿಯಮಗಳು ಮತ್ತು ದುರ್ಬಲ ಕಾನೂನು ಜಾರಿ ಕಳ್ಳ ಸಾಗಣೆದಾರರಿಗೆ ವರವಾಗಿದೆ. ಹುಲಿಗಳನ್ನು ಅಥವಾ ಅವುಗಳ ಭಾಗಗಳು ಮತ್ತು ಉತ್ಪನ್ನಗಳನ್ನು ಇಂತಹ ಕೇಂದ್ರಗಳಿಂದ ಹೊರಗೆ ಸಾಗಿಸಲು ಒಳಗಿನವರೆ ಅನುಕೂಲ ಮಾಡಿಕೊಡುತ್ತಾರೆ. ವರದಿಗಳ ಪ್ರಕಾರ ಸುಮಾರು 8,900 ಹುಲಿಗಳನ್ನು ಏಶ್ಯದಾದ್ಯಂತ 300 ಕ್ಕೂ ಹೆಚ್ಚು ಬಂಧಿತ ಸೌಲಭ್ಯಗಳಲ್ಲಿ ಇರಿಸಲಾಗಿದೆ. ಹೆಚ್ಚಾಗಿ ಚೀನಾ, ಭಾರತ, ಥಾಯ್ಲೆಂಡ್ ಮತ್ತು ವಿಯೆಟ್ನಾಂನಲ್ಲಿ ಹುಲಿಗಳು ಸೆರೆಯಲ್ಲಿವೆ ಎಂದು ದಾಖಲಿಸಲಾಗಿದೆ. ಯುರೋಪ್ ಮತ್ತು ಅಮೆರಿಕಗಳಲ್ಲಿ ಸಾಕಷ್ಟು ಕಾನೂನು ಜಾರಿ ಮತ್ತು ನಿಯಂತ್ರಣಗಳ ಕಾರಣದಿಂದಾಗಿ ಅಕ್ರಮ ಹುಲಿ ವ್ಯಾಪಾರಕ್ಕೆ ತಡೆಬಿದ್ದಿದೆ ಎನ್ನಬಹುದು. ಆದರೆ ಸಂಪೂರ್ಣ ನಿಂತಿಲ್ಲ.

ಅಕ್ರಮ ಸಾಗಣೆ ಸಾಮಾನ್ಯವಾಗಿ ವನ್ಯಜೀವಿ ಪ್ರಭೇದಗಳ ಉಪಸ್ಥಿತಿಯನ್ನು ಅವಲಂಬಿಸಿದೆ. ದೇಶದ ಕೆಲವು ಪ್ರದೇಶಗಳಲ್ಲಿ, ಪರ್ಯಾಯ ಜೀವನೋಪಾಯದ ಕೊರತೆಯಿಂದಾಗಿ ಕೆಲವು ಸ್ಥಳೀಯ ಸಮುದಾಯಗಳು ಕಳ್ಳಬೇಟೆ ಮತ್ತು ಕಳ್ಳಸಾಗಣೆಯಲ್ಲಿ ತೊಡಗಿವೆ. ಇಂತಹ ವ್ಯಾಪಾರದಿಂದ ಉತ್ಪತ್ತಿಯಾಗುವ ಆದಾಯವನ್ನು ಜೀವನದ ಉಳಿವಿನ ಮೂಲವಾಗಿ ಅವರು ಕಾಣುತ್ತಾರೆ. ತಜ್ಞರ ಪ್ರಕಾರ ಅಕ್ರಮ ವನ್ಯಜೀವಿ ವ್ಯಾಪಾರವು ವನ್ಯಜೀವಿ ಜನಸಂಖ್ಯೆಯ ನಾಶಕ್ಕೆ ಕಾರಣವಾಗಬಹುದು, ಇದು ದೀರ್ಘಾವಧಿಯಲ್ಲಿ ಋಣಾತ್ಮಕ ಆರ್ಥಿಕ ಪರಿಣಾಮಗಳನ್ನು ಸಹ ಉಂಟುಮಾಡಬಹುದು. ಕ್ಷೀಣಿಸಿದ ಜೀವವೈವಿಧ್ಯತೆಯು ಪರಿಸರ ವ್ಯವಸ್ಥೆಗಳನ್ನು ಅಡ್ಡಿಪಡಿಸಬಹುದು ಮತ್ತು ಪ್ರವಾಸೋದ್ಯಮಕ್ಕೆ ಹಾನಿಯುಂಟುಮಾಡಬಹುದು. ಅಕ್ರಮ ವನ್ಯಜೀವಿ ವ್ಯಾಪಾರಕ್ಕೆ ಸಂಬಂಧಿಸಿದ ಆರ್ಥಿಕ ನಷ್ಟಗಳು ವನ್ಯಜೀವಿ ಪ್ರವಾಸೋದ್ಯಮವನ್ನೇ ನಂಬಿರುವ ದೇಶಗಳಿಗೆ ಕ್ರಮೇಣ ವಿಸ್ತರಿಸುತ್ತವೆ. ಕಡಿಮೆಯಾದ ಪ್ರವಾಸೋದ್ಯಮ ಆದಾಯ, ಪರಿಸರ ಹಾನಿ ಮತ್ತು ಹೆಚ್ಚಿದ ಕಾನೂನು ಜಾರಿ ವೆಚ್ಚಗಳು ಆ ದೇಶದ ಆರ್ಥಿಕ ದುಷ್ಪರಿಣಾಮಗಳನ್ನು ಹೆಚ್ಚು ಮಾಡುತ್ತವೆ. ಕೆಲವು ದೇಶಗಳಲ್ಲಿ ಕೆಲವು ಪ್ರಾಣಿಗಳ ಉತ್ಪನ್ನಗಳಿಗೆ ಕಾನೂನು ಮಾರುಕಟ್ಟೆ ಇದೆ. ಹಾಗಿದ್ದರೂ, ಕಾನೂನು ಮತ್ತು ಕಾನೂನುಬಾಹಿರ ಉತ್ಪನ್ನಗಳ ನಡುವಿನ ವ್ಯತ್ಯಾಸವನ್ನು ನಾವು ಗಮನಿಸಬೇಕು. ಕೆಲವೊಮ್ಮೆ ಕಾನೂನುಬಾಹಿರ ಸರಕುಗಳು ಕಾನೂನು ಮಾರುಕಟ್ಟೆಯನ್ನು ಪ್ರವೇಶಿಸಬಹುದು ಹಾಗೂ ಸಂರಕ್ಷಣಾ ಪ್ರಯತ್ನಗಳನ್ನು ಕ್ರಮೇಣ ದುರ್ಬಲಗೊಳಿಸಬಹುದು.

