ಬಿಜೆಪಿಗೆ ಎಂಥವರು ಬೇಕು?

ಧರ್ಮದ ಮತ್ತನ್ನು ಹರಡುವ, ದ್ವೇಷ ಬಿತ್ತುವ ಮೂಲಕವೇ ಗೆಲ್ಲುವ, ಸಮಾಜವನ್ನು ಒಡೆಯುವ ಮೂಲಕವೇ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುವ ಬಿಜೆಪಿ, ಅದಕ್ಕೆ ತಕ್ಕವರಾಗಿರುವ ಬಿದೂರಿಯಂಥವರನ್ನು ಪೋಷಿಸದೆ ಇರುತ್ತದೆಯೇ?

Update: 2023-09-29 07:35 GMT
Editor : Thouheed | By : ವಿನಯ್ ಕೆ.

ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿದೂರಿ ಬಿಎಸ್ಪಿ ಮುಸ್ಲಿಮ್ ಸಂಸದ ದಾನಿಶ್ ಅಲಿಯವರನ್ನು ಐದು ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿದ ಆಘಾತಕಾರಿ ವಿದ್ಯಮಾನವನ್ನು ನೋಡಿದೆವು. ಬಿದೂರಿ ನಿಂದನೆಗೆ ಬಿಜೆಪಿಯ ಹಿರಿಯ ಸಚಿವ ರಾಜನಾಥ್ ಸಿಂಗ್ ಕ್ಷಮೆ ಯಾಚಿಸಿದ್ದನ್ನೂ ನೋಡಿದ್ದಾಯಿತು. ಆದರೆ, ಆಗಲೂ ಅವರು ‘ವಿಪಕ್ಷ ಸದಸ್ಯರಿಗೆ ನೋವಾಗಿದ್ದರೆ’ ಎಂಬ ಮಾತನ್ನು ಸೇರಿಸಿದ್ದರೇ ಹೊರತು, ಭಯೋತ್ಪಾದಕ ಎಂದು ಕರೆದರೆ ಅದು ಯಾರನ್ನೇ ಆದರೂ ನೋಯಿಸುತ್ತದಲ್ಲವೇ ಎಂದು ಯೋಚಿಸಲಿಲ್ಲ. ಬಿದೂರಿ ನಿಂದನೆಯನ್ನು ಕಡತದಿಂದ ತೆಗೆಯಲಾಯಿತು. ಪ್ರತಿಪಕ್ಷ ಸದಸ್ಯರನ್ನು ಸಣ್ಣ ಕಾರಣಕ್ಕೂ ಅಮಾನತುಗೊಳಿಸುವ ಸ್ಪೀಕರ್, ಬಿದೂರಿ ವಿಚಾರದಲ್ಲಿ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರತಿಪಕ್ಷಗಳು ಪ್ರಶ್ನಿಸಿದ ಮೇಲೆ, ಇಂಥ ನಡವಳಿಕೆ ಪುನರಾವರ್ತನೆಯಾದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಪಕ್ಷ ಬಿದೂರಿಗೆ ಶೋಕಾಸ್ ನೋಟಿಸ್ ನೀಡಿದ್ದರ ಬಗ್ಗೆ ವರದಿಯಿದ್ದು, ಅದಕ್ಕಿಂತ ಹೆಚ್ಚಿನ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.

ವಿರೋಧ ಪಕ್ಷಗಳು ಬಿದೂರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದವು. ಸದನದಿಂದ ಅಮಾನತುಗೊಳಿಸಬೇಕು ಎಂದೂ ಆಗ್ರಹಿಸಿದ್ದವು. ಅವರಿಂದ ನಿಂದನೆಗೊಳಗಾದ ಬಿಎಸ್ಪಿ ಸಂಸದ ದಾನಿಶ್ ಅಲಿ ಅವರು ರಮೇಶ್ ಬಿದೂರಿ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳದೆ ಇದ್ದರೆ ತಾನು ನೋವಿನಿಂದ ಸಂಸತ್ತಿಗೆ ವಿದಾಯ ಹೇಳಬೇಕಾಗುತ್ತದೆ ಎಂದೂ ಹೇಳಿದ್ದಾರೆ.

