ಕೆಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶ: RTI ಅಡಿಯಲ್ಲಿ ಮಾಹಿತಿ ನೀಡಲು ನಿರಾಕರಣೆ
ಬೆಂಗಳೂರು, ಅ.18: ರಾಜ್ಯದಲ್ಲಿ ಜೂನ್ 1ರಿಂದ ಸೆಪ್ಟಂಬರ್ 25ರವರೆಗೆ ಹೊರಡಿಸಿರುವ ಕೆಎಎಸ್ ಗ್ರೂಪ್ ಎ ವೃಂದದ ಅಧಿಕಾರಿಗಳ ವರ್ಗಾವಣೆ ಆದೇಶಗಳು ‘ವೈಯಕ್ತಿಕ ಮಾಹಿತಿ’ ಎಂದು ಹೇಳಿರುವ ಕಾಂಗ್ರೆಸ್ ಸರಕಾರವು ಆ ಎಲ್ಲಾ ಆದೇಶಗಳನ್ನು ರಹಸ್ಯವಾಗಿರಿಸಿದೆ.
ಸಿದ್ದರಾಮಯ್ಯ ಅವರು 2023ರ ಮೇನಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ದಿನದಿಂದಲೇ ಕೆಎಎಸ್ ಸೇರಿದಂತೆ ಇತರ ವೃಂದಗಳ ಅಧಿಕಾರಿಗಳನ್ನು ನಿರಂತರವಾಗಿ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ ಈ ಎಲ್ಲಾ ಆದೇಶಗಳು ಅಧಿಕಾರಿಗಳ ವಲಯ ಮತ್ತು ಸಾರ್ವಜನಿಕವಾಗಿ ಲಭ್ಯವಾಗಿದ್ದವು. ಹಾಗೆಯೇ ಕರ್ನಾಟಕ ಸರಕಾರದ ಅಧಿಕೃತ ಜಾಲತಾಣದಲ್ಲಿಯೂ ಆದೇಶಗಳೆಲ್ಲವನ್ನೂ ಅಪ್ಲೋಡ್ ಮಾಡಿದೆ. ಆದರೀಗ ಇವೇ ವರ್ಗಾವಣೆ ಆದೇಶಗಳನ್ನು ಆರ್ಟಿಐ ಅಡಿಯಲ್ಲಿ ಒದಗಿಸಲು ನಿರಾಕರಿಸಿರುವ ಕಾಂಗ್ರೆಸ್ ಸರಕಾರವು ಈ ಮಾಹಿತಿಯು ಅಧಿಕಾರಿಗಳ ವೈಯಕ್ತಿಕ ಮಾಹಿತಿಯಾಗಿರುತ್ತದೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
2023ರ ಜೂನ್ 1ರಿಂದ ಸೆಪ್ಟಂಬರ್ 25ರವರೆಗೆ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಕೆಎಎಸ್ ಅಧಿಕಾರಿಗಳ ವರ್ಗಾವಣೆ, ಸ್ಥಳ ನಿಯುಕ್ತಿಗೊಳಿಸಿದ್ದ ಎಲ್ಲ ಆದೇಶಗಳಿಗಾಗಿ "the-file.in' 2023ರ ಸೆ.25ರಂದು ಆರ್ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2023ರ ಅಕ್ಟೋಬರ್ 7ರಂದು ಉತ್ತರ ಒದಗಿಸಿದೆ.
ಉತ್ತರದಲ್ಲೇನಿದೆ?: ಮಾಹಿತಿ ಹಕ್ಕು ಅಧಿನಿಯಮ 2005ರಡಿಯಲ್ಲಿ 2023ರ ಜೂನ್ 1ರಿಂದ 2023ರ ಸೆಪ್ಟಂಬರ್ 25ರವರೆಗೆ ಗ್ರೂಪ್ ಎ, ಬಿ ವೃಂದದ ಕೆಎಎಸ್ ಅಧಿಕಾರಿಗಳ ವರ್ಗಾವಣೆ, ಸ್ಥಳ ನಿಯುಕ್ತಿಗೊಳಿಸಿದ ಎಲ್ಲಾ ಆದೇಶಗಳ ಪ್ರತಿಗಳನ್ನು ಒದಗಿಸುವಂತೆ ಕೋರಿರುತ್ತೀರಿ.
