‘‘ನಾನೇಕೆ ಹಮಾಸ್ ಅನ್ನು ಮಾತ್ರ ಖಂಡಿಸುವುದಿಲ್ಲ!?’’

ಯಾನಿಸ್ ವಾರೊಫಾಕಿಸ್ ಅವರು ಗ್ರೀಸಿನ ಮಾಜಿ ಹಣಕಾಸು ಮಂತ್ರಿ, ಇಕನಾಮಿಕ್ಸ್ ಪ್ರೊಫೆಸರ್ ಮತ್ತು ಡೆಮಾಕ್ರಸಿ ಇನ್ ಯುರೋಪ್ (DiEM-25) ಚಳವಳಿಯ ನಿರ್ದೇಶಕರು. ಹಮಾಸ್ ದಾಳಿಯ ನಂತರ ಅವರನ್ನು ಸಂದರ್ಶನ ಮಾಡಿದ ಪತ್ರಿಕೆಗೆ ಅವರು ‘‘ನಾನು ಹಮಾಸ್ ಮಾಡಿದ್ದನ್ನು ಒಪ್ಪುವುದಿಲ್ಲ. ಆದರೆ ಇಸ್ರೇಲ್ ತನ್ನ ಪ್ರಭುತ್ವ ಭಯೋತ್ಪಾದನೆ ಮತ್ತು ಜನಾಂಗೀಯ ಭೇದ ನೀತಿಗಳಿಂದ ಫೆಲೆಸ್ತೀನಿಯರಲ್ಲಿ ಎಂತಹ ಹತಾಶ ಭಾವನೆಯನ್ನು ಹುಟ್ಟುಹಾಕಿದೆ ಎಂದು ಅರ್ಥಮಾಡಿಕೊಳ್ಳದೆ ಹಮಾಸ್‌ನ ಹತಾಶ ಕೃತ್ಯವನ್ನು ಖಂಡಿಸಲು ನನ್ನನ್ನು ಒತ್ತಾಯಿಸಬೇಡಿ’’ ಎಂದು ಘೋಷಿಸಿದ್ದರು. ಇದರಿಂದ ಅವರು ಯುರೋಪಿನಲ್ಲಿ ಸಾಕಷ್ಟು ಮಾಧ್ಯಮ ದಾಳಿಗೆ ಒಳಗಾದರು. ಹಲವಾರು ಬಲಪಂಥೀಯ ಸಂಘಟನೆಗಳು ಅವರನ್ನು ಖಂಡಿಸಿದವು. ಅವರ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಒತ್ತಾಯ ಹೇರಿದರು. ಅವೆಲ್ಲ ಆದ ನಂತರವೂ ಯಾನಿಸ್ ಅವರು ಈ ಲೇಖನವನ್ನು ‘ಡೆಮಾಕ್ರಸಿ ಇನ್ ಯುರೋಪ್’ ವೆಬ್ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

Update: 2023-10-20 06:21 GMT

Photo: PTI

ನಾವು ಈಗ ನೈತಿಕ ದಿವಾಳಿತನದ ಹಾಗೂ ಅಮಾನವೀಯ ಬರ್ಬರತೆಯ ಪಾತಳಿಯನ್ನು ತಲುಪುವ ಮನುಷ್ಯ ಸಾಮರ್ಥ್ಯಗಳ ಮತ್ತೊಂದು ಉದಾಹರಣೆಯ ಬಗ್ಗೆ ಮಾತನಾಡುತ್ತಿದ್ದೇವೆ. ಈಗ ತಾನೇ ಅತ್ಯಂತ ಹೀನಾಯವಾದದ್ದನ್ನು ಎಸಗಿಬಿಟ್ಟೆವು ಎಂದು ಯೋಚಿಸುತ್ತಿರುವಷ್ಟರಲ್ಲಿ ಅದಕ್ಕಿಂತ ಹೀನಾತಿಹೀನವಾದದ್ದನ್ನು ಮಾಡಿ ನಮ್ಮ ಸಾಮರ್ಥ್ಯದ ಬಗ್ಗೆ ನಾವೇ ಅಚ್ಚರಿಗೊಳ್ಳುತ್ತಿದ್ದೇವೆೆ. ಇಲ್ಲಿ ಒತ್ತಿರಬೇಕಾದ್ದು ‘ನಾವು’ ಎಂಬ ಪದದ ಮೇಲೆ. ಇಸ್ರೇಲ್-ಫೆಲೆಸ್ತೀನ್‌ನಂತಹ ಧ್ರುವೀಕೃತ ಹಿಂಸಾತ್ಮಕ ಸಂಘರ್ಷಗಳಲ್ಲಿ ಯಾವುದಾದರೂ ಒಂದು ಬಣದ ಪರವಾದ ನಿಲುವು ತೆಗೆದುಕೊಳ್ಳುವುದು ಮನುಷ್ಯ ಸಹಜವಾದ ಸಂಗತಿಯೇ. ನಾನಿಲ್ಲಿ ಪಕ್ಷಪಾತಿ ನಿಲುವನ್ನು ತೆಗೆದುಕೊಳ್ಳಲು ಹೋಗುವುದಿಲ್ಲ. ಆದರೆ ಈ ದುರಂತದ ಪ್ರಮಾಣ, ವಿಸ್ತಾರ ಮತ್ತು ದೀರ್ಘಕಾಲೀನತೆಗಳು ನಮ್ಮ ಗ್ರಹಿಕೆಯನ್ನು ಪ್ರಭಾವಿಸಬೇಕು ಮತ್ತು ಅನಾವರಣಗೊಳ್ಳುತ್ತಿರುವ ಬೀಭತ್ಸ ವಿದ್ಯಮಾನಗಳಲ್ಲಿ ನಮ್ಮ ಸಾಮೂಹಿಕ ಜವಾಬ್ದಾರಿ ಎಷ್ಟು ಎಂದು ನಾವು ಚಿಂತಿಸಲು ಪ್ರಾರಂಭಿಸಬೇಕು.

ನಿಮಗೆ ತಿಳಿದಿರುವಂತೆ ಹಮಾಸ್ ದಾಳಿಯ ತರುಣದಲ್ಲಿ ನಾನು ಕೊಟ್ಟ ಸಂದರ್ಶನ ಒಂದರಲ್ಲಿ ನಾನು ಹಮಾಸ್ ಅನ್ನು ಖಂಡಿಸಲು ನಿರಾಕರಿಸಿದ್ದೆ. ಸಹಜವಾಗಿಯೇ ಅದರಿಂದಾಗಿ ನನ್ನ ಮೇಲೆ ಟೀಕೆಯ ಹೆಸರಲ್ಲಿ ಬೈಗುಳದ ಮಳೆಯನ್ನೇ ಸುರಿಸಲಾಯಿತು. ಗಾಝಾ ಬೇಲಿಯಿಂದ ಕೆಲವೇ ಕಿ.ಮೀ. ದೂರದಲ್ಲಿ ಇಸ್ರೇಲಿ ಪಟ್ಟಣದಲ್ಲಿ ನಡೆಯುತ್ತಿದ್ದ ಸಂಗೀತದ ಹಬ್ಬದ ಮೇಲೆ ದಾಳಿ ಮಾಡಿದ ಹಮಾಸಿಗರು ಹತ್ತಾರು ಜನರನ್ನು ಕೊಂದು ಹಾಕಿದರು. ಅಕಸ್ಮಾತ್ ನಾನೂ ಅದರಲ್ಲಿ ಭಾಗವಹಿಸಿದ್ದರೆ ನನ್ನನ್ನು ಸಹ ಕೊಂದು ಹಾಕುತ್ತಿದ್ದರು ಎಂಬುದರ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ ಅಥವಾ ನನ್ನನ್ನು ಒತ್ತೆಯಾಳಾಗಿ ಗಾಝಾ ಒಳಗೆ ಕರೆದೊಯ್ಯುತ್ತಿದ್ದರು. ಆ ದೃಶ್ಯಗಳು ಭಯಾನಕವಾಗಿವೆ. ಅದಕ್ಕೆ ಯಾವ ಸಮರ್ಥನೆಯೂ ಇಲ್ಲ. ಆದರೂ ನಾನು ಇಸ್ರೇಲಿನ ಮೇಲೆ ಹಮಾಸಿನ ದಾಳಿಯನ್ನು ಖಂಡಿಸುವುದಿಲ್ಲ.

ಏಕೆಂದರೆ, ಪ್ರತಿಯೊಂದು ಮಾನವ ಜೀವಿಯ ಪ್ರಾಣವೂ ಅಮೂಲ್ಯವಾದದ್ದು ಎಂದು ಭಾವಿಸುವ, ಕತ್ತರಿಸಿ ಹೋದ ಪ್ರತೀ ಕಾಲುಗಳು, ಕುರುಡಾದ ಪ್ರತೀ ಕಣ್ಣುಗಳು, ಮುರಿದು ಹೋದ ಬೆರಳುಗಳು ಸಹ ಮಾನವೀಯ ದುರಂತವೆಂದು ಭಾವಿಸಿ ಅದರಲ್ಲಿ ನಮ್ಮ ಜವಾಬ್ದಾರಿ ಎಷ್ಟು ಎಂದು ಯೋಚಿಸುವಂತಹ ನಮ್ಮ ನಿಮ್ಮಂಥವರಿಂದ ಹಮಾಸ್ ನಡೆಸಿದ ಕೊಲೆಗಳನ್ನು ಮಾತ್ರ ಖಂಡಿಸಬೇಕೆಂದು ಬಯಸುವವರು ಇಸ್ರೇಲ್ ಪ್ರಭುತ್ವದ ಪರವಾದ ನಿಲುವನ್ನು ತಾಳಬೇಕೆಂದು ನಿರೀಕ್ಷಿಸುತ್ತಾರೆ. ಆದರೆ ಅದನ್ನು ನಾನು ಎಂದಿಗೂ ಮಾಡುವುದಿಲ್ಲ. ಹಾಗಿದ್ದಲ್ಲಿ ಹಮಾಸ್ ಅನ್ನು ಮಾತ್ರ ಖಂಡಿಸಬೇಕೆಂದು ನಿರೀಕ್ಷಿಸುವ ಈ ಜನರು ಯಾರು?

ಒಂದು ವಿಷಯ ಸ್ಪಷ್ಟವಾಗಿರಲಿ. ಇದೇ ಜನರೇ ಇಸ್ರೇಲ್ ಮತ್ತು ಇಸ್ರೇಲಿ ಸೈನ್ಯ, ಇಸ್ರೇಲಿ ಸೈನಿಕರು ನಿರಾಯುಧ ಪತ್ರಕರ್ತರನ್ನು ಕೊಂದಾಗ, ನರ್ಸುಗಳನ್ನು ಕೊಂದಾಗ, ವೈದ್ಯರನ್ನು ಮತ್ತು ಮಕ್ಕಳನ್ನು ಕೊಂದಾಗ ತಮ್ಮ ಮುಖವನ್ನು ಬೇರೆಡೆ ತಿರುಗಿಸಿರುತ್ತಾರೆ. ಇಂತಹವರಿಗೆ ಇಸ್ರೇಲಿಗಳು ಬಲಿಯಾದಾಗ ಮಾತ್ರ ಅಂತರ್‌ರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆ ಮತ್ತು ಅದರ ಸನ್ನದುಗಳು, ಯುದ್ಧಾಪರಾಧಗಳ ಬಗ್ಗೆ ಜಿನೀವಾ ಸಮ್ಮೇಳನದ ಕರಾರುಗಳು ನೆನಪಿಗೆ ಬರುತ್ತವೆ.

ಅದೇಕೋ ಏನೋ ಬಲಿಯಾದವರು ಫೆಲೆಸ್ತೀನಿಯರು ಆದರೆ ಮಾತ್ರ ವಿಶ್ವಸಂಸ್ಥೆಯ ಸನ್ನದುಗಳು, ಅಂತರ್‌ರಾಷ್ಟ್ರೀಯ ಕಾನೂನು, ಜಿನೀವಾ ಸಮ್ಮೇಳನ ಯಾವುವೂ ಅವರಿಗೆ ನೆನಪಿಗೇ ಬರುವುದಿಲ್ಲ.

ಆಕ್ರೋಶಗಳ ಆಯ್ಕೆ

ಹಮಾಸ್ ಅನ್ನು ಖಂಡಿಸಬೇಕೆಂದು ಒತ್ತಾಯಿಸುತ್ತಿರುವವರು ವಾಸ್ತವವಾಗಿ ಮಕ್ಕಳು ಮತ್ತು ಮಹಿಳೆಯರು ಬಲಿಯಾಗಿರುವುದರಿಂದ ಅಥವಾ ಒತ್ತೆಯಾಳುಗಳಾಗಿರುವುದರಿಂದ ಆಕ್ರೋಶಿತಗೊಂಡಿದ್ದಾರೆ. ಹೌದು.. ಅದರ ಬಗ್ಗೆ ನಾನು ಸಹ ಆಕ್ರೋಶಿತಗೊಂಡಿದ್ದೇನೆ.

ಆದರೆ ಇಸ್ರೇಲಿ ಸೆರೆಮನೆಗಳಲ್ಲಿ ವಿನಾಕಾರಣ ಮಹಿಳೆಯರು ಮತ್ತು ಮಕ್ಕಳನ್ನು ಸೆರೆಯಲ್ಲಿಟ್ಟುಕೊಂಡಿರುವುದರ ಬಗ್ಗೆ ಅವರಿಗೇಕೆ ಆಕ್ರೋಶ ಹುಟ್ಟುವುದಿಲ್ಲ? ದಕ್ಷಿಣ ಆಫ್ರಿಕಾದಲ್ಲಿ ಬೋಯರ್‌ಗಳು ಜಾರಿ ಮಾಡಿದ ವರ್ಣಭೇದ ನೀತಿಗಿಂತ ಕ್ರೂರವಾದ ರೀತಿಯಲ್ಲಿ ಇಸ್ರೇಲಿ ಜನಾಂಗೀಯ ಸರಕಾರ ವೆಸ್ಟ್ ಬ್ಯಾಂಕಿನಲ್ಲಿರುವ ಫೆಲೆಸ್ತೀನಿ ಜನರನ್ನು ಪ್ರತೀ ಹಗಲು ಮತ್ತು ಪ್ರತೀ ರಾತ್ರಿ ಜನಾಂಗೀಯ ದಮನ ಮತ್ತು ಅಪಮಾನಗಳಿಗೆ ಗುರಿಮಾಡುತ್ತಿದ್ದರೂ ಇದೇ ಜನರೇ ಒಂದೋ ಅದನ್ನು ಬೆಂಬಲಿಸುತ್ತಾರೆ ಅಥವಾ ಮೌನವಾಗಿ ಅಂಗೀಕರಿಸುತ್ತಾರೆ.

ಇದನ್ನು ಹೇಳುತ್ತಿರುವುದು ನಾನು ಮಾತ್ರವಲ್ಲ. ಇಸ್ರೇಲಿನ ಬೇಹುಗಾರಿಕಾ ಸಂಸ್ಥೆಯಾದ ಮೊಸಾದಿನ ಮಾಜಿ ನಿರ್ದೇಶಕ ತಮ್ಮಿರ್ ಪಾರ್ಡೊ, ಇಸ್ರೇಲಿ ಸಂಸತ್ತಿನ ಮಾಜಿ ಸ್ಪೀಕರ್ ಅಬ್ರಹಾಂ ಬರ್ಗ್ ಅವರುಗಳೇ ಒಪ್ಪಿಕೊಂಡಿದ್ದಾರೆ. ಇಸ್ರೇಲಿನ ಪ್ರಖ್ಯಾತ ಇತಿಹಾಸಕಾರ ಬೆನ್ನಿ ಮೊರಿಸ್ ಅವರನ್ನೂ ಒಳಗೊಂಡಂತೆ ಸುಮಾರು 2,000 ಇಸ್ರೇಲಿನ ಗಣ್ಯ ಮಾನ್ಯರು, ಅವರಲ್ಲಿ ಕೆಲವರು ಅಮೆರಿಕದ ನಾಗರಿಕತ್ವ ಹೊಂದಿರುವವರು, ಫೆಲೆಸ್ತೀನಿಯರು ಜನಾಂಗೀಯ ಭೇದ ಮಾಡುವ ಆಳ್ವಿಕೆಯಡಿ ಬದುಕುತ್ತಿದ್ದಾರೆ ಎಂಬ ಘೋಷಣೆಗೆ ಸಹಿ ಹಾಕಿದ್ದಾರೆ. ಹಮಾಸ್ ಅನ್ನು ಮಾತ್ರ ಖಂಡಿಸಬೇಕೆಂದು ಆಗ್ರಹಿಸುತ್ತಿರುವವರು ಫೆಲೆಸ್ತೀನ್ ಪ್ರಾಂತದಲ್ಲಿ ಪ್ರತಿನಿತ್ಯ ಕೊಲೆಗಡುಕ ಇಸ್ರೇಲಿ ನೆಲಸಿಗರು ಮನಂಬಂತೆ ಫೆಲೆಸ್ತೀನಿಯರನ್ನು ಕೊಂದುಹಾಕುತ್ತಿರುವ ಬಗ್ಗೆ ನಾವು ಕುರುಡಾಗಿರಬೇಕೆಂದು ನಿರೀಕ್ಷಿಸುತ್ತಾರೆ.

ವೆಸ್ಟ್ ಬ್ಯಾಂಕಿನ ಫೆಲೆಸ್ತೀನಿ ಪ್ರಾಂತಗಳಲ್ಲಿ ಇಸ್ರೇಲಿ ಆಡಳಿತವು ಪೂರ್ವ ಜೆರುಸೆಲೇಮಿನ ನೆರೆಹೊರೆಯಲ್ಲಿರುವ ಮೂಲನಿವಾಸಿ ಫೆಲೆಸ್ತೀನಿಯರನ್ನು ಅಕ್ರಮವಾಗಿ ಹೊರಹಾಕುತ್ತಿದೆ ಮತ್ತು ಅವರ ಮನೆಗಳನ್ನು ಇಸ್ರೇಲಿಗೆ ಇದೀಗ ತಾನೆ ಹೊಸದಾಗಿ ಬಂದು ನೆಲೆಸುತ್ತಿರುವವರಿಗೆ ಕೊಡುತ್ತಿದೆ. ಏಕೆಂದರೆ ಅವರ ಪ್ರಕಾರ ಯೆಹೂದಿಗಳಿಗೆ ಮಾತ್ರ ಮರಳಿ ತಮ್ಮ ತಾಯ್ನೆಲಕ್ಕೆ ವಾಪಸ್ ಬರುವ ಹಕ್ಕಿದೆ, ಫೆಲೆಸ್ತೀನಿಯರಿಗಲ್ಲ. ಹಮಾಸ್ ಅನ್ನು ಖಂಡಿಸಬೇಕೆಂದು ಆಗ್ರಹಿಸುವವರು ಈ ಯಾವ ಅನ್ಯಾಯಗಳ ಬಗ್ಗೆಯೂ ಮಾತಾಡುವುದಿಲ್ಲ. ಇದೇ ಜನರೇ ಗಾಝಾ ಮೇಲೆ ಇಸ್ರೇಲ್ ಘೋಷಿಸಿರುವ ಏಕಪಕ್ಷೀಯ ಯುದ್ಧವನ್ನು ಅವಿಮರ್ಶಾತ್ಮಕವಾಗಿ ಒಪ್ಪಿಕೊಳ್ಳುತ್ತಾರೆ.

ಅಂದಹಾಗೆ ಗಾಝಾದಲ್ಲಿರುವುದು ಒಂದು ರಾಷ್ಟ್ರಪ್ರಭುತ್ವವೂ ಅಲ್ಲ. ಗಾಝಾದಲ್ಲಿನ ಫೆಲೆಸ್ತೀನಿಯರು ತಮಗಾಗಿ ಒಂದು ರಾಷ್ಟ್ರ ಪ್ರಭುತ್ವವನ್ನು ಹೊಂದುವುದಕ್ಕೂ ಇಸ್ರೇಲ್ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಇದು ಮತ್ತೊಂದು ರಾಷ್ಟ್ರ ಪ್ರಭುತ್ವದ ಮೇಲೆ ಘೋಷಿಸಿರುವ ಯುದ್ಧವಲ್ಲ. ಬದಲಿಗೆ ಯಾವ ಇಸ್ರೇಲಿ ಸೇನೆಯೇ ದಶಕಗಳಿಂದ ಭಯಭೀತಗೊಳಿಸಿ, ಹಸಿವಿನಿಂದ ನರಳುವಂತೆ ಮಾಡುತ್ತಾ ಬಂದಿದೆಯೋ ಅದೇ ಆಕ್ರಮಿತ ಜನರ ಮೇಲೆ ಇಸ್ರೇಲಿ ಸೇನೆ ಘೋಷಿಸಿರುವ ಯುದ್ಧವಾಗಿದೆ.

ಹಮಾಸ್ ದಾಳಿಯನ್ನು ಮಾತ್ರ ಖಂಡಿಸ ಬೇಕೆಂದು ಬಯಸುವ ಇದೇ ಜನರು ಗಾಝಾ ಪಟ್ಟಿಯಲ್ಲಿರುವ ಸಾಮಾನ್ಯ ಜನರಿಗೆ ಆಹಾರ, ವಿದ್ಯುತ್, ಇಂಧನ ಎಲ್ಲವನ್ನು ನಿಲ್ಲಿಸಿ ಅಲ್ಲಿರುವ 20 ಲಕ್ಷಕ್ಕೂ ಹೆಚ್ಚು ಫೆಲೆಸ್ತೀನಿಯರು ನಿಧಾನವಾಗಿ ಸಾಯುವಂತೆ ಮಾಡಿದರೂ ಅದು ಇಸ್ರೇಲಿ ಜನಾಂಗೀಯ ದುರಭಿಮಾನಿ ಸರಕಾರದ ನ್ಯಾಯಬದ್ಧ ಕ್ರಮವೆಂದು ಭಾವಿಸುತ್ತಾರೆ.

ಜಗತ್ತಿನ ಅತಿದೊಡ್ಡ ಬಯಲು ಕಾರಾಗೃ

ಹಮಾಸ್‌ನ ದಾಳಿಯನ್ನು ಮಾತ್ರ ಖಂಡಿಸ ಬೇಕೆಂದು ಬಯಸುವ ಈ ಜನರೇ ಗಾಝಾ ಫೆಲೆಸ್ತೀನಿಯರು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಜಗತ್ತಿನ ಅತಿ ದೊಡ್ಡ ಬಯಲು ಕಾರಾಗೃಹಕ್ಕೆ ಸದ್ದಿಲ್ಲದೆ ಹೋಗಿ ಬಂದಿಯಾಗಬೇಕೆಂದು ಬಯಸುತ್ತಾರೆ. ಹಿಂದಿರುಗಿ ಏನು ಮಾಡಬೇಕು? ಗಾಝಾಗೆ ಯಾವುದಕ್ಕಾಗಿ ಹಿಂದಿರುಗಬೇಕು? ಅಲ್ಲಿ ಹೋಗಿ ಜೀವನ ನಡೆಸಬಹುದೇ?

ಗಾಝಾದಲ್ಲಿ ನೀವು ಬದುಕಲು ಸಾಧ್ಯವಿಲ್ಲ. ನೀವು ಅಲ್ಲಿ ಜೀವಂತ ಶವಗಳಾಗಿ ಇರಬಹುದಷ್ಟೆ. ಗಾಝಾವನ್ನು ಸುತ್ತುವರಿದು ಬಾಂಬಿನ ದಾಳಿ ಮಾಡುವುದಕ್ಕೆ ಮುಂಚೆಯೇ ಅಲ್ಲಿನ ಪರಿಸ್ಥಿತಿ ಹಾಗಿತ್ತು. ತಮ್ಮನ್ನು ದಶಕಗಳಿಂದ ಸುತ್ತುವರಿದು ಅನ್ನಾಹಾರಗಳನ್ನು ಕೊಡದೆ, ಬೇಕೆಂದಾಗ ಬೇಕಷ್ಟು ಜನರನ್ನು ಕೊಂದು ಹಾಕುತ್ತಿದ್ದ ಸೈನ್ಯವು ತಮ್ಮನ್ನು ಸುತ್ತುವರಿದಿರುವಾಗ ದಮನ ಹಾಗೂ ಅಪಮಾನಗಳಿಗೆ ಯಾವುದೇ ಪ್ರತಿಕ್ರಿಯೆ ತೋರದೆ, ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು, ನಿಧಾನವಾಗಿ ಸಾಯಬೇಕೆಂದು ಒತ್ತಾಯಿಸಲಾಗುತ್ತಿದೆ. ಅವರು ವಿಭಿನ್ನ ಬಗೆಯ ಶಸ್ತ್ರಾಸ್ತ್ರಗಳನ್ನು ಫೆಲೆಸ್ತೀನಿಯರ ಮೇಲೆ ಪ್ರಯೋಗಿಸುತ್ತಾರೆ. ಇದನ್ನು ಅವರು ದಶಕಗಳಿಂದ ಮಾಡಿಕೊಂಡು ಬಂದಿದ್ದಾರೆ.

ಹಮಾಸ್ ಮಾಡಿರುವುದು ಘನಘೋರ ಕೃತ್ಯ. ಅದರಲ್ಲಿ ಅನುಮಾನವಿಲ್ಲ. ಆದರೆ ನಾವು ಹಮಾಸ್ ಅನ್ನು ಮಾತ್ರ ಖಂಡಿಸುವುದಿಲ್ಲ. ಒಬ್ಬ ನಾಸ್ತಿಕನಾದ ನಾನು, ಒಬ್ಬ ಮಹಿಳಾವಾದಿ ಯಾದ ನಾನು, ಮೂಲಭೂತವಾದದ ವಿರೋಧಿಯಾದ ನಾನು, ಯೆಹೂದಿ ದ್ವೇಷದ ವಿರುದ್ಧ ಯೆಹೂದಿಗಳು ನಡೆಸುತ್ತಿರುವ ಸುದೀರ್ಘ ಹೋರಾಟಗಳನ್ನು ಸಂಪೂರ್ಣವಾಗಿ ಬೆಂಬಲಿಸುವ ನಾನು ಗಾಝಾದಲ್ಲಿದ್ದರೆ ಅವರ ಹಿಟ್ ಲಿಸ್ಟಿನಲ್ಲಿ ಇರುತ್ತಿದ್ದೆ ಎಂಬುದರಲ್ಲಿ ಅನುಮಾನವಿಲ್ಲ.

ಆದರೂ ನಾನು ಕೇವಲ ಹಮಾಸ್ ಅನ್ನು ಮಾತ್ರ ಖಂಡಿಸಲಾರೆ. ಅದೇ ರೀತಿ ಉಕ್ರೇನಿಯನ್ನರು, ಸಿರಿಯನ್ನರು, ಯೆಮಿನಿಯನ್ನರು, ತಮ್ಮ ತಾಯ್ನೆಲದ ಮೇಲೆ ವಿದೇಶಿ ಆಕ್ರಮಣ ಪಡೆಗಳು ನಡೆಸುತ್ತಿರುವ ದಾಳಿಯನ್ನು ಪ್ರತಿರೋಧಿಸುವುದನ್ನು ಸಹ ನಾನು ಖಂಡಿಸಲಾರೆ. ಅವರ ಹಲವಾರು ನಿಲುವುಗಳ ಬಗ್ಗೆ ನನಗೆ ಮತಭೇದವಿದ್ದರೂ, ತಮ್ಮ ಜೀವ, ಜೀವನ, ತಮ್ಮ ನೆಲ ಮತು ಹಳ್ಳಿಗಳನ್ನು, ನೆರೆಹೊರೆಯನ್ನು ರಕ್ಷಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕೆಲವು ಬೀಭತ್ಸ ಕೃತ್ಯಗಳನ್ನು ಎಸಗಿದರೂ.. ನಾನು ಅವರನ್ನು ಖಂಡಿಸಲಾರೆ.

ಆದ್ದರಿಂದ ಕೆಲವು ವಿಷಯಗಳಲ್ಲಿ ಅತ್ಯಂತ ಸ್ಪಷ್ಟವಾಗಿರೋಣ. ದುರುದ್ದೇಶಪೂರ್ವಕ ಕೊಲೆಗಳನ್ನು, ಅದರಲ್ಲೂ ನಿರಾಯುಧ ನಾಗರಿಕರ ಕೊಲೆಗಳನ್ನು, ಅವರ ಮೇಲೆ ನಡೆಸುವ ಅತ್ಯಾಚಾರಗಳನ್ನು, ಯಾರೂ ಸಮರ್ಥಿಸ ಲಾಗುವುದಿಲ್ಲ. ಪ್ರತಿಯೊಬ್ಬ ಮನುಷ್ಯರ ಸಾವೂ ಕೂಡ ಒಂದು ದುರಂತವೇ. ಇಂತಹ ಎಲ್ಲಾ ಅಪರಾಧಗಳು ಸಂಭವಿಸುವಂತಹ ಸಂದರ್ಭವು ಸೃಷ್ಟಿಯಗುವುದರಲ್ಲಿ, ಅದರಲ್ಲೂ ಜನಾಂಗೀಯ ಭೇದದಂತಹ ಮಹಾಪರಾಧ ಮಾಡುವ ಸಂದರ್ಭವನ್ನು ಸೃಷ್ಟಿ ಮಾಡಿದ ಇಸ್ರೇಲಿಗೆ ಬೆಂಬಲಿಸುತ್ತಾ ಬಂದ ನಮ್ಮ ಸರಕಾರಗಳನ್ನು ಮೌನವಾಗಿ ನೋಡುತ್ತಾ ನಿಂತ ಅಮೆರಿಕದ ಮತ್ತು ಯುರೋಪಿನ ನಾಗರಿಕರಾದ ನಮ್ಮೆಲ್ಲರ ಜವಾಬ್ದಾರಿಯೂ ಇದೆ.

ಹೀಗಾಗಿ ಇಂತಹ ದಾರುಣ ಸಂದರ್ಭದ ಸೃಷ್ಟಿಗೆ ನಾನೂ ಕಾರಣ ಎಂದು ನಾನು ಪರಿಗಣಿಸುತ್ತೇನೆ.ಕಳೆದ ಹಲವಾರು ದಶಕಗಳಿಂದ ನಾನು ಫೆಲೆಸ್ತೀನನ್ನು ಬೆಂಬಲಿಸಲು ಏನೆಲ್ಲಾ ಮಾಡಬಹುದೋ ಅವೆಲ್ಲವನ್ನೂ ಮಾಡುತ್ತಾ ಬಂದಿದ್ದೇನೆ. ಖಂಡಿತವಾಗಿಯೂ ಎಷ್ಟು ಮಾಡಬೇಕಿತ್ತೋ ಅಷ್ಟು ಮಾಡಿಲ್ಲ. ಹೀಗಾಗಿ ಈಗಲಾದರೂ ಸರಿಯಾಗಿ ಹೊಣೆಯನ್ನು ಹೊತ್ತುಕೊಳ್ಳೋಣವೇ? ಫೆಲೆಸ್ತೀನ್‌ನಲ್ಲಿ ವಾಸಿಸುತ್ತಿರುವ ಯೆಹೂದಿಗಳ, ಬಿದೋಯನ್ನರ, ಫೆಲೆಸ್ತೀನಿಯನ್ನರ, ಕ್ರಿಶ್ಚಿಯನ್ನರ, ಮುಸ್ಲಿಮರ ಪ್ರತಿಯಾಗಿ ನಮ್ಮ ಮೇಲಿರುವ ಹೊಣೆಗಾರಿಕೆಯನ್ನು ನಿಭಾಯಿಸೋಣ. ಹಾಗೆಂದರೆ ಅರ್ಥವೇನು? ನಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪೂರೈಸೋಣ ಎಂಬ ಮಾತಿಗೆ ಇಂದು ಈ ಸಂದರ್ಭದಲ್ಲಿ ಅರ್ಥವೇನಾಗುತ್ತದೆ? ಅದಕ್ಕೆ, ಫೆಲೆಸ್ತೀನಿಯರ ಕೊರಳು ಹಿಸುಕುತ್ತಾ ಆ ರಾಷ್ಟ್ರವನ್ನು ಹತಾಶೆಯ ಅಂಚಿಗೆ ದೂಡಿರುವ ಕೈಗಳನ್ನು ಪಕ್ಕಕ್ಕೆ ಸರಿಸಲು ಕಿಂಚಿತ್ತು ಪ್ರಯತ್ನಿಸದೆ ಹಮಾಸನ್ನು ಮತ್ತೊಮ್ಮೆ ಯಂತ್ರಿಕವಾಗಿ ಖಂಡಿಸುವ ನಮ್ಮ ಯೂರೋಪಿನ ಸರಕಾರಗಳ ರೀತಿಯಲ್ಲಿ ನಾವು ಹಮಾಸನ್ನು ಖಂಡಿಸಬೇಕೆಂದು ಅರ್ಥವೇ?

ಇತಿಹಾಸ ಕಲಿಸುವ ಪಾಠಗಳು

ಬಾಂಬು ಮತ್ತು ಗನ್ನುಗಳಿಂದ ಈ ಸಮಸ್ಯೆಗೆ ಪರಿಹಾರ ದೊರಕದು ಎಂದು ಕೆಲವರು ನನಗೆ ಹೇಳುತ್ತಾರೆ. ತಾನು ಹೊತ್ತಿದ್ದ ಗನ್ನುಗಳನ್ನು ಕೆಳಗಿಳಿಸಿ ಇಸ್ರೇಲಿಗಳೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡ ಯಾಸಿರ್ ಅರಾಫತ್ ನೆನಪಿದೆಯೇ? ಶಾಂತಿ ಪ್ರಕ್ರಿಯೆಯನ್ನು ಆಶಿಸುತ್ತಾ ಒಸ್ಲೋ ಒಪ್ಪಂದಗಳಿಗೆ ಸಹಿ ಹಾಕಿದ ಫೆಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್ (ಪಿಎಲ್‌ಒ) ನೆನಪಿದೆಯೇ? ಹಾಗಿದ್ದರೆ ಅರಾಫತ್‌ರನ್ನು ಇಸ್ರೇಲಿ ಆಡಳಿತ ಹೇಗೆ ನಡೆಸಿಕೊಂಡಿತೆಂಬುದೂ ನೆನಪಿರಬೇಕಲ್ಲವೇ? ಫೆಲೆಸ್ತೀನ್ ಆಡಳಿತ ಪಕ್ಷವಾದ ಫತಾಹ್‌ವನ್ನು ಇಸ್ರೇಲ್ ಹೇಗೆ ಹೀನಾಯವಾಗಿ ನಡೆಸಿಕೊಂಡಿತೆಂಬುದು ನಮಗೆ ಗೊತ್ತಿರಬೇಕು.

1970ರ ಪ್ರಾರಂಭದ ವರ್ಷಗಳಲ್ಲಿ ಹಮಾಸ್ ಹುಟ್ಟುವಂಥ ಸಂದರ್ಭವನ್ನು ಇಸ್ರೇಲಿ ಪ್ರಭುತ್ವವೇ ಹುಟ್ಟಿಹಾಕಿತು. ಈ ಬಗ್ಗೆ ಇಲಾನ್ ಪಪ್ಪೆ ಅವರು ಬರೆದಿರುವ ಪುಸ್ತಕಗಳಲ್ಲಿ ಹೇಗೆ ಇಸ್ರೇಲಿ ಪ್ರಭುತ್ವ ಪಿಎಲ್‌ಒ ಮತ್ತು ಅರಾಫತ್‌ಗೆ ವಿರುದ್ಧವಾಗಿ ಗಾಝಾದಲ್ಲಿ ಹಮಾಸ್ ಬೆಳೆಯಲು ಸಹಾಯ ಮಾಡಿತು ಎಂದು ಅದ್ಭುತವಾಗಿ ವಿವರಿಸುತ್ತಾರೆ.

ಆದ್ದರಿಂದ ವಿಷಯ ಸ್ಪಷ್ಟವಾಗಿದೆ. ಇಸ್ರೇಲಿನ ಜನಾಂಗೀಯ ದುರಭಿಮಾನಿ ಅಪಾರ್ಥೈಡ್ ಸರಕಾರವು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟವರನ್ನು ನಿರ್ನಾಮ ಮಾಡಲು ತೀರ್ಮಾನಿಸಿದೆ. ಹಾಗೆಯೇ ಶಸ್ತ್ರಾಸ್ತ್ರಗಳನ್ನು ಕೆಳಗಿಡದವರನ್ನೂ ನಿರ್ನಾಮ ಮಾಡಲು ತೀರ್ಮಾನಿಸಿದೆ. ಇಸ್ರೇಲ್‌ನ ಜನಾಂಗೀಯ ದುರಭಿಮಾನಿ ಸರಕಾರವು ಮಾಡುತ್ತಿರುವುದೆಲ್ಲಾ ಇಷ್ಟೆ. ಫೆಲೆಸ್ತೀನಿಯರ ಸುತ್ತ ಬೇಲಿಗಳನ್ನು ನಿರ್ಮಿಸಿ, ಅವರನ್ನು ಬಯಲು ಗೂಡೊಳಗೆ ಕೂಡಿ ಹಾಕಿ ಸಾಯುವಂತೆ ಮಾಡುವುದು ಅಥವಾ ತಾವಾಗಿಯೇ ತಮ್ಮ ದೇಶವನ್ನು ಬಿಟ್ಟು ವಲಸೆ ಹೋಗುವಂತೆ ಮಾಡುವುದು. ಇದು ಘನಘೋರ ಜನಾಂಗೀಯ ನಿರ್ಮೂಲನ, ಆಕ್ರಮಣ, ಜನಾಂಗೀಯ ಅಪಾರ್ಥೈಡ್.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಯಾನಿಸ್ ವಾರೊಫಾಕಿಸ್

contributor

Contributor - ಅನುವಾದ: ಶಿವಸುಂದರ್

contributor

Similar News