ಆದರೆ, ರಮೇಶ್ ಬಿದೂರಿ ಅಥವಾ ಅಂಥ ಇತರ ನಾಯಕರಿಗೆ ರಾಜಕೀಯ ವಿರೋಧಿಗಳನ್ನು ನಿಂದಿಸುವುದು ಒಂದು ಚಾಳಿಯೇ ಆಗಿದೆ ಮತ್ತು ಬಿಜೆಪಿಗೆ ಅದು ಬೇಕಿದೆ, ಅಂಥ ನಾಯಕರೇ ಬೇಕಾಗಿ ದ್ದಾರೆ. ಹಾಗಾಗಿಯೇ ಬಿಜೆಪಿಯಲ್ಲಿರುವುದು ಒಬ್ಬ ರಮೇಶ್ ಬಿದೂರಿ ಅಲ್ಲ. ಪ್ರಜ್ಞಾ ಸಿಂಗ್ ಠಾಕೂರ್, ಗಿರಿರಾಜ್ ಸಿಂಗ್, ಅನಂತ್ ಕುಮಾರ್ ಹೆಗಡೆ, ಬಸನಗೌಡ ಪಾಟೀಲ್ ಯತ್ನಾಳ್, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹೀಗೆ ಸಾಲು ಸಾಲಾಗಿ ಇದ್ದಾರೆ.

ಇವರನ್ನೆಲ್ಲ ತನ್ನ ಸಂಸದರನ್ನಾಗಿಯೂ ಶಾಸಕರನ್ನಾಗಿಯೂ ಗೆಲ್ಲಿಸಿಕೊಳ್ಳುವುದನ್ನು ನೋಡಿದರೆ, ಸಂಸತ್ತಿನಲ್ಲೇ ಪ್ರಚೋದನಾಕಾರಿ ಮಾತುಗಳನ್ನಾಡುವ ರಮೇಶ್ ಬಿದೂರಿಯಂಥವರನ್ನು ಬಲವೆಂಬಂತೆ ಬಳಸುವುದನ್ನು ನೋಡಿದರೆ, ಬಿಜೆಪಿಯ ಆಯ್ಕೆಯ ಮಾನದಂಡಗಳು ಏನು ಎಂಬುದು ಗೊತ್ತಾಗುತ್ತದೆ.

ದ್ವೇಷಭಾಷಣ ಮಾಡುವವರನ್ನೇ ಪೋಷಿಸುತ್ತ ಮತ್ತು ಆ ಮೂಲಕ ತನ್ನ ರಾಜಕೀಯ ಉದ್ದೇಶವನ್ನು ಸಾಧಿಸುತ್ತ ಬಂದಿರುವ ಪಕ್ಷ ಬಿಜೆಪಿ ಎಂಬುದು ಹೊಸ ವಿಚಾರವೇನಲ್ಲ. ಇಲ್ಲಿ ಸಾಧ್ವಿ ಋತಂಬರಾ, ಸಾಧ್ವಿ ಪ್ರಾಚಿ, ಪ್ರಮೋದ್ ಮುತಾಲಿಕ್ ಮೊದಲಾದವರನ್ನು ಹೊರಗಿನಿಂದ ಬಳಸಿಕೊಂಡೇ ತನ್ನ ರಾಜಕೀಯ ಬೇಳೆ ಬೇಯಿಸಿಕೊಂಡು ಬಂದಿದ್ದ ಬಿಜೆಪಿ ಕಳೆದೊಂದು ದಶಕದಲ್ಲಿ ಅಂಥ ಪ್ರಚೋದನಾಕಾರಿಗಳನ್ನು ನೇರವಾಗಿ ಬಿಜೆಪಿಯೊಳಗೇ ಬೆಳೆಸುತ್ತಿದೆ. ಅವರಿಗೆ ಸ್ಥಾನ-ಮಾನ ಎರಡನ್ನೂ ಕೊಡುತ್ತಿದೆ. ದ್ವೇಷ ಭಾಷಣವನ್ನು ದೇಶದ ರಾಜಕೀಯ ಮುಖ್ಯ ವಾಹಿನಿಗೆ ತಂದುಬಿಟ್ಟಿದೆ ಬಿಜೆಪಿ.

