ಯಾರಿಗೆ ಒಲಿಯಲಿದೆ ಮಧ್ಯಪ್ರದೇಶ?

ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಪಂಚರಾಜ್ಯಗಳಲ್ಲಿ ಮಧ್ಯಪ್ರದೇಶವೂ ಒಂದು. ದೇಶದ ಎರಡನೇ ಅತಿ ದೊಡ್ಡ ರಾಜ್ಯವಾಗಿರುವ ಮಧ್ಯಪ್ರದೇಶದಲ್ಲಿ ಆದಿವಾಸಿಗಳು ಮತ್ತು ಹಿಂದುಳಿದವರ ಪ್ರಾಬಲ್ಯವಿದೆ. ಮಧ್ಯಪ್ರದೇಶ ವಿಧಾನಸಭೆ 230 ಸದಸ್ಯ ಬಲದ್ದಾಗಿದೆ. ಕಾಂಗ್ರೆಸ್‌ನಿಂದ ಅಧಿಕಾರ ಕಿತ್ತುಕೊಂಡಿರುವ ಬಿಜೆಪಿಯ ಮುಂದೆ ಹಲವು ಸವಾಲುಗಳು ಇವೆ. ನವೆಂಬರ್ 17ರಂದು ನಡೆಯಲಿರುವ ಚುನಾವಣೆ ಮಧ್ಯಪ್ರದೇಶದ ರಾಜಕೀಯದಲ್ಲಿ ತರಲಿರುವ ತಿರುವು ಏನಿರಬಹುದು ಎಂಬುದೇ ಈಗಿನ ಕುತೂಹಲ.

Update: 2023-10-17 07:32 GMT

ಮಧ್ಯಪ್ರದೇಶ. ಹೆಸರೇ ಹೇಳುವಂತೆ ಮಧ್ಯಪ್ರಾಂತ. ಮಧ್ಯಭಾರತದ ರಾಜ್ಯ. ಇದರ ರಾಜಧಾನಿ ನಗರ ಭೋಪಾಲ್. ಈ ರಾಜ್ಯದ ಅತಿ ದೊಡ್ಡ ನಗರ ಇಂದೋರ್. ಗ್ವಾಲಿಯರ್, ಜಬಲ್ಪುರ, ಉಜ್ಜಯಿನಿ, ದೇವಾಸ್, ಸತ್ನಾ, ರೇವಾ ಇತರ ಪ್ರಮುಖ ನಗರಗಳು.

ವಿಸ್ತೀರ್ಣದಲ್ಲಿ ಇದು ದೇಶದ ಎರಡನೇ ಅತಿ ದೊಡ್ಡ ರಾಜ್ಯವಾದರೆ, ಜನಸಂಖ್ಯೆಯಲ್ಲಿ ದೇಶದ ಐದನೇ ಅತಿ ದೊಡ್ಡ ರಾಜ್ಯ. 7 ಕೋಟಿ 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಈ ರಾಜ್ಯದಲ್ಲಿದೆ.

ಇದರ ಗಡಿ ಜಿಲ್ಲೆಗಳಾಗಿ ಈಶಾನ್ಯಕ್ಕೆ ಉತ್ತರ ಪ್ರದೇಶ, ಪೂರ್ವಕ್ಕೆ ಛತ್ತೀಸ್‌ಘಡ, ದಕ್ಷಿಣಕ್ಕೆ ಮಹಾರಾಷ್ಟ್ರ, ಪಶ್ಚಿಮಕ್ಕೆ ಗುಜರಾತ್ ಮತ್ತು ವಾಯವ್ಯಕ್ಕೆ ರಾಜಸ್ಥಾನ ಇವೆ.

ಒಂದಿಷ್ಟು ಪೌರಾಣಿಕ ಹಿನ್ನೆಲೆಯನ್ನು ಗಮನಿಸುವುದಾದರೆ,

ಉಜ್ಜಿಯಿನಿ ಪೌರಾಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿರಿಮೆಯುಳ್ಳ ನಗರಿಯಾಗಿದೆ. ಆವಂತಿಕಾನಗರವೆಂಬ ಹೆಸರಿನಿಂದಲೂ ಈ ನಗರವನ್ನು ಕರೆಯುತ್ತಿದ್ದರು ಎನ್ನಲಾಗುತ್ತದೆ.

