ಬೇಡವಾದ ಹೆಣ್ಣುಮಗು: ರಾಜಸ್ಥಾನದಲ್ಲಿ ಇನ್ನೂ ನಿಲ್ಲದ ಹೆಣ್ಣು ಭ್ರೂಣ ಹತ್ಯೆ

ಪ್ರಪಂಚದ ಅರ್ಧದಷ್ಟು ಅಸುರಕ್ಷಿತ ಗರ್ಭಪಾತಗಳು ಏಶ್ಯದಲ್ಲಿ ಸಂಭವಿಸುತ್ತವೆ, ಅವುಗಳಲ್ಲಿ ಹೆಚ್ಚಿನವು ದಕ್ಷಿಣ ಮತ್ತು ಮಧ್ಯ ಏಶ್ಯದಲ್ಲಿವೆ. ಅಸುರಕ್ಷಿತ ಗರ್ಭಪಾತಗಳು ಭಾರತದಲ್ಲಿ ತಾಯಂದಿರ ಮರಣಕ್ಕೆ ಮೂರನೇ ಪ್ರಮುಖ ಕಾರಣವಾಗಿವೆ ಮತ್ತು ಅಸುರಕ್ಷಿತ ಗರ್ಭಪಾತ ಸಂಬಂಧಿತ ಕಾರಣಗಳು ದಿನಕ್ಕೆ ಸುಮಾರು ಎಂಟು ಮಹಿಳೆಯರನ್ನು ಕೊಲ್ಲುತ್ತವೆ.

Update: 2023-09-14 07:05 GMT

ಬೋಝಾ, ಆನಾಚಿ, ಕಚ್ರಿ, ನಿರಾಶಾ ಇವೆಲ್ಲ ರಾಜಸ್ಥಾನದಲ್ಲಿ ಎರಡನೇ ಅಥವಾ ಮೂರನೆಯ ಬೇಡದ ಮಗುವಾಗಿ ಹುಟ್ಟಿದ ಹೆಣ್ಣುಮಕ್ಕಳಿಗೆ ಇಡಲಾಗುವ ಹೆಸರುಗಳಲ್ಲಿ ಕೆಲವು. ಬೋಜಾ ಎಂದರೆ ಹೊರೆ, ಆನಾಚಿ ಎಂದರೆ ಬೇಡವಾಗಿದ್ದು ಅಥವಾ ಕೆಟ್ಟದ್ದು, ಕಚ್ರಿ ಎಂದರೆ ಕಸ ಮತ್ತು ನಿರಾಶಾ ಎಂದರೆ ಕತ್ತಲೆ.

ಗಂಡುಮಕ್ಕಳಿಗೆ ಆದ್ಯತೆ ನೀಡುವ ಸಂಸ್ಕೃತಿಯಲ್ಲಿ ಬೇಕಿರದೆ ಜನಿಸಿದ ಹುಡುಗಿಯರಿಗೆ ಇಂಥ ಹೆಸರುಗಳು ಸಾಮಾನ್ಯ. ಎರಡನೇ ಅಥವಾ ಮೂರನೇ ಮಗಳನ್ನು ಹೊಂದುವುದನ್ನು ತಪ್ಪಿಸಲು, ಅಕ್ರಮ ಲಿಂಗ ಪತ್ತೆ ಪರೀಕ್ಷೆಗಳನ್ನು ಎಷ್ಟು ದುಡ್ಡು ಸುರಿದಾದರೂ ಮಾಡಿಸಿಕೊಳ್ಳುವುದೂ ನಡೆಯುತ್ತದೆ. ಭ್ರೂಣ ಹೆಣ್ಣಾಗಿದ್ದರೆ ಗರ್ಭಪಾತ ಸಾಮಾನ್ಯ.

2020ರ ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ಹೆಣ್ಣುಮಗುವಿನ ಜನನ ತಪ್ಪಿಸಲು ಮಾಡಿಸಿಕೊಳ್ಳುವ ಗರ್ಭಪಾತದ ಪರಿಣಾಮವಾಗಿ 2017ರಿಂದ ಲಕ್ಷಾಂತರ ಪ್ರಮಾಣದಲ್ಲಿ ಹೆಣ್ಣುಮಕ್ಕಳ ಜನನದಲ್ಲಿ ಇಳಿಕೆಯಾಯಿತು.

