ಪಶ್ಚಿಮ ಬಂಗಾಳ ಹಿಂಸಾಚಾರದ ಹಿಂದಿರುವವರು ಯಾರು ?

Update: 2023-07-13 16:58 GMT

- ಆರ್. ಜೀವಿ

​​ಅಧಿಕಾರಕ್ಕಾಗಿ ಚಡಪಡಿಸುವ ರಾಜಕಾರಣ ಏನೆಲ್ಲವನ್ನೂ ಮಾಡಬಲ್ಲುದು ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ಮತ್ತೆ ಸಂಭವಿಸಿರುವ ಹಿಂಸಾಚಾರ ತಾಜಾ ಉದಾಹರಣೆ. ಪಂಚಾಯಿತಿಗಳ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿ ಶುಕ್ರವಾರ ರಾತ್ರಿ ಶುರುವಾದ ಹಿಂಸಾಚಾರ ತೀವ್ರ ಸ್ವರೂಪ ಪಡೆದಿದೆ.

ಪಶ್ಚಿಮ ಬಂಗಾಳದ ಚುನಾವಣಾ ರಾಜಕೀಯದೊಂದಿಗೆ ಬೆಸೆದಿರೋ ಹಿಂಸಾಚಾರ ತೀವ್ರ ಆತಂಕಕಾರಿ ವಿದ್ಯಮಾನವಾಗಿದೆ. ದಿ ವೈರ್ ವರದಿ ಪ್ರಕಾರ ಹಿಂಸಾಚಾರಕ್ಕೆ ಕನಿಷ್ಠ 18 ಮಂದಿ ಬಲಿಯಾಗಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದ ಭಯದಿಂದಾಗಿ ಜನರು ಈ ಬಾರಿ ಮತದಾನಕ್ಕೆ ಬಂದಿರುವ ಪ್ರಮಾಣವೂ ಕಡಿಮೆಯಾಗಿದೆ ಎಂದು ವರದಿಗಳು ಹೇಳಿವೆ. ಪತ್ರಕರ್ತ ಅಭಿಸಾರ್ ಶರ್ಮ ಹೇಳಿರುವ ಪ್ರಕಾರ ಕಳೆದ ಬಾರಿಯ ಪಂಚಾಯತ್ ಚುನಾವಣೆಯಲ್ಲಿ 82 ಶೇಕಡಾ ಜನರು ಮತ ಚಲಾಯಿಸಿದ್ದರು. ಈ ಬಾರಿಯ ವರದಿಯ ಪ್ರಕಾರ ಕೇವಲ 66 ಶೇಕಡಾ ಜನರು ಮಾತ್ರ ಮತ ಚಲಾವಣೆ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಹಿಂಸಾಚಾರದ ಭಯ.

ಇಂಡಿಯನ್ ಎಕ್ಸ್ ಪ್ರೆಸ್ ವರದಿಗಳನ್ನು ಉಲ್ಲೇಖಿಸಿ ಅಭಿಸಾರ್ ಶರ್ಮ ಹೇಳುವ ಪ್ರಕಾರ, ಹಿಂಸಾಚಾರಕ್ಕೆ ಮುಖ್ಯ ಕಾರಣ ಆಡಳಿತಾರೂಢ ತೃಣಮೂಲ ಕಾಂಗ್ರೆಸ್. ರಾಜ್ಯದ ಪೊಲೀಸರನ್ನು ತನಗೆ ಬೇಕಾದಂತೆ ಬಳಸಿಕೊಂಡು ಟಿ ಎಂ ಸಿ ಭಯ, ಬ್ಯಾರಿಕೇಡ್, ಲಾಕೌಟ್, ಬಾಂಬ್ ಗಳ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ. ಅದಕ್ಕೆ ತಿರುಗೇಟು ನೀಡಲು ಬಿಜೆಪಿ, ಸಿಪಿಎಂ, ಕಾಂಗ್ರೆಸ್ ಕಾರ್ಯಕರ್ತರೂ ಮುಂದಾಗಿ ಹಿಂಸಾಚಾರ ತೀವ್ರ ಸ್ವರೂಪ ಪಡೆದಿದೆ ಎಂದು ವಿಶ್ಲೇಷಿಸಿದ್ದಾರೆ ಅಭಿಸಾರ್ ಶರ್ಮ. ಈ ಆರೋಪಕ್ಕೆ ಪೂರಕವಾಗಿ ಸಿಎಂ ಮಮತಾ ಬ್ಯಾನರ್ಜಿ ಸಹಿತ ಹಿರಿಯ ಟಿ ಎಂ ಸಿ ನಾಯಕರು ಹಿಂಸಾಚಾರದ ಬಗ್ಗೆ ಯಾವುದೇ ಟ್ವೀಟ್ ಮಾಡಿಲ್ಲ.

