ಮೋದಿ ಸರಕಾರದ ಬುಡಕಟ್ಟು ಪ್ರೀತಿಯ ಹಿಂದಿನ ಸತ್ಯ

ಆದಿವಾಸಿಗಳನ್ನು ಅರಣ್ಯವಾಸಿಗಳೆಂದು ಘೋಷಿಸುವ ಮೂಲಕ ಅವರ ಅಸ್ತಿತ್ವವನ್ನು ನಿರಾಕರಿಸಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆ. ಇದು ಬುಡಕಟ್ಟು ಜನಾಂಗಕ್ಕೆ ಮಾತ್ರವಲ್ಲದೆ ಇಡೀ ದೇಶದ ವೈವಿಧ್ಯತೆಗೆ ಅಪಾಯಕಾರಿ. ಮೋದಿ ಸರಕಾರದ ಬುಡಕಟ್ಟು ಪ್ರೇಮ ಕೇವಲ ಭ್ರಮೆಯಾಗಿದ್ದು, ಆದಿವಾಸಿಗಳ ಕಲ್ಯಾಣ ಮತ್ತು ಸಬಲೀಕರಣದಲ್ಲಿ ಅದಕ್ಕೆ ಯಾವುದೇ ಆಸಕ್ತಿ ಇಲ್ಲ. ಅದು ಮತಗಳನ್ನು ಪಡೆಯಲು ಬುಡಕಟ್ಟು ಅಭಿಮಾನ ದಿನವನ್ನು ಆಚರಿಸುವಂತಹ ವಿವಿಧ ತಂತ್ರಗಳನ್ನು ಅಳವಡಿಸಿಕೊಳ್ಳುತ್ತದೆ.

Update: 2023-11-20 06:02 GMT

photo: PTI

 ಮೋದಿ ಸರಕಾರವು ದೇಶಾದ್ಯಂತ ’ಬುಡಕಟ್ಟು ಅಭಿಮಾನ ದಿನ’ವನ್ನು ಬರ್ಸಾ ಮುಂಡಾ ಜಯಂತಿ ಹೆಸರಿನಲ್ಲಿ ಆಚರಿಸುತ್ತಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಪತ್ರಿಕೆಯೊಂದರಲ್ಲಿ ಪ್ರಕಟಿಸಿದ ಲೇಖನದ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಬುಡಕಟ್ಟು ಸಮಾಜ ಮತ್ತು ಅದರ ಸಂಸ್ಕೃತಿಯ ಮೇಲಿನ ಗೌರವ ಮತ್ತು ಅಚಲ ಪ್ರೀತಿಯಿಂದಾಗಿ ಅವರು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಬುಡಕಟ್ಟು ಅಭಿಮಾನ ದಿನ ಎಂದು ಹೆಸರಿಸಿದ್ದಾರೆ. ಈ ಆಚರಣೆಯನ್ನು ಘೋಷಿಸುವ ಮೂಲಕ ಸರಕಾರ ಇಡೀ ದೇಶದಲ್ಲಿ ಬುಡಕಟ್ಟು ಸಮಾಜದ ಗೌರವವನ್ನು ಹೆಚ್ಚಿಸಿದೆ. ಈ ಅಲಕ್ಷಿತ ಗುಂಪುಗಳ ಕಲ್ಯಾಣ ಮತ್ತು ಸಬಲೀಕರಣದ ಕಡೆಗೆ ಸರಕಾರದ ಬದ್ಧತೆ ಎಂತದು ಎಂಬುದಕ್ಕೆ ಬುಡಕಟ್ಟು ಅಭಿಮಾನ ದಿನ ಪುರಾವೆಯಾಗಿದೆ ಎಂದು ಲೇಖನದಲ್ಲಿ ಹೇಳಲಾಗಿದೆ. ವಿವಿಧ ನೀತಿಗಳು, ಕಾರ್ಯಕ್ರಮಗಳು ಮತ್ತು ಕಾನೂನುಗಳ ಮೂಲಕ ಕೇಂದ್ರ ಸರಕಾರವು ಬುಡಕಟ್ಟು ಸಮಾಜವನ್ನು ಉನ್ನತೀಕರಿಸುವ ಮತ್ತು ಐತಿಹಾಸಿಕ ಅನ್ಯಾಯವನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ. ಅರಣ್ಯ ಹಕ್ಕು ಕಾಯ್ದೆ, ಪಿಇಎಸ್‌ಎ ಮತ್ತಿತರ ಕಾನೂನುಗಳ ಮೂಲಕ ಬುಡಕಟ್ಟು ಸಮುದಾಯದ ಹಕ್ಕುಗಳನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಲೇಖನ ಹೇಳುತ್ತದೆ.

