ಮುಖವಾಡವೊಂದರ ಅನಾವರಣ

Update: 2023-09-12 07:45 GMT

ಕಳೆದ 46 ವರ್ಷಗಳಿಂದ ಕನ್ನಡ ನಾಟಕರಂಗದಲ್ಲಿ ಸಕ್ರಿಯರಾಗಿರುವ ಬೆಂಗಳೂರಿನ ಸಂಧ್ಯಾ ಕಲಾವಿದರು ಹವ್ಯಾಸಿ ನಾಟಕ ತಂಡದವರಿಂದ ಮುಖವಾಡ ನಾಟಕ ಇತ್ತೀಚೆಗೆ ಹನುಮಂತ ನಗರದ ಕೆ.ಎಚ್.ಕಲಾಸೌಧದಲ್ಲಿ ಪ್ರದರ್ಶನಗೊಂಡಿತು.

ಸಮಾಜ ಶಾಸ್ತ್ರಜ್ಞರು ಹೇಳುವಂತೆ, ಪ್ರಾಣಿಗಳಲ್ಲೇ ಅತ್ಯಂತ ಶ್ರೇಷ್ಠವಾದ ಪ್ರಾಣಿ ಮನುಷ್ಯ. ಆ ಶ್ರೇಷ್ಠತೆಯಿಂದಲೇ ಅವನು ಸಾಮಾಜಿಕ ಪ್ರಾಣಿ ಎಂದು ಕರೆಸಿಕೊಂಡಿರುವುದು. ತನ್ನ ಯೋಚನಾ ಶಕ್ತಿ, ಮಾತು, ವೈಚಾರಿಕತೆ, ಕೌಶಲ್ಯಗಳಿಂದ ಬುದ್ಧಿಜೀವಿ ಎಂದೆನಿಸಿಕೊಂಡಿದ್ದಾನೆ. ಆದರೆ ಕೆಲವರ ಸಜ್ಜನಿಕೆಯ ಮುಖವಾಡದ ಹಿಂದೆ ಮೋಸ, ವಂಚನೆ, ಸಮಯ ಸಾಧಕತನ, ಸ್ವಾರ್ಥಪರತೆ, ಕ್ರೌರ್ಯಗಳು ಮರೆ ಮಾಚಿಕೊಂಡಿರುತ್ತವೆ. ಸಂದರ್ಭಕ್ಕೆ ತಕ್ಕಂತೆ ಆಗಾಗ ಬಣ್ಣ ಬದಲಿಸುತ್ತಲೇ ಇರುತ್ತಾನೆ ಮಾನವ. ಸಮಾಜೋದ್ಧಾರಕನೋ, ಬುದ್ಧಿಜೀವಿಯೋ, ದೇಶ ಭಕ್ತನೋ, ಧರ್ಮಪಾಲಕನೆಂಬ ಮುಖವಾಡ ತೊಟ್ಟುಕೊಂಡು ಸದ್ದಿಲ್ಲದೆ ಒಳಗೊಳಗೆ ಸಂಚಿನ ಬಲೆ ಹೆಣೆಯುತ್ತಿರುತ್ತಾನೆ. ಮುಗ್ಧರನ್ನು ಬಲೆ ಹಾಕಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಾರೆ ಕೆಲವರು.