ಹಲವಾರು ಮತಗಟ್ಟೆಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಮತಪತ್ರಗಳಿಗೆ ಬೆಂಕಿ ಹಚ್ಚಲಾಗಿದೆ. ನಿರ್ಣಾಯಕ ಮೂರು ಹಂತದ ಪಂಚಾಯತ್ ಚುನಾವಣೆಗೆ ಶನಿವಾರ ಮತದಾನ ನಡೆಯುತ್ತಿದ್ದಂತೆ ವ್ಯಾಪಕ ಹಿಂಸಾಚಾರ ನಡೆದಿದೆ. ರಾಷ್ಟ್ರಮಟ್ಟದಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಒಂದಾಗಬೇಕಿರುವ ಪಕ್ಷಗಳೇ ಇಲ್ಲಿ ಪರಸ್ಪರ ಎದುರಾಳಿಗಳಾಗಿರುವುದು, ವೈರಿಗಳಂತೆ ಹರಿಹಾಯುತ್ತಿರುವುದು ರಾಜಕೀಯ ವಿಪರ್ಯಾಸವೂ ಹೌದು. ಇದು ತನ್ನ ನೆಲೆ ಭದ್ರಪಡಿಸಿಕೊಳ್ಳಲು ಹೊಂಚು ಹಾಕಿ ಕಾಯುತ್ತಿರುವ ಬಿಜೆಪಿಗೆ ಲಾಭಕರವೂ ಹೌದು.

ಟಿಎಂಸಿ, ಕಾಂಗ್ರೆಸ್, ಬಿಜೆಪಿ, ಸಿಪಿಎಂ ಸೇರಿದಂತೆ ಎಲ್ಲ ಪಕ್ಷಗಳು ತಮ್ಮ ಕಾರ್ಯಕರ್ತರ ಹತ್ಯೆ ಲೆಕ್ಕ ಹೇಳುತ್ತಿವೆ. ರಾಜಕೀಯ ಪಕ್ಷಗಳ ನಡುವಿನ ಪರಸ್ಪರ ಕೆಸರೆರಚಾಟವೂ ತೀವ್ರವಾಗಿಯೇ ಇದೆ. ಆಡಳಿತಾರೂಢ ಟಿಎಂಸಿ, ಹಿಂಸಾಚಾರ ತಡೆಯುವಲ್ಲಿ ಕೇಂದ್ರೀಯ ಪಡೆಗಳು ವಿಫಲವಾಗಿವೆ ಎಂದು ದೂಷಿಸಿದರೆ, ಬಿಜೆಪಿ ಮತ್ತು ವಿರೋಧ ಪಕ್ಷಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಹರಿಹಾಯ್ದಿದ್ದು, ಪ್ರಜಾಪ್ರಭುತ್ವವನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿವೆ.

ಆದರೆ ಆಡಳಿತಾರೂಢ ಟಿಎಂಸಿ ವಿರುದ್ಧ ಪ್ರಬಲ ವೈರತ್ವದ ನಡೆಯನ್ನು ಈ ಹಿಂಸಾಚಾರದಲ್ಲಿ ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಮಾಡಿವೆ ಎಂಬ ದೂರುಗಳೇ ಪ್ರಬಲವಾಗಿ ಕೇಳಿಬರುತ್ತಿವೆ. ರಾಜ್ಯಾದ್ಯಂತ ಆಡಳಿತ ಪಕ್ಷ ವಿರೋಧ ಪಕ್ಷಗಳ ದಾಳಿಗೆ ತುತ್ತಾಗುತ್ತಿದೆ. ಶನಿವಾರ ಪ್ರಾಣ ಕಳೆದುಕೊಂಡ ಪಕ್ಷದ ಕಾರ್ಯಕರ್ತರಲ್ಲಿ ಹೆಚ್ಚಿನವರು ಟಿಎಂಸಿ ಬೆಂಬಲಿಗರು ಎಂದು ತಿಳಿದುಬಂದಿದೆ. ಕಾಂಗ್ರೆಸ್ ಮತ್ತು ಸಿಪಿಎಂನ ಅಪವಿತ್ರ ಮೈತ್ರಿ ತನ್ನ ಪಕ್ಷದ ಬೆಂಬಲಿಗರ ಮೇಲೆ ಬಹಿರಂಗವಾಗಿ ದಾಳಿ ನಡೆಸಿದೆ ಎಂಬುದು ಟಿಎಂಸಿ ಆರೋಪ.