ಪ್ರಸಕ್ತ ಶಾಖೆಯಲ್ಲಿ ಕರ್ನಾಟಕ ಆಡಳಿತ ಸೇವೆಗೆ ಸಂಬಂಧಿಸಿದ ಗ್ರೂಪ್ ಎ ಅಧಿಕಾರಿಗಳ ಸೇವಾ ವಿಷಯವನ್ನು ಮಾತ್ರ ಪ್ರಸ್ತುತ ಶಾಖೆಯಲ್ಲಿ ನಿರ್ವ ಹಿಸಲಾಗುತ್ತಿದೆ. ತಾವು ಕೋರಿರುವ ಮಾಹಿತಿಯು ಅಧಿಕಾರಿಗಳ ವೈಯಕ್ತಿಕ ಮಾಹಿತಿಯಾಗಿರುತ್ತದೆ.
ಮಾಹಿತಿ ಆಯೋಗದ ಪ್ರಕರಣ ಸಂಖ್ಯೆ ಕಮಾಅ 10338 ಎಪಿಎಲ್ 2016, ದಿನಾಂಕ 30.10.2017ರ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ 34085/2011, 08.07.2015 ಮತ್ತು ಸುಪ್ರೀಂ ಕೋರ್ಟ್ನ ಸಿವಿಲ್ ಅಪೀಲ್ ಸಂಖ್ಯೆ 22/2009 ಕೆನರಾ ಬ್ಯಾಂಕ್/ ಶ್ಯಾಮ್ ಮತ್ತಿತರರ ಪ್ರಕರಣದಲ್ಲಿ ಎಸ್ಎಲ್ಪಿ ಸಂಖ್ಯೆ 27734/2012ನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಉಲ್ಲೇಖಿಸಿದೆ.
ನೇಮಕಾತಿ ಆದೇಶ, ಭಡ್ತಿ, ಎಲ್ಲಾ ವರ್ಗಾವಣೆಯ ಆದೇಶಗಳು, ವೇತನ ವಿವರಗಳು, ಮೆಮೋ, ಇಪಿಎಫ್, ಹೂಡಿಕೆ ವಿವರಗಳು, ಕೊಡುಗೆಗಳ ವಿವರ, ಸ್ಥಿರ ಮತ್ತು ಚರಾಸ್ತಿ ವಿವರಗಳು, ದೋಷಾರೋಪಣೆ ಪಟ್ಟಿಯ ಪ್ರತಿ, ವಿಚಾರಣೆಯ ನಡವಳಿಗಳು ಇತ್ಯಾದಿಗಳು ಖಾಸಗಿಯದ್ದಾಗಿದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇರುವುದಿಲ್ಲ ಎಂದು 2012ರಲ್ಲಿ ಹೊರಡಿಸಿದ್ದ ಆದೇಶವನ್ನು ಮುಂದಿರಿಸಿದೆ.
ಮಾಹಿತಿ ಹಕ್ಕು ಅಧಿನಿಯಮ 8(1)(ಜೆ)ಯಲ್ಲೇನಿದೆ?
ಯಾವ ಮಾಹಿತಿಯ ಬಹಿರಂಗಪಡಿಸುವಿಕೆಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಪಡುವುದಿಲ್ಲವೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವ್ಯಕ್ತಿಯ ಗೌಪ್ಯತೆಯನ್ನು ಅನಗತ್ಯವಾಗಿ ಆಕ್ರಮಿಸಿದಂತಾಗುತ್ತದೆಯೋ ಅಂಥ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಮಾಹಿತಿಯನ್ನು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭಾನುಸಾರ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಅಪೀಲು ಪ್ರಾಧಿಕಾರಿಗೆ ಅಂತಹ ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯಾಯಸಮ್ಮತ ಎಂದು ಮನದಟ್ಟಾದ ಹೊರತು ಅಂಥ ಮಾಹಿತಿಯನ್ನು ಒದಗಿಸಲು ಯಾವುದೇ ಬಾಧ್ಯತೆ ಇರತಕ್ಕದ್ದಲ್ಲ ಎಂದು ಹೇಳಿದೆ.
