ಸಾಗರ ಉಪವಿಭಾಗೀಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ

Update: 2023-11-14 07:28 GMT

ಸಾಗರ: ಇಲ್ಲಿನ ಉಪವಿಭಾಗೀಯ ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾಗರ, ಸೊರಬ, ಹೊಸನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದಲೂ ಬಡ ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ಆದರೆ ಈ ಆಸ್ಪತ್ರೆಯಲ್ಲಿ ಸಾಕಷ್ಟು ವೈದ್ಯರು, ಸಿಬ್ಬಂದಿಯವರ ಕೊರತೆ ಎದ್ದು ಕಾಣುತ್ತಿದೆ.

ಆಸ್ಪತ್ರೆಯಲ್ಲಿ ಸಾಕಷ್ಟು ಅತ್ಯಾಧುನಿಕ ಯಂತ್ರಗಳಿದ್ದರೂ ವೈದ್ಯರು, ತಜ್ಞ ಸಿಬ್ಬಂದಿ ಕೊರತೆ ಕಾರಣಕ್ಕಾಗಿ ಅವುಗಳ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ತುರ್ತು ಚಿಕಿತ್ಸಾ ನಿಗಾ ಘಟಕವು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬೇಕಿದ್ದು, ಇದಕ್ಕಾಗಿ ಅಗತ್ಯವಿರುವ ಪ್ರತ್ಯೇಕ ವೈದ್ಯರು, ಸಿಬ್ಬಂದಿ ಇರುವುದಿಲ್ಲ.

ಇತರ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯ ಸಿಬ್ಬಂದಿಯೇ ಈ ಘಟಕವನ್ನು ನೋಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಸ್ಕ್ಯಾನಿಂಗ್ ಯಂತ್ರೋಪಕರಣಗಳು ಇದ್ದರೂ ವಿಕಿರಣ ತಜ್ಞರು (ರೇಡಿಯಾಲಜಿಸ್ಟ್) ಕೊರತೆಯಿಂದಾಗಿ ಅದು ಸರಿಯಾಗಿ ಬಳಕೆಯಾಗುತ್ತಿಲ್ಲ. ಇದರ ಪರಿಣಾಮ ಬಡ ರೋಗಿಗಳು ಸ್ಕ್ಯಾನಿಂಗ್ ಮಾಡಲು ಖಾಸಗಿ ಆಸತ್ರೆಯ ಬಾಗಿಲು ತಟ್ಟಬೇಕಿದೆ. ಕಳೆದ 6 ತಿಂಗಳಿನಿಂದ ನೇತ್ರ ತಜ್ಞರಿಲ್ಲದೆ ಕಣ್ಣಿನ ಸಮಸ್ಯೆ ಇದ್ದವರ ಪರದಾಟ ಹೇಳತೀರದು. ಹಲ್ಲಿನ ವೈದ್ಯರು ಇದ್ದರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಇರುವ ಅತ್ಯಾಧುನಿಕ ಯಂತ್ರೋಕರಣಗಳನ್ನು ಹಾಗೆಯೇ ಜೋಪಾನವಾಗಿಟ್ಟಿದ್ದಾರೆ.

ಹೊರ ರೋಗಿಗಳು ವೈದ್ಯರ ಭೇಟಿಗೆ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯಬೇಕು. ಕೆಲ ರೋಗಿಗಳು ಹಾಗೆ ಸಾಲಿನಲ್ಲಿ ನಿಲ್ಲದೆ ನೇರ ವೈದ್ಯರನ್ನು ಭೇಟಿಯಾಗಲು ಮುನ್ನುಗ್ಗುತ್ತಾರೆ. ಆ ಸಂದರ್ಭದಲ್ಲಿ ಸಾಲಿನಲ್ಲಿ ತಾಸುಗಟ್ಟಲೆ ಕಾದು ನಿಂತಿದ್ದವರು ರೊಚ್ಚಿಗೆದ್ದು ಅವರೊಂದಿಗೆ ಜಗಳವಾಡುವುದು ಮಾಮೂಲಾಗಿದೆ. ತಾಸುಗಟ್ಟಲೆ ಕಾದರೂ ಕೆಲವೊಮ್ಮೆ ವೈದ್ಯರಿಲ್ಲದೇ ಹಿಂದಿರುಗಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ವಿಚಾರಣೆಯಲ್ಲಿ ವೈದ್ಯರ ಬರುವಿಕೆಗೆ ಮಾಹಿತಿ ಕೇಳಿದಾಗ ದರ್ಪದ ಉತ್ತರ ಸಿಗುತ್ತದೆ.

ಉಪವಿಭಾಗೀಯ ಆಸ್ಪತ್ರೆ 100ರಿಂದ 150 ಹಾಸಿಗೆಗೆ ಮೇಲ್ದರ್ಜೆಗೆ ಏರಿದ್ದರೂ ಸಿಬ್ಬಂದಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ. 150 ಹಾಸಿಗೆ ಆಸ್ಪತ್ರೆಗೆ ಇರಬೇಕಾದ 82 ಡಿ ದರ್ಜೆ ನೌಕರರಲ್ಲಿ ಈಗಿರುವುದು ಕೇವಲ 42 ನೌಕರರು ಮಾತ್ರ. 13 ಜನ ನರ್ಸ್ ಸಿಬ್ಬಂದಿ ಕೊರತೆ ಇದೆ. ಕಾಲಕಾಲಕ್ಕೆ ಸಂಬಂಧ ಪಟ್ಟವರ ಕಾಳಜಿಯಿಂದ ಹಾಸಿಗೆ ಸಂಖ್ಯೆ ಹೆಚ್ಚುತ್ತಿದೆ. ಆಧುನಿಕ ಯಂತ್ರ ಸುಧಾರಣೆ ಆಗುತ್ತದೆ.ಆದರೆ ಜೊತೆ ಜೊತೆಗೆ ಆಗಬೇಕಾದ ಪೂರಕ ವ್ಯವಸ್ಥೆ, ತಜ್ಞರ ನೇಮಕ ಆಗುತ್ತಿಲ್ಲ.ಬಡ ರೋಗಿಗಳು ಪರದಾಡುವ ಸ್ಥಿತಿ ಹೆಚ್ಚಾಗಿದೆ.

‘ವಿಶ್ವಾಸಾರ್ಹತೆ ಕಳೆದುಕೊಂಡ ಲ್ಯಾಬ್ ವರದಿ’

ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ಅಗತ್ಯವಿರುವ ರಕ್ತ, ಮೂತ್ರ ಮೊದಲಾದ ಪರೀಕ್ಷೆಗಳಿಗೆ ಪರೀಕ್ಷಿಸುವ ಪ್ರಯೋಗಾಲಯ ಆಸ್ಪತ್ರೆಯಲ್ಲಿದೆ. ಆದರೆ ಇಲ್ಲಿ ಬರುವ ವರದಿಗೂ, ಖಾಸಗಿ ಲ್ಯಾಬ್‌ಗಳಲ್ಲಿ ಬರುವ ವರದಿಗೂ ವ್ಯತ್ಯಾಸಗಳು ಕಂಡು ಬರುತ್ತಿರುವುದರಿಂದ ಈ ಆಸ್ಪತ್ರೆಯಲ್ಲಿನ ಪ್ರಯೋಗಾಲಯ ವಿಶ್ವಾಸರ್ಹತೆಯನ್ನು ಕಳೆದುಕೊಂಡಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಇಮ್ರಾನ್ ಸಾಗರ್

contributor

Similar News