ಕುಟುಂಬಗಳು ಗಂಡುಮಕ್ಕಳಿಗೇ ಆದ್ಯತೆ ನೀಡುತ್ತವೆ, ಅವರು ಕುಟುಂಬದ ಹೆಸರನ್ನು ಮುಂದಕ್ಕೆ ಸಾಗಿಸುತ್ತಾರೆ ಎಂದು ಭಾವಿಸಲಾಗುತ್ತದೆ. ಮತ್ತೊಂದೆಡೆ, ಹೆಣ್ಣುಮಗು ಹುಟ್ಟಿದರೆ ಮುಂದೆ ಮದುವೆಗೆ ವರದಕ್ಷಿಣೆ ಹೊಂದಿಸುವುದೂ ಸೇರಿದಂತೆ ಬರೀ ಖರ್ಚಿನ ಹಾದಿ ಎಂದು ಅತಿ ಕ್ಷುಲ್ಲಕವಾಗಿ ಲೆಕ್ಕ ಹಾಕಲಾಗುತ್ತದೆ. ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಕುರಿತ 2022ರ ಅಧ್ಯಯನದ ಪ್ರಕಾರ, ಗಂಡುಮಕ್ಕಳು ತಮ್ಮ ಕುಟುಂಬಗಳಿಗೆ ವೃದ್ಧಾಪ್ಯದಲ್ಲಿ ಭದ್ರತೆ ನೀಡುತ್ತಾರೆ, ಹೆಣ್ಣುಮಕ್ಕಳು ಸಾಮಾಜಿಕ ಮತ್ತು ಆರ್ಥಿಕ ಹೊರೆ ಎಂದು ಗ್ರಹಿಸಲಾಗುತ್ತದೆ.

40 ವರ್ಷಗಳ ಹಿಂದೆ ಭಾರತದಲ್ಲಿ ಲಿಂಗ ಪತ್ತೆ ಪರೀಕ್ಷೆಯ ಆಧಾರದ ಮೇಲೆ ಹೆಣ್ಣು ಭ್ರೂಣಹತ್ಯೆಗಳು ಹೆಚ್ಚಾಗಿದ್ದವು, ಅಲ್ಟ್ರಾಸೌಂಡ್ ತಂತ್ರಜ್ಞಾನ ಮೇಲ್ವರ್ಗದ ಮತ್ತು ಮಧ್ಯಮ ವರ್ಗದ ಸಮಾಜದಲ್ಲಿ ಇಂಥದಕ್ಕೆ ಅವಕಾಶ ಮಾಡಿಕೊಟ್ಟಿತ್ತು ಎನ್ನುತ್ತಾರೆ ಆ ಕ್ಷೇತ್ರದಲ್ಲಿ ಕೆಲಸದ ಅನುಭವವಿರುವವರು.

ಭಾರತ 1994ರಲ್ಲಿ ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯದ ತಂತ್ರಗಳ ಕಾಯ್ದೆ-1994ರ (ಪಿಸಿಪಿಎನ್‌ಡಿಟಿ) ಅಡಿಯಲ್ಲಿ ಲಿಂಗ ಪತ್ತೆ ಪರೀಕ್ಷೆಗಳನ್ನು ನಿಷೇಧಿಸಿತು. ಇದು ಗರ್ಭಧಾರಣೆಯ ಮೊದಲು ಅಥವಾ ನಂತರ ಲಿಂಗಪತ್ತೆ ಮೂಲಕದ ಆಯ್ಕೆಯನ್ನು ತಡೆಯಿತು.

ಆದರೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅವಶ್ಯಕತೆಯಿದೆ ಎಂಬುದು ಕೂಡ ಅಷ್ಟೇ ನಿಜ. ಯಾಕೆಂದರೆ ಕಾನೂನು ಬಾಹಿರವಾಗಿ ಅವು ಹಲವೆಡೆ ನಡೆಯುತ್ತಲೇ ಇವೆಯೆಂಬುದಕ್ಕೆ ರಾಜಸ್ಥಾನದಂಥ ರಾಜ್ಯಗಳಲ್ಲಿ ಉದಾಹರಣೆಗಳು ಸಿಗುತ್ತವೆ.

