ಬಡವರ ಮನೆಯಲ್ಲಿ ಸಮೃದ್ಧಿಯ ದೀಪ ಬೆಳಗುವುದು ಯಾವಾಗ?

Update: 2023-11-14 06:28 GMT

Photo: freepik

ಮತ್ತೊಂದು ದೀಪಾವಳಿಯೂ ಬಂದಿದೆ. ಆದರೆ, ಬಡವರ ಮನೆಯೊಳಗೆ ಆರ್ಥಿಕ ಸಮೃದ್ಧಿಯ ಆಶಯದ ದೀಪಗಳು ಬೆಳಗುತ್ತಿವೆಯೆ? ದೀಪಾವಳಿ ಎಂಬುದು ಬೆಳಕು ಮತ್ತು ಭರವಸೆಯ ಸಮಯ. ಆದರೂ ಲಕ್ಷಾಂತರ ಜನರು ಇನ್ನೂ ತಮ್ಮ ಮೂಲಭೂತ ಅಗತ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಸತ್ಯವನ್ನು ನಾವು ಮರೆಯಲು ಸಾಧ್ಯವಿಲ್ಲ. ಕನಿಷ್ಠ ಮೂಲಭೂತ ಅಗತ್ಯಗಳನ್ನಾದರೂ ಈ ಲಕ್ಷಾಂತರ ಮನೆಗಳಿಗೆ ಪೂರೈಸುವ ನಿಟ್ಟಿನಲ್ಲಿ ಸರಕಾರಗಳು ಮಾಡಬೇಕಾಗಿರುವುದು ಬಹಳ ಇದೆ.

ಉಚಿತ ಆಹಾರ ಧಾನ್ಯದ ಯೋಜನೆಯನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ ಎಂದು ಘೋಷಿಸಲಾಗಿದೆ. ಇದು ಖಂಡಿತವಾಗಿಯೂ ಸ್ವಲ್ಪ ಮಟ್ಟಿಗೆ ಬಡವರ ಸಂಕಷ್ಟಕ್ಕೆ ಪರಿಹಾರವಾಗಿ ಒದಗಬಲ್ಲುದು. ಆದರೆ ಎಲ್ಲಾ ಮೂಲಭೂತ ಅಗತ್ಯಗಳನ್ನು ತೃಪ್ತಿಕರ ರೀತಿಯಲ್ಲಿ ಪೂರೈಸುವ ಸವಾಲು ತುಂಬಾ ದೊಡ್ಡದಾಗಿದೆ.

ಎಷ್ಟು ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ ಮತ್ತು ಎಷ್ಟು ಅನಿಶ್ಚಿತತೆಯಲ್ಲಿವೆ, ಅಂಚಿನಲ್ಲಿವೆ ಎಂಬುದರ ಚರ್ಚೆ ಮುಗಿಯುವುದಿಲ್ಲ. ತಜ್ಞರು ಕಂಡುಕೊಂಡಿರುವ ಪ್ರಕಾರ ನಮಗೆ ಖಚಿತವಾಗಿ ತಿಳಿದಿರುವುದೇನೆಂದರೆ, ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಮೂಲಭೂತ ಅಗತ್ಯಗಳನ್ನು ಪಡೆಯಲಾರದೆ ಇವೆ ಮತ್ತು ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಜನರು ತೃಪ್ತಿಕರ ಮತ್ತು ಸುರಕ್ಷಿತ, ಸುಸ್ಥಿರ ಜೀವನೋಪಾಯವನ್ನು ಹೊಂದಿಲ್ಲ ಎಂಬುದು. ನಿರ್ದಿಷ್ಟವಾಗಿ ಡಿಮಾನಿಟೈಸೇಶನ್ ಮತ್ತು ಕೋವಿಡ್ ಕಾರಣದ ಲಾಕ್‌ಡೌನ್‌ಗಳಿಂದ ಉಂಟಾದ ಅಡೆತಡೆಗಳ ನಂತರ ಹೆಚ್ಚಾಗಿ ಕಂಡುಬಂದ ಈ ಸಮಸ್ಯೆ ಈಗ ಇನ್ನೂ ತೀವ್ರಗೊಂಡಿದೆ.

