‘ಸತ್ಯ ಎಲ್ಲೆಡೆಗೆ’ ಧ್ಯೇಯದ ವ್ಯಾಪ್ತಿ ವಿಸ್ತರಣೆಯಾಗಲಿ

Update: 2023-08-31 07:37 GMT

ಮೊದಲಿಗೆ ಪ್ರೀತಿಯ ದಿನಪತ್ರಿಕೆ ‘ವಾರ್ತಾಭಾರತಿ’ಗೆ ಹೃದಯ ತುಂಬಿದ ಶುಭಾಶಯಗಳನ್ನು ಹೇಳಬಯಸುತ್ತೇನೆ. ಒಂದು ರೀತಿಯ ಮೌನ ಕ್ರಾಂತಿ ಮಾಡುತ್ತಾ 20 ವರ್ಷಗಳನ್ನು ಸವೆಸಿದ್ದು ಸಾಧಾರಣ ಸಂಗತಿಯಲ್ಲ. ಇದೊಂದು ಅಪೂರ್ವ ಸಾಧನೆ. ಅದಕ್ಕಾಗಿ ಪತ್ರಿಕೆಯ ಸಂಪಾದಕೀಯ ಹಾಗೂ ವ್ಯವಸ್ಥಾಪಕ ವರ್ಗದ ಎಲ್ಲರ ಶ್ರಮಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

‘ಸತ್ಯ ನಿಷ್ಠುರವಾಗಿ ಮಾತನಾಡುವುದು, ಬರೆಯುವುದು, ಅಂತಹ ಪತ್ರಿಕೆ ಪ್ರಕಟಿಸುವುದು ಸುಲಭ ಸಾಧ್ಯವಲ್ಲ’ ಎಂಬ ಸ್ಥಿತಿ ಇಂದಿನದು, ಸತ್ಯ ಹೇಳಿ ಬದುಕಲಾರೆ, ಸತ್ಯ ಬರೆದು ಉಳಿಯಲಾರೆ ಎಂದು ಷರಾ ಬರೆಯುವ ಕಾಲ ನಮ್ಮ ಜೊತೆಗಿದೆ. ಅಂಥದ್ದರಲ್ಲೂ ‘ಸತ್ಯ ಎಲ್ಲೆಡೆಗೆ’ ಎಂಬ ಧ್ಯೇಯ ವಾಕ್ಯದೊಡನೆ ಆರಂಭವಾದ ‘ವಾರ್ತಾ ಭಾರತಿ’ ಎಂಟೆದೆ ಗುಂಡಿಗೆಯನ್ನು ಹೊಂದಿದೆ ಎಂದು ಹೇಳಲೇಬೇಕು. ಹಾಗೊಂದು ವೇಳೆ ಅಪಾಯ ಎದುರಾದಲ್ಲಿ, ಎದುರಿಸಿ ನಿಲ್ಲುವ ಸಾಮರ್ಥ್ಯವೂ ಇರಬೇಕಾಗುತ್ತದೆ. ಅಂತಹ ಸಾಮರ್ಥ್ಯ ಪತ್ರಿಕೆಯ ಜೊತೆಗಿದೆ ಎಂದು ಹೇಳಬಹುದು. ವಾಸ್ತವವಾಗಿ ‘‘ಸತ್ಯ ಎಲ್ಲೆಡೆಗೆ’ ಎಂಬ ಧ್ಯೇಯವೇ ಪತ್ರಿಕೆಯ ಪ್ರಬಲ ಶಕ್ತಿಯಾಗಿದೆಯೆಂದು ಹೇಳಬೇಕಿದೆ. ಮಾತಿನಲ್ಲಿ ಸತ್ಯದ ಮಾತಾಡುತ್ತಾ, ಕೃತಿಯಲ್ಲಿ ಅಸತ್ಯದಾಟವಾಡುತ್ತಿದ್ದರೆ ಅಸತ್ಯವಾದಿಗಳು ನಿರ್ಭಯವಾಗಿ ದಾಳಿ ಮಾಡಿಬಿಡುತ್ತಾರೆ, ಆದರೆ, ‘ವಾರ್ತಾಭಾರತಿ’ ಧ್ಯೇಯಕ್ಕೆ ಕಟಿಬದ್ಧವಾಗಿ ಅಂಟಿಕೊಂಡು ಗುರಿ ತಲುಪುವತ್ತ ಹೊರಟಿದ್ದರ ದೆಸೆಯಿಂದ ಯಾವುದೇ ದುಷ್ಟ ಶಕ್ತಿಗಳೂ ಪತ್ರಿಕೆಯ ಅಡಿಪಾಯವನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದು. ಅಂತಹ ಶಕ್ತಿಗಳಿಗೆ ನೈತಿಕತೆಯ ಭಯ ವಿದ್ದೇ ಇರುತ್ತದೆಂಬುದಕ್ಕೆ ಪತ್ರಿಕೆಯ ಸತ್ಯ ನಿಷ್ಠುರತೆ ಸಾಕ್ಷಿಯಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕಾ ಧರ್ಮಕ್ಕೆ ದೊಡ್ಡ ಬಲವಿತ್ತು. ಗಾಂಧೀಜಿ, ಅಂಬೇಡ್ಕರ್, ರಾಜಗೋಪಾಲಾಚಾರಿಯಂಥವರು ಪತ್ರಿಕೆಗಳನ್ನು ಮಾಡಿ ಜೈಸಿದ್ದರು. ಪತ್ರಿಕೆಗಳು ಅವರ ಹೋರಾಟಕ್ಕೆ ಅಸ್ತ್ರಗಳಾಗಿದ್ದವೆಂಬುದನ್ನು ಬಲ್ಲೆವು. ಆ ಹಿನ್ನೆಲೆಯಲ್ಲಿ ಅಂಬೇಡ್ಕರ್‌ರಂಥವರು ಸಂವಿಧಾನ ರಚನೆ ಮಾಡುವಾಗ ‘ವಾಕ್ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವದ ಬುನಾದಿ’ಯಾಗಿ ಪರಿಗಣಿಸಿ, ಅದನ್ನು ಅಳವಡಿಸಿದ್ದರು. ಆದರೆ, ಸ್ವಾತಂತ್ರ್ಯಾನಂತರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ದಮನವೂ ನಡೆದಿದೆ. ಹಾಗೆಯೇ ದುರುಪಯೋಗವೂ ಆಗಿದೆ. ಅದರ ದುಷ್ಪರಿಣಾಮವನ್ನು ನಮ್ಮ ಮಹಾಜನತೆ ಅನುಭವಿಸುವಂತಾಗಿದೆ. ದೇಶವೂ ದಿನೇದಿನೇ ಸಾಕಷ್ಟು ಇಕ್ಕಟ್ಟು-ಬಿಕ್ಕಟ್ಟುಗಳಲ್ಲಿ ಸಿಲುಕುವಂತಾಗಿದೆ.