ಆದರೆ, ಬುಡಕಟ್ಟು ಜನರ ಬಗ್ಗೆ ಮೋದಿ ಸರಕಾರದ ಮೇಲಿನ ಹೇಳಿಕೆಗಳ ಸತ್ಯವೇನು? ಅದರಲ್ಲೂ ಆದಿವಾಸಿಗಳ ಮೇಲೆ ಪ್ರಭಾವ ಬೀರಲು ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರನ್ನು ಭಾರತದ ರಾಷ್ಟ್ರಪತಿಯನ್ನಾಗಿ ಮಾಡಿರುವುದು ಮೋದಿ ಸರಕಾರ. ವಾಸ್ತವ ಇದೆಲ್ಲದಕ್ಕಿಂತ ಬೇರೆಯೇ ಇದೆ.

1. ಭೂರಹಿತ ಬುಡಕಟ್ಟು ಜನರಲ್ಲಿ ನಿರುದ್ಯೋಗ ಮತ್ತು ಬಡತನ:

2011ರ ಜನಗಣತಿಯ ಪ್ರಕಾರ, ದೇಶದಲ್ಲಿ ಶೇ.35.65ರಷ್ಟು ಬುಡಕಟ್ಟು ಜನಾಂಗದವರು ಭೂರಹಿತರಾಗಿದ್ದಾರೆ ಮತ್ತು ಅವರಲ್ಲಿ ಶೇ.8ರಷ್ಟು ಜನರು ಮಾತ್ರ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದಿವಾಸಿಗಳಲ್ಲಿ ಶೇ.44.7ರಷ್ಟು ಕುಟುಂಬಗಳು ಬಡತನ ರೇಖೆಗಿಂತ ಕೆಳಗಿದ್ದು, ಮಾಸಿಕ ಆದಾಯ ಕೇವಲ 816 ರೂ. ಇನ್ನು ಶೇ.79ರಷ್ಟು ಬುಡಕಟ್ಟು ಕುಟುಂಬಗಳು ಅತ್ಯಂತ ವಂಚಿತ ವರ್ಗಕ್ಕೆ ಸೇರುತ್ತವೆ. ಇದರಿಂದ ಬುಡಕಟ್ಟು ಸಮಾಜದವರು ಎಷ್ಟೊಂದು ಪ್ರಮಾಣದಲ್ಲಿ ಭೂರಹಿತರೂ ನಿರುದ್ಯೋಗಿಗಳೂ ಆಗಿದ್ದಾರೆ ಮತ್ತು ಬಡತನದ ಬಲಿಪಶುಗಳಾಗಿದ್ದಾರೆ ಎಂಬುದನ್ನು ಊಹಿಸಬಹುದು. 2014ರಲ್ಲಿ ಕೇಂದ್ರದಲ್ಲಿ ಮೋದಿ ಸರಕಾರ ಬಂದ ನಂತರವೂ ಆದಿವಾಸಿಗಳ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂಬುದು ಗಮನಾರ್ಹ. ಏಕೆಂದರೆ ಆದಿವಾಸಿಗಳ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ಈ ಸರಕಾರವು ಯಾವುದೇ ದೃಢವಾದ ಪ್ರಯತ್ನಗಳನ್ನು ಮಾಡಿಲ್ಲ. ಇದಕ್ಕೆ ವಿರುದ್ಧವಾಗಿ, ಅವರು ಭೂಮಿಯನ್ನೂ ಕಳೆದುಕೊಳ್ಳುವಂತಾಗಿದೆ.

2. ಆದಿವಾಸಿಗಳಿಗೆ ಭೂಮಿಯ ಹಕ್ಕು ನೀಡುವ ಅರಣ್ಯ ಹಕ್ಕು ಕಾಯ್ದೆಯ ವೈಫಲ್ಯ:

2006ರಲ್ಲಿ ಅಂದಿನ ಯುಪಿಎ ಸರಕಾರವು ಆದಿವಾಸಿಗಳಿಗೆ ಭೂಮಿಯ ಹಕ್ಕುಗಳನ್ನು ನೀಡಲು ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿತು. ಅದು 2008ರಲ್ಲಿ ಜಾರಿಗೆ ಬಂತು. ಈ ಕಾಯ್ದೆಯ ಮುಖ್ಯ ಉದ್ದೇಶವು ಬುಡಕಟ್ಟು ಮತ್ತು ಅರಣ್ಯವಾಸಿಗಳಿಗೆ ಭೂಮಿಯ ಮಾಲಕತ್ವದ ಹಕ್ಕನ್ನು ನೀಡುವುದಾಗಿತ್ತು. ಆ ಮೂಲಕವಾಗಿ, ಅವರು ಒಂದೇ ಸ್ಥಳದಲ್ಲಿ ಶಾಶ್ವತವಾಗಿ ವಾಸಿಸಬಹುದಿತ್ತು ಮತ್ತು ಈ ಕಾಯ್ದೆಯ ಅಡಿಯಲ್ಲಿ ಪಡೆದ ಭೂಮಿಯಲ್ಲಿ ಕೃಷಿ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಕಂಡುಕೊಳ್ಳಬಹುದಿತ್ತು. ದುರದೃಷ್ಟವಶಾತ್, ಸರಕಾರಿ ವ್ಯವಸ್ಥೆಯ ಬುಡಕಟ್ಟು ವಿರೋಧಿ ಮತ್ತು ದಲಿತ ವಿರೋಧಿ ಮನಃಸ್ಥಿತಿಯಿಂದಾಗಿ ಈ ಕಾನೂನು ಪರಿಣಾಮಕಾರಿಯಾಗಿ ಮತ್ತು ಪ್ರಾಮಾಣಿಕವಾಗಿ ಜಾರಿಗೊಳ್ಳಲಿಲ್ಲ. ಇದರಿಂದಾಗಿ ಆದಿವಾಸಿಗಳು/ಅರಣ್ಯವಾಸಿಗಳು ಭೂಮಿಯ ಮಾಲಕತ್ವದ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ರಾಜ್ಯ ಸರಕಾರಗಳು ಇಚ್ಛಾಶಕ್ತಿ ಮತ್ತು ಆಸಕ್ತಿಯನ್ನು ಇದರಲ್ಲಿ ತೋರಿಸಲಿಲ್ಲ. ಇಡೀ ದೇಶದಲ್ಲಿ ತ್ರಿಪುರಾ, ಕೇರಳ ಮತ್ತು ಒಡಿಶಾ ಮಾತ್ರ ಈ ಕಾಯ್ದೆಯಡಿಯಲ್ಲಿ ಬುಡಕಟ್ಟು ಜನಾಂಗದವರಿಗೆ ಭೂಮಿ ಮಂಜೂರು ಮಾಡಿದ ರಾಜ್ಯಗಳಾಗಿವೆ. ಇದರ ಶ್ರೇಯಸ್ಸು ತ್ರಿಪುರಾ ಮತ್ತು ಕೇರಳದ ಕಮ್ಯುನಿಸ್ಟ್ ಸರಕಾರಕ್ಕೆ ಮತ್ತು ಒಡಿಶಾದ ಬುಡಕಟ್ಟು ಸಂಘಟನೆಗಳು ಮತ್ತು ಪಟ್ನಾಯಕ್ ಸರಕಾರದ ಸಕ್ರಿಯತೆಗೆ ಸಲ್ಲಬೇಕು.

