ಇದು ಹದಿನೆಂಟು ಆದಿವಾಸಿ ಯುವತಿಯರ ಮೇಲಿನ ಅತ್ಯಾಚಾರದ ಕಥನ....

Update: 2023-10-17 03:51 GMT

ಭಾಗ- 2

ಎರಡು ದಶಕಗಳ ನಿರಂತರ

ಕಾನೂನು-ಜನರ ಹೋರಾಟ:

ವಾಚಾತಿ ಜನರ ಮೇಲೆ ನಡೆದ ಈ ಅನ್ಯಾಯದ ವಿರುದ್ಧ ತಮಿಳುನಾಡಿನ ಜನಪರ ಸಂಘಟನೆಗಳು ಸುದೀರ್ಘವಾದ 19 ವರ್ಷಗಳ ಕಾನೂನು ಹೋರಾಟ ನಡೆಸಿದವು. ಸ್ವಾತಂತ್ರ್ಯೋತ್ತರ ಭಾರತದ ಕಾನೂನು ಇತಿಹಾಸದಲ್ಲಿ ಈ ಮಹತ್ವದ ಪ್ರಕರಣವನ್ನು ವಿಚಾರಣೆ ನಡೆಸಿದ ಧರ್ಮಪುರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್. ಕುಮಾರ ಅವರು, 2011ರ ಸೆಪ್ಟಂಬರ್ 29ರಂದು, ಸಿಬಿಐ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಆರೋಪಿತರಾದ ಎಲ್ಲಾ 269 ಅಧಿಕಾರಿಗಳನ್ನು ದೋಷಿಗಳು ಎಂದು ತೀರ್ಪು ನೀಡಿದ್ದರು.

ವಾಚಾತಿ ಆದಿವಾಸಿಗಳ ಮೇಲೆ ನಡೆದ ಈ ಕ್ರೂರ ಹಾಗೂ ಪೈಶಾಚಿಕ ದಾಳಿಯ ಸುಳಿವು ಸಿಕ್ಕ ತಕ್ಷಣವೇ ಆಗಷ್ಟೇ ಸಿಪಿಐ(ಎಂ) ನೇತೃತ್ವದಲ್ಲಿ ರಚನೆಯಾಗಿದ್ದ ತಮಿಳುನಾಡು ಆದಿವಾಸಿ ಅಸೋಸಿಯೇಶನ್ (TNTA) ಮುಖ್ಯಸ್ಥ ಪಿ.ಷಣ್ಮುಗಂ ಶಿಥೇರಿಬೆಟ್ಟದಲ್ಲಿ ಸಭೆ ನಡೆಸಿ ಆನಂತರ ಘಟನೆ ನಡೆದ ವಾಚಾತಿಗೆ ಜುಲೈ 14, 1992ರಂದು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಕೂಡಲೇ ಅಂದಿನ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯರೂ ಆದ ಎ.ನಲ್ಲಶಿವನ್ ಅಂದಿನ ಮುಖ್ಯಮಂತ್ರಿ ಜೆ.ಜಯಲಲಿತಾಗೆ ಪತ್ರ ಬರೆದು ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದರು. ಆದರೆ ವಿಧಾನಸಭೆಯಲ್ಲಿ ಎತ್ತಲಾದ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಅಂದಿನ ಅರಣ್ಯ ಮಂತ್ರಿ ಕೆ.ಎ. ಸೆಂಗೋಟಿಯನ್ ಆದಿವಾಸಿ ಜನರ ಮೇಲೆ ಅರಣ್ಯ ಪೊಲೀಸರು ನಡೆಸಿದ ದಾಳಿಯನ್ನು ಸಮರ್ಥಿಸಿಕೊಂಡಿದ್ದಲ್ಲದೆ ವಾಚಾತಿ ಆದಿವಾಸಿಗಳೆಲ್ಲರೂ ‘ಸ್ಮಗ್ಲರ್’ಗಳು ಎಂದು ಆರೋಪಿಸಿದ್ದರು ಮಾತ್ರವಲ್ಲದೆ 1992 ಆಗಸ್ಟ್ ನಲ್ಲಿ ರಾಷ್ಟ್ರೀಯ ಎಸ್‌ಸಿ, ಎಸ್‌ಟಿ ಆಯೋಗವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಲ್ಲಿಸಿದ ವಿಚಾರಣಾ ವರದಿಯ ಮೇಲೆ ಯಾವುದೇ ಕೇಸು ದಾಖಲಿಸಲು ಜಯಲಲಿತಾ ಸರಕಾರ ಒಪ್ಪಲಿಲ್ಲ. ಇದಾದ ಬಳಿಕ ಸಿಪಿಎಂ ರಾಜ್ಯ ಕಾರ್ಯದರ್ಶಿ ಎ.ನಲ್ಲಶಿವನ್ ಸಲ್ಲಿಸಿದ್ದ ಮೊದಲ ಕಾನೂನಾತ್ಮಕ ಅರ್ಜಿಯನ್ನು ಅಂದಿನ ಮದ್ರಾಸ್ ಹೈಕೋರ್ಟ್ ನ್ಯಾಯಧೀಶೆ ಶ್ರೀಮತಿ ಪದ್ಮಿನಿ ಜೇಸುದೊರೈ ಮಾನ್ಯ ಮಾಡಲಿಲ್ಲ ಮಾತ್ರವಲ್ಲ ಆರೋಪಿಗಳೆಲ್ಲರೂ ವಿದ್ಯಾವಂತರಾಗಿರುವುದರಿಂದ ಅವರಿಂದ ಇಂತಹ ಅಪರಾಧಗಳು ಸಂಭವಿಸಿರಲು ಸಾಧ್ಯವೇ ಇಲ್ಲ..(!) ಎನ್ನುವ ತೀರ್ಮಾನಕ್ಕೆ ಬಂದಿದ್ದರು.

