ಇದು ಹದಿನೆಂಟು ಆದಿವಾಸಿ ಯುವತಿಯರ ಮೇಲಿನ ಅತ್ಯಾಚಾರದ ಕಥನ....
‘ಗಂಧದ ಮರಗಳ ಕಳ್ಳಸಾಗಣೆಯ ಜಾಲ ವಾಚಾತಿ ಆದಿವಾಸಿಗಳ ಮೇಲೆ ಈ ಕ್ರೂರ ದಾಳಿ ನಡೆಸುವ ಹಿಂದಿನ ದಿನ ಶಿಥೇರಿ ಬೆಟ್ಟದಲ್ಲಿ ಗಂಧದ ಮರಗಳ್ಳರು ಅರಣ್ಯ ಸಿಬ್ಬಂದಿ ಜೊತೆ ಶಾಮೀಲಾಗಿ ಬೆಲೆಬಾಳುವ ನೂರಾರು ಗಂಧದ ಮರಗಳನ್ನು ಕಡಿದು ಹಾಕಿದ್ದರು. ಅವುಗಳ ಸಾಗಣೆಗಾಗಿ ಕಲಾಸಂಬಡಿ ಹಾಡಿಯ ಕೂಲಿಕಾರರನ್ನು ಬಳಸಿದ್ದರು. ಆದರೆ ಹಾಗೆ ಮರಕಡಿದು ಕಳ್ಳ ಸಾಗಣೆ ಮಾಡುವಾಗ ಸುಮಾರು 30-40 ಮೆಟ್ರಿಕ್ ಟನ್ ಗಂಧದ ಮರದ ತುಂಡುಗಳು ನಾಪತ್ತೆಯಾಗಿದ್ದವು. ನಾಪತ್ತೆಯಾದ ಗಂಧದ ಮರಗಳ ಪತ್ತೆಗಾಗಿ ಅರಣ್ಯ ಸಿಬ್ಬಂದಿ ಹಾಗೂ ಖಾಕಿಪಡೆ ಕಲಾಸಂಬಡಿಯಿಂದ ವಾಚಾತಿ ಆದಿವಾಸಿಗಳ ಹಟ್ಟಿಗೆ ಬಂದು ಈ ದಾಳಿ ನಡೆಸಿತ್ತು ಎನ್ನುತ್ತಾರೆ ಹರೂರ ಕ್ಷೇತ್ರದ ಮಾಜಿ ಸಿಪಿಐ(ಎಂ) ಶಾಸಕರಾದ ದಿಲ್ಲಿಬಾಬು.
ಭಾಗ- 1
ಅದೊಂದು ಮಟಮಟ ಮಧ್ಯಾಹ್ನದ ದಿನ. ಕಾಡಿನಂಚಿನ ತಪ್ಪಲಿನಲ್ಲಿ ಬದುಕು ಕಟ್ಟಿಕೊಂಡಿದ್ದ ಆ ಬಡವರ ಪಾಲಿಗೆ ಆ ದಿನದ ಸೂರ್ಯೋದಯ ಎಂದಿನಂತೆ ಇರಲಿಲ್ಲ. ಮಧ್ಯಾಹ್ನವಾಗುತ್ತಿದ್ದಂತೆ ಆಗಸದಲ್ಲಿ ನೆತ್ತಿಮೇಲೆ ಬಂದ ಸೂರ್ಯ ಕೆಂಡದಂತೆ ನಿಗಿ ನಿಗಿ ಉರಿಯುತ್ತಿದ್ದ..