ಆದರೆ, ಟಿಎಂಸಿ ಆಡಳಿತದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಮರೀಚಿಕೆ ಎಂದು ಬಿಜೆಪಿಯ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಟಿಎಂಸಿ ಬೆಂಬಲಿತ ಗೂಂಡಾಗಳು ರಾಜ್ಯದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಜನರ ತೀರ್ಮಾನದ ಅಪಹರಣ ಬಹಿರಂಗವಾಗಿಯೇ ನಡೆದಿದೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧುರಿ ಆರೋಪಿಸಿದ್ದಾರೆ.

ಮುಂದಿನ ಲೋಕಸಬಾ ಚುನಾವಣೆಗೆ ಈ ಚುನಾವಣೆ ಫಲಿತಾಂಶ ದಿಕ್ಸೂಚಿ ಎಂದೇ ಹೇಳಲಾಗುತ್ತಿದ್ದು, ರಾಜಕೀಯ ಪಕ್ಷಗಳು ಹೇಗಾದರೂ ತಮ್ಮ ಪ್ರಾಬಲ್ಯ ಸಾಬೀತುಪಡಿಸಲು ಹೊರಟಿದ್ದು ಕಡೆಗೆ ಹಿಂಸೆಯ ದಿಕ್ಕು ಹಿಡಿದಿದೆ. ಆದರೆ ಇಲ್ಲಿ ಯಾರ ಪಾಲು ಎಷ್ಟು ಎಂಬುದೇ ತಿಳಿಯಲಾರದ ಸ್ಥಿತಿಯೂ ಇದೆ. ಶನಿವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ನಾಡಿಯಾ, ಮುರ್ಷಿದಾಬಾದ್ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೊದಲು ಬಲಿಯಾದವರು ಟಿಎಂಸಿ ಕಾರ್ಯಕರ್ತರು ಎನ್ನಲಾಗಿದೆ. ಬಳಿಕ ಬೇರೆ ಬೇರೆ ಘಟನೆಗಳಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ.

ದುರಂತವೆಂದರೆ, ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಸ್ಫೋಟಕ್ಕೆ ಇಬ್ಬರು ಮಕ್ಕಳು ಗಾಯಗೊಂಡಿರುವುದು. ಚೆಂಡು ಎಂದು ಭಾವಿಸಿ, ರಸ್ತೆಯಲ್ಲಿ ಬಿದ್ದಿದ್ದ ಕಚ್ಚಾ ಬಾಂಬ್ ಎತ್ತಿಕೊಂಡಾಗ ಅದು ಸ್ಫೋಟಿಸಿತೆನ್ನಲಾಗಿದೆ. ಹಿಂಸಾಚಾರದ ತೀವ್ರತೆಯನ್ನು ಗಮನಿಸುವುದಾದರೆ, ಎಂದಿನಂತೆ, ಪಂಚಾಯತಿ ಚುನಾವಣೆಯ ಸಮಯದಲ್ಲಿ ಮುರ್ಷಿದಾಬಾದ್ ಅತಿ ಹೆಚ್ಚು ಸಾವುನೋವುಗಳನ್ನು ಕಂಡಿದೆ. ಐದು ಸಾವುಗಳು ವರದಿಯಾಗಿವೆ. ಉತ್ತರ ದಿನಾಜ್‌ಪುರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಕೂಚ್ ಬೆಹರ್ ನಲ್ಲಿ ಮೂರು ಸಾವುಗಳಾಗಿವೆ. ಮಾಲ್ಡಾ, ದಕ್ಷಿಣ 24 ಪರಗಣ, ನಾಡಿಯಾ ಮತ್ತು ಪೂರ್ವ ಬರ್ದ್ವಾನ್‌ನಲ್ಲಿಯೂ ದುರಂತಗಳು ಸಂಭವಿಸಿವೆ.

ಮತ ಎಣಿಕೆ ಮುಗಿದ ಕೆಲವೇ ಗಂಟೆಗಳಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂದೂ ಪ್ರತಿಪಕ್ಷಗಳು ಆರೋಪಿಸಿವೆ. ಪೂರ್ವ ಮೇದಿನಿಪುರದ ದೂರದ ಹಳ್ಳಿಗಳಿಂದ ಹಿಡಿದು ನ್ಯೂಟೌನ್ನಂಥ ಐಷಾರಾಮಿ ಪ್ರದೇಶಗಳವರೆಗೆ ಅನೇಕರು ಮತ ಚಲಾಯಿಸಲು ಸಾಧ್ಯವಾಗಲಿಲ್ಲ ಎಂಬ ವರದಿಗಳಿವೆ. ಆದರೂ ಅವರ ಹೆಸರಲ್ಲಿ ಮತಗಳು ಚಲಾವಣೆಯಾಗಿವೆ ಎಂಬುದೇ ಏನೇನೆಲ್ಲ ನಡೆದಿದೆ, ಯಾರು ಇದರ ಹಿಂದಿದ್ದಾರೆ ಎಂಬ ಪ್ರಶ್ನೆಗಳಿಗೆ ಕಾರಣವಾಗಿದೆ.