ಆದಿವಾಸಿಗಳ ಪರವಾಗಿ ಪ್ರತಿಭಟನೆಗಳ ಮಹಾಪೂರ

ವಾಚಾತಿ ಆದಿವಾಸಿ ಜನರ ಮೇಲೆ ನಡೆದ ಈ ಕ್ರೂರ ದಬ್ಬಾಳಿಕೆಗೆ ನ್ಯಾಯ ಸಿಗುವುದು ಮರಿಚೀಕೆಯಾಗತೊಡಗಿತು. ಇದರಿಂದ ಎಚ್ಚೆತ್ತ ತಮಿಳುನಾಡು ಆದಿವಾಸಿ ಅಸೋಸಿಯೇಷನ್ (TNTA) ಸಂಘಟನೆಯು ತಮಿಳುನಾಡಿನ ಎಲ್ಲ ರೈತ ಕಾರ್ಮಿಕ ಹಾಗೂ ನೌಕರ ವರ್ಗದವರ ಬೆಂಬಲ ಗಳಿಸಲು ಶ್ರಮಿಸಿತು. ಇದರ ಪರಿಣಾಮವಾಗಿ ರಾಜ್ಯದ ಉದ್ದಗಲಕ್ಕೂ ವಾಚಾತಿ ಆದಿವಾಸಿ ಜನರ ಪರವಾಗಿ ಸೌಹಾರ್ದ ಸಮಿತಿಗಳು ರಚನೆಯಾಗಿ ಪ್ರದರ್ಶನಗಳು ನಡೆದವು. ತಮಿಳುನಾಡಿನ ಜನಪರ ವಕೀಲರು ಸೇರಿ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟಕ್ಕೆ ಮುಂದಾದರು. ಜನಪರ ಕಾಳಜಿಯ ಸಂಘಟನೆಗಳು ಮತ್ತು ಜನತೆ ಸ್ವಯಂ ಸ್ಫೂರ್ತಿಯಿಂದ ಈ ಹೋರಾಟಕ್ಕೆ ಹಣ ಸಂಗ್ರಹಿಸಿ ನೀಡಿದರು. ಈ ಒತ್ತಡದ ಪರಿಣಾಮ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ನ್ಯಾಯ ಸಮ್ಮತ ತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ಆದೇಶಿಸಿತು. ಅಂತಿಮವಾಗಿ 1995ರಲ್ಲಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ(ಸಿಬಿಐ) ಎತ್ತಿಕೊಂಡು ಆರೋಪ ಪಟ್ಟಿ ಸಲ್ಲಿಸಿತು. ಇದು ವಾಚಾತಿ ಆದಿವಾಸಿಗಳ ಹೋರಾಟಕ್ಕೆ ಸಿಕ್ಕ ಮೊದಲ ಗೆಲುವಾಗಿತ್ತು. ವಾಚಾತಿ ಸಂತ್ರಸ್ತರ ಪರವಾಗಿ ವಾದಿಸಿದ ಸಿಬಿಐನ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಜಯಬಾಲನ್ ಆರೋಪಿಗಳ ಪರವಾಗಿ ವಾದಿಸುತ್ತಿದ್ದ 12 ವಕೀಲರ ಪಾಟಿಸವಾಲುಗಳನ್ನು ಏಕಾಂಗಿಯಾಗಿ ಎದುರಿಸಿ ಈ ಪ್ರಕರಣವನ್ನು ಗೆಲುವಿನ ಹಂತಕ್ಕೆ ತಲುಪಿಸಿದರು.