ಕಾಡಿನೊಳಗೆ ಜೀವಿಸುವ ಜನರು ಸಹಜವಾಗಿಯೇ ತಮ್ಮ ಸುತ್ತ ಮುತ್ತ ಸಂಭವಿಸುವ ಹಲವು ಪ್ರಾಕೃತಿಕ ದುರಂತಗಳು, ಪ್ರಾಣಿಗಳ ದಾಳಿಗಳ ಮುನ್ಸೂಚನೆಗಳನ್ನು ಗ್ರಹಿಸುವ ಗುಣವನ್ನು ಹೊಂದಿರುತ್ತಾರೆ ಎನ್ನುವುದು ಅವರನ್ನು ಅಭ್ಯಸಿಸಿದ ಮನೋಶಾಸ್ತ್ರಜ್ಞರ ಮಾತು. ಆದರೆ ಅಂದು ಅರಣ್ಯವನ್ನೆ ನಂಬಿದ್ದ ಆ ಜನರು ತಮ್ಮ ಮೇಲೆ ಎರಗಿ ಬಂದ ಆ ಮನುಷ್ಯ ರೂಪದ ಕ್ರೂರ, ಅಮಾನವೀಯ ರಾಕ್ಷಸಿ ದೌರ್ಜನ್ಯವನ್ನು ಊಹೆ ಕೂಡ ಮಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದರು..!
ನಿಜ, ಅದು 1992 ಜೂನ್ 20ರ ಮಧ್ಯಾಹ್ನ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಶಿತೇರಿ ಬೆಟ್ಟದ ತಪ್ಪಲಿನಡಿ ಬರುವ ಹೆರೂರ ಸಮೀಪದ ವಾಚಾತಿ ಎನ್ನುವ ಮಲೆಯಾಳಿ ಆದಿವಾಸಿಗಳ ಒಂದು ಕುಗ್ರಾಮ. ಅಲ್ಲಿನ ಜನರಿಗೆ ಆ ದಿನ ತಮ್ಮ ಬದುಕಿನಲ್ಲೇ ಎಂದೂ ಮರೆಯದ ಕರಾಳ ದಿನವಾಗಲಿದೆ ಎನ್ನುವ ಕಲ್ಪನೆಯೇ ಇರಲಿಲ್ಲ. ಆ ನಡು ಮಧ್ಯಾಹ್ನ ಆದಿವಾಸಿ ಹಟ್ಟಿಗೆ ಹತ್ತಾರು ವಾಹನಗಳಲ್ಲಿ ನುಗ್ಗಿದ ನೂರಾರು ಸಂಖ್ಯೆಯ ಅರಣ್ಯ ಇಲಾಖೆ ಸಿಬ್ಬಂದಿ, ಖಾಕಿ ಪೊಲೀಸರು, ಕಂದಾಯ ಅಧಿಕಾರಿಗಳು ಸಿಕ್ಕ ಸಿಕ್ಕವರನ್ನು ಅವರ ಗುಡಿಸಲುಗಳಿಂದ, ಸುತ್ತಲಿನ ಹೊಲಗಳಿಂದ ಹಿಡಿದು ಲಾಠಿ ಬೂಟುಗಳಿಂದ ಹೊಡೆಯುತ್ತಾ, ಅವಾಚ್ಯವಾಗಿ ಬಯ್ಯುತ್ತಾ ಹಟ್ಟಿಯ ಗುಡಿಸಲುಗಳಲ್ಲಿದ್ದ ಕಾಳುಕಡ್ಡಿಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆಯುತ್ತಾ ಕೈಗೆ ಸಿಕ್ಕ ಗಂಡಸರು, ಹೆಂಗಸರು ಮಕ್ಕಳಾದಿಯಾಗಿ ಎಲ್ಲರನ್ನೂ ಹಾಡಿಯ ಹೊರಗಿರುವ ಆಲದ ಮರದಡಿ ತಂದು ಕೂಡಿಹಾಕಿದರು. ಪ್ರತಿಭಟಿಸಿದ ಯುವತಿಯರು ಹಾಗೂ ಹೆಂಗಸರ ಸೀರೆಗಳನ್ನು, ಅವರ ತಲೆಗೂದಲನ್ನು ಹಿಡಿದು ಧರಧರನೆ ಬೀದಿಯಲ್ಲಿ ಪ್ರಾಣಿಗಳನ್ನು ಎಳೆತಂದಂತಹ ಘಟನೆ ನಡೆದಾಗ ರಾಣಿಗೆ ಕೇವಲ 13 ವರ್ಷ. ಆಕೆ 8 ನೇ ತರಗತಿ ಓದುತ್ತಿದ್ದಳು ರಾಣಿ ಇಂದು ಆ ಘಟನೆಯನ್ನು ನೆನಪಿಸಿಕೊಂಡಾಗ ಕಣ್ಣಿಂದ ಜಿನುಗಿದ ಕಣ್ಣೀರು ಆಗಲೇ ಕಪಾಳದ ಮೇಲೆ ಬಂದು ನಿಂತಿತ್ತು.!