ಅದ್ಭುತ ಬರಹಗಾರನಾಗಿ ಗುರುತಿಸಿಕೊಂಡ, ಮಧ್ಯ ವಯಸ್ಕ ಸಾಹಿತಿಯೊಬ್ಬನ ಸೋಗಲಾಡಿತನದ ಕತೆಯೇ ‘ಮುಖವಾಡ’ ನಾಟಕದ ಹಂದರ. ಉದಯೋನ್ಮುಖ ಕವಯಿತ್ರಿಯೊಬ್ಬಳು ಈ ಸಾಹಿತಿಯ ಆದರ್ಶದಿಂದ ಕೂಡಿದ ಬರಹಗಳಿಗೆ ಮನಸೋತು ತನ್ನ ಪ್ರಥಮ ಕವನ ಸಂಕಲನಕ್ಕೆ ಮುನ್ನುಡಿ ಬರೆದು ಕೊಡುವಂತೆ ಕೇಳಿಕೊಳ್ಳುತ್ತಾಳೆ. ಆಕೆಯ ಬರವಣಿಗೆಯನ್ನು ಲೇವಡಿ ಮಾಡುತ್ತ, ಅವಳ ಸೌಂದರ್ಯದ ಕುರಿತು ಪರೋಕ್ಷವಾಗಿ ಮೆಚ್ಚುಗೆ ಸೂಚಿಸುತ್ತಾನೆ. ಪ್ರಬುದ್ಧವಾದ ಆಕೆಯ ಕವನಗಳನ್ನು ಓದುತ್ತ ಕವಿತಾಶ್ರೀಯ ಕುರಿತು ಮೋಹವನ್ನು ಬೆಳೆಸಿಕೊಳ್ಳುತ್ತ ಹೋಗುತ್ತಾನೆ ಆನಂದ. ತನ್ನ ವೈವಾಹಿಕ ಬದುಕಿನಲ್ಲಿ ಸಂತೃಪ್ತ ಬದುಕನ್ನು ಕಂಡುಕೊಂಡಿರುವ ಕವಿತಾಶ್ರೀ ಆನಂದನ ಲಾಲಸೆಯನ್ನು ತಿಳಿದು ಬೇಸರಗೊಳ್ಳುತ್ತಾಳೆ. ಸಾಹಿತ್ಯದ ಕುರಿತು ಉದಾಸೀನ ತಾಳಿದವನಾಗಿದ್ದರೂ ಕವಿತಾಶ್ರೀಯ ಪತಿ ಶ್ರೀಧರ ತನ್ನ ಪತ್ನಿಯ ಸಾಹಿತ್ಯ ಕೃಷಿಗೆ ನೀರೆರೆದು ಪೋಷಿಸುವ ಮನಸ್ಸಿನವ. ಆನಂದನ ಒಡನಾಟದಲ್ಲಿ ಆತನ ಬಲವಂತದಿಂದ ಓದುತ್ತ ಸಾಹಿತ್ಯದ ಕುರಿತು ಒಲವನ್ನು ಬೆಳೆಸಿಕೊಂಡು ಸಾಹಿತ್ಯಾಸಕ್ತರ ಜೊತೆ ಚರ್ಚಿಸುವ ಮಟ್ಟಿಗೆ ಬದಲಾಗುತ್ತಾನೆ. ಇದು ಆನಂದನಿಗೆ ಬಿಸಿ ತುಪ್ಪವಾಗಿ ಭಾಸವಾಗುತ್ತದೆ.

ಬ್ಯಾಂಕೊಂದರ ಉದ್ಯೋಗಿಯಾದ ಶ್ರೀಧರನಿಗೆ ಬೇರೊಂದು ರಾಜ್ಯಕ್ಕೆ ವರ್ಗವಾಗುತ್ತದೆ. ಪತಿಯ ಜೊತೆ ಕವಿತಾ ಕೂಡ ಹೊರಡುವ ವಿಷಯ ತಿಳಿದಾಗ ಆನಂದ ತನ್ನ ಹುಚ್ಚು ಪ್ರೀತಿಯನ್ನು ತೋಡಿಕೊಂಡು, ಹೋಗದಿರಲು ಕೇಳಿಕೊಳ್ಳುತ್ತಾನೆ. ಆದರೆ ನಿರ್ಮಲ ಮನಸ್ಸಿನ ಕವಿತಾ ಆನಂದನನ್ನು ಧಿಕ್ಕರಿಸಿ ಹೊರಟು ಹೋಗುತ್ತಾಳೆ. ಒಬ್ಬಂಟಿಯಾದ ಆನಂದ ತನ್ನ ತುಮುಲವನ್ನು ತನ್ನ ಮನೆಗೆಲಸದ ಮಾಧೂನ ಹತ್ತಿರ ಹೇಳಿಕೊಂಡಾಗ ಕವಿತಾಳ ಗಂಡನ ಕೊಲೆಯೇ ಈ ಸಮಸ್ಯೆಗೆ ಪರಿಹಾರ ಎಂಬ ಸಲಹೆ ನೀಡುತ್ತಾನೆ. ಕೊಲೆಗಾರಳೊಬ್ಬಳಿಗೆ ಸುಪಾರಿ ಕೊಟ್ಟು ಆನಂದನ ಸಾವಿನ ಸುದ್ದಿಗಾಗಿ ಕಾಯುತ್ತಾನೆ ಆನಂದ. ಆದರೆ ಕೊಲೆಗಾರ ಮಾಡಿದ ಎಡವಟ್ಟಿನಿಂದ ಕವಿತಾಳನ್ನು ಪಡೆಯುವಲ್ಲಿ ಆನಂದ ವಿಫಲನಾಗುತ್ತಾನೆ. ಶ್ರೀಧರನ ಕೊಲೆಗೆ ಸಾಕ್ಷಿಯಾದ ಕವಿತಾಳನ್ನು ಕೂಡ ಕೊಂದು ಬಿಟ್ಟೆ ಎನ್ನುವ ಕೊಲೆಗಾರನ ಮಾತನ್ನು ಕೇಳಿ ಆನಂದ ಕುಸಿದು ಹೋಗಿ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಾನೆ.