ಪ್ರಸಿದ್ಧ ಸಂಸ್ಕೃತ ಕವಿ ಕಾಳಿದಾಸ, ಜ್ಯೋತಿಷಿ ವರಾಹ ಮಿಹಿರ ಇಲ್ಲಿಯೇ ನೆಲೆಸಿದ್ದರು ಎಂಬ ಪ್ರತೀತಿ ಇದೆ. ಉಜ್ಜಿಯಿನಿಯೊಂದಿಗೆ ಭೋಜರಾಜನ ಹೆಸರೂ, ಭಾಸ್ಕರಾಚಾರ್ಯ, ಅಮರಸಿಂಹ ಮೊದಲಾದ ಪ್ರಾಚೀನ ವಿದ್ವಾಂಸರ ಹೆಸರುಗಳೂ ಸಂಬಂಧ ಹೊಂದಿವೆ. 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಇಲ್ಲಿನ ಪ್ರಸಿದ್ಧ ಆಚರಣೆಗಳಲ್ಲೊಂದು.

ಮಧ್ಯಪ್ರದೇಶದ ಜನಸಂಖ್ಯೆಯು ಹಲವಾರು ಜನಾಂಗೀಯ ಗುಂಪುಗಳು ಮತ್ತು ಬುಡಕಟ್ಟು ಸಮುದಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ಇದು ಆದಿವಾಸಿಗಳ ರಾಜ್ಯ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳು ರಾಜ್ಯದ ಜನಸಂಖ್ಯೆಯ ಗಮನಾರ್ಹ ಭಾಗವಾಗಿದ್ದು, ಈ ಸಮುದಾಯಗಳ ಜನರು ಕ್ರಮವಾಗಿ ಶೇ.15.6 ಮತ್ತು ಶೇ.21.1ರಷ್ಟಿದ್ದಾರೆ.

ಮಧ್ಯಪ್ರದೇಶದ ಮುಖ್ಯ ಬುಡಕಟ್ಟು ಗುಂಪುಗಳು ಗೊಂಡ್, ಭಿಲ್ , ಬೈಗಾ, ಕೊರ್ಕು, ಭಡಿಯಾ, ಹಲ್ಬಾ, ಕೌಲ್, ಮರಿಯಾ, ಮಾಲ್ಟೊ ಮತ್ತು ಸಹರಿಯಾ.

ಮಂಡ್ಲಾ, ಧಾರ್, ದಿಂಡೋರಿ, ಬರ್ವಾನಿ, ಝಬುವಾ ಮತ್ತು ಅಲಿರಾಜ್‌ಪುರ ಜಿಲ್ಲೆಗಳು ಅರ್ಧಕ್ಕಿಂತ ಹೆಚ್ಚು ಬುಡಕಟ್ಟು ಜನಸಂಖ್ಯೆಯನ್ನು ಹೊಂದಿವೆ. ಅದರಲ್ಲೂ ಜಬುವಾ ಮತ್ತು ಅಲಿರಾಜ್‌ಪುರಗಳು ಸುಮಾರು ಶೇ.90ರಷ್ಟು ಬುಡಕಟ್ಟು ಜನಸಂಖ್ಯೆಯನ್ನು ಹೊಂದಿವೆ.

ಖಾರ್ಗೋನ್, ಖಾಂಡ್ವಾ, ಬುರ್ಹಾನ್‌ಪುರ್, ಬೇತುಲ್, ಛಿಂದ್ವಾರಾ, ಸಿಯೋನಿ, ಅನುಪ್ಪುರ್, ಉಮಾರಿಯಾ, ಶಹಡೋಲ್ ಮತ್ತು ಸಿಂಗ್ರೌಲಿ ಜಿಲ್ಲೆಗಳಲ್ಲಿ ಶೇ.30ರಿಂದ ಶೇ.50ರಷ್ಟು ಬುಡಕಟ್ಟು ಜನಾಂಗದವರಿದ್ದಾರೆ.

2011ರ ಜನಗಣತಿಯ ಪ್ರಕಾರ, ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಸಂಖ್ಯೆ 1 ಕೋಟಿ 53 ಲಕ್ಷಕ್ಕೂ ಹೆಚ್ಚು, ಅಂದರೆ ಆಗಿನ ಒಟ್ಟು ಜನಸಂಖ್ಯೆಯ ಶೇ.21.1ರಷ್ಟಿತ್ತು. 46 ಮಾನ್ಯತೆ ಪಡೆದ ಪರಿಶಿಷ್ಟ ಪಂಗಡಗಳಿದ್ದವು ಮತ್ತು ಅವುಗಳಲ್ಲಿ ಮೂರನ್ನು ರಾಜ್ಯದಲ್ಲಿ ವಿಶೇಷ ಆದಿಮ ಬುಡಕಟ್ಟು ಗುಂಪುಗಳು ಎಂದು ಗುರುತಿಸಲಾಗಿದೆ.

