ತಡೆಯಲು ಬಂದವರನ್ನು ಒಬ್ಬೊಬ್ಬರಂತೆ ಸುಲಭವಾಗಿ ಹತ್ಯೆಗೈದಿದ್ದ
ಉಡುಪಿ: ‘ಒಬ್ಬರ ನಂತರ ಒಬ್ಬರು ತಡೆಯಲು ಬಂದಿರುವುದರಿಂದ ಪ್ರವೀಣ್ ಚೌಗುಲೆಗೆ ಬಹಳ ಸುಲಭದಿಂದ ಒಬ್ಬೊಬ್ಬರಂತೆ ನಾಲ್ವರನ್ನು ಕೊಲೆ ಮಾಡಲು ಸಾಧ್ಯವಾಯಿತು’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಡಾ.ಕೆ.ಅರುಣ್, ನೇಜಾರುವಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣದ ಸಂಪೂರ್ಣ ವಿವರವನ್ನು ಬಿಚ್ಚಿಟ್ಟರು.
ಮನೆಯೊಳಗೆ ಬಂದ ಪ್ರವೀಣ್ ಮೊದಲು ಐನಾಝ್ ಮೇಲೆ ದಾಳಿ ನಡೆಸಿ ಚೂರಿಯಿಂದ ಇರಿದಿದ್ದಾನೆ. ಆಕೆಯ ಬೊಬ್ಬೆ ಕೇಳಿ ಕೋಣೆಯಿಂದ ಹೊರಗೆ ಬಂದ ತಾಯಿ ಮೇಲೂ ದಾಳಿ ನಡೆಸಿದನು. ತಾಯಿಯ ಬೊಬ್ಬೆ ಕೇಳಿ ಬಂದ ಅಫ್ನಾನ್‌ಳನ್ನು ಕೂಡ ಇರಿದು ಕೊಲೆ ಮಾಡಿದನು. ಇವರೆಲ್ಲ ಬೊಬ್ಬೆ ಕೇಳಿ ಹೊರಗಡೆ ಆಟ ಆಡುತ್ತಿದ್ದ ಆಸೀಮ್ ಮನೆಯೊಳಗೆ ಓಡಿಬಂದನು. ಅವನನ್ನು ಪ್ರವೀಣ್ ಬಾಗಿಲನ ಬಳಿ ಚೂರಿಯಿಂದ ಇರಿದಿದ್ದಾನೆ. ಹೀಗೆ ಆತ ಒಬ್ಬೊಬ್ಬರಾಗಿಯೇ ನಾಲ್ವರನ್ನು ಕೊಲೆ ಮಾಡಿದ್ದಾನೆ ಎಂದು ಅವರು ವಿವರಿಸಿದರು.
8 ತಿಂಗಳಿನಿಂದ ಪರಿಚಯ: ಆರೋಪಿ ಪ್ರವೀಣ್ ಚೌಗುಲೆ ಮತ್ತು ಸಂತ್ರಸ್ತೆ ಐನಾಝ್ ಸುಮಾರು ಎಂಟು ತಿಂಗಳಿಂದ ಒಂದೇ ಕಡೆ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಕರ್ತವ್ಯ ನಿಮಿತ್ತ ಇವರಿಬ್ಬರು 8-10 ಬಾರಿ ಒಂದೇ ವಿಮಾನದಲ್ಲಿ ವಿದೇಶಗಳಿಗೆ ಹೋಗಿ ಬಂದಿದ್ದಾರೆ. ಇದರಿಂದ ಇವರ ಮಧ್ಯೆ ಗೆಳೆತನ ಬೆಳೆದಿತ್ತು ಎಂದು ಎಸ್ಪಿ ಹೇಳಿದರು.