ಕೂಚ್ ಬೆಹಾರ್ ಜಿಲ್ಲೆಯ ದಿನ್ಹಾಟಾದಲ್ಲಿ, ದುಷ್ಕರ್ಮಿಗಳು ಬಲವಂತವಾಗಿ ಮತಗಟ್ಟೆಗೆ ಪ್ರವೇಶಿಸಿ, ಬಂದೂಕು ತೋರಿಸಿ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ ಹಾಕಿಸಿದರೆಂಬುದೂ ವರದಿಯಾಗಿದೆ. ಇದೆಲ್ಲರದ ನಡುವೆಯೇ, ಕಾಂಕ್ಸಾದಲ್ಲಿ ಆದಿವಾಸಿಗಳು ದುಷ್ಕರ್ಮಿಗಳನ್ನು ದಿಟ್ಟತನದಿಂದ ಎದುರಿಸಿದ್ದು, ದಕ್ಷಿಣ 24 ಪರಗಣದ ಬಸಂತಿಯ ದೂರದ ಹಳ್ಳಿಗಳಲ್ಲಿ ಕೆಲ ಮಹಿಳೆಯರು, ಬೂತ್ ಮೇಲೆ ದುಷ್ಕರ್ಮಿಗಳು ಹಿಡಿತ ಸಾಧಿಸಿದ್ದನ್ನು ಮತ್ತು ಹಿಂಸಾಚಾರ ನಡೆಸಿದ್ದನ್ನು ಸಾಮಾಜಿಕ ಜಾಲತಾಣ ಬಳಸಿ ಜನರಿಗೆ ತಿಳಿಯುವಂತೆ ಮಾಡಿದ್ದು ವರದಿಯಾಗಿದೆ. ಜಿಲ್ಲೆಯ ಇನ್ನೊಂದು ಭಾಗದಲ್ಲಿ ಮತದಾನ ಪ್ರಾರಂಭವಾಗುವ ಮುನ್ನವೇ ಸುಳ್ಳು ಮತದಾನ ನಡೆಯುವುದನ್ನು ಕಂಡ ಗ್ರಾಮಸ್ಥರೊಬ್ಬರು ಮತಪೆಟ್ಟಿಗೆಯನ್ನೇ ಎಸೆದಿದ್ದಾರೆ.

ಹಿಂಸಾಚಾರ ಪೀಡಿತ ಮುರ್ಷಿದಾಬಾದ್‌ನ ಭರತ್‌ಪುರ ಮತ್ತು ಸಲಾರ್ ಪ್ರದೇಶಗಳಲ್ಲಿ, ಟಿಎಂಸಿಯ ಒಂದು ಗುಂಪು ಬೂತ್ ವಶಪಡಿಸಿಕೊಳ್ಳುವಿಕೆ ವಿರೋಧಿಸಲು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿತು ಎನ್ನಲಾಗಿದೆ. ಟಿಎಂಸಿ ತನ್ನ ಕಾರ್ಯಕರ್ತರ ಸಾವಿನ ಸಂಖ್ಯೆ ತೋರಿಸುತ್ತ, ಹಿಂಸಾಚಾರಕ್ಕೆ ಬಿಜೆಪಿ ಮತ್ತಿತರ ಪಕ್ಷಗಳತ್ತ ಬೆರಳು ಮಾಡುತ್ತಿದೆ. ಸ್ಥಳೀಯ ಎಬಿಪಿ ಆನಂದ ಚಾನೆಲ್‌ಗಾಗಿ ಸಿ-ವೋಟರ್ ನಡೆಸಿದ ಮತಗಟ್ಟೆ ಸಮೀಕ್ಷೆ, ಟಿಎಂಸಿ ಹೆಚ್ಚಿನ ಜಿಲ್ಲೆಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ ಎಂದಿದೆ. ಪಶ್ಚಿಮ ಬಂಗಾಳದ ರಾಜಕೀಯ ತಜ್ಞರು ಕೂಡ ಬಿಜೆಪಿ ಮತ್ತು ಎಡ-ಕಾಂಗ್ರೆಸ್ ಮೈತ್ರಿಗಿಂತ ಟಿಎಂಸಿ ಮುಂದಿರಲಿದೆ ಎಂಬುದನ್ನೇ ಒತ್ತಿಹೇಳುತ್ತಿದ್ದಾರೆ.