ಹಿಂದಿ ಈ ರಾಜ್ಯದ ಪ್ರಮುಖ ಭಾಷೆ. ಹಿಂದಿ ಜನಪದ ರೂಪಾಂತರಗಳೂ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟಿವೆ. ಮಾಲ್ವಿ, ನಿಮಾಡಿ, ಬುಂದೇಲಿ, ಬಘೇಲಿ ಇವೆಲ್ಲ ಅಂಥ ಹಿಂದಿ ಆಡುಭಾಷೆಗಳಾಗಿವೆ. ಭಿಲ್, ಗೊಂಡಿ, ಕೊರ್ಕು, ನಿಹಾಲಿ ಮೊದಲಾದ ಹಲವಾರು ಆದಿವಾಸಿ ಭಾಷೆಗಳೂ ಇವೆ.

ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಎರಡು ಶತಮಾನಕ್ಕೂ ಹೆಚ್ಚು ಕಾಲ ಮರಾಠರು ಆಡಳಿತ ನಡೆಸಿದ್ದ ಕಾರಣ ಮರಾಠಿ ಮಾತನಾಡುವವರೂ ಇದ್ದಾರೆ. ಅಲ್ಲಿನ ಮುಸ್ಲಿಮರು ಉರ್ದು ಮಾತನಾಡುತ್ತಾರೆ

ಭೋಪಾಲ್ ಆಸುಪಾಸಿನಲ್ಲಿಯೂ ಅಫ್ಘಾನಿಸ್ತಾನ ಮತ್ತು ವಾಯವ್ಯ ಪಾಕಿಸ್ತಾನದಿಂದ ವಲಸೆಬಂದು ನೆಲೆಸಿರುವ ಸಾಕಷ್ಟು ಬುಡಕಟ್ಟಿನ ಜನರಿದ್ದು, ಅವರು ಸರ್ಯಾಕಿ ಮತ್ತು ಪಶ್ತೋ ಭಾಷೆಯನ್ನು ಮಾತನಾಡುತ್ತಾರೆ.

ರಾಜ್ಯದಲ್ಲಿ ಹಿಂದೂ ಧರ್ಮೀಯರೇ ದೊಡ್ಡ ಪ್ರಮಾಣದಲ್ಲಿ ಅಂದರೆ ಒಟ್ಟು ಜನಸಂಖ್ಯೆಯ ಶೇ.90.9ರಷ್ಟು ಇದ್ದಾರೆ. ಉಳಿದಂತೆ ಮುಸ್ಲಿಮರು, ಜೈನರು, ಬೌದ್ಧರು, ಕ್ರೈಸ್ತರು, ಸಿಖ್ ಮತ್ತಿತರ ಸಮುದಾಯದವರಿದ್ದಾರೆ.

ಬಾಂಧವ್ಘರ್, ಕನ್ಹಾ, ಸತ್ಪುರಾ, ಸಂಜಯ್, ಮಾಧವ್, ವನವಿಹಾರ್, ಪನ್ನಾ, ಪೆಂಚ್, ಫಾಸಿಲ್ ಮತ್ತು ಡೈನೋಸಾರ್ ಈ ಹತ್ತು ರಾಷ್ಟ್ರೀಯ ಉದ್ಯಾನಗಳ ನೆಲೆಯಾಗಿದೆ ಮಧ್ಯಪ್ರದೇಶ. ಸಸ್ಯ ಪಳೆಯುಳಿಕೆಗೆ ಮಾಂಡ್ಲಾ ಪ್ರಸಿದ್ಧವಾಗಿದೆ. ಇವಲ್ಲದೆ ಹಲವಾರು ಪ್ರಾಕೃತಿಕ ಸಂರಕ್ಷಣಾ ತಾಣಗಳಿವೆ.

ರಾಜ್ಯದಲ್ಲಿ 53 ಜಿಲ್ಲೆಗಳಿದ್ದು, 10 ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಆ ವಿಭಾಗಗಳೆಂದರೆ, ಭೋಪಾಲ್, ಚಂಬಲ್, ಗ್ವಾಲಿಯರ್, ಇಂದೋರ್, ಜಬಲ್ಪುರ್, ನರ್ಮದಾಪುರಮ್, ರೇವಾ, ಸಾಗರ್, ಶಹಡೋಲ್, ಉಜ್ಜಯಿನಿ.

ಮಧ್ಯಪ್ರದೇಶ ಈಗಿರುವ ಸ್ವರೂಪಕ್ಕೆ ಬಂದದ್ದು, ರಾಜ್ಯಗಳ ಮರುಸಂಘಟನೆಯ ನಂತರ, 1956ರ ನವೆಂಬರ್ 1ರಂದು.