ಹೀಗಾಗಿ, ಅದು ರಮೇಶ್ ಬಿದೂರಿಯಂಥ ತನ್ನ ನಾಯಕ ಅಸಭ್ಯವಾಗಿ ಮಾತನಾಡಿದಾಗ ವಿಷಾದ ವ್ಯಕ್ತಪಡಿಸಿದರೆ, ಶೋಕಾಸ್ ನೋಟಿಸ್ ನೀಡಿದರೆ ಅದು ಬರೀ ತೋರಿಕೆಯದ್ದೇ ಆಗಿದೆಯೆಂಬ ಅನುಮಾನ ಕೂಡ ಮೂಡುತ್ತದೆ. ಕಡೇಪಕ್ಷ ಮುಂದೆ ಯಾವಾಗಲಾದರೂ ಪ್ರತಿಪಕ್ಷಗಳ ವಿರುದ್ಧ ತಿರುಗಿಬೀಳುವುದಕ್ಕಾದರೂ ಒಂದು ದಾರಿ ಇರಬೇಕೆಂಬ ಕಾರಣದಿಂದಲೂ ಬಿದೂರಿ ವಿಚಾರದಲ್ಲಿ ಇಷ್ಟು ಕ್ರಮವನ್ನಾದರೂ ತೆಗೆದುಕೊಳ್ಳುವುದು ಅಗತ್ಯ ಎಂದು ಬಿಜೆಪಿಗೆ ಅನ್ನಿಸಿರಬಹುದು.

ಈಗ ಸಂಸತ್ತಿನಲ್ಲೇ ದ್ವೇಷ ಭಾಷಣ ಮಾಡಿದ ಬಿದೂರಿ ಈ ಥರದ ಹೇಳಿಕೆಗಳನ್ನು ನೀಡಿದ್ದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಅವರು ರಾಜಕೀಯ ಪಕ್ಷಗಳ ಹಿರಿಯ ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಿದೆ. 2015ರಿಂದಲೂ ಅವರ ವಿರುದ್ಧ ದೂರುಗಳಿವೆ.