2014ರಲ್ಲಿ ಕೇಂದ್ರದಲ್ಲಿ ರಚನೆಯಾದ ಮೋದಿ ಸರಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬದಲು ಬುಡಕಟ್ಟು ಪ್ರದೇಶಗಳಲ್ಲಿನ ಭೂಮಿಯನ್ನು ಗಣಿಗಾರಿಕೆಗಾಗಿ ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸಲು ಮುಂದಾಯಿತು. ಈ ಮೂಲಕ ಅರಣ್ಯ ಹಕ್ಕು ಕಾಯ್ದೆಯನ್ನು ವಿಫಲಗೊಳಿಸುವ ಕೆಲಸವನ್ನು ಅದು ಮಾಡಿತು. ಇದೇ ಕಾರಣಕ್ಕೆ 2019ರಲ್ಲಿ ವನ್ಯಜೀವಿ ಟ್ರಸ್ಟ್ ಸಂಸ್ಥೆಯು ಅರಣ್ಯ ಭೂಮಿಯಲ್ಲಿನ ಅಕ್ರಮ ಒತ್ತುವರಿ ತೆರವು ಮಾಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಆರಂಭವಾದಾಗ, ಆದಿವಾಸಿಗಳ ಪರವಾಗಿ ವಾದಿಸಲು ಮೋದಿ ಸರಕಾರದಿಂದ ಯಾರೂ ಇರಲಿಲ್ಲ. ಸರಕಾರಿ ವಕೀಲರು ಹಾಜರಾಗಲಿಲ್ಲ. ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ, ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ರದ್ದಾದ ಭೂಮಿಯನ್ನು ಸಹ ತೆರವು ಮಾಡಬೇಕು. ಕಾನೂನಿನ ದೃಷ್ಟಿಯಲ್ಲಿ ಅದು ಕೂಡ ಅಕ್ರಮ ಒತ್ತುವರಿಯಾಗಿದೆ ಎಂದು ಈ ಅರ್ಜಿಯಲ್ಲಿ ವಾದಿಸಲಾಗಿತ್ತು. ಇದರ ಪರಿಣಾಮವೆಂದರೆ, ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ರದ್ದುಗೊಂಡ ಹಕ್ಕುಗಳೊಂದಿಗೆ ಎಲ್ಲಾ ಭೂಮಿಯನ್ನು ತೆರವುಗೊಳಿಸಲು ಮತ್ತು ಜುಲೈ 24, 2019ರೊಳಗೆ ಅರಣ್ಯ ಇಲಾಖೆಗೆ ಅನುಸರಣೆ ವರದಿಯನ್ನು ಸಲ್ಲಿಸಲು ಎಲ್ಲಾ ರಾಜ್ಯಗಳಿಗೆ ಆದೇಶಿಸಲಾಯಿತು. ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಸಂತ್ರಸ್ತರಾಗಿರುವ ಬುಡಕಟ್ಟು ಕುಟುಂಬಗಳ ಸಂಖ್ಯೆ ಇಡೀ ದೇಶದಲ್ಲಿ ಸರಿಸುಮಾರು 20 ಲಕ್ಷದಷ್ಟಿದೆ. ಅದರಲ್ಲಿ ಉತ್ತರ ಪ್ರದೇಶವು 74,700 ಕುಟುಂಬಗಳನ್ನು ಹೊಂದಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶದ ವಿರುದ್ಧ, ಆಲ್ ಇಂಡಿಯಾ ಪೀಪಲ್ಸ್ ಫ್ರಂಟ್ ಮತ್ತು ಇತರ ಕೆಲವು ಸಂಘಟನೆಗಳು ಮೇಲ್ಮನವಿ ಸಲ್ಲಿಸಿದವು. ಎಲ್ಲಾ ಹಕ್ಕುಗಳ ಮರುಪರಿಶೀಲನೆಗೆ ಕೋರಲಾಯಿತು. ಪ್ರಸ್ತುತ, ಅದೇ ಆದೇಶದಿಂದಾಗಿ ಆದಿವಾಸಿಗಳು ಮತ್ತು ಅರಣ್ಯವಾಸಿಗಳ ತೆರವು ಸ್ಥಗಿತಗೊಂಡಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ಹಕ್ಕುಗಳನ್ನು ಮರುಪರಿಶೀಲಿಸುವ ಕೆಲಸ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿರುವುದು ವಿಷಾದನೀಯ. ಇದು ಮೋದಿ ಸರಕಾರದ ಬುಡಕಟ್ಟು ಪ್ರೀತಿ ಯಾವ ಮಟ್ಟದ್ದು ಎಂಬುದನ್ನು ಬಹಿರಂಗಪಡಿಸುತ್ತದೆ.

3. ಆದಿವಾಸಿಗಳ ಅರಣ್ಯ ಹಕ್ಕುಗಳ ಉಲ್ಲಂಘನೆ:

ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ-2023 ಮೂಲಕ ಅನೇಕ ರೀತಿಯ ಭೂಮಿಯನ್ನು ಅರಣ್ಯ ಸಂರಕ್ಷಣಾ ಕಾಯ್ದೆ-1980ರ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದರೊಂದಿಗೆ ಅರಣ್ಯ ಭೂಮಿಯಲ್ಲಿ ಮೃಗಾಲಯಗಳು, ಮನರಂಜನಾ ಸ್ಥಳಗಳು ಮತ್ತು ಸಫಾರಿಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಅದೇ ರೀತಿ, ಚೀನಾ ಮತ್ತು ಪಾಕಿಸ್ತಾನದ ಗಡಿಯ ಸಮೀಪ 100 ಕಿಲೋಮೀಟರ್‌ವರೆಗೆ ರಕ್ಷಣಾ ಕಾರ್ಯಗಳಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು. ಅದೇ ರೀತಿ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಪರಿವರ್ತಿಸಲು ಗ್ರಾಮ ಸಭೆಯ ಪೂರ್ವಾನುಮತಿ ಪಡೆಯುವ ಷರತ್ತನ್ನು ತೆಗೆದುಹಾಕಲಾಗಿದೆ. ಇದು ಆದಿವಾಸಿಗಳ ಹಿತಾಸಕ್ತಿಯಲ್ಲದ ಅರಣ್ಯ ಭೂಮಿಯಲ್ಲಿ ಭಾರೀ ಕಡಿತಕ್ಕೆ ಕಾರಣವಾಗುತ್ತದೆ. ಹೊಸ ತಿದ್ದುಪಡಿಯ ಮೂಲಕ, ಅರಣ್ಯೀಕರಣದ ಕೆಲಸವನ್ನು ಖಾಸಗಿ ವ್ಯಕ್ತಿಗಳು ಮತ್ತು ಕಾರ್ಪೊರೇಟ್‌ಗಳು ಸೇರಿದಂತೆ ಸಂಸ್ಥೆಗಳಿಗೆ ನೀಡಬಹುದು. ಇದು ಆದಿವಾಸಿಗಳು ಮತ್ತು ಅರಣ್ಯವಾಸಿಗಳ ಅರಣ್ಯದ ಮೇಲಿನ ಸಮುದಾಯದ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ. ಮೋದಿ ಸರಕಾರ ತಂದಿರುವ ಈ ತಿದ್ದುಪಡಿಯು ಆದಿವಾಸಿಗಳು/ಅರಣ್ಯವಾಸಿಗಳ ಹಿತಾಸಕ್ತಿಗಳ ಮೇಲಿನ ದಾಳಿಯಾಗಿದೆ.

4. ಬಿಕ್ಕಟ್ಟಿನಲ್ಲಿ ಬುಡಕಟ್ಟು ಅಸ್ತಿತ್ವ:

ಆರೆಸ್ಸೆಸ್ ಮತ್ತು ಬಿಜೆಪಿಯವರು ಬುಟಕಟ್ಟು ಜನಾಂಗದವರನ್ನು ಆದಿವಾಸಿಗಳು ಎಂದು ಕರೆಯುವ ಬದಲು ಅರಣ್ಯವಾಸಿಗಳು (ವನವಾಸಿಗಳು) ಎಂದು ಕರೆಯುತ್ತಾರೆ ಮತ್ತು ಅರಣ್ಯವಾಸಿಗಳ ಹೆಸರಿನಲ್ಲಿ ತಮ್ಮ ಸಂಘಟನೆಯನ್ನು ನಡೆಸುತ್ತಾರೆ. ಇದರ ಹಿಂದೆ ಆರೆಸ್ಸೆಸ್‌ನ ಆಳವಾದ ಕುತಂತ್ರವಿದೆ. ದೇಶದಲ್ಲಿ ತಮ್ಮದೇ ಆದ ಧರ್ಮ ಮತ್ತು ವಿಭಿನ್ನ ಗುರುತುಗಳನ್ನು ಹೊಂದಿರುವ ವಿವಿಧ ಸಮುದಾಯಗಳು ವಾಸಿಸುತ್ತಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಸಂವಿಧಾನದಲ್ಲಿ ಪರಿಶಿಷ್ಟ ಪಂಗಡಗಳೆಂದು ಕರೆಯಲ್ಪಡುವ ಆದಿವಾಸಿಗಳು ಪ್ರತ್ಯೇಕ ಸಮುದಾಯವಾಗಿದ್ದು, ಇದು ತನ್ನದೇ ಆದ ಧರ್ಮ, ತನ್ನದೇ ಆದ ದೇವರು ಮತ್ತು ದೇವತೆಗಳನ್ನು ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಅವರು ವಿಭಿನ್ನ ಭೌಗೋಳಿಕ ಪ್ರದೇಶಗಳನ್ನು ಹೊಂದಿದ್ದಾರೆ ಮತ್ತು ವಿಭಿನ್ನ ಗುರುತುಗಳನ್ನು ಹೊಂದಿದ್ದಾರೆ.