ಹಿಂದಿನ ಮಧ್ಯಪ್ರದೇಶ (ಮರಾಠಿ ಮಾತನಾಡುವ ಪ್ರದೇಶಗಳನ್ನು ಹೊರತುಪಡಿಸಿ), ಮಧ್ಯ ಭಾರತ, ವಿಂಧ್ಯ ಪ್ರದೇಶ ಮತ್ತು ಭೋಪಾಲ್ ರಾಜ್ಯಗಳನ್ನು ವಿಲೀನಗೊಳಿಸುವ ಮೂಲಕ ಈ ರಾಜ್ಯವನ್ನು ರಚಿಸಲಾಯಿತು.

ಮಧ್ಯ ಭಾರತ, ವಿಂಧ್ಯ ಪ್ರದೇಶ ಮತ್ತು ಭೋಪಾಲ್‌ನ ಶಾಸಕಾಂಗ ಸಭೆಗಳ ಬಲ ಕ್ರಮವಾಗಿ 79, 48 ಮತ್ತು 23 ಇತ್ತು.

ಮರುಸಂಘಟಿತ ಮಧ್ಯಪ್ರದೇಶ ವಿಧಾನಸಭೆಯನ್ನು ರೂಪಿಸಲು ಹಿಂದಿನ ಆ ಎಲ್ಲಾ ನಾಲ್ಕು ರಾಜ್ಯಗಳ ಶಾಸಕಾಂಗ ಸಭೆಗಳನ್ನು ವಿಲೀನಗೊಳಿಸಲಾಯಿತು.

ಈ ಮೊದಲ ವಿಧಾನಸಭೆಯ ಅಧಿಕಾರಾವಧಿ ಬಹಳ ಕಡಿಮೆಯಿತ್ತು ಮತ್ತು ಇದನ್ನು 1957ರ ಮಾರ್ಚ್ 5ರಂದು ವಿಸರ್ಜಿಸಲಾಯಿತು.

ಮಧ್ಯಪ್ರದೇಶ ವಿಧಾನಸಭೆಗೆ ಮೊದಲ ಚುನಾವಣೆ ನಡೆದದ್ದು 1957ರಲ್ಲಿ ಮತ್ತು ಎರಡನೇ ವಿಧಾನಸಭೆಯನ್ನು 1957ರ ಎಪ್ರಿಲ್ 1ರಂದು ರಚಿಸಲಾಯಿತು.

ಆರಂಭದಲ್ಲಿ ವಿಧಾನಸಭೆಯ ಬಲ, ಒಬ್ಬ ನಾಮನಿರ್ದೇಶಿತ ಸದಸ್ಯನನ್ನೂ ಸೇರಿಸಿ 288 ಇತ್ತು, ನಂತರ ಅದನ್ನು 321ಕ್ಕೆ ಹೆಚ್ಚಿಸಲಾಯಿತು. 2000ದ ನವೆಂಬರ್ 1ರಂದು ಮಧ್ಯಪ್ರದೇಶದಿಂದ ಬೇರ್ಪಡಿಸಿ ಹೊಸ ಛತ್ತೀಸ್‌ಗಡ ರಾಜ್ಯ ರಚಿಸಿದ ಬಳಿಕ ಮಧ್ಯಪ್ರದೇಶ ವಿಧಾನಸಭೆಯ ಸಂಖ್ಯಾಬಲ, ಒಬ್ಬ ನಾಮನಿರ್ದೇಶಿತ ಸದಸ್ಯನನ್ನೂ ಸೇರಿಸಿ 231ಕ್ಕೆ ಇಳಿಯಿತು.

ಪ್ರಸಕ್ತ ವಿಧಾನಸಭೆಯ ಬಲ 230. ಈಗಿರುವ ಹದಿನೈದನೇ ವಿಧಾನಸಭೆಯನ್ನು ಡಿಸೆಂಬರ್ 2018ರಲ್ಲಿ ರಚಿಸಲಾಯಿತು.

ಮಧ್ಯಪ್ರದೇಶದ ಮತದಾರರ ಸಂಖ್ಯೆ ಈಗ5 ಕೋಟಿ 60 ಲಕ್ಷಕ್ಕೂ ಹೆಚ್ಚಿದೆ.

ಮಧ್ಯಪ್ರದೇಶ ಲೋಕಸಭೆ ಚುನಾವಣೆಗಳನ್ನು ನೋಡಿಕೊಂಡರೆ ಆರಂಭದಿಂದಲೂ ಕಾಣುವುದು ರಾಜ್ಯದ ಮೇಲೆ ಕಾಂಗ್ರೆಸ್ ಹೊಂದಿದ್ದ ಹಿಡಿತ.