ಇನ್ನೊಂದು ದಿಕ್ಕಿನಲ್ಲಿ ಯೋಚಿಸುವುದಾದರೆ ವನ್ಯಜೀವಿಗಳ ಸಂರಕ್ಷಣೆ ಮತ್ತು ಅವುಗಳ ಆವಾಸಸ್ಥಾನದ ರಕ್ಷಣೆಯಲ್ಲಿ ಹೂಡಿಕೆ ಮಾಡುವುದರಿಂದ ಪರಿಸರ ಮತ್ತು ಪ್ರವಾಸೋದ್ಯಮದ ಆದಾಯ ಹೆಚ್ಚು ಮಾಡಲು ಸಾಧ್ಯವಿದೆ. ವನ್ಯಜೀವಿಗಳ ರಕ್ಷಣೆಯಿಂದ ಶುದ್ಧ ನೀರು ಮತ್ತು ಗಾಳಿಯಂತಹ ಪರಿಸರ ವ್ಯವಸ್ಥೆಯ ಸೇವೆಗಳ ಸಂರಕ್ಷಣೆ ಸೇರಿದಂತೆ ಗಮನಾರ್ಹ ಆರ್ಥಿಕ ಪ್ರಯೋಜನಗಳನ್ನು ಸಹ ಸಮಾಜ ಪಡೆಯಬಹುದು. ಅಕ್ರಮ ವನ್ಯಜೀವಿ ವ್ಯಾಪಾರವನ್ನು ಎದುರಿಸಲು ಸಮುದಾಯದ ಪ್ರಯತ್ನದ ಜೊತೆಗೆ ಕಾನೂನು ಜಾರಿಗೊಳಿಸುವಿಕೆಯನ್ನು ಬಲಪಡಿಸುವುದು ಸೇರಿದಂತೆ ವಿವಿಧ ತಂತ್ರಗಳ ಸಂಯೋಜನೆಯು ಪರಿಣಾಮಕಾರಿಯಾಗಿರಬೇಕು. ಸಾರ್ವಜನಿಕ ಜಾಗೃತಿ ಮೂಡಿಸುವುದು, ಅಕ್ರಮ ವನ್ಯಜೀವಿ ಉತ್ಪನ್ನಗಳ ಬೇಡಿಕೆಯನ್ನು ಕಡಿಮೆ ಮಾಡುವುದು ಮತ್ತು ಬೇಟೆಯಲ್ಲಿ ತೊಡಗಿರುವ ಸಮುದಾಯಗಳಿಗೆ ಪರ್ಯಾಯ ಜೀವನೋಪಾಯವನ್ನು ಬೆಂಬಲಿಸುವುದು ಇಂದಿನ ತುರ್ತು ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಡಾ. ಡಿ.ಸಿ.ನಂಜುಂಡ

contributor

Similar News