ಎಲ್ಲಿದೆ ಕನ್ನಡ ?
ನವೆಂಬರ್ ಮೊದಲನೇ ದಿನವನ್ನು ರಾಜ್ಯೋತ್ಸವದ ದಿನವನ್ನಾಗಿ ಅದ್ದೂರಿಯಾಗಿ ಆಚರಿಸಿ ವೇದಿಕೆಗಳಲ್ಲಿ ಭಾಷಣ ಬಿಗಿದು ಆ ದಿನವನ್ನು ಮುಗಿಸುತ್ತೇವೆ. ಆನಂತರ ವರ್ಷವಿಡೀ ಇಂಗ್ಲಿಷ್, ಹಿಂದಿ ಹಾಗೂ ಇತರ ಭಾಷೆಗಳದ್ದೇ ದರ್ಬಾರು ಈ ನಮ್ಮ ನಾಡಿನೊಳಗೆ. ಎಲ್ಲೇ ಹೋದರು ಕನ್ನಡ ಬಿಟ್ಟು ಬೇರೆ ಮಾತನಾಡಬೇಕಾದ ಅನಿವಾರ್ಯತೆ ಈಗ ಬೆಂಗಳೂರು ನಗರಕ್ಕೂ ಬಂದೊದಗಿದೆ.
ಬೆಂಗಳೂರಿನಲ್ಲಿ ಈಗ ಸುಮಾರು ಶೇ. 70ಕ್ಕೂ ಹೆಚ್ಚು ಅನ್ಯ ಭಾಷಿಗರೇ -ಅಂದರೆ ಗುಜರಾತಿಗಳು ಮಾರ್ವಾಡಿಗಳು, ಬಿಹಾರಿಗಳು, ಹಿಂದಿವಾಲಗಳು, ತೆಲುಗು, ತಮಿಳು ಮತ್ತು ಇನ್ನಿತರ ಭಾಷಿಗರೇ ಹೆಚ್ಚಾಗಿದ್ದಾರೆ. ಇದು ನಮ್ಮ ನಾಡಿನ ದುರಂತ.
ಕನ್ನಡಿಗರು ಕಾವೇರಿ ನೀರಿಗಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಅಥವಾ ಇನ್ನಿತರ ಕನ್ನಡಪರ ಚಳವಳಿಗಳಲ್ಲಿ ಯಾವುದೇ ಮಾರ್ವಾಡಿಗಳು, ಸೇಟುಗಳು, ಗುಜರಾತಿ, ಬಿಹಾರಿಗಳು ಪಾಲ್ಗೊಳ್ಳುವುದಿಲ್ಲ. ಇವರು ಬಾಡಿಗೆದಾರರಾಗಿ ಕರ್ನಾಟಕದ ನಗರಗಳಿಗೆ ವಲಸೆ ಬಂದವರು ಇಂದು ಪ್ರತೀ ಬೀದಿಗಳಲ್ಲೂ ಅಂಗಡಿ ವ್ಯಾಪಾರದಲ್ಲಿ ನಿರತರಾಗಿ ಸಾಕಷ್ಟು ಸಂಪಾದಿಸಿ ತಮ್ಮವರಿಗೆ ನೆರವಾಗುತ್ತಿದ್ದಾರೆ. ಮೂಲ ಕನ್ನಡಿಗರು ಕೇವಲ ಎಳನೀರು ಇತ್ಯಾದಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾ, ಕೂಲಿ ಕೆಲಸ ಮಾಡುತ್ತಾ ಬಿಸಿಲಿನಲ್ಲಿ ಒಣಗುತ್ತಿದ್ದಾರೆ.
ಹೊರಗಿನಿಂದ ಬಂದು ಇಲ್ಲಿ ನೆಲೆಕಂಡವರಿಗೆ ಕನ್ನಡ ನೆಲದಲ್ಲಿ ಮನೆ ಕಟ್ಟಬೇಕು, ವ್ಯಾಪಾರ ಮಾಡಬೇಕು, ಲಾಭ ಪಡೆಯಬೇಕು. ಆದರೆ ನಮ್ಮ ಭಾಷೆ, ನಮ್ಮ ನೀರಿಗಾಗಿ ಹೋರಾಟ ಎಂದಾಗ ದೂರವೇ ಉಳಿಯುತ್ತಾರೆ. ಇಂತಹ ಕನ್ನಡ ವಿರೋಧಿಗಳಿಗೆ ನಾವು ನಮ್ಮ ನಾಡಿನಲ್ಲೇ ಬೆಚ್ಚನೆಯ ಶಾಖ ಕೊಟ್ಟು ಕಾಪಾಡಿಕೊಳ್ಳುತ್ತಿದ್ದೇವೆ.
ಇನ್ನು ನಮ್ಮ ರಾಜ್ಯದಲ್ಲಿ ಕನ್ನಡಿಗರು ಯಾವುದೇ ಬ್ಯಾಂಕುಗಳಿಗೆ ತೆರಳಿದರೂ ಎಲ್ಲಿಯೂ ಉತ್ತಮವಾಗಿ ಕನ್ನಡ ಮಾತನಾಡುವ ನೌಕರರೇ ಇಲ್ಲವಾಗಿದೆ. ಯಾವುದೇ ದೂರ ಪ್ರದೇಶದ ಹಳ್ಳಿಯಲ್ಲಿರುವ ಬ್ಯಾಂಕಿನಲ್ಲಿಯೂ, ಹಿಂದಿ, ತೆಲುಗು, ತಮಿಳು ಮಾತನಾಡುವ ನೌಕರರ ಹಾವಳಿ ಹೆಚ್ಚಾಗಿದೆಯೇ ಹೊರತು ಕನ್ನಡಿಗರು ಇರುವುದು ಬಹಳ ವಿರಳವಾಗಿದೆ. ಗ್ರಾಮಾಂತರ ಪ್ರದೇಶದ ರೈತ ವರ್ಗದ ಜನರು, ಗ್ರಾಮೀಣ ಮಹಿಳೆಯರು ಬ್ಯಾಂಕಿನ ಸಹವಾಸವೇ ಬೇಡವೆನ್ನುವಷ್ಟರ ಮಟ್ಟಿಗೆ ಬೇಸತ್ತಿದ್ದಾರೆ. ಕೆಲವೊಮ್ಮೆ ಹಳ್ಳಿಗಳಲ್ಲಿ ಕೆಲವು ಬಿಹಾರಿಗಳು, ಗುಜರಾತಿಗಳು ಹಿಂದಿ ಮಾತಾಡಬೇಕು ಎಂದು ಗ್ರಾಮೀಣ ಜನರಿಗೆ ಒತ್ತಾಯ ಮಾಡಿರುವ ಘಟನೆಗಳೂ ನಡೆದಿವೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ರಾಜ್ಯೋತ್ಸವದ ದಿನದಂದು ಕೂಡಾ ಬ್ಯಾಂಕಿನ ನಿಯಮವೆಂದು ಬೇರೆ ಬೇರೆ ಕಾರ್ಯಕ್ರಮಗಳನ್ನು ರೂಪಿಸಿ, ರಾಜ್ಯೋತ್ಸವ ದಿನವನ್ನು ಬೇರೆ ರಾಜ್ಯದಿಂದ ಬಂದ ಬ್ಯಾಂಕ್ ನೌಕರರಿಂದ ಮರೆಮಾಚಿ ಕನ್ನಡತನವನ್ನು ಕೊಲ್ಲಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕನ್ನಡ ಮಾತನಾಡಲೇ ಬಾರದು ಎನ್ನುವ ಕಡ್ಡಾಯ ಸುತ್ತೋಲೆ ಬಂದರೂ ಆಶ್ಚರ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಈ ನಾಡಿನಲ್ಲಿ ಇತಿಹಾಸ ಸೃಷ್ಟಿಸಿದ, ಅತ್ಯಧಿಕ ಲಾಭ ಗಳಿಸುತ್ತಿದ್ದ ಪ್ರತಿಷ್ಠಿತ ಬ್ಯಾಂಕುಗಳನ್ನೆಲ್ಲ ಉತ್ತರ ರಾಜ್ಯಗಳ ಬ್ಯಾಂಕುಗಳೊಡನೆ ಉಪಾಯವಾಗಿ ಸೇರಿಸಿ ಕೊಲ್ಲಲಾಯಿತು. ಕನ್ನಡಿಗರ ಹೃದಯದಿಂದ ಅಳಿಸಲಾಯಿತು. ಅಲ್ಲಿಯೂ ನಮ್ಮವರು ಕೇವಲ ಕಾರ್ಮಿಕರಾದರು. ಇವೆಲ್ಲಾ ಕನ್ನಡಿಗರ ಸ್ವಾಭಿಮಾನವನ್ನು ಕಿತ್ತು ತಿನ್ನುವ ಹುನ್ನಾರಗಳೇ. ಒಂದೊಮ್ಮೆ ಎಲ್ಲಾ ಸಣ್ಣ ಬ್ಯಾಂಕುಗಳು ಸೇರಿ ದೊಡ್ಡ ಬ್ಯಾಂಕ್ ಮಾಡಿ ಆರ್ಥಿಕ ಅಭಿವೃದ್ಧಿ ಮಾಡುವ ಉದ್ದೇಶವಾಗಿದ್ದಿದ್ದರೆ ಇಷ್ಟು ಹೊತ್ತಿಗಾಗಲೇ ದೇಶ ಸಾಲ ಮುಕ್ತ ದೇಶವಾಗಬೇಕಾಗಿತ್ತು. 54.00 ಲಕ್ಷ ಸಾವಿರ ಕೋಟಿ ರೂ. ಸಾಲವಿದ್ದದ್ದು, 150.00 ಲಕ್ಷ ಸಾವಿರ ಕೋಟಿ ರೂ.ಗೂ ಹೆಚ್ಚಾಗುತ್ತಿರಲಿಲ್ಲ. ಇದು ಕೇವಲ ಕನ್ನಡಿಗರನ್ನು ಯಾಮಾರಿಸುವ, ದಕ್ಷಿಣ ಭಾರತವನ್ನು ಕಡೆಗಣಿಸುವ, ಕನ್ನಡ ತನವನ್ನು ಮರೆಮಾಚುವ ಹುನ್ನಾರವೆಂದರೂ ತಪ್ಪಾಗಲಾರದು.
ಹಾಗಾಗಿ ನವೆಂಬರ್ ಕನ್ನಡಿಗರಾಗುವುದಕ್ಕಿಂತ ವರ್ಷವಿಡೀ ಕನ್ನಡಿಗರಾಗಬೇಕಾದ ಅನಿವಾರ್ಯತೆ ನಮಗೆ ಬಂದೊದಗಿದೆ. ನಮ್ಮ ನಾಡು, ನಮ್ಮ ಕನ್ನಡ ನುಡಿ ಉಳಿಯಬೇಕೆಂದರೆ ಹೊರ ರಾಜ್ಯದಿಂದ ಬಂದಿರುವ ಎಲ್ಲಾ ಮಕ್ಕಳು ಕಡ್ಡಾಯವಾಗಿ ಕನ್ನಡವನ್ನು 10ನೇ ತರಗತಿಯವರೆಗೂ ಕಲಿಯುವ ವ್ಯವಸ್ಥೆಯಾಗಬೇಕು. ಎಲ್ಲಾ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯ ಕನ್ನಡ ಕಲಿ ಎನ್ನುವ ವ್ಯವಸ್ಥೆಯನ್ನು ಜಾರಿಮಾಡಬೇಕು. ಇಂತಹ ಕ್ರಮ ಕೈಗೊಂಡರೆ ಕನ್ನಡ ಭಾಷೆಗೂ ಒಂದು ಶಕ್ತಿ ಬರುತ್ತದೆ. ಕನ್ನಡಿಗರ ಸ್ವಾಭಿಮಾನವೂ ಹೆಚ್ಚುತ್ತದೆ.