ಓದುಗರ ದಾಹ ತಣಿಸುವ ತುಮಕೂರು ನಗರ ಕೇಂದ್ರ ಗ್ರಂಥಾಲಯ

► 25ಸಾವಿರ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕ ಸಹಿತ 94 ಸಾವಿರ ಪುಸ್ತಕಗಳು ► 36 ಸಾವಿರ ಯೂಟ್ಯೂಬ್ ಲಿಂಕ್ಸ್, 25 ಕಂಪ್ಯೂಟರ್ ► ವಿಶಾಲ ಪರಾಮರ್ಶನ ಕೊಠಡಿ, ಡಿಜಿಟಲ್ ಲೈಬ್ರರಿ ► ಬ್ರೈಲ್ ಲಿಪಿ ಪುಸ್ತಕಗಳು ► ವೃತ್ತ ಪತ್ರಿಕೆ, ಮಕ್ಕಳ ಪುಸ್ತಕ ಅಧ್ಯಯನಕ್ಕೆ ಪ್ರತ್ಯೇಕ ಕೊಠಡಿ

Update: 2023-12-11 11:33 GMT
Editor : Naufal

✍️ ರಂಗರಾಜು ತುಮಕೂರು

ತುಮಕೂರು: ಓದುವ ಹವ್ಯಾಸದಿಂದ ಜ್ಞಾನ ಹೆಚ್ಚುವುದು ಮಾತ್ರವಲ್ಲದೇ ಓದುವವರ ಶಬ್ಧಭಂಡಾರವೂ ಅಭಿವೃದ್ಧಿಯಾಗುತ್ತದೆ. ಓದುಗರ ದಾಹ ತಣಿಸುವ ನಿಟ್ಟಿನಲ್ಲಿ ತುಮಕೂರಿನ ನಗರದ ಕೇಂದ್ರ ಗ್ರಂಥಾಲಯ ಜ್ಞಾನ ಕೇಂದ್ರವಾಗಿ ನಮ್ಮೆದುರಿಗಿದೆ.

1900ರ ಆಸುಪಾಸಿನಲ್ಲಿ ಬ್ರಿಟಿಷರು ನಿರ್ಮಾಣ ಮಾಡಿದ್ದ ನಗರ ಕೇಂದ್ರ ಗ್ರಂಥಾಲಯದಲ್ಲಿ ಹಲವಾರು ಕೊರತೆಗಳು ಇತ್ತು. ಈ ಹಿನ್ನೆಲೆಯಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಮತ್ತಿತರರ ರಾಜಕೀಯ ಮುಖಂಡರ ಒತ್ತಾಸೆಯ ಫಲವಾಗಿ ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಸುಮಾರು 25 ಕೋಟಿ ರೂ. ಖರ್ಚು ಮಾಡಿ, 7,208.5 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಐದು ಅಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡಿ, ಒಂದೇ ಸೂರಿನಡಿ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಜನರು, ವೃತ್ತಪತ್ರಿಕೆಗಳನ್ನು ಓದುವ ಹವ್ಯಾಸವಿರುವವರಿಗೆ ಕುಳಿತುಕೊಂಡು ಅಭ್ಯಾಸ ಮಾಡಲು ಅಗತ್ಯ ವ್ಯವಸ್ಥೆ ಮಾಡಿರುವುದಲ್ಲದೆ, ಡಿಜಿಟಲ್ ಲೈಬರಿ, ಎಂ.ಎಸ್.ಎಂ.ಇ. ಸ್ಕಿಲ್ ಟ್ರೈನಿಂಗ್ ಸೆಂಟರ್ ಸಹ ಇದೇ ಕಟ್ಟಡದಲ್ಲಿ ನಡೆಸಲು ಮುಂದಾಗಿದೆ.