ದೌರ್ಜನ್ಯದ ಪರಾಕಾಷ್ಠೆ

ಗಮನಿಸಿದ ನ್ಯಾಯಾಧೀಶರು

ಈ ಪ್ರಕರಣದ ವಿಚಾರಣಾ ಹಂತದಲ್ಲಿ ಸಂತ್ರಸ್ತೆ ಮಹಿಳೆಯೊಬ್ಬರು ಕೋರ್ಟ್ ಕಟಕಟೆಯಲ್ಲಿ ಹೇಳಿದ ಸಾಕ್ಷ್ಯ ಹೇಳಿಕೆಯು ಧರ್ಮಪುರಿ ಜಿಲ್ಲಾ ನ್ಯಾಯಾಧೀಶ ಶ್ರೀ ಅಶೋಕ್ ಕುಮಾರ್ ಅವರನ್ನೇ ದಿಗ್ಮೂಢರನ್ನಾಗಿತ್ತು. 1992 ಜೂನ್ 20-21 ರಾತ್ರಿ ಹರೂರ ಅರಣ್ಯಕಚೇರಿಯ ವಶದಲ್ಲಿದ್ದಾಗ ಸಂತ್ರಸ್ತೆಯು ತನ್ನ ಮಗುವಿಗೆ ಕುಡಿಯುವ ನೀರನ್ನು ಕೇಳಿದಾಗ ಕರ್ತವ್ಯದಲ್ಲಿದ್ದ ಅಧಿಕಾರಿಯೊಬ್ಬ ಮಗುವಿನ ಬಾಯಿಗೆ ತನ್ನ ಮೂತ್ರವನ್ನು ವಿಸರ್ಜಿಸಲು ನಡೆಸಿದ ಯತ್ನವನ್ನು ವಿವರಿಸಿದ್ದು ಮಾತ್ರವಲ್ಲ ಕೋರ್ಟನಲ್ಲಿ ಹಾಜರಿದ್ದ ಆ ವ್ಯಕ್ತಿಯನ್ನು ಸ್ವತಃ ಗುರುತಿಸಿದಳು. ಸಂತ್ರಸ್ತೆಯ ಆ ಹೇಳಿಕೆ ನ್ಯಾಯಾಧೀಶರಲ್ಲಿ ಎಷ್ಟು ಕೋಪ ತರಿಸಿತ್ತೆಂದರೆ ಇಡೀ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಆ ಅಧಿಕಾರಿಗೆ ಕೋರ್ಟ್‌ನಲ್ಲಿ ಒಂದು ಬಾರಿಯೂ ಕುಳಿತುಕೊಳ್ಳಲು ಅವಕಾಶವನ್ನೇ ಕೊಡಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ಇಡೀ ವಿಚಾರಣೆಯ ಪ್ರತೀ ಹಂತದಲ್ಲೂ ಹಾಜರಿರುತ್ತಿದ್ದ ಸಿಪಿಎಂ ನಾಯಕ ದಿಲ್ಲಿಬಾಬು.