ನಮ್ಮ ಸಂವಿಧಾನದಲ್ಲಿಯೂ ಈ ಭೌಗೋಳಿಕ ಪ್ರದೇಶಗಳನ್ನು ಬುಡಕಟ್ಟು ಪ್ರದೇಶಗಳು ಎಂದು ಕರೆಯಲಾಗಿದೆ ಮತ್ತು ಅವುಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆಗೆ ಅವಕಾಶವಿದೆ. ಈ ವ್ಯವಸ್ಥೆಯ ಅಡಿಯಲ್ಲಿ, ಈ ಪ್ರದೇಶಗಳ ಆಡಳಿತ ವ್ಯವಸ್ಥೆಯು ರಾಜ್ಯದ ಮುಖ್ಯಮಂತ್ರಿಯ ಅಡಿಯಲ್ಲಿರುವುದಿಲ್ಲ. ಆದರೆ ನೇರವಾಗಿ ಭಾರತದ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಅಡಿಯಲ್ಲಿದೆ. ಅವರ ಸಹಾಯಕ್ಕಾಗಿ ಪ್ರತ್ಯೇಕ ರಚನೆಯನ್ನು ಹೊಂದಿರುವ ಬುಡಕಟ್ಟು ಪ್ರದೇಶ ಕೌನ್ಸಿಲ್ ಇದೆ. ಅವರ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದ 5 ಮತ್ತು 6 ಶೆಡ್ಯೂಲ್‌ಗಳೂ ಇವೆ.

ಈ ಪ್ರದೇಶಗಳಲ್ಲಿ, ಗ್ರಾಮ ಮಟ್ಟದಲ್ಲಿ ಸಾಮಾನ್ಯ ಪಂಚಾಯತ್ ರಾಜ್ ವ್ಯವಸ್ಥೆಯ ಬದಲಿಗೆ, ಪಂಚಾಯತ್‌ಗಳು ಎಂಬ ವಿಶೇಷ ಗ್ರಾಮ ಪಂಚಾಯತ್ ವ್ಯವಸ್ಥೆ ಇದೆ. ಅಂದರೆ ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್‌ಗಳ ವಿಸ್ತರಣೆ ಕಾಯ್ದೆ (ಪಿಇಎಸ್‌ಎ). ಇದು ಗ್ರಾಮ ಸ್ವರಾಜ್‌ಗಾಗಿ ಸಾಂಪ್ರದಾಯಿಕ ಗ್ರಾಮ ಪಂಚಾಯತ್ ವ್ಯವಸ್ಥೆಯಾಗಿದೆ. ಇದರಲ್ಲಿ ಪಂಚಾಯತ್ನಲ್ಲಿರುವ ಎಲ್ಲಾ ನೈಸರ್ಗಿಕ ಸಂಪತ್ತು/ಖನಿಜಗಳ ಮೇಲೆ ಪಂಚಾಯತ್ ಹಕ್ಕನ್ನು ಹೊಂದಿದ್ದು, ಅದರಿಂದ ಬರುವ ಲಾಭವನ್ನು ಗ್ರಾಮದ ಅಭಿವೃದ್ಧಿಗೆ ಮಾತ್ರ ವಿನಿಯೋಗಿಸಬಹುದು. ಆದರೆ ಇದು ವಿವಿಧ ರಾಜಕೀಯ ಪಕ್ಷಗಳ ಸರಕಾರಗಳ ಷಡ್ಯಂತ್ರವಾಗಿದ್ದು, ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ಮಾತ್ರ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಇದಲ್ಲದೆ, ನಮ್ಮ ಸಂವಿಧಾನದಲ್ಲಿ ದಲಿತರು ಮತ್ತು ಗಿರಿಜನರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳೆಂದು ಪಟ್ಟಿ ಮಾಡಿರುವುದು ಕೂಡ ಗಮನಾರ್ಹ. ರಾಜಕೀಯ ಮೀಸಲಾತಿಯ ಹೊರತಾಗಿ ಅವರಿಗೆ ಸರಕಾರಿ ಸೇವೆ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗಿದೆ. ನಮ್ಮ ಜನಗಣತಿಯಲ್ಲಿಯೂ ಅವರನ್ನು ಉಪಜಾತಿಯಿಂದ ಪ್ರತ್ಯೇಕವಾಗಿ ಎಣಿಸಲಾಗುತ್ತದೆ.

