ಭಾರತದಲ್ಲಿ ದ್ವೇಷ ಹರಡಲು ಮುಸ್ಲಿಂ ಹೆಸರನ್ನೇಕೆ ಬಳಸಲಾಗುತ್ತಿದೆ?

ಕೋಮು ಧ್ರುವೀಕರಣಗೊಂಡ ಇಲ್ಲಿನ ಪರಿಸರದಲ್ಲಿ ಅಪರಾಧಕ್ಕಿಂತಲೂ, ಆರೋಪಿ ಅಥವಾ ಶಂಕಿತನ ಗುರುತು ಹೆಚ್ಚು ಗಮನ ಸೆಳೆಯುತ್ತದೆ. ಹೀಗಾಗಿಯೇ ಭಾರತದಲ್ಲಿ ಇಸ್ಲಾಮೋಫೋಬಿಯಾ ತೀವ್ರಗೊಳ್ಳುತ್ತಿದೆ ಎಂದು ತಜ್ಞರು ಹೇಳುತ್ತಾರೆ.

Update: 2023-11-28 04:53 GMT

Photo: freepik

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರಿಗೆ ಅಕ್ಟೋಬರ್ 27ರಿಂದ ಅಕ್ಟೋಬರ್ 31ರ ಅವಧಿಯಲ್ಲಿ ಮೂರು ಕೊಲೆ ಬೆದರಿಕೆಗಳು ಬಂದವು. ಎಲ್ಲವನ್ನೂ ಶಾದಾಬ್ ಖಾನ್ ಎಂಬ ಹೆಸರಿನಲ್ಲಿ ಅವರ ಕಚೇರಿಗೆ ಇಮೇಲ್ ಮೂಲಕ ಕಳುಹಿಸಲಾಗಿತ್ತು. ಆದರೆ, ಈ ಇಮೇಲ್‌ಗಳನ್ನು ಕಳುಹಿಸಿದವನು ರಾಜ್‌ವೀರ್ ಖಂತ್ ಎಂಬ 21 ವರ್ಷದ ವಿದ್ಯಾರ್ಥಿ ಎಂಬುದನ್ನು ಮುಂಬೈ ಪೊಲೀಸರು ಬಲು ಬೇಗ ಪತ್ತೆ ಮಾಡಿದ್ದರು.

ತನ್ನ ಸ್ನೇಹಿತರಿಗೆ ತೋರಿಸುವುದಕ್ಕೋಸ್ಕರ ಆತ ಈ ಬೆದರಿಕೆ ಮೇಲ್‌ಗಳನ್ನು ಕಳುಹಿಸಲು ವರ್ಚುವಲ್ ಖಾಸಗಿ ನೆಟ್‌ವರ್ಕ್ ಅಥವಾ ವಿಪಿಎನ್ ಅನ್ನು ಬಳಸಿದ್ದಾನೆ ಎಂದು ಪೊಲೀಸರು ಕಂಡುಕೊಂಡರು. ಶಾದಾಬ್ ಖಾನ್ ಎಂಬ ಹೆಸರನ್ನು ಬಳಸುವ ಆಲೋಚನೆ ಅದೇ ಹೆಸರಿನ ಪಾಕಿಸ್ತಾನಿ ಆಟಗಾರನಿದ್ದ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಬಂದಿತೆಂದು ಪೊಲೀಸ್ ತನಿಖೆಯ ವೇಳೆ ಆತ ಬಾಯ್ಬಿಟ್ಟಿದ್ದ.

ಅಪರಾಧ ಮಾಡುವಾಗ ಸುಳ್ಳು ಮುಸ್ಲಿಮ್ ಗುರುತನ್ನು ಬಳಸುವುದು ಇವನೊಬ್ಬ ಮಾತ್ರ ಮಾಡಿದ್ದೇನೂ ಅಲ್ಲ. ತಮ್ಮನ್ನು ತಿರಸ್ಕರಿಸಿದ ಮಹಿಳೆಯರ ವಿರುದ್ಧ ಸೇಡು ತೀರಿಸಿಕೊಳ್ಳುವವರಿಂದ ಹಿಡಿದು, ವೈರಲ್ ಆಗುವಂಥ ಪ್ರಚೋದನಾಕಾರಿ ವೀಡಿಯೊಗಳನ್ನು ಮಾಡುವವರವರೆಗೆ ಎಲ್ಲರೂ ಮುಸ್ಲಿಮ್ ಹೆಸರನ್ನು ಬಳಸುವ ಈ ವಿಧಾನ ಕಳೆದ ಎರಡು ವರ್ಷಗಳಿಂದ ಹೆಚ್ಚಾಗಿದೆ.

ಕೋಮು ಧ್ರುವೀಕರಣಗೊಂಡ ಪರಿಸರದಲ್ಲಿನ ಅಂತಹ ಪ್ರಕರಣಗಳಲ್ಲಿ ಅಪರಾಧಕ್ಕಿಂತಲೂ, ಆರೋಪಿ ಅಥವಾ ಶಂಕಿತನ ಗುರುತು ಹೆಚ್ಚು ಗಮನ ಸೆಳೆಯುತ್ತದೆ. ಹೀಗಾಗಿಯೇ ಭಾರತದಲ್ಲಿ ಇಸ್ಲಾಮೋಫೋಬಿಯಾ ತೀವ್ರಗೊಳ್ಳುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ಶಂಕಿತ ಅಥವಾ ಆರೋಪಿಯ ಮುಸ್ಲಿಮ್ ಗುರುತನ್ನು ಉದ್ದೇಶಪೂರ್ವಕವಾಗಿ ಒತ್ತಿಹೇಳುವುದರ ಹಿಂದೆ ಆ ಸಮುದಾಯದ ವಿರುದ್ಧ ದ್ವೇಷವನ್ನು ಹೆಚ್ಚಿಸುವ ಉದ್ದೇಶವಿದೆ ಎಂದು ಭಾರತದಲ್ಲಿ ಮುಸ್ಲಿಮರ ವಿರುದ್ಧದ ದ್ವೇಷದ ಅಪರಾಧಗಳನ್ನು ವರದಿ ಮಾಡುವ ಪತ್ರಕರ್ತ ಅಲಿಶನ್ ಜಾಫ್ರಿ ಹೇಳುತ್ತಾರೆ.

ಆಪಾದಿತ ವ್ಯಕ್ತಿಯು ನಿಜವಾಗಿ ಮುಸ್ಲಿಮ್ ಆಗಿರುವ ಪ್ರಕರಣಗಳಲ್ಲಿ ಕೂಡ ಸುದ್ದಿವಾಹಿನಿಗಳು ಹೆಡ್‌ಲೈನ್‌ಗಳಲ್ಲಿ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಆರೋಪಿಯ ಹೆಸರನ್ನೇ ಉಲ್ಲೇಖಿಸುತ್ತವೆ. ಬೇರೆ ಪ್ರಕರಣಗಳಲ್ಲಾದರೆ, ಆರೋಪಿಯ ಹೆಸರು ಹೇಳದೆ, ಲಿಂಗ ಅಥವಾ ವಯಸ್ಸಿನಿಂದ ಮಾತ್ರ ಗುರುತಿಸಲಾಗುತ್ತದೆ ಎಂಬುದನ್ನು ಜಾಫ್ರಿ ಗಮನಿಸುತ್ತಾರೆ. ಈ ಮಾತುಗಳನ್ನು ಫ್ಯಾಕ್ಟ್‌ಚೆಕರ್‌ಗಳು ಮತ್ತು ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸುವವರು ಕೂಡ ಒಪ್ಪುತ್ತಾರೆ.

ವ್ಯಕ್ತಿಯೊಬ್ಬ ತಾನು ಮುಸ್ಲಿಮ್ ಎಂದು ತೋರಿಸಿಕೊಂಡು ಇಂಥ ಕೃತ್ಯಗಳನ್ನು ಎಸಗಿದಾಗ ಪರಿಣಾಮ ಇನ್ನೂ ತೀವ್ರವಾಗಿರುತ್ತದೆ ಎನ್ನುತ್ತಾರೆ ಜಾಫ್ರಿ. ಲಿವ್-ಇನ್ ಗೆಳೆಯನಾಗಿದ್ದ ಮುಸ್ಲಿಮ್ ವ್ಯಕ್ತಿಯಿಂದ ನಡೆದ ಶ್ರದ್ಧಾ ವಾಕರ್ ಕೊಲೆಯ ಬಗ್ಗೆ ಯೂಟ್ಯೂಬ್ ವೀಡಿಯೊದಲ್ಲಿ ರಶೀದ್ ಖಾನ್ ಎಂಬ ಹೆಸರಿನಿಂದ ಆಕ್ಷೇಪಾರ್ಹ ಮಾತುಗಳನ್ನಾಡಿದ್ದ ಉತ್ತರ ಪ್ರದೇಶದ ವಿಕಾಸ್ ಕುಮಾರ್ ಎಂಬಾತನ ಉದಾಹರಣೆಯನ್ನು ಜಾಫ್ರಿ ಹೇಳುತ್ತಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಆ ವೀಡಿಯೋದಲ್ಲಿ, ತನ್ನನ್ನು ಖಾನ್ ಎಂದು ಗುರುತಿಸಿಕೊಂಡ ವಿಕಾಸ್ ಕುಮಾರ್, ‘‘ಕೊಲೆಗಾರ ಕೋಪದಲ್ಲಿದ್ದರೆ ಯಾರನ್ನಾದರೂ ಕೊಲೆ ಮಾಡುವುದು ಮತ್ತು ದೇಹವನ್ನು ಕತ್ತರಿಸುವುದು ಸಾಮಾನ್ಯ’’ ಎಂದು ಹೇಳಿದ್ದ.

ಆ ಮಾತುಗಳಿಗಾಗಿ ಬಂಧನಕ್ಕೊಳಗಾದ ಬಳಿಕ ಆತ, ವೀಡಿಯೊ ಚಿತ್ರೀಕರಿಸುವಾಗ ತನ್ನ ಮೂಲ ಹೆಸರಿನಿಂದಲೇ ಗುರುತಿಸಿಕೊಂಡಿದ್ದುದನ್ನೂ, ಆದರೆ ವೀಡಿಯೊ ಮಾಡುತ್ತಿದ್ದವರು ಆತ ಸುಳ್ಳು ಹೇಳುತ್ತಿದ್ದಾನೆ ಮತ್ತು ಮುಸ್ಲಿಮ್ ಆಗಿರಬೇಕು ಎಂದು ಅಪಹಾಸ್ಯ ಮಾಡಿದ್ದನ್ನೂ ಪತ್ರಕರ್ತರೆದುರು ಹೇಳಿಕೊಂಡಿದ್ದ.

ಆತನ ವೀಡಿಯೊ ಹಾಕಿದ್ದ ಯೂಟ್ಯೂಬ್ ಚಾನೆಲ್ ಅನ್ನು ಅಂಕುರ್ ಆರ್ಯ ಎಂಬ ವ್ಯಕ್ತಿ ನಡೆಸುತ್ತಿದ್ದುದು ಮತ್ತು ಆತ ನಿಯಮಿತವಾಗಿ ಪ್ರಚೋದನಾಕಾರಿ ವೀಡಿಯೊಗಳನ್ನೇ ಪೋಸ್ಟ್ ಮಾಡುತ್ತಿದ್ದುದರ ಬಗ್ಗೆ ಅನಂತರ ಸಾಮಾಜಿಕ ಜಾಲತಾಣ ಬಳಕೆದಾರರು ಹೇಳಿಕೊಂಡಿದ್ದರು.

ಆರ್ಯ ಥರದವರ ಯೂಟ್ಯೂಬ್ ಚಾನೆಲ್‌ಗಳಲ್ಲಿ ಸೂಕ್ಷ್ಮ ವಿಷಯಗಳ ಬಗ್ಗೆ ಮುಸ್ಲಿಮ್ ವ್ಯಕ್ತಿಯ ಪ್ರತಿಕ್ರಿಯೆ ಕೇಳುವ ಹಲವಾರು ವಾಕ್ಸ್ ಪಾಪ್ ವೀಡಿಯೊಗಳೇ ಇರುತ್ತವೆ. ಏಕೆಂದರೆ ಅಂತಹ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿ ಮಾಡುತ್ತವೆ ಎನ್ನುವ ಜಾಫ್ರಿ, ಅಂಥ ಹಲವು ವೀಡಿಯೊಗಳನ್ನು ಬಿಜೆಪಿಯ ನಾಯಕರು ಮತ್ತು ಆ ಪಕ್ಷದ ಅಧಿಕೃತ ಹ್ಯಾಂಡಲ್‌ಗಳು ಸಹ ಹಂಚಿಕೊಳ್ಳುವುದರ ಬಗ್ಗೆಯೂ ಗಮನ ಸೆಳೆಯುತ್ತಾರೆ.

ಯೂಟ್ಯೂಬ್ ಚಾನೆಲ್‌ಗಳ ಇಂತಹ ವೀಡಿಯೊಗಳು ಹೇಗೆ ದ್ವೇಷವನ್ನು ಹರಡುತ್ತವೆ ಮತ್ತು ಅನೇಕ ಹಿಂದೂಗಳು ಮುಸ್ಲಿಮರ ವಿರುದ್ಧ ಹೊಂದಿರಬಹುದಾದ ಪೂರ್ವಾಗ್ರಹವನ್ನು ಹೇಗೆ ಅವು ಉತ್ತೇಜಿಸುತ್ತವೆ ಎಂಬುದನ್ನು ‘ಛಿಚಿಡಿಚಿvಚಿಟಿ’ಗೆ ಬರೆದ ಲೇಖನದಲ್ಲಿಯೂ ಜಾಫ್ರಿ ವಿವರಿಸಿದ್ದಾರೆ.

ಇಂಥದೇ ಮತ್ತೊಂದು ಉದಾಹರಣೆಯೆಂದರೆ, ಅಕ್ಟೋಬರ್‌ನಲ್ಲಿ ವೈರಲ್ ಆಗಿದ್ದ ವೀಡಿಯೊವೊಂದರಲ್ಲಿ ಜಾವೇದ್ ಹುಸೇನ್ ಎಂದು ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಹಿಂದೂ ಧರ್ಮದ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದು. ಹರಿದ್ವಾರದಲ್ಲಿ ಆತನನ್ನು ಬಂಧಿಸಿದ ನಂತರ, ಆತನ ನಿಜವಾದ ಹೆಸರು ದಿಲೀಪ್ ಬಘೇಲ್ ಎಂಬುದನ್ನೂ, ಹಾಗೆ ಮಾತಾಡಲು ಆತನಿಗೆ ಯೂಟ್ಯೂಬರ್ ಹಣ ನೀಡಿದ್ದ ವಿಚಾರವನ್ನೂ ಪೊಲೀಸರು ಬಯಲಿಗೆಳೆದರು.

ಇವೆಲ್ಲವೂ ಕೋಮು ಅಶಾಂತಿಯನ್ನು ಹುಟ್ಟುಹಾಕುವ ಉದ್ದೇಶದಿಂದ ಧಾರ್ಮಿಕ ಸ್ಥಳಗಳಲ್ಲಿ ಉದ್ದೇಶಪೂರ್ವಕವಾಗಿ ನಿಷೇಧಿತ ಮಾಂಸವನ್ನು ಇಡುವ ಘಟನೆಗಳಿಗೆ ಸಮ ಎಂದು, ಭಾರತದಲ್ಲಿನ ಕೋಮು ರಾಜಕೀಯದ ಬಗ್ಗೆ ಬರೆಯುವ ಶಿಕ್ಷಣ ತಜ್ಞ ರಾಮ್ ಪುನಿಯಾನಿ ಹೋಲಿಸುತ್ತಾರೆ.

ಇದು ಹಣಕ್ಕಾಗಿ ಇಂತಹ ಕೆಲಸಗಳನ್ನು ಮಾಡಲು ಸಿದ್ಧವಾಗಿರುವ ಈ ದೇಶದ ಬಡವರ ದುಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎನ್ನುತ್ತಾರೆ ಪುನಿಯಾನಿ. ಗೋವಿಂದ್ ನಿಹಲಾನಿಯವರ ‘ತಮಸ್’ ಸಿನೆಮಾದಲ್ಲಿ ದಲಿತ ವ್ಯಕ್ತಿಯೊಬ್ಬ ಹಂದಿಯ ಶವವನ್ನು ಮಸೀದಿಯಲ್ಲಿ ಇರಿಸಿದ್ದಕ್ಕಾಗಿ ಆರೋಪಿ ಸ್ಥಾನದಲ್ಲಿ ನಿಲ್ಲುವುದನ್ನು ಅವರು ನೆನಪಿಸುತ್ತಾರೆ. ಹೀಗೆ ಮುಸ್ಲಿಮ್ ವ್ಯಕ್ತಿಯಂತೆ ಸೋಗು ಹಾಕುವ ಘಟನೆಗಳು ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುತ್ತವೆ ಮತ್ತು ತೀವ್ರಗೊಳಿಸುತ್ತವೆ ಎಂದು ಪುನಿಯಾನಿ ಹೇಳುತ್ತಾರೆ.

ಅಪರಾಧಕ್ಕೆ ಸಂಬಂಧಿಸಿದಂತೆ ಮುಸ್ಲಿಮ್ ಹೆಸರು ಕೇಳಿಬಂದೊಡನೆ, ಆ ವ್ಯಕ್ತಿಯು ಏನಾದರೂ ತಪ್ಪು ಮಾಡಿರಲೇಬೇಕು ಎಂದು ನಂಬಿಸುವಂಥ ಸ್ಥಿತಿಯೊಂದನ್ನು ನಿರ್ಮಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಪೊಲೀಸರು ಸಹ ಕೋಮು ಪಕ್ಷಪಾತಿಗಳೇ ಆಗಿದ್ದರೆ, ಅದು ತನಿಖೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ ಎನ್ನುತ್ತಾರೆ ಪುನಿಯಾನಿ.

ಉದಾಹರಣೆಗೆ, ಶಿಕ್ಷಕಿಯೊಡನೆ ಅಕ್ರಮ ಸಂಬಂಧ ಹೊಂದಿರಬೇಕೆಂದು ಶಂಕಿಸಿ ಕಾನ್ಪುರದಲ್ಲಿ 17 ವರ್ಷದ ಬಾಲಕನನ್ನು ಶಿಕ್ಷಕಿಯ ಗೆಳೆಯ ಕೊಲೆ ಮಾಡಿದ ಘಟನೆ ಅಕ್ಟೋಬರ್‌ನಲ್ಲಿ ನಡೆಯಿತು. ಕಡೆಗೆ ಆ ಪ್ರಕರಣವನ್ನು ಅಪಹರಣವೆಂಬಂತೆ ಬಿಂಬಿಸುವ ಪ್ರಯತ್ನದಲ್ಲಿ ಆರೋಪಿ ಪ್ರಭಾತ್ ಶುಕ್ಲಾ ‘ಅಲ್ಲಾ ಹು ಅಕ್ಬರ್’ ಎಂದು ಬರೆಯಲಾಗಿದ್ದ, ಹಣಕ್ಕಾಗಿ ಬೇಡಿಕೆಯಿಡುವ ಪತ್ರವನ್ನು ಕಳಿಸಿದ್ದ. ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಆತ ಹಾಗೆ ಧಾರ್ಮಿಕ ಘೋಷಣೆಯನ್ನು ಬಳಸಿದ್ದ ಎಂದು ಪೊಲೀಸರು ಹೇಳಿದ್ದರು.

ಸೆಪ್ಟಂಬರ್‌ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ತನ್ನ ಬೆನ್ನಿನ ಮೇಲೆ ‘ಪಿಎಫ್‌ಐ’ ಎಂಬ ಅಕ್ಷರಗಳನ್ನು ಬರೆದ ಆರು ಜನರ ಗುಂಪು ತನ್ನ ಮೇಲೆ ದಾಳಿ ಮಾಡಿದೆ ಎಂದು ಪೊಲೀಸರಿಗೆ ಸುಳ್ಳು ಹೇಳಿಕೆ ನೀಡಿದ ನಂತರ ಭಾರತೀಯ ಸೇನೆಯ ಯೋಧನನ್ನು ಕೇರಳದಲ್ಲಿ ಬಂಧಿಸಲಾಯಿತು. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಒಂದು ಮುಸ್ಲಿಮ್ ಸಂಘಟನೆಯಾಗಿದ್ದು, ಅದನ್ನು ಯುಎಪಿಎ ಅಡಿಯಲ್ಲಿ ಹಿಂಸಾತ್ಮಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಆರೋಪಿಸಿ 2022ರ ಸೆಪ್ಟಂಬರ್‌ನಲ್ಲಿ ಕೇಂದ್ರ ಸರಕಾರ ಐದು ವರ್ಷಗಳ ಕಾಲ ನಿಷೇಧಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುವುದು ಕೋಮು ದ್ವೇಷದ ಆಚೆಗೂ ವಿಸ್ತರಿಸಿಕೊಂಡಿದೆ. ನವೆಂಬರ್ 22ರಂದು, ಸಚಿನ್ ತೆಂಡುಲ್ಕರ್ ಅವರ ಪುತ್ರಿ ಸಾರಾ ತೆಂಡುಲ್ಕರ್, ಎಕ್ಸ್‌ನಲ್ಲಿನ ನಕಲಿ ಖಾತೆಯು ತಮ್ಮ ತಿರುಚಲಾದ ಫೋಟೊಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದರು.

ಎಕ್ಸ್‌ನ ಬ್ಲೂ ಟಿಕ್ ಒದಗಿಸುವ ನೀತಿಯಲ್ಲಿ ಬದಲಾವಣೆಯಾಗಿದ್ದು, ಶುಲ್ಕವನ್ನು ಪಾವತಿಸುವ ಯಾರಿಗೇ ಆದರೂ ಅದು ಈಗ ಬ್ಲೂ ಟಿಕ್ ನೀಡುತ್ತದೆ. ಇದು ಮೈಕ್ರೋ ಬ್ಲಾಗಿಂಗ್ ವೇದಿಕೆಯಲ್ಲಿ ಹೀಗೆ ಬೇರೆ ಗುರುತಿನೊಂದಿಗೆ ಕಾಣಿಸಿಕೊಳ್ಳುವುದನ್ನು ಬಹಳ ಸುಲಭವಾಗಿಸಿದೆ ಎಂದು ‘Logically Facts’ ಎಂಬ ಫ್ಯಾಕ್ಟ್ ಚೆಕಿಂಗ್ ವೆಬ್‌ಸೈಟ್‌ನ ಭಾರತದ ಮುಖ್ಯಸ್ಥೆ ಕೃತಿಕಾ ಗೋಯೆಲ್ ಹೇಳುತ್ತಾರೆ.

ಬ್ಲೂ ಟಿಕ್ ಇನ್ನು ಮುಂದೆ ವಿಶ್ವಾಸಾರ್ಹತೆಯ ಗುರುತಲ್ಲ ಎಂಬುದು ಎಲ್ಲರಿಗೂ ಗೊತ್ತಿಲ್ಲ ಎನ್ನುವ ಅವರು, ಬೇರೆಯವರ ಗುರುತಿನಲ್ಲಿ ಕಾಣಿಸಿಕೊಳ್ಳುವುದರ ಸಮಸ್ಯೆ ಎಷ್ಟು ಅನಾಹುತಕಾರಿ ಎಂಬುದರ ಬಗ್ಗೆಯೂ ಗಮನ ಸೆಳೆಯುತ್ತಾರೆ. ವಾಸ್ತವ ಏನೆಂಬುದು ಪತ್ತೆಯಾಗುವ ವೇಳೆಗೆ ಬಹಳಷ್ಟು ಜನರು ಆಗಲೇ ಆ ತಪ್ಪು ಮಾಹಿತಿಯನ್ನು ಹಂಚಿಕೊಂಡುಬಿಟ್ಟಿರುತ್ತಾರೆ. ಆಗಬೇಕಾದ ಹಾನಿ ದೊಡ್ಡ ಮಟ್ಟದಲ್ಲಿ ಆಗಿಬಿಟ್ಟಿರುತ್ತದೆ ಎನ್ನುತ್ತಾರೆ ಅವರು.

‘ಅಲ್ ಜಝೀರಾ’ ಪತ್ರಕರ್ತನೆಂದು ಹೇಳಿಕೊಂಡ ಎಕ್ಸ್ ಬಳಕೆದಾರನ ಟ್ವೀಟ್ ಒಂದನ್ನು ಗೋಯೆಲ್ ಉಲ್ಲೇಖಿಸುತ್ತಾರೆ. ಗಾಝಾ ಪಟ್ಟಿಯಲ್ಲಿನ ಅರಬ್ ಆಸ್ಪತ್ರೆಯಲ್ಲಿ ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡ ವಾಯುದಾಳಿಗೆ ಹಮಾಸ್ ಉಗ್ರಗಾಮಿ ಗುಂಪು ಕಾರಣ ಎಂಬ ಆ ಟ್ವೀಟ್ ಅನ್ನು ಸಾವಿರಾರು ಬಳಕೆದಾರರು ಹಂಚಿಕೊಂಡಿದ್ದರು. ಈಗ ಡಿಲೀಟ್ ಆಗಿರುವ ಆ ಖಾತೆಯು ತನಗೆ ಸಂಬಂಧಿಸಿದ್ದಲ್ಲ ಎಂದು ಅಲ್ ಜಝೀರಾ ಸ್ಪಷ್ಟಪಡಿಸಿದ ನಂತರ, ಅದು ಭಾರತೀಯ ವ್ಯಕ್ತಿಯದ್ದಾಗಿತ್ತೆಂಬುದು ಹಾಗೂ ಈ ಹಿಂದೆ ಬಿಜೆಪಿಯನ್ನು ಬೆಂಬಲಿಸಿ ಅದರಿಂದ ಟ್ವೀಟ್‌ಗಳನ್ನು ಮಾಡಲಾಗಿತ್ತು ಎಂಬುದು ಬೆಳಕಿಗೆ ಬಂದಿತ್ತು.

ಭಾರತದಲ್ಲಿ ಸಾಮಾಜಿಕ ಜಾಲತಾಣದ ದುರುಪಯೋಗ ಮಾಡುವವರು ಮುಸ್ಲಿಮರಂತೆ ತೋರಿಸಿಕೊಳ್ಳುವ ಘಟನೆಗಳನ್ನು ಗಮನಿಸಿರುವುದಾಗಿ ಗೋಯೆಲ್ ಹೇಳುತ್ತಾರೆ. ಎರಡು ವರ್ಷಗಳ ಹಿಂದೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಒಂಭತ್ತು ತಿಂಗಳ ಮಗಳಿಗೆ ಟ್ವಿಟರ್ ಬಳಕೆದಾರ ಅತ್ಯಾಚಾರದ ಬೆದರಿಕೆ ಹಾಕಿದ್ದ ಘಟನೆಯತ್ತ ಅವರು ಗಮನ ಸೆಳೆಯುತ್ತಾರೆ. ಅದನ್ನು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಬೋಟ್ ಖಾತೆ ಎಂದೇ ಹಲವರು ಭಾವಿಸಿದ್ದರು. ಆದರೆ ಆರೋಪಿ ಹೈದರಾಬಾದ್‌ನ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದರು. ಆ ಖಾತೆಯು ಅಮೆನಾ ಎಂಬ ಮುಸ್ಲಿಮ್ ಹೆಸರನ್ನು ಹೊಂದಿದ್ದರಿಂದ ಪಾಕಿಸ್ತಾನಿ ಬೋಟ್ ಆಗಿರಬಹುದೆಂಬ ಭಾವನೆ ಹೆಚ್ಚುವುದಕ್ಕೆ ಕಾರಣವಾಗಿತ್ತು. ಆದರೆ ಆರೋಪಿ ರಾಮನಾಗೇಶ್ ಅಲಿಬಥಿನಿ ಎಂಬ 23 ವರ್ಷದ ಹಿಂದೂ ವ್ಯಕ್ತಿ ಎಂಬುದು ದೃಢಪಟ್ಟಿತ್ತು.

ಅಂತಹ ಇನ್ನೊಂದು ಉದಾಹರಣೆಯೆಂದರೆ, ಕರ್ನಾಟಕದ ಕೊಡಗಿನ ನಿವಾಸಿ ದಿವಿನ್ ದೇವಯ್ಯ. ಸ್ಥಳೀಯ ದೇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮ್ ಹೆಸರಿನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಕ್ಕಾಗಿ ಆತನನ್ನು 2022ರ ಜುಲೈನಲ್ಲಿ ಬಂಧಿಸಲಾಗಿತ್ತು.

ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷವನ್ನು ಹೆಚ್ಚಾಗಿ ಹರಡಲಾಗುತ್ತದೆ. ಅಲ್ಪಸಂಖ್ಯಾತರ ವಿರುದ್ಧ ಧ್ರುವೀಕರಣಗೊಂಡ ಸಾಮಾಜಿಕ ಸನ್ನಿವೇಶ ಈಗಾಗಲೇ ಇರುವುದರಿಂದ, ಮುಸ್ಲಿಮ್ ಹೆಸರನ್ನು ಬಳಸಿ ಮಾಡುವ ದ್ವೇಷಪೂರಿತ ಪೋಸ್ಟ್‌ಗಳು ಜನರು ಮುಸ್ಲಿಮರನ್ನು ಮತ್ತಷ್ಟು ದೂರವಿಡುವುದನ್ನು ಸುಲಭವಾಗಿಸುತ್ತವೆ ಎನ್ನುತ್ತಾರೆ ಗೋಯೆಲ್.

(ಕೃಪೆ:scroll.in)

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಅಭಿಕ್ ದೇವ್

contributor

Similar News