ಕಟ್ಟಡದ ಸೆಲ್ಲರ್ ಸಂಪೂರ್ಣವಾಗಿ ವಾಹನದ ಪಾರ್ಕಿಂಗ್‌ಗೆ ಮೀಸಲಿದ್ದರೆ, ನೆಲ ಮಹಡಿಯಲ್ಲಿ ಕಚೇರಿ, ಆಡಿಟೋರಿಯಂ ಮತ್ತು ಗ್ರಂಥಾಲಯ ಇಲಾಖೆಯ ಉಪನಿರ್ದೇಶಕರ ಕಚೇರಿ ಕಾರ್ಯನಿರ್ವಹಿಸುತ್ತಿದೆ.ಮಧ್ಯದಲ್ಲಿ (ಮಾರ್ಜಿನಲ್)ವೃತ್ತ ಪತ್ರಿಕೆ ಮತ್ತು ಮಕ್ಕಳ ಪುಸ್ತಕಗಳ ಓದುಗರಿಗೆ ಅವಕಾಶವಿದ್ದರೆ, ಮೊದಲ ಮಹಡಿಯಲ್ಲಿ ಏಕ ಕಾಲಕ್ಕೆ ಸುಮಾರು 250-300 ಜನರು ಕುಳಿತು ಆರ್ಟ್ಸ್, ಕಾಮರ್ಸ್, ಸೈನ್ಸ್ ಹಾಗೂ ಸಾಹಿತ್ಯದ ಎಲ್ಲ ಪ್ರಕಾರಗಳ ಪುಸ್ತಕಗಳನ್ನು ಓದುವ ವಿಶಾಲ ಕೊಠಡಿ ಇದ್ದು, ಇದರ ಜೊತೆಗೆ, ಏಕ ಕಾಲಕ್ಕೆ 25 ಜನರು ಡಿಜಿಟಲ್ ಲೈಬ್ರರಿಯಲ್ಲಿ ಅಭ್ಯಾಸ ಮಾಡಲು ವ್ಯವಸ್ಥೆಯಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ನಡೆಸುವ ಸುಮಾರು 150ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡಲು ಅಗತ್ಯವಿರುವ ಸುಮಾರು 25,000 ಪುಸ್ತಕಗಳ ಜೊತೆಗೆ, 94 ಸಾವಿರ ಪುಸ್ತಕಗಳ ಬೃಹತ್ ಜ್ಞಾನ ಭಂಡಾರವೇ ಇಲ್ಲಿದೆ. ಅಲ್ಲದೆ ಡಿಜಿಟಲ್ ಲೈಬ್ರರಿಯಲ್ಲಿ ಇ-ಬುಕ್, ಇ ಜರ್ನಲ್ಸ್ ಗಳ ಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಪೂರಕವಾದ ಸುಮಾರು 36 ಸಾವಿರ ಯೂಟೂಬ್‌ಗಳ ಲಿಂಕ್ ಇವೆಲ್ಲವೂ ಉಚಿತವಾಗಿಯೇ ಅಧ್ಯಯನ ಆಸಕ್ತರಿಗೆ ಲಭ್ಯವಾಗಲಿವೆ. ಜೊತೆಗೆ,ಅಂಧರಿಗಾಗಿ ಬ್ರೈಲ್ ಲಿಪಿ ಒಳಗೊಂಡ ಪುಸ್ತಕಗಳೂ ಲಭ್ಯವಿದೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸೋಮವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ತೆರೆದಿರುತ್ತದೆ.