ಹೈಕೋರ್ಟ್‌ಗೆ ಮೇಲ್ಮನವಿ ವಿಚಾರಣೆ

-ಸಮಗ್ರ ಅಭಿವೃದ್ಧಿಗೆ ಆದೇಶ

ಈ ಕೇಸಿನಲ್ಲಿ ಗರಿಷ್ಠ ಶಿಕ್ಷೆ ಪಡೆದ 27 ಮಂದಿ ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಗಳ ತನಿಖೆಯನ್ನು ನ್ಯಾಯಮೂರ್ತಿ ವೇಲ್ಮುರುಗನ್ ತನಿಖೆ ನಡೆಸಿದರು. ವಿಚಾರಣೆಯ ಭಾಗವಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳಗಳು ಮತ್ತು ಜನರ ನಡುವೆ ವೈಯಕ್ತಿಕ ಭೇಟಿ ಹಾಗೂ ತನಿಖೆಗಾಗಿ ಮಾರ್ಚ್ 4, 2023ರಂದು ನ್ಯಾಯಮೂರ್ತಿಗಳು ನೇರವಾಗಿ ಘಟನೆಗೆ ಸಂಬಂಧಿಸಿದ ಗಿರಿಜನ ಪ್ರಾಥಮಿಕ ಶಾಲೆ, ಕೆರೆ ಪ್ರದೇಶ, ಆಲದ ಮರ, ನೀರಿನ ತೊಟ್ಟಿ, ಬೆಟ್ಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರನ್ನು ಭೇಟಿ ಮಾಡಿ, ಪ್ರಕರಣಕ್ಕೆ ಸಂಬಂಧಿಸಿ ಮಾತ್ರವಲ್ಲ, ಆದಿವಾಸಿಗಳ ಇತರ ಬೇಡಿಕೆಗಳನ್ನು ಸಹ ಆಲಿಸಿದರು.