ಲಕ್ನೊದ ಸ್ತ್ರೀರೋಗತಜ್ಞ ನೀಲಮ್ ಸಿಂಗ್, ಲಿಂಗ ಪತ್ತೆ ನಡೆಸುವವರನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದ್ದಾರೆ, ಕಡಿಮೆ ವಿದ್ಯಾವಂತ, ಬಡ ಕುಟುಂಬಗಳು ಮಾತ್ರ ಗಂಡು ಮಗು ಬೇಕೆಂದು ಬಯಸುತ್ತವೆ ಎಂಬುದು ತಪ್ಪು ಕಲ್ಪನೆ. ಮೇಲ್ವರ್ಗದಲ್ಲಿಯೂ ಈ ಭಾವನೆಯೇ ಇದೆ ಎಂದು ಹೇಳುತ್ತಾರೆ. ಇಂಥ ಅನೇಕ ಕಾನೂನುಬಾಹಿರ ಕೇಂದ್ರಗಳು ದೇಶಾದ್ಯಂತ ನಿರಾತಂಕವಾಗಿ ನಡೆಯುತ್ತವೆ ಮತ್ತು ಹಿರಿಯ ವೈದ್ಯರೂ ಇದರಲ್ಲಿ ಭಾಗಿಯಾಗಿರುತ್ತಾರೆ ಎಂದು ಅವರು ಹೇಳುತ್ತಾರೆ.

ಲಿಂಗಪತ್ತೆ ಮೂಲಕ ಮಾಡಿಸಿಕೊಳ್ಳುವ ಗರ್ಭಪಾತಗಳು ರಾಜಸ್ಥಾನದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಇವೆ ಎಂದು ತಜ್ಞರು ಹೇಳುತ್ತಾರೆ. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರಗಳು ಮಹಿಳೆಯ ಪಾಲಿಗೆ ಅತ್ಯಂತ ಕೆಟ್ಟ ರಾಜ್ಯಗಳಾಗಿವೆ ಎಂಬುದು ಈಗಾಗಲೇ ಹಲವು ಬಾರಿ ವರದಿಯಾಗಿರುವ ವಿಚಾರ. ಈ ರಾಜ್ಯಗಳಲ್ಲಿನ ಮಹಿಳೆಯರ ಸಾಕ್ಷರತೆ ಪ್ರಮಾಣವೂ ಕಡಿಮೆ. ಗರ್ಭಿಣಿಯಾಗಿದ್ದಾಗ ಹೆಚ್ಚಾಗಿ ಸಾವನ್ನಪ್ಪುವ ಘಟನೆಗಳೂ ನಡೆಯುತ್ತವೆ. ಇಲ್ಲಿ ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧ ಕೃತ್ಯಗಳನ್ನು ಎಸಗಲಾಗುತ್ತದೆ.

ಲಿಂಗ ಪತ್ತೆ ಮೂಲಕ ನಡೆಯುವ ಗರ್ಭಪಾತದ ವಿಷಯದ ಬಗ್ಗೆ ಅಧ್ಯಯನ ಮಾಡುವ ಪಂಜಾಬ್ ಮೂಲದ ಮಕ್ಕಳ ವೈದ್ಯೆ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಹರ್ಷಿಂದರ್ ಕೌರ್ ಹೇಳುವ ಪ್ರಕಾರ, ಲಿಂಗಪತ್ತೆ ಮಾಡಿಸದಿದ್ದರೂ ಎಷ್ಟೋ ದಂಪತಿಗಳು ಹೆಣ್ಣು ಮಗು ಜನಿಸಬಹುದೇನೋ ಎಂಬ ಆತಂಕದಿಂದಲೇ ಭ್ರೂಣವನ್ನು ಗರ್ಭಪಾತ ಮಾಡಿಸುತ್ತಾರೆ. ಇಂಥವೆಲ್ಲ ಅಸುರಕ್ಷಿತ ರೀತಿಯಲ್ಲಿ ನಡೆಯುತ್ತವೆ. ಲಿಂಗ ಪತ್ತೆ ಪರೀಕ್ಷೆಯ ನಂತರ ಗರ್ಭಪಾತ ಮಾಡಿಸಿಕೊಳ್ಳುವವರೂ ವೈದ್ಯಕೀಯ ತಜ್ಞರ ಬಳಿ ಹೋಗಲು ಅವಕಾಶ ಇರುವುದಿಲ್ಲ. ಯಾಕೆಂದರೆ ಅದು ಅಕ್ರಮವಾಗಿ ನಡೆಯಬೇಕಿರುವುದರಿಂದ ಅಸುರಕ್ಷಿತ ಗರ್ಭಪಾತಗಳ ಪ್ರಮಾಣವೇ ಹೆಚ್ಚು.

ತಮ್ಮ ಬದುಕಿನ ಕುರಿತಾಗಿ ಸ್ವತಂತ್ರವಾಗಿ ನಿರ್ಧರಿಸುವ ಹಕ್ಕನ್ನು ಹೊಂದಿರದ ಬಹುತೇಕ ಅಂಚಿನಲ್ಲಿರುವ ಮತ್ತು ಗ್ರಾಮೀಣ ಸಮುದಾಯಗಳ ಮಹಿಳೆಯರ ವಿಷಯದಲ್ಲಂತೂ ಇದು ಸಾಮಾನ್ಯವಾಗಿದೆ ಎನ್ನುತ್ತಾರೆ ಕೌರ್. ಎಷ್ಟೋ ಸಲ ಸೂಲಗಿತ್ತಿಯರ ಮೂಲಕ ನಡೆಸಲಾಗುವ ಇಂತಹ ಗರ್ಭಪಾತ ಪ್ರಕರಣಗಳಲ್ಲಿ ಮಹಿಳೆಯರು ತೀವ್ರ ರಕ್ತಸ್ರಾವಕ್ಕೆ ತುತ್ತಾಗಿ ಪ್ರಾಣಾಪಾಯ ಎದುರಿಸುವುದೂ ಇದೆ.

ಪ್ರಪಂಚದ ಅರ್ಧದಷ್ಟು ಅಸುರಕ್ಷಿತ ಗರ್ಭಪಾತಗಳು ಏಶ್ಯದಲ್ಲಿ ಸಂಭವಿಸುತ್ತವೆ, ಅವುಗಳಲ್ಲಿ ಹೆಚ್ಚಿನವು ದಕ್ಷಿಣ ಮತ್ತು ಮಧ್ಯ ಏಶ್ಯದಲ್ಲಿವೆ. ಅಸುರಕ್ಷಿತ ಗರ್ಭಪಾತಗಳು ಭಾರತದಲ್ಲಿ ತಾಯಂದಿರ ಮರಣಕ್ಕೆ ಮೂರನೇ ಪ್ರಮುಖ ಕಾರಣವಾಗಿವೆ ಮತ್ತು ಅಸುರಕ್ಷಿತ ಗರ್ಭಪಾತ ಸಂಬಂಧಿತ ಕಾರಣಗಳು ದಿನಕ್ಕೆ ಸುಮಾರು ಎಂಟು ಮಹಿಳೆಯರನ್ನು ಕೊಲ್ಲುತ್ತವೆ.

ವೈದ್ಯಕೀಯ ತಜ್ಞರ ಅನುಪಸ್ಥಿತಿಯಲ್ಲಿ ಮಾಡಿದ ಅಸುರಕ್ಷಿತ ಮತ್ತು ಅನೈರ್ಮಲ್ಯದ ಗರ್ಭಪಾತದ ನಂತರ ತಮ್ಮ ಬಳಿಗೆ ಬಂದ ಹಲವಾರು ಮಹಿಳೆ ಯರಿಗೆ ತಾವು ಚಿಕಿತ್ಸೆ ನೀಡಿದ್ದಾಗಿ ಲಕ್ನೊದ ಸ್ತ್ರೀರೋಗತಜ್ಞ ನೀಲಮ್ ಸಿಂಗ್ ಹೇಳುತ್ತಾರೆ.

ಹುಟ್ಟಿನಿಂದಲೇ ತಾರತಮ್ಯ ಶುರುವಾಗುತ್ತದೆ. ತಮ್ಮ ಹೆತ್ತವರು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದಾಗ ಬೇಡವಾಗಿ ಜನಿಸಿದ ಅನೇಕ ಹುಡುಗಿಯರು ರಾಜಿ ಜೀವನವನ್ನು ನಡೆಸುತ್ತಾರೆ ಎಂದು ಕೌರ್ ಹೇಳುತ್ತಾರೆ. ಅವರಿಗೆ ಕನಿಷ್ಠ ಶಿಕ್ಷಣವನ್ನಷ್ಟೇ ನೀಡಲಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಅವರಿಗಿರುವುದಿಲ್ಲ. ಆದಷ್ಟು ಬೇಗ ಅವರ ಮದುವೆ ಮಾಡಲಾಗುತ್ತದೆ. ಏಕೆಂದರೆ ಹೇಗಾದರೂ ಜವಾಬ್ದಾರಿ ಮುಗಿಸಿಕೊಳ್ಳುವ ಮನೋಭಾವ ಬೇಡದ ಹೆಣ್ಣುಮಕ್ಕಳ ವಿಚಾರವಾಗಿ ಕುಟುಂಬದೊಳಗೆ ಇರುತ್ತದೆ.

ಲಿಂಗ ಪತ್ತೆ ಮೂಲಕ ಮಾಡುವ ಗರ್ಭಪಾತಗಳನ್ನು ನಿಲ್ಲಿಸಲು ಕೆಲಸ ಮಾಡುವ ಪೊಲೀಸರು ಮತ್ತು ಸರಕಾರೇತರ ಸಂಸ್ಥೆಗಳು ಬಳಸುವ ಒಂದು ವಿಧಾನವೆಂದರೆ ಡಿಕಾಯ್ ಕಾರ್ಯಾಚರಣೆಗಳು, ಇದರಲ್ಲಿ ಲಿಂಗಪತ್ತೆ ಮಾಡುವವರನ್ನು ಹಿಡಿದುಹಾಕಲು ಗೂಢಚಾರಿಕೆಗೆ ಗರ್ಭಿಣಿಯೊಬ್ಬರ ನೆರವು ಪಡೆಯಲಾಗುತ್ತದೆ.

ಪಿಸಿಪಿಎನ್‌ಡಿಟಿ ಯೋಜನೆ ರಾಜ್ಯಮಟ್ಟದಲ್ಲಿ ಯೋಜನಾ ನಿರ್ದೇಶಕರನ್ನು ಹೊಂದಿರುತ್ತದೆ. ಅವರು ಪ್ರತೀ ಜಿಲ್ಲೆಯಲ್ಲೂ ಉಪ ನಿಯಂತ್ರಕರನ್ನು ಹೊಂದಿರುತ್ತಾರೆ ಮತ್ತು ತಳಮಟ್ಟದಲ್ಲಿ ಸಕ್ರಿಯವಾಗಿರುವ ಎನ್‌ಜಿಒಗಳೊಂದಿಗೆ ಕೆಲಸ ಮಾಡುತ್ತಾರೆ. 2019ರಲ್ಲಿ ಪ್ರಾರಂಭವಾದ ರಾಜಸ್ಥಾನ ಸರಕಾರದ ಈ ಯೋಜನೆ ಬಹಳ ಸಹಾಯಕವಾಗಿದೆ. ಅಕ್ರಮ ಗರ್ಭಪಾತ ಮಾಡುವ ಯಾವುದೇ ಕೇಂದ್ರದ ಬಗ್ಗೆ ಮಾಹಿತಿ ದೊರೆತರೆ ಅಧಿಕಾರಿಗಳು ಡಿಕಾಯ್ ಕಾರ್ಯಾಚರಣೆ ನಡೆಸುತ್ತಾರೆ.

ಕಾಲಾನಂತರದಲ್ಲಿ, ಕಾಯ್ದೆಯ ಉತ್ತಮ ಅನುಷ್ಠಾನ, ಹೆಚ್ಚಿನ ಅರಿವು ಮತ್ತು ಬದಲಾವಣೆಯ ಗ್ರಹಿಕೆಗಳ ಮೂಲಕ ಹೆಣ್ಣು ಭ್ರೂಣಹತ್ಯೆ ಕಡಿಮೆಯಾಗಿದೆ ಎಂಬುದು ನಿಜವಾದರೂ ಅದು ನಿಂತಿಲ್ಲ. ಆದರೂ, ರಾಜಸ್ಥಾನ ಮತ್ತು ಭಾರತದಲ್ಲಿ ಜನನದ ಲಿಂಗ ಅನುಪಾತ ಸ್ವಲ್ಪಮಟ್ಟಿಗೆ ಸುಧಾರಿಸಿದೆ.

ಲಿಂಗ ಪತ್ತೆ ಪರೀಕ್ಷೆಗಳನ್ನು ಮಾಡಿಸುವುದು ಈಗ ಕಷ್ಟಕರವಾಗಿದೆ. ಯಾಕೆಂದರೆ ಡಿಕಾಯ್ ಕಾರ್ಯಾಚರಣೆ ಭಯದಿಂದ ಲಿಂಗಪತ್ತೆ ಪರೀಕ್ಷೆ ನಡೆಸುವ ಕೇಂದ್ರಗಳು ಕಡಿಮೆಯಾಗುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮಾರ್ಚ್ 2023ರಲ್ಲಿ ಪ್ರಕಟವಾದ ಸಂಶೋಧನೆ ಹೇಳುವಂತೆ, 1992ರಿಂದ 2021ರ ಅವಧಿಯಲ್ಲಿ ಗಂಡುಮಕ್ಕಳು ಬೇಕೆಂದು ಬಯಸುವ ಕುಟುಂಬಗಳ ಪ್ರಮಾಣ ಶೇ.40ರಿಂದ ಶೇ.18ಕ್ಕೆ ಕುಸಿದಿದೆ. ಇದು ಗಮನಾರ್ಹ ಬದಲಾವಣೆ. ಗಂಡಾದರೂ ಸರಿ, ಹೆಣ್ಣಾದರೂ ಸರಿ ಎಂಬ ಮನೋಭಾವ ನಿಧಾನವಾಗಿಯಾದರೂ ಮೂಡಲು ಆರಂಭವಾಗಿದೆ. ಶಿಕ್ಷಣ, ಉದ್ಯೋಗಾವಕಾಶಗಳೂ ಮಹಿಳೆಯರಿಗೆ ಲಭ್ಯವಾಗುತ್ತಿವೆ.

ಕಾನೂನು ಹೆಣ್ಣು ಭ್ರೂಣ ಹತ್ಯೆಗಳ ಸಂಖ್ಯೆಯನ್ನು ಕಡಿತಗೊಳಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅದು ರಾಜಸ್ಥಾನದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಎಂದು ಪರಿಣತರು ಹೇಳುತ್ತಾರೆ. ಕಾನೂನು ಮಾತ್ರವೇ ಇಂಥ ಕಾನೂನುಬಾಹಿರ ಪರೀಕ್ಷೆಗಳ ಸಮಸ್ಯೆಯನ್ನು ನಿವಾರಿಸುವುದು ಸಾಧ್ಯವಿಲ್ಲ, ಬದಲಾಗಿ ಜನರ ಸಾಮಾಜಿಕ ಮತ್ತು ಮಾನಸಿಕ ಧೋರಣೆಯಲ್ಲಿ ಪರಿವರ್ತನೆ ಬರಬೇಕಿದೆ ಎಂಬುದು ಅವರ ಅಭಿಪ್ರಾಯ.

(ಕೃಪೆ: indiaspend.com)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಜಿಜ್ಞಾಸಾ ಮಿಶ್ರಾ

contributor

Similar News