ಮಾನವೀಯತೆಯ ಮೇಲೆ ಮೂತ್ರ ಮಾಡುವ ಅಮೃತ ಕಾಲ !

Update: 2023-07-09 17:27 GMT
Editor : Safwan | Byline : ಆರ್. ಜೀವಿ

ದೆೀಶದ ಪ್ರಧಾನಿ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡುತ್ತಿರುವ ಹೊತ್ತಿನಲ್ಲೇ, ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಅತ್ಯಂತ ಅನಾಗರಿಕ, ಅಷ್ಟೇ ಆಘಾತಕಾರಿ ಪ್ರಕರಣವೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಅಲ್ಲಿನ ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾ ಎಂಬವರ ಪ್ರತಿನಿಧಿ ಎನ್ನಲಾದ ಪ್ರವೇಶ್ ಶುಕ್ಲಾ ಎಂಬಾತ ಅಲ್ಲಿನ ಆದಿವಾಸಿ ವ್ಯಕ್ತಿಯೊಬ್ಬನ ಮುಖದ ಮೇಲೆಯೇ ಮೂತ್ರ ವಿಸರ್ಜನೆ ಮಾಡುತ್ತಿರುವ ಆ ಅತ್ಯಂತ ಆಘಾತಕಾರಿ ವೀಡಿಯೊ ಮಂಗಳವಾರ ಸಂಜೆ ಎಲ್ಲೆಡೆ ವೈರಲ್ ಆಗಿದೆ. ಈ ವೀಡಿಯೊ ಒಂದು ವಾರ ಹಳೆಯದು ಎಂದು ಒಂದು ವರದಿ ಹೇಳುತ್ತಿದ್ದರೆ ಒಂದು ವರ್ಷದಷ್ಟು ಹಳೆಯದು ಎಂದೂ ಹೇಳಲಾಗುತ್ತಿದೆ.

ಆ ವೀಡಿಯೊ ಅದೆಷ್ಟೇ ಹಳೆಯದು ಅಥವಾ ಹೊಸತಾಗಿರಲಿ, ಈ ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯೊಂದು ಜಾರಿಗೆ ಬರುವ ಮೊದಲು, ಎಲ್ಲರೂ ಸಮಾನವಾಗಿ ಬದುಕುವ ಸಮಾಜವೊಂದನ್ನು ಕಟ್ಟುವ ಅಗತ್ಯವನ್ನು ಅದು ಸಾರಿ ಹೇಳುತ್ತಿದೆ. ಈತನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬಿಜೆಪಿ ನಾಯಕರ ಫೋಟೋಗಳಿವೆ. ಮಾತ್ರವಲ್ಲ, ಅಲ್ಲಿ ಕೇಸರಿ ಬಾವುಟ ರಾರಾಜಿಸುತ್ತಿದೆ. ಈ ಮೂಲಕ ತನ್ನ ಕೃತ್ಯದಲ್ಲಿ ಈತ ಈ ದೇಶದ ಆಡಳಿತ ಪಕ್ಷಕ್ಕೂ, ಕೇಸರಿ ಧ್ವಜಕ್ಕೂ ಪರೋಕ್ಷ ಪಾಲನ್ನು ನೀಡಿದ್ದಾನೆ. ಹಿಂದುತ್ವವಾದದ ಹೆಸರಿನಲ್ಲಿ ಬೀದಿಗಿಳಿದು ದ್ವೇಷ ರಾಜಕಾರಣ ನಡೆಸುವವರ ಆಳದೊಳಗಿರುವ ಕ್ರೌರ್ಯಗಳನ್ನು ಇದು ಬಹಿರಂಗಗೊಳಿಸಿದೆ.

ಈ ಬಗ್ಗೆ ಹಲವು ವಿಪಕ್ಷ ನಾಯಕರು ಟ್ವೀಟ್ ಮಾಡಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಲ್ಲಿ " ಇದೇನಾ ಆದಿವಾಸಿಗಳ ಕುರಿತ ಬಿಜೆಪಿಯ ಕಾಳಜಿ" ಎಂದು ಕೇಳಿದ್ದರು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಚೌಹಾಣ್ ಅವರು " ಆ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಆತನ ವಿರುದ್ಧ ರಾಷ್ಟ್ರೀಯ ಸುರಕ್ಷತಾ ಕಾಯ್ದೆ ಎನ್ ಎಸ್ ಎ ಅನ್ವಯ ಪ್ರಕರಣ ದಾಖಲಿಸಲು ಸೂಚಿಸಿದ್ದೇನೆ " ಎಂದು ಟ್ವೀಟ್ ಮಾಡಿದ್ದಾರೆ.

ಇಂತಹದೊಂದು ಅಮಾನವೀಯ ಕೃತ್ಯ ಎಸಗಿದವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವರು ಸೂಚಿಸಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಆಳುವವರು ಹಾಗು ಪೊಲೀಸರು ಇಷ್ಟರ ಮಟ್ಟಿಗೆ ಇರುವ ನೆಲದ ಕಾನೂನನ್ನು ಮುಲಾಜಿಲ್ಲದೆ ಜಾರಿ ಮಾಡಿದರೆ ಪರ್ವೇಶ್ ಶುಕ್ಲಾನಂತಹ ದುಷ್ಟರನ್ನು ಮಟ್ಟ ಹಾಕಬಹುದು. ಆತನಿಂದ ಇನ್ನಷ್ಟು ಅಂತಹ ಹೇಯ ಕೃತ್ಯಕ್ಕೆ ದುರ್ಬಲ ವರ್ಗಗಳ ಅಮಾಯಕರು ಬಲಿಪಶುಗಳಾಗದಂತೆ ತಡೆಯಬಹುದು.

ಬುಧವಾರ ಪ್ರವೇಶ್ ಶುಕ್ಲಾನ ಮನೆಯ ಅಕ್ರಮ ಭಾಗಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮನೆಯ ಅಕ್ರಮ ಭಾಗಗಳನ್ನು ಧ್ವಂಸ ಮಾಡಲಾಗುವುದು ಎಂದು ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಹೇಳಿರುವುದು ವರದಿಯಾಗಿದೆ. ಹಾಗಾಗಿ ಬುಲ್ಡೋಜರ್ ನಲ್ಲಿ ಇಡೀ ಮನೆಯನ್ನು ಧ್ವಂಸ ಮಾಡಿದ್ದಾರೆಯೇ ಅಥವಾ ಮನೆಯ ಅಕ್ರಮವಾಗಿ ನಿರ್ಮಿಸಿದ ಭಾಗಗಳನ್ನು ಧ್ವಂಸ ಮಾಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಆದರೆ ಯಾವುದೇ ಕಾರಣಕ್ಕೂ ಬುಲ್ಡೋಜರ್ ಬಳಸಿ ಯಾವುದೇ ಆರೋಪಿಯ ಮನೆ ಧ್ವಂಸ ಮಾಡುವುದು ಕಾನೂನು ಸಮ್ಮತ ಕ್ರಮವಲ್ಲ. ಅದೊಂದು ಸರಕಾರಿ ಗೂಂಡಾಗಿರಿ. ದೇಶದ ದಂಡ ಸಂಹಿತೆಯ ಯಾವುದೇ ಕಾನೂನು ಯಾವುದೇ ಅಪರಾಧಿಯ ಮನೆ ಧ್ವಂಸ ಮಾಡಲು ಹೇಳೋದಿಲ್ಲ. ಮನೆಮಂದಿ ಆರೋಪಿಯ ತಪ್ಪಿಗೆ ಜವಾಬ್ದಾರರಲ್ಲ. ಅವರಿಗೆ ಶಿಕ್ಷೆಯಾಗಬಾರದು. ಅದು ಮಧ್ಯಪ್ರದೇಶದ ಪ್ರವೇಶ್ ಶುಕ್ಲಾ ಇರಲಿ ಅಥವಾ ಉತ್ತರ ಪ್ರದೇಶದ ಜಾವೇದ್ ಇರಲಿ. ಆದರೆ ಜಾವೇದ್ ನ ಮನೆಯನ್ನು ಉತ್ತರ ಪ್ರದೇಶ ಸರಕಾರ ಸಂಪೂರ್ಣ ಧ್ವಂಸ ಮಾಡಿಬಿಟ್ಟಿತ್ತು.

ಈಗ ಪ್ರವೇಶ್ ಶುಕ್ಲಾ ಅವರ ತಂದೆ ತಾಯಿ ರೋದಿಸುವ ವೀಡಿಯೊಗಳು ಬಂದಿವೆ. ಇದು ನಿಜಕ್ಕೂ ಖೇದಕರ. ಬುಲ್ಡೋಜರ್ ಕಾರ್ಯಾಚರಣೆ ನ್ಯಾಯಸಮ್ಮತ ಅಲ್ಲವೇ ಅಲ್ಲ. ಆದರೆ ಇಲ್ಲಿ ವಿಪರ್ಯಾಸ ಅಂದ್ರೆ ಇದೇ ಪ್ರವೇಶ್ ಶುಕ್ಲಾನ ಜಾಗದಲ್ಲಿ ಯಾವುದಾದರೂ ಪರ್ವೇಜ್ ಅನ್ಸಾರಿ ಇದ್ದಿದ್ದರೆ ಇದೇ ಪ್ರವೇಶ್ ಶುಕ್ಲಾ ಹಾಗು ಆತನ ಕುಟುಂಬ ಸದಸ್ಯರು ಪರ್ವೇಜ್ ಅನ್ಸಾರಿಯ ಮನೆ ಧ್ವಂಸ ಮಾಡುವುದನ್ನು ನೋಡಿ ನಗುವ ಸಾಧ್ಯತೆಯೇ ಹೆಚ್ಚಿತ್ತು. ಏಕೆಂದರೆ ಈಗ ಬುಲ್ಡೋಜರ್ ದಾಳಿಗೆ ಒಳಗಾದವರನ್ನು ನೋಡಿ ಬಿಜೆಪಿ ಬೆಂಬಲಿಗರು ಹಾಗು ಅಭಿಮಾನಿಗಳು ಎಲ್ಲೆಡೆ ಸಂಭ್ರಮಾಚರಣೆ ಮಾಡೋದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಯಾವುದೇ ಬಿಜೆಪಿ ಕಾರ್ಯಕರ್ತ ಅಥವಾ ವಾಟ್ಸ್ ಆ್ಯಪ್ ಬೆಂಬಲಿಗರು ಅದನ್ನು ಖಂಡಿಸಿದ್ದನ್ನು ನೀವೆಲ್ಲದರೂ ನೋಡಿದ್ದೀರಾ ?

ಮಧ್ಯಪ್ರದೇಶದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆಯಿದೆ. ಅಲ್ಲಿನ 12 ಜಿಲ್ಲೆಗಳಲ್ಲಿ ಆದಿವಾಸಿಗಳ ಜನಸಂಖ್ಯೆ ದೊಡ್ಡದಿದೆ. ಪ್ರವೇಶ್ ಶುಕ್ಲಾ ವಿರುದ್ಧ ತಕ್ಷಣ ಕ್ರಮವಾಗಿದ್ದಕ್ಕೂ ಇದಕ್ಕೂ ಸಂಬಂಧವಿದೆಯೇ ? ಗೊತ್ತಿಲ್ಲ. ಇರಲಿ. ಕಾನೂನು ಕ್ರಮ ಆಗಿದ್ದು ಸ್ವಾಗತಾರ್ಹ. ಬುಲ್ಡೋಜರ್ ಕ್ರಮವಾಗಿದ್ದು ಮಾತ್ರ ಖಂಡನೀಯ. ಬಿಜೆಪಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ದಶಕಗಳಿಂದ ಅಧಿಕಾರದಲ್ಲಿರುವ ಮಧ್ಯ ಪ್ರದೇಶ ಆದಿವಾಸಿಗಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕುಖ್ಯಾತಿ ಪಡೆದಿದೆ. ಆಗೆಲ್ಲ ಆಗದ ಕ್ರಮ ಈಗ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಆಗಿದೆ.

ಬಂಧನದ ಬೆನ್ನಿಗೇ ಹೇಳಿಕೆ ನೀಡಿದ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ " ಆರೋಪಿಗಳಿಗೆ ಜಾತಿ, ಧರ್ಮ , ಪಕ್ಷ ಯಾವುದೂ ಇರೋದಿಲ್ಲ. ಅವರು ಆರೋಪಿಗಳು ಅಷ್ಟೇ " ಎಂದು ಅಣಿಮುತ್ತು ಉದುರಿಸಿದ್ದಾರೆ. ಬಿಜೆಪಿ ನಾಯಕರಿಂದ ಅದರಲ್ಲೂ ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಂದ ಇಂತಹ ಮಾತುಗಳನ್ನು ಕೇಳೋದಿಕ್ಕೆ ಎರಡು ಕಿವಿಗಳು ಸಾಲದು.

ಶಿವರಾಜ್ ಸಿಂಗ್ ಚೌಹಾಣ್ ಅಥವಾ ಬೇರೆ ಬಿಜೆಪಿ ಹಿರಿಯ ನಾಯಕರು ಯಾವಾಗಲೂ ಆರೋಪಿಗಳ ಬಗ್ಗೆ, ಅಪರಾಧಿಗಳ ಬಗ್ಗೆ ಮಾತಾಡುವಾಗ ಇಷ್ಟೇ ಧಾರಾಳತನ ತೋರಿಸ್ತಾರಾ ? " ಆರೋಪಿ ಕೇವಲ ಆರೋಪಿ ಮಾತ್ರ, ಆತನಿಗೂ ಧರ್ಮಕ್ಕೂ ಸಂಬಂಧ ಕಲ್ಪಿಸಬೇಡಿ " ಎಂದು ತಮ್ಮ ಐಟಿ ಸೆಲ್ ಗೆ, ಭಟ್ಟಂಗಿ ಚಾನಲ್ ಗಳ ಅರಚಾಡುವ ಆಂಕರ್ ಗಳಿಗೆ, ಟ್ರೋಲ್ ದಾಳಿ ನಡೆಸುವ ತಮ್ಮ ಕಟ್ಟಾ ಬೆಂಬಲಿಗರ ಪಡೆಗೆ ಬುದ್ಧಿ ಮಾತು ಹೇಳ್ತಾರಾ ?

ಈ ಹಿಂದೆ ಅದೆಷ್ಟು ಬಾರಿ ಇದೇ ಶಿವರಾಜ್ ಸಿಂಗ್ ಚೌಹಾಣ್ ಲವ್ ಜಿಹಾದ್ ಅದೂ ಇದೂ ಅಂತ ಪ್ರಚೋದನಕಾರಿ ಮಾತಾಡಿಲ್ಲ ? ಧಾರ್ಮಿಕ ಅಸಹಿಷ್ಣುತೆಯನ್ನು ಬೆಳೆಸುವ ಹೇಳಿಕೆ ಕೊಟ್ಟಿಲ್ಲ ? ಆವಾಗ ಈ ಧಾರಾಳತನ, ವಿಶಾಲ ಮನಸ್ಸು ಎಲ್ಲಿತ್ತು ? ಈ ಪ್ರವೇಶ್ ಶುಕ್ಲಾನ ಫೇಸ್ ಬುಕ್ ತುಂಬೆಲ್ಲಾ ಬಿಜೆಪಿ ನಾಯಕರದ್ದೇ ಫೋಟೋಗಳು, ಪೋಸ್ಟರ್ ಗಳು ತುಂಬಿ ತುಳುಕುತ್ತಿವೆ. ತಾನು ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾ ಅವರ ಪ್ರತಿನಿಧಿ ಎಂದು ಅವನೇ ಹೇಳಿಕೊಂಡಿರೋದು ಕೂಡ ಇದೆ. ದೈನಿಕ್ ಭಾಸ್ಕರ್ ಪತ್ರಿಕೆಯೂ ಅದನ್ನೇ ಹೇಳುತ್ತಿದೆ. ಆತನ ತಂದೆಯೂ ಅದನ್ನೇ ಹೇಳುತ್ತಿದ್ದಾರೆ.

ಆದರೆ ಬಿಜೆಪಿ ನಾಯಕರು ಮಾತ್ರ ಆತನಿಗೂ ನಮಗೂ ಸಂಬಂಧವೇ ಇಲ್ಲ ಅಂತಾರೆ. ಹಾಗಾದರೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ತೀರಾ ಸಾಮಾನ್ಯ ವ್ಯಕ್ತಿಯಾಗಿದ್ದನೇ ಪ್ರವೇಶ್ ಶುಕ್ಲಾ ? ಇದ್ದಕ್ಕಿದ್ದ ಹಾಗೆ ಈ ಪ್ರವೇಶ್ ಶುಕ್ಲಾನಿಗೆ ಒಬ್ಬ ಆದಿವಾಸಿಯ ಮೇಲೆ ಮೂತ್ರ ಮಾಡಿ ತಾನು ಬಚಾವಾಗಬಹುದು ಎಂದು ಅನಿಸಿಬಿಟ್ಟಿತೇ ? ಈ ಪ್ರವೇಶ್ ಶುಕ್ಲಾ ಎಂಬಾತನ ಹಿಂದೆ ಮುಂದೆ ಯಾರೂ ಪ್ರಭಾವಿಗಳು ಇಲ್ಲದೆಯೇ ಅಷ್ಟು ದೊಡ್ಡ ಅಮಾನವೀಯ ಕೃತ್ಯವೆಸಗಲು ಆತನಿಗೆ ಧೈರ್ಯ ಬಂತೇ ?

ಕಳೆದ ವರ್ಷ ಇದೇ ಸಿಧಿ ಕ್ಷೇತ್ರದ ಶಾಸಕ ಕೇದಾರ್ ನಾಥ್ ಶುಕ್ಲಾ ನೀಡಿದ ದೂರಿನ ಮೇಲೆ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಒಬ್ಬ ಪತ್ರಕರ್ತ, ಒಬ್ಬ ರಂಗಕರ್ಮಿ ಸೇರಿದಂತೆ ಆ ಎಂಟು ಮಂದಿಯನ್ನು ಠಾಣೆಯಲ್ಲಿ ಕೇವಲ ಅಂಡರ್ ವೇರ್ ನಲ್ಲಿ ನಿಲ್ಲಿಸಿದ್ದು ಭಾರೀ ವಿವಾದವಾಗಿತ್ತು. ಅದನ್ನು ಪೊಲೀಸರು ಸಮರ್ಥಿಸಿಕೊಂಡಿದ್ದರು. ಆಮೇಲೆ ಅನಿವಾರ್ಯವಾಗಿ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿತ್ತು. ಇದೇ ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾ ಆದಿವಾಸಿ ಕುಟುಂಬವೊಂದರ ಜಮೀನು ನುಂಗಿದ ಆರೋಪವೂ ಕೇಳಿ ಬಂದಿತ್ತು. ಈ ಎಲ್ಲ ಹಿನ್ನೆಲೆ ಇರುವ ಬಿಜೆಪಿ ನಾಯಕರ ಹಿಂಬಾಲಕ ಅಥವಾ ಪ್ರತಿನಿಧಿಯಾಗಿದ್ದರೆ ಆತನಿಗೆ ಆದಿವಾಸಿಯ ಮೇಲೆ ಮೂತ್ರ ಮಾಡುವ ಧೈರ್ಯ ಬರೋದು ಸಹಜ.

ಪ್ರವೇಶ್ ಶುಕ್ಲಾನಿಗೆ ಅಂತಹ ಆಘಾತಕಾರಿ ಕೃತ್ಯ ಎಸಗಲು ಧೈರ್ಯ ಎಲ್ಲಿಂದ ಬಂತು ?

ಹಾಗು ತನ್ನ ಮೇಲೆ ಅಂಥದೊಂದು ಆಘಾತಕಾರಿ ದಾಳಿಯಾಗುತ್ತಿದ್ದರೂ ಅಲ್ಲಿಂದ ಎದ್ದು ಪ್ರವೇಶ್ ಶುಕ್ಲಾನನ್ನು ದೂಡಿ ಹೋಗಲು ಆ ಆದಿವಾಸಿಗೆ ಧೈರ್ಯ ಬರಲಿಲ್ಲ ಏಕೆ ?

ಈ ಪ್ರಶ್ನೆಗಳನ್ನು ನಾವು ಮೊದಲು ಕೇಳಬೇಕಾಗಿದೆ. " ಶೂದ್ರನ ನಾಲಗೆಯನ್ನು ಛೇದಿಸತಕ್ಕದ್ದು , ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಸರಳನ್ನಿಡಬೇಕು " ಎಂದು ಹೇಳುವ ಮನುಸ್ಮೃತಿಯನ್ನು ದೇಶದ ನ್ಯಾಯಾಧೀಶರುಗಳೇ ಉಲ್ಲೇಖಿಸುತ್ತಿರೋದು ಇತ್ತೀಚಿಗೆ ಸಾಮಾನ್ಯವಾಗಿಬಿಟ್ಟಿದೆ. ಒಳ್ಳೆಯ ಉಡುಗೆ ತೊಟ್ಟರು, ಕಾರಿನಲ್ಲಿ ಬಂದರು, ಕುದುರೆ ಏರಿದರು ಎಂಬ ಕಾರಣಕ್ಕೆ ಪ್ರತಿದಿನ ಎಂಬಂತೆ ದೇಶದ ವಿವಿಧೆಡೆ ಅದರಲ್ಲೂ ವಿಶೇಷವಾಗಿ ಉತ್ತರ ಭಾರತದಲ್ಲಿ ದಲಿತ ವರರ ಮೇಲೆ ನಡೆಯುತ್ತಿರುವ ಹಲ್ಲೆಗಳು, ದಾಳಿಗಳನ್ನು ಪ್ರವೇಶ್ ಶುಕ್ಲಾ ಖಂಡಿತ ಗಮನಿಸಿರುತ್ತಾನೆ.

ಮಲ ಗುಂಡಿ ಶುಚಿಗೊಳಿಸುವ ಸಂದರ್ಭದಲ್ಲಿ ಮೃತಪಡುವ ದಲಿತ ಕಾರ್ಮಿಕರನ್ನು ನಾವು ಮರೆತು ಬಿಟ್ಟಿದ್ದೇವೆ. ಇನ್ನೊಬ್ಬ ವಿಸರ್ಜಿಸಿದ ಮಲದ ಗುಂಡಿಯನ್ನು ಶುಚಿಗೊಳಿಸಲು ದಲಿತನೊಬ್ಬನನ್ನು ಇಳಿಸುವುದು ಮತ್ತು ಒಬ್ಬ ಮೇಲ್ಜಾತಿಯ ವ್ಯಕ್ತಿ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸುವುದು ಒಂದೇ ನಾಣ್ಯದ ಎರಡು ಮುಖಗಳು. ದಲಿತರಿಗೆ ಮೂತ್ರ ಕುಡಿಸಿದ, ಅವರು ಕುಡಿಯುವ ನೀರಿಗೆ ಹೇಸಿಗೆ ಹಾಕಿದ ಅದೆಷ್ಟೋ ಘಟನೆಗಳು ಈ ದೇಶದಲ್ಲಿ ನಡೆದಿಲ್ಲವೇ ? ಅವುಗಳ ವೀಡಿಯೊ ವೈರಲ್ ಆಗಿಲ್ಲ ಅಷ್ಟೇ.

ದೇಶಾದ್ಯಂತ ಆದಿವಾಸಿಗಳು, ದಲಿತರ ಹಕ್ಕುಗಳನ್ನು ದಮನಿಸುತ್ತಿರೋದು, ಅವರ ಮೇಲೆ ಹಲ್ಲೆ, ದಾಳಿ ನಡೆಸುತ್ತಿರೋದು, ಅವರ ಅರಣ್ಯಗಳನ್ನು, ಅವರ ಭೂಮಿಯನ್ನು ಕಾರ್ಪೊರೇಟ್ ಕಂಪೆನಿಗಳಿಗೆ ನುಂಗಲು ಬಿಡುತ್ತಿರೋದು, ಅವರ ಭೂಮಿಯಲ್ಲೇ ಅವರನ್ನು ಗುಲಾಮರಂತೆ ದುಡಿಸಿಕೊಳ್ಳುತ್ತಿರೋದು ಪ್ರವೇಶ್ ಶುಕ್ಲಾನಿಗೆ ಧೈರ್ಯ ನೀಡಿತೇ ? ಆದಿವಾಸಿ ಮಹಿಳೆ ದೇಶದ ರಾಷ್ಟ್ರಪತಿಯಾಗಿದ್ದರೂ ಅವರನ್ನೇ ದೂರ ಇಟ್ಟು ಅವರು ಯಜಮಾನರಾಗಿರುವ ದೇಶದ ಸಂಸತ್ತನ್ನು ಉದ್ಘಾಟಿಸಿದ್ದು ಮೊನ್ನೆ ಮೊನ್ನೆ ನಡೆದಿಲ್ಲವೆ ?

ಕೆಲವು ವರ್ಷಗಳ ಹಿಂದೆ ಕೇರಳದಲ್ಲಿ ಆದಿವಾಸಿಯೊಬ್ಬ ಹಸಿವಿನಿಂದ ಕಳ್ಳತನ ನಡೆಸಿದ ಎಂದು ಆತನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಅದರ ವಿರುದ್ಧ ಮಾನವ ಹಕ್ಕು ಸಂಘಟನೆಗಳು ಧ್ವನಿಯೆತ್ತಿದ್ದವು. ಕೇರಳದಲ್ಲಂತೂ ಈ ಸುದ್ದಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಇದೀಗ ಮಧ್ಯ ಪ್ರದೇಶದಲ್ಲಿ ನಡೆದಿರುವ ಘಟನೆ ಇದಕ್ಕಿಂತ ಭಿನ್ನವಾದುದೇನೂ ಅಲ್ಲ. ಮನುಷ್ಯನ ಮೇಲೆ ಸಾರ್ವಜನಿಕವಾಗಿ ಒಬ್ಬ ಮೂತ್ರ ವಿಸರ್ಜನೆ ಮಾಡುವುದೆಂದರೆ, ಆತನನ್ನು ಕೊಂದು ಹಾಕಿದಂತೆಯೇ. ತನ್ನ ಮೇಲೆ ಒಬ್ಬ ಮೂತ್ರ ವಿಸರ್ಜಿಸುತ್ತಿರುವಾಗ ಅದನ್ನು ಪ್ರತಿಭಟಿಸುವ ಕನಿಷ್ಠ ಚೈತನ್ಯವೂ ಇಲ್ಲದ ಆದಿವಾಸಿ ತರುಣನನ್ನು ಜೀವಂತ ಇರುವ ವ್ಯಕ್ತಿ ಎಂದು ಕರೆಯಲು ಸಾಧ್ಯವೆ ?

ಇನ್ನು ಪ್ರವೇಶ್ ಶುಕ್ಲಾನ ದುಷ್ಟತನವನ್ನು ಖಂಡಿಸಿ ಯಾವುದಾದರೂ ಬಿಜೆಪಿ ಬೆಂಬಲಿಗ ಸಂತರು, ಸ್ವಾಮೀಜಿಗಳು, ಹೇಳಿಕೆ ಕೊಟ್ಟಿದ್ದಾರೆಯೇ ?

ನಮ್ಮ ದೇಶದಲ್ಲಿ ಮೊನ್ನೆವರೆಗೆ ಅಮೃತ ಕಾಲ್, ಈಗ ಕರ್ತವ್ಯ ಕಾಲ ಇತ್ಯಾದಿ ಬಣ್ಣಬಣ್ಣದ ಹೆಸರುಗಳು ಚಾಲ್ತಿಯಲ್ಲಿದ್ದರೂ ಸದ್ಯ ನಡೀತಿರೋದು ಮಾತ್ರ ದ್ರೋಹಕಾಲ.

ಇದು ದೇಶದ ಸಂವಿಧಾನದ ಆಶಯಗಳಿಗೆ, ದೇಶದ ಕಾನೂನಿಗೆ, ನೀತಿ ನಿಯಮಗಳಿಗೆ, ಈ ದೇಶಕ್ಕಾಗಿ ದುಡಿದ - ಮಡಿದ ಮಹನೀಯರು ಹೇಳಿಕೊಟ್ಟ ಮೌಲ್ಯಗಳಿಗೆ, ಅವರು ಹಾಕಿಕೊಟ್ಟ ಮೌಲ್ಯಗಳಿಗೆ, ಈ ದೇಶದ ಪರಂಪರೆಗೆ ದ್ರೋಹ ಬಗೆದು " ಶೂದ್ರನ ನಾಲಗೆಗೆ ಕಾದ ಕಬ್ಬಿಣ ಇಡಿ" ಎಂದು ಹೇಳೋದನ್ನು ಹಾಗು ಹೇಳೋರನ್ನು ವೈಭವೀಕರಿಸುತ್ತಿರುವ ಕಾಲ.

ಆದರೆ ಆ ಆದಿವಾಸಿಯ ಮೇಲೆ ಪ್ರವೇಶ್ ಶುಕ್ಲಾ ಮೂತ್ರ ಮಾಡಿದ್ದು ವೀಡಿಯೊ ಮೂಲಕ ವೈರಲ್ ಆಗಿದೆ. ಹಾಗಾಗಿ ಆತನಿಗೆ ಕಾನೂನು ಪ್ರಕಾರ ನ್ಯಾಯ ಸಿಗುವ ಲಕ್ಷಣಗಳು ಕಾಣುತ್ತಿವೆ. ಅಷ್ಟಕ್ಕಾಗಿ ಖುಷಿ ಪಡೋಣ. ಆದರೆ ದೇಶದ ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ವ್ಯವಸ್ಥೆ ಮೂತ್ರ ಮಾಡುತ್ತಿರುವ ವೀಡಿಯೊ ವೈರಲ್ ಆಗಿ ಅದಕ್ಕೆ ಪರಿಹಾರ ಸಿಗೋದು ಯಾವಾಗ ?

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಆರ್. ಜೀವಿ

contributor

Similar News