ಅರಣ್ಯ ಇಲಾಖೆ ಪೊಲೀಸರ ಇಂತಹ ಅನಿರೀಕ್ಷಿತ ದಾಳಿಗೆ ಹೆದರಿದ ಆದಿವಾಸಿ ಹಟ್ಟಿಯ ಗಂಡಸರನೇಕರು ಭೀತಿಯಿಂದ ಸಮೀಪದ ಶಿತೇರಿಗಿರಿಗಳ ತಪ್ಪಲುಗಳಿಗೆ ಓಡಿಹೋಗಿ ಅವಿತುಕೊಂಡರು. ಹಟ್ಟಿಯಲ್ಲಿ ವಯಸ್ಸಾದವರು,ಗೃಹಿಣಿಯರು, ಯುವತಿಯರು, ಕೋಳಿ, ಕುರಿ ಮತ್ತು ಸಾಕುಪ್ರಾಣಿಗಳ ಬಿಟ್ಟು ಇನ್ನೇನೂ ಇರಲಿಲ್ಲ. ಮಹಿಳೆಯರು ಮತ್ತು ಯುವತಿಯರಿಗೆ ಅರಣ್ಯ ಪೊಲೀಸರು ಯಾವುದೇ ಹಿಂಸೆ ನೀಡುವುದಿಲ್ಲ ಎನ್ನುವ ಭಾವನೆಯಿಂದ ಗಂಡಸರನೇಕರು ಅಲ್ಲಿಂದ ಓಡಿ ತಲೆಮರೆಸಿಕೊಂಡಿದ್ದರು. ಆದರೆ ಆ ದಿನ ಇಡೀ ಕಾಡಿನಂಚಿನ ಆ ಕುಗ್ರಾಮ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಖಾಕಿ ಕಾರುಬಾರುಗಳು ನಡೆಸಿದ ಪೈಶಾಚಿಕ ದಾಳಿಗೆ ಸಿಕ್ಕು ನಜ್ಜುಗುಜ್ಜಾಗಿತ್ತು. ಮುಂದಿನ ಕೆಲವು ವಾರಗಳ ಮಟ್ಟಿಗಂತೂ ವಾಚಾತಿಯ ಮೇಲೆ ಅಮವಾಸ್ಯೆಯ ಕತ್ತಲೇ ಮನೆ ಮಾಡಿತ್ತು..!