ಐನಾಝ್‌ಗೆ ಆರೋಪಿ ಪ್ರವೀಣ್ ಬೇರೆ ಬೇರೆ ವಿಧದಲ್ಲಿ ಸಹಾಯ ಕೂಡ ಮಾಡಿದ್ದಾನೆ. ಆಕೆಗೆ ಮಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಲು ಸಹಾಯ ಮಾಡಿದ್ದಾನೆ ಅಲ್ಲದೆ, ಓಡಾಟಕ್ಕೆ ತನ್ನ ಸ್ಕೂಟರ್‌ನ್ನು ನೀಡಿದ್ದನು. ಈ ಮಧ್ಯೆ ಒಂದು ತಿಂಗಳ ಹಿಂದೆ ಐನಾಝ್, ಪ್ರವೀಣ್ ಜೊತೆ ಸರಿಯಾಗಿ ಮಾತನಾಡದೆ ದೂರ ಮಾಡಿದ್ದಳು. ಇದರಿಂದ ವಿಚಲಿತನಾದ ಆತ, ಆಕೆಯ ಮೇಲಿನ ಅತೀಯಾದ ವ್ಯಾಮೋಹ ಹಾಗೂ ತನ್ನ ನಿಯಂತ್ರಣದಲ್ಲೇ ಇರಬೇಕೆಂಬ ಮನಸ್ಥಿತಿಯಿಂದ ಆಕೆಯ ಕೊಲೆಗೆ ಪೂರ್ವ ಸಿದ್ಧತೆ ಮಾಡಿದನು ಎಂದು ಅವರು ವಿವರಿಸಿದರು.
ಮನೆಯ ಚೂರಿ ಬಳಸಿದ್ದ: ಎಲ್ಲ ರೀತಿಯಲ್ಲೂ ಪ್ಲ್ಯಾನ್ ಮಾಡಿಕೊಂಡು ನ.12ರಂದು ಮನೆಯಿಂದ ಬೆಳಗ್ಗೆ ಬೇಗ ಉಡುಪಿಗೆ ಹೊರಟ ಪ್ರವೀಣ್, ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸಿಸಿಟಿವಿ ಫುಟೇಜ್ ಸಿಗದಂತೆ ಕಾರನ್ನು ಅದಕ್ಕಿಂತ ಮೊದಲೇ ನಿಲ್ಲಿಸಿ, ಬಸ್, ಅಟೊ ರಿಕ್ಷಾ, ಬೈಕ್ ಮೂಲಕ ನೇಜಾರಿಗೆ ಬಂದನು.
ಕೊಲೆ ಮಾಡಿದ ಬಳಿಕವೂ ಬೇರೆ ಬೇರೆ ಮಾರ್ಗವಾಗಿ ವಾಪಸ್ ಹೋಗಿ, ಮುಲ್ಕಿ ಸಮೀಪ ರಕ್ತದ ಕಲೆಯ ಬಟ್ಟೆಯನ್ನು ಸುಟ್ಟು ಹಾಕಿದ್ದನು. ಮನೆಗೆ ಹೋಗಿ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಿಲೇವಾರಿ ಮಾಡಿದ್ದನು. ಕೃತ್ಯಕ್ಕೆ ಬಳಸಿದ್ದ ಮನೆಯ ಕಿಚನ್ ಚೂರಿಯನ್ನು ಯಾರಿಗೂ ಸಂದೇಹ ಬಾರದಂತೆ ಮತ್ತೆ ಅಲ್ಲೇ ತಂದು ಇಟ್ಟಿದ್ದನು ಎಂದು ಎಸ್ಪಿ ಮಾಹಿತಿ ನೀಡಿದರು.
ಆಶ್ರಯ ಕೊಟ್ಟವರ ವಿಚಾರಣೆ: ಈತನ ಹಿಂದೆ ಬೇರೆ ಯಾರು ಇಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆರೋಪಿ ಬೆಳಗಾವಿಯಲ್ಲಿರುವ ತನ್ನ ಪತ್ನಿಯ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದು, ಆ ಮನೆಯವರಿಗೆ ಈತ ಈ ಕೃತ್ಯ ಎಸಗಿ ಬಂದಿರುವುದು ಗೊತ್ತಿರಲಿಲ್ಲ. ಈಗಾಗಲೇ ಆ ಮನೆಯವರನ್ನು ವಿಚಾರಣೆ ನಡೆಸಿದ್ದೇವೆ. ಮುಂದೆ ಇನ್ನಷ್ಟು ವಿಚಾರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪ್ರವೀಣ್ ಮಾದಕ ದ್ರವ್ಯ ಸೇವಿಸಿದ್ದಾನೆಯೇ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಡಬೇಕಾಗಿದೆ. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅವರೆಲ್ಲರ ಮೊಬೈಲ್ ಫೋನ್ ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಆತನ ಕೊಲೆ ಮಾಡಲು ಬರುವಾಗ ಮೊಬೈಲ್ ಆನ್ ಇತ್ತೆ ಎಂಬುದರ ಬಗ್ಗೆ ನಾವು ತಾಂತ್ರಿಕ ಸಾಕ್ಷ್ಯ ಹಾಗೂ ಡೇಟಾಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದರು.