ಹೀಗೆ ತನ್ನ ಬರವಣಿಗೆಗೆ ವ್ಯತಿರಿಕ್ತವಾಗಿ ಬದುಕುವ ಆನಂದ ಎಂಬ ಸಾಹಿತಿಯ ಮುಖವಾಡದ ಹಿಂದಿನ ಕ್ರೌರ್ಯ ವನ್ನು ಈ ನಾಟಕ ಬಿಚ್ಚಿಡುತ್ತ ಹೋಗುತ್ತದೆ.

ನಾಟಕದ ಕತೆ ಸಿನಿಮೀಯ ಎನ್ನಿಸಿದರೂ ವಾಸ್ತವತೆಗೆ ಹತ್ತಿರವಾಗಿದೆ. ಇಂದಿನ ಸಮಾಜಲ್ಲಿ ಅನಾಚಾರಗಳನ್ನು ಮಾಡುತ್ತ ಆದರ್ಶದ ಮುಖವಾಡವನ್ನು ಹಾಕಿಕೊಂಡು ಗೌರವವನ್ನು ಗಿಟ್ಟಿಸಿಕೊಳ್ಳುವ ವ್ಯಕ್ತಿಗಳತ್ತ ಈ ನಾಟಕ ಬೆರಳು ತೋರಿಸುತ್ತದೆ.

ಎಸ್.ವಿ.ಕೃಷ್ಣಶರ್ಮ ಅವರು ರಚಿಸಿದ ಈ ನಾಟಕದ ನಿರ್ದೇಶನವನ್ನು ಪ್ರದೀಪ್ ಅಂಚೆ ಅವರು ಸಮರ್ಥವಾಗಿ ನಿರ್ದೇಶಿಸಿದ್ದಾರೆ. ನಟ ನಟಿಯರಾದ ಪೂಜಾ ರಾವ್, ರಾಘವೇಂದ್ರ ನಾಯಕ್, ಶ್ರೀಕಂಠ ಶ್ರೌತಿ, ಸುನೀಲ್ ನಾಗರಾಜ ರಾವ್, ವಿಜಯ ಕಷ್ಯಪ್, ಅರ್ಜುನ್ ಹಾಗೂ ಪ್ರಿಯಾ ನಾಗರಾಜ್ ತಮ್ಮ ಪ್ರಬುದ್ಧ ಅಭಿನಯದಿಂದ ಪ್ರೇಕ್ಷಕರ ಮನ ಸೆಳೆದರು. ಮಹದೇವ ಸ್ವಾಮಿ ಅವರ ಬೆಳಕು ನಾಟಕಕ್ಕೆ ಮೆರುಗನ್ನು ನೀಡಿತು. ಹೇಮಂತ್ ಜನಾರ್ದನ ರಾವ್ ಅವರ ಹಿನ್ನೆಲೆ ಸಂಗೀತ ಮಧುರವಾಗಿತ್ತು. ವಿಶ್ವನಾಥ ಮಂಡಿ ಅವರ ಸರಳ, ಸಮರ್ಪಕವಾದ ರಂಗಸಜ್ಜಿಕೆ ನಾಟಕಕ್ಕಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಗೌರಿ ಚಂದ್ರಕೇಸರಿ

contributor

Similar News