ಇದಲ್ಲದೆ, ಹಿಂದೂ ವಿವಾಹ ಕಾಯ್ದೆ ಮತ್ತು ಹಿಂದೂ ಉತ್ತರಾಧಿಕಾರ ಕಾನೂನು ಕೂಡ ಆದಿವಾಸಿಗಳಿಗೆ ಅನ್ವಯಿಸುವುದಿಲ್ಲ. ಈ ಕಾರಣಗಳಿಗಾಗಿ, ಬುಡಕಟ್ಟು ಸಮುದಾಯವು ತನ್ನದೇ ಆದ ಪ್ರತ್ಯೇಕ ಧರ್ಮ, ಪ್ರತ್ಯೇಕ ದೇವರು ಮತ್ತು ದೇವತೆಗಳು, ಪ್ರತ್ಯೇಕ ಆಚರಣೆಗಳು ಮತ್ತು ಪ್ರತ್ಯೇಕ ಸಂಸ್ಕೃತಿಯನ್ನು ಹೊಂದಿದೆ. ಬುಡಕಟ್ಟು ಜನಾಂಗದವರು ತಮ್ಮ ಧರ್ಮವನ್ನು ಸರ್ನಾ ಎಂದು ಕರೆಯುವಂತೆ ಕೇಳುತ್ತಾರೆ. ಆದರೆ ಮೋದಿ ಸರಕಾರ ಅದನ್ನು ಒಪ್ಪುತ್ತಿಲ್ಲ. ಬದಲಾಗಿ ಆದಿವಾಸಿಗಳನ್ನು ಹಿಂದೂಗಳು ಅಥವಾ ಇತರರು ಎಂದು ಪಟ್ಟಿ ಮಾಡಲಾಗಿದೆ.

ಮೇಲೆ ತಿಳಿಸಿದ ಕಾರಣಗಳಿಂದಾಗಿ, ಆರೆಸ್ಸೆಸ್ ಆದಿವಾಸಿಗಳನ್ನು ವನವಾಸಿಗಳು (ಅರಣ್ಯವಾಸಿಗಳು) ಎಂದು ಕರೆಯುತ್ತದೆ. ಏಕೆಂದರೆ ಅವರನ್ನು ಬುಡಕಟ್ಟು ಎಂದು ಕರೆಯುವುದರಿಂದ ಅವರು ತಮ್ಮನ್ನು ಆರ್ಯರು ಮತ್ತು ಆರ್ಯೇತರ ಬುಡಕಟ್ಟು ಜನಾಂಗದವರು (ಸ್ಥಳೀಯ ಜನರು) ಎಂದು ಪರಿಗಣಿಸುತ್ತಾರೆ. ಇದು ತನ್ನ ಹಿಂದುತ್ವ ಮಾದರಿಯನ್ನು ನಾಶಪಡಿಸುತ್ತದೆ ಎಂಬುದು ಆರೆಸ್ಸೆಸ್‌ನ ಆತಂಕ. ಅದಕ್ಕಾಗಿಯೇ ಆರೆಸ್ಸೆಸ್ ನಿರಂತರವಾಗಿ ಆದಿವಾಸಿಗಳನ್ನು ಹಿಂದೂಗಳನ್ನಾಗಿ ಮಾಡುವಲ್ಲಿ ತೊಡಗಿಸಿಕೊಂಡಿದೆ. ಇದರಲ್ಲಿ ಹಿಂದೂಯೇತರರ ಮೇಲೆ ಹಲ್ಲೆ ಮತ್ತು ಕಿರುಕುಳ ನೀಡುವ ಕೆಲವು ಕ್ಷೇತ್ರಗಳಲ್ಲಿ ಯಶಸ್ಸು ಕೂಡ ಸಿಕ್ಕಿದೆ. ಕ್ರಿಶ್ಚಿಯನ್ ಮಿಷನರಿಗಳು ಸಹ ಕೆಲವು ಬುಡಕಟ್ಟು ಜನಾಂಗದವರನ್ನು ಕ್ರೈಸ್ತೀಕರಣಗೊಳಿಸಿದ್ದಾರೆ. ಆದರೆ ಅವರು ಕ್ರಿಶ್ಚಿಯನ್ ಅಲ್ಲದ ಜನರ ಮೇಲೆ ದಾಳಿ ಎಸಗಿಲ್ಲ ಎಂಬುದು ಸತ್ಯ.

ಆದಿವಾಸಿಗಳನ್ನು ಹಾಗೆಂದು ಕರೆಯದೆ ಅರಣ್ಯವಾಸಿಗಳೆಂದು ಕರೆದು ಅವರನ್ನು ಹಿಂದುತ್ವದ ಮಾದರಿಯೊಳಗೆ ತರುವುದು ಮತ್ತು ಹಿಂದೂಯೇತರರನ್ನು ಹತ್ತಿಕ್ಕಲು ಅವರನ್ನು ಬಳಸಿಕೊಳ್ಳುವುದು ಆರ್‌ಎಸ್‌ಎಸ್ನ ಮುಖ್ಯ ಗುರಿಯಾಗಿದೆ. ಅವರ ಧಾರ್ಮಿಕ ಮತಾಂತರವನ್ನು ತಡೆಯಲು ತಪ್ಪು ಕಾನೂನುಗಳನ್ನು ಮಾಡಲಾಗಿದೆ. ಆದರೆ ನಮ್ಮ ಸಂವಿಧಾನವು ಎಲ್ಲಾ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡುತ್ತದೆ.