ಈಗಾಗಲೇ ಎಲ್ಲ ರೀತಿಯ ತನಿಖೆ ಮುಗಿಸಿದ್ದೇವೆ. ಮತ್ತೆ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಳ್ಳುವ ಅಗತ್ಯ ಬರುವುದಿಲ್ಲ. ಕೆಲವು ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಇನ್ನು ಕೂಡ ಕೆಲವು ಸಾಕ್ಷ್ಯ ಸಂಗ್ರಹಿಸಬೇಕಾಗಿದೆ. ಚಾರ್ಜ್‌ಶೀಟ್ ಸಲ್ಲಿಸಲು ಇನ್ನು 70-80 ದಿನಗಳಿವೆ. ಅದಕ್ಕೆ ಮೊದಲು ಏನಾದರೂ ಸಾಕ್ಷ್ಯ ಸಿಕ್ಕಿದರೆ ಅವುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದರು.
ತಂಡಕ್ಕೆ ನಗದು ಬಹುಮಾನ: ಈ ಪ್ರಕರಣದಲ್ಲಿ ನಮ್ಮ ಪೊಲೀಸ್ ತಂಡದ ಎಲ್ಲರೂ ಬಹಳ ಜವಾಬ್ದಾರಿ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಮೇಲಾಧಿಕಾರಿಗಳು ಆದಷ್ಟು ಬೇಗ ಈ ತಂಡಕ್ಕೆ ಬಹುಮಾನ ಘೋಷಣೆ ಮಾಡಲಿದ್ದಾರೆ. 1.5ಲಕ್ಷ ರೂ. ನಗದು ಬಹುಮಾನ ನೀಡುವಂತೆ ಶಿಫಾರಸು ಮಾಡಲಾಗಿದೆ. ಸುಮಾರು 50ಕ್ಕೂ ಅಧಿಕ ಮಂದಿ ಈ ತಂಡದಲ್ಲಿ ಶ್ರಮಿಸಿದ್ದಾರೆ ಎಂದವರು ತಿಳಿಸಿದರು.
2007ರಲ್ಲಿ ಪ್ರವೀಣ್ ಚೌಗುಲೆ ಪುಣೆ ಸಿಟಿ ಪೊಲೀಸ್‌ಗೆ ಸೇರ್ಪಡೆಗೊಂಡು ತರಬೇತಿಯಲ್ಲಿರುವ ಸಮಯ ಆತನಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಸಿಕ್ಕಿತ್ತು. ಪೊಲೀಸ್ ಕೆಲಸಕ್ಕಿಂತ ಹೆಚ್ಚಿನ ಸಂಬಳ ದೊರೆಯುವ ಕಾರಣಕ್ಕೆ ಆತ ಅಲ್ಲಿ ಕೆಲಸ ಬಿಟ್ಟು ಇಲ್ಲಿಗೆ ಸೇರಿಕೊಂಡನು. ಕಳೆದ 2008ನಿಂದ ಏರ್ ಇಂಡಿಯಾ ಏಕ್ಸ್‌ಪ್ರೆಸ್‌ನಲ್ಲಿ ಆತ ಕೆಲಸ ಮಾಡಿಕೊಂಡಿದ್ದಾನೆ ಎಂದರು.