ಅಧಿಕಾರಿಗಳ ವರ್ಗಾವಣೆಯಲ್ಲಿ ಕೇಳಿ ಬಂದಿದ್ದ ಆರೋಪಗಳ ಸಂಬಂಧ ಕಾಸಿಗಾಗಿ ಪೋಸ್ಟಿಂಗ್ ಎಂದು ಜೆಡಿಎಸ್ನ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಸದನದ ಹೊರಗೆ ಮತ್ತು ಒಳಗೆ ಟೀಕಾಸ್ತ್ರಗಳನ್ನೇ ಎಸೆದಿದ್ದರು. ಇದು ವಿಧಾನಸಭೆ ಅಧಿವೇಶನದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ನಡುವೆ ವಾಕ್ಸಮರವೇ ನಡೆದಿದ್ದನ್ನು ಸ್ಮರಿಸಬಹುದು.
ಬಹುಶಃ ವಿರೋಧ ಪಕ್ಷದ ರಾಜಕಾರಣಿಗಳೊಂದಿಗೆ ಅಧಿಕಾರಿಗಳು ಸೇರಿ ಆಡಳಿತರೂಢ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಈ ಪ್ರಕರಣದಲ್ಲಿ ಕಂಡು ಬರುತ್ತಿದೆ. ಸಾಮಾನ್ಯವಾಗಿ ವರ್ಗಾವಣೆಯ ಪ್ರತಿಯನ್ನು ಗೌಪ್ಯವಾಗಿಟ್ಟಿದ್ದೇವೆ ಎಂಬುದು ಒಂದು ಮೂರ್ಖತನದ ಪರಮಾವಧಿಯೇ ಸರಿ. ಉದಾಹರಣೆಗೆ ಶಿವಮೊಗ್ಗ ಜಿಲ್ಲಾಧಿಕಾರಿಯನ್ನು ತುಮಕೂರಿಗೆ ವರ್ಗಾಯಿಸಿದ್ದು ಗೌಪ್ಯತೆ ಹೇಗಾಗುತ್ತದೆ? ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಷಡ್ಯಂತ್ರವನ್ನು ಕಾರ್ಯಾಂಗ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ . ಈ ಪ್ರಕರಣದಲ್ಲಿ ಅಧಿಕಾರಿಗಳ ವರ್ಗಾವಣೆಯ ಪಟ್ಟಿಯನ್ನು ಕೊಡಲು ನಿರಾಕರಿಸಿರುವುದು ಮೂರ್ಖತನ ಎನ್ನುತ್ತಾರೆ ನೈಜ ಹೋರಾಟಗಾರಾರ ವೇದಿಕೆಯ ಎಚ್.ಎಂ. ವೆಂಕಟೇಶ್ ಅವರು.
ಸರಕಾರವು ವರ್ಗಾವಣೆ ದಂಧೆಯಲ್ಲಿ ಮುಳುಗಿ ಹೋಗಿದೆ. ಆದ್ದರಿಂದ ಇಂತಹ ಮಾಹಿತಿಯು ಬಹಿರಂಗವಾಗುವುದರಿಂದ ತನ್ನ ಮಾನ ಹರಾಜಾಗುವುದನ್ನು ತಡೆಯಲು ಮಾಹಿತಿ ನಿರಾಕರಿಸುತ್ತಿದೆ. ಒಂದೊಮ್ಮೆ ವರ್ಗಾವಣೆ ಆದೇಶಗಳು ವೈಯಕ್ತಿಕ ಮಾಹಿತಿ ಆಗುವುದಾದರೆ ಮತ್ತು ಆ ಬಗ್ಗೆ ನ್ಯಾಯಾಲಯಗಳು ಆದೇಶ ನೀಡಿದ್ದರೆ ಯಾವ ಕಾರಣಕ್ಕೆ ಸರಕಾರವೇ ಅಧಿಸೂಚನೆ ಹೊರಡಿಸಿ ಅವುಗಳನ್ನು ರಾಜ್ಯಪತ್ರಗಳಲ್ಲಿ ಪ್ರಕಟಿಸುತ್ತದೆ ಮತ್ತು ತನ್ನದೇ ಅಧಿಕೃತ ಜಾಲತಾಣದಲ್ಲಿಯೂ ಪ್ರಕಟಿಸಿರುತ್ತದೆ. ಹಾಗಾದರೆ ಈ ಎಲ್ಲವೂ ವೈಯಕ್ತಿಕ ಮಾಹಿತಿಗಳನ್ನು ಸರಕಾರವೇ ಬಹಿರಂಗಪಡಿಸಿದಂತಲ್ಲವೇ ಎಂದು ಪ್ರಶ್ನಿಸುತ್ತಾರೆ ಕರ್ನಾಟಕ ರಾಷ್ಟ್ರಸಮಿತಿ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ.