ರಾಜ್ಯದಲ್ಲಿ ರಂ.ರಾ. ದಿವಾಕರ, ಪಾಟೀಲ ಪುಟ್ಟಪ್ಪ, ಖಾದ್ರಿ ಶಾಮಣ್ಣ, ಡಿ.ವಿ. ಗುಂಡಪ್ಪ, ಕಿಡಿ ಶೇಷಪ್ಪ, ಐ.ಕೆ, ಜಾಗೀದಾರ್, ಕಲ್ಲೆ ಶಿವೋತ್ತಮರಾವ್, ವಡ್ಡರ್ಸೆ ರಘುರಾಮಶೆಟ್ಟಿ, ಪಿ. ಲಂಕೇಶ್‌ರಂಥ ದಿಗ್ಗಜರು ಪತ್ರಿಕಾ ರಂಗವನ್ನು ಬೆಳಗಿ ಹೋಗಿದ್ದಾರೆ. ಆದರೂ, ಕನ್ನಡ ಪತ್ರಿಕಾ ಲೋಕವು ಸತ್ಯ ನಿಷ್ಠುರತೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲವಾಗಿರುವುದನ್ನು ಕಂಡಾಗ ವಿಷಾದವಾಗುತ್ತದೆ. ರಾಜ್ಯದಲ್ಲಿ ಸತ್ಯ ಹೇಳಿದ ಕೆಲವಾರು ಪತ್ರಕರ್ತರ ಹತ್ಯೆಗಳೂ ಜರುಗಿವೆ. ಪತ್ರಕರ್ತರಿಗಿಂತ ಪತ್ರಕರ್ತರನ್ನು ಬೆದರಿಸುವ ಶಕ್ತಿಗಳು ಬಲಾಢ್ಯವಾಗಿರುವುದು ಈ ಹೊತ್ತಿನ ದುರಂತವಾಗಿದೆ.