ಹೀಗಾಗಿ, ಎಲ್ಲ ಪಕ್ಷಗಳೂ ಟಿಎಂಸಿ ವಿರುದ್ದ ಮುಗಿಬಿದ್ದವೆ ಎಂಬ ಪ್ರಶ್ನೆಯೂ ಇದೆ. ಪರಿಸ್ಥಿತಿ ಅವಲೋಕಿಸಿದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಜನರನ್ನು ಮಾತನಾಡಿಸಿದ ಬಳಿಕ ಹೇಳಿರೋದು, "ಇದು ತುಂಬ ಕಳವಳಕಾರಿ. ಚುನಾವಣೆಗಳು ಮತಪತ್ರಗಳ ಮೂಲಕ ನಡೆಯಬೇಕೇ ಹೊರತು ಬುಲೆಟ್‌ಗಳ ಮೂಲಕ ಅಲ್ಲ." ಅಂತ.

ರಾಜ್ಯ ಸರ್ಕಾರ ಜೂನ್ 9 ರಂದು ಪಂಚಾಯತ್ ಚುನಾವಣೆಯ ದಿನಾಂಕವನ್ನು ಘೋಷಿಸಿದಾಗಿನಿಂದ ಪಶ್ಚಿಮ ಬಂಗಾಳದಾದ್ಯಂತ ಹಿಂಸಾತ್ಮಕ ಘರ್ಷಣೆಗಳು ವರದಿಯಾಗುತ್ತಲೇ ಇದ್ದವು. ಚುನಾವಣೆಗೆ 60,000 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸಾಕಷ್ಟು ದಿನಗಳನ್ನು ನೀಡಿಲ್ಲ ಎಂದು ಪ್ರತಿಪಕ್ಷಗಳು ಈ ಘೋಷಣೆಯನ್ನು ಬಹಿರಂಗವಾಗಿ ವಿರೋಧಿಸಿದವು.

ಅನಂತರದ ದಿನಗಳಲ್ಲಿ ರಾಜ್ಯದ ಹಲವೆಡೆ ಹಿಂಸಾತ್ಮಕ ಘಟನೆಗಳು ನಡೆದವು. ಮೊನ್ನೆ ಇದು ತೀವ್ರ ರೀತಿಗೆ ತಿರುಗಿದೆ. ಕೆಲವು ವಿಶ್ಲೇಷಣೆಗಳು, ಈ ಹಿಂಸಾಚಾರ ಆಡಳಿತಾರೂಢ ಟಿಎಂಸಿಗೆ ಮುಜುಗರ ತರುವ ಘಟನೆ ಎನ್ನುತ್ತಿವೆ. 2018ರ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಏನೇನೆಲ್ಲ ಮಾಡಿತ್ತು ಎಂಬುದನ್ನೂ ನೆನಪಿಸಲಾಗುತ್ತಿದೆ.

ಇಂದು 697 ಬೂತುಗಳಲ್ಲಿ ಮರುಮತದಾನ ನಡೆಯಲಿದೆ. ಜುಲೈ 11ರಂದು ಪ್ರಕಟವಾಗಲಿರುವ ಚುನಾವಣೆಯ ಫಲಿತಾಂಶ ಟಿಎಂಸಿಯ ಪರವಾಗಿಯೇ ಇದ್ದರೂ, ಈ ಹಿಂಸಾಚಾರದ ಪರಿಣಾಮಗಳು ಅದರ ಬೆನ್ನಟ್ಟಲಿವೆ ಎಂಬ ಮಾತುಗಳನ್ನೂ ಹೇಳಲಾಗುತ್ತಿದೆ. ಅಧಿಕಾರಕ್ಕಾಗಿ ಯಾರೆಲ್ಲ ಹೇಗೆ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೊ ಗೊತ್ತಿಲ್ಲ. ಆದರೆ, ರಾಜಕೀಯದ ಈ ಅಸಹ್ಯದ ನಡುವೆ ಅಮಾಯಕರು ಪ್ರಾಣ ಕಳೆದುಕೊಳ್ಳುವುದು, ಜನರ ಬದುಕು ನಲುಗುವುದು ಮಾತ್ರ ಶೋಚನೀಯ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News