ಝೀರೋ ಎಫ್ಐಆರ್ ಎಂದರೇನು ಮತ್ತು ಅದನ್ನೇಕೆ ದಾಖಲಿಸಲಾಗುತ್ತದೆ?

Update: 2023-07-23 06:25 GMT

Photo : PTI 

ಹೊಸದಿಲ್ಲಿ: ಮಣಿಪುರದ ಥೌಬಾಲ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಲಾದ ಮೇ 4ರ ಘಟನೆಗೆ ಸಂಬಂಧಿಸಿದಂತೆ ಝೀರೋ ಎಫ್ಐಆರ್ ದಾಖಲಾಗುವ ಕೆಲವೇ ದಿನಗಳ ಮೊದಲು ಇಬ್ಬರು ಕುಕಿ-ರೆಮಿ ಮಹಿಳೆಯರ ಅಪಹರಣ, ಅತ್ಯಾಚಾರ ಮತ್ತು ಕೊಲೆ ಆರೋಪಕ್ಕೆ ಸಂಬಂಧಿಸಿದ ಇನ್ನೊಂದು ಝೀರೋ ಎಫ್ಐಆರ್ ಅದೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣದಲ್ಲಿಯೂ ದೂರನ್ನು ಇಂಫಾಲ ಪೂರ್ವದ ಸಂಬಂಧಿತ ಪೊಲೀಸ್ ಠಾಣೆಗೆ ವರ್ಗಾಯಿಸಲು ಅಧಿಕಾರಿಗಳು ಒಂದು ತಿಂಗಳಿಗೂ ಅಧಿಕ ಸಮಯವನ್ನು ತೆಗೆದುಕೊಂಡಿದ್ದರು.

ಘಟನೆಯು ಮೇ 5ರಂದು ನಡೆದಿತ್ತು. ಸುಮಾರು 100ರಿಂದ 200ರಷ್ಟಿದ್ದರೆನ್ನಲಾದ ಅಪರಿಚಿತ ವ್ಯಕ್ತಿಗಳು ಇಂಫಾಲ ಪೂರ್ವದಲ್ಲಿಯ ಕಾರ್ ವಾಷ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 21 ಮತ್ತು 24ರ ಹರೆಯದ ಇಬ್ಬರು ಕುಕಿ-ರೆಮಿ ಯುವತಿಯರನ್ನು ಅವರು ವಾಸವಿದ್ದ ಬಾಡಿಗೆ ಮನೆಯಲ್ಲಿ ಅತ್ಯಾಚಾರವೆಸಗಿ, ಕ್ರೂರವಾಗಿ ಹಿಂಸಿಸಿ ಹತ್ಯೆ ಮಾಡಿದ್ದರು. ಹತ ಯುವತಿಯೋರ್ವಳ ತಾಯಿಯ ದೂರಿನ ಮೇರೆಗೆ ಮೇ 16ರಂದು ಕಾಂಗ್ಪೊಕ್ಪಿ ಜಿಲ್ಲೆಯ ಸೈಕುಲ್ ಪೊಲೀಸ್ ಠಾಣೆಯಲ್ಲಿ ಝಿರೋ ಎಫ್ಐಆರ್ ದಾಖಲಾಗಿತ್ತು. ಕೊಲೆಯಾದ ಇಬ್ಬರೂ ಯುವತಿಯರು ಸೈಕುಲ್ನವರಾಗಿದ್ದರು.

ಜೂ.13ರಂದಷ್ಟೇ ಈ ಎಫ್ಐಆರ್ ಇಂಫಾಲ ಪೂರ್ವ ಜಿಲ್ಲೆಯ ಪೊರೊಂಪಟ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು. ತನಿಖೆಯಲ್ಲಿ ಏನಾದರೂ ಪ್ರಗತಿಯಾಗಿದೆಯೇ ಎನ್ನುವುದು ತಮಗೆ ಗೊತ್ತಿಲ್ಲ ಎಂದು ಮೃತರ ಕುಟುಂಬಗಳು ಹೇಳಿದ್ದರೆ,ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಝಿರೋ ಎಫ್ಐಆರ್?