ಕಳೆದ ತಿಂಗಳು ಇದೇ ಬಿದೂರಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಕುಳ್ಳ ಎಂದು ಕರೆದಿದ್ದರು. ಮೇ 2019ರಲ್ಲಿಯೂ ದಕ್ಷಿಣ ದಿಲ್ಲಿಯ ಮೆಹ್ರುವಾಲಿ ಪ್ರದೇಶದಲ್ಲಿನ ಸಾರ್ವಜನಿಕ ಸಭೆಯಲ್ಲಿ ಕೇಜ್ರಿವಾಲ್ ಅವರನ್ನು ಬಿದೂರಿ ನಿಂದಿಸಿದ್ದರು. ಆಗ ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ ದೂರು ನೀಡಿದ ನಂತರ ಬಿದೂರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಅದಕ್ಕೂ ಮೊದಲು 2017ರಲ್ಲಿ ಮಥುರಾದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಯಾವತಿ ಅವರನ್ನು ನಿಂದಿಸಿ ಬಿದೂರಿ ಹೇಳಿಕೆ ನೀಡಿದ್ದರು. ‘‘ಇಟಲಿಯಲ್ಲಿ ಐದಾರು ತಿಂಗಳೊಳಗೆ ಮೊಮ್ಮಗು ಹುಟ್ಟಬಹುದು, ಆದರೆ ನಮ್ಮ ಸಂಸ್ಕೃತಿಯಲ್ಲಿ ಹಾಗಾಗುವುದಿಲ್ಲ’’ ಎಂದು ಸೋನಿಯಾ ಅವರ ಇಟಲಿ ಮೂಲವನ್ನು ಕೆಟ್ಟದಾಗಿ ಟೀಕಿಸಿದ್ದು ವರದಿಯಾಗಿತ್ತು. ‘‘ಈ ಥರದ್ದೆಲ್ಲ ಕಾಂಗ್ರೆಸ್‌ನಲ್ಲಿ ಅಥವಾ ಮಾಯಾವತಿಯವರ ಮನೆಯಲ್ಲಿ ನಡೆದೀತೆ ಹೊರತು ಭಾರತೀಯ ಸಂಸ್ಕೃತಿಯಲ್ಲಿ ಅಲ್ಲ’’ ಎಂದಿದ್ದನ್ನು ವರದಿಗಳು ಉಲ್ಲೇಖಿಸಿದ್ದವು. ಬಿದೂರಿ ವಿರುದ್ಧ ಇಂಥದೇ ಅಸಭ್ಯ ಹೇಳಿಕೆಗಾಗಿ 2015ರಲ್ಲಿ ಮಹಿಳಾ ಸಂಸದರು ದೂರು ಕೊಟ್ಟಿದ್ದರ ಬಗ್ಗೆಯೂ ವರದಿಯಾಗಿತ್ತು. ಕಾಂಗ್ರೆಸ್‌ನ ರಂಜೀತ್ ರಂಜನ್, ಆಗ ಕಾಂಗ್ರೆಸ್‌ನವರಾಗಿದ್ದು, ಈಗ ಟಿಎಂಸಿಯಲ್ಲಿರುವ ಸುಶ್ಮಿತಾ ದೇವ್, ಎನ್‌ಸಿಪಿಯ ಸುಪ್ರಿಯಾ ಸುಳೆ, ಟಿಎಂಸಿಯ ಅರ್ಪಿತಾ ಘೋಷ್, ಸಿಪಿಎಂನ ಪಿ.ಕೆ. ಶ್ರೀಮತಿ - ಈ ಐವರು ಲೋಕಸಭೆಯಲ್ಲಿ ಬಿದೂರಿ ತಮ್ಮ ವಿರುದ್ಧ ನಿಂದನೀಯ ಹೇಳಿಕೆ ನೀಡಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದರು. ಆದರೆ ಬಿದೂರಿ ಆ ಆರೋಪ ತಳ್ಳಿಹಾಕಿದ್ದರು. ಕಳೆದ ವರ್ಷ ಶಾಲೆಗೆ ಸಂಬಂಧಿಸಿದ ಸಮಸ್ಯೆಯೊಂದರ ಹಿನ್ನೆಲೆಯಲ್ಲಿ ಸಹಾಯ ಕೇಳಲು ಬಂದಿದ್ದ ಪೋಷಕರೊಬ್ಬರನ್ನು ‘‘ಏಕೆ ಎಲ್ಲ ಬಿಟ್ಟು ಮಕ್ಕಳಿಗೆ ಜನ್ಮ ಕೊಡುತ್ತೀರಿ?’’ ಎಂದು ನಿಂದಿಸಿದ್ದರು ಇದೇ ಬಿದೂರಿ.