ಪ್ರಪಂಚದಾದ್ಯಂತದ ಹಲವಾರು ಅಧ್ಯಯನಗಳು ದೃಢಪಡಿಸಿದಂತೆ, ಬಡತನ ಮತ್ತು ಆರ್ಥಿಕ ಕೊರತೆಯನ್ನು ಕಡಿಮೆ ಮಾಡಲು ಸಮಾನತೆ ಮತ್ತು ನ್ಯಾಯಕ್ಕೆ ಹೆಚ್ಚಿನ ಬದ್ಧತೆ ಬಹಳ ಮುಖ್ಯ. ದುರದೃಷ್ಟವಶಾತ್ ಭಾರತವು ಆರ್ಥಿಕ ಸಮಾನತೆಯ ಆಧಾರದಲ್ಲಿನ ಸಮಾಜದ ವಿಚಾರದಲ್ಲಿ ಹಿಂದುಳಿದಿದೆ. ವಾಸ್ತವವಾಗಿ ಅಸಮಾನತೆಗಳನ್ನು ಇನ್ನೂ ಹೆಚ್ಚಿಸುವ ಸೂಚನೆಗಳೇ ಸುತ್ತಲಿನಿಂದಲೂ ಕಾಣಿಸುತ್ತಿವೆ. 2022ರ ವಿಶ್ವ ಅಸಮಾನತೆಯ ವರದಿಯಲ್ಲಿ ಹೇಳಲಾಗಿರುವಂತೆ, ಭಾರತದಲ್ಲಿನ ಕೆಳಭಾಗದ ಶೇ.50ರಷ್ಟು ಜನಸಂಖ್ಯೆಯು ದೇಶದ ಸಂಪತ್ತಿನ ಕೇವಲ ಶೇ.6ರಷ್ಟನ್ನು ಮಾತ್ರ ಹೊಂದಿದೆ. ಅದೇ ಸಮಯದಲ್ಲಿ ಅಗ್ರ ಶೇ.10ರಷ್ಟು ಶ್ರೀಮಂತರು ಸಂಪತ್ತಿನ ಶೇ.65ರಷ್ಟು ಪಾಲನ್ನು ಹೊಂದಿದ್ದಾರೆ. ಶೇ.1ರಷ್ಟು ಅಗ್ರರು ಸಂಪತ್ತಿನ ಶೇ.33ರಷ್ಟು ಹೆಚ್ಚಿನ ಪಾಲನ್ನು ಹೊಂದಿದ್ದಾರೆ.

ಜೊತೆಗೆ ಆದಾಯದ ವಿಷಯದಲ್ಲಿಯೂ ಹೆಚ್ಚಿನ ಅಸಮಾನತೆ ಇದೆ. ಜನಸಂಖ್ಯೆಯ ಕೆಳಭಾಗದ ಶೇ.50ರಷ್ಟು ಜನರು ದೇಶದ ಆದಾಯದ ಶೇ.13ರಷ್ಟನ್ನು ಮಾತ್ರ ಹೊಂದಿದ್ದಾರೆ. ಆದರೆ ಅಗ್ರ ಶೇ.10ರಷ್ಟು ಮಂದಿ ಆದಾಯದ ಶೇ.57ರಷ್ಟನ್ನು ಹೊಂದಿದ್ದಾರೆ. ಅಗ್ರ ಶೇ.1ರಷ್ಟು ಜನರು ದೇಶದ ಆದಾಯದ ಶೇ.22ರಷ್ಟನ್ನು ಹೊಂದಿದ್ದಾರೆ.

ಅತಿ ದೊಡ್ಡ ಪ್ರಮಾಣದ ಸಂಪತ್ತು ಮತ್ತು ಆದಾಯದ ಅಸಮಾನತೆಯಾಗಿದೆ. ಇದನ್ನು ಕಡಿಮೆ ಮಾಡಲೇಬೇಕಾಗಿದೆ. ಸಂಪತ್ತು ಮತ್ತು ಆದಾಯದ ಹೆಚ್ಚಿನ ಪಾಲು ಜನಸಂಖ್ಯೆಯ ಕೆಳಭಾಗದ ಶೇ.50ರಷ್ಟು ಮಂದಿಗೆ ಲಭ್ಯವಿರಬೇಕು. ನಿರ್ದಿಷ್ಟವಾಗಿ ಜನಸಂಖ್ಯೆಯ ಕೆಳಭಾಗದ ಶೇ.20ರಷ್ಟು ಗ್ರಾಮೀಣ ಭೂರಹಿತರು ಮೂಲಭೂತ ಅಗತ್ಯಗಳನ್ನು ಪೂರೈಸಲು ವಿಶೇಷ ಕಾಳಜಿ ವಹಿಸಲಾಗುತ್ತದೆ. ವಿಶೇಷ ಗಮನಕ್ಕೆ ಅರ್ಹರಾಗಿದ್ದು, ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷಿಸಲ್ಪಟ್ಟಿರುವ ಅವರಿಗೆ ಕನಿಷ್ಠ ಕೃಷಿ ಭೂಮಿಯನ್ನು ಒದಗಿಸುವ ಭೂ ಸುಧಾರಣೆಯ ಕಾರ್ಯಕ್ರಮವನ್ನು ಪುನಶ್ಚೇತನಗೊಳಿಸಬೇಕಿದೆ.