ಪ್ರವೀಣ್‌ಗೆ ಬೇರೆ ಬೇರೆ ಹುಡುಗಿಯರ ಜೊತೆ ಗೆಳೆತನ ಇತ್ತು ಎಂಬುದು ಆತನ ಪತ್ನಿಗೆ ಗೊತ್ತಿತ್ತು. ಆಕೆ ಐನಾಝ್ ಮಾತ್ರವಲ್ಲ ಬೇರೆ ಸಹಪಾಠಿಗಳ ಜೊತೆ ಕೂಡ ಮಾತನಾಡಿದ್ದಾಳೆ. ಆರೋಪಿಯನ್ನು ಬೆಳಗಾವಿ, ಸಾಂಗ್ಲಿಗೆ ಕರೆದುಕೊಂಡು ಹೋಗಿ ಮಹಜರು ನಡೆಸಿಲ್ಲ. ಕೇವಲ ಮಂಗಳೂರು ಮತ್ತು ಉಡುಪಿಯಲ್ಲಿ ಮಾತ್ರ ಮಹಜರು ಕಾರ್ಯ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ ಹಾಜರಿದ್ದರು.
ಹಣಕಾಸಿನ ಬಗ್ಗೆ ಪ್ರತ್ಯೇಕ ತನಿಖೆ:
ಹಸೀನಾರ ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆ ನಡೆಸಲು ಎಲ್ಲ ಮೊಬೈಲ್ ಫೋನ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿನ ವರದಿ ಆಧಾರದ ಮೇರೆಗೆ ಪರಿಶೀಲನೆ ಮಾಡಲಾಗುವುದು. ಈ ವಿಚಾರವಾಗಿ ನಾವು ವಿಚಾರಣೆ ಮಾಡಿದಾಗ ಕೆಲವೊಂದು ಮಾಹಿತಿ ನಮಗೆ ಲಭಿಸಿದೆ. ಈ ಸಂಬಂಧ ಕುಟುಂಬದಿಂದ ಪ್ರತ್ಯೇಕ ದೂರು ಪಡೆದುಕೊಂಡು ಹಣ ವರ್ಗಾವಣೆ ಆಗಿರುವ ಬಗ್ಗೆ ಪರಿಶೀಲಿಸಿ, ಕ್ರಮ ತೆಗೆದುಕೊಳ್ಳಲಾಗುವುದು. ಮನೆಯವರು ತನಿಖೆಗೆ ತುಂಬಾ ಸಹಕಾರ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್‌ಶೀಟ್ ಸಲ್ಲಿಕೆಗೆ ಮೊದಲು ವಿಶೇಷ ಪಿಪಿ ನೇಮಕಕ್ಕೆ ನಾವು ಪ್ರಯತ್ನ ಮಾಡುತ್ತೇವೆ. ಅದೇ ರೀತಿ ತ್ವರಿತ ನ್ಯಾಯಾಲಯ ಸ್ಥಾಪನೆಗೆ ಸರಕಾರಕ್ಕೆ ಮನವಿ ಮಾಡಲಾಗುವುದು.
- ಡಾ.ಕೆ.ಅರುಣ್, ಎಸ್ಪಿ, ಉಡುಪಿ
ಅಕ್ರಮ ಚಟುವಟಿಕೆ ಬಗ್ಗೆಯೂ ತನಿಖೆ:
ಆರೋಪಿ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗಿದೆ.ಆದರೆ ಆ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಆತನ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ಮಾಡಿದ್ದೇವೆ. ಆತನಿಗೆ ಸಿಗುವ ಸಂಬಳದ ಮಿತಿಯಲ್ಲೇ ಆತ ಆಸ್ತಿಪಾಸ್ತಿ ಮಾಡಿ ಕೊಂಡಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು.
ಪ್ರವೀಣ್ ಗೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆತ ಆಕೆಯ ಮೇಲಿನ ಅಸೂಯೆ, ವ್ಯಾಮೋಹದಿಂದಲೇ ಕೊಲೆ ಮಾಡಿದ್ದಾನೆ ಎಂಬುದು ದೃಢಪಟ್ಟಿದೆ. ಆರೋಪಿ ಈ ಹಿಂದೆ ಮನೆಗೆ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆತ ಆನ್ಲೈನ್ ಮೂಲಕವೇ ಲೋಕೇಶನ್ ಪತ್ತೆ ಹಚ್ಚಿ ಮನೆಗೆ ಬಂದಿದ್ದಾನೆ ಎಂದು ಮಾಹಿತಿ ನೀಡಿದರು.