ಹಲವು ರಾಜ್ಯಗಳಲ್ಲಿ ಕ್ರೈಸ್ತರಾಗಿದ್ದ ಆದಿವಾಸಿಗಳನ್ನು ಬಲವಂತವಾಗಿ ಹಿಂದೂಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿ ಆರೆಸ್ಸೆಸ್ ಬುಡಕಟ್ಟು ಪ್ರದೇಶಗಳಲ್ಲಿ ಏಕ ಶಿಕ್ಷಕ ಶಾಲೆಗಳನ್ನು ಸ್ಥಾಪಿಸುವ ಮೂಲಕ ಬುಡಕಟ್ಟು ಮಕ್ಕಳನ್ನು ಹಿಂದೂಗಳನ್ನಾಗಿಸುವುದನ್ನು (ಜೈ ಶ್ರೀ ರಾಮ್ ಘೋಷಣೆ ಮತ್ತು ರಾಮನನ್ನು ದೇವತೆಯಾಗಿ ಸ್ಥಾಪಿಸುವುದು) ಪ್ರಾರಂಭಿಸಿದೆ. ಇದಲ್ಲದೆ ಆರೆಸ್ಸೆಸ್ ಈಗಾಗಲೇ ಅನೇಕ ವನವಾಸಿ ಆಶ್ರಮಗಳನ್ನು ನಡೆಸುವ ಮೂಲಕ ಬುಡಕಟ್ಟು ಮಕ್ಕಳನ್ನು ಹಿಂದೂಗಳನ್ನಾಗಿಸುತ್ತಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳು ಸ್ಥಾಪನೆಯಾದ ನಂತರ ಈ ಪ್ರಕ್ರಿಯೆಯು ಇನ್ನಷ್ಟು ವೇಗ ಪಡೆದಿದೆ.

ಹೀಗೆ, ಆದಿವಾಸಿಗಳನ್ನು ಅರಣ್ಯವಾಸಿಗಳೆಂದು ಘೋಷಿಸುವ ಮೂಲಕ ಅವರ ಅಸ್ತಿತ್ವವನ್ನು ನಿರಾಕರಿಸಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆ. ಇದು ಬುಡಕಟ್ಟು ಜನಾಂಗಕ್ಕೆ ಮಾತ್ರವಲ್ಲದೆ ಇಡೀ ದೇಶದ ವೈವಿಧ್ಯತೆಗೆ ಅಪಾಯಕಾರಿ. ಆದ್ದರಿಂದ, ಆದಿವಾಸಿಗಳು ಆರೆಸ್ಸೆಸ್‌ನ ಈ ತಂತ್ರವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ತಮ್ಮ ಗುರುತನ್ನು ಅಳಿಸುವ ಪಿತೂರಿಯನ್ನು ವಿಫಲಗೊಳಿಸಬೇಕು.

ಮೋದಿ ಸರಕಾರದ ಬುಡಕಟ್ಟು ಪ್ರೇಮ ಕೇವಲ ಭ್ರಮೆಯಾಗಿದ್ದು, ಆದಿವಾಸಿಗಳ ಕಲ್ಯಾಣ ಮತ್ತು ಸಬಲೀಕರಣದಲ್ಲಿ ಅದಕ್ಕೆ ಯಾವುದೇ ಆಸಕ್ತಿ ಇಲ್ಲ ಎಂಬುದು ಮೇಲಿನ ವಿಚಾರಗಳಿಂದ ಸ್ಪಷ್ಟವಾಗುತ್ತದೆ. ಅದು ಮತಗಳನ್ನು ಪಡೆಯಲು ಬುಡಕಟ್ಟು ಅಭಿಮಾನ ದಿನವನ್ನು ಆಚರಿಸುವಂತಹ ವಿವಿಧ ತಂತ್ರಗಳನ್ನು ಅಳವಡಿಸಿಕೊಳ್ಳುತ್ತದೆ.

(ಕೃಪೆ:countercurrents.org)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್.ಆರ್.ದಾರಾಪುರಿ

contributor

Similar News