ಹಳೆಯ ಕಟ್ಟಡದಲ್ಲಿ ಜಾಗದ ಕೊರತೆಯಿದ್ದರೂ ಪ್ರತೀ ವರ್ಷ ಕೇಂದ್ರ ಗ್ರಂಥಾಲಯವನ್ನು ಬಳಸಿಕೊಂಡು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿ, ಉತ್ತೀರ್ಣರಾಗಿ ಸರಕಾರಿ ಕೆಲಸಗಳನ್ನು ಪಡೆದವರ ಸಂಖ್ಯೆ ನೂರಾರಿದೆ.ರಾಜ್ಯ ಸರಕಾರ ನಡೆಸುತ್ತಿರುವ ಪಿ.ಎಸ್.ಐ ಪರೀಕ್ಷೆಯ ಅಭ್ಯಾಸದಲ್ಲಿ ನಿರತರಾಗಿರುವ ಕೊರಟಗೆರೆಯ ಅನಂತರಾಜು ಎಂಬ ಅಭ್ಯರ್ಥಿ ಬೆಳಗ್ಗೆ 8 ಗಂಟೆಗೆ ಬಸ್ ಹಿಡಿದು ತುಮಕೂರಿಗೆ ಬಂದು, 9ಗಂಟೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ವಿಭಾಗದಲ್ಲಿ ಸಂಜೆ 7 ಗಂಟೆಯ ವರೆಗೂ ಅಭ್ಯಾಸ ಮಾಡಿ,ಕೊನೆಯ ಬಸ್‌ನಲ್ಲಿ ಊರಿಗೆ ಮರಳುತಿರುವುದಾಗಿ ತಮ್ಮ ದಿನಚರಿಯನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡಲು ಪುಸ್ತಕಗಳ ಕೊರತೆ ಇದೆ ಎಂದು ಹೇಳುವವರ ಸಂಖ್ಯೆ ಹೆಚ್ಚು.ಆದರೆ ಕೇಂದ್ರ ಗ್ರಂಥಾಲಯದಲ್ಲಿ ಉಚಿತವಾಗಿ 25,000ಕ್ಕೂ ಅಧಿಕ ಪುಸ್ತಕಗಳ ರಾಶಿಯೇ ಇದೆ. ಸುಸಜ್ಜಿತ ವಾಹನ ಪಾರ್ಕಿಂಗ್, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಲಿಫ್ಟ್ ವ್ಯವಸ್ಥೆ, ಅಧ್ಯಯನಕ್ಕೆ ವಿಶಾಲ ಕೊಠಡಿಗಳು, ಡಿಜಿಟಲ್ ಲೈಬ್ರರಿ, ಬ್ರೈಲ್‌ಲಿಪಿ ಪುಸ್ತಕಗಳು ಎಲ್ಲವೂ ಉಚಿತವಾಗಿ ಲಭ್ಯವಿದ್ದು, ಇದನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ತಮ್ಮ ಜೀವನ ರೂಪಿಸಿಕೊಳ್ಳಲು ಉತ್ತಮ ಅವಕಾಶ. ಇದನ್ನು ಸದ್ಬಳಕೆ ಮಾಡಿಕೊಳ್ಳಲಿ ಎಂಬುದು ಗ್ರಂಥಪಾಲಕ ಬಸವರಾಜು ಅವರ ಸಲಹೆಯಾಗಿದೆ.

ರಾಜ್ಯ ಗ್ರಂಥಾಲಯ ಇಲಾಖೆಯ ಸಹಯೋಗದಲ್ಲಿ, ಉಪನಿರ್ದೇಶಕರು ಗ್ರಂಥಾಲಯ ಇಲಾಖೆ ನುರಿತ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಕೇಂದ್ರ ಸರಕಾರದ ಯುಪಿಎಸ್‌ಸಿ ಪರೀಕ್ಷೆಗಳಾದ ಐಎಎಸ್ ಪರೀಕ್ಷೆ, ರಾಜ್ಯ ಸರಕಾರದ ಕೆ.ಪಿ.ಎಸ್‌ಪಿನವರು ನಡೆಸುವ ಕೆ.ಎ.ಎಸ್.ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನೂ ಪ್ರಾರಂಭಿಸಿದ್ದು, ಒಂದು ಬ್ಯಾಚ್ 300 ಜನರನ್ನು ಒಳಗೊಂಡಿದೆ. ಶೀಘ್ರದಲ್ಲಿಯೇ ಎಂ.ಎಸ್.ಎಂ.ಇ.ಸಾಫ್ಟ್ ಸ್ಕಿಲ್ ಟ್ರೈನಿಂಗ್ ಸಹ ಆರಂಭವಾಗಲಿದೆ.