ಇದರ ಜೊತೆಗೆ ದುರ್ಬಲ ವರ್ಗದವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಹಲವಾರು ಸರಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶವಿದೆ. ಮೊದಲ ಹಂತವಾಗಿ, ಅಂತಹ ಕಾರ್ಯಕ್ರಮಗಳು ಮತ್ತು ಯೋಜನೆಗಳ ಹಂಚಿಕೆಗಳು ಅವರ ಉದ್ದೇಶಿತ ಗುರಿಗಳಿಗೆ ಅನುಗುಣವಾಗಿರಬೇಕು ಮತ್ತು ನಿಜವಾದ ವೆಚ್ಚವು ಮೂಲ ಹಂಚಿಕೆಗೆ ಅನುಗುಣವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಎಚ್ಚರಿಕೆಯಿಂದ ಇದನ್ನು ಗಮನಿಸಬೇಕು. ಜೊತೆಗೆ ಅವುಗಳ ಅನುಷ್ಠಾನವು ಭ್ರಷ್ಟಾಚಾರವನ್ನು ನಿಗ್ರಹಿಸಲು ಮತ್ತು ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ಗಮನಾರ್ಹ ರೀತಿಯಲ್ಲಿ ಸುಧಾರಿಸಬೇಕು. ಉದಾಹರಣೆಗೆ, ನರೇಗಾ ವಿಷಯದಲ್ಲಿ, ನ್ಯಾಯಯುತ ವೇತನವನ್ನು ಸಮಯೋಚಿತವಾಗಿ ಪಾವತಿಸುವುದು ಅವಶ್ಯ. ಜೊತೆಗೆ ಯಂತ್ರಗಳಿಂದ ಕೆಲಸವು ಮೋಸದಿಂದ ನಡೆಯದಂತೆ ಮತ್ತು ಬಡವರಿಗೆ ಉದ್ಯೋಗವನ್ನು ಸೃಷ್ಟಿಸುವ ಮೂಲ ಗುರಿಯಿಂದ ಲಕ್ಷ್ಯ ಬದಿಗೆ ಸರಿಯದಂತೆ ಹೆಜ್ಜೆಯಿಡುವುದೂ ಅಗತ್ಯವಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ, ಅತ್ಯಂತ ಪ್ರಾಮಾಣಿಕವಾಗಿ ಅಗತ್ಯವಿರುವ ಕುಟುಂಬಗಳನ್ನು ಆದ್ಯತೆಯ ಆಧಾರದ ಮೇಲೆ ಆಯ್ಕೆ ಮಾಡಬೇಕು ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು.

ಆರ್ಥಿಕತೆಯ ಒಟ್ಟಾರೆ ದಿಕ್ಕು ಹೆಚ್ಚು ತೃಪ್ತಿಕರ ಮತ್ತು ಸುಸ್ಥಿರ ಜೀವನೋಪಾಯಗಳನ್ನು ಸೃಷ್ಟಿಸುವುದರ ಜೊತೆಗೆ ಜನರ ಮೂಲಭೂತ ಅಗತ್ಯಗಳನ್ನು ತೃಪ್ತಿಕರ ರೀತಿಯಲ್ಲಿ ಪೂರೈಸುವ ಕ್ರಮವಾಗಿ ಬದಲಾಗಬೇಕು.

ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ಆರ್ಥಿಕತೆಯನ್ನು ಹೆಚ್ಚು ವಿಶಾಲ ದೃಷ್ಟಿಯಲ್ಲಿ ಮತ್ತು ಸಮತೋಲಿತ ರೀತಿಯಲ್ಲಿ ರೂಪಿಸಲು ಹಲವು ಆಯಾಮದ ಪ್ರಯತ್ನಗಳ ಸಂಯೋಜನೆ ಬೇಕಿದೆ. ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ವಿವಿಧ ಸರಕಾರಿ ಯೋಜನೆಗಳ ಅನುಷ್ಠಾನವನ್ನು ಸುಧಾರಿಸುವುದೂ ಅವಶ್ಯ. ಜೊತೆಗೆ ಜನಸಂಖ್ಯೆಯ ಕೆಳಭಾಗದ ಅರ್ಧದಷ್ಟು ಜನರ ಸುಧಾರಣೆಗಾಗಿ ಗಮನಾರ್ಹ ಪರಿಹಾರ ಮತ್ತು ದೀರ್ಘಾವಧಿಯ ಪ್ರಗತಿಗೆ ಲಕ್ಷ್ಯ ಕೊಡಬೇಕಿದೆ.

(ಕೃಪೆ: countercurrents.org)

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಭರತ್ ಡೋಗ್ರಾ

contributor

Similar News