ದಕ್ಷಿಣ ದಿಲ್ಲಿಯ ಬಿಜೆಪಿ ಸಂಸದ ಬಿದೂರಿ 2014ರಲ್ಲಿ ಮೊದಲ ಬಾರಿಗೆ ಆ ಕ್ಷೇತ್ರವನ್ನು ಪ್ರತಿನಿಧಿಸಿದರು. ಅದಾದ ಬಳಿಕ ಇಂಥ ಅವಹೇಳನಕಾರಿ, ಕೋಮುವಾದಿ ಹೇಳಿಕೆಗಳನ್ನು ಕೊಡುತ್ತಲೇ ಬಂದಿದ್ದಾರೆ. ಇಷ್ಟಾದ ಮೇಲೆಯೂ 2019ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. ಬಾಲ್ಯದಿಂದಲೂ ಆರೆಸ್ಸೆಸ್ ಜೊತೆ ಸಂಪರ್ಕ ಹೊಂದಿದ್ದ ಬಿದೂರಿ, ಕಾಲೇಜು ದಿನಗಳಲ್ಲಿ ಎಬಿವಿಪಿ ಮತ್ತು ಆರೆಸ್ಸೆಸ್‌ನ ವಿದ್ಯಾರ್ಥಿ ಸಂಘಟನೆಯಲ್ಲಿದ್ದರು. 1993 ಮತ್ತು 1998ರಲ್ಲಿ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತುಘಲಕಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದರಾದರೂ, ಎರಡು ಬಾರಿಯೂ ಸೋತಿದ್ದರು. ಆದರೆ, 2003 ಮತ್ತು 2008ರಲ್ಲಿ ಅಲ್ಲಿಂದಲೇ ಗೆದ್ದಿದ್ದರು. ನಂತರ 2009ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಅವರು ದಕ್ಷಿಣ ದಿಲ್ಲಿಯಿಂದ ಸ್ಪರ್ಧಿಸಿದ್ದರಾದರೂ ಸೋತಿದ್ದರು. 2014ರಿಂದ ಸತತ ಎರಡು ಬಾರಿ ಗೆದ್ದಿದ್ದಾರೆ.

ಬಿದೂರಿ ಹೀಗೆ ಮಾತನಾಡುವುದು, ಬಿಜೆಪಿ ಅಪರೂಪಕ್ಕೆ ಅವರಿಗೆ ಶೋಕಾಸ್ ನೋಟಿಸ್ ನೀಡುವುದು ನಡೆಯುತ್ತ ಬಂದಿದೆ. ಆದರೆ ಬಿಜೆಪಿಗೆ ಬಿದೂರಿ ಬೇಕು. ಬಿಜೆಪಿಗೆ ಬೇಕಿರುವವರೇ ಇಂಥವರು. ಅವರು ದ್ವೇಷಭಾಷಣ ಮಾಡಬೇಕು. ಎಲ್ಲ ಹೊತ್ತಿ ಉರಿಯುವ ಹಾಗೆ ಮಾತನಾಡಬೇಕು. ಅಲ್ಪಸಂಖ್ಯಾತರ ಮೇಲೆ ಮುಗಿಬೀಳುವ ಹಾಗೆ ಅವರ ಮಾತಿನ ಧಾಟಿಯಿರಬೇಕು. ಅದಕ್ಕಾಗಿಯೇ, ವಿರೋಧ ಪಕ್ಷಗಳನ್ನು ತಣ್ಣಗಾಗಿಸಲು ವಿಷಾದ ವ್ಯಕ್ತಪಡಿಸಿ, ಶೋಕಾಸ್ ನೋಟಿಸ್ ನೀಡುವ ಬಿಜೆಪಿ, ಕಡೆಗೂ ಬಿದೂರಿಯಂಥವರನ್ನೇ ಹಿಂದಿನಿಂದ ಬೆಂಬಲಿಸುತ್ತದೆ. ಯಾಕೆಂದರೆ ಬಿಜೆಪಿಯ ಬಹುತೇಕ ಗೆಲುವುಗಳ ಹಿಂದೆ ಕೋಮುವಾದಿ ದ್ವೇಷಭಾಷಣಗಳಿವೆ.