ಮೊದಲ ಚುನಾವಣೆಯಿಂದ 1985ರ ಚುನಾವಣೆಯವರೆಗೂ, ನಡುವೆ ಮೂರು ವರ್ಷ 1977ರಿಂದ 1980ರವರೆಗೆ ಜನತಾ ಪಕ್ಷದ ಅಧಿಕಾರ ಬಂದದ್ದು ಹೊರತುಪಡಿಸಿದರೆ ದಶಕಗಳ ಕಾಲ ಪ್ರಾಬಲ್ಯ ಮೆರೆದದ್ದು ಕಾಂಗ್ರೆಸ್.

ಆ ಬಳಿಕ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಾ, ಮತ್ತೆ ಹಿಡಿಯುತ್ತ ಬಂತಾದರೂ, ಈಚಿನ 20 ವರ್ಷಗಳಲ್ಲಿ ಮಧ್ಯಪ್ರದೇಶವನ್ನು 18 ವರ್ಷ ಬಿಜೆಪಿಯೇ ಆಳಿದೆ ಮತ್ತು ಈಗ ಅಧಿಕಾರದಲ್ಲಿದೆ.

2003ರ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮಣಿಸಿ ಅಧಿಕಾರಕ್ಕೇರಿದ ಬಿಜೆಪಿ, 2008 ಮತ್ತು 2013ರ ಚುನಾವಣೆಗಳಲ್ಲಿಯೂ ಪ್ರಾಬಲ್ಯ ಮೆರೆಯಿತು.

ಆನಂತರ 2018ರ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ಸೋಲಿನ ರುಚಿಯುಣಿಸಿದ್ದರು.

ಭಾರೀ ಜಿದ್ದಾಜಿದ್ದಿಯೇರ್ಪಟ್ಟಿದ್ದ ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಮಲ್‌ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಜಂಟಿ ಹೋರಾಟ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ತಂದುಕೊಡುವಲ್ಲಿ ಯಶಸ್ವಿಯಾಗಿತ್ತು.

ಆ ಚುನಾವಣೆಯಲ್ಲಿನ ಬಲಾಬಲ ಹೀಗಿತ್ತು.

ಕಾಂಗ್ರೆಸ್ 114, ಬಿಜೆಪಿ 109, ಬಿಎಸ್ಪಿ 2, ಎಸ್ಪಿ 1, ಪಕ್ಷೇತರರು 4. ಸರಳ ಬಹುಮತಕ್ಕೆ 116 ಬೇಕಿತ್ತು.

ಇತರ ಪಕ್ಷಗಳ ನೆರವಿನೊಂದಿಗೆ ಕಾಂಗ್ರೆಸ್ ಸರಕಾರ ರಚಿಸಿತು. ಕಮಲ್‌ನಾಥ್ ಮುಖ್ಯಮಂತ್ರಿಯಾದರು.

ಆದರೆ ಆಗ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಈ ಬೆಳವಣಿಗೆಯಿಂದ ಅಸಮಾಧಾನಗೊಂಡರು.

ಇದನ್ನೇ ಬಿಜೆಪಿ ಬಳಸಿಕೊಂಡಿತು.

ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಬೆಂಬಲಿಗ 22 ಶಾಸಕರೊಂದಿಗೆ ಬಿಜೆಪಿ ಸೇರುವುದರೊಂದಿಗೆ ಮಧ್ಯಪ್ರದೇಶ ರಾಜಕಾರಣದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವಂತಾಯಿತು.

22 ಶಾಸಕರ ರಾಜೀನಾಮೆ ಬಳಿಕ 2020ರ ಮಾರ್ಚ್ 20ರಂದು ಕಮಲ್‌ನಾಥ್ ರಾಜೀನಾಮೆ ನೀಡಿದರು.

ಬಳಿಕ ಬಿಜೆಪಿ ಅಧಿಕಾರ ಹಿಡಿಯಿತು. ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಮೇಲೆ ಮುನಿಸಿಕೊಂಡು ಬಿಜೆಪಿಗೆ ಹೋಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಕೇಂದ್ರ ಸಚಿವರಾದರು.

ಆಗಿನಿಂದಲೂ ಅಧಿಕಾರದಲ್ಲಿರುವ ಬಿಜೆಪಿ ಈಗ ಆಡಳಿತ ವಿರೋಧಿ ಅಲೆಯ ಬಿಸಿಗೆ ನಲುಗುತ್ತಲೇ ಇರುವುದು ಮಾತ್ರ ನಿಜ. ಮತ್ತೊಮ್ಮೆ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 17ರಂದು ಮತದಾನ ನಡೆಯಲಿದೆ.