ಅದೇ ರೀತಿ ಈ ಮಾಹಿತಿಯನ್ನು ಸರಕಾರವೇ ತನ್ನ ಅಧಿಸೂಚನೆ, ಸರಕಾರದ ಅಧಿಕೃತ ಜಾಲತಾಣಗಳಲ್ಲಿ ವರ್ಗಾವಣೆ ಆದೇಶಗಳನ್ನು ಪ್ರಕಟಿಸಿರುವುದನ್ನು ನೋಡಿದರೆ ಆರ್ಟಿಐನಲ್ಲಿ ನೀಡಿರುವ ಹಿಂಬರಹದಲ್ಲಿ ಉಲ್ಲೇಖಿಸಿರುವ ನ್ಯಾಯಾಲಯದ ಆದೇಶಗಳನ್ನೂ ಉಲ್ಲಂಘಿಸಿದಂತಾಗುತ್ತದೆ. ಈ ಮೂಲಕ ನ್ಯಾಯಾಂಗ ನಿಂದನೆಗೂ ಗುರಿಯಾಗಬೇಕಾಗುತ್ತದೆ. ಈ ಸರಕಾರವು ಮಾಹಿತಿಯನ್ನು ನಿರಾಕರಿಸುವುದಕ್ಕೆ ಆಧಾರವಿಲ್ಲದ ಕಾರಣಗಳನ್ನು ನೀಡಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಸರಕಾರದ ಈ ಧೋರಣೆ ನಿಲ್ಲಬೇಕು ಹಾಗೂ ಸಂಪೂರ್ಣ ಮಾಹಿತಿಯನ್ನು ತನ್ನ ಜಾಲತಾಣಗಳ ಮೂಲಕ ಸುಲಭವಾಗಿ ಲಭ್ಯವಾಗುವಂತೆ ಕ್ರಮ ವಹಿಸಬೇಕು ಎನ್ನುತ್ತಾರೆ ಲಂಚಮುಕ್ತ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಭಟ್ಟರಹಳ್ಳಿ.
ದೇಶದ ನಾಗರಿಕರಿಗೆ ಪಾರದರ್ಶಕ ಆಡಳಿತವನ್ನು ನೀಡಲು ಹಿಂದಿನ ಯುಪಿಎ ಸರಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದು ನಾವು ಪಾರದರ್ಶಕವಾಗಿದ್ದೇವೆ ಎಂಬುದನ್ನು ಸಾರಿತ್ತು. ನಂತರ ಬಂದ ಬಿಜೆಪಿ ಸರಕಾರ ಈ ಮಾಹಿತಿ ಹಕ್ಕು ಕಾಯ್ದೆಯನ್ನು ಮೊಟಕುಗೊಳಿಸುವ ಎಲ್ಲ ಪ್ರಯತ್ನವೂ ಮಾಡಿತ್ತು. ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಸರಕಾರ ಬಂದ ನಂತರ ಆಡಳಿತದಲ್ಲಿರುವ ಕಾರ್ಯಾಂಗದ ಕೆಲವು ಅಧಿಕಾರಿ ವರ್ಗದವರು ಮಾಹಿತಿಗಳನ್ನು ಸರಿಯಾಗಿ ಒದಗಿಸದೆ ಹಲವಾರು ನೆಪಗಳನ್ನು ಒಡ್ಡಿ ಮಾಹಿತಿಯನ್ನು ನೀಡದೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅನುಮಾನಿಸುತ್ತಾರೆ ನೈಜ ಹೋರಾಟಗಾರಾರ ವೇದಿಕೆಯ ಎಚ್.ಎಂ. ವೆಂಕಟೇಶ್.