ಜೈಲಿನಲ್ಲಿ ಪ್ರತ್ಯೇಕ ಸೆಲ್ ವ್ಯವಸ್ಥೆ
ಪ್ರವೀಣ್ ಚೌಗುಲೆ ಗಂಭೀರ ಪ್ರಕರಣದ ಆರೋಪಿಯಾಗಿರುವುದರಿಂದ ಆತನಿಗೆ ಜೈಲಿನಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಅದರಂತೆ ಆತನನ್ನು ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕ ಸೆಲ್‌ನಲ್ಲಿ ಇಟ್ಟು ಬಂದೋಬಸ್ತ್ ಮಾಡಲಾಗಿದೆ.
- ಡಾ.ಕೆ.ಅರುಣ್, ಎಸ್ಪಿ ಉಡುಪಿ
ಇಡೀ ಪ್ರಕರಣ ದೊಡ್ಡ ಸವಾಲಾಗಿತ್ತು
ಒಂದೆರೆಡು ಕೊಲೆಯಾಗುವುದೇ ದೊಡ್ಡ ವಿಚಾರ. ಅದರಲ್ಲೂ ಇಲ್ಲಿ ನಾಲ್ವರು ಹತ್ಯೆಯಾಗಿದ್ದರು. ಇದರಿಂದ ಈ ಇಡೀ ಪ್ರಕರಣ ನಮಗೆ ದೊಡ್ಡ ಸವಾಲು ಆಗಿತ್ತು. ನಾಲ್ಕು ಜನರು ಕೊಲೆಗೀಡಾರುವುದರಿಂದ ಆರೋಪಿಯ ಟಾರ್ಗೆಟ್ ಯಾರೆಂಬುದು ನಮಗೆ ಗೊತ್ತಾಗಲಿಲ್ಲ. ಇಡೀ ಕುಟುಂಬವೇ ಅಥವಾ ಒಬ್ಬರೇ ಆರೋಪಿಯ ಗುರಿಯಾಗಿತ್ತೆ ಎಂಬುದು ತಿಳಿದಿರಲಿಲ್ಲ. ವಿವಿಧ ಆಯಾಮ ಗಳಲ್ಲಿ ತನಿಖೆ ಮಾಡಿದಾಗ ಆರೋಪಿಯ ಪ್ರಮುಖ ಟಾರ್ಗೆಟ್ ಯಾರು ಎಂಬುದು ತಿಳಿದುಬಂದಿತು ಎಂದು ಉಡುಪಿ ಎಸ್ಪಿ ಡಾ.ಅರುಣ್ ತಿಳಿಸಿದರು.
ಇಂತಹ ಗಂಭೀರ ಪ್ರಕರಣ ಸಂಭವಿಸಿದಾಗ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದ್ದರೆ ನಾವು ಕಾನೂನು ಸುವ್ಯವಸ್ಥೆ ಕಡೆಯೇ ಗಮನ ಕೊಡಬೇಕಾಗಿತ್ತು. ಇದರಿಂದ ತನಿಖೆ ವಿಳಂಬವಾಗುವ ಸಾಧ್ಯತೆ ಇತ್ತು. ಆದರೆ ಇದಕ್ಕೆಲ್ಲ ಸಾರ್ವಜನಿಕರು ಅವಕಾಶ ನೀಡದೆ ಬಹಳಷ್ಟು ಸಹಕಾರ ನೀಡಿದ್ದಾರೆ. ಸ್ಥಳೀಯರು ಪರಿಸರದಲ್ಲಿ ದೀಪಾವಳಿ ಹಬ್ಬವನ್ನು ಕೂಡ ಆಚರಿಸಿರಲಿಲ್ಲ.
-ಡಾ.ಕೆ.ಅರುಣ್, ಎಸ್ಪಿ ಉಡುಪಿ