18 ಯುವತಿಯರ ಮೇಲೆ
ಸಾಮೂಹಿಕ ಅತ್ಯಾಚಾರ
ಆ ಕುಗ್ರಾಮದ ಹೊರಗಡೆಯ ಆಲದಮರದಡಿಯಲ್ಲಿ ತಂದು ಎಲ್ಲರನ್ನು ಹೊಡೆದು, ಬಡಿದು ಬಯ್ಯುತ್ತಾ ಎಳೆದು ತಂದು ಗುಡ್ಡೆ ಹಾಕಿದ್ದ ಪೊಲೀಸರ ಕ್ರೌರ್ಯ ಅಲ್ಲಿಗೆ ನಿಲ್ಲಲಿಲ್ಲ. ಭಯದಿಂದ ತತ್ತರಿಸಿ ಗೋಳಿಡುತ್ತಾ ನಿಂತಿದ್ದ ನೂರಾರು ಆದಿವಾಸಿಗಳನ್ನು ದುರುಗುಟ್ಟಿ ಒಂದು ಬಾರಿ ನೋಡಿದ ಅರಣ್ಯ ಇಲಾಖೆ ಪೊಲೀಸರು, ಅವರ ಜತೆ ಬಂದಿದ್ದ ಕಂದಾಯ ಇಲಾಖೆ ಸಿಬ್ಬಂದಿ ಗುಂಪಿನಲ್ಲಿದ್ದ ಯುವತಿಯರನ್ನೆಲ್ಲ ಹೆಕ್ಕಿಹೆಕ್ಕಿ ಗುರುತಿಸಿ ಗಂಧದ ಮರಗಳ್ಳರನ್ನು ಹುಡುಕಲು ನೀವು ಬೇಕು ಎಂದು ಗುಂಪಿನಿಂದ ಪ್ರತ್ಯೇಕಿಸಿ ಹಲವು ಲಾರಿಗಳಿಗೆ ಹತ್ತಿಸಿಕೊಂಡರು. ಬಳಿಕ ದೂರದಲ್ಲಿದ್ದ ಕೆರೆಯ ಸಮೀಪ ಕರೆದೊಯ್ದರು. ನಂತರ ನಡೆದಿದ್ದೇ ಈ ಹದಿನೆಂಟು ಯುವತಿಯರ ಸಾಮೂಹಿಕ ಅತ್ಯಾಚಾರ.
ನನ್ನ ಮೇಲೆ ಅತ್ಯಾಚಾರ ನಡೆಸಿದ ಅರಣ್ಯ ಸಿಬ್ಬಂದಿ ಬೆದರಿಕೆ ಹಾಕಿ ಬಿಟ್ಟರು. ನಾನು ನಾಲಿಗೆಗೆ ತುಟಿ ಕಚ್ಚಿಕೊಂಡು ಮನದಾಳದಲ್ಲಿ ದುಗುಡ, ಅವಮಾನ ತುಂಬಿಕೊಂಡು ಮೌನವಾಗಿ ನೆಲವನ್ನೇ ನೋಡುತ್ತಾ ನನ್ನ ಕರೆತಂದಿದ್ದ ಆಲದ ಮರದತ್ತ ಹೆಜ್ಜೆ ಹಾಕಿದೆ. ಹೀಗೆ ಕರೆದೊಯ್ದ ಎಲ್ಲ ಹಾಡಿಯ ಯುವತಿಯರು ನನ್ನಂತೆಯೇ ಅತ್ಯಾಚಾರ ಎನ್ನುವ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿದ್ದರು. ಅವರ ಸಂಖ್ಯೆ ಬರೋಬ್ಬರಿ 18 ರಷ್ಟಿತ್ತು ಎನ್ನುತ್ತಾ ಗದ್ಗದಿತರಾದರು ಅಂದು ಸ್ವತಃ ಅತ್ಯಾಚಾರಕ್ಕೆ ಸಿಕ್ಕು ಬಲಿಪಶುವಾಗಿದ್ದ ಲಲಿತಾ. ಇದಾದ ಬಳಿಕ ಹೆರೂರ್ ಅರಣ್ಯ ಕಚೇರಿಗೆ 30 ಜನ ಮಹಿಳೆಯರು ಸೇರಿ 15 ಜನ ಹಾಡಿ ಆದಿವಾಸಿ ಗಂಡಸರನ್ನು ಕರೆದೊಯ್ದರು. ನಮ್ಮ ಜತೆ ಇದ್ದ ಹಿರಿಕ ಊರ ಗೌಡ ಪೆರುಮಾಳ್ ಅವರನ್ನು ನಾವೇ ಹೊಡೆಯಬೇಕೆಂದು ಪೊರಕೆಕಟ್ಟಿಗೆಯನ್ನು ನಮ್ಮ ಕೈಗೆ ನೀಡಿ ಅರಣ್ಯ ಆಧಿಕಾರಿಗಳು ಆದೇಶಿಸಿದರು. ಆದರೆ ನಾವೆಲ್ಲ ಆಳುತ್ತಾ ನಮ್ಮ ಸಂಬಂಧಿಯೂ ಹಾಗೂ ನಮ್ಮ ಹಳ್ಳಿಯ ರಕ್ಷಕನೂ ಆಗಿದ್ದ ಗೌಡ ಪೆರುಮಾಳ್ ಮೇಲೆ ಹಲ್ಲೆ ನಡೆಸಲು ನಿರಾಕರಿಸಿದಾಗ ಅದೇ ಪೊರಕೆಕಡ್ಡಿಯಿಂದ ನಮ್ಮನ್ನೆಲ್ಲ ಮನಸ್ಸಿಗೆ ಬಂದಂತೆ ಹೊಡೆದರು ಮಾತ್ರವಲ್ಲ ಆ ರಾತ್ರಿ ಅರಣ್ಯ ಇಲಾಖೆ ಕಚೇರಿಯಲ್ಲೇ ನಮ್ಮನ್ನೆಲ್ಲ ಕೂಡಿ ಹಾಕಿದ್ದರು. ಅಲ್ಲಿದ್ದ ಯುವತಿಯರೆಲ್ಲ ತಮ್ಮ ತಮ್ಮ ಕುಟುಂಬದ ಸದಸ್ಯರ ಜತೆ ಮೂಲೆಯೊಂದರಲ್ಲಿ ಅವಿತು ಕೂತಿದ್ದರು. ಆದರೆ ಒಬ್ಬಳೇ ಇದ್ದ ನನ್ನ ಮೇಲೆ ಪುನಃ ಅತ್ಯಾಚಾರ ನಡೆಸಿಯಾರು ಎನ್ನುವ ಭಯದಿಂದ ಹೊರಗೆ ಕಾಲಿಡಲೇ ಇಲ್ಲ. ಆ ನೆನಪು ಈಗಲೂ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ ಎಂದು ನಿಟ್ಟುಸಿರು ಬಿಟ್ಟಳು ಲಲಿತಾ.
30 ವರ್ಷದ ಹಿಂದಿನ ಪ್ರಕರಣ ಈಗ
ಮುನ್ನ್ನೆಲೆಗೆ ಬಂದಿದ್ದು ಯಾಕೆ?
ಇದು ಮೂರು ದಶಕಗಳ ಹಿಂದಿನ ಅಂದರೆ 31 ವರ್ಷಗಳ ಹಳೆಯ ಪ್ರಕರಣವಾದರೂ ಈಗ ಮತ್ತೆ ಮುನ್ನೆಲೆಗೆ ಬರಲು ಕಾರಣವಾದುದು ಸೆಪ್ಟಂಬರ್ 29, 2023 ರಂದು ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು. 1992ರಲ್ಲಿ ನಡೆದ ಈ ಭೀಬತ್ಸ ಅತ್ಯಾಚಾರ ಪ್ರಕರಣವನ್ನು 2011ರಲ್ಲಿ ಇತ್ಯರ್ಥ್ಯಗೊಳಿಸಿದ್ದ ವಿಚಾರಣಾ ನ್ಯಾಯಾಲಯವು ಈ ಪ್ರಕರಣದಲ್ಲಿ ಭಾಗಿಯಾದ ಅರಣ್ಯ, ಪೊಲೀಸ್ ಹಾಗೂ ಕಂದಾಯ ಇಲಾಖೆಯ 269 ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿತ್ತು. ಈ ತೀರ್ಪನ್ನು ಆರೋಪಿಗಳು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಎಲ್ಲ ಮೇಲ್ಮನವಿಗಳನ್ನು ವಜಾಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿಹಿಡಿದು 215 ಜನ ಅಪರಾಧಿಗಳೆಂದು ಪ್ರಕಟಿಸಿತು.