ಪೊಲೀಸ್ ಠಾಣೆಯೊಂದು ಬೇರೊಂದು ಠಾಣೆಯ ವ್ಯಾಪ್ತಿಯಲ್ಲಿ ನಡೆದ ಅಪರಾಧದ ದೂರನ್ನು ಸ್ವೀಕರಿಸಿದಾಗ ಅದು ಎಫ್ಐಆರ್ ಅನ್ನು ದಾಖಲಿಸಿಕೊಳ್ಳುತ್ತದೆ ಮತ್ತು ನಂತರ ಅದನ್ನು ಮುಂದಿನ ತನಿಖೆಗಾಗಿ ಸಂಬಂಧಿಸಿದ ಪೊಲೀಸ್ ಠಾಣೆಗೆ ವರ್ಗಾಯಿಸುತ್ತದೆ. ಇದನ್ನು ಝೀರೋ ಎಫ್ಐಆರ್ ಎನ್ನಲಾಗುತ್ತದೆ. ಇದಕ್ಕೆ ನಿಯಮಿತ ಎಫ್ಐಆರ್ ಸಂಖ್ಯೆಯನ್ನು ನೀಡಲಾಗುವುದಿಲ್ಲ. ಸಂಬಂಧಿತ ಪೊಲೀಸ್ ಠಾಣೆಯು ಝೀರೋ ಎಫ್ಐಆರ್ ಅನ್ನು ಸ್ವೀಕರಿಸಿದ ಬಳಿಕ ಹೊಸ ಎಫ್ಐಆರ್ ಅನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸುತ್ತದೆ.

2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಿಗಳ ತ್ವರಿತ ವಿಚಾರಣೆ ಮತ್ತು ಹೆಚ್ಚಿನ ದಂಡನೆಗಾಗಿ ಕ್ರಿಮಿನಲ್ ಕಾನೂನಿನಲ್ಲಿ ತಿದ್ದುಪಡಿಗಳನ್ನು ಸೂಚಿಸಲು ರಚಿಸಲಾಗಿದ್ದ ನ್ಯಾ.ವರ್ಮಾ ಸಮಿತಿಯ ಶಿಫಾರಸಿನಂತೆ ಝೀರೋ ಎಫ್ಐಆರ್ ಅಸ್ತಿತ್ವಕ್ಕೆ ಬಂದಿದೆ. ಸಂತ್ರಸ್ತ ವ್ಯಕ್ತಿಯು ತನ್ನ ವಾಸಸ್ಥಳ ಅಥವಾ ಅಪರಾಧ ನಡೆದ ಸ್ಥಳವನ್ನು ಪರಿಗಣಿಸದೆ ಯಾವುದೇ ಪೊಲೀಸ ಠಾಣೆಯಲ್ಲಿ ಝಿರೋ ಎಫ್ಐಆರ್ನ್ನು ದಾಖಲಿಸಬಹುದು.

ಝಿರೋ ಎಫ್ಐಆರ್ ನ ಉದ್ದೇಶವೇನು?

ಪೊಲೀಸ್ ದೂರನ್ನು ದಾಖಲಿಸಲು ಸಂತ್ರಸ್ತ ವ್ಯಕ್ತಿಯು ಹಲವಾರು ಕಡೆಗಳಿಗೆ ಎಡತಾಕುವಂತಾಗಬಾರದು ಎನ್ನುವುದು ಝಿರೋ ಎಫ್ಐಆರ್ ನ ಉದ್ದೇಶವಾಗಿದೆ. ಎಫ್ಐಆರ್ ದಾಖಲಾದ ಬಳಿಕ ಸಕಾಲಿಕ ಕ್ರಮವನ್ನು ಕೈಗೊಂಡು ಸಂತ್ರಸ್ತರಿಗೆ ತ್ವರಿತ ಪರಿಹಾರವನ್ನು ಒದಗಿಸುವ ಆಶಯವನ್ನು ಈ ನಿಬಂಧನೆ ಹೊಂದಿದೆ.

ಎಫ್ಐಆರ್ ಅಥವಾ ಪ್ರಥಮ ಮಾಹಿತಿ ವರದಿಯನ್ನು ಐಪಿಸಿ,ಸಿಆರ್ಪಿಸಿ ಅಥವಾ ಇತರ ಯಾವುದೇ ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿಲ್ಲ, ಆದರೆ ಪೊಲೀಸ್ ನಿಯಮಾವಳಿಗಳಲ್ಲಿ ಸಿಆರ್ಪಿಸಿಯ ಕಲಂ 154ರಡಿ ದಾಖಲಿಸಿಕೊಳ್ಳಲಾಗುವ ಮಾಹಿತಿಯನ್ನು ಎಫ್ಐಆರ್ ಎಂದು ಕರೆಯಲಾಗುತ್ತದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News