ಗೊತ್ತಿರುವ ಹಾಗೆ, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಬಿಜೆಪಿ ಮತ್ತು ಕಾಂಗ್ರೆಸ್. ನೆರೆಯ ರಾಜ್ಯಗಳಂತೆ, ಸಣ್ಣ ಅಥವಾ ಪ್ರಾದೇಶಿಕ ಪಕ್ಷಗಳು ಮಧ್ಯಪ್ರದೇಶ ಚುನಾವಣೆಯಲ್ಲಿ ಹೆಚ್ಚು ಯಶಸ್ಸನ್ನು ಗಳಿಸಿದ್ದಿಲ್ಲ. ಹಾಗಾಗಿ ಈ ಸಲವೂ ಜಿದ್ದಾಜಿದ್ದಿ ಏರ್ಪಡುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ.

ಬಿಜೆಪಿಯೆದುರಿನ ಸವಾಲುಗಳೇನು?:

ಬಿಜೆಪಿಯೆದುರು ಬೃಹದಾಕಾರದ ಭಯವಾಗಿ ಕಾಡುತ್ತಿರುವುದು ರಾಜ್ಯದಲ್ಲಿ ಜೋರಾಗಿರುವ ಆಡಳಿತ ವಿರೋಧಿ ಅಲೆ.

ಇದರ ಜೊತೆಗೇ, ಕಾಂಗ್ರೆಸ್ ಸರಕಾರವನ್ನು ಬೀಳಿಸಿ ಅಧಿಕಾರ ಹಿಡಿದಿರುವ ಕಾರಣಕ್ಕೆ ಕಾಂಗ್ರೆಸ್ ಪರ ಅನುಕಂಪದ ಅಲೆಯೂ ಇರುವುದು ಬಿಜೆಪಿಗೆ ಕಂಟಕವಾಗುವ ಸಾಧ್ಯತೆ ಹೆಚ್ಚು.

ಇದಕ್ಕಿಂತ ಹೆಚ್ಚಾಗಿ ಬಿಜೆಪಿಯೊಳಗೆ ಈಗ ಶಿವರಾಜ್ ಸಿಂಗ್ ಚೌಹಾಣ್ ಅವರೇ ದೊಡ್ಡ ಸಮಸ್ಯೆಯಾಗಿ ತಲೆದೋರಿರುವುದರ ಬಗ್ಗೆಯೂ ಚರ್ಚೆಗಳು ಎದ್ದಿವೆ.

ಜಾತಿಗಣತಿ ನಡೆಸಬೇಕೆಂಬ ಕಾಂಗ್ರೆಸ್ ಆಗ್ರಹಕ್ಕೆ ಚೌಹಾಣ್ ಬೆಂಬಲವಿದೆಯೆನ್ನಲಾಗುತ್ತಿದೆ. ಇದು ಬಿಜೆಪಿ ಹೈಕಮಾಂಡ್‌ಗೆ ಬಿಸಿ ಮುಟ್ಟಿಸಿದೆ. ಚೌಹಾಣ್ ಮುಂದಿನ ಹೆಜ್ಜೆ ಏನಿರಬಹುದು ಎಂಬ ದಿಗಿಲಿಗೆ ಬಿಜೆಪಿ ಬೀಳಲು ಕಾರಣವಾಗಿದೆ.

ಮೋದಿ ಮತ್ತು ಚೌಹಾಣ್ ನಡುವಿನ ವಿಲಕ್ಷಣ ಸಮರವೊಂದು ಈಗಿನದ್ದಲ್ಲ. ದಶಕಗಳ ಹಿಂದೆ ಮೋದಿಗೆ ಪ್ರತಿಸ್ಪರ್ಧಿಯೆಂಬಂತೆ ಚೌಹಾಣ್ ಅವರನ್ನು ಬಿಜೆಪಿ ನಾಯಕರೇ ಬಿಂಬಿಸಿದ್ದರು. ಆದರೆ ಮೋದಿ ಪ್ರಧಾನಿಯಾದರು. ಅದರ ಪರಿಣಾಮಗಳು ಈಗ ಕಾಣಿಸಿಕೊಳ್ಳತೊಡಗಿವೆ.