ಘೋಷಿತ ಅಪರಾಧಿಗಳಲ್ಲಿ 17 ಮಂದಿ ಅತ್ಯಾಚಾರದ ಆರೋಪದ ಮೇಲೆ ಶಿಕ್ಷೆಗೊಳಗಾದವರು. 52 ಆರೋಪಿಗಳು ಅದಾಗಲೇ ನಿಧನರಾಗಿದ್ದಾರೆ. ಉಳಿದ ಸಿಬ್ಬಂದಿ ಪ್ರಭುತ್ವ ಹಿಂಸಾಚಾರ ದಲ್ಲಿ ಭಾಗಿಯಾದುದಕ್ಕಾಗಿ ಜೈಲು ಶಿಕ್ಷೆಗೆಗುರಿಯಾದರು. ಒಂದೇ ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚು ಅಪರಾಧಿಗಳಿಗೆ ಏಕಕಾಲದಲ್ಲಿ ಶಿಕ್ಷೆ ವಿಧಿಸಿದ ಹಾಗೂ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ತೀರ್ಪು ಇದಾಗಿದೆ ಮಾತ್ರವಲ್ಲ ನ್ಯಾಯದ ನಿರೀಕ್ಷೆಯಲ್ಲಿದ್ದ ಆದಿವಾಸಿಗಳಿಗೆ ನ್ಯಾಯದಾನ ಮಾಡಿದ ತೀರ್ಪಾಗಿದೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ವಾಚಾತಿ ಗ್ರಾಮದಲ್ಲಿರುವ ಆದಿವಾಸಿ ಮನೆ.
ಈ ಕ್ರೂರ ದಾಳಿ
ನಡೆದಿದ್ದಾದರೂ ಯಾಕೆ..?
ಆದಿವಾಸಿ ಮಹಿಳೆಯರು ಹಾಗೂ ಜನರ ಮೇಲೆ 1992 ಜೂನ್ 20 ರಂದು ನಡೆಸಲಾದ ದಾಳಿ ಹಿಂದಿದ್ದ ಕಾರಣವೇ ಬೇರೆ. ಅದರ ಹಿಂದಿತ್ತು ಗಂಧದ ಮರಗಳ ಕಳ್ಳಸಾಗಣೆಯ ಜಾಲ. ವಾಚಾತಿ ಆದಿವಾಸಿಗಳ ಮೇಲೆ ಈ ಕ್ರೂರ ದಾಳಿ ನಡೆಯುವ ಹಿಂದಿನ ದಿನ ಶಿಥೇರಿ ಬೆಟ್ಟದಲ್ಲಿ ಗಂಧದ ಮರಗಳ್ಳರು ಅರಣ್ಯ ಸಿಬ್ಬಂದಿ ಜೊತೆಯಾಗಿ ಬೆಲೆಬಾಳುವ ನೂರಾರು ಗಂಧದ ಮರಗಳನ್ನು ಕಡಿದು ಹಾಕಿದ್ದರು. ಅವುಗಳ ಸಾಗಣೆಗಾಗಿ ಕಲಾಸಂಬಡಿ ಹಾಡಿಯ ಕೂಲಿಕಾರರನ್ನು ಬಳಸಿದ್ದರು. ಆದರೆ ಹಾಗೆ ಮರಕಡಿದು ಕಳ್ಳ ಸಾಗಣೆ ಮಾಡುವಾಗ ಸುಮಾರು 30-40 ಮೆಟ್ರಿಕ್ ಟನ್ ಗಂಧದ ಮರದ ತುಂಡುಗಳು ನಾಪತ್ತೆಯಾಗಿದ್ದವು. ನಾಪತ್ತೆಯಾದ ಗಂಧದ ಮರಗಳ ಪತ್ತೆಗಾಗಿ ಅರಣ್ಯ ಸಿಬ್ಬಂದಿ ಹಾಗೂ ಖಾಕಿಪಡೆ ಕಲಾಸಂಬಡಿಯಿಂದ ವಾಚಾತಿ ಆದಿವಾಸಿಗಳ ಹಟ್ಟಿಗೆ ಬಂದು ಈ ದಾಳಿ ನಡೆಸಿತ್ತು ಎನ್ನುತ್ತಾರೆ ಹೆರೂರ ಕ್ಷೇತ್ರದ ಮಾಜಿ ಸಿಪಿಐ(ಎಂ) ಶಾಸಕರಾದ ದಿಲ್ಲಿಬಾಬು.