ಒಂದು ವಿಷಯ ಸ್ಪಷ್ಟವಾಗಿದೆ. ರಮೇಶ್ ಬಿದೂರಿಯಂಥವರು ಈ ರೀತಿ ಮಾತಾಡುವುದು ಯಾವಾಗಲೋ ಅಪ್ಪಿ ತಪ್ಪಿ ಆಗುವ ಆಕಸ್ಮಿಕ ಬೆಳವಣಿಗೆಯಲ್ಲ. ಯಾರೋ ಕೆಲವರು ಅಪ್ಪಿ ತಪ್ಪಿ ಮಾಡುತ್ತಿರುವುದೂ ಅಲ್ಲ. ಅವಹೇಳನ ಮಾಡುವುದು, ಸುಳ್ಳು ಹೇಳುವುದು, ಪ್ರಚೋದನಾಕಾರಿ ಹೇಳಿಕೆ ನೀಡುವುದು, ದ್ವೇಷ ಹರಡುವುದು - ಇವೆಲ್ಲ ಬಿಜೆಪಿಯಲ್ಲಿ ಅದು ವ್ಯವಸ್ಥಿತ ರಾಜಕೀಯ ತಂತ್ರವಾಗಿ ಬೆಳೆದು ಬಂದಿದೆ.

ಪ್ರಜ್ಞಾ ಸಿಂಗ್ ಠಾಕೂರ್, ಗಿರಿರಾಜ್ ಸಿಂಗ್‌ರಂತಹ ಬಿಜೆಪಿ ಕೇಂದ್ರ ಸಚಿವರು, ಸಂಸದರು ಗಾಂಧೀಜಿ ಹಂತಕ, ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ, ಈ ದೇಶದ ಸುಪುತ್ರ ಎನ್ನುತ್ತಾರೆ. ಬಿಜೆಪಿ ಅದನ್ನು ಖಂಡಿಸುತ್ತದೆ. ಕ್ರಮ ಕೈಗೊಳ್ಳುವುದಾಗಿಯೂ ಹೇಳುತ್ತದೆ. ಸ್ವತಃ ಪ್ರಧಾನಿ ಮೋದಿಯವರೇ ಅವರು ಕ್ಷಮೆ ಕೇಳಿದರೂ ನಾನು ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ. ಹಾಗಾದರೆ ಪ್ರಜ್ಞಾ ಠಾಕೂರ್ ಹಾಗೂ ಗಿರಿರಾಜ್ ಸಿಂಗ್ ಯಾಕೆ ಇನ್ನೂ ಸಂಸದರಾಗಿಯೇ ಉಳಿದಿದ್ದಾರೆ? ಇನ್ನೂ ಬಿಜೆಪಿಯಲ್ಲೇ ಹೇಗೆ ಇದ್ದಾರೆ?

ನಿರಂತರ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಕುಸಿಯುತ್ತಿರುವ ಆದಾಯ, ನಮ್ಮ ಶಿಕ್ಷಣ ಸಂಸ್ಥೆಗಳು, ಸರಕಾರಿ ಆಸ್ಪತ್ರೆಗಳು ಗುಣಮಟ್ಟ ಕಳೆದುಕೊಳ್ಳುತ್ತಿರುವುದು, ರೈತರ ಆತ್ಮಹತ್ಯೆ, ಮಹಿಳೆಯರು, ದಮನಿತರ ಮೇಲೆ ನಿರಂತರ ನಡೆಯುತ್ತಿರುವ ದೌರ್ಜನ್ಯ ಇವಾವುದರ ಬಗ್ಗೆಯೂ ಯಾರೂ ಪ್ರಶ್ನಿಸಬಾರದೆಂದೇ, ಕೇವಲ ಹಿಂದೂ-ಮುಸ್ಲಿಮ್, ಪಾಕಿಸ್ತಾನ, ಇಟಲಿ -ಇವುಗಳೇ ಪ್ರತಿದಿನದ ಚರ್ಚೆಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ. ಧರ್ಮದ ಮತ್ತನ್ನು ಹರಡುವ, ದ್ವೇಷ ಬಿತ್ತುವ ಮೂಲಕವೇ ಗೆಲ್ಲುವ, ಸಮಾಜವನ್ನು ಒಡೆಯುವ ಮೂಲಕವೇ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುವ ಬಿಜೆಪಿ ಅದಕ್ಕೆ ತಕ್ಕವರಾಗಿರುವ ಬಿದೂರಿಯಂಥವರನ್ನು ಪೋಷಿಸದೆ ಇರುತ್ತದೆಯೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ವಿನಯ್ ಕೆ.

contributor

Similar News