| ಬಸವರಾಜು, ಗ್ರಂಥಪಾಲಕ

ಸ್ಮಾರ್ಟ್‌ಸಿಟಿ ಮೂಲ ಯೋಜನೆಯಲ್ಲಿಯೇ ಗ್ರಂಥಾಲಯ ಆವರಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಮತ್ತು ಇನ್‌ಕ್ಯೂಬೇಷನ್ ಸೆಂಟರ್ ನಿರ್ಮಾಣಕ್ಕೆ ಅವಕಾಶವಿತ್ತು. ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕು.ಈಗಿರುವ ಪುಸ್ತಕಗಳ ಸಂಖ್ಯೆ ಕಡಿಮೆ, ಕಾಂಪಿಟೇಟಿವ್ ಎಕ್ಸಾಮ್‌ಗೆ ಮತ್ತಷ್ಟು ಬುಕ್ಸ್ ಮತ್ತು ಜರ್ನಲ್‌ಗಳ ಅಗತ್ಯವಿದೆ. ಅಲ್ಲದೆ ಇದೇ ಜಾಗದಲ್ಲಿ ಕೈಗೆಟಕುವ ದರದಲ್ಲಿ ತಿಂಡಿ, ಊಟ ದೊರೆಯುವಂತೆ ಕ್ಯಾಂಟೀನ್‌ವೊಂದನ್ನು ತೆರೆಯಬೇಕೆಂಬ ಅಶಯ ಇದೆ. ಇದನ್ನು ಜಿಲ್ಲಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ನೋಡಲಿಕ್ಕೆ ಬಿಲ್ಡಿಂಗ್ ದೊಡ್ಡದಾಗಿ ಕಾಣುತ್ತೆ. ಆದರೆ, ಇನ್ನೂ ಕೆಲವು ಬಾಕಿ ಇದೆ. ಹಂತ ಹಂತವಾಗಿ ಎಲ್ಲ ಸೌಲಭ್ಯಗಳು ಓದುಗರಿಗೆ ದೊರೆಯಲಿದೆ.

| ಜಿ.ಬಿ.ಜಿ.ಬಿ.ಜ್ಯೋತಿಗಣೇಶ್, ಶಾಸಕ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲೆಂದೇ ಮಂಡ್ಯದಿಂದ ಬಂದು ತುಮಕೂರು ನಗರದಲ್ಲಿ ರೂಮ್ ಮಾಡಿದ್ದೆ. ಬೆಳಗ್ಗೆ 8 ಗಂಟೆಗೆ ಗ್ರಂಥಾಲಯದ ಒಳಗೆ ಹೋದರೆ, ಸಂಜೆ 8 ಗಂಟೆಗೆ ಹೊರಗೆ ಬರುತ್ತಿದ್ದು, ಮಧ್ಯ ತಿಂಡಿ, ಊಟಕ್ಕಾಗಿ ಮಾತ್ರ ಅರ್ಧ ಗಂಟೆ ಕಾಲ. ಉಳಿದಂತೆ ಓದು. ನಾವು ಅಭ್ಯಾಸ ಮಾಡಿದ್ದು ಹಳೆಯ ಕಟ್ಟಡದಲ್ಲಿ, ಪುಸ್ತಕಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಹೊಸ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯಾಸ ಮಾಡಲು ಪುಸ್ತಕಗಳ ರಾಶಿಯೇ ಇದೆ. ಜೊತೆಗೆ ಡಿಜಿಟಲ್ ಲೈಬ್ರರಿ ಇದೆ.ಇದಕ್ಕಿಂತ ಇನ್ನೇನು ಬೇಡ. ಆದರೆ, ಅಭ್ಯಾಸ ಮಾಡಲು ಬರುವ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆಯಾದರೆ ಆಭ್ಯಾಸಕ್ಕೆ ಬರುವ ನಿರುದ್ಯೋಗಿ ಯುವಜನರಿಗೆ ಅನುಕೂಲ ಅಗಲಿದೆ.

| ಉಪೇಂದ್ರ, ಪೊಲೀಸ್ ಕಾನ್‌ಸ್ಟೇಬಲ್, ಮಂಡ್ಯ ಜಿಲ್ಲೆ

Tags:    

Writer - ವಾರ್ತಾಭಾರತಿ

contributor

Editor - Naufal

contributor

Similar News