ಮುಖ್ಯಮಂತ್ರಿಯಾಗಿರುವ ಚೌಹಾಣ್ ಅವರಿಗೆ ಈ ಸಲದ ಚುನಾವಣೆಯಲ್ಲಿ ಟಿಕೆಟ್ ಸಿಗುವುದೇ ಅನುಮಾನ ಎಂಬಂಥ ಸ್ಥಿತಿ ಉಂಟುಮಾಡಿ, ಕಡೆಗೆ ನಾಲ್ಕನೇ ಪಟ್ಟಿಯಲ್ಲಿ ಅವರ ಹೆಸರು ಪ್ರಕಟಿಸಲಾಗಿದೆ.

ಮಾತ್ರವಲ್ಲ, ನಾಲ್ಕು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಅವರನ್ನು ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸಿಲ್ಲ.

ಹಾಗೆಂದು ಚೌಹಾಣ್ ಅವರನ್ನು ಪೂರ್ತಿಯಾಗಿ ಕಡೆಗಣಿಸುವ ಸ್ಥಿತಿಯಲ್ಲಿಯೂ ಬಿಜೆಪಿ ಇಲ್ಲ. ಯಾಕೆಂದರೆ ಅವರು ಪ್ರಭಾವಿ ಒಬಿಸಿ ನಾಯಕ.

ಈಗಾಗಲೇ ಆಡಳಿತ ವಿರೋಧಿ ಅಲೆ ದೊಡ್ಡಮಟ್ಟದಲ್ಲಿರುವ ಹೊತ್ತಿನಲ್ಲಿ ಒಬಿಸಿ ಬೆಂಬಲವನ್ನೂ ಕಳೆದುಕೊಳ್ಳುವುದು ಬಿಜೆಪಿಗೆ ಬೇಕಿಲ್ಲ.

ಒಬಿಸಿ ಮಧ್ಯಪ್ರದೇಶದಲ್ಲಿ ಬಿಜೆಪಿಯ ಅತಿ ದೊಡ್ಡ ಮತಬ್ಯಾಂಕ್ ಆಗಿದೆ. 2003ರಿಂದ ಮಧ್ಯಪ್ರದೇಶದಲ್ಲಿ ಸತತ ವಿಧಾನಸಭಾ ಚುನಾವಣೆಗಳಲ್ಲಿ ರಾಜ್ಯದ ಜನಸಂಖ್ಯೆಯ ಶೇ.50ಕ್ಕಿಂತ ಹೆಚ್ಚಿರುವ ಒಬಿಸಿ ಸಮುದಾಯದ ದೃಢವಾದ ಬೆಂಬಲವೇ ಬಿಜೆಪಿಯ ಗೆಲುವಿಗೆ ಕಾರಣವಾಗುತ್ತ ಬಂದಿದೆ.

2018ರ ಚುನಾವಣೆಯಲ್ಲಿಯೂ ಒಬಿಸಿ ಸಮುದಾಯ ಬಿಜೆಪಿಗೇ ತನ್ನ ನಿಷ್ಠೆ ತೋರಿಸಿತ್ತಾದರೂ ಸಣ್ಣ ಅಂತರದಿಂದ ಕಾಂಗ್ರೆಸ್ ಎದುರು ಬಿಜೆಪಿ ಸೋಲು ಕಂಡಿತ್ತು.

ಆದರೆ ಈ ಸಲದ ಚುನಾವಣೆಯಲ್ಲಿ ಕಳೆದೆರಡು ದಶಕಗಳಲ್ಲಿಯೇ ಕಂಡಿರದಂಥ ಕಠಿಣ ಸವಾಲು ಬಿಜೆಪಿಗೆ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಮತದಾರರು ಕಾಂಗ್ರೆಸ್ ಕಡೆಗೆ ಹೋಗುವ ಸಾಧ್ಯತೆಗಳು ಹೆಚ್ಚಿವೆ.

ಇದಕ್ಕೆ ಕಾರಣವಾಗಿರುವ ಅಂಶಗಳು ಹೀಗಿವೆ:

1. ಅಲ್ಪಾವಧಿಯ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ 2019ರಲ್ಲಿ ಒಬಿಸಿ ಮೀಸಲಾತಿಯನ್ನು ಸುಗ್ರೀವಾಜ್ಞೆಯ ಮೂಲಕ ಶೇ.27ಕ್ಕೆ ಹೆಚ್ಚಿಸಿತ್ತು.

2.ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದಲ್ಲೂ ಜಾತಿ ಆಧರಿತ ಜನಗಣತಿಯನ್ನು ಕೈಗೊಳ್ಳುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

3.ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರಲು ಮತ್ತು ಒಬಿಸಿ ಮಹಿಳೆಯರಿಗೆ ಅದರೊಳಗೆ ಒಳ ಮೀಸಲಾತಿ ನೀಡಲು ಕಾಂಗ್ರೆಸ್ ಒತ್ತಾಯಿಸಿದೆ.

4.ಬಿಜೆಪಿಯ ಪ್ರಮುಖ ಒಬಿಸಿ ನಾಯಕಿ ಮತ್ತು ಮಧ್ಯಪ್ರದೇಶದ ಬಿಜೆಪಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದ ಉಮಾಭಾರತಿ, ಪಕ್ಷ ತಮ್ಮನ್ನು ಕಡೆಗಣಿಸಿರುವುದಕ್ಕೆ ಬೇಸರಗೊಂಡಿರುವುದು.

ಇದಲ್ಲದೆ, ಆದಿವಾಸಿಗಳನ್ನು, ಹಿಂದುಳಿದವರನ್ನು ಬಿಜೆಪಿ ಕಡೆಗಣಿಸುತ್ತಿರುವುದರ ಕುರಿತ ಕಾಂಗ್ರೆಸ್ ಆರೋಪಗಳಿಗೆ ಬಿಜೆಪಿ ಬಳಿ ಸಮಾಧಾನಕರ ಉತ್ತರ ಇಲ್ಲವಾಗಿದೆ.

ವಿಚಿತ್ರ ತಲ್ಲಣ ಎದುರಿಸುತ್ತಿರುವ ಬಿಜೆಪಿ, ಆ ಕಾರಣದಿಂದಲೇ ಹಲವೆಡೆ ಕೇಂದ್ರ ಸಚಿವರನ್ನು ಹಾಗೂ ಸಂಸದರನ್ನು ಕಣಕ್ಕೆ ಇಳಿಸುತ್ತಿದೆ.

ಮೋದಿ ಕಳೆದ ಏಳು ತಿಂಗಳಲ್ಲಿ ಏಳು ರ್ಯಾಲಿಗಳಲ್ಲಿ ಭಾಷಣ ಮಾಡಿದ್ದಾರೆ. ಹಲವು ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನಿಡಿದ್ದಾರೆ.

ಕಾಂಗ್ರೆಸ್ ರಣತಂತ್ರವೇನು?

ಇನ್ನೊಂದೆಡೆ ಕಾಂಗ್ರೆಸ್, ಬಿಜೆಪಿಗೆ ಪೈಪೋಟಿಯಾಗಿ ಕರ್ನಾಟಕದ ಮಾದರಿಯಲ್ಲಿಯೇ ಗ್ಯಾರಂಟಿಗಳ ಘೋಷಣೆಯನ್ನೂ ಮಾಡಿದೆ.

ಪ್ರಚಾರದ ನೇತೃತ್ವವನ್ನು ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ವಹಿಸಿದ್ದಾರೆ. ಅವರಿಬ್ಬರಲ್ಲದೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಹಲವು ರ್ಯಾಲಿಗಳಲ್ಲಿ ಭಾಗವಹಿಸಿದ್ದಾರೆ.

ಕಮಲ್‌ನಾಥ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ.

ರಾಹುಲ್ ಗಾಂಧಿಯವರ ‘ಭಾರತ್ ಜೋಡೊ’ ಯಾತ್ರೆ ಮತ್ತು ‘ಇಂಡಿಯಾ’ ಒಕ್ಕೂಟದ ಬಲ ಕೂಡ ಕಾಂಗ್ರೆಸ್ ಪಾಲಿಗೆ ಒದಗಿ ಬರಲಿದೆ ಎನ್ನಲಾಗುತ್ತಿದೆ.

ಹಿಂದೂ ಮತಗಳನ್ನು ಸೆಳೆಯುವ ತಂತ್ರಗಾರಿಕೆಯನ್ನು ಕೂಡ ಕಮಲ್‌ನಾಥ್ ಪ್ರಯೋಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ, ಕಾಂಗ್ರೆಸ್‌ನ ಸಾಫ್ಟ್ ಹಿಂದುತ್ವ ತಂತ್ರಗಾರಿಕೆ ಕೂಡ ಗುಟ್ಟಾಗಿಯೇನೂ ಇಲ್ಲ. ಈಗಾಗಲೇ ಅದು ಜನರಿಗೆ ಗಂಗಾಜಲ ವಿತರಿಸುವ ವಾಗ್ದಾನ ಮಾಡಿದೆ ಮತ್ತು ಈ ಅಭಿಯಾನವನ್ನು ನಡೆಸಲು ಪಕ್ಷದ ಒಬಿಸಿ ಘಟಕವೇ ಮುಂದಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಹರೀಶ್ ಎಚ್.ಕೆ.

contributor

Similar News