ಮೂರಾಬಟ್ಟೆಯಾದ ಆದಿವಾಸಿಗಳ ಬದುಕು
ಅರಣ್ಯ ಸಿಬ್ಬಂದಿ ಮತ್ತು ಖಾಕಿ ಪಡೆಯ ಈ ಪೈಶಾಚಿಕ ಕೃತ್ಯ ಕೇವಲ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆಸೀಮಿತವಾಗಲಿಲ್ಲ ಎಂದು ಮಾತು ಮುಂದುವರಿಸಿದ ಲಲಿತಾ ಹೇಳಿದ್ದು ಹೀಗೆ....
ನಾನು ವಾಪಸ್ ಹಟ್ಟಿಗೆ ಬಂದಾಗ ನನ್ನ ತಂದೆ ತಾಯಿಗಳ್ಯಾರೂ ಕಾಣಲಿಲ್ಲ. ಅವರೆಲ್ಲ ಸಮೀಪದ ಶಿತೇರಿ ಬೆಟ್ಟದ ತಪ್ಪಲಿನಲ್ಲಿ ಅವಿತಿದ್ದರು. ಬಾಯಾರಿಕೆಯಾಗಿದ್ದರಿಂದ ನಾನು ಬರಿಗಾಲಲ್ಲೇ ಹಾಡಿಯ ಬಾವಿಯತ್ತ ನೀರು ಕುಡಿಯಲು ತೆರಳಿದೆ. ಆದರೆ ಬಾವಿ ನೀರಿನ ಮೇಲೆ ಅರಣ್ಯ ಸಿಬ್ಬಂದಿ ಸುರಿದಿದ್ದ ಸೀಮೆಎಣ್ಣೆ ತೇಲುತ್ತಿತ್ತು. ಜತೆಗೆ ಸತ್ತ ಪ್ರಾಣಿಗಳ ದೇಹಗಳು, ಅಕ್ಕಿಯ ಮೂಟೆಗಳು ತೇಲುತ್ತಿದ್ದವು. ಆದರೆ ಹೆರೂರ ಅರಣ್ಯ ಕಚೇರಿಯಲ್ಲಿ ನಮ್ಮನ್ನು ಕೂಡಿ ಹಾಕಿಯೇ ನಮ್ಮ ಹಟ್ಟಿಯಿಂದ ಕದ್ದೊಯ್ದ ಪ್ರಾಣಿಗಳಿಂದ ಮಾಸ ಬೇಯಿಸಿ ಗಡದ್ದಾಗಿ ತಿಂದು ತೇಗಿದ ಅರಣ್ಯ ಸಿಬ್ಬಂದಿ ನಮ್ಮನ್ನು ಮಾತ್ರ ಎಂಜಲನ್ನು ತಿನ್ನುವ ಪರಿಸ್ಥಿತಿಗೆ ದೂಡಿದ್ದರು. ಆ ಸನ್ನಿವೇಶ ನಮ್ಮನ್ನು ಎಷ್ಟೊಂದು ಅಸಹಾಯಕರನ್ನಾಗಿಸಿತ್ತು ಎನ್ನುವುದನ್ನು ನೆನಪಿಸಿಕೊಂಡರು.
ನಾನು ಈ ಪ್ರಕರಣದಲ್ಲಿ ಸಾಕ್ಷಿ ಹೇಳಲು ವರ್ಷಾನುಗಟ್ಟಲೆ ನನ್ನ ಸಣ್ಣ ಮಗಳನ್ನು ಸೊಂಟದಲ್ಲಿ ಎತ್ತಿಕೊಂಡು ಕೋರ್ಟಿಗೆ ಅಲೆದಾಡುತ್ತಿದ್ದೆ. ಅವಳು ದೊಡ್ಡವಳಾದ ಬಳಿಕ ನಾವು ಪ್ರತಿಬಾರಿ ಕೋರ್ಟ್ ವಿಚಾರಣೆಗೆ ಹೋಗುವಾಗಲೂ ‘ನಮ್ಮ ಹಳ್ಳಿಯ ಮೇಲೆ ನಡೆಯುವ ಇದಕ್ಕೆಲ್ಲ ಕೊನೆ ಯಾವಾಗ?’ ಎಂದು ಕೇಳುತ್ತಿದ್ದಳು. ಅವಳ ಆ ಪ್ರಶ್ನೆಗೆ ಮಾತ್ರವಲ್ಲ ನಮ್ಮ ಎಲ್ಲ ಮಕ್ಕಳ ಪ್ರಶ್ನೆಗಳಿಗೆ ಇಂದು ನ್ಯಾಯಾಲಯ ಉತ್ತರ ನೀಡಿದೆ ಎಂದು ಉತ್ತರಿಸಿದಳು ಮೂವತ್ತು ವರ್ಷಗಳ ಹಿಂದೆ 16 ರ ಹರೆಯದ ಯುವತಿಯಾಗಿದ್ದಾಗ ಅರಣ್ಯ ಸಿಬ್ಬಂದಿಯಿಂದ ಅತ್ಯಾಚಾರಕ್ಕೊಳಗಾದ ಕಲಾ ಎನ್ನುವ ಯುವತಿ.
ಅರಣ್ಯವಾಸಿಗಳನ್ನುಶೋಷಿಸುವ
ಅರಣ್ಯ ಸಿಬ್ಬಂದಿ ಹಾಗೂ ಶ್ರೀಗಂಧ ಕಳ್ಳರು
ವಾಚಾತಿ ಹಾಗೂ ಶಿಥೇರಿಗಿರಿಗಳಲ್ಲಿ ಅರಣ್ಯ ಸಿಬ್ಬಂದಿಯ ಜತೆ ಶಾಮೀಲಾಗಿರುವ ಮರಗಳ್ಳರು ಕಲಾಸಂಬಡಿಯ ಆದಿವಾಸಿ ಗಂಡಸರು ಕೆಲವರನ್ನು ಹುಡುಕಿ 100 ರೂ.ಗಳ ಆಮಿಷವೂಡ್ಡಿ ಗಂಧದ ಮರ ಕಡಿಸುತ್ತಾರೆ. ಅದೇ ರೀತಿ ಹೆಣ್ಣು ಮಕ್ಕಳಿಂದ ಅರಣ್ಯದಿಂದ ಮಾವುಗಳನ್ನು ಸಂಗ್ರಹಿಸಿ ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಾರೆ. ಆದರೆ ನಮ್ಮನ್ನು ಮರಗಳ್ಳರು ಎಂದು ಆರೋಪಿತ್ತಾರೆ. ಈ ಸಂಗತಿ ಅರಣ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳ ಹಿರಿಯ ಅಧಿಕಾರಿಗಳಿಗೂ ಗೊತ್ತಿದ್ದೇ ನಡೆಯುತ್ತಿದೆ ಎನ್ನುವ ಸಂಗತಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ವೇಲುಮುರುಗನ್ ನಡೆಸಿದ ವಿಚಾರಣೆಯ ಮುಂದೆ ವಾಚಾತಿ ಆದಿವಾಸಿ ಜನರು ನೇರವಾಗಿ ಹೇಳಿ ತಮ್ಮ ನೋವು ತೋಡಿಕೊಂಡಿದ್ದರು.
(ಆಧಾರ; ಹಿರಿಯ ಪತ್ರಕರ್ತೆಪಿ.ವಿ.ಶ್ರೀವಿದ್ಯಾ ಅವರ ವಿಶೇಷ ಲೇಖನ ದಿ ಹಿಂದೂ ಅಕ್ಟೋಬರ್ 8 ,2023)