ಸೆಪ್ಟಂಬರ್ 29ರಂದು ನೀಡಲಾದ ತೀರ್ಪಿನಲ್ಲಿ ಪ್ರತೀ ಅತ್ಯಾಚಾರ ಸಂತ್ರಸ್ತರಿಗೆ ಈ ಹಿಂದೆ ನೀಡಲಾಗಿದ್ದ 15 ಸಾವಿರ ರೂ.ನ್ನು ಹೆಚ್ಚಿಸಿ 10 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಇದಲ್ಲದೆ, ಅತ್ಯಾಚಾರ ಅಪರಾಧಗಳಿಗೆ ಶಿಕ್ಷೆಗೊಳಗಾದವರಿಂದ ಈ ಪರಿಹಾರದ ಶೇ.50ರಷ್ಟನ್ನು ವಸೂಲಿ ಮಾಡುವಂತೆ ನ್ಯಾಯಾಧೀಶರು ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಅತ್ಯಾಚಾರ ಸಂತ್ರಸ್ತರಿಗೆ ಸರಿಯಾದ ವೈದ್ಯಕೀಯ ನೆರವು ನೀಡಲು ನಿರಾಕರಿಸಿದ ವೈದ್ಯಕೀಯ ಸಿಬ್ಬಂದಿಯಿಂದಲೂ ಪರಿಹಾರವನ್ನು ವಸೂಲಿ ಮಾಡುವಂತೆ ನ್ಯಾಯಮೂರ್ತಿ ವೇಲ್ಮುರುಗನ್ ಆದೇಶಿಸಿದ್ದಾರೆ. ಅಲ್ಲದೆ ಗ್ರಾಮಸ್ಥರನ್ನು ರಕ್ಷಿಸುವಲ್ಲಿ ವಿಫಲರಾದ ಹಿಂದಿನ ಧರ್ಮಪುರಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಅರಣ್ಯಾಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತರಿಗೆ ಸರಕಾರಿ ಉದ್ಯೋಗ ನೀಡುವಂತೆ ನ್ಯಾಯಾಧೀಶರು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ್ದಾರೆ. ವಿವಿಧ ಕಾರಣಗಳಿಂದ ಸರಕಾರಿ ಉದ್ಯೋಗಗಳು ಕಾರ್ಯಸಾಧ್ಯವಾಗದ ಸಂದರ್ಭಗಳಲ್ಲಿ, ಸಂತ್ರಸ್ತರಿಗೆ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಸಾಕಷ್ಟು ತರಬೇತಿಯನ್ನು ನೀಡಬೇಕು. ಹೆಚ್ಚುವರಿಯಾಗಿ, ವಾಚಾತಿ ಗ್ರಾಮದಲ್ಲಿ ತಕ್ಷಣದ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಲು, ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ, ಎಲ್ಲ ರೀತಿಯಲ್ಲೂ ಅಭಿವೃದ್ಧಿ ಪಡಿಸಲು ಸಂಘಟಿತ ಪ್ರಯತ್ನ ನಡೆಸಬೇಕಿದೆ ಎಂದು ನ್ಯಾಯಮೂರ್ತಿಗಳು ರಾಜ್ಯ ಸರಕಾರಕ್ಕೆ ಆದೇಶಿಸಿದ್ದಾರೆ.

ಸೆಪ್ಟಂಬರ್ 29ರಂದು ಹೈಕೋರ್ಟ್ ನೀಡಿದ ಈ ತೀರ್ಪು ವಾಚಾತಿ ಬಡ ಆದಿವಾಸಿ ಜನರಲ್ಲಿ ವಿಶ್ವಾಸವನ್ನು ಮೂಡಿಸಿದೆ. ಅದಕ್ಕಿಂತಲೂ ಹೆಚ್ಚಾಗಿ ಅವರ ಮೇಲೆ ಶ್ರೀಗಂಧಕಳ್ಳರು ಎಂದು ಅರಣ್ಯ ಸಿಬ್ಬಂದಿ, ಪೊಲೀಸ್ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಹೇರಲ್ಪಟ್ಟಿದ್ದ ಹಣೆಪಟ್ಟಿಯನ್ನು ಈ ಆದೇಶ ಅಳಿಸಿ ಹಾಕಿದೆ.

ಇದು ನಮಗೆ ಮಾತ್ರವಲ್ಲ ನಮ್ಮ ಮಕ್ಕಳ ಭವಿಷ್ಯಕ್ಕೂ ಕವಿದಿದ್ದ ಕಾರ್ಮೋಡಗಳನ್ನು ದೂರ ಸರಿಸಿದಂತಾಗಿದೆ ಎನ್ನುವ ಸಂತಸ ಹಂಚಿಕೊಂಡರು ವಾಚಾತಿ ಗ್ರಾಮಸ್ಥರು.

(ಆಧಾರ; ಹಿರಿಯ ಪತ್ರಕರ್ತೆಪಿ.ವಿ.ಶ್ರೀವಿದ್ಯಾ ಅವರ ವಿಶೇಷ ಲೇಖನ ‘ದಿ ಹಿಂದೂ’ ಅಕ್ಟೋಬರ್ 8,2023)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಕೆ.ಮಹಾಂತೇಶ್

contributor

Similar News