ಆಡಳಿತಶಾಹಿ ಮತ್ತು ಅಧಿಕಾರಶಾಹಿ ಈ ಹೊತ್ತಿನ ಬಲಾಢ್ಯ ಶಕ್ತಿಗಳಾಗಿ ಮೆರೆಯುತ್ತಿವೆ. ನಾವು ಏನು ಮಾಡಿದರೂ ಯಾರೂ ನಮ್ಮನ್ನು ಪ್ರಶ್ನಿಸಬಾರದು ಎಂಬ ಅಲಿಖಿತ ಕಾನೂನು ವ್ಯವಸ್ಥೆಯನ್ನು ನಿರ್ಮಿಸಿವೆೆ. ವಿಪಕ್ಷಗಳು ಕೂಡಾ ಅನ್ಯಾಯ-ಅಕ್ರಮಗಳನ್ನು ಪ್ರಶ್ನಿಸಲಾರದ ಸ್ಥಿತಿಗೆ ತಲುಪುತ್ತಿವೆ. ಹಾಗೊಂದು ವೇಳೆ ಪ್ರಶ್ನಿಸಿದಲ್ಲಿ ಇರುವ ಇಲ್ಲದ ಹುಳುಕನ್ನು ಹುಡುಕಿ ಸೆರೆಗಟ್ಟಲಾಗುತ್ತಿದೆ. ಸತ್ಯ ಹೇಳಿದ ಪತ್ರಕರ್ತರನ್ನು, ಹೋರಾಟಗಾರರನ್ನು ದೇಶಪ್ರೇಮ, ದೇಶದ್ರೋಹದ ಹೆಸರಲ್ಲಿ ಸೆರೆಯಲ್ಲಿ ಕೊಳೆಸಲಾಗುತ್ತಿದೆ. ಅಸಹಾಯಕರು-ದಲಿತರು-ಶ್ರಮಿಕರು- ಅಲ್ಪಸಂಖ್ಯಾತರನ್ನು ಇನ್ನಿಲ್ಲದಂತೆ ಗೋಳು ಹೊಯ್ದುಕೊಳ್ಳುವ ಹೊಸ ವರಸೆ ಆರಂಭವಾಗಿದೆ. ಅಂತಹ ಹೊತ್ತಿನಲ್ಲಿ ಪತ್ರಕರ್ತರು ಸತ್ಯ ಹೇಳಲು ಹಿಂಜರಿಯುತ್ತಿರುವ ಹೀನಾಯ ಸ್ಥಿತಿ ನಿರ್ಮಾಣವಾಗಿದೆ.

ಈ ಬಗೆಯ ಭೀಕರ ವಾತಾವರಣದಲ್ಲೂ ‘ವಾರ್ತಾ ಭಾರತಿ’ ತನ್ನ ಧ್ಯೇಯ ವಾಕ್ಯದ ಪರಿಪಾಲನೆಗೆ ಪಣ ತೊಟ್ಟಂತೆ ನಿಂತಿರುವುದು ಹೆಗ್ಗಳಿಕೆಯ ವಿಚಾರ. ಪತ್ರಿಕೆಯನ್ನು ತಪ್ಪದೆ ಗಮನಿಸುತ್ತಾ ಬಂದಿದ್ದೇನೆ. ಬೇರೆಡೆಯಲ್ಲಿ ಕಾಣದಿದ್ದುದು ಈ ಪತ್ರಿಕೆಯಲ್ಲಿರುತ್ತದೆಂಬ ಭಾವನೆ ಜನರಲ್ಲಿ ಬರುವಷ್ಟರಮಟ್ಟಿಗೆ ಸತ್ಯ ಸಂಗತಿಗಳನ್ನು ಪಾತಾಳದಲ್ಲಿದ್ದರೂ ಹೆಕ್ಕಿ ತರುವ ಪ್ರಯತ್ನ ಅದ್ಭುತವಾದುದು. ಒಂದು ವೇಳೆ ಸತ್ಯದ ಸಮಾಧಿಯಾಗಿದ್ದರೂ, ಗೋರಿಯನ್ನು ಬಗೆದು ತರುವಂತಹ ಎದೆಗಾರಿಕೆ ಪ್ರದರ್ಶಿಸುತ್ತಿರುವುದು ಮಹತ್ವದ ವಿಚಾರ, ಹಾಗಾಗಿ, ಜನಸಾಮಾನ್ಯರಿಂದ ಹಿಡಿದು ಬುದ್ಧಿಜೀವಿ ವರ್ಗದವರೆಗೂ ‘ವಾರ್ತಾಭಾರತಿ’ ಆಪದ್ಬಾಂಧವ ಪತ್ರಿಕೆಯಾಗಿ ರೂಪು ಗೊಂಡಿದೆ. ತನ್ನದೇ ಆದ ಧ್ಯೇಯದೊಂದಿಗೆ ‘ವಿಭಿನ್ನ-ಪರ್ಯಾಯ ಪತ್ರಿಕೆ’ ಎಂದು ಗುರುತಿಸಲ್ಪಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಶೋಷಿತ ವರ್ಗಗಳ ಧ್ವನಿಯಾಗಿ ನಿಂತಲ್ಲಿ ಅದಕ್ಕೆಂದೂ ಸಾವು ಬರದು ಎಂಬುದಕ್ಕೆ ಸಾಕ್ಷಿ ನುಡಿದಿದೆ. ಅದರಲ್ಲೂ ರೈತ ಕಾರ್ಮಿಕ-ಮಹಿಳೆ- ದಲಿತ-ಅಲ್ಪಸಂಖ್ಯಾತರ ಕಷ್ಟ-ಸಂಕಷ್ಟಗಳಿಗೆ ಸ್ಪಂದಿಸುವ ಪತ್ರಿಕೆಯೆಂಬ ಕೀರ್ತಿಗೆ ಭಾಜನವಾಗಿದ್ದು ಅದ್ಭುತವಾಗಿದೆ.

20 ವರ್ಷಗಳಿಗೆ ಮುಂಚೆ ಮಂಗಳೂರಿನಿಂದ ಮಾತ್ರವೇ ಪಾರಂಭವಾದ ‘ವಾರ್ತಾಭಾರತಿ’ ಹೆಸರು ಮಾಡುತ್ತಿದ್ದರೂ ಓದಲು ಸಿಗುತ್ತಿರಲಿಲ್ಲ. ಆದರಿಂದು ಬೆಂಗಳೂರು ಮತ್ತು ಶಿವಮೊಗ್ಗ ಆವೃತ್ತಿಗಳನ್ನು ಆರಂಭಿಸಿರುವುದರಿಂದ ರಾಜ್ಯದ ಅರ್ಧ ಭಾಗದಷ್ಟು ಪ್ರದೇಶದ ಜನರಿಗೆ ಓದಲು ಸಿಗುವಂತೆ ಮಾಡಿದ್ದು ಪತ್ರಿಕೆಯ ಬದ್ಧತೆಯ ಲಕ್ಷಣವಾಗಿದೆ. ಕಲಬುರ್ಗಿ, ಬೆಳಗಾವಿ ಪ್ರದೇಶಗಳತ್ತಲೂ ವ್ಯಾಪ್ತಿ ವಿಸ್ತರಿಸಿಕೊಂಡಲ್ಲಿ ‘ಸಮಸ್ತ ಕನ್ನಡಿಗರ ಸ್ವತಂತ್ರ-ನಿರ್ಭೀತ ಪತ್ರಿಕೆ’ ಅಭಿದಾನಕ್ಕೆ ಸೂಕ್ತವಾಗುತ್ತದೆ.

ಯಾವುದೇ ಪತ್ರಿಕೆ ನಿಂತ ನೀರಾಗಬಾರದು. ಬದಲಾದ ಕಾಲಕ್ಕೆ ತಾನು ಬದಲಾವಣೆಗೆ ತೆರೆದುಕೊಳ್ಳಬೇಕೆಂಬ ಆಶಯದಿಂದ ‘ವಾರ್ತಾಭಾರತಿ’ ಡಿಜಿಟಲ್ ಮಾಧ್ಯಮದಲ್ಲೂ ತೊಡಗಿದ್ದು, ಬಹಳ ವೇಗವಾಗಿ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಮೂಲಕ ತನ್ನದೇ ಛಾಪು ಮೂಡಿಸಿರುವುದು ಅಸಾಧಾರಣ ಬೆಳವಣಿಗೆಯಾಗಿದೆ.

‘ವಾರ್ತಾಭಾರತಿ’ ಇಂದು ರಾಜ್ಯದ ಪತ್ರಿಕಾ ರಂಗದಲ್ಲಿ ವಿಭಿನ್ನ ಹಾಗೂ ಪರ್ಯಾಯ ಪತ್ರಿಕೆಯಾಗಿ ರೂಪುಗೊಂಡಿರುವುದು ಓದುಗ ಅಭಿಮಾನಿಗಳಲ್ಲಿ ಭರವಸೆ ತಂದಿದೆ. ಪತ್ರಿಕಾ ಧರ್ಮದಿಂದ ಅತ್ತಿತ್ತ ಸರಿಯದೆ ಮುಲಾಜಿಲ್ಲದೆ ಸತ್ಯವನ್ನು ಹೇಳುತ್ತಾ ಹೊರಟಿರುವ ದಿನಪತ್ರಿಕೆಯೊಂದು ಜೊತೆಗಿರುವುದು ಜನತೆಯ ಪಾಲಿನ ನೆಮ್ಮದಿಯ ವಿಚಾರವಾಗಿದೆ. ಇಂತಹ ಆಶಾದಾಯಕ ಬೆಳವಣಿಗೆಯ ವ್ಯಾಪ್ತಿ ಮತ್ತು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡು ನೂರಾರು ವರ್ಷ ಕಾಲ ಜನತೆಯ ಪಾಲಿಗೆ ದುಡಿಯಲೆಂದು ಆಶಿಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಜಾಣಗೆರೆ ವೆಂಕಟರಾಮಯ್ಯ

ಸಾಹಿತಿ, ಪತ್